ಡೈಲಿ ಬುಕ್ : ಏಕಂ ಪ್ರಕಾಶನದಿಂದ ’ತೆರೆದ ಕಿಟಕಿ’

ಏಕಂ ಪ್ರಕಾಶನ, ಪುಟ ಸಂಖ್ಯೆ 172, ಬೆಲೆ 120 ಎಲ್ಲಾ ಪುಸ್ತಕ ಮಳಿಗೆಯಲ್ಲಿ ಲಭ್ಯ

ಚೈತನ್ಯ ಹೆಗಡೆಯ ‘ತೆರೆದ ಕಿಟಕಿ ‘ ಅವರ 28 ಅಂಕಣಗಳ ಸರಮಾಲೆ. ನಿಜಕ್ಕಾದರೂ ಒಂದಕ್ಕಿಂತ ಒಂದು ಅಣಿಮುತ್ತುಗಳು. ‘ತೆರೆದ ಕಿಟಕಿ’ ಎಂಬ ಹೆಸರೇ ಸೂಚಿಸುವಂತೆ ಇಲ್ಲಿ ವಿಷಯ ವೈವಿಧ್ಯ, ಹರವು ಓದುಗನಿಗೆ ಕೊಡುವ ಅನುಭೂತಿ ಅದ್ಭುತ, ಅಪೂರ್ವ !

ಚೈತನ್ಯರ ಬರಹಗಳಲ್ಲಿ ನನ್ನನ್ನು ಸೆಳೆದದ್ದು ಅವರ ನಿರೂಪಣೆ. ಭಾಷೆಯ ವೈಭವೀಕರಣ, ಆತ್ಮರತಿ ಅವರ ಅಂಕಣದಲ್ಲಿ ಎಲ್ಲೂ ಇಣುಕುವುದಿಲ್ಲ. ಉತ್ಪ್ರೇಕ್ಷೆ, ಅಣಕ, ಅದು ಮತ್ಯಾರದ್ದೋ ಕೆಲಸ ಎಂದು ಬೊಟ್ಟು ಮಾಡಿ ತೋರಿಸುವಿಕೆ ಇಂತಹ ನಕಾರಾತ್ಮಕ ಲೇಖನಗಳು, ಕಾರ್ಯಕ್ರಮಗಳು ಬೊಬ್ಬಿಡುತ್ತಿರುವ ವಾಸ್ತವದಲ್ಲಿ, ‘do whatever you can from wherever you are’ ಎಂಬ ಹೇಳಿಕೆಯಂತೆ ಚೈತನ್ಯ ಓದುಗನಿಗೆ ಅರಿವೇ ಆಗದಂತೆ ತಣ್ಣಗೆ ಒಂದು ಸಕಾರಾತ್ಮಕವಾದ ಸಂದೇಶ ತಮ್ಮ’ ಅಂಕಣದ ಮೂಲಕ ರವಾನೆ ಮಾಡಿಬಿಡ್ತಾರೆ. ‘ಧಿಕ್ಕಾರ ಕೂಗುತ್ತಲೇ ನಾವೇ ಕಂಡುಕೊಳ್ಳಬೇಕಾದ ಉತ್ತರಗಳು’ ಅಂಕಣ ಇದಕ್ಕೊಂದು ಪುರಾವೆ.
‘ತೆರೆದ ಕಿಟಕಿ’ ಯ ಅಂಕಣಗಳಲ್ಲಿ ಭಾವ, ಭಾವನೆಗಳ ಜೊತೆಜೊತೆಗೆ ಮಾಹಿತಿಯ ಮಹಾಪೂರವು ಹರಿದುಬರುತ್ತೆ. . ಮತ್ತು ಇದು ಒಂದು ಕಾಲಘಟ್ಟಕ್ಕೆ ಸೀಮಿತವಾದುದಲ್ಲ. ಎಂದಾದರು ಎಲ್ಲಾದರು ಪುಸ್ತಕ ಮಗುಚಿ ಹಾಕಿದರೂ ಅಂದಿಗೂ ಅದು ಪ್ರಸ್ತುತ ಎನಿಸುತ್ತೆ. ‘ಮಳೆ ನಿಂತ ಮೇಲೂ ಇವರ ಋಣ ಮನದಲ್ಲಿರಲಿ …’ ಎಂಬ ಅಂಕಣ 1962 ರ ಭಾರತ ಚೀನಾ ಯುದ್ಧದಿಂದ ಹಿಡಿದು ಇತ್ತೀಚೆಗೆ ಉತ್ತರ ಖಾಂಡವು ಪ್ರಳಯದಂಥ ಪ್ರವಾಹಕ್ಕೆ ತುತ್ತಾದಾಗ “they fought to the last man, last round” ಎಂಬ ಗುರಿ ಹೊಂದಿದ ನಮ್ಮ ಯೋಧರು ನಡೆಸಿದ ಕಾರ್ಯಾಚರಣೆ, ‘ನಮ್ಮುಸಿರನ್ನು ಕಾಯುತ್ತಿರುವ ಹೆಸರೇ ಇಲ್ಲದವರು’ ಎಂಬ ಅಂಕಣದಲ್ಲಿ ಬೇಹುಗಾರಿಕೆಗೆಂದು ಪರದೇಶಗಳಿಗೆ ತೆರಳಿ ಇಂಟೆಲಿಜೆನ್ಸ್ ನ ಗಮನಕ್ಕೆ ಅಪಾಯದ ಸೂಚನೆ ಕೊಟ್ಟು, ಕಡೆಗೆ ಅನಾಮಧೇಯರಾಗೆ ಉಳಿಯುವ ಸಾಮಾನ್ಯ ಜನರು…. ‘ ಸುಡುಗಾಡನ್ನು ಸೋಕಿದ ಗಾಳಿ ನಮ್ಮ ಬೃ೦ದಾ ವನಕ್ಕೂ ಬಡಿಯುತ್ತದೆ ” ಎಂಬ ಅಂಕಣ ದಕ್ಷಿಣ ಸುಡಾನ್ ನಲ್ಲಿ ಭಾರತದ ರಫ್ತು ಹಿತಾಸಕ್ತಿಗೆ ವೇದಿಕೆ ನಿರ್ಮಿಸುವ ಮಹತ್ವಾಕಾಂಕ್ಷೆಗಾಗಿ, ನಮ್ಮ ಯೋಧರು ಸುಡಾನ್ ಗೆ ತೆರಳಿ ಅಲ್ಲಿನ ಬುಡಕಟ್ಟು ಜನರನ್ನು ಸುರಕ್ಷಿತವಾಗಿಡಲು ಬಂಡುಕೋರರೊಂದಿಗೆ ಸೆಣೆಸುತ್ತಾರೆ ಎಂದೆಲ್ಲ ಅಪರೂಪದ ಮಾಹಿತಿಯೊಂದಿಗೆ, ಆ ಯೋಧರ ಧಾರುಣ ಪರಿಸ್ಥಿತಿ ಮನ ಕಲಕುವಂತೆ ಚೈತನ್ಯ ಚಿತ್ರಿಸಿದ್ದಾರೆ.
ಹಾಗೆ ‘ಬೆಂಗಳೂರಿನ ಎದೆಯ ಮೇಲೆ ಬಿತ್ತು ಒಂದು ಬಿರುಮಳೆ ‘ ‘ಬೇಸಿಗೆಗೆ ಬತ್ತಿಹುದು ಭಾವಿ ಅಷ್ಟೇ ಅಲ್ಲ ಭಾವಗಳು’ ಎಂಬ ಅಂಕಣಗಳಲ್ಲಿ ಮರಗಿಡಗಳ ಸ್ವಗತ ಇದೆ. ಅವು ತಮ್ಮ ಅಳಲನ್ನು ಯಾವ ಪರಿಯಲ್ಲಿ ತೋಡಿಕೊಳ್ಳುತ್ತೆ ಅಂದರೆ ಓದುಗ ಇದು ಕೇವಲ ಅಂಕಣ, ಪುಸ್ತಕ ಓದಿ ಬದಿಗಿಟ್ಟರೆ ಮುಗಿಯಿತು ಎಂಬ ಭಾವನೆಯನ್ನು ಮರೆತು ಅದೇ ಗುಂಗಿನಲ್ಲಿ ಉಳಿದುಬಿಡ್ತಾನೆ.
ನನಗೆ ಖುಷಿ ಕೊಡುವ ಚೈತನ್ಯರ ಇನ್ನೊಂದು ಕಲೆ ಅವರ ಕಲ್ಪನಾಶಕ್ತಿ. ಒಂದು ಗಹನವಾದ ವಿಷಯಕ್ಕೆ ‘ಇದಮಿತ್ತಂ’ ಎಂದು ಪರಿಹಾರ ಸೂಚಿಸಲಾಗದ ಸಂದರ್ಭದಲ್ಲಿ, ಚೈತನ್ಯ ಮೆಲ್ಲಗೆ ಕಲ್ಪನಾಲೋಕಕ್ಕೆ ಜಾರಿ ಆ ಸಂದರ್ಭಕ್ಕೆ ಒಂದು ಸುಖಾಂತ್ಯ ಕೊಟ್ಟುಬಿಡ್ತಾರೆ . ‘ಮತಭಾರತ ಸಂತೆಯಲ್ಲಿ ಹೊಸ ಕನಸ ಹುಡುಕಾಟ’ ಓದಿದ ಯಾರ ಮೊಗದಲ್ಲಾದರೂ ಕಿರುನಗೆ ಮೂಡದಿರಲಾರದು.
ಪುಸ್ತಕ ಹಾಗು ಚಲನಚಿತ್ರ ವಿಮರ್ಶೆಯತ್ತಲು ತೆರೆದ ಕಿಟಕಿ ಬೆಳಕು ಬೀರುತ್ತೆ. ಜುಂಪಾ ಲಾಹಿರಿ ಅವರ ಪುಸ್ತಕಗಳ ಬಗ್ಗೆ ಮಾಹಿತಿ, ವೆಂಡಿ ಹಾಗು ಫ್ರಿಜೋರ ಸಂಶೋದನ
ಲೇಖನಗಳ ಬಗ್ಗೆ ಚರ್ಚೆ, ಡಾವಿಂಚಿ ಕೋಡ್, ಇಂಗ್ಲಿಷ್ ವಿಂಗ್ಲಿಶ್ ಮುಂತಾದ ಚಿತ್ರಗಳ ವಿಮರ್ಶೆ ಇತ್ಯಾದಿ ಓದುಗರನ್ನು ಚಿಂತನೆಗೆ ಹಚ್ಚುತ್ತವೆ
ಒಂದು ಗಟ್ಟಿಯಾದ ವಸ್ತುವಿಲ್ಲದಿದ್ದರು ಸಹ ಅದರ ಸುತ್ತಲೂ ಅಂಕಣ ಹಣೆಯುವ ಗಟ್ಟಿತನ ಚೈತನ್ಯರ ಲೇಖನಗಳಿಗಿದೆ. ‘ಬೈಟು ಕಾಫಿ ಕುಡಿಯೋಣವಾ ? ‘ ‘ಚಳಿಗುಳ್ಳೆಗಳ ಆಯಲು ಯಾರೆಲ್ಲ ಬರುವಿರಿ ಅಂಗಳಕೆ ?’ ಈ ಕೆಟಗರಿಯಲ್ಲಿ ಬರುತ್ತವೆ.
ಹ್ಹಾಂ…. ನಾನು ಹೀಗೆ ಮುಂದುವರೆಯುತ್ತಾ ಹೋದರೆ ‘ತೆರೆದ ಕಿಟಕಿ ‘ ಯನ್ನು ನಿಮ್ಮ ಮುಂದೆ ಪೂರಾ ತೆರೆದಿಟ್ಟುಬಿಡ್ತೀನೇನೋ ….. ಪುಸ್ತಕ ನೀವೇ ಓದಿ. ‘A must read’ ಎಂದಷ್ಟೇ ನಾನು ಕಡೆಯಲ್ಲಿ ಹೇಳಬಯಸುತ್ತೇನೆ
 
ರಮಾ ಎಂ ಎನ್
ಎಂ ಎನ್ ಸಿ ಉದ್ಯೋಗಿ
 
 

‍ಲೇಖಕರು G

February 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: