ಡಾ. ಎಂ ಎಸ್ ವೇದಾ ಅವರ ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ

ಡಾ. ಎಂ ಎಸ್ ವೇದಾ ಅವರ ಸುಮಾರು ಆರುನೂರು ಪುಟಕ್ಕಿಂತ ದೊಡ್ಡದಾದ ಬೃಹತ್ ಕಾದಂಬರಿಯೊಂದು ಸದ್ಯದಲ್ಲಿಯೇ ಬಿಡುಗಡೆಯಾಗುತ್ತಿದೆ. ಅದಕ್ಕಾಗಿ ನಾನು ಕಾಯುತ್ತಿದ್ದೇನೆ. ಕನ್ನಡದಲ್ಲಿ ಲೇಖಕಿಯೊಬ್ಬರು ಇಷ್ಟೊಂದು ದೊಡ್ಡ ಕಾದಂಬರಿ ಬರೆಯುತ್ತಿರುವುದು ಇದೇ ಮೊದಲಿರಬೇಕು. ಡಾ. ಎಂ ಎಸ್ ವೇದಾ ಅವರು ಸುಮಾರು ಮೂವತ್ತು ಮೂವತ್ತೈದು ವರ್ಷಗಳಿಂದ ಸಾಹಿತ್ಯ ಕೃಷಿ ಮಾಡುತ್ತಾ ಬಂದಿದ್ದಾರೆ. ಅತ್ಯದ್ಭುತವಾದ ಕೃತಿಗಳನ್ನು ಬರೆಯುತ್ತ ಬಂದಿದ್ದಾರೆ. ಹಲವಾರು ಪ್ರಶಸ್ತಿಗಳು ಬಂದಿವೆ. ಆದರೂ ಅವರೊಬ್ಬ ತೆರೆಮರೆಯಲ್ಲಿಯೇ ಇರಬಯಸುವ ಲೇಖಕಿ.

ತಮ್ಮ ಅತೀಯಾದ ಸಂಕೋಚ ಸ್ವಭಾವವೋ ಅಥವಾ ಅಜ್ಞಾತವಾಗಿಯೇ ಬರೆಯಬೇಕೆಂಬ ಅವರ ಮನಸ್ಸೋ ತಿಳಿಯದು. ವೇದಾ ಅವರು ಕನ್ನಡ ಸಾಹಿತ್ಯದಲ್ಲಿ ಚಂದುರಂಗ ಮತ್ತು ದೇವನೂರು ಮಹಾದೇವರರ ರೀತಿ ಅವಿಭಜಿತ ಮೈಸೂರು ಜಿಲ್ಲೆಯ ಅದರಲ್ಲೂ ನಂಜನಗೂಡು, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಗ್ರಾಮೀಣ ಭಾಷೆಯನ್ನು ಬಳಸುವುದರಲ್ಲಿ ಮತ್ತು ಗಂಭೀರ ವಿಚಾರಧಾರೆಗಳನ್ನು ತಮ್ಮ ಸಾಹಿತ್ಯದಲ್ಲಿ ತೋರಿಸುವುದರಲ್ಲಿ ಎತ್ತಿದ ಕೈ.

ಇವರ ಸಾಹಿತ್ಯವನ್ನು ಓದಿದವರು ಇವರೊಬ್ಬ ಸೃಜನಶೀಲ ಲೇಖಕಿ ಎಂದು ಖಂಡಿತ ಒಪ್ಪಿಕೊಳ್ಳುತ್ತಾರೆ. ಇವರ ಸಾಹಿತ್ಯ ಕೃಷಿಯ ಹರುಹು ವಿಶಾಲವಾದದ್ದು. ಸಾಹಿತ್ಯದ ಹಲವು ಪ್ರಕಾರಗಳಾದ ಕವಿತೆ, ಕಥೆ, ಕಾದಂಬರಿ, ನಾಟಕ, ಸಂಶೋಧನಾತ್ಮಕ ಕೃತಿಗಳನ್ನು ಇವರು ರಚಿಸಿದ್ದಾರೆ.

ಇವರ ಕಥಾ ಸಂಕಲನಗಳು ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ, ಪ್ರೀತಿ ಮತ್ತು ಸಾವು ಮತ್ತು ಪಾಲು, ಮುಳ್ಳ ಮನೆಯ ಮೇಲೆ, ಈ ತನಕ, ಕಂಬಳಿಯೊಳಗೆ ಕೂಳ ಕಟ್ಟಿ. ಕವನ ಸಂಕಲನಗಳು ಕಾವ್ಯಕೂಸು, ಗಂಗೋತ್ರಿಯಲ್ಲಿ, ಬಿಳಲುಗಳು. ಮಹಾಭಾರತದ ಕುರುಕ್ಷೇತ್ರ ಕುರಿತು ಬರೆದ ಜಯ, ಕಪ್ಪುಕಿವಿಯ ಬಿಳಿಯ ಕುದುರೆ ಮತ್ತು ಮೈಸೂರು ಇತಿಹಾಸ ಕುರಿತ ರಾಜ ಒಡೆಯರು ಇವರ ಮೂರು ಕಾದಂಬರಿಗಳು. ಉತ್ತರ ಶಾಕುಂತಲಾ ಇವರ ನಾಟಕ.

ಉಳಿದಂತೆ ಚದುರಂಗ (ವ್ಯಕ್ತಿ ಚಿತ್ರ), ಆರ್ದ್ರಗರ್ವದ ಹುಡುಗಿ, ವಚನ ಸಾಹಿತ್ಯದಲ್ಲಿ ಸತಿಪತಿ ಭಾವ, ವಚನಕಾರ್ತಿಯರು, ಮಹಿಳಾ ಕಾವ್ಯ ಕಾರಣ (ವಿಮರ್ಶೆ) ಎಂಬ ಕೃತಿಗಳನ್ನು ಕೂಡ ಬರೆದಿದ್ದಾರೆ. ಹೆಸರಾಂತ ಸಾಹಿತಿ ಕ್ರಾಂತಿಕಲ್ಯಾಣ ಬರೆದ ಬಿ ಪುಟ್ಟಸ್ವಾಮಯ್ಯನವರ ನಾಟಕ ಹಾಗೂ ಕಾದಂಬರಿಗಳ ಸಮಗ್ರ ಅಧ್ಯಯನ ಎಂಬ ಮಹಾ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಎಂ ಎಸ್ ವೇದಾ ಅವರ “ಜಯ” ಕಾದಂಬರಿ ಓದಿರುವ ಕೆಲವು ಆಪ್ತರು ಜಯ ಕಾದಂಬರಿ ಎಸ್ ಎಲ್ ಭೈರಪ್ಪನವರ “ಪರ್ವ”ಕ್ಕಿಂತಲೂ  ಶ್ರೇಷ್ಠವಾಗಿದೆ ಎಂದು ಹೇಳುವುದು ಕೇಳಿದ್ದೇನೆ. ಭೈರಪ್ಪನವರ ಪರ್ವಕ್ಕಿಂತಲೂ ಶ್ರೇಷ್ಠವಾದ ಕಾದಂಬರಿ ಮಹಾಭಾರತವನ್ನು ಕುರಿತು ಕನ್ನಡದಲ್ಲಿ ಇದೆ ಎಂದರೆ ಎಲ್ಲರೂ ಅಚ್ಚರಿ ಪಡಬಹುದು. ಎರಡು ಕೃತಿಗಳು ತಮ್ಮ ತಮ್ಮ ದೃಷ್ಟಿಕೋನದಿಂದ ಶ್ರೇಷ್ಠವಿರಬಹುದು ಎಂದು ಹೇಳುವವರು ಇದ್ದಾರೆ. ಅದನ್ನು ನಿರ್ಧರಿಸುವುದು ಓದುಗನೇ ಆಗಿರುತ್ತಾನೆ. ಆ ಕಾರಣದಿಂದ ಇದು ಓದುಗರಿಗೆ ಬಿಟ್ಟ ವಿಷಯ.  

ವೇದಾ ಅವರ ಪರ್ವದ ಬಗ್ಗೆ ಇರುವ ಮಾತನ್ನು ಮಹಾಭಾರತವನ್ನು ಮಹಿಳಾ ದೃಷ್ಟಿಕೋನದಿಂದ ನೋಡುವವರು ಹೆಚ್ಚು ಒಪ್ಪಬಹುದು. ಒಪ್ಪದಿರುವವರು ಎರಡು ಕೃತಿಗಳನ್ನು ಜೊತೆ ಜೊತೆಯಲ್ಲಿ ಓದಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಒಂದು ಕೃತಿ ಜನಪ್ರಿಯವಾಗುವುದರ ಹಿಂದೆ ಅಥವಾ ವಿಮರ್ಶಕರ ಮನ್ನಣೆ ಗಳಿಸುವುದರ ಹಿಂದೆ ನೂರಾರು ಕಾರಣಗಳಿಬಹುದು. ಅದು ಏನೇ ಇರಲಿ ಈ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸೃಜನಶೀಲ ಬರಹಕ್ಕೆ ಕೊಡುವ ಪ್ರಶಸ್ತಿಯನ್ನು ಎಂ ಎಸ್ ವೇದಾ ಅವರಿಗೆ ತಡವಾಗಿಯಾದರೂ ನೀಡಿದೆ.

ಇಷ್ಟೇ ಅಲ್ಲದೆ ವೇದಾ ಅವರಿಗೆ

ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ (1987)
ಗೀತಾದೇಸಾಯಿ ದತ್ತಿನಿಧಿ ಬಹುಮಾನ, ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ (1993)
ಹಾವನೂರು ಪ್ರಶಸ್ತಿ, ಭಾರತೀಸುತ ಕಾದಂಬರಿ ಪ್ರಶಸ್ತಿ (2004)
ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಥಮ ಪ್ರಶಸ್ತಿ (20004)
ಇನ್‌ಫೋಸಿಸ್ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ಧಾರವಾಡ (2006)
ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ಸಾಹಿತ್ಯ ಪ್ರಶಸ್ತಿ

ಇನ್ನು ಹಲವಾರು ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ.

ಇವರ ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ ೨೦೦೨ರಲ್ಲಿ ಮೈಸೂರಿನ ಸಂವಹನ ಪ್ರಕಾಶನದಿಂದ ಪ್ರಕಟವಾಗಿದೆ. ಇಲ್ಲಿ ಒಂಬತ್ತು ಕತೆಗಳಿವೆ. ಇಲ್ಲಿ ಹಳ್ಳಿಯ ಮುಗ್ಧ ಜನರ ಮನೋವ್ಯವಹಾರಗಳನ್ನು ಅವರ ನಂಬಿಕೆ ಮತ್ತು ಮೌಢ್ಯಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಈ ಕತೆಗಳೆಲ್ಲಾ ನಡೆಯುವುದು ಮೈಸೂರು ಮತ್ತು ನಂಜನಗೂಡಿನ ಸುತ್ತ ಮುತ್ತವೆ ಎಂದು ಹೇಳಬಹುದು.

ಆ ಕತೆಗಳು ಈ ರೀತಿ ಇವೆ.

೧. ಮದ್ಲಿಂಗನ ಮಾತೃ ಪ್ರೇಮವೂ ಮತ್ತು ಮನೋವಿಜ್ಞಾನವೂ

ಹೆಂಡತಿ ಬಂದ ಮೇಲೆ ಮಗನಿಗೆ ತನ್ನ ಅಮ್ಮನ ಮೇಲಿನ ಪ್ರೀತಿ ಕಡಿಮೆಯಾಯಿತು ಎಂದು ಅತ್ತೆಗೆ, ತನ್ನ ಗಂಡ ಮದುವೆಯಾದ ಮೇಲೂ ತನ್ನ ಅಮ್ಮನ ಸೆರೆಗಿಡಿದುಕೊಂಡು ಓಡಾಡುತ್ತಾನೆ ಎಂದು ಹೆಂಡತಿಗೆ ಅಥವಾ ಸೊಸೆಗೆ ಅನಿಸುವುದು ಸರ್ವೇ ಸಾಮಾನ್ಯ. ಇಲ್ಲಿ ಗಂಡನಿಗೆ ಕಾಲುಗಳು ಸ್ವಾಧೀನ ಕಳೆದುಕೊಂಡು ಹೋಗಿವೆ. ಅವನ ದೇಹ ಕೃಶವಾಗಿದೆ. ಕಾರಣ ಏನು? ಅವನ ಕೃಶವಾದ ದೇಹ ಪವಾಡವಾದಂತೆ ಮತ್ತೇ ಮೊದಲಿನಂತೆ ಹೇಗೆ ಆಯಿತು ? ಈಗಲೂ ಹಳ್ಳಿಯ ಕಡೆ ದೆವ್ವ, ಪಿಶಾಚಿಗಳ ಕಾಟ ಎಂದು ಹೇಳುತ್ತಾರೆ. ಇನ್ನು ಕೆಲವರು ವ್ಯಕ್ತಿಯೊಬ್ಬನ ಮೇಲೆ ಅಥವಾ ಮಹಿಳೆಯೊಬ್ಬಳ ಮೇಲೆ ದೇವರು ಅಥವಾ ದೇವತೆ ಬರುತ್ತಾಳೆ ಎಂದು ಕೇಳಿರುತ್ತೇವೆ. ಎಲ್ಲವೂ ಹೇಗೆ ಮನುಷ್ಯನ ಪ್ರತಿನಿತ್ಯದ ಮನೋವ್ಯವಹಾರಕ್ಕೆ ಸಂಬಂಧಿಸಿದೆ ಎಂದು ಕತೆ ಓದಿದರೆ ತಿಳಿಯುತ್ತದೆ.  

೨. ನೀರು

ಇಲ್ಲಿ ಋತುಮತಿಯಾದ ಬಾಲಕಿಯೊಬ್ಬಳ ಮನ್ಸಸ್ಸಿನಲ್ಲಿ ನಡೆಯುವ ಭಾವನೆಗಳು ಮನೆಯವರ ಮತ್ತು ಊರಿನವರ ಮಾತುಕತೆಗಳ ಪ್ರಭಾವದಿಂದ ಹೇಗೆಲ್ಲಾ ನಿಯಂತ್ರಿಸಲ್ಪಟ್ಟು ಅವಳು ವಿನಾಕಾರಣ ಆತ್ಮಹತ್ಯೆಗೆ ಮನಸ್ಸು ಮಾಡಿದ್ದಳು ಎಂದು ಕತೆ ತೋರಿಸುತ್ತದೆ. ಇಲ್ಲಿ ಆಗಿನ್ನೂ ಋತುಮತಿಯಾದ ಬಾಲಕಿಗೆ ಮಹಿಳೆಯ ದೇಹದ ಕಾರ್ಯಗಳು ಸರಿಯಾಗಿ ಅರ್ಥವಾಗಿರುವುದಿಲ್ಲ. ತಪ್ಪು ಗ್ರಹಿಕೆಯಿಂದ ಏನೆಲ್ಲಾ ಎಡವಟ್ಟುಗಳು ಎಷ್ಟೋ ಹುಡುಗಿಯರ ಬದುಕಿನಲ್ಲಿ ಆಗಿರಬಹುದು ಎಂದು ಈ ಕತೆ ತಿಳಿಸುತ್ತದೆ. ಜಗದ್ವಿಖ್ಯಾತ ಲೇಖಕ ಅರ್ನೆಸ್ಟ್ ಹೆಮಿಂಗ್ವೇಯ ಕತೆಯೊಂದು (a day’s wait) ಹೇಗೆ ಬಾಲಕನೊಬ್ಬನ ತಪ್ಪು ಗ್ರಹಿಕೆಯಿಂದ ಅವನು ಹಾಸಿಗೆ ಹಿಡಿಯುವಂತಾಗುತ್ತದೆ ಎಂದು ತೋರಿಸುತ್ತದೆ. ಅದರ ಪ್ರಭಾವ ಈ ಕತೆಯ ಮೇಲೆ ಇರಬಹುದು ಎಂದು ಕಾಣುತ್ತದೆ.

೩. ರಂಗಶೆಟ್ಟಿಯೆಂಬ ತತ್ವಜ್ಞಾನಿಯ ನೆನಪುಗಳು

ರಂಗಶೆಟ್ಟಿಯೆಂಬ ಕೂಲಿ ಕಾರ್ಮಿಕ ಅವನ ಗಯ್ಯಾಳಿ ಹೆಂಡತಿಯ ಜೊತೆ ಹೇಗೆಲ್ಲಾ ನರಳುತ್ತಿದ್ದ ಮತ್ತು ಸಂಬಳ ಹೆಚ್ಚು ಮಾಡಲಿ ಎಂದು ತಾನೀದ್ದ ಸಾಹುಕಾರರ ಮನೆಯವರ ಹತ್ತಿರ ಹೇಗೆಲ್ಲಾ ನಾಟಕ ಮಾಡುತ್ತಿದ್ದ ಎಂದು ತೋರಿಸುತ್ತದೆ. ಇಲ್ಲಿ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದರೂ ರಂಗಶೆಟ್ಟಿಯ ನಿರ್ಲಿಪ್ತತೆಗೆ ಕಾರಣ ಸರಿಯಾಗಿ ತಿಳಿಯುವುದಿಲ್ಲ. ಅವನು ಲೈಂಗಿಕವಾಗಿ ದುರ್ಬಲನಾಗಿದ್ದನೋ ಅಥವಾ ಅವನು ತತ್ವಜ್ಞಾನಿಯಾಗಿ ಇದು ಕ್ಷಣಿಕ ಸುಖವೆಂದು ನಿರ್ಲಿಪ್ತನಾಗಿದ್ದನೋ ತಿಳಿಯುವುದಿಲ್ಲ. ಇಲ್ಲಿ ಬರುವ ರೇಷ್ಮೆ ಹುಳುಗಳು ಮನುಷ್ಯ ತಾನೇ ತನ್ನ ನೂಲಿನಿಂದ ಬಂಧಿಯಾಗಿ ಸಾಯುವುದು ಪ್ರತಿಯೊಬ್ಬ ಮನುಷ್ಯನ ವಿಧಿಯ ಸಂಕೇತವೋ ತಿಳಿಯುವುದಿಲ್ಲ.

೪. ಸಾವೆಂಬೋ ಸಾವ ಮಾಯೆಯೊಳಗು

ನಂಜಜ್ಜ ಬದುಕನ್ನು ಉತ್ತಮ ರೀತಿಯಲ್ಲಿ ಬಾಳಿದವನು. ಕಾಯಕವೇ ಕೈಲಾಸವೆಂದು ದುಡಿದವನು. ಯಾವುದೇ ದುಂದು ವೆಚ್ಚ ಅವನಿಗೆ ಇಷ್ಟವಾಗುವುದಿಲ್ಲ. ಅದಕ್ಕಾಗಿ ತನ್ನ ಮೊಮ್ಮಗಳೇ ಸೊಸೆಯಾಗಿದ್ದರೂ ಅವಳಿಗೂ ಬುದ್ದಿವಾದ ಹೇಳುತ್ತಿರುತ್ತಾನೆ. ಅಂತ ನಂಜಜ್ಜನಿಗೆ ಲಕ್ವ ಹೊಡೆದಾಗ ಅವನ ಮಕ್ಕಳ ಹೇಗೆಲ್ಲಾ ಸಾವಿನ ವ್ಯಾಪಾರ ಮಾಡಲು ಆರಂಭಿಸುತ್ತಾರೆ ಎಂಬುದನ್ನು ಈ ಕತೆ ಚೆನ್ನಾಗಿ ತಿಳಿಸುತ್ತದೆ. ಇಲ್ಲಿ ಮನುಷ್ಯನ ಬದುಕಿನ ಗುರಿ ಏನು? ತನ್ನ ಮಕ್ಕಳಿಗಾಗಿಯೇ ದುಡಿದು ಸಾಯುವುದು ಪ್ರತಿಯೊಬ್ಬನ ಗುರಿಯೇ? ಈ ಕತೆ ಬಹುದೊಡ್ಡ ಪ್ರಶ್ನೆಯನ್ನು ನಮ್ಮ ಮುಂದೆ ನೀಡುತ್ತದೆ.

೫. ನನ್ನ ದುಃಖಕ್ಕೂ ಇಷ್ಟು ಬೆಲೆ

ಇದು ಸ್ವಾತಿಯೆಂಬ ಚಿತ್ರಗಾರ್ತಿಯ ಕತೆ. ಇಲ್ಲಿ ಅವಳು ಕಲೆಯ ಆರಾಧಕಿ. ಆದರೆ, ಅವಳ ಗಂಡ ಮಿಹಿರ್ ಒಬ್ಬ ವ್ಯಾಪಾರಿ. ಅವನಿಗೆ ಕಲೆಯೂ ಕೂಡ ವ್ಯಾಪಾರದ ವಸ್ತು. ಹೆಂಡತಿ ಭಾವನ ಜೀವಿ. ಗಂಡ ವ್ಯಾಪಾರಿ. ಅವನು ಎಲ್ಲಾ ವಸ್ತುಗಳಿಗೂ ಹಣದಿಂದ ಬೆಲೆ ಕಟ್ಟುತ್ತಾನೆ. ಅವಳು ದುಃಖದಿಂದ ಬರೆದ ಚಿತ್ರಕ್ಕೂ ಕೊನೆಗೆ ಬೆಲೆ ಕಟ್ಟುವ ಪ್ರಸಂಗ ಬರುತ್ತದೆ.  

೬. ಹೀಗೊಬ್ಬ ಸತ್ಯವಾನನ ಕಥೆ

ಈ ಕತೆ ಒಂದು ವ್ಯಂಗದ ಕತೆ ಎಂದು ಹೇಳಬಹುದು. ಇಲ್ಲಿ ಪುರಾಣದ ಸತ್ಯವಾನ ಮತ್ತು ಸಾವಿತ್ರಿಯರ ಪ್ರಸ್ತಾಪ ಆ ವ್ಯಂಗ್ಯಕ್ಕೆ ಕನ್ನಡಿ ಹಿಡಿದ ಹಾಗೆ ಇದೆ. ಇಲ್ಲಿ ಗಂಡನೊಬ್ಬ ತನ್ನ ಆರೋಗ್ಯವಂತ ಹೆಂಡತಿಯಿದ್ದರೂ ಬೇರೆ ಹೆಣ್ಣೊಬ್ಬಳನ್ನು ಮದುವೆಯಾಗುತ್ತಾನೆ. ಆದರೆ ತನ್ನ ಗಂಡ ಇನ್ನೊಂದು ಮದುವೆಯಾಗಿದ್ದರೂ ಅವನೊಬ್ಬ ಒಳ್ಳೆಯ ಗಂಡ. ಪತಿಯೇ ಪರದೈವ ಎಂಬ ಭಾವನೆ ನಮ್ಮ ಕಥಾನಾಯಕಿಯದು. ಅವನು ಸತ್ತ ಕೆಲವೇ ದಿನಗಳಲ್ಲಿ ಇವಳು ಕೂಡ ಸಾವಿನಲ್ಲಿ ಅವನನ್ನು ಹಿಂಬಾಲಿಸುತ್ತಾಳೆ. ಇಲ್ಲಿ ಇವಳದು ಡಿವೈನ್ ಲವ್ ಎಂದು ಹೇಳಬಹುದು.

೭. ಆನುಷಂಗಿಕದವಳ ಅಧ್ಯಾಹಾರ

ಇದು ರಾಮಾಯಣದಲ್ಲಿನ ಲಕ್ಷಣನ ಹೆಂಡತಿ ಊರ್ಮಿಳಾಳ ಕತೆ. ಇವಳು ಸೀತೆಯ ತಂಗಿ. ಜನಕರಾಜನ ಮಗಳು. ಆದರೂ ಸೀತೆಗಿಂತ ಶಾಪಗ್ರಸ್ತೆ. ಇವಳ ಬದುಕಿಗೆ ಒಂದು ಅರ್ಥವೇ ಇರುವುದಿಲ್ಲ. ಇವಳ ಬದುಕನ್ನು ಸಂಪೂರ್ಣವಾಗಿ ಬೇರೆ ಯಾರೋ ನಿಯಂತ್ರಿಸುತ್ತಿರುತ್ತಾರೆ. ತೆಲುಗಿನ ಪ್ರಖ್ಯಾತ ಲೇಖಕಿ ವೋಲ್ಗಾ ಅವರ ಇದೆ ರೀತಿ ವಸ್ತುವಿನ ಊರ್ಮಿಳಾ ಕತೆಯನ್ನು ನಾವು ಕಾಣಬಹುದು. ಇದು ಅವರ ವಿಮುಕ್ತ ಕಥಾಸಂಕಲನದಲ್ಲಿ ಬರುತ್ತದೆ.

೮. ಮರದೊಳಗೆ ಮರ ಹುಟ್ಟಿ

ಮರದೊಳಗೆ ಮರ ಹುಟ್ಟಿ ಕತೆಯು ಯೌವನದಲ್ಲಿ ತಿಳಿಯದೆ ಮಾಡಿದ ತಪ್ಪಿನಿಂದ ಕದ್ದು ಬಸುರಿಯಾಗಿ ಅದನ್ನು ಗರ್ಭಪಾತ ಮಾಡಿಕೊಂಡ ಯುವತಿಯೊಬ್ಬಳು ಆ ನಂತರ ಒಂದು ಒಳ್ಳೆಯ ಕುಟುಂಬಕ್ಕೆ ಸೊಸೆಯಾಗುತ್ತಾಳೆ. ಒಳ್ಳೆಯ ಗಂಡ, ತಂದೆ ತಾಯಿಯಂತಹ ಅತ್ತೆ ಮಾವ ಇದು ಬೆಚ್ಚನೆಯ ಮನೆ, ವೆಚ್ಚಕ್ಕೆ ಹೊನ್ನು, ಇಚ್ಛೆಯನರಿವ ಪತಿ ಇದ್ದಾಗ ಅವಳ ಬಾಳು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬಂತೆ ಇರುತ್ತದೆ. ಆದರೆ ಅವಳು ಮತ್ತೇ ಮತ್ತೇ ಗರ್ಭಿಣಿಯಾದರೂ ಅದು ಗರ್ಭಪಾತದಲ್ಲಿ ಕೊನೆಯಾಗುತ್ತಿರುತ್ತದೆ.

ಇದು ಏನೋ ಮಾಡಲು ಹೋಗಿ ತಾನೇ ಮಾಡಿಕೊಂಡ ಶಿಕ್ಷೆ ಎಂದು ಅವಳು ಕೊರಗುತ್ತಿರುತ್ತಾಳೆ. ಈಗ ಅವಳು ಮತ್ತೇ ಗರ್ಭಿಣಿಯಾಗಿ ತನ್ನ ಆತಂಕ ಮತ್ತು ಭಯಗಳ ನಡುವೆ ಒಂದು ಮಗುವಿಗೆ ತಾಯಿಯಾಗುತ್ತಾಳೆ. ಅವಳಿಗೆ ಬದುಕು ಸಾರ್ಥಕವೆಂಬ ಭಾವ ಮೂಡುತ್ತದೆ. “ಭ್ರಮಾ ಪ್ರಸವ ಮತ್ತು ಪ್ರಸವ ಲಹರಿ” ಎಂಬ ಪ್ರಬಂಧವನ್ನು ರೇಖಾ ಹೆಗಡೆ, ಬಾಳೇಸರ ಅವರು ೨೦೧೭ರಲ್ಲಿ ಪ್ರಜಾವಾಣಿಯಲ್ಲಿ ಬರೆದಿದ್ದರು ಆ ಪ್ರಬಂಧಕ್ಕೂ ವೇದಾರವರ ಕತೆಯೇ ಸ್ಪೂರ್ತಿ ಇರಬಹುದು ಎಂದು ಕಾಣುತ್ತದೆ.

ನಾವೆಲ್ಲಾ ಬಾಲ್ಯದಲ್ಲಿ “ಮರದೊಳಗೆ ಮರ ಹುಟ್ಟಿ, ಮರ ಚಕ್ರ ಕಾಯಾಗಿ, ತಿನ್ನಬಾರದ ಹಣ್ಣು ಬಲು ರುಚಿ” ಎಂಬ ಒಗಟನ್ನು ಕೇಳಿರುತ್ತೇವೆ. ಆ ಒಗಟು ಮಗು ಎಂದು ಎಲ್ಲರಿಗೂ ತಿಳಿದಿದೆ. ಈ ಕತೆಯ ಶೀರ್ಷಿಕೆಯೂ ಈ ಒಗಟಿನ ಆಧಾರದ ಮೇಲೆಯೇ ಇದೆ.  

೯. ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ

ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ ಈ ಕಥಾಸಂಕಲನದ ಶೀರ್ಷಿಕೆಯ ಕತೆ. ಇದೊಂದು ತುಂಬಾ ಅದ್ಭುತವಾದ ಕತೆಯೂ ಕೂಡ. ಇಲ್ಲಿ ಅತೀ ಸುಂದರವಾದ ಹುಡುಗಿಯೊಬ್ಬಳು ಅತೀ ಭೀಮಕಾಯ ಘಟೋದ್ಗಜನಂತಹ ದೇಹವುಳ್ಳ ವ್ಯಕ್ತಿ ಮತ್ತು ಸ್ವಲ್ಪ ರಾಕ್ಷಸ ಸ್ವಭಾವವಿರುವ ಪುರುಷನನ್ನು ಮದುವೆಯಾಗುವ ಪ್ರಸಂಗ ಮೂಡಿಬರುತ್ತದೆ. ಆ ಸುಕೋಮಲೆಯಂತಹ ಹುಡುಗಿಯನ್ನು ಅವನು ನಡೆಸಿಕೊಳ್ಳುವ ರೀತಿ ಅವಳಿಗೆ ಭಯದಿಂದ ತತ್ತರಿಸುವಂತೆ ಮಾಡಿರುತ್ತದೆ. ಜೊತೆಗೆ ಅವನು ನಾಟಕದ ಕಂಪನಿಯ ಇನ್ನೊಬ್ಬ ಚಂಚಲ ಹೆಣ್ಣನ್ನು ಮದುವೆಯಾಗಿ ಬಂದಿರುತ್ತಾನೆ.

ಅದೇ ಊರಿನಲ್ಲಿ ಇದೆ ರೀತಿ ಪುರುಷ ದಬ್ಬಾಳಿಕೆಗೆ ಒಳಗಾಗಿ ಜೂಜಿನಲ್ಲಿ ಹರಾಜಾಗುವ ಸ್ಥಿತಿಯಲ್ಲಿದ್ದ ದುಂಡವ್ವ ಎಂಬ ಮಹಿಳೆ ತನ್ನ ಗಂಡನ ವಿರುದ್ಧ ತಿರುಗಿ ಬಿದ್ದು ತನ್ನ ರಕ್ಷಣೆಗೆ ನಿಂತಿದ್ದ ಆ ಊರಿನ ಪೂಜಾರಿಯನ್ನೇ ಮದುವೆಯಾಗಿ ಉತ್ತಮ ಬಾಳು ಬಾಳಿ ಕೊನೆಗೆ ಒಂದು ದಿನ ಸತ್ತು ಹೋಗಿರುತ್ತಾಳೆ.

ಆ ದುಂಡವ್ವ ದೆವ್ವವಾಗಿದ್ದಾಳೆ ಆ ದೆವ್ವ ನನ್ನ ಮೇಲೆ ಬಂದಿದೆ ಎಂದು ನಮ್ಮ ಸುಕೋಮಲೆ ಹುಡುಗಿ ನಾಟಕ ಆರಂಭಿಸುತ್ತಾಳೆ. ಅವಳಿಗೆ ಆ ದುಂಡವ್ವ ಮಹಾ ಸ್ವಾಭಿಮಾನಿ ಮತ್ತು ಸಾಹಸಿ ಹೆಣ್ಣಾಗಿ ಕಾಣುತ್ತಾಳೆ. ಇದೆಲ್ಲಾ ಹೆಣ್ಣೊಬ್ಬಳ ಮನೋ ವ್ಯವಹಾರ. ಅವಳ ಬಾಳ ಸಂಗಾತಿ ಹೇಗಿರಬೇಕು. ಅವನು ತನ್ನನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಆಶಯದ ಮೇಲೆ ಈ ಕತೆಯ ಸ್ವಾರಸ್ಯ ನಿಂತಿದೆ.  

ಇದೊಂದು ತುಂಬಾ ಒಳ್ಳೆಯ ಕಥಾಸಂಕಲನ. ಇದನ್ನು ಓದಿಲ್ಲದವರು ಈಗಲಾದರೂ ಓದಬಹುದು. ಈಗ ಎಂ ಎಸ್ ವೇದಾರವರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದಾರೆ. ಅವರ ಮುಂಬರುವ ಕಾದಂಬರಿ ಹೆಚ್ಚು ಹೆಚ್ಚು ಓದುಗರಿಗೆ ತಲುಪಲಿ ಎಂದು ಶುಭ ಹಾರೈಸುತ್ತಿದ್ದೇನೆ.

December 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: