'ಶಾಂತಸಮುದ್ರದಲ್ಲೆದ್ದ ಅಲೆಗಳು ಕಂಡಿಲ್ಲ ಯಾರಿಗೂ…' – ಜಯಶ್ರೀ ದೇಶಪಾಂಡೆ

ಗಿಡುಗನೂ…ಹುಡುಗಿಯೂ …

ಜಯಶ್ರೀ ದೇಶಪಾಂಡೆ


ಮಲ್ಲಿಗೆ ಕಮಾನುಕಟ್ಟಿದ ಮನೆ
ಜಕ್ಕವಕ್ಕಿಗಳಂಥ ಜೋಡಿ,
ಅವನೂ ಸುಖಿ….ಅವಳೂ,
ದುಗುಡ ದುಮ್ಮಾನಗಳ ಕಳೆ ಇಲ್ಲ,
ಶಾಂತಸಮುದ್ರದಲ್ಲಿ ಅಲೆಗಳಿಲ್ಲ.
ಮಂದಗಾಳಿಗೆ ಅನವರತ ಮನವರಳಿದೆಯಲ್ಲಿ.
ಹಗಲಿರುಳು ಕೋಗಿಲೆಯ ಕುಹು ಅಲ್ಲಿ!
 
ಆಕಾಶವಿಡೀ ಹಕ್ಕಿಗಳು, ಬಣ್ಣ ಬಣ್ಣದ ಗರಿಗಳು
ತೇಲಿ,ತೂರಿ ಇಳಿದೇರಿ -ಏರಿಳಿದು ನಕ್ಕ ಪರಿ…
ಅಲ್ಲೇ ಗಿಡುಗನೂ ಒಂದಷ್ಟೆ !!
ಎಲ್ಲೋ ಹಾರುತಿದೆ,…ಇಲ್ಲಿ ನೋಡುತಿದೆ,
ಯಾವ ಬೇಟೆಯ ಮೇಲೆ ಹೊಂಚೋ
ಅದಕೆ ಮಾತ್ರ ಗೊತ್ತು!
ಕಣ್ಣಿಟ್ಟಿದೆ…ಹಾರಿ ಸುತ್ತಿದೆ …ಬಿಡುಗಣ್ಣ ತೆರೆದು ನೋಡಿದೆ…
ಬಲು ತೀಕ್ಷ್ಣ, ಬಲು ನಿಖರ, ಅಷ್ಟೇ ಚೂಪು,
ಗುರಿ ತಪ್ಪದ ಗಿಡುಗನದು, ಬೇಟೆಗಿಲ್ಲ ಬಚಾವು!!
 
ಸಂಜೆ ಮುಂಜಾನೆಗಳು ಸರಿದ ಹೊತ್ತು,
ಅವನು ಅದೇ ತನ್ನ ಲೋಕದಲ್ಲಿ …ಅವಳೂ,
ಬೇಕಿಲ್ಲ ಬೇರೇನು….ನಮ್ಮಲ್ಲಿ ನಾವು.
ಜಗದಗಲವೇನಾದರೇನಂತೆ? ನನ್ನ -ನಿನ್ನಲ್ಲಿ ಇನ್ನೇನಿಲ್ಲ…
ಕಣ್ಣು ಕ೦ಡಲ್ಲಿ ಹೂ ಹಚ್ಚಡದ ಹಾದಿ ಅಷ್ಟೇ .
 
ಸುತ್ತಿ ಬಳಲಿಲ್ಲ ಗಿಡುಗ, ಮತ್ತೆ ಸುತ್ತಲು ಭಯವಿಲ್ಲ
ಹೊಂಚು ಫಲಿಸುವ ಈ ಚಣದಿ ಹೊತ್ತೆಷ್ಟು ಬೇಕು
ಬೇಟೆಯನೆರಗಲು??? ಕೊಕ್ಕಿದೆ ..ಸೊಕ್ಕಿದೆ..ಎದೆಯೊಳಗೆ
ದಾಹದ ಕೊಡವಿದೆ..
 
ಕಾಲ್ತಳದ ದಾರಿ ಅವಳಿಂದ ಸರಿಯಿತು….
ಹಳ್ಳ ಬಲು ಆಳ ಭೂತಳದ ಒಳಗೆ!!
ಗಿಡುಗ ಕುಕ್ಕಿದೇಟು ಅಂತಿಂಥದಲ್ಲ…ಅವಳಂತರಾಳಕ್ಕೆ
ದುಮ೯ರಣದ ಶಿಕ್ಷೆ ! ಘಾಸಿತ ಕಾಯವದು ಕ್ಷತವಿಕ್ಷತ.
 
ಇನ್ನೇನು ಅವ ಬರುವ ಹೊತ್ತು….ಏಳುವಳೇ?
ಎದ್ದೇನು ಆಗುವುದು? ಭೂಮ್ಯಾಕಾಶಗಳು ಮುರಿದು ಬಿದ್ದಾಗ?
ಹಾರಿಹೋಗಿತ್ತು ಗಿಡುಗ …ಮೋಡದಾಟಿ ಸುತ್ತತೊಡಗಿತ್ತು,
ಇನ್ನೊಂದು ಬೇಟೆ ಕಣ್ತಳದಲ್ಲಿ….
ಆದರೇನಂತೆ ಗಿಡುಗ ಗಿಡುಗನೇ….
 
ಶಾಂತಸಮುದ್ರದಲ್ಲೆದ್ದ ಅಲೆಗಳು ಕಂಡಿಲ್ಲ ಯಾರಿಗೂ,
ಈಜಿ ಬರಲಾರಳವಳು….ಇನ್ನೇನು ಅವ ಬರುವ ಹೊತ್ತು..
ಹೇಳಲೇನಿದೆ ಈಗ? ತಾ ಮುಳುಗಿಯಾಯಿತಲ್ಲ….
ಅಹಲ್ಯೆ ತಾನಾಗಿಯಾಗಿದೆ…ರಾಮನಾಗುವನೆ ಅವನು?
ಅವನ ತೀರ್ಮಾನ ಅವನದಷ್ಟೇ …..
 
ಯಕ್ಷಪ್ರಶ್ನೆಗಳ ಉತ್ತರ ಹುಡುಕಬೇಕೆ?…ಅವನ ಪರೀಕ್ಷೆಯದು
ಆಗಬೇಕೇ? ಅವನ ನಿಷ್ಠೆಗೊ೦ದು ಒರೆ ಬೇಕೆ?
ಎತ್ತಿ ಮತ್ತೆ ತಲೆ, ಎದೆಗೆಡದೆ ಸಂಭವಕೆ
ಎದ್ದು ಮುನ್ನಡೆವುದೇ ??.. ತನ್ನ ಹೊಡೆದ ಗಿಡುಗನಿಗೊಂದು
ಗುರಿಯಿಟ್ಟು ಬಾಣ ಬೀಸುವುದೇ?
ತಪ್ಪೇನು….ತಪ್ಪೇನು.. ತಪ್ಪೇನು??
 

‍ಲೇಖಕರು G

February 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: