ಸ್ಮಶಾನದಲ್ಲೊಂದು ರಂಗಮಂದಿರ ಮಾಡಿ..

ಶಿವಾನಂದ ತಗಡೂರು

ಹಾಗೆ ನೋಡಿದರೆ, ಶಿರಸಿ ಹಾದಿ ಸವೆಸಿದ್ದು ಕಡಿಮೆ. ಆಗೊಮ್ಮೆ ಈಗೊಮ್ಮೆ ಸಹ್ಯಾದ್ರಿ ತಪ್ಪಲಿನಲ್ಲಿ ಓಡಾಡಿ ಬಂದಿದ್ದ, ಜೋಗದ ಗುಂಡಿಯಲ್ಲಿ ಮಿಂದೆದ್ದ ನೆನಪು ಇನ್ನೂ ಅಚ್ಚಳಿಯದೆ ಉಳಿದಿವೆ.

ಮೊನ್ನೆ ಶಿಕಾರಿಪುರ ಕಾರ್ಯಕ್ರಮ ಮುಗಿಸಿ ಶಿರಸಿ ಹಾದಿ ಹಿಡಿದಾಗ ಪಡುವಣ ಸೂರ್ಯ ಜಾರಿದ್ದ. ಸೊರಬ ದಾಟಿ ಹೋಗುವಾಗ ಶಿರಸಿ ವಿ.ಪಿ.ಹೆಗಡೆ ಅವರಿಗೆ ಪೋನಾಯಿಸಿದೆ. ನಿಮ್ಮ ಬರವಿಕೆ ಕಾಯ್ದಿರುವೆ ಬನ್ನಿ ಎಂದು ಎಂದಿನಂತೆ ಅದೇ ಆತ್ಮೀಯತೆ ತೋರಿದರು. ದಾರಿಯುದ್ದಕ್ಕೂ ಜಿನುಗು ಮಳೆ, ನೆನಪುಗಳು ಒದ್ದೆಯಾದವು.

ವಿ.ಪಿ.ಹೆಗಡೆ ಬಗ್ಗೆ ಬಹಳ ಜನರಿಗೆ ಗೊತ್ತಿಲ್ಲ. ವೈಶಾಲಿ ಹೆಸರಿನಲ್ಲಿ ಅವರ ಬರವಣಿಗೆ. ರುದ್ರ ಭೂಮಿ ಅವರ ಕಾರ್ಯಸ್ಥಾನ. ನೆಮ್ಮದಿ ಕುಟೀರ ಅವರ ಸ್ಪೂರ್ತಿ ಸೆಲೆಯ ತಾಣ. ಮನೆಯ ಕೂಗಳತೆ ದೂರದಲ್ಲಿ ರುದ್ರಭೂಮಿ ಇದ್ದರೂ ಎಂದೂ ಅದಕ್ಕೆ ಅಂಜಲಿಲ್ಲ, ಅಳುಕಲೂ ಇಲ್ಲ. ಅಷ್ಟರ ಮಟ್ಟಿಗೆ ಗಟ್ಟಿ ಜೀವ. ಸಾದಾ ಸೀದಾ ಮಾನವೀಯ ತುಡಿತದ ಅಪರೂಪದ ವ್ಯಕ್ತಿ.

ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿಗೆ ಇವರದೇ ಸಾರಥ್ಯ. ಸ್ಮಶಾನ ಅಭಿವೃದ್ಧಿಗೆ ಹೊರಟಿದ್ದೇನೆ ಅಂದರೆ, ಹೊರಗಿನವರು ಇರಲಿ, ಮನೆಯೊಳಗೆ ನಯಾ ಪೈಸೆ ಸಹಕಾರ ಸಿಗುವುದು ದುರ್ಲಭ. ಇಲ್ಲದ ಉಸಾಬರಿ ನನಗ್ಯಾಕೆ ಎಂದು ಬದಿಗೆ ಸರಿದು, ಮೌನವಾಗುವವರೇ ಹೆಚ್ಚು. ಆದರೆ, ಈ ಹಿರಿಯ ಜೀವ ವಿ.ಪಿ.ಹೆಗಡೆ ಇದಕ್ಕೆ ಭಿನ್ನವಾಗಿ ನಿಂತವರು.

ಸ್ಮಶಾನವನ್ನು ಮಾದರಿ ತಾಣವಾಗಿ, ಶಿರಸಿ ಪಟ್ಟಣದ ಆಕರ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಿದ ಕೀರ್ತಿ, ಹೆಗ್ಗಳಿಕೆ ಈ ರುದ್ರ ಭೂಮಿ ಅಭಿವೃದ್ಧಿ ಸಮಿತಿಗೆ ಸಲ್ಲುತ್ತದೆ.

ಸ್ಮಶಾನದೊಳಗೊಂದು ಸುತ್ತು ಹಾಕಿದರೆ ಎದುರಾಗುವುದು ಅಲ್ಲೊಂದು ನೆಮ್ಮದಿ ಕುಟೀರ. ಅಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಿಂದ ಹಿಡಿದು, ಹತ್ತು ಹಲವು ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ. ಅಲ್ಲಿಂದ ಹತ್ತು ಗಜ ಹೆಜ್ಜೆ ಹಾಕಿದರೆ, ಅಲ್ಲೊಂದು ಲೈಬ್ರರಿ. ಹಾಂ… ಅಲ್ಲಿ ಉತ್ತರ ಕನ್ನಡ ಪ್ರತಿಭೆಗಳ ಪುಸ್ತಕ ತಾಣವನ್ನು ಪ್ರತ್ಯೇಕವಾಗಿ ಇಡಲಾಗಿದೆ.

ಪಕ್ಕದಲ್ಲಿ ಎದುರಾಗುವುದು ಸತ್ಯ ಹರಿಶ್ಚಂದ್ರನ ಪ್ರತಿಮೆ. ಅಲ್ಲಿಯೇ ಶವ ಸುಡುವ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಮಾಡಲಾಗಿದೆ. ಅಷ್ಟೇ ಅಲ್ಲ ಶವಸಂಸ್ಕಾರ ಮಾಡುವಾಗ ಅಚ್ಚುಕಟ್ಟಾಗಿ ಕುಳಿತು ನೋಡಲು ವ್ಯವಸ್ಥೆ ಇದೆ. ಸ್ನಾನ, ಪೂಜೆ ಪುರಸ್ಕಾರ ಮಾಡಲು ಏನೇನೂ ಕೊರತೆ ಅಲ್ಲಿಲ್ಲ. ಎಲ್ಲವೂ ಅಚ್ಚುಕಟ್ಟು. ಇಷ್ಟು ನೀಟಾದ ಶವಗಾರಗಳನ್ನು ನಾ ನೋಡಿದ್ದಿಲ್ಲ. ಇಡೀ ನಾಡಿಗೆ ಮಾದರಿಯಾದ ರುದ್ರ ಭೂಮಿ ಅಂದರೆ ಅದು ಶಿರಸಿಯದ್ದೆ ಇರಬೇಕು.

ವಿಷಯಕ್ಕೆ ಬರೋಣ. ಈ ರುದ್ರ ಭೂಮಿಯಲ್ಲೊಂದು ರಂಗಮಂದಿರ ಮಾಡಬೇಕು ಎನ್ನುವುದು ಹೆಗಡೆ ಅವರ ಕನಸು. ಅದಕ್ಕೆ ಎದುರಾದದ್ದು ನೂರೆಂಟು ವಿಘ್ನ. ಆಗ ವಿಜಯವಾಣಿ ಸಂಪಾದಕರಾಗಿದ್ದ ಹರಿಪ್ರಕಾಶ್ ಕೋಣೆಮನೆ ಅವರು ಒಮ್ಮೆ ಜೊತೆಯಲಿ ಶಿರಸಿ ದರ್ಶನ ಮಾಡಿಸಿ ಈ ಕೆಲಸ ಒಂದು ಆಗಬೇಕು ಎಂದು ಪ್ರೀತಿ ಒತ್ತಾಸೆ ತೋರಿಸಿದರು.

ಹೆಗಡೆ ಅವರು ಖಾಲಿ ಲೆಟರ್ ಹೆಡ್ ಗಳಿಗೆ ಸಹಿ ಮಾಡಿ ಕಳುಹಿಸಿ, ಇದನ್ನು ನೀವು ಹೇಗಾದರೂ ಬಳಸಿ, ಇದೊಂದು ಸಾರ್ವಜನಿಕ ಕೆಲಸ ಆಗಲೇಬೇಕು ಎಂದು ಪಟ್ಟು ಹಿಡಿದರು. ಅರಣ್ಯ ಇಲಾಖೆ ಅನುಮತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ಸೇರಿದಂತೆ ಎಲ್ಲವೂ ಆಗುವ ಹೊತ್ತಿಗೆ ವರ್ಷ ಕಳೆಯಿತು. ಅಷ್ಟರ ಮಟ್ಟಿಗೆ ಅದು ಸುಧೀರ್ಘ ಹೋರಾಟ. ಸರ್ಕಾರಿ ಕಚೇರಿಗಳ ಬಾಗಿಲು ಅದೆಷ್ಟು ಬಾರಿ ಎಡ ತಾಕಿದ್ದೆನೊ ಗೊತ್ತಿಲ್ಲ. ಅಂತೂ ಅನುಮತಿ, ಅನುದಾನ ಎಲ್ಲವೂ ರುದ್ರಭೂಮಿಗೆ ದಕ್ಕಿತು. ಪರಿಣಾಮ ಕಲಾಮಂದಿರ ಈಗ ಅಲ್ಲಿ ಎದ್ದು ನಿಂತಿದೆ.

ಬೆಳಿಗ್ಗೆ ಎದ್ದು, ರುದ್ರ ಭೂಮಿಯೊಳಗೆ ಕಾಲಿಡುವ ಹೊತ್ತಿಗೆ ಅಲ್ಲಿ ವಿ.ಪಿ.ಹೆಗಡೆ ಹಾಜರಿದ್ದರು. ಅವರ ಸುತ್ತ ಸುಭಾಷ್ ಚಂದ್ರ ಬೋಸ್ ಕಾರ್ಯಪಡೆ ಸ್ವಯಂ ಸೇವಾ ಕಾರ್ಯಕರ್ತರಿದ್ದರು.

ನೀವು ಇದನ್ನು ನೋಡಬೇಕು ಅಂತಾನೆ ನಾನು ಕಾಯ್ದಿದ್ದೆ. ನಿಮ್ಮ ಪ್ರಯತ್ನ, ಸಹಕಾರ ಮರೆಯುವಂತಿಲ್ಲ. ಕಲಾಮಂದಿರ ಕಾಮಗಾರಿ ಮುಗಿಯಲು ಇನ್ನೂ ಸ್ವಲ್ಪ ಅನುದಾನ ಬೇಕಿದೆ. ಬನ್ನಿ, ಇಲ್ಲಿ ನೋಡಿ ಎಂದು ಎಲ್ಲವನ್ನೂ ತೋರಿಸಿ, ಅಲ್ಲಿದ್ದವರ ಎದುರು ಗುಣಗಾನ ಮಾಡಿ ಅಭಿಮಾನ ತೋರಿಸಿದರು. ನನಗೂ ಅಷ್ಟೇ ಸಾರ್ಥಕ ಅಭಿಮಾನ ಉಕ್ಕಿ ಬಂತು. ಆಗ ಮಾಡಿದ ಒಂದು ಸಣ್ಣ ಪ್ರಯತ್ನ, ಸಹಕಾರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾಕಾರಗೊಂಡಿರುವುದು ಅಚ್ಚರಿ.

ಇಡೀ ನಾಡಿಗೆ ಮಾದರಿಯಾಗಿ ಅಭಿವೃದ್ಧಿ ಹೊಂದಿರುವ ರುದ್ರ ಭೂಮಿಯನ್ನು ಶಿರಸಿ ಕಡೆಗೆ ಹೋದಾಗ ಒಮ್ಮೆ ನೋಡಿ ಬನ್ನಿ. ನಿಮಗೂ ಸ್ಮಶಾನ ಪರಿಕಲ್ಪನೆ ಬದಲಾಗಬಹುದೇನೊ? ಅಷ್ಟು ಪ್ರಭಾವ ಬೀರುವ ಮಟ್ಟಿಗೆ ಶಿರಸಿ ರುದ್ರ ಭೂಮಿ ಬೆಳೆದು ನಿಂತಿದೆ. ಅಲ್ಲಿ ವಿ.ಪಿ.ಹೆಗಡೆ ಅವರ ಕನಸು, ಶ್ರಮ, ಶ್ರದ್ಧೆ ಸಾಕಾರಗೊಂಡಿದೆ.

‍ಲೇಖಕರು Admin

July 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ರುದ್ರಭೂಮಿಗಳು ಬೆಂಗಳೂರು ಪಟ್ಟಣದಲ್ಲೂ‌ ಅವ್ಯವಸ್ಥೆ ‌ಕೂಪಗಳಾಗಿವೆ. ಬನಶಂಕರಿಯ ರುದ್ರಭೂಮಿಯಲ್ಲಿ ಶವ ಹೂಳಲು ಬೇಕಾಬಿಟ್ಟಿ ಜಾಗ ವಿಂಗಡಿಸಿದ ದೆಸೆಯಿಂದ ತಮ್ಮ ಬಂಧುಗಳ ಸಮಾಧಿ ಹುಡುಕಲು ಪ್ರತಿಸಲವೂ ಪರದಾಡ ಬೇಕಾಗುತ್ತದೆ ಜನರು. ಜೊತೆಗೆ ದನ ಕರು ನಾಯಿ ಕೋಳಿಗಳು ಸಮಾಧಿಯ ನಡುವೆ, ಮೇಲೆ ಮಾಡುವ ಗಲೀಜುಗಳು. ಒಂದು ಕುಟುಂಬ ಅದಕ್ಕಾಗಿ ಸಂಬಳ ಮನೆ ತೆಗೆದುಕೊಂಡು ಅಲ್ಲಿದ್ದರೂ ನೋಡುವವರಿಲ್ಲದೆ ಮಸಣ ಕೊಂಪೆಯಾಗಿದೆ. ಹೋದಾಗೆಲ್ಲ ಅಸಹಾಯಕತೆಯಿಂದ ಮೈ ಪರಚಿಕೊಳ್ಳುವಂತಾಗುತ್ತದೆ.

    ಇಲ್ಲಿ ಹೆಗಡೆಯವರ ಕೆಲಸ ಕುರಿತು ಓದಿದರೆ ಹೆಮ್ಮೆಯಾಗುತ್ತದೆ. ಸ್ಮಶಾನವನ್ನು ಈ ರೀತಿಯಾಗಿ ಸುವ್ಯವಸ್ಥಿತವಾಗಿ ಇಡಬಹುದೆಂಬುದು ತಿಳಿದಿದ್ದೇ ಈಗ. ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: