ಹಡಗಾ, ಮನುಷ್ಯನಾ, ಅಥವಾ ಏರೋಪ್ಲೇನಾ? ಹೊಳೆಯಲಿಲ್ಲ..

ಫ್ಲೈಯಿಂಗ್ ಸ್ಕಾಟ್ಸ್ ಮನ್ ನ ನೋಡಿದ್ದು 

vinate sharma

ಡಾ. ವಿನತೆ ಶರ್ಮ

ಮನೆ ಮುಂದೆ ಸೈಕಲ್ ಏರಿ ಬಂದ ಗಂಡ-ಹೆಂಡತಿ “ಫ್ಲೈಯಿಂಗ್ ಸ್ಕಾಟ್ಸ್ ಮನ್ ನ ನೋಡುವುದಕ್ಕೆ ನೀವು ಬರುವುದಿಲ್ಲವಾ” ಎಂದರು.

ತಕ್ಷಣ ಹೊಳೆದಿದ್ದು ‘ಪೈರೇಟ್ಸ್ ಆಫ್ ದ ಕರಿಬಿಯನ್’ ಚಲನಚಿತ್ರ, ಕ್ಯಾಪ್ಟನ್ ಜಾಕ್ ಸ್ಪಾರೋನ ಬ್ಲಾಕ್ ಪರ್ಲ್ ಹಡಗು, ಜಾನೀ ಡೆಪ್ ಮತ್ತು ಫ್ಲೈಯಿಂಗ್ ಡಚ್ ಮನ್ ಹಡಗುಗಳು. ಇದ್ಯಾವ ಹೊಸ ಫ್ಲೈಯಿಂಗ್ ಸ್ಕಾಟ್ಸ್ ಮನ್ – ಹಡಗಾ, ಮನುಷ್ಯನಾ, ಅಥವಾ ಏರೋಪ್ಲೇನಾ? ಹೊಳೆಯಲಿಲ್ಲ.

ಸದ್ಯ, ಆನ್ ದ ಸ್ಪಾಟ್  ತಲೆ ಕೆರೆದುಕೊಳ್ಳಲಿಲ್ಲ. ಬಾಯಿ ಬಿಡುವ ಮುನ್ನ ಅವರಿಬ್ಬರ ಸೈಕಲ್ ಗಳ ಕಡೆ ಕಣ್ಣು ಹೋಯಿತು. ಆಕೆಯ ಸೈಕಲ್ ಮೇಲೆ ಸಾಧಾರಣ ಗಾತ್ರದ ಬ್ಯಾಕ್ ಪ್ಯಾಕ್, ನೀರಿನ ಬಾಟಲ್ ಗಳು. ಆತನ ಸೈಕಲ್ ಮೇಲೆ – ಹೋ, ದೊಡ್ಡ ಕ್ಯಾಮೆರಾಗಳಿಡುವ ಪ್ರೊಫೆಶನಲ್ ಬ್ಯಾಗ್ ಜೊತೆಗೆ ಟ್ರೈಪೂಡ್. ಫ್ಲೈಯಿಂಗ್ ಸ್ಕಾಟ್ಸ್ ಮನ್ ಸಾಧಾರಣನೇನಲ್ಲ ಅನ್ನುವುದಂತೂ ಖಚಿತವಾಯಿತು.

ನಂತರ ಸೂಚ್ಯವಾಗಿ ಬಾಯ್ಬಿಟ್ಟೆ – “ಎಲ್ಲಿಗೆ ಹೋಗುತ್ತಿದ್ದೀರಾ, ಭಾರಿ ಕ್ಯಾಮೆರಾಗಳಿವೆ ಬೇರೆ?” “ಇಲ್ಲೇ ಹತ್ತಿರದ ಬ್ರಿಜ್ ಮೇಲೆ ಹೋದರೆ ಚೆನ್ನಾಗಿ ಕಾಣಿಸತ್ತೆ, ಫೋಟೋಗ್ರಫಿಗಂತೂ ಸೂಪರ್” ಅಂತ ಉತ್ತರ ಬಂತು. ಆಗಲೂ ಈ ಫ್ಲೈಯಿಂಗ್ ಸ್ಕಾಟ್ಸ್ ಮನ್ ಯಾರು, ಉಹುಂ, ಬಗೆಹರಿಯಲಿಲ್ಲ. ಕೇಳೇಬಿಟ್ಟೆ. ಅವರಿಬ್ಬರೂ ನಗುತ್ತಾ, ಅದೊಂದು ಸ್ಟೀಮ್ ಇಂಜಿನ್ ಉಗಿಬಂಡಿ, ಇನ್ನು ಅರ್ಧ ಗಂಟೆಯಲ್ಲಿ ನಮ್ಮೂರಿನ ಬಳಿ ಹಾದು ಹೋಗಲಿದೆ, ಅಂದರು, ಹೊರಟೇ ಹೋದರು.

ce5a5b98-b584-417f-8c4b-a46556f79875

ಒಳಬಂದು ಗೂಗಲ್ ನಲ್ಲಿ ‘ಫ್ಲೈಯಿಂಗ್ ಸ್ಕಾಟ್ಸ್ ಮನ್’ ಬಗ್ಗೆ ಹುಡುಕಿದೆ. ಅರೆ, ಎಷ್ಟೊಂದು ಸುಪ್ರಸಿದ್ಧ ಇತಿಹಾಸ ಇದರದು!

೧೯೨೩ ಯಲ್ಲಿ ಬಹು ಸುಂದರವಾಗಿ ಜನ್ಮ ತಳೆದು, ೧೪೭೨ ಎಂಬ ನಂಬರ್ ಪಡೆದು, ಇಂಗ್ಲೆಂಡ್ ನ ಅತ್ಯಂತ ಶಕ್ತಿಶಾಲಿ ಉಗಿಬಂಡಿಗಳ ಪಟ್ಟಿಗೆ ಸೇರಿದರೂ, ಬೇರೆ ಬೇರೆ ಕಾರಣಗಳಿಂದ ಕ್ರಮೇಣ ತನ್ನದೇ ವಿಶಿಷ್ಟ ಹೆಸರು, ಸ್ಥಾನಮಾನ, ರೋಚಕ ಚರಿತ್ರೆ ಎಲ್ಲವನ್ನೂ ಬಗಲಿಗೇರಿಸಿಕೊಂಡ ಎಲ್ಲರ ಕಣ್ಮಣಿ ರೈಲು ಇದು! ಸರ್ ನೈಜೆಲ್ ಗ್ರೆಸ್ಲಿ ಈ ಸುಂದರತೆಯ ರಚನೆಕಾರ.

48bf336d-c92a-4288-913c-ae8bf91878e5

೧೯೨೪ ರಿಂದ ೪೪೭೨ ಎಂಬ ಹೊಸ ನಂಬರ್ ಪಡೆದು ಐತಿಹಾಸಿಕ ಮತ್ತು ಪ್ರಸಿದ್ಧ ಪ್ರದರ್ಶನಗಳಲ್ಲಿ ಎಲ್ಲರ ಕಣ್ಣಿಗೆ ಬೀಳುತ್ತಾ ಮೆಚ್ಚುಗೆ ಪಡೆಯಿತು. ಇಡಿ ದೇಶದಲ್ಲೇ ಮೊದಲ ಬಾರಿಗೆ ೧೯೩೪ ರಲ್ಲಿ ೧೦೦ ಮೈಲಿ ವೇಗದಲ್ಲಿ ಮಿಂಚಿನಂತೆ ಹರಿದು ತನ್ನದೇ ಛಾಪನ್ನ ಒತ್ತುಬಿಟ್ಟಿತು. ೧೯೨೮ ರಲ್ಲಿ ಮೊದಲ ಬಾರಿಗೆ ಲಂಡನ್ ನಿಂದ ಸ್ಕಾಟ್ಲ್ಯಾಂಡ್ ವರಗೆ ತಡೆರಹಿತ ಪ್ರಯಾಣವನ್ನು ಮಾಡಿ ತನ್ನ ಹೆಸರನ್ನ ಸಾರ್ಥಕ ಪಡಿಸಿಕೊಂಡುಬಿಟ್ಟಿತು.

ಅದಕ್ಕೊಂದು ತನ್ನದೇ ಆದ ಪರ್ಸನಾಲಿಟಿ ಇದೆ ಎಂದು ಅರ್ಥವಾಯಿತು. ದೇಶದ ಉದ್ದ ಅಗಲ ಇದನ್ನ ನೋಡಲು ಜನ ಕಿಕ್ಕಿರಿದು ಬರುತ್ತಾರೆ. ಪ್ರಪಂಚಕ್ಕೆ ರೈಲುಗಳ ಕೊಡುಗೆಯಿತ್ತ ಬ್ರಿಟಿಷರಿಗೆ ದೇಶದಾದ್ಯಂತ ಹರಿದುಹೋಗುವ ರೈಲುಗಳನ್ನು ‘ಫಾಲೋ’ ಮಾಡುವುದು ದೊಡ್ಡ ಹವ್ಯಾಸವಂತೆ. ಕಡೆಗೂ ಅರ್ಥವಾಯಿತು, ಆ ಬ್ರಿಜ್ ಮೇಲೆ ನಾನು ಹೋಗುವಾಗಲೆಲ್ಲಾ ಕೆಲ ಮಂದಿ ಉದ್ದುದ್ದ ಕ್ಯಾಮೆರಾಗಳನ್ನಿಟ್ಟುಕೊಂಡು ಯಾಕೆ ನಿಂತಿರುತ್ತಾರೆ ಅಂತ.

6908dea5-8627-4271-a58d-e4512b0c57ea

ಸರಿ, ಫ್ಲೈಯಿಂಗ್ ಸ್ಕಾಟ್ಸ್ ಮನ್ ನ ನೋಡೇ ಬಿಡೋಣ ಅಂತ ಮಧ್ಯಾಹ್ನದ ಊಟದ ತಯಾರಿಯನ್ನ ನಿಲ್ಲಿಸಿ ಎಲ್ಲರೂ ಹೋದೆವು. ಕಾರುಗಳು, ಕ್ಯಾಮೆರಾಗಳು, ಮಕ್ಕಳಿಗೆ ಫ್ಲೈಯಿಂಗ್ ಸ್ಕಾಟ್ಸ್ ಮನ್ ಬಗ್ಗೆ ರೋಚಕ ಕತೆಗಳನ್ನು ಹೇಳುತ್ತಿದ್ದ ಅಪ್ಪ ಅಮ್ಮಂದಿರು, ಪ್ರಾಂ ನಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದ ಪುಟ್ಟ ಕಂದ, ಪಿಕ್ನಿಕ್ ಚಾಪೆ ಹಾಸಿಕೊಂಡು ಸ್ಯಾಂಡ್ ವಿಚ್ ತಿನ್ನುತ್ತಿದ್ದವರು, ಎಲ್ಲರೂ ಇದ್ದರು. ನನ್ನ ಭಾರತೀಯ ಉಡುಗೆಯನ್ನ ನೋಡಿ ಸ್ವಲ್ಪ ಕಾಲರ್ ಏರಿಸಿಕೊಂಡು “ಓ, ವಿ ಇಂಗ್ಲಿಷ್ ಆರ್ ವೆರಿ ಪ್ರೌಡ್ ಆಫ್ ಅವರ್ ರೈಲ್ವೇಸ್” ಅಂದವರ ಪಕ್ಕದಲ್ಲೇ ಕೂತು ಅರ್ಧ ಘಂಟೆ ಹರಟೆ ಹೊಡೆದೆ!!

065baa7e-d08e-41b1-a1b1-d76e771f45d3

ಫ್ಲೈಯಿಂಗ್ ಸ್ಕಾಟ್ಸ್ ಮನ್ ಕಡೆಗೂ ೬೯ ಮೈಲಿ ವೇಗದಲ್ಲಿ ಧಾವಿಸಿ ಬಂದ. ಕಣ್ಣ ಮಿಟುಕಿಸಿ, ‘ಕೂ.. ಕೂ..’ ಅಂತ ಸುಮಧುರವಾಗಿ ಹಾಡಿ, ಎದೆ ಬಡಿತ ಏರಿಸಿ, ಸೆಕೆಂಡ್ ಗಳಲ್ಲಿ ಹಾವಿನಂತೆ ಮೈ ಬಳುಕಿಸಿ ಹೊರಟೇ ಹೋದ.

ನೀವು ನೋಡಿದ್ದು ನನ್ನ ಫೋನ್ ಕ್ಯಾಮೆರಾದಲ್ಲಿ ತೆಗೆದ ಕೆಲ ಚಿತ್ರಗಳು.

‍ಲೇಖಕರು Admin

June 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

… ಆಮೆನ್! 

… ಆಮೆನ್! 

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: