… ಆಮೆನ್! 

ಸುಮಾರು ಹೊತ್ತು ಸುಧಾರಿಸಿಕೊಂಡ ನಂತರ ಎದ್ದು ನಮ್ಮ ನಡಿಗೆ ಮುಂದುವರೆಸುವ ತುಸು ಮಾತ್ರದ ತ್ರಾಣ ಬಂದಿತು. ಆದರೆ ಅಪ್ಪ-ಅಮ್ಮ ನಡೆಯುವ ಸ್ಥಿತಿಯಲ್ಲೇ ಇರಲಿಲ್ಲ. ಹಾಗಾಗಿ ಮತ್ತೆ ಕುದುರೆಗಾಡಿಯೇರಿ ಹೊರಟುಬಿಡುವ ತೀರ್ಮಾನ ಕೈಗೊಂಡರು. ಇಬ್ಬರು ಕುಳಿತುಕೊಳ್ಳುವಂಥ ಗಾಡಿಗೆ ರೇಟ್ ವಿಚಾರಿಸಿದರೆ, ಎರಡು ಕಿಲೋಮೀಟರ್‌‌ನ ಆ ಹಾದಿಗೆ 35 ಡಾಲರ್! ಹೌದು ಸ್ವಾಮಿ, ಮೂ..ವ..ತ್ತೈ..ದು ಡಾ..ಲ..ರ್ !

ನಮ್ಮ ಬೆಂಗಳೂರಿನ ಆಟೋದವರು 20 ರೂಪಾಯಿ ಸೇರಿಸಿಕೊಡಿ ಅಂದರೆ ನ್ಯಾಯ-ನೀತಿ-ಧರ್ಮ ಅಂತ ಭಾಷಣ ಕುಟ್ಟುವ ನಾವು ಅಲ್ಲಿ 35 ಡಾಲರನ್ನು ತೆತ್ತು ಹೊರಡಲೂ ತಯಾರು! ವಿಧಿಯಿಲ್ಲದೇ ಅಪ್ಪ-ಅಮ್ಮ ಗಾಡಿ ಹತ್ತಿದರು. ನಾವೂ ಒಂದು ಗಾಡಿಯಲ್ಲಿ ಹೋಗಿಬಿಡೋಣ ಎಂದು ಹೇಳಲೆಂದು ನನ್ನ ಗಂಡನಿಗಾಗಿ ತಡಕಾಡಿದರೆ, ಅವನೆಲ್ಲಿದ್ದ?!! ಹೇಗೂ ಆ ಕೊರಕಲಿನಲ್ಲಿ ನಾನು ದಾರಿ ತಪ್ಪಿಸಿಕೊಳ್ಳುವ ಸಂಭವವೇ ಇಲ್ಲವೆಂದು ಗ್ಯಾರಂಟಿ ಇದ್ದುದರಿಂದಲೋ ಏನೋ ನನ್ನನ್ನು ಬಿಟ್ಟು ಹೊರಟೇ ಹೋಗಿದ್ದ!

ನನ್ನ ಕೈನಲ್ಲಿ ಒಂದೇ ಒಂದು ಡಾಲರ್ ಇಲ್ಲ. ಜೊತೆಗೆ ಒಬ್ಬಳಿಗಾಗಿ 35 ಡಾಲರ್ ಕೊಡಲು ಮನಸ್ಸಾದರೂ ಹೇಗೆ ಬರುತ್ತದೆ? ವಿಧಿಯಿಲ್ಲದೇ ಕಾಲೆಳೆದುಕೊಂಡು ಹಾಗೇ ನಡೆದೆ. ಬರುವಾಗ ಇಳಿಜಾರಿದ್ದ ರಸ್ತೆ ಮರಳುವಾಗ ಏರಿನ ರಸ್ತೆಯಾಗುವುದು ಸಹಜ ತಾನೇ? ಕಾಲೆಳೆದುಕೊಂಡು ಆ ಎರಡು ಕಿಲೋಮೀಟರ್ ಹೇಗೆ ಕ್ರಮಿಸಿದೆ ಅನ್ನುವುದು ನನಗೇ ನೆನಪಿಲ್ಲದ ಹಾಗೆ ಆಗಿಹೋಗಿದೆ.

ಕೈನಲ್ಲಿ ನೀರಿಲ್ಲ, ಅಲ್ಲಿಯವರೆಗೆ ಏಳು ಕಿಲೋಮೀಟರ್ ನಡೆದ ಆಯಾಸ … ನಾನು ನಿಜಕ್ಕೂ ಗೇಟ್ ತಲುಪುತ್ತೇನಾ ಅನ್ನುವ ಅನುಮಾನ ಶುರುವಾಗಿ ಬಿಟ್ಟಿತು. Panic  ಆದ ಆ ಸ್ಥಿತಿಯಲ್ಲಿ ಇನ್ನೊಂದು ಸ್ವಲ್ಪ ಹೊತ್ತಿದ್ದರೆ ಇರುವ ಕಸುವನ್ನೂ ಕಳೆದುಕೊಳ್ಳುತ್ತೇನೆ ಅನ್ನಿಸಿಬಿಟ್ಟಿತು. ಆಗ ಶಾಂತವಾಗಿ ಕುಳಿತು ನನಗೆ ನಾನೇ ಧೈರ್ಯ ತಂದುಕೊಳ್ಳುತ್ತಾ ‘ಈಗಿನ್ನೂ ಮೂರೂವರೆ ಘಂಟೆ. ಕತ್ತಲಾಗಲು ತುಂಬ ಹೊತ್ತು ಬಾಕಿ ಇದೆ. ಸುಸ್ತಾದರೆ ನೂರು ಬ್ರೇಕ್ ತೆಗೆದುಕೋ ಅಷ್ಟೇ. ಗಾಬರಿ ಬಿದ್ದರೆ ಪ್ರಯೋಜನವಿಲ್ಲ ಭಾರತಿ’ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಾ ನಡೆದೆ. ಅಪ್ಪಿ ತಪ್ಪಿ ನಾನು ಜ್ಞಾನ ತಪ್ಪಿ ಬಿದ್ದುಬಿಟ್ಟರೂ ಅದೊಂದೇ ರಸ್ತೆಯಾದ್ದರಿಂದ ಹುಡುಕಿ ಬರುವ ನಮ್ಮವರಿಗೆ ನಾನು ಮರಳಿ ಸಿಗುತ್ತೇನೆ ಅನ್ನುವ ಧೈರ್ಯವೂ ಇತ್ತು. ಪುಣ್ಯಕ್ಕೆ ಆ ರೀತಿ ಏನೂ ಆಗದೇ ಹದಿನೈದಿಪ್ಪತ್ತು ಬ್ರೇಕ್‌ಗಳಲ್ಲಿ, ವರ್ಟಿಕಲ್ ಸ್ಥಿತಿಯಲ್ಲಿಯೇ ಗೇಟನ್ನು ಮುಟ್ಟಿದೆ.

ಮೂಲೆಯಲ್ಲಿ ಒಂದೆಡೆ ಗೋಡೆಗೆ ಒರಗಿ ಹೈರಾಣಾಗಿ ಕೂತಿದ್ದ ನನ್ನ ಗಂಡ ಕಂಡ. ನಾನು ಮ್ಯಾರಥಾನ್ ಓಟ ಓಡುವವರು ಕೊನೆಯಲ್ಲಿ ಏದುಸಿರು ಬಿಡುತ್ತಾ ಗಮ್ಯ ಮುಟ್ಟುತ್ತಾರಲ್ಲ, ರೀತಿಯಲ್ಲಿ ತೆವಳುತ್ತ ತಲುಪಿದೆ. ನಮಗೆ ಹೋಲಿಸಿದರೆ ಗಾಡಿಯಲ್ಲಿ ಬಂದ ಅಪ್ಪ-ಅಮ್ಮನೇ ಸುಸ್ಥಿತಿಯಲ್ಲಿದ್ದರು ಅನ್ನಬೇಕು!

ಬಿಸಿಲಿನ ಝಳ ಮತ್ತು ನಿದ್ರಾಹೀನತೆಯೂ ಸೇರಿ ನೆಲ ಕಚ್ಚಿಬಿಟ್ಟಿದ್ದೆ. ಯೂಸುಫ್ ಯಾರಾದರೂ ಅಂಗಡಿಯವರಿಂದ ಫೋನ್ ಮಾಡಿಸಿ ಅಂದಿದ್ದನಲ್ಲ. ಅದನ್ನು ಮಾಡಲೂ ದೇಹ ಸಹಕರಿಸುತ್ತಿಲ್ಲ! ಕೊನೆಗೆ ಅಮ್ಮನಿಗೇ ಅಂಗಡಿಯವರ ಬಳಿ ಹೋಗಿ ಕಾಲ್ ಮಾಡಿಸು ಅಂತ ಕಳಿಸಿದೆವು. ಅವಳು ಯಾರೊಡನೆಯೋ ಮಾತಾಡಿದಳು. ಆ ನಂತರ ಆ ಅಂಗಡಿಯ ಹುಡುಗ ಮೊಬೈಲ್ ಕರೆ ಮಾಡುವುದು ಕಾಣಿಸಿತು.

ಫೋನ್ ಮುಗಿಯಿತು. ಕೂಡಲೇ ಕೆಟ್ಟಮುಖ ಮಾಡಿ ಧಾವಿಸಿ ಬಂದ ಅಮ್ಮ ‘ಅಯ್ಯೋ ಕಾಲ್ ಮಾಡಿದನಲ್ಲ, ಸುಮ್ನೆ ಎಷ್ಟು ಅಂತ ಕೇಳಿದರೆ ಐದು ಡಾಲರ್ ಅಂತಾನೆ’ ಅಂದಳು ಗಾಬರಿಯಿಂದ. ಒಂದು ಫೋನ್ ಕರೆಗೆ ಐದು ಡಾಲರ್! ಮೊದಲೇ ಸುಸ್ತಾಗಿದ್ದ ನನಗೆ ನಖಶಿಖಾಂತ ಉರಿದುಹೋಯಿತು. ಮೊದಲೇ ಇಂಗ್ಲೀಷಿನಲ್ಲಿ ಬಯ್ಯುವುದು ಬರುವುದಿಲ್ಲ ಬೇರೆ. ಹಾಗಾಗಿ ಬಯ್ಯಬೇಕೆಂದಾಗ ನನಗೇ ಗೊತ್ತಿಲ್ಲದ ಹಾಗೆ ಕಸ್ತೂರಿ ಕನ್ನಡ ಪುಂಖಾನುಪುಂಖವಾಗಿ ಹರಿಯಲಾರಂಭಿಸುತ್ತದೆ! ಈಗಲೂ ಏರಿದ ಸಿಟ್ಟಿನಲ್ಲಿ ಕೈಬಾಯಿ ತಿರುಗಿಸುತ್ತಾ ‘ಆಆಆಆ! ಐದು ಡಾಲರ್ರಾ! ಥು ಮಾನ ಮರ್ಯಾದೆ ಇಲ್ಲವೇನಯ್ಯಾ ನಿನಗೆ? ಆಸೆಗೂ ಒಂದು ಮಿತಿ ಇರಬೇಕು ನೋಡು. ಅಲ್ಲ, ನಿಮ್ಮ ದೇಶಕ್ಕೆ ಬರುವ ಪ್ರವಾಸಿಗರಿಗೆ ಹೀಗೆ ಟೋಪಿ ಇಕ್ಕಿದ್ರೆ ಯಾವನಯ್ಯಾ ಬರ್ತಾನೆ. ಐದು ಡಾಲರ್! Eh? ಐದು ಡಾಲರ್ ಕೊಡಬೇಕಾ ಒಂದು ಜುಜುಬಿ ಫೋನ್ ಕಾಲಿಗೆ …’ ಅಂತ ಬಯ್ಯಲು ಶುರುವಿಟ್ಟುಕೊಂಡೆ.

ಅದ್ಯಾವುದೋ ಸಿನೆಮಾದಲ್ಲಿ ಜಗ್ಗೇಶ್ ಬಯ್ಯುವಾಗ ಸೌಂಡು ಮ್ಯೂಟ್ ಆಗುತ್ತದಲ್ಲ, ಅದೇ ರೀತಿ ಇತ್ತು ಈ ಸೀನ್ ಕೂಡಾ! ನಾನು ಬಯ್ದಿದ್ದು ಅವನಿಗೆ ಮ್ಯೂಟ್ ಆಗಿದ್ದರೂ ಕೂಡಾ, ಪ್ರೀತಿ-ಸಿಟ್ಟು-ಕರುಣೆ-ದುಃಖದಂಥ ಭಾವಗಳಿಗೆ ಅದರದ್ದೇ ಆದ ಭಾಷೆಯಿರುತ್ತದಲ್ಲವೇ? ನಾನು ಅತೀವ ಸಿಟ್ಟಿನಲ್ಲಿದ್ದೇನೆ ಅಂತ ಅರ್ಥವಾದವ ಶರಣಾಗತನಾದವನಂತೆ ಎರಡೂ ಕೈ ಮೇಲೆತ್ತಿ ‘ಜೋಕ್! ಜೋಕ್!’ ಎಂದು ನಗಲಾರಂಭಿಸಿದ. ನನ್ನ ಸಿಟ್ಟು ಜರ್ರನೆ ಇಳಿದು ತಯಾರು ಮಾಡಿಕೊಂಡಿದ್ದ ಬಯ್ಗುಳವನ್ನೆಲ್ಲ ಈಗ ಏನು ಮಾಡಬೇಕು ಎನ್ನುವುದು ಅರ್ಥವಾಗದಂತೆ ತಬ್ಬಿಬ್ಬಾಗಿ ಕೂತಿದ್ದೆ. ಅವನು ನಿಜಕ್ಕೂ ಜೋಕ್ ಮಾಡಿದ್ದನೋ, ಅಥವಾ ನನ್ನ ಸಿಟ್ಟು ನೋಡಿ ಗಾಬರಿಯಾಗಿ ಹಾಗೆ ಹೇಳಿದನೋ ಇವತ್ತಿಗೂ ನನಗೆ ಅರ್ಥವಾಗಿಲ್ಲ …

ಹೊಟ್ಟೆ ಭಯಂಕರ ಹಸಿಯುತ್ತಿತ್ತು. ನಮ್ಮ ಪ್ಯಾಕೇಜಿನಲ್ಲಿ ಲಂಚ್ ಸೇರಿದೆ ಎಂದು ಯೂಸುಫ್ ಹೇಳಿದ್ದರೂ ಸಂಜೆ ಐದರ ಹೊತ್ತಿನಲ್ಲಿ ಅದು ಸಿಗುವುದು ಕನಸೇ ಸರಿ. ಇದೇ ಕಾರಣ ಹೇಳಿ ಅವನು ಯಾವುದೋ ಫಾಸ್ಟ್ ಫುಡ್ ಜಾಯಿಂಟ್‌ನಲ್ಲಿ ನಿಲ್ಲಿಸಿ ಒಂದು ಸ್ಯಾಂಡ್‌ವಿಚ್ ಅನ್ನೋ, ಸಲಾಡ್ ಅನ್ನೋ ಕೊಡಿಸಿ ಅಮ್ಮಾನ್‌ಗೆ ಹೋದ ನಂತರ ಊಟ ಮಾಡಿ ಅನ್ನುತ್ತಾನೆ ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಹಾಜರಾದ ಯೂಸುಫ್ ದೊಡ್ಡದಾಗಿ ನಗುತ್ತಾ ‘ಹೌ ವಾಸ್ ದ್ ಡೇ’ ಎಂದ. ಕನಸಿನಲ್ಲಿದ್ದಂತೆ ‘ಅದ್ಭುತ’ ಎಂದೆ. ‘ಹಾಪ್ ಇನ್! ಊಟಕ್ಕೆ ಹೋಗುವಾ ಈಗ’ ಎಂದ. ಹಾಪ್ ಇನ್‌?! ಸಧ್ಯ ತೆವಳಿದರೆ ಸಾಕು ಅನ್ನುವಂಥ ಸ್ಥಿತಿ, ಕುಪ್ಪಳಿಸಬೇಕಂತೆ ಅಂತ ಪೇಲವವಾಗಿ ನಗುತ್ತಾ ವ್ಯಾನ್ ಹತ್ತಿದೆ. ಅವನು ಊಟಕ್ಕೆ ಹೋಗುವಾ ಅಂತ ಕರ್ಣಾನಂದಕರ ಮಾತು ಕಿವಿಯಲ್ಲಿ ಮೊರೆದು ಸ್ವಲ್ಪ ಉತ್ಸಾಹ ತುಂಬಿತು.

ನಾಲ್ಕೂ ಮುಕ್ಕಾಲಿಗೆ ಆಗಲೇ ಸಂಜೆ ಆರರ ಕತ್ತಲು ಆವರಿಸುತ್ತಿತ್ತು. ಊಟ ಅಂದವ ಸುಮಾರು ಐದೆಂಟು ನಿಮಿಷ ಡ್ರೈವ್ ಮಾಡುತ್ತಲೇ ಇದ್ದ. ಆಸೆ ತೋರಿಸಿ ಕೊನೆಗೆ ಅಮ್ಮಾನ್‌ವರೆಗೆ ಹೀಗೆಯೇ ಹೋಗಿಯೇ ಬಿಡುತ್ತಾನೇನೋ ಅಂದುಕೊಳ್ಳುವುದರಲ್ಲಿ ಒಂದು ಹೋಟೆಲ್ ಎದುರು ಗಾಡಿ ನಿಲ್ಲಿಸಿದ.

ಪ್ರಶಾಂತವಾದ ಗುಡ್ಡದ ಮೇಲಿನ ರೆಸ್ಟೊರೆಂಟ್. ಒಳಗೆ ಕಾಲಿಟ್ಟೊಡನೆಯೇ ನಗುಮೊಗದ ಸಿಬ್ಬಂದಿ ‘ಬಫೆ ಸಿದ್ಧವಿದೆ’ ಎಂದರು. ಅಲ್ಲಿದ್ದನ್ನೆಲ್ಲ ಒಮ್ಮೆ ಸರ್ವೆ ಮಾಡಿದೆ. ಹಸಿವು ಹೆಚ್ಚಾದಂತೆನಿಸಿತು! ಮೆಣಸಿನ ಸಾರಿನಂತ ಸೂಪು, ಹಬೆಯಾಡುವ ಅನ್ನ, ಹ್ಯಾರಿಸೆ ಮತ್ತು ಉಮ್ ಅಲಿ ಅನ್ನುವ ಅರಾಬಿಕ್ ಸಿಹಿ, ಖಾರ-ಉಪ್ಪು-ಹುಳಿಯಾದ ರುಚಿಕರ ನೂಡಲ್ಸ್ ಎಲ್ಲದರ ಮೇಲೆ ಮುಗಿಬಿದ್ದು ತಿಂದೆವು, ತಿಂದೆವು, ತಿಂದೆವು …. ಹೊಟ್ಟೆ ಬಿರಿಯುವಂತೆ, ಯಾವತ್ತೂ ಊಟವನ್ನೇ ಕಾಣದವರಂತೆ ತಿಂದೆವು. ಊಟ ಮುಗಿಸುವುದರಲ್ಲಿ ಐದೂವರೆ ಸಮಯವಾಗಿತ್ತು. ಊರಿಗಿಂತ ಮುಂಚೆ ವಾಡಿ ಮೂಸಾದ ಮೇಲೆಲ್ಲ ಕತ್ತಲಾವರಿಸಿ, ಇಡೀ ಊರು ದೀಪಗಳಿಂದ ಬೆಳಗುತ್ತಿತ್ತು …

ಉಪಸಂಹಾರ:

ಪೆಟ್ರಾದ 264 ಚದರ ಕಿಲೋಮೀಟರ್‌ಗಳನ್ನು ಒಂದು ದಿನದಲ್ಲಿ ನೋಡುವುದು ಕನಸಿನ ಮಾತು.

ಗ್ರೇಟ್ ಟೆಂಪಲ್, ಅರ್ನ್ ಟೂಂಬ್, 900 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾದ ಮೊನಾಸ್ಟರಿ, 800 ಮೆಟ್ಟಿಲು ಹತ್ತಿ ಹೋಗಬೇಕಾದ ಹೈ ಪ್ಲೇಸ್ ಆಫ್ ಸ್ಯಾಕ್ರಿಫೈಸ್, ಅಸಂಖ್ಯಾತ ಗೋರಿಗಳು, ಪೂರ್ಣಗೊಳ್ಳದ ಗೋರಿಗಳು, ಮ್ಯೂಸಿಯಂ, ದುಶಾರನ ದೇಗುಲ … ಇವನ್ನೆಲ್ಲ ನೋಡಲು ಕಡಿಮೆಯೆಂದರೂ ನಾಲ್ಕು ದಿನ ಬೇಕು. ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಿಂದ, ಕ್ರಿಸ್ತಶಕ ನಾಲ್ಕನೆಯ ಶತಮಾನದ ನಡುವೆ ಆದ ದೊಡ್ಡ ಭೂಕಂಪವೊಂದು ಅಲ್ಲಿನ ಅಣೆಕಟ್ಟು, ಕಾಲುವೆಗಳನ್ನೆಲ್ಲ ನಾಶ ಮಾಡಿ, ನೆಬಾಟಿಯನ್ನರ ನಂತರ ರೋಮನ್ನರು ಕಾಲಿಟ್ಟು, ಅದರೊಂದಿಗೆ ಕ್ರಿಶ್ಚಿಯನ್ ಧರ್ಮ ಕಾಲಿಟ್ಟು, ಆ ನಂತರ ಏಳನೆಯ ಶತಮಾನದಲ್ಲಿ ಮತ್ತೆ ಅರಬರ ವಶವಾಗಿ, ಮತ್ತೆ ಇಸ್ಲಾಂ ಮತ ಪ್ರಾಬಲ್ಯತೆ ಪಡೆದು, ಆ ನಂತರ ಈಗಿನ ಬೆಡೋಯಿನ್ ಜನಾಂಗ ಉಗಮವಾಗುವವರೆಗಿನ ಸುದೀರ್ಘ ಇತಿಹಾಸದ ಹೆಜ್ಜೆಗಳನ್ನು ನೋಡಲು ಒಂದು ದಿನ ಯಾವ ಮೂಲೆಗೂ ಸಾಲುವುದಿಲ್ಲ. ಇಷ್ಟೆಲ್ಲ ಆದರೂ ಪುರಾತತ್ವ ಇಲಾಖೆ ಹೇಳುತ್ತದೆ ‘ಪೆಟ್ರಾದಲ್ಲಿ ಉತ್ಖನನ ಆಗಿರುವುದು ಹೆಚ್ಚೆಂದರೆ ಶೇಕಡಾ 15 ಮಾತ್ರ … ಉಳಿದದ್ದು ಇನ್ನೂ ಭೂಮಿಯೊಳಗೇ ಉಳಿದಿದೆ’ ಎಂದು! ನಾವೆಂಬ ನಾವು ಎಷ್ಟು ಈ ಪ್ರಪಂಚದಲ್ಲಿ ಅದೆಷ್ಟು ತೃಣಸಮಾನರು!

ಎಂ.ಎಸ್. ರಾಮಯ್ಯ ಅವರಿಗೆ ಯಾರೋ ಹೇಳಿದ್ದರಂತೆ ‘ಎಲ್ಲ ಕಟ್ಟಿ ಮುಗಿಯಿತು ಅಂದ ದಿನ ನಿನಗೆ ಗಂಡಾಂತರವಿದೆ. ಹಾಗಾಗಿ ಯಾವಾಗಲೂ ಏನನ್ನಾದರೂ ಕಟ್ಟುತ್ತಲೇ ಇರು’ ಎಂದು. ಹಾಗಾಗಿ ಏನೂ ಇಲ್ಲದಿದ್ದರೆ ಕಟ್ಟಿದ್ದನ್ನೇ ಮತ್ತೆ ಕೆಡವಿ ಕಟ್ಟುತ್ತಾರೆಂದೂ, ಒಂದು ಗೋಡೆಯನ್ನಾದರೂ ಎಬ್ಬಿಸುತ್ತಿರುತ್ತಿರುತ್ತಾರೆಂದೂ ಅನೇಕ ದಂತಕಥೆಗಳು ನಿಮ್ಮ ಕಿವಿಗೂ ಬಿದ್ದಿರಬೇಕಲ್ಲವೇ?

ಅದೇ ರೀತಿ ಬಹುಶಃ ನನ್ನ ಹಣೆಯಲ್ಲೂ ‘ಹೋದ ಯಾವುದೇ ಜಾಗವನ್ನಾಗಲೀ ಪೂರ್ತಿ ನೋಡಿ ಮುಗಿಯಿತು’ ಅಂತ ಅನ್ನಿಸಿದ ದಿನವೇ ನಿನಗೆ ಗಂಡಾಂತರ ಕಾದಿದೆ ಅಂತ ಶಾಪ ಕೊಟ್ಟಿದ್ದಾರೇನೋ ಅನ್ನುವ ಅನುಮಾನ ಕಾಡುತ್ತಿದೆ! ಇಂಥ ಶಾಪವೊಂದು ನಿಜಕ್ಕೂ ನನ್ನ ಮೇಲೆ ಇದ್ದು, ನಾನು ಮತ್ತೆ ಜೋರ್ಡಾನಿಗೆ ಬಂದು ಪೆಟ್ರಾ ಪೂರ್ತಿ ನೋಡುವುದರ ಜೊತೆಗೆ, ಈ ಬಾರಿ ನೋಡಲಾಗದ ಅಕಾಬಾ, ವಾಡಿ ರಮ್ ಕೂಡಾ ನೋಡುವಂತಾಗಲಿ ಎನ್ನುವ ಪ್ರಾರ್ಥನೆ ನನ್ನದು … ಆಮೆನ್!

।ಇಲ್ಲಿಗೀಕಥೆ ಮುಗಿಯಿತು..।

‍ಲೇಖಕರು avadhi

August 21, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. ನಂ.ವಿಶ್ವ ನಾಥ

    ಅಂಗುಲ ಅಂಗುಲ ವಾಗಿ ಹೋಗಿ .ಬಂದಂತಾಯ್ತ.. ನೆನಪೆಲ್ಲವೂ ಮರುಕಳಿಸಿತು.ಪ್ರವಾಸ ಈಗ ಪೂರ್ತಿ ಆದಂತಿದೆ.ಇದೇ ರೀತಿ ಮುಂದಿನ ಪ್ರವಾಸ ಗಳನ್ನೂ ಮೆಲಕು ಹಾಕುವ ಕಾತುರತೆ ಹೆಚ್ಚಾಗಿದೆ

    ಪ್ರತಿಕ್ರಿಯೆ
  2. Rekha M S

    Thank you so much for a wonderful trip…nimmondigina namma prayana kutuhalakaryagi haagu vismayavaagittu….ನಾವೆಂಬ ನಾವು ಎಷ್ಟು ಈ ಪ್ರಪಂಚದಲ್ಲಿ ಅದೆಷ್ಟು ತೃಣಸಮಾನರು!!!! So true….iruvaga mooru dinadalli yavudakkella estella horaadutteve…..omme aalochisalebeku….adakke desha suttu koosha oodu anta hiriyaru helirdu alva..mattondu prayanada kanasu kaanutta……

    ಪ್ರತಿಕ್ರಿಯೆ
  3. RENUKA NIDAGUNDI

    ಅಮೆನ್…! ನೀನು ಅಷ್ಟುದೂರ ಕಾಲೆಳೆದುಕೊಂಡು ಕ್ರಮಿಸಿದ ದೃಶ್ಯವನ್ನೇ ಕಲ್ಪಿಸಿಕೊಂಡು…..ಆಹ್ಹ್! ಅನುತ್ತಿದ್ದೇನೆ… ಎನೆಲ್ಲ ನೆನಪುಗಳು, ಪೆಟ್ರಾ..ಜೋರ್ಡಾನಿನ ಕಥನ ಪುಸ್ತಕರೂಪವಾಗಲಿ ಭಾರತಿ.,.

    ಪ್ರತಿಕ್ರಿಯೆ
    • ಭಾರತಿ ಬಿ ವಿ

      ಥ್ಯಾಂಕ್ಸ್ ರೇಣು …
      ಪುಸ್ತಕ ಮಾಡಬೇಕು …

      ಪ್ರತಿಕ್ರಿಯೆ
  4. Shruthi B R

    ನಿಮ್ಮೊಂದಿಗೆ ನೋಡಿದ ಪೆಟ್ರಾ ಜೋರ್ಡಾನ್ ಮನಮೋಹಕವಾಗಿತ್ತು

    ಪ್ರತಿಕ್ರಿಯೆ
  5. ನಗುವ ಗುಲಾಬಿ ಹೂವು

    lovely, yella epidosde ondhe saarige odhi mugiside, thank you for sharing…. nannallu pravasada ase huttisidakke one more thanks…

    ಪ್ರತಿಕ್ರಿಯೆ
  6. Mamatha Arsikere

    ಎಳೆಎಳೆಯಾಗಿ , ಬಿಡಿಬಿಡಿಯಾಗಿ ಪೆಟ್ರಾ ಹಾಗೂ ಅದರ ಸಾಧ್ಯತೆ ತಿಳಿಸಿದ್ದೀರಿ . ದೆಹಲಿ ಪ್ರವಾಸದಲ್ಲಿ ನಮಗೂ ಇದೇ ಅರೆ ಪ್ರಜ್ಞಾಸ್ಥಿತಿ ಆವರಿಸಿತ್ತು . ಇದನ್ನ ಓದ್ತಾ ಅದೇ ನೆನಪಿಗೆ ಬಂದು ಸುಸ್ತಾಗಿಬಿಟ್ಟೆ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: