ಸಂಧ್ಯಾರಾಣಿ ಕಾಲಂ : 'ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು, ಹೃದಯ ತೆರೆದಿದೆ…'


ಅದೊಂದು ಸಮಯವಿತ್ತು. ಇಡೀ ದಿನ, ಹಲವೊಮ್ಮೆ ದಿನಗಟ್ಟಲೆ ನಾನು ಒಂದೂ ಮಾತನಾಡದೆ ಕಳೆದಿರುತ್ತಿದ್ದೆ. ಮಂಗಳೂರಿನಲ್ಲಿ ಮನೆ. ಮುಖ್ಯರಸ್ತೆಯಿಂದ ಒಂದು ಓಣಿಗೆ ತಿರುಗಿ, ಅಲ್ಲಿಂದ ಸುಮಾರು ೬೦-೭೦ ಮೆಟ್ಟಿಲು ಇಳಿದರೆ ಒಂದು ತೋಟ. ತೋಟದ ನಡುವೆ ಮನೆ ಮಾಲೀಕರ ಮನೆ, ಅಲ್ಲೆ ಸ್ವಲ್ಪ ಪಕ್ಕದಲ್ಲಿ ನಮ್ಮ ’ಬಿಡಾರ’. ಬಿಟ್ಟರೆ ಸುತ್ತ ಮುತ್ತ ಮನೆಗಳೇ ಇಲ್ಲ. ಅಲ್ಲಿಯವರೆಗೂ ನಾನಿದ್ದದ್ದು ತಂಗಿಯರೊಂದಿಗೆ ತುಂಬಿದ ಮನೆಯಲ್ಲಿ. ರಸ್ತೆಯ ಆಚೆ, ಈಚೆ ಮನೆಗಳು. ಬೆಳಗ್ಗೆ ಎದ್ದು ಕಾಲೇಜಿಗೆ ಹೊರಟರೆ ಜೊತೆಯಲ್ಲಿ ಗೆಳತಿಯರು, ಮಾತು-ಮಾತು-ಮಾತು. ಕಾಲೇಜಿಂದ ಬರುವಾಗ, ಬಂದ ಮೇಲೆ ಮಾತೇ ಮಹಾದೇವಿ! ಅಲ್ಲಿಂದ ಮಲಗಿ ಎದ್ದದ್ದೇ ಕನಸು ಹರಿದಂತೆ ನೇರ ಈ ಮೌನದ ಸೀಮೆಗೆ ವರ್ಗಾಯಿಸಲ್ಪಟ್ಟಿದ್ದೆ.
ಆ ಮನೆ, ತೋಟ ಇದ್ದ ಜಾಗ ಹಿಂದೆ ಯಾವಾಗಲೋ ನಾಗಬನ ಆಗಿತ್ತಂತೆ. ನಮ್ಮ ಊರಿನಲ್ಲಿ ನಾಯಿ ಬೆಕ್ಕು ಕಣ್ಣಿಗೆ ಬಿದ್ದ ಹಾಗೆ ಅಲ್ಲಿ ಕೇರೆ ನಾಗರ, ಅದರ ಮರಿಗಳು ಕಾಣುತ್ತಿದ್ದವು. ರಾತ್ರಿ ಆದರೆ ಕೇಳೇ ಇರದ, ಹೆಸರೇ ಗೊತ್ತಿಲ್ಲದ ಕೀಟಗಳ ಶಬ್ಧ. ಎಲ್ಲೋ ಮರದ ಎಲೆಗಳು ಪರಸ್ಪರ ಉಜ್ಜಿ, ತಿಕ್ಕಿ ಎಲ್ಲೋ ಏನೋ ನಿಟ್ಟುಸಿರು. ಅವುಗಳ ನಡುವೆ ಸಾಂತ್ವನ ನೀಡುತ್ತಿದ್ದ ಒಂದೇ ಸದ್ದು ಕೆಲವು ಕಿಲೋಮೀಟರ್ ಗಳ ದೂರದಲ್ಲಿದ್ದ ಸಮುದ್ರದ ಮರ್ಮರ. ಸಮುದ್ರಕ್ಕೂ ನನಗೂ ನಡುವೆ ಒಂದು ಅನಿರ್ವಚನೀಯ ಸಂಬಂಧ ಬೆಳೆದದ್ದು ಇದೇ ದಿನಗಳಲ್ಲಿ. ಅದು ಯಾಕೋ ಏನೋ ನನ್ನ ಮನಸ್ಸಿನ ಆಯಾ ದಿನದ ಭಾವನೆಗಳಿಗೆ ತಕ್ಕ ಹಾಗೆ ಸಮುದ್ರ ಸ್ಪಂದಿಸುತ್ತಿತ್ತು, ಧ್ವನಿಸುತ್ತಿತ್ತು. ಒಮ್ಮೆ ಲಾಲಿ ಹಾಡಿದಂತೆ, ಒಮ್ಮೆ ಭೋರೆಂದು ಅತ್ತಂತೆ, ಮತ್ತೊಮ್ಮೆ ಮೌನವಾಗಿ ತನ್ನ ಇರುವಿಕೆಯಿಂದ, ಕೇವಲ ಉಸಿರಾಟದಿಂದ ಸಾಂತ್ವನ ಕೊಟ್ಟಂತೆ… ಅಡಿಗೆ ಮನೆಯಲ್ಲಿ ಅಮ್ಮ ಇದ್ದಾಳೆ ಎಂಬ ಒಂದು ಸತ್ಯ ಮಗುವಿನ ಜಗತ್ತನ್ನು ತುಂಬಿಕೊಟ್ಟಂತೆ.. ಸಮುದ್ರ ನನ್ನನ್ನು ಕಾಯುತ್ತಿತ್ತು.
ಅದು ಸಾಂಗತ್ಯಕ್ಕಾಯಿತು, ಕಡಲು ನನ್ನೊಂದಿಗೆ ಮಾತನಾಡುತ್ತಿತ್ತು, ಆದರೆ ನಾನು ಯಾರೊಂದಿಗೆ ಮಾತನಾಡಲಿ? ಆಗ ನನಗೆ ಪದೇ ಪದೇ ಆಗುತ್ತಿದ್ದ ಸಣ್ಣ ಹೆದರಿಕೆ, ಅಕಸ್ಮಾತ್ ನಾನು ಮಾತನಾಡಲು ಪ್ರಯತ್ನಿಸಿ ಸ್ವರಗಳೆಲ್ಲಾ ಮುನಿದು ಬಿಟ್ಟರೆ,… ಗಂಟಲಿಗೆ ಧ್ವನಿ ಹೊರಡಿಸುವ ಕ್ರಿಯೆಯೇ ಮರೆತು ಹೋಗಿಬಿಟ್ಟಿದ್ದರೆ… ನನ್ನ ಸ್ವರ ನನಗೇ ಗುರುತು ಹತ್ತದಿದ್ದರೆ… ಆ ಸಮಯದಲ್ಲಿ ನನಗೆ ಜೊತೆಯಾಗಿದ್ದು ಹಾಡುಗಳು.
ಹಾಡುಗಳಿಗೂ ನನಗೂ ಮೊದ ಮೊದಲ ಸಂಬಂಧ ಹೇಗೆ ಬೆಳೆಯಿತು ಅಂತ ನೆನಪು ಮಾಡಿಕೊಂಡರೆ ನೆನಪಾಗುವುದು ನನ್ನ ಪ್ರೈಮರಿ ಸ್ಕೂಲು ದಿನಗಳು. ಆಗಷ್ಟೇ ಅಪ್ಪ ಮನೆಗೆ ರೆಕಾರ್ಡ್ ಪ್ಲೇಯರ್ ತಂದಿದ್ದರು. ಅದರ ಅಂಗಿ ಕಳಚಿ, ಕಪ್ಪು ಹಪ್ಪಳದಂತಹ ರೆಕಾರ್ಡುಗಳನ್ನು ಅದಕ್ಕಾಗೇ ಇದ್ದ ಮೃದು ಬಟ್ಟೆಯಲ್ಲಿ ಒರೆಸಿ, ಪ್ಲೇಯರ್ ನ ತಟ್ಟೆಯಲ್ಲಿಟ್ಟು, ಅದರ ಮೇಲೆ ಬರೆದಿರುತ್ತಿದ್ದ ೩೨, ೪೫, ಅಥವಾ ೭೫ ಎನ್ನುವ ವೇಗಕ್ಕೆ ಗುಂಡಿ ತಿರುಗಿಸಿ, ಮುಳ್ಳಿನ ಕಡ್ಡಿಯನ್ನು ಎತ್ತಿ ಹಗುರವಾಗಿ ಆ ಕಪ್ಪು ರೆಕಾರ್ಡಿನ ಹೊರ ವರ್ತುಲದಲ್ಲಿಟ್ಟು ಬಿಟ್ಟರೆ ಮುಗಿಯಿತು ಹಾಡುಗಳು ಶುರು. ಅದು ಬ್ಯಾಟರಿಯಿಂದ ಓಡುತ್ತಿತ್ತು, ಹೀಗಾಗಿ ರಾತ್ರಿ ಊಟ ಮುಗಿದ ಮೇಲೆ, ಮನೆ ಅಂಗಳದಲ್ಲಿ ಚಾಪೆ ಹಾಸಿ, ಅಪ್ಪ ಒಡ್ಡೋಲಗ ಸಜ್ಜು ಮಾಡುತ್ತಿದ್ದರು. ಅಮ್ಮ ಕೆಲಸ ಮುಗಿಸಿ ಬಂದ ಮೇಲೆ ಹಾಡುಗಳ ಲೋಕ ಕಣ್ಣ ಮುಂದಿಳಿಯುತ್ತಿತ್ತು. ಅಲ್ಲೇ ಒಂದು ಬೆಡ್ ಶೀಟ್ ಹೊದ್ದು, ಹಾಡು ಕೇಳುತ್ತಾ ಕೂತಿರುತ್ತಿದ್ದ ಅಪ್ಪನಿಗೆ ಅಂಟಿ ಮಲಗಿ, ಕಣ್ಣು ಮುಚ್ಚಿ ಹಾಡು ಕೇಳುತ್ತಿದ್ದರೆ ನಾನು ಅಕ್ಷರಶಃ ಕಳೆದು ಹೋಗಿ ಬಿಡುತ್ತಿದ್ದೆ, ಯಾವಾಗಲೂ ನಿದ್ದೆ ಮಾಡಿಬಿಟ್ಟಿರುತ್ತಿದ್ದೆ. ಮಲಗಿದ್ದ ನನ್ನನ್ನೂ ತಂಗಿಯನ್ನೂ ಎಬ್ಬಿಸಿ, ಅಪ್ಪ ಅಮ್ಮ ಒಳಗೆ ಕರೆದುಕೊಂಡು ಬರುತ್ತಿದ್ದರು. ಆಗ ಕೇಳುತ್ತಿದ್ದದ್ದು ಬಹುತೇಕ ಸಿನಿಮಾ ಹಾಡುಗಳು. ಒಮ್ಮೊಮ್ಮೆ ಪಿ ಕಾಳಿಂಗರಾವ್ ’ಬ್ರಹ್ಮ ನಿಂಗೆ ಜೋಡಿಸ್ತೀನಿ ಯಂಡ ಮುಟ್ಟಿದ್ ಕೈನ’ ಅಂತ ಹೇಳಿ ಬೆಚ್ಚಿ ಬೀಳಿಸಿದ್ದೂ ಇದೆ!
ಆಮೇಲೆ ಮನೆಗೆ ಟೇಪ್ ರೆಕಾರ್ಡರ್ ಬಂತು, ಹಾಡುಗಳು ಅವೇ ಕನ್ನಡ, ತೆಲುಗು ಭಾಷೆಯವು, ಅಮ್ಮನ ಕೈಲಿ ಹಾಡಿಸಿ ಅಪ್ಪ ರೆಕಾರ್ಡ್ ಮಾಡಿದ ಹಾಡುಗಳು, ಶೃತಿಯನ್ನೇ ಹಿಡಿಯದ ದನಿಯಲ್ಲೂ ಅಪ್ಪ ಪ್ರೀತಿಯಿಂದ ಹಾಡಿ ಅಮ್ಮನ ಮುಖದ ತುಂಬಾ ನಗು ತುಂಬಿಸಿದ್ದ ’ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ…’.
ಹೀಗೆ ಇದ್ದ ನನ್ನ ವಲಯಕ್ಕೆ ಭಾವಗೀತೆ ಪ್ರವೇಶ ಪಡೆದದ್ದು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವೊಂದರಲ್ಲಿ. ಪಕ್ಕದ ಓಣಿಯ ಗೆಳತಿಯ ಅಕ್ಕ, ’ಬಾನಿನಲ್ಲಿ ಒಂಟಿ ತಾರೆ, ಸೋನೆ ಸುರಿವ ಇರುಳಾ ಮೋರೆ, ಕತ್ತಲಲ್ಲಿ ಕುಳಿತು ಒಳಗೇ ಬಿಕ್ಕುತಿಹಳು ಯಾರೋ ನೀರೆ…’ ಎಂದು ಹಾಡಿದಾಗ. ಅದುವರೆಗೂ ಆ ಹಾಡಿನ ಪಲ್ಲವಿಯನ್ನಾಗಲೀ, ಚರಣವನ್ನಾಗಲೀ ಗಮನಿಸದೆ ಗೆಳತಿಯೊಡನೆ ಪಿಸುದನಿಯಲ್ಲಿ ಹರಟೆ ಹೊಡೆಯುತ್ತಿದ್ದ ನನ್ನನ್ನು ಆ ಸಾಲುಗಳು ಅಲ್ಲಾಡಿಸಿದ್ದವು. ಯಾಕೋ ಕತ್ತಲಲ್ಲಿ ಕುಳಿತು ಒಳಗೇ ಬಿಕ್ಕುವ ಆ ಹೆಣ್ಣನ್ನು ಆಮೇಲೆ ನಾನು ಒಂಟಿಯಾಗಿ ಬಿಡಲೇ ಇಲ್ಲ, ನನ್ನ ಜೊತೆಗೇ ಉಳಿದಳು ಅವಳು..
ನಂತರ ಕಾಲೇಜಿಗೆ ಬರುವಷ್ಟರಲ್ಲಿ ರಜಾಕ್ಕೆಂದು ಬಂದ ದೊಡ್ಡಮ್ಮನ ಮಗ ನನಗೆ ಹಿಂದಿ ಹಾಡುಗಳ ಪರಿಚಯ ಮಾಡಿಸಿದ್ದ. ಬುಧವಾರದ ಬಿನಾಕ ಗೀತಮಾಲ ಕೇಳೋದು ಕಲಿಸಿದ. ಅದಕ್ಕಾಗಿ ಅಥವಾ ಅದರಿಂದಲೇ ನಾನು ಹಿಂದಿ ಕಲಿತೆ. ಅಲ್ಲದೆ ಹಿಂದೊಮ್ಮೆ ನಾನು ಬರೆದ ಹಾಗೆ ಕಾಲೇಜಿನಲ್ಲಿ ನನ್ನ ಸೀನಿಯರ್ ಒಬ್ಬ ಅದ್ಭುತವಾಗಿ ಹಾಡುತ್ತಿದ್ದ. ಅವನು ನನಗಾಗಿ ಹಾಡುತ್ತಿದ್ದ ಅಂತ ಗೆಳತಿಯರು ಹೇಳಿ ಹೇಳಿ, ಅದನ್ನು ಅರ್ಥ ಮಾಡಿಕೊಳ್ಳಲಾದರೂ ಹಿಂದಿ ಕಲಿಯಬೇಕೆಂಬ ತುರ್ತುಪರಿಸ್ಥಿತಿ ಮನಸ್ಸಿನಲ್ಲಿ ಘೋಷಣೆ ಆಗಿಬಿಟ್ಟಿತ್ತು! ಒಮ್ಮೆ ಅಚಾನಕ್ ಆಗಿ ಗೆಳತಿಯ ಮನೆಗೆ ಹೋದಾಗ ಅವಳ ಅಣ್ಣನ ಜೊತೆ ಮಾತನಾಡುತ್ತಾ ಕುಳಿತಿದ್ದ ಅವನು ಅಂದು ’ಬಹಾರೋ ಫೂಲ್ ಬರ್ ಸಾವೋ ಮೇರಾ ಮೆಹಬೂಬ್ ಆಯಾ ಹೈ’ ಎಂದು ಹಾಡಿದ್ದು ನನಗಾಗಿಯೇ ಎನ್ನುವ ಗುಮಾನಿ ಸುಮಾರು ದಿನಗಳವರೆಗೂ ನನಗೂ ಇತ್ತು! ಇಂದಿಗೂ ಆ ಹಾಡನ್ನು ಒಂದು ನಗುವಿನೊಂದಿಗೆಯೇ ಕೇಳುತ್ತೇನೆ, ಹಾಗೆಯೇ ಅವನು ಹಾಡಿದ್ದ ’ಕೊಯೀ ಜಬ್ ತುಮ್ಹಾರ ಹೃದಯ್ ಥೋಡ್ ದೇ, ತಡಪ್ ಥ ಹುವಾ ಜಬ್ ಕೊಯೀ ಚೋಡ್ ದೆ, ತಬ್ ತುಮ್ ಮೇರಿ ಪಾಸ್ ಆನಾ ಪ್ರಿಯೆ’ ಹಾಡನ್ನು ಒಂದು ನಿಟ್ಟುಸಿರಿನೊಂದಿಗೆ..

ಹೀಗೆ ನನ್ನೊಂದಿಗೆ ಮಗುವಿನಂತಿದ್ದ ಹಾಡುಗಳು ನನಗೆ ಅಮ್ಮನಾಗಿದ್ದು ಮಾತ್ರ ನನ್ನ ಆ ಮಂಗಳೂರಿನ ದಿನಗಳಲ್ಲಿ. ನನ್ನ ಗಂಟಲಿಗೆ ಸ್ವರ ಮರೆಯಬಾರದು ಎನ್ನುವ ಒಂದೇ ಕಾರಣಕ್ಕೆ ನಾನು ಧ್ವನಿ ತೆಗೆದು ಹಾಡಿಕೊಳ್ಳಲಾರಂಭಿಸಿದೆ. ಕಸ ಗುಡಿಸಿವಾಗ, ನೆಲ ಒರೆಸುವಾಗ, ಕುಡಿಯುವ ನೀರು ಸೇದುವಾಗ, ಪಾತ್ರೆ ತೊಳೆಯುವಾಗ, ತರಕಾರಿ ಹಚ್ಚುವಾಗ, ಬಟ್ಟೆ ಒಗೆದು, ಹಿಂಡಿ ಹರಡುವಾಗ…. ಮೊದಮೊದಲು ರೇಡಿಯೋ, ಟೇಪ್ ರೆಕಾರ್ಡ್ ಜೊತೆ ದನಿಗೆ ದನಿ ಸೇರಿಸಿದವಳು ಆಮೇಲೆ ಅದಿಲ್ಲದಿದ್ದರೂ ನನ್ನ ಪಾಡಿಗೆ ನಾನು ಹಾಡಿಕೊಳ್ಳತೊಡಗಿದೆ. ಹಾಡುಗಳು, ಅದರ ಭಾವಗಳೂ ನನ್ನೊಳಗೆ ಇಳಿಯತೊಡಗಿದವು. ನನ್ನಲಿನ ಮೌನ ಭಾವನೆಗಳಾಗಿ ನನ್ನೊಳಗೆ ಹರಳುಗಟ್ಟುತ್ತಾ ಹೋಯಿತು… ಅಮೇಲೆಂದೂ ಮೌನ ನನಗೆ ಭಾರ ಆಗಲೇ ಇಲ್ಲ.
ಹಾಡುಗಳ ದುನಿಯಾ ಅಂದರೆ ಹಾಗೆ. ಪುಸ್ತಕಗಳ ಪ್ರಪಂಚವಿದ್ದ ಹಾಗೆ, ಅಲ್ಲಿ ನೀವು ಓಡಾಡಬಹುದು, ಕಳೆದು ಹೋಗಬಹುದು, ಮಾತನಾಡಬಹುದು, ಪಿಸುಗುಟ್ಟಬಹುದು, ಇನ್ಯಾರದೋ ನೋವಿಗೆ ಕಂಬನಿ ಆಗಬಹುದು, ಯಾವುದೋ ದನಿಗೆ ನಾಚಿ ಕೆಂಪಾಗಬಹುದು, ಯಾರದೋ ಲಾಲಿಗೆ ಮಗುವಾಗಬಹುದು. ನಮಗೇ ಗೊತ್ತಿಲ್ಲದಂತೆ ಜನಪದ ಗೀತೆಗೆ ಕಾಲು ಲಯ ಹಿಡಿದು ತಂತಾನೆ ಕಂಪಿಸಬಹುದು. ಹಾಗೆ ನಿಮ್ಮ ಮೌನ, ನಿಮ್ಮ ದುಮ್ಮಾನ, ನಿಮ್ಮ ಕಣ್ಣೀರನ್ನು ಮರೆಯಲೂ ಬಹುದು. ’ಗೊಂತು ಒಕ್ಕಟುಂಟೆ ಚಾಲು, ಪಾಟ ನೀವು ಪಾಡಗಲವು, ಮಾಟಲನ್ನಿ ದಾಚುಕುಂಟೆ ಕವಿತ ನೀವು ರಾಯಗಲವು..’, ’ಕಂಠ ಒಂದಿದ್ದರೆ ಸಾಕು, ನೀನು ಸಹ ಹಾಡಬಲ್ಲೆ, ಮಾತುಗಳನ್ನೆಲ್ಲಾ ಬಚ್ಚಿಟ್ಟುಕೊಂಡರೆ ನೀನೂ ಕವಿತೆ ಬರೆಯ ಬಲ್ಲೆ’ ಎನ್ನುವ ಹಾಡು ನನ್ನ ಮಟ್ಟಿಗಂತೂ ನಿಜ. ಹಾಡುಗಳು ನನ್ನ ಒಂಟಿತನವನ್ನು ಏಕಾಂತವಾಗಿಸಿದವು.
ಹೀಗೆ ನನ್ನ ಹಾಡು ನನ್ನದು ಎಂದು ಇದ್ದವಳನ್ನು ನನ್ನ ಸ್ನೇಹಿತ ಒಮ್ಮೆ ರಂಗಗೀತೆಗಳ ಕಾರ್ಯಕ್ರಮ ಒಂದಕ್ಕೆ ಕರೆದುಕೊಂಡು ಹೋಗಿದ್ದ. ಅದೇ ಮೊದಲು ನಾನು ರಂಗ ಗೀತೆಗಳನ್ನು ಕೇಳಿದ್ದು. ಹಾಡು ಪ್ರಾರಂಭವಾಗುವುದಕ್ಕೂ ಮೊದಲೇ ಅಲ್ಲಿದ್ದ ಒಂದು ಅವ್ಯಕ್ತ ಶಕ್ತಿ ನನ್ನನ್ನು ಆವರಿಸಿಕೊಳ್ಳುತ್ತಿತ್ತು. ಸಂಸ ರಂಗಮಂದಿರದಲ್ಲಿ, ಪ್ರಕಾಶ್ ಶೆಟ್ಟಿ ಮತ್ತು ಅವರ ತಂಡ ದನಿ ತೆಗೆದು ಹಾಡತೊಡಗಿದರು ನೋಡಿ, ನಾನು ಮತ್ತೆ ಹೈಸ್ಕೂಲಿನಲ್ಲಿ ಭಾವಗೀತೆ ಕೇಳಿದಾಗ ಆದಂತೆ ದಂಗಾಗಿ ಹೋಗಿದ್ದೆ. ಹಾಡಿಗೆ ನನ್ನನ್ನು ಅಚ್ಚರಿಗೊಳಿಸುವ ಶಕ್ತಿ ಇನ್ನೂ ಹಾಗೇ ಇತ್ತು! ಅದು ನವನವೋನ್ಮೇಷಶಾಲಿಯಂತೆ ತನ್ನ ಹೊಸ ರೂಪ, ಹೊಸ ಆಯಾಮಗಳಿಂದ ನನ್ನನ್ನು ಇನ್ನೂ ಒಂದು ಥ್ರಿಲ್ ಗೆ ಒಳಮಾಡುತ್ತಲೇ ಇತ್ತು.
ಕಾರಣವೇ ಗೊತ್ತಿಲ್ಲದೆ ಒಮ್ಮೊಮ್ಮೆ ಕೆಲವು ಹಾಡುಗಳು ನಮ್ಮಲ್ಲಿ ನಿಂತು ಬಿಡುತ್ತವೆ, ಯಾಕೋ ಗೊತ್ತಿಲ್ಲ, ’ಚಿನ್ನದಂಥ ನಾಡಿಗೆ ರನ್ನದಂಥ ರಾಜ, ರನ್ನದಂತ ರಾಜನಿಗೆ ಮುತ್ತಿನಂಥ ರಾಣಿ, ಮುತ್ತಿನಂಥ ರಾಣಿ ಹೆತ್ತ ಮಕ್ಕಳು ಏಳು, ಆ ಏಳರಲ್ಲಿ ಯಾವುದೂ ಏಳಿಗೆಯಿಲ್ಲ… ಹಾ ಏಳಿಗೆಯಿಲ್ಲ’, ’ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ..’, ’ಮಾಮರವೆಲ್ಲೋ ಕೋಗಿಲೆ ಎಲ್ಲೋ’, ’ಕಥೆ ಹೇಳುವೆ ನನ್ನ ಕಥೆ ಹೇಳುವೆ… ಹೃದಯ ಬರಿದಾಗಿತ್ತು, ಮೌನದಲಿ ಭಯವಿತ್ತು..’, ’ದಾರಿಗಚ್ಚಿದ ದೀಪ ಅವಳು….’ ಹಾಡುಗಳು ಎಲ್ಲೇ ಕೇಳಲಿ ನನ್ನಲ್ಲಿ ಒಂದು ಅಲೆಯನ್ನು ಎಬ್ಬಿಸುತ್ತವೆ. ’ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ, ಈಗ ಯಾಕೆ ಜ್ವಲಿಸುತಿದೆ ಯಾವ ಶಂಕೆ ಭೀತಿ..’ ಈಗಲೂ ನನ್ನ ಕಣ್ಣನ್ನು ಹಸಿಯಾಗಿಸುತ್ತದೆ. ’ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಅಲೆದವರು ನೀವಲ್ಲವೆ’ ಕಿವಿಗಳನ್ನು ಬೆಚ್ಚಗಾಗಿಸುತ್ತದೆ, ಕಂಬಾರರ ’ನಾ ಕುಣೀಬೇಕ, ಮೈ ಮಣೀಬೇಕ..’ ನಾಚಿಕೊಳ್ಳುವಂತೆ ಮಾಡುತ್ತದೆ! ಗುಲ್ಜಾರ್ ಹಾಡುಗಳ ಸೀಡಿ ಕೇಳುವಾಗ, ಪಂಕಜ್ ಉಧಾಸ್ ಗಜಲ್ ಕೇಳುವಾಗ ನನಗೇ ಅರಿವಿಲ್ಲದಂತೆ ರಿಪೀಟ್ ಬಟನ್ ಒತ್ತಿರುತ್ತೇನೆ.
ನಾನು ಕ್ರಮಿಸಬೇಕಾದ ದೂರವನ್ನು ಸಹ ಹಾಡುಗಳಿಂದಲೇ ಅಳೆಯುತ್ತೇನೆ. ಹಾಗೆ ಬೆಂಗಳೂರು ಬೆಳೆದ ದೂರವನ್ನೂ. ಮೊದಲಿದ್ದ ಆಫೀಸಿಗೆ ಮನೆಯಿಂದ ಹೊರಡುವಾಗ ಮೊದ ಮೊದಲು ಎರಡು ಹಾಡು, ಒಂದು ಪಲ್ಲವಿ ಆಗುತ್ತಿತ್ತು, ನಂತರ ೨೦೧೨ರ ವೇಳೆಗೆ ಅದು ೬ ಹಾಡಿಗೆ ಬಂದು ನಿಂತಿತ್ತು. ವಾಕಿಂಗ್ ಮಾಡುವಾಗ ಒಂದೊಂದು ಹಾಡಿಗೆ ಪಾರ್ಕಿನಲ್ಲಿ ಒಂದೊಂದು ಸುತ್ತು, ಅದೃಷ್ಟ ಚನ್ನಾಗಿದ್ದು, ಹಾಡುಗಳು ಚೆನ್ನಾಗಿದ್ದರೆ ಇನ್ನೆರಡು ಸುತ್ತು ಹೆಚ್ಚು ನಡೆಯುವ ಸೌಭಾಗ್ಯ!
ಆಮೇಲೆ ಜಯನಗರದಿಂದ ರಾಜಾಜಿನಗರಕ್ಕೆ ದಿನನಿತ್ಯ ಓಡಾಡುವ ಪಯಣ, ಟ್ರಾಫಿಕ್, ಸಿಗ್ನಲ್, ಮೆಟ್ರೋ ಇವ್ಯಾವುದೂ ನನ್ನ ಹುಬ್ಬನ್ನು ಗಂಟಿಕ್ಕಿಸುತ್ತಿರಲಿಲ್ಲ, ಹಣೆ ಮೇಲೆ ಗೆರೆ ಮೂಡಿಸುತ್ತಿರಲಿಲ್ಲ ಅಂದರೆ ಅದಕ್ಕೆ ಒಂದೇ ಕಾರಣ ನನ್ನ ಅಪಾರವಾದ ಹಾಡುಗಳ ಸಂಗ್ರಹ! ಮೊನ್ನೆ ಹೀಗೆ ಸಿರ್ಸಿ ಸರ್ಕಲ್ ಹತ್ತಿರ ಬರುವಾಗ ಒಂದು ಅದ್ಭುತವಾದ ’ಕದಲಿ ರಾದ ತನೆ ವಸಂತಂ, ತನ ದೆಗರ ರಾನಿ ವನಾಲಕೋಸಂ’, ’ತನ್ನ ಹತ್ತಿರ ಬರಲಾಗದ ಮರಗಿಡಗಳ ಹತ್ತಿರ ವಸಂತ ತಾನೇ ನಡೆದು ಬರುವುದಿಲ್ಲವಾ’ ಎನ್ನುವ ಹಾಡನ್ನು ಕೇಳಿ, ಅಲ್ಲೇ ರಸೆ ಪಕ್ಕ ಗಾಡಿ ನಿಲ್ಲಿಸಿ ಅದನ್ನು ಅಷ್ಟೇ ಸಂಭ್ರಮದಿಂದ ಸ್ನೇಹಿತನಿಗೆ ಕೇಳಿಸುವವರೆಗೂ ನನ್ನ ಆತ್ಮಕ್ಕೆ ಸಮಾಧಾನವಿರಲಿಲ್ಲ!
ಹಾಡುಗಳು, ಪುಸ್ತಕಗಳು ಇಲ್ಲದ ಜಗವನ್ನು, ನನ್ನ ದಿನವನ್ನು ನಾನು ಊಹಿಸಿಕೊಳ್ಳಲಾರೆ. ಯಾರಿಗೂ ತೊಂದರೆಯಾಗದಂತೆ ಹಾಡು ಕೇಳಲೆಂದು ತರಿಸಿಕೊಂಡ ಹೆಡ್ ಫೋನ್ ಪ್ಯಾಕೆಟ್ಟನ್ನು ಬಿಚ್ಚುವಾಗ ಯಾಕೋ ಕೈ ನವಿರಾಗಿ ಕಂಪಿಸುತ್ತಿದೆ ಅನ್ನಿಸಿದಾಗ ಇವೆಲ್ಲಾ ನೆನಪಾಯಿತು.

‍ಲೇಖಕರು G

February 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

38 ಪ್ರತಿಕ್ರಿಯೆಗಳು

  1. Anjali Ramanna

    ನಾನು ಕ್ರಮಿಸಬೇಕಾದ ದೂರವನ್ನು ಸಹ ಹಾಡುಗಳಿಂದಲೇ ಅಳೆಯುತ್ತೇನೆ…..<3 <3

    ಪ್ರತಿಕ್ರಿಯೆ
  2. Swarna

    ಹಾಡುಗಳು ಹಾಸಿದ ಹಾದಿ ಚೆನ್ನಾಗಿದೆ.
    ‘ಕದಲಿ ರಾದ ತನೆ ವಸಂತಂ, ತನ ದೆಗರ ರಾನಿ ವನಾಲಕೋಸಂ’..ಚಂದದ ಹಾಡು. ಹೌದು ನಡೆವುದು ವಸಂತನೇ

    ಪ್ರತಿಕ್ರಿಯೆ
  3. umasekhar

    Ee bhayankara dattaneyalli mathu kelasagalalli hadugale namma balagai mathu asare.

    ಪ್ರತಿಕ್ರಿಯೆ
  4. samyuktha

    “….ಯಾಕೋ ಕತ್ತಲಲ್ಲಿ ಕುಳಿತು ಒಳಗೇ ಬಿಕ್ಕುವ ಆ ಹೆಣ್ಣನ್ನು ಆಮೇಲೆ ನಾನು ಒಂಟಿಯಾಗಿ ಬಿಡಲೇ ಇಲ್ಲ, ನನ್ನ ಜೊತೆಗೇ ಉಳಿದಳು ಅವಳು…” This is u!! 🙂

    ಪ್ರತಿಕ್ರಿಯೆ
  5. suseela

    Hai Sandhaya! I read all the articles including today’s. What can I say dear! All are super especially today’s. Idu manavanna kalakithu.

    ಪ್ರತಿಕ್ರಿಯೆ
  6. ರಮೇಶ್ ಹಿರೇಜಂಬೂರು

    ಜಿಎಸ್ಎಸ್ ಅವರ ‘ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು, ಹೃದಯ ತೆರೆದಿದೆ…’ ಎನ್ನುವ ಸಾಲೇ ನಿಮ್ಮ ಲೇಖನದ ಶೀರ್ಷಿಕೆ ಮಾಡಿದ್ದರಿಂದಲೇ ಹೆಚ್ಚು ಓದುವಂತೆ ಮಾಡಿದೆ. ಇಡೀ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ರಾಗಕ್ಕಿರುವ ತಾಕತ್ತೇ ಅಂಥದ್ದು, ಮೌನವನ್ನು ಮರೆಯಾಗಿಸಿ, ಏಕಾಂತವನ್ನೂ ಅಪ್ಪಿಕೊಳ್ಳುವಂತೆ ಮಾಡುತ್ತದೆ. ಪುಸ್ತಕ ಒಬ್ಬ ಉತ್ತಮ ಗೆಳೆಯ/ ಗೆಳತಿ ಹೇಗೋ ಹಾಡು ಅಥವಾ ರಾಗ ಕೂಡ ಎನ್ನುವ ನಿಮ್ಮ ಲೇಖನ ಅಭೂತವೂರ್ವವಾದದ್ದು… ಥ್ಯಾಂಕ್ಸ್…

    ಪ್ರತಿಕ್ರಿಯೆ
  7. anil talikoti

    ಆಹಾ -ಹಾಡಿನಿಂದ ನಡೆ,ಓಟ,ಡ್ರೈವ್ ಅಳೆಯುವವರಲ್ಲಿ ನಾನು ಒಬ್ಬ -ಅದೂ ರೇಡಿಯೊನಲ್ಲಿ ಬರುತ್ತಿದ್ದರೆ ಇನ್ನೂ ಚೆನ್ನ. ‘ಬಹಾರೋ ಫೂಲ್ ಬರ್ ಸಾವೋ ಮೇರಾ ಮೆಹಬೂಬ್ ಆಯಾ ಹೈ’ ಕೇಳುವದಕಾಗಿಯೇ ಬಿಜಾಪುರದವರೆಗೆ ಹೋಗಿ ಸಿನಿಮಾ ನೋಡಿದ್ದ ನೆನಪಾಯಿತು. ಈಗ ನನ್ನ ಮಗಳು ಸ್ಟಡಿ ಮಾಡುವಾಗ ಹಾಡು ಕೇಳುತ್ತಿದ್ದರೆ ಬೇಡ ಎನ್ನಲು ಮನ ಅಳಕುತ್ತದೆ.

    ಪ್ರತಿಕ್ರಿಯೆ
  8. sunil rao

    Ha ha baharo phool barsavo haadina hinde thrilling kathe ide.
    Haadugalu yaavattigoo namma bhava prakatanege ondu udaatta madhyama…

    ಪ್ರತಿಕ್ರಿಯೆ
  9. Vidyashankar Harapanahalli

    Recently I have realized that you can actually sing and compose songs better when you are driving… (confirmed by my music friend) Like bath room singer.. Now I have become on road singer…

    ಪ್ರತಿಕ್ರಿಯೆ
  10. Rohith

    ’ಕಂಠ ಒಂದಿದ್ದರೆ ಸಾಕು, ನೀನು ಸಹ ಹಾಡಬಲ್ಲೆ, ಮಾತುಗಳನ್ನೆಲ್ಲಾ ಬಚ್ಚಿಟ್ಟುಕೊಂಡರೆ ನೀನೂ ಕವಿತೆ ಬರೆಯ ಬಲ್ಲೆ’ – this is so true madam!! 🙂
    thank you for this wornderful lines!! 🙂

    ಪ್ರತಿಕ್ರಿಯೆ
  11. ಶಮ, ನಂದಿಬೆಟ್ಟ

    “….ಯಾಕೋ ಕತ್ತಲಲ್ಲಿ ಕುಳಿತು ಒಳಗೇ ಬಿಕ್ಕುವ ಆ ಹೆಣ್ಣನ್ನು ಆಮೇಲೆ ನಾನು ಒಂಟಿಯಾಗಿ ಬಿಡಲೇ ಇಲ್ಲ, ನನ್ನ ಜೊತೆಗೇ ಉಳಿದಳು ಅವಳು…”
    “ನಾನು ಕ್ರಮಿಸಬೇಕಾದ ದೂರವನ್ನು ಸಹ ಹಾಡುಗಳಿಂದಲೇ ಅಳೆಯುತ್ತೇನೆ…..”
    ಸಂಧ್ಯ ಮಾತ್ರವೇ ಬರೆಯಬಹುದಾದ ಸಾಲುಗಳಿವು

    ಪ್ರತಿಕ್ರಿಯೆ
  12. Mahendra vi. sheela

    ಮನವ ತಾಗುವ ಭಾಷೆ ಕಲಿಸವ್ವ,
    ಭಾಷೆ ಅರಿಯುವ ಮನವ ಉಳಿಸವ್ವ
    ಶ್ರೀಮತಿ ಸಂಧ್ಯಾರಾಣಿ ಅವರಿಗೆ.
    ಅಪ್ರತಿಮ ಭಾವ ಭಾಷೆಯ ಹೇಳಿಕೆ
    ಮಹೊತ್ತಮ ಜ್ಯ್ನಾನರಹಸ್ಯ ತೋರಿಕೆ
    ತುಂಬಿ ಬೆಳಗುವ ವಿಷಯ ರಹಸ್ಯ ರೇಕೆ
    ಓದಲು ಮನಸೆಳೆವ ಅಯಸ್ಕಾಂತ ಸೆಳಕೆ
    ಎರಡೆ ಮಾತಿನಲಿ ಇಡೀ ಪರಿಚ್ಛೇದ ಪ್ರಚಾರ
    ಸಿರಿಗನ್ನಡ ಪ್ರಭಾವ ತೋರಣ ಪುಷ್ಪಹಾರ!
    ಹಾಗೆನಿಸುವುದೆನಗೆ ಈ ಲೇಖನ ಪ್ರದರ್ಶನ
    ಮನಮೆಚ್ಚಿ ಸಹೃದಯ ತೆರಚಿ ಆತ್ಮೀಯ ನಮನ!
    – ವಿಜಯಶೀಲ.

    ಪ್ರತಿಕ್ರಿಯೆ
  13. kusumabaale

    ಹಾಡು, ಪುಸ್ತಕಗಳು ಒಂಟಿತನವನ್ನು ಏಕಾಂತವಾಗಿಸುತ್ತವೆ.ಎಷ್ಟೊಂದು ನಿಜ!!

    ಪ್ರತಿಕ್ರಿಯೆ
  14. suvarna

    ಬಾಲ್ಯದ ನೆನಪು ಎಂತಹ ಻ಅದ್ವುತ ಻ಅಲ್ಲವಾ. . ! ಇಂದಿನ ಜಂಜಾಟದ ಬದುಕಿನಲ್ಲಿ ಹಾಡುಗಳು ನಮ್ಮ ಮನಸ್ಸಿಗೆ ಶಾಂತಿ ಮತ್ತು ಮುದದ ಜೋತೆಗೆ ಒಳ್ಳೆಯ ಆಲೋಚನೆ ಮಾಡಲು ಪ್ರೇರೆಪಿಸುತ್ತವೆ ಅಲ್ಲವಾ ಮೇಡಂ.

    ಪ್ರತಿಕ್ರಿಯೆ
  15. ಅಪರ್ಣ ರಾವ್

    ನಿಮ್ಮ ಬರಹ.. ಮತ್ತೊಮ್ಮೆ ಹಾಡುಗಳ ಎಳೆಯಲ್ಲಿ ಬಲೆಯಾಗಿಸಿ ಸಿಲುಕಿಸುವಂತಿದೆ. 🙂 ಚೆನ್ನಾಗಿದೆ ಸಂಧ್ಯಾ.

    ಪ್ರತಿಕ್ರಿಯೆ
  16. ತಿರುಪತಿ ಭಂಗಿ

    ಹಾಡು ಕೇಳಿದಾಗ
    ಹಗುರ ಹಗುರ ಹಗುರ
    ಹೊಸ ಭಾವ ಚಿಗುರ….

    ಪ್ರತಿಕ್ರಿಯೆ
  17. Rohini Sathya

    ಮೇಡಮ್ !
    ನಿಮ್ಮ ಮನದಾಳದ ಮಾತುಗಳು (ಹಾಡುಗಳು) ತುಂಬಾ ಚನ್ನಾಗಿವೆ. ನಿಜ! ಒಮ್ಮೊಮ್ಮೆ ಮೌನಕೇ ಹೆದರಿಕೆಯಾಗುವಂತಹ ನೀರವ ಮೌನವ ಮುರಿಯುವ ಪ್ರಯತ್ನ ಅಪ್ರಯತ್ನವಾಗೇ ನಡೆಯುತ್ತದೆ. ಆ ದಿಕ್ಕಿನಲ್ಲಿ ನಿಮ್ಮ ಹಾಡಿನ ನಡೆ ಹಿತವಾಗಿದೆ.
    “ಆಡು ಮುಟ್ಟದ ಸೊಪ್ಪಿಲ್ಲ , ನೀವು ಕೇಳದ ಹಾಡಿಲ್ಲ ” ಎನ್ನುವ ಹಾಗೆ ಎಲ್ಲ ಬಗೆಯ ಹಾಡುಗಳ ಪ್ರಸ್ತಾವನೆ ಮಾಡಿದ್ದೀರಿ. ಕಿವಿಗಿಂಪಾಗಿರುವ ಎಲ್ಲಾ ಭಾಷೆಯ ಹಾಡುಗಳು ನನಗೂ ಸಹ ಆಪ್ಯಾಯಮಾನ. ಈ ಲೇಖನದಲ್ಲಿ ಸೂಕ್ಷ್ಮರೇಖೆಯ ನವಿರಾದ ಹಾಸ್ಯವು ಇಣುಕಿದೆ.
    ಹಾಡು, ಹಸಿರು, ಹಕ್ಕಿ – ಕಾಡು, ಕಡಲು, ಕಣಿವೆ – ತುಂಬಾ ತುಂಬಾ ಇಷ್ಟವಾಗುವ ನನಗೆ ನಿಮ್ಮ ಮನದ ಹಾಡು ಹೃದಯಸ್ಪರ್ಶಿಯಾಗಿದೆ.
    ಧನ್ಯವಾದಗಳು!

    ಪ್ರತಿಕ್ರಿಯೆ
  18. Sandhya Venkatesh

    haadu haleyadaadarenu bhaava navanaveena… edeya bhaava hommuvudake bhaashe horatu yaana…. !!!!

    ಪ್ರತಿಕ್ರಿಯೆ
    • Rohini Satya

      ಮೇಡಮ್ !
      ನಿಮ್ಮ ಮನದಾಳದ ಮಾತುಗಳು (ಹಾಡುಗಳು) ತುಂಬಾ ಚನ್ನಾಗಿವೆ. ನಿಜ! ಒಮ್ಮೊಮ್ಮೆ ಮೌನಕೇ ಹೆದರಿಕೆಯಾಗುವಂತಹ ನೀರವ ಮೌನವ ಮುರಿಯುವ ಪ್ರಯತ್ನ ಅಪ್ರಯತ್ನವಾಗೇ ನಡೆಯುತ್ತದೆ. ಆ ದಿಕ್ಕಿನಲ್ಲಿ ನಿಮ್ಮ ಹಾಡಿನ ನಡೆ ಹಿತವಾಗಿದೆ.
      “ಆಡು ಮುಟ್ಟದ ಸೊಪ್ಪಿಲ್ಲ , ನೀವು ಕೇಳದ ಹಾಡಿಲ್ಲ ” ಎನ್ನುವ ಹಾಗೆ ಎಲ್ಲ ಬಗೆಯ ಹಾಡುಗಳ ಪ್ರಸ್ತಾವನೆ ಮಾಡಿದ್ದೀರಿ. ಕಿವಿಗಿಂಪಾಗಿರುವ ಎಲ್ಲಾ ಭಾಷೆಯ ಹಾಡುಗಳು ನನಗೂ ಸಹ ಆಪ್ಯಾಯಮಾನ. ಈ ಲೇಖನದಲ್ಲಿ ಸೂಕ್ಷ್ಮರೇಖೆಯ ನವಿರಾದ ಹಾಸ್ಯವು ಇಣುಕಿದೆ.
      ಹಾಡು, ಹಸಿರು, ಹಕ್ಕಿ – ಕಾಡು, ಕಡಲು, ಕಣಿವೆ – ತುಂಬಾ ತುಂಬಾ ಇಷ್ಟವಾಗುವ ನನಗೆ ನಿಮ್ಮ ಮನದ ಹಾಡು ಹೃದಯಸ್ಪರ್ಶಿಯಾಗಿದೆ.
      ಧನ್ಯವಾದಗಳು!

      ಪ್ರತಿಕ್ರಿಯೆ
  19. SandhyaVenkatesh(Tapasvini)

    Haadu haleyadaadarenu bhaava navanaveena… Edeya bhaava hommuvudake bhaashe horatu yaanaa…

    ಪ್ರತಿಕ್ರಿಯೆ
  20. mahima

    sandhyakka… haadugalaNte nimma barahavu mana tattitu…kramisalaagada durava manasu kramisi bittitu…manada madikegaLalli heNakoNda ghatanegalanna oMdoMdu haaDigoMdoMdaraMte jODisabahudittu…chandavide baraha aptavide…manadoLakkiLiyitu!!

    ಪ್ರತಿಕ್ರಿಯೆ
  21. ಅಕ್ಕಿಮಂಗಲ ಮಂಜುನಾಥ

    ಸೂಪರ್ ಲೇಖನ. ಹಾಡುಗಳ ಸಾಲುಗಳ ನೆನಪೂ ಸೂಪರ್ .

    ಪ್ರತಿಕ್ರಿಯೆ
  22. samyuktha

    ಹಿಂದೊಮ್ಮೆ ಓದಿದ್ದೆ! ಈಗ ಮತ್ತೆ ಅದೇ ಓದಿನ ಖುಷಿ! ಓದುತ್ತಾ ಎಲ್ಲ ಹಾಡುಗಳನ್ನು ನಾನೂ ಹಾಡಿಕೊಂಡೆ! 🙂

    ಪ್ರತಿಕ್ರಿಯೆ
  23. ಪ್ರಮೋದ್

    ದೂರವನ್ನು ಹಾಡುಗಳಲ್ಲಿ ಅಲೆಯುವ ಮನುಷ್ಯರಲ್ಲಿ ನಾನೂ ಒಬ್ಬ. ಅಡಿಗೆ ಮಾಡುವಾಗ, ನಡೆಯುವಾಗ, ಡೈವ್ ಮಾಡುವಾಗ ಹಾಡು ಸ೦ಗಾತಿ. ಹಾಡುಗಳ ಜತೆ ನಡೆದಾಟ, ಮನಸ್ಸಿನ ಕುಣಿದಾಟ

    ಪ್ರತಿಕ್ರಿಯೆ
  24. Shwetha.A......

    ನಿಜ…..ಮಾತುಗಳೆಲ್ಲಾ ಬಚ್ಚಿಟ್ಟುಕೊಂಡು ನನ್ನೆದೆಯ ಭಾವಲಹರಿಯಲಿ ಸೊಗಸಾದ ಕವಿತೆಯಾಗಿವೆ…ಆ ಕವಿತೆಯ ಅರ್ಥಗಳೆ ಇಂದಿನ ನನ್ನತನದ ಜೀವಂತಿಕೆಗೆ ಸ್ಪೂರ್ತಿಯಾಗಿವೆ….ದಾರಿಯಲಿ ಸೋತರೂ ಗೆಲುವಿನ ಪಯಣ ನನ್ನದಾಗಿದೆ…ನಿಮ್ಮ ಭಾವಸಿರಿಯ ಯಾನ ಪಯಣಕೆ ಪಲ್ಲವಿಯಾಗಿದೆ……ವಂದನೆಗಳು ಸಂಧ್ಯಾರವರೇ……..

    ಪ್ರತಿಕ್ರಿಯೆ
  25. ಲಕ್ಷ್ಮೀಕಾಂತ ಇಟ್ನಾಳ

    ಹಾಡುಗಳು ಆವರಿಸುವ ಪರಿಗೆ ಒಳಗಾಗದವರಿಲ್ಲ, ಅವು ಕಟ್ಟಿಕೊಡುವ ಭಾವಕೋಶಗಳಿಗೆ ಪರವಶರಾಗದವರು ಇನ್ನುಂಟೆ. ಬಲು ತೂಕದ ಮಾತುಗಳು, ನೆನಪುಗಳನ್ನು ಕೆದಕಿದ ರೀತಿಯೂ ಮೆಚ್ಚುಗೆಯಾಯಿತು. ಹೀಗೆ ಬರೆಯುತ್ತ ಬರೆಯುತ್ತ ನಮ್ಮಗಳ ಆತ್ಮವನ್ನು ಶುದ್ಧೀಕರಿಸುತ್ತಿದ್ದೀರಿ,. ..ನಿಮ್ಮ ಲೇಖನಗಳಿಗೆ ಆ ಲಯವಿದೆಯಲ್ಲಾ, ಅದು ಸಾಮಾನ್ಯರಿಗೆ ಸಿಗುವಂಥದ್ದಲ್ಲ ಬಿಡಿ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: