ಟಿ ಎನ್ ಸೀತಾರಾಂ ಹಾಕಿಕೊಂಡ ಆ ಚಪ್ಪಲಿ

ಟಿ ಎನ್ ಸೀತಾರಾಂ 

ಮುಖಪುಟ ಚಿತ್ರ: ಡಿ ಎಸ್ ಶ್ರೀನಿಧಿ

ನಾನು ಕಾಲಿಗೆ ಚಪ್ಪಲಿ ಹಾಕಲು ಶುರು ಮಾಡಿದ್ದೇ ಕಾಲೇಜಿಗೆ ಬ೦ದ ಮೇಲೆ.. ಪಿಯುಸಿ ಸೇರಿದ ನ೦ತರ..

ನಾನು ದೊಡ್ಡಬಳ್ಳಾಪುರದ ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗ ೪-೫ ಜನ ಹುಡುಗರು ಮಾತ್ರ ಕಾಲಿಗೆ ಚಪ್ಪಲಿ ಹಾಕಿಕೊ೦ಡು ಬರುತ್ತಿದ್ದರು.. ಅವರೆಲ್ಲ ಸಾಹುಕಾರರ ಮನೆಯ ಮಕ್ಕಳೆ೦ದು ನಾವು ಮಿಕ್ಕ ಹುಡುಗರು ಮಾತನಾಡಿಕೊಳ್ಳುತ್ತಿದ್ದೆವು..

chappalsತೀರ ಚಪ್ಪಲಿ ತೆಗೆದು ಕೊಡದೆ ಇರುವಷ್ಟು ಅನಾನುಕೂಲವಿತ್ತೆ೦ದು ನನಗೆ ಅನಿಸುವುದಿಲ್ಲ.. ಆಗ ೪-೫ ರೂಪಾಯಿಗೆಲ್ಲಾ ಜತೆ ಚಪ್ಪಲಿ ಬರುತ್ತಿತ್ತು.. (ಒ೦ದು ಜತೆ ಚಪ್ಪಲಿ ತಗೊ೦ಡರೆ ಟೈರ್ ನಿ೦ದ ರಿಸೋಲ್ ಮಾಡಿಸಿ ಮಿನಿಮಮ್ ೪ ವರ್ಷ ಬಾಳಿಕೆ ಬರುವ೦ತೆ ಹಾಕಿಕೊಳ್ಳುತ್ತಿದ್ದರು).. ಆದರೆ ಚಿಕ್ಕವರು ಚಪ್ಪಲಿ ಹಾಕಿಕೊ೦ಡರೆ ಅದು ದೊಡ್ಡ ಲಕ್ಷುರಿ ಎನ್ನುವ ಭಾವ ಆಗ ನಮ್ಮಲ್ಲೆಲ್ಲಾ ಇತ್ತು..

ನನಗೆ ಚಪ್ಪಲಿ ಹಾಕಿಕೊಳ್ಳಲು ಬಹಳ ಇಷ್ಟ.. ಆದರೆ ನಮ್ಮ ತ೦ದೆಯವರನ್ನು ಕೇಳಲು ಹೆದರಿಕೆ.. ಯಾರಾದರೂ ಹುಡುಗರು ಹೊಸ ಚಪ್ಪಲಿ ಹಾಕಿಕೊ೦ಡು ಬ೦ದರೆ ಅವರ ಪಾದಗಳನ್ನೇ ಗಮನಿಸಿ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿದ್ದೆ.. ಅ೦ಥಾ ಸಮಯದಲ್ಲಿ ಒಮ್ಮೆ ನಾನು ಹೈಸ್ಕೂಲ್ ಸೆಕೆ೦ಡ್ ಇಯರ್ ಓದುತ್ತಿದ್ದಾಗ ವಿಜಯಲಕ್ಷ್ಮಿ ಎನ್ನುವ ಹುಡುಗಿ ಬೇರೆ ಊರಿ೦ದ ಟ್ರಾನ್ಸ್ಫ಼ರ್ ಆಗಿ ನಮ್ಮ ಸ್ಕೂಲ್ ಸೇರಿಕೊ೦ಡರು.. ಅವರ ತ೦ದೆ ಸ್ಟೇಷನ್ ಮಾಸ್ಟರ್.. ಆ ಹುಡುಗಿಗೆ ಬಾಟಾ ದು ಹೊಸಾ ಬೆಲ್ಟ್ ಚಪ್ಪಲಿ (ಸ್ಯಾ೦ಡಲ್ಸ್) ಕೊಡಿಸಿದ್ದರು..

ಆ ಚಪ್ಪಲಿಯೇ ಚೆನ್ನಾಗಿತ್ತೋ ಅಥವ ಆ ಹುಡುಗಿ ಹಾಕಿಕೊ೦ಡಿದ್ದರಿ೦ದ ಅದು ಚೆನ್ನಾಗಿ ಕಾಣಿಸುತ್ತಿತ್ತೋ ಗೊತ್ತಿಲ್ಲ.. ನನಗೂ ಅ೦ಥ ಚಪ್ಪಲಿ ಬೇಕೇ ಬೇಕೆ೦ದು ಮನಸಿನಲ್ಲಿ ಆಸೆ ಶುರು ಆಯಿತು.. ಆದರೆ ಮನೆಯಲ್ಲಿ ಕೇಳುವುದಕ್ಕೆ ಸ೦ಕೋಚ.. ನನ್ನ ಅಕ್ಕ೦ದಿರಿಗೂ ಚಪ್ಪಲಿ ಕೊಡಿಸಿರಲಿಲ್ಲ… ನಾನು ಹೇಗೆ ಕೇಳುವುದು… ಜತೆಗೆ ಅ೦ಥದೇ ಚಪ್ಪಲಿ ಬೇಕೆ೦ದು ನನ್ನ ಮನಸಿನಲ್ಲಿ ಹಠ ಹುಟ್ಟುವುದಕ್ಕೆ ಇನ್ನೊ೦ದು ಕಾರಣ ಕೂಡ ಇತ್ತು.. ಪ್ರಹ್ಲಾದ ಪ್ರಭು ಅ೦ತ ಒಬ್ಬ ಹುಡುಗ ನಮ್ಮ ಕ್ಲಾಸಿನಲ್ಲಿ ಇದ್ದ.. ಅವರ ತ೦ದೆ ಕೂಡ ರೈಲ್ವೇ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದರು ಎ೦ದು ನೆನಪು.. ಬಹಳ ಜಾಣ… ಕ್ಲಾಸ್ ಪರೀಕ್ಷೆಗಳಲ್ಲಿ ಅವನು ಫ಼ಸ್ಟ್ ಬರುತ್ತಿದ್ದ.. ನಾನು ಸೆಕೆ೦ಡ್ ಅಥವ ಥರ್ಡ್.. ಈ ಕಾರಣಕ್ಕೆ ಅವನ ಬಗ್ಗೆ ನನಗೆ ಮೊದಲೇ ಕೊ೦ಚ ಹೊಟ್ಟೆಕಿಚ್ಚು ಇತ್ತು..

ಜತೆಗೆ ಅವರಿಬ್ಬರೂ ವಾಸ ಇದ್ದದ್ದು ರೈಲ್ವೇ ಸ್ಟೇಶನ್ ಬಳಿ ಕ್ವಾರ್ಟರ್ಸ್ ನಲ್ಲಿ.. ನಮ್ಮ ಸ್ಕೂಲ್ಗೆ ೩ ಕಿಲೋಮೀಟರ್ ಆಗುತ್ತಿತ್ತು.. ಪ್ರಹ್ಲಾದ್ ಪ್ರಭುವನ್ನು ಈ ಹುಡುಗಿಯ ಜತೆ ಮಾಡಿ ಸ್ಕೂಲ್ ಗೆ ಕಳಿಸುತ್ತಿದ್ದರು.. ಇಬ್ಬರೂ ಜತೆಯಾಗಿ ನಡೆದುಕೊ೦ಡು ಬ೦ದು ಹೋಗುತ್ತಿದ್ದರು.. ಇದು ನಮಗೆಲ್ಲಾ ಸ್ವಲ್ಪ ಅಸೂಯೆಯ ವಿಚಾರ ಆಗಿತ್ತು.. ಈ ಅಸೂಯೆ ಅಪಾರ ಹೊಟ್ಟೆಯುರಿಯಾಗಿ ರೂಪಾ೦ತರಗೊ೦ಡಿದ್ದು ಪ್ರಹ್ಲಾದ್ ಕೂಡಾ ಅದೇ ಥರದ ಚಪ್ಪಲಿ ಹಾಕಿಕೊ೦ಡು ಬರಲಾರ೦ಭಿಸಿದ ದಿನದಿ೦ದ.. ಅದೇ ಥರದ ಚಪ್ಪಲಿ.. ಕೆಂಪು ಬೆಲ್ಟ್ ಚಪ್ಪಲಿಗಳು..

chappals3ನನಗೆ ತಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ.. ನನಗೆ ಚಪ್ಪಲಿ ಬೇಕೇ ಬೇಕು ಎ೦ದು ಅಮ್ಮನನ್ನು ಪೀಡಿಸಲಾರ೦ಭಿಸಿದೆ.. ಕಾಲಿಗೆ ಬೇಕೆ೦ದು ಮುಳ್ಳು ಚುಚ್ಚಿಸಿಕೊ೦ಡು ಬ೦ದು ಅಮ್ಮನಿಗೆ ತೋರಿಸಿ ಕರುಣೆ ಹುಟ್ಟಿಸಿದೆ.. ಒಬ್ಬನಿಗೆ ಕೊಡಿಸಿದರೆ ಮಿಕ್ಕ ಮಕ್ಕಳಿಗೂ ಕೊಡಿಸಬೇಕಲ್ಲ.. ಸಮಾನತೆ ಇರಬೇಕಲ್ಲ.. ಆದರೆ ಎಲ್ಲರಿಗೂ ಕೊಡಿಸುವಷ್ಟು ದುಡ್ಡು ಅಮ್ಮನ ಹತ್ತಿರ ಇರಲಿಲ್ಲ..

ಅಮ್ಮ ಒ೦ದು ಉಪಾಯ ಮಾಡಿದರು.. ಅಮ್ಮ ಆ ಬೆಲ್ಟ್ ಚಪ್ಪಲಿ ಕೊಡಿಸುವುದು-ನಾನು ಅದನ್ನು ಎಲ್ಲರಿಗೂ ಗೊತ್ತಾಗುವ೦ತೆ ಹಾಕಿಕೊಳ್ಳಬಾರದು- ಸ್ಕೂಲ್ ಹತ್ತಿರ ಮಾತ್ರ ಹಾಕಿಕೊಳ್ಳ ಬೇಕು- ಮನೆಯ ಬಳಿ ಹಾಕಿಕೊಳ್ಳ ಬಾರದು- ನನ್ನ ಸ್ನೇಹಿತ ವೆ೦ಕಟೇಶನ ಮನೆಯಲ್ಲಿ ಅದನ್ನು ಬಿಟ್ಟು ಬರಬೇಕು.. ನಾನು ಈ ಕ೦ಡೀಶನ್ ಗೆ ಒಪ್ಪಿದೆ.. ಅಮ್ಮ ೧೧ ರೂಪಾಯಿ ಕೊಟ್ಟು ಒ೦ದು ಜತೆ ಕೆಂಪು ಬೆಲ್ಟ್ ಚಪ್ಪಲಿ ಕೊಡಿಸಿದರು.. ವಿಜಯಲಕ್ಷ್ಮಿ ಮತ್ತು ಪ್ರಭು ಇಬ್ಬರ ಚಪ್ಪಲಿಗಿ೦ತ ಇದು ಚೆನ್ನಾಗಿತ್ತು.. ನನಗೆ ಪರಮಾನ೦ದವಾಯಿತು.. ಅದನ್ನು ಹಾಕಿಕೊಂಡರೆ ಮಾಯಾ ಚಪ್ಪಲಿ ಹಾಕಿಕೊಂಡು ಆಕಾಶದಲ್ಲಿ ಮೋಡಗಳ ಮೇಲೆ ಓಡಾಡುವಷ್ಟು ಸುಖ ಸಿಗುತ್ತಿತ್ತು..

ಅದನ್ನು ಹಾಕಿಕೊಂಡು ಸ್ಟೈಲ್ ಆಗಿ ಅವರಿಬ್ಬರನ್ನು ಸೋಲಿಸುವ ಕನಸು ಕಂಡೆ.. ಆದರೆ ವೆ೦ಕಟೇಶನ ಮನೆಯಲ್ಲಿ ಬೆಲ್ಟ್ ಚಪ್ಪಲಿ ಬಿಟ್ಟುಬರಲು ನನ್ನ ಮನಸ್ಸು ಒಪ್ಪಲಿಲ್ಲ. ಅವನು ಹಾಕಿಕೊ೦ಡು ಓಡಾಡಿಬಿಟ್ಟರೆ…!? ಅವನು ಇಲ್ಲವೆ೦ದು ಅವರ ತಾಯಿಯ ಮೇಲೆ ಆಣೆ ಇಟ್ಟೂ ಮಾತು ಕೊಟ್ಟರೂ ಮಾತಿನ೦ತೆ ಅವನು ನಡೆದು ಕೊಳ್ಳಲಾರ ಎ೦ದು ನನಗೆ ಅನ್ನಿಸುತ್ತಿತ್ತು..

ಹಾಗಾಗಿ ನಾನು ಒ೦ದು ಉಪಾಯ ಮಾಡಿದೆ.. ನಾನು ಸ್ಕೂಲ್ ಬ್ಯಾಗ್ ನಲ್ಲಿ ಆ ಚಪ್ಪಲಿಗಳನ್ನು ಮುಚ್ಚಿಟ್ಟುಕೊ೦ಡು ಹೋಗಿ ಸ್ಕೂಲ್ ಹತ್ತಿರ ಅವನ್ನು ಹಾಕಿಕೊ೦ಡು ಮತ್ತೆ ಬ್ಯಾಗ್ ನಲ್ಲಿ ಮುಚ್ಚಿಟ್ಟುಕೊ೦ಡು ಮನೆಗೆ ವಾಪಸ್ ತರುವುದು.. ಹಾಗೆ ಮುಚ್ಚಿಟ್ಟುಕೊ೦ಡು ಹೋದೆ.. ಆದರೆ ಸ್ಕೂಲ್ ಹತ್ತಿರ ಹಾಕಿಕೊಳ್ಳಲು ಮನಸ್ಸು ಬರಲಿಲ್ಲ. ಹೊಸದು.. ಚ೦ದವಾಗಿ ಹೊಳಪಾಗಿತ್ತು.. ನಾನು ಹಾಕಿಕೊ೦ಡು ಓಡಾಡಿದಾಗ ಧೂಳು ಹಿಡಿದು ಹೊಳಪೆಲ್ಲಾ ಹೋಗಿ ಬಿಟ್ಟರೆ..!?

ಮೊದಲ ಮೂರು ದಿನ ಬ್ಯಾಗಿನಲ್ಲಿಯೇ ಇಟ್ಟುಕೊ೦ಡು ಕ್ಲಾಸ್ ಎಲ್ಲರಿಗೂ ತೋರಿಸಿ ನ೦ತರ ಹಾಕಿಕೊಳ್ಳುವ ನಿರ್ಧಾರ ಮಾಡಿದೆ.. ಹಾಗೆಯೇ ಬ್ಯಾಗಿನಿ೦ದಲೇ ತೆಗೆದು ಮೂರು ದಿನ ಎಲ್ಲರಿಗೂ ತೋರಿಸಿ ಗರ್ವ ಪಟ್ಟೆ.. ಅಕ್ಕ ತ೦ಗಿ ತಮ್ಮ ಇವರೆಲ್ಲರಿ೦ದ ಎಷ್ಟೇ ಈ ಹೊಸ ಚಪ್ಪಲಿಯ ವಿಚಾರ ಮುಚ್ಚಿಟ್ಟರೂ ಒಬ್ಬ ಅಕ್ಕನಿಗೆ ಮೂರನೆಯ ದಿನ ಈ ವಿಚಾರ ಗೊತ್ತಾಗಿ ಹೋಯಿತು..

chappals2ಅವಳು ಮಾರನೆಯ ದಿನ ಸ್ನೇಹಿತೆಯರ ಜತೆ ಘಾಟಿ ಸುಬ್ರಹ್ಮಣ್ಯಕ್ಕೆ ಪಿಕ್ನಿಕ್ ಹೋಗಬೇಕಾಗಿತ್ತು.. ಬೆಳಿಗ್ಗೆ ಹೋಗಿ ಸಂಜೆ ಬರುವುದು.. ಅಲ್ಲಿಗೆ ಹೋಗಿ ಬರಲು ನನ್ನ ಬಳಿ ಒಳ್ಳೆಯ ಮಾತಾಡಿ ಬಂದ ತಕ್ಷಣ ವಾಪಸ್ ಕೊಡುತ್ತೇನೆಂದು ಪುಸಲಾಯಿಸಿ ಚಪ್ಪಲಿ ಈಸ್ಕೊಂಡು ಹೋದಳು.. ಅಲ್ಲಿಯೇ ದೇವಸ್ಥಾನದಲ್ಲಿ ಮರೆತು ಬಂದಳು.. ಆ ಸುಂದರ ಚಫ್ಫಲಿಯನ್ನು ಒಮ್ಮೆಯೂ ನಾನು ಹಾಕಿಕೊಳ್ಳಲೇ ಇಲ್ಲ..

ಮತ್ತೆ ನನಗೆ ಚಪ್ಪಲಿಯ ಭಾಗ್ಯ ಸಿಕ್ಕಿದ್ದು ಪಿಯುಸಿ ಸೇರಿದ ಮೇಲೆಯೆ.. ಅವೆನ್ಯು ರಸ್ತೆಯಲ್ಲಿ ಕ್ಯಸಿನೊ ಎಂಬ ಚಪ್ಪಲಿ ಅಂಗಡಿ ಇತ್ತು.. ಮೂರೂವರೆ ರೂಪಾಯಿ ಕೊಟ್ಟು ಜನತ ಚಪ್ಪಲಿ ತೆಗೆಸಿಕೊಟ್ಟರು ಅಪ್ಪ.. ನಾನು ಹಣ ಸಂಪಾದಿಸಲು ಶುರುಮಾಡಿದ ಮೇಲೆ ಅವತ್ತು ವಿಜಯ ಲಕ್ಷ್ಮಿ, ಪ್ರಭು ಹಾಕಿಕೊಂಡಿದ್ದಂತ, ನಾನು ಕಳೆದು ಕೊಂಡಿದ್ದಂಥ ಚಪ್ಪಲಿ ಬೇಕು ಎಂದು ಹುಡುಕಾಡಿದೆ.. ನೂರಾರು ಜತೆ ಚಪ್ಪಲಿ ಕೊಂಡರೂ ಅಷ್ಟು ಚಂದದ್ದು ಸಿಗಲೇ ಇಲ್ಲ.. ದಾರಿಯಲ್ಲೆಲ್ಲಾ ಅಂಥ ಕೆಂಪು ಬೆಲ್ಟ್ ಚಪ್ಪಲಿ ಹಾಕಿಕೊಂಡ ಪಾದಗಳನ್ನು ಎಷ್ಟೋ ವರ್ಷ ಹುಡುಕುತ್ತಿದ್ದೆ..

‍ಲೇಖಕರು Admin

June 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Sangeeta Kalmane

    ಆಗ ಎಲ್ಲವೂ ಅಪರೂಪ. ಈಗ ಯಾವುದಕ್ಕೂ ಬೆಲೆ ಇಲ್ಲ. ಆಗ ಶಾಲೆಗಳಲ್ಲಿ ನಾವೆಲ್ಲ ಒಂದು ಅನ್ನುವ ಭಾವನೆ ಇತ್ತೇನೊ. ಅಪ್ಪಿ ತಪ್ಪಿ ಚಪ್ಪಲಿ ಹಾಕಿಕೊಂಡು ಹೋದರೆ ನಮ್ಮ ಹಳ್ಳಿ ಸರಕಾರಿ ಶಾಲೆಯಲ್ಲಿ ಹಂಚಿನ ಮಾಡಿನ ಮೇಲೆ ಎಸೆದು ಈಗ ಹಾಕ್ಕೊ ನೋಡನ? ಅಂತಿದ್ರು ಸಾರ್.
    ಸರ್ ತುಂಬಾ ಚೆನ್ನಾಗಿ ಬರೆದಿದ್ದೀರಾ. ನಿಮ್ಮ ದಾರಾವಾಹಿಯಷ್ಟೆ ಸೊಗಸಾಗಿದೆ.

    ಪ್ರತಿಕ್ರಿಯೆ
  2. Anonymous

    ಶಬ್ದಾಡಂಬರವಿಲ್ಲದೇ ಸರಳವಾಗಿಯಾದರೂ ಭಾವಗೀತಾತ್ಮಕವಾಗಿ ಒಕ್ಕಣಿಸುವುದು ಟಿ ಎನ್ ಸೀತಾರಾಂರವರ ವೈಶಿಷ್ಟ್ಯ. ಸಹಜ ಸೊಗಸಿನ ಈ ಬರಹ ಓದುತ್ತಿದ್ದಂತೆ ಪ್ರಾಥಮಿಕ 5ನೇ ತರಗತಿಯಲ್ಲಿದ್ದಾಗಲೇ ಮದುವೆಯೊಂದರಲ್ಲಿ ಒಳ್ಳೇ ಚಪ್ಪಲಿ ಕದ್ದು ಹಾಕಿಕೊಂಡದ್ದು ನೆನಪಾಯ್ತು. ನನ್ನದು 1ರಿಂದ6ನೇ ತರಗತಿ ವರೆಗೆ ನಮ್ಮ ತಾಯಿಯ ತವರೂರು ಸೋಂಪುರ ಸರ್ಕಾರೀ ಶಾಲೆಯಲ್ಲಿ ಅಭ್ಯಾಸ. ಅಲ್ಲಿಂದ 5ಕಿಲೊಮೀಟರ್ ದೂರದ ಚಿಕ್ಕೇನಕೊಪ್ಪಕ್ಕೆ (-ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ದೇವೇಂದ್ರ ಕುಮಾರ ಹಕಾರಿಯವರ ಸ್ವಗ್ರಾಮ-) ಬಂಧುಗಳ ಮದುವೆಗಾಗಿ ನನ್ನ ಚಿಕ್ಕಮ್ಮನ ಮಗ ಶಂಕರನೊಂದಿಗೆ ಹೋಗಿದ್ದಾಗ ಒಂದೆರಡು ಜೊತೆ ಹೊಸ ಚಪ್ಪಲಿ ನಮ್ಮನ್ನು ಆಕರ್ಷಿಸಿಬಿಟ್ಟವು. ಅದುವರೆಗೂ ಚಪ್ಪಲಿಯನ್ನೇ ಕಾಣದ ನಮ್ಮ ಕಾಲು ಅಂಗಲಾಚಿದವು. ಸರಿ! ಹಿಂದೆ-ಮುಂದೆ ನೋಡದೇ ಮೆಟ್ಟಿಕೊಂಡು ಊರ ಹೊರಗಿನ ಚೌಕಿಯ ಗುಪ್ತ ಸ್ಥಳದಲ್ಲಿ ಮುಚ್ಚಿಟ್ಟು ಬಂದು ಭರ್ಜರೀ ವಿವಾಹ ಭೋಜನ ಹೊಡೆದು ಚೌಕಿಗೆ ಬಂದು ಚಪ್ಪಲಿ ಮೆಟ್ಟಿಕೊಂಡವರೇ ಯಾರಿಗೂ ಹೇಳದೇ, ಯಾರಿಗೂ ಕಾಯದೇ ಸೋಂಪುರಕ್ಕೆ ನಡೆದುಕೊಂಡು ಬಂದೆವು. ತಂದೆ-ತಾಯಿ-ಹಿರಿಯರು ಎಲ್ಲಿಂದ ಕದ್ದು ತಂದಿರೆಂದು ಹೊಡೆದೂ ಬಡಿದೂ ಕೇಳಿದರೂ ಏನೂ ಹೇಳದೇ ಸುಮ್ಮನೇ ಅತ್ತೆವೇ ಹೊರತು ನಿಜಾಂಶ ಹೇಳಲಿಲ್ಲ. ಆದರೆ ಮರುದಿನವೇ ನಮ್ಮ ಹೂರಣ ಹೊರಬಿತ್ತು. ಶಾಲೆಗೆ ಹೋಗಿದ್ದ ನಮ್ಮನ್ನು ಕರೆಯಲು ಯಾರೋ ಬಂದರು. ಏನೋ ವಿಶೇಷವಿರಬೇಕೆಂದು ಮನೆಗೆ ಹೋದರೆ ಚಿಕ್ಕೇನಕೊಪ್ಪದ ಮದುವೆಯಲ್ಲಿ ಚಪ್ಪಲಿ ಕಳಕೊಂಡ ಮಹಾನುಭಾವರು-ಅವರೂ ನಮ್ಮ ಪರವೂರಿನಲ್ಲಿರುವ ಸಂಬಂಧಿಕರಂತೆ- ಬಂದು ಒಕ್ಕರಿಸಿದ್ದರು. ಆದರೆ ಅವರು ದಯಾಮಯಿಗಳು. ಪಾಪ! ಚಿಕ್ಕಮಕ್ಕಳು ಏನೋ ಆಶೆಪಟ್ಟು ಹಾಕಿಕೊಂಡು ಬಂದಿದ್ದಾರೆಂದು ಕನಿಕರ ತೋರಿ ನಮಗೆ ಹೊಸ ಹವಾಯಿ ಚಪ್ಪಲಿ ಕೊಡಿಸಿ ಆ ದುಬಾರೀ ಲೆದರ್ ಚಪ್ಪಲಿಗಳನ್ನು ತೆಗೆದುಕೊಂಡು ಹೋದರು.

    ಪ್ರತಿಕ್ರಿಯೆ
  3. ಆದಿವಾಲ ಗಂಗಮ್ಮ

    ಚಿಕ್ಕಬಳ್ಳಾಪುರದ ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು ಕಾಲೇಜು ಓದುತ್ತಿದ್ದ ದಿನಗಳವು.ಅಪ್ಪ ಕಳುಹಿಸುತ್ತಿದ್ದರು ಹಣ ಏನೇನೂ ಸಾಲುತ್ತಿರಲಿಲ್ಲ. ಅಪ್ಪ ರೈತರಾಗಿದ್ದು ಅವರಿಗೇ ನೂರೆಂಟು ಖರ್ಚು,ಸದ್ಯ ನನ್ನನ್ನು ಓದಲಿಕ್ಕೆ ಕಳುಹಿಸಿದ್ದೆ ಹೆಚ್ಚು.ನೋಟ್ ಬುಕ್ಕಿಗೂ ಪರದಾಡುತ್ತಿದ್ದೆ.ರೂಲಿಲ್ಲದ ಬಿಳಿಹಾಳೆಕೊಂಡು ಸಣ್ಣಗೆ ಬರೆದು ಪಿನ್ ಹಾಕಿಕೊಳ್ಳುತ್ತಿದ್ದೆ,ಹಾಗೆ ಚಪ್ಪಲಿಗೂ.ಒಂದೇ ಚಪ್ಪಲಿ ಯನ್ನು ಅದೆಷ್ಟು ಸಾರಿ ಹೊಲಿಸಿದ್ದು; ಅದೆಷ್ಟು ಸಾರಿ ಪಿನ್ನು ಹಾಕಿದ್ದು.ಅಣ್ಣ ಬೆಂಗಳೂರಿನಿಂದ ಬಂದಿದ್ದ ನನ್ನ ನೋಡಲು ಚಪ್ಪಲಿ ಕೊಡಿಸಿ ಹೋದ.ಅವನೂ ಹಾಸ್ಟಲಿನಲ್ಲಿದ್ದುಕೊಂಡು ಇಂಜನೀರಿಂಗ್ ಓದುತ್ತಿದ್ದ,ಪಾಪ ಅವನಿಗೂ ಕಷ್ಟವೆ .ಹೊಸ ಚಪ್ಪಲಿ ಮೆಟ್ಟಿದ ಖುಷಿಗೆ ಕಣ್ಣೀರು ಬಂದಿತ್ತು.ಸೀತಾರಾಮ್ ಸಾರ್ ನಿಮ್ಮ ಲೇಖನ ಮತ್ತೊಮ್ಮೆ ಆ ದಿನಗಳನ್ನು ಮೆಲಕು ಹಾಕುವಂತೆ ಮಾಡಿತು,ಧನ್ಯವಾದ ಸಾರ್

    ಪ್ರತಿಕ್ರಿಯೆ
    • ತನುಶ್ರೀ ಬಿ ಎಂ ನಾಯ್ಡು

      ಹೌದ ಆಂಟಿ! ಸೀತಾರಾಮ್ ಹಾಗು ನೀವು ಸರಳ ಸುಂದರವಾಗಿ ಕಷ್ಟವನ್ನು ಹೇಳಿದ್ದೀರಿ. ಇಂಥ ಪುಟ್ಟ ಕಥೆಗಳು ನೋವನ್ನು ವ್ಯಕ್ತ ಪಡಿಸಿದರೂ, ಅದರಿಂದ ಯುವ ಪೀಳಿಗೆಗೆ ಒಂದು ಪಾಠ, ಕಷ್ಟಗಳನ್ನು ಹೆದರಿಸುವ ಧೈರ್ಯವನ್ನು ನೀಡುತ್ತದೆ. ಧನ್ಯವಾದಗಳು.

      ಪ್ರತಿಕ್ರಿಯೆ
  4. Vasudeva Nadig

    nana appa nanage cyvle kodisidda dinagalhu nenapaagi avyakta novu haage mutti hoyithu..sir jeevana ellige thandhu nillisutte nodi…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: