ಟೈಮ್ ಪಾಸ್ ಕಡ್ಲೆ ಕಾಯ್ : ಕಸ ವಿಲೇವಾರಿ ಮಾಡೂದಂದ್ರ ಸುಮ್ನ ಏನ್ರಿ

–  ಸೂರ್ಯಕಾಂತ ಬಳ್ಳಾರಿ


ಛೇ, ಎಂಥಾ ನಿದ್ದಿ ಬರ್ತದೋ ಏನೋ, ದರಿದ್ರಂದು, ಎಷ್ಟಾ ಲಗು ಏಳಬೇಕಂದ್ರನೂ ಆಗವಲ್ದು. ಈಗ ಎಚ್ಚರ ಆಗ್ಬೇಕಾ? ಹತ್ತು ಗಂಟೆ ಇಪ್ಪತ್ತ ನಿಮಿಷಕ್ಕ. ಸಾಲಿಯೊಳಗ ಪ್ರಾರ್ಥನ ಚಾಲೂ ಆಗಿರ್ತದ. ಇನ್ನ ಜಳಕಾ ಮಾಡಿ ಅರವಿ ಹಾಕ್ಕೋಂಡ ಆ ನೈಸ್ ರೋಡಿನೊಳಗ ಹೋಗೂದಂದ್ರ ಏನ ಸುಮ್ನೇ ಏನ. ಹಂ ನೈಸ್ ರೋಡ್ ಅಂದ್ರ ಬೆಂಗಳೂರನಾಗ ಇರೋದಲ್ರಿ, ಇಲ್ಲೂ ಒಂದೈತಿ, ಮುಗಳಿಹಾಳ ಟು ಇಟ್ನಾಳ ಅಗದೀ ಷಾಟ್ಕಟ್ ರಸ್ತಾ, ಒಂದ ಕ್ಷಣ ಮೈಮರತ್ರೂ ಗಾಡಿ ಸಮೇತ ಭೂತಾಯಿಗೆ ದೀಡ್ ನಮಸ್ಕಾರ ಹಾಕಬೇಕಾಕೈತಿ. ಹಂ ಭೂತಾಯಿ ಬಗ್ಗೆ ಅಷ್ಟ ಮವರ್ಾದಿ ಇದ್ರ ಮಾಡ್ಬಹುದನ್ರಿ. ಈ ನಮ್ಮ ಕೇಂದ್ರ ಸಕರ್ಾರದೋರಿಗೆ ಎಟ್ ಪ್ರೇಮ ಅದ ನೋಡ್ರಿ ಭೂಮಿನ ಕಂಡ್ರ, ಯಾರಿಗೂ ಹೇಳ್ದ ಕೇಳ್ದ ತಮಗ ಇಚ್ಚಾ ಆದಲ್ಲಿ ಅಡ್ಡಬಿದ್ದ್ ಸಾ ಮಾಡಬೇಕಂತಾರ. ಇರ್ಲಿ ಬಿಡ್ರಿ ಈಗ ಲಗೂ ಲಗೂ ರಡಿ ಆಗಿ ಹೋಗಬೇಕ.
ಹೌದು ಇಂದ್ ‘ಘನ ತ್ಯಾಜ್ಯ ವಿಲೇವಾರಿ’ ಪಾಠ ಮಾಡಿದ್ರ ಹೆಂಗ ಅಂತ ವಿಚಾರ ಹೊಳೀತು. ಸರಿ ಮಾಡಿದ್ರಾತು ಅಂತ ಅನ್ಕೊಂಡ್ ಸಾಲಿಗೆ ಹೋಗಿದ್ದಾ ತಡ ಎಲ್ಲಾ ನನ್ನ ಸಹೋದ್ಯೋಗಿ ಬಂಧುಗಳು ‘ಈ ಮನ್ಷಾಗ ಈಗ ಬೆಳಕ ಹರೀತಂತ ಕಾಣ್ತೈತಿ, ಸಾಲಿ ಅಂದ್ರ ಏನ ತಿಳ್ಕೊಂಡಾನಿವ’ ಅಂತ ಅನ್ಕೊಂಡಿರಬೇಕನ್ರಿ. ಆದ್ರ ಹ್ಯಾಂಗ ಅಂದಾರು. ಯಾರೂ ನಮಸ್ಕಾರ ಅನ್ಲಿಲ್ಲ. ಗೊತ್ತಾತು ಬಿಡ್ರಿ. ಬಡಬಡ ಕ್ಲಾಸಿಗೆ ಹೋದಾವ್ನ ಲೇ ತಮ್ಮ ವಿಟ್ಯಾ ಎಲ್ಲಾ ರೂಮಿನಾಗಿರೋ ಕಸದ ಡಬ್ಬಿ ತೋಂಬಾರಲೆ ಅಂದೆ. ಎಲ್ಲಾ ಮಕ್ಳು ಇವತ್ತ ಸರೀಗೇನಾಗ್ಯತಿ, ಬಂದಾವರ್ನ ಕಸದ ಡಬ್ಬಿ ಬೇಕನ್ನಾತ್ತಾರ ಅಂತ ದುರುದುರು ನೋಡಾಕತ್ರು. ಅಂವಾ ಡಬ್ಬಿ ತರೋತಂಕ ನಾ ಏನ ಮಾತಾಡ್ಲಿಲ್ಲ. ಏನೋ ಕಾದೈತಿ ಅನ್ಕೋಂಡಿರಬೇಕ್ ನಮ್ಮ ತರಗತಿ ಮಕ್ಳು. ವಿಟ್ಯಾ ಒಟ್ಟ್ ಆರು ಡಬ್ಬಿ ತಂದ. ಎಲ್ಲವನ್ನ ಒಂದಕಡಿ ಇಡಿಸಿ ಎಟ್ ಜನ ಕ್ಲಾಸಿನ್ಯಾಗ ಅದೀರಿ ಎಣಿಸ್ರೋ ಅಂದೆ. ಒಂಭತ್ತ ಮಂದಿ ಸರಾ ಅಂದ್ಲು ಕವಿ, ಅಯ್ಯೋ 23 ಮಂದಿಯೊಳಗ ಬರೀ ಒಂಭತ್ತಾ ಮಂದಿ ಬಂದಾರ ಇವರು ಅಂತ ಸಿಟ್ಟೀಲೆ ನೋಡಿದ್ರ ಭಾಳ ಮಂದಿ ಅದಾರು. ಏನ ನಿನ್ನ ಕೋಡಿ ಬರೀ ಒಂಭತ್ತಾ ಮಂದಿ ಅಂತಿಯಲ್ಲೆ ಅಂತ ಕವಿಗ್ ಅಂದ್ನಿ. ಸರಾ ಹುಡುಗ್ಯಾರ ಅಟಾ ಒಂಭತ್ತ ಮಂದೀರಿ. ಹುಡುಗ್ರ ಬ್ಯಾರೇ ಅದಾರ್ರಿ ಅಂದ್ಲು. ಯಾವತ್ತೂ ಈ ಹುಡುಗ ಹುಡುಗ್ಯಾರ ಒಂದ್ ಆಗೊಲ್ಲ ನೋಡ್ರಿ, ತಂತಮ್ಮ ಲೆಕ್ಕ ಬ್ಯಾರೆ ಬ್ಯಾರೇನೆ ಮಾಡ್ತಾರ. ಇರ್ಲಿ ನೀವೆಟ್ ಮಂದಿ ಅದೀರಪ್ಪಾ ಅಂತ ಗುರುಮಾಂತನ್ನ ಕೇಳ್ದೆ. ಸಾರ ನಾವ್ 11 ಮಂದಿ ಅದೀವ್ರೀ ಅಂದ. ನೋಡ್ರಿ ಮೂರ್ ಮೂರ್ ಮಂದಿಗೆ ಒಂದೊಂದ್ ಕಸದ ಡಬ್ಬಿ ತಗೋಳ್ರಿ ಅಂದೆ. ಅವರವರ ದೋಸ್ತಿಗಳ ಜೋಡ್ ಮಾಡ್ಕೊಂಡ್ ಕಸದ ಡಬ್ಬಿ ತಗೋಳಾಕತ್ರು.
ಸರಾ ವಿನ್ಯಾ ನಮ್ ಡಬಿ ಕಸ್ಗೊಳಾತಾನ್ರಿ ಅಂದ ಪವ್ಯಾ. ಲೇ ಅವರದ್ಯಾಕಲೇ ಅಂದೆ. ಸಾರ ನಮ್ಮದ್ ಒಡದೈತ್ರಿ ಅಂದ. ಮಗನ ಕಸ ತುಂಬಾಕ ಅಗದೀ ಛಲೋ ಹೊಸಾ ಡಬ್ಬಿ ಬೇಕೇನ ನಿನಗ, ಬಿಡ ಅದ್ನ ಅಂತ ಬಾಯ್ಮಾಡಿದೆ. ಒಟ್ ಆರು ಗುಂಪುಗಳಾಗಿ ಒಂದಿಬ್ರ ಉಳದ್ರು. ಅವರಿಗೆ ಪೆನ್ನು ನೋಟ್ಬುಕ್ ತಗೋಳ್ರಿ ಅಂತ ಹೇಳಿ ಎಲ್ರನ್ನೂ ಕಕರ್ೋಂಡ್ ಗ್ರೌಂಡಿಗ್ ಹೋದ್ನಿ. ನೋಡ್ರಲೇ ಈಗ ಎಲ್ರು ನಮ್ ಗ್ರೌಂಡಿನ ಒಳಗ ಹೊರಗ ಇರೋ ಅಟ್ಟೂ ಕಸ ಆರಿಸಿ ನಿಮ್ ಕೊಟ್ಟಿರೋ ಡಬ್ಬಿ ತುಂಬಿಸಬೇಕು ಅಂತದ್ನಿ. ಸರಾ ಇವತ್ತೇನ ಸ್ವಚ್ಛತಾ ಆಂದೋಲ ಏನ್ರಿ ಅಂದ್ಲು ಮೇಘಾ. ಹೌದವ್ವಾ ನಮ್ ದೇಸದ ಪ್ರಧಾನಮಂತ್ರಿನೇ ಕಸಗೂಡಿಸಾಕ ನಿಂತಾರಂದ್ರ ನಾವೇನ ಕಡಿಮಿ ಅಂದ್ನಿ. ಹೌದ್ ಬಿಡ್ರಿ ನೀವ್ ದಿನಾ ಕಸಾಗೂಡಸೂದು, ಸ್ವಚ್ಛ ಮಾಡೂದು ಮುಗದ ಮ್ಯಾಲೇನ ಬರ್ತೀರಿ. ಇವತ್ತಾರ ಮನಸ್ ಮಾಡೀರಿ ಅಂತ ಮನಸಿನೊಳಗಾ ಅನ್ಕೊಂಡಿಬರ್ೇಕು ಮಕ್ಳು. ಏ ಚನ್ನವೀರಯ್ಯ ನಿಮ್ ಗುಂಪಿನೋರ್ ನಮ್ ಕ್ಲಾಸಿನ ಹಿಂದಿರೋ ಕಸ ಆರಸ್ರಿ, ಉದ್ದವ್ವ ನೀವು ಅಡಗಿ ರೂಮಿನ ಹಿಂದಿಂದ್ ಆರಸ್ರಿ, ಲೇ ಬಸು ನೀವು ಆ ಕಂಪೌಂಡ್ ಹತ್ರದ್ದು ಆರಸ್ರಿ ಅಂತ ಎಲ್ಲಾ ಗುಂಪಿನವರಿಗೂ ಜಾಗ ಅಲಾಟ್ ಮಾಡಿದ್ನಿ. ಸರಾ ನಮಗ ಅಲ್ಲಿ ತ್ಯಾಜ್ಯ ತಗೋಳಾಕ ಆಗಂಗಿಲ್ರಿ ಅಂದ ಬಸು. ಯಾಕ್ರಲೇ ಸ್ವಚ್ಛ ಆಗ್ಬೇಕೋ ಬ್ಯಾಡೋ ಅಂದೆ. ಸರಾ ಅಲ್ಲಿ ಘನ ತ್ಯಾಜ್ಯ ಅಟ್ಟಾ ಅಲ್ರಿ ದ್ರವ ತ್ಯಾಜ್ಯಾನೂ ಬಿಟ್ಟೋಗಿರ್ತಾರ್ರಿ ಅಂದ ಯಲ್ಲ. ಏನ್ಲೇ ಹಂಗಂದ್ರ ಅಂತ ಕೇಳೋದ್ರೊಳಗ ಸಾರ ಅಲ್ಲಿ ದಿನಾ ಫ್ರೆಷ್ ತ್ಯಾಜ್ಯಾನೇ ಇರ್ತದರೀ ಅದರಿಂದ ಅನಿಲ ತ್ಯಾಜ್ಯಾನೂ ಬರ್ತಿರ್ತದ. ಬೇಕಾರ ಬರ್ರಿ ತೋರಸ್ತೀನಿ ಗಮ್ ಅಂತದ ಅಂದ ಬಸು. ಹಂಗಾ ಬಿಟ್ರ ಇಲ್ಲೇ ತಂದು ಇವರ ಘನ ತ್ಯಾಜ್ಯ ಮುಗೀಗಿ ಹಿಡಿಯೋ ಮಕ್ಳು ಇವರು ಅಂತ ಅನ್ಕೊಂಡು-ಛೇ ಏನ್ ಜನಾನಪ್ಪಾ ಇಲ್ಲೇ ಸಂಡಾಸಿಗೆ ಕುಂಡ್ರೋದ? ಅದೂ ಸಾಲಿ ಕಂಪೌಂಡಿಗಚ್ಚಿ.
ಎಟ್ ಖರ್ಚು  ಮಾಡ್ತಿರ್ತಾರ ಎದೇದಕ್ಕೋ. ಒಂದು ಪೈಖಾನಿ ಕಟ್ಟಸಕೋ ಬಾರ್ದಾ ಅಂದೆ. ಸರಾ ನಮ್ ಬಾತ್ರೂಮಿನೊಳಗ ಮೊನ್ನಿ ಸಂಡಾಸ ಬೇಸಿನ್ ಕುಂಡ್ರಸ್ಯಾರ್ರಿ ಅಂದ ಅಲ್ಲೇ ಬಾಜೂ ಕಸ ಆರಸ್ತಿದ್ದ ಆಕಾಶ. ನೋಡಪ್ಪ ನೀವಾರ ಸ್ವಚ್ಚತೆ ಕಾಪಾಡಾಕತ್ತೀರಿ ಅಂದೆ. ಸರಾ ನಾವ್ಯಾರೂ ಅಲ್ಲಿ ಸಂಡಾಸ ಮಾಡಂಗಿಲ್ರಿ ಅಂದ. ಯಾಕೋ ಸರಿಯಾಗಿ ಬಳಸಬೇಕೋ, ಯಾಕ ಬಳಸವಲ್ರೀ? ಅಂತ ಕೇಳ್ದೆ. ಸರಾ ಸುಮ್ ಫೋಟೋ ತೆಗಿಯಾಕ ಹಾಕ್ಯಾರ್ರಿ, ಫೋಟೋ ತಗದಕೊಟ್ರ ರೊಕ್ಕ ಕೊಡ್ತಾರಂತ, ನಮ್ ಮನಿಯಾಗ, ಆ ಪ್ರೇಮ, ಸಿದ್ದವ್ವಗೋಳ ಮನ್ಯಾಗೂ ಹಂಗ ಹಾಕಿ ಫೋಟೊ ತಗದಾರ್ರಿ ಅಂದ ಮಾಂತ್ಯ. ಸುದ್ದ ಆತ್ ಬಿಡ್ರಲೇ. ನಮ್ ಪ್ರಧಾನಿ ನಿಮ್ಮಷ್ಟ ಬುದ್ದಿವಂತ್ರಲ್ಲ ನೋಡ್ರಿ, ಜನ ಖರೇನ ಸಂಡಾಸ್ ರೂಮಿ ಕಟ್ಟಿಸ್ಕೊಂಡಾರಂತ ತಿಳ್ಕೊಂಡ್ ಎಲ್ರಿಗೂ ದುಡ್ ಸಾಂಕ್ಷನ್ ಮಾಡ್ಸಿ ಪಂಚಾಯ್ತಿಯವರ ಕೈಲಿ ಕೊಡಸಾಕತ್ತಾರ. ಇನ್ನ ಊರ ಸ್ವಚ್ಛ ಆದಂಗ ಬಿಡ್ರಿ ಅಂದೆ.
ಸರಾ ಈ ಮಾಂತ್ಯ ಮುಂಜಾನಿ ಇಲ್ಲೇ ಕುಂತಿದ್ದರೀ ಅಂದ ರಮ್ಯ ಅಂದರ ರಮೇಸ. ಏ ಯಪ್ಪಾ ನೀ ಏನ ಕುಂಡ್ರಾಂಗಿಲ್ಲ ನೋಡ್ ಪಾಪ ಸರಾ ಇವರೆಲ್ರೂ ಇಲ್ಲೇ ಕುಂಡ್ರೋದ್ರಿ ಅಂದ ಮಾಂತ್ಯ. ಥೂ ನಿಮ್ಮ ಹಾಳಾಗೋಗ್ರಿ ಮೊದ್ಲು ಕಸ ಆರಸ್ರಿ ಲಗೂ ಲಗೂ ಅಂತ ಅವಸರ ಮಾಡ್ದೆ.
ಎಲ್ರೂ ತಂತಮ್ಮ ಡಬ್ಬಗಳೊಳಗ ನಾನಾತರದ ಕಸ ತುಂಬ್ಕೊಂಡು ಬಂದು ಸರಾ ಎಲ್ಲಿ ಹಾಕೋದ್ರಿ ಅಂತ ಕೇಳಾಕತ್ರು. ಇಲ್ಲೇ ಹಾಕ್ರಿ ಅಂತ ಕ್ಲಾಸಿನ ಮುಂದಿರೋ ಕಾರಿಡಾರು ತೋರಿಸ್ದೆ. ಏ ಸಂಗಿ ಕಸಬರ್ಗಿ ತಂದ್ ಕಸಾ ಹೊಡಿಯವ್ವ ಅಂದೆ. ಎಲ್ರೂ ನಗಾಕತ್ರು. ಈ ತಲೆ ಎಟ್ ಚುರುಕ್ ಐತಿ, ಕಸ ಹಾಕಾಕ ಕಸ ಹೊಡ್ದು ಜಾಗ ರಡಿ ಮಾಡ್ಬೇಕಾ ಅಂತ ನನ್ನನ್ನ ನಾನೇ ಶಪಿಸಿಕೊಳ್ತಾ ಹೌದು ಭಾಳ ಶಾಣ್ಯಾರದೀರಿ ಕಸ ಹಾಕ್ರಿ ಮೊದ್ಲು ಅಂತ ಮಕ್ಳ ಮೇಲೇನೆ ಜೋರ್ ಮಾಡ್ದೆ. ಎಲ್ರೂ ಕಸಾ ಸುರೀತಿರ್ಬೇಕಾದ್ರ ಒಂದಕ್ಕೋಗೋ ಬೆಲ್ ಹೊಡೀತು. ಎಲ್ಲಾ ಹುಡುಗ್ರು ಮಾಸ್ತಾರಗಳು ಹೊರಾಗ ಬಂದ್ರು. ನಮ್ ಹೆಡ್ ಮಾಸ್ತರ ಬಂದಾವ್ರನೇ ಸರಾ ಏನ್ ಮಾಡಾಕತ್ತೀರಿ. ನೀವಂತೂ ಕಸ ಆರಸೀಸಿ ಹೊರಾಗ ಹಾಕ್ಸಾ ಟೈಮ್ನಾಗ ಇರಾಂಗಿಲ್ಲ. ನಾವೆಲ್ಲ ನೀವು ಬರೋದ್ರೊಳಗ ಕಸ ಆರಸಿ ಕಂಪೌಂಡ್ ಹೊರಗ ಹಾಕಿದ್ರ ನೀವ್ ಬಂದ್ ಒಳಗ ಹಾಕ್ಸಾಕ ಹತ್ತೀರಿ, ಏನ್ ಛಂದ ನೋಡ್ಕೋತ ನಿಂತೀರಲ್ಲ ಅಂತ ಬೈತ ಬಂದ್ರು.
ನಾನೂ ದಾದ್ ಮಾಡ್ಲಾರದೇ ಈಗ ಕೊಳಿಯುವಂತ ಕಸ ಮತ್ತು ಕೊಳೀಲಾರದ ಕಸ ಬ್ಯಾರೆ ಬ್ಯಾರೆ ಮಾಡ್ರಿ ಅಂತ ಹುಡುಗ್ರೀಗೆ ಹೇಳ್ದೆ. ನೋಡ ನೋಡತಿದ್ದಂಗ ಎರಡ ರಾಶಿ ಆದ್ವು. ಇವರೆಲ್ಲ ಕಸದಲ್ಲಿರೋ ಪ್ಲಾಸ್ಟಿಕ್,ತಂತಿ ಆರಸೋದ್ರೊಳ ಎಟ್ ಚುರುಕ ಅದಾರ, ಇರಲಿ ಮುಂದಾರ ಉಪಯೋಗಕ್ಕ ಬರ್ತದ. ಹೆಂಗೂ ಏಟ್ ಓದಿದ್ರೂ ನೌಕ್ರಿ ಸಿಗಾಂಗಿಲ್ಲ. ಇದನ್ನಾರ ಮಾಡಾಕ ಬರ್ತದ ಅಂತ ಸಮಾಧಾನ ಮಾಡ್ಕೊಂಡ್ ಕಸದಿಂದ ಆಗು ಅಪಾಯಗಳ ಬಗ್ಗೆ ಸ್ವಲ್ಪ ವಿವರಣೆ ಕೊಟ್ನಿ. ಎಲ್ರೂ ಅರ್ಥ ಮಾಡ್ಕೊಂಡಿರೋಂಗ ಕಾಣಿಸ್ತು. ಈಗ ಈ ಕೊಳೆಯುವ ಕಸವನ್ನ ತಿಪ್ಪೆಯೊಳಗ ಹಾಕ್ ಬರ್ರಿ ಅಂತ ಹೇಳ್ದೆ. ನಮ್ ಕಸ ಬೇರೆಯವರ ತಿಪ್ಪಿಗೆ ಹಾಕೋ ದಗದಾನೂ ಆತು. ಇನ್ನ ಈ ಕೊಳೀಲಾರದ ಕಸ ಏನ್ ಮಾಡೋದು ಅಂತ ಚಿಂತಿ ಮಾಡಾಕತ್ನಿ. ಸರಾ ಇದನ್ನ ಒಂದು ಪ್ಲಾಸ್ಟಿಕ್ ಚೀಲದಾಗ ತುಂಬತೀವ್ರಿ ಅಂತ ತುಂಬಿದ್ರು. ನಾಗೇಶ ಹೆಗಡೆಯವರು ಬರದಿರೋ ಯಾವ ಸಂಸ್ಕರಣ ವಿಧಾನಾನೂ ನಮಗ್ ಸನೀಪ ಇಲ್ಲ. ಎಲ್ಲಿ ಹಾಕೂದು ಅಂತ ಇಚಾರ ಮಾಡ್ತಿರೋದ್ರೊಳಗ ತುಂಬ್ಕೊಂಡಿರೋ ಚೀಲವನ್ನ ಬಾಲಿನಗತೆ ಗಟ್ಟಿಯಾಗಿ ಕಟ್ಟಿ ಸರಾ ನೀವಂತೂ ಫುಟ್ಬಾಲ್ ರಿಪೇರಿ ಮಾಡಸಲಿಲ್ಲ. ಇದರಲೆ ಆಡ್ತೀವ್ರಿ ಅಂತ ಕಾಲೀಲೆ ಒದ್ಕೋತ ಗ್ರೌಂಡಿಗೆ ಹೋದ್ರು. ಅಬ್ಬಾ ಹೆಂಗೋ ವಿಲೇವಾರಿ ಆತಲಾ ಅಂತ ಆಫೀಸಿನ ಕಡೆ ಹೊಂಟ್ನಿ.

‍ಲೇಖಕರು G

February 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

10 ಪ್ರತಿಕ್ರಿಯೆಗಳು

  1. Mahesh

    ಕಸದಿಂದ ಫೂಟ್ ಬಾಲ್! ವಿಡಂಬನೆ ತುಂಬಾ ಚೆನ್ನಾಗಿ ಮೂಡಿಬಂದಿದೆ.

    ಪ್ರತಿಕ್ರಿಯೆ
  2. ವಿಠ್ಠಲ ದಳವಾಯಿ

    ಭಾಳ ಚಲೋ ಬಂದದ ಲೇಖನ. ಹೀಂಗ ಬರಿತಾನೆ ಇರಿ. ಸದ್ಯವನ್ನು ಈ ತರ ಅರ್ಥ ಮಾಡಿಸೋ ಸಂಗತಿ ಬಹಳ ಮಹತ್ವದ್ದು.

    ಪ್ರತಿಕ್ರಿಯೆ
    • Suryakanth Bellary

      ತಮ್ಮಂಥವರ ಸಹವಾಸ ನೋಡಿ ಸ್ವಾಮಿ, ನಿಮ್ಮ ಸಲಹೆಗಳನ್ನ ಥೂ ಅಂತ ಮಕ್ಕೆ ಉಗದು ಹೇಳಿ, ನಾವು ಸ್ವೀಕರಿಸ್ತೀವಿ.

      ಪ್ರತಿಕ್ರಿಯೆ
  3. ಹನುಮಂತ ಹಾಳಿಗೇರಿ

    ಜವಾರಿ ಕನ್ನಡದಾಗ ಮಸ್ತ್ ಬರಿದಿರೆಪಾ…

    ಪ್ರತಿಕ್ರಿಯೆ
    • Suryakanth Bellary

      ಸಹವಾಸ ದೋಷ ಫ್ರೆಂಡ್, ನಿಮ್ಮಂಥ ಒಳ್ಳೊಳ್ಳೆ ಕಥೆಗಾರ ಮಿತ್ರರಿರುವಾಗ ಸುಮ್ನಿರಾಕ ಎಲ್ಲಿ ಬಿಡ್ತೀರಿ. ಏನೋ ಸುಮ್ನೆ ಟೈಂ ಪಾಸಿಗೆ ಬರ್ದೆ, ಮಾರ್ಗದರ್ಶನ ಮಾಡಿ ದಯವಿಟ್ಟು

      ಪ್ರತಿಕ್ರಿಯೆ
  4. Deepak

    ಸರ, ಅದ್ಬೂತವಾಗಿದೆ ನಿಮ್ಮ ವಿವರಣಾ ಶೈಲಿ..

    ಪ್ರತಿಕ್ರಿಯೆ
    • Suryakanth Bellary

      ಥ್ಯಾಂಕೂ ಕಣೋ ದೀಪಕ್, ಭಾಳ ಖುಷಿ ಆತನೋಡಪಾ, ನಿಮ್ಮಂಥ ಇಂಜಿನಿಯರಿಂಗ್ ಓದೋ ಹುಡುಗರೂ ಕನ್ನಡ ಬ್ಲಾಗ್ ಓದ್ತೀರಲ್ಲ ಸಾರ್ಥಕ ಆತು ಬಿಡು.

      ಪ್ರತಿಕ್ರಿಯೆ
    • Suryakanth Bellary

      ಥಾಂಕೂ ಸರ್, ದಯವಿಟ್ಸಟು ಸಲಹೆ ಕೊಡ್ರಿ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: