ಮಾಸ್ತಿಯವರನ್ನು ಕಂಡ ಆ ಘಳಿಗೆ..

ಅವಧಿಯಲ್ಲಿ  ‘ಬಿ.ಆರ್.ಎಲ್ ಕಂಡ ಮಾಸ್ತಿ ಮನೆ‘ ಚಿತ್ರ ಸಂಪುಟ ನೋಡುತ್ತಿದ್ದಂತೆ

ನನಗೆ ೪೩ ವರ್ಷದ ಹಿಂದಿನ ಈ ನೆನಪು ಧುತ್ತೆಂದು ಎದ್ದು ಬಂದಿತು

ಎಸ್ ಪಿ ವಿಜಯಲಕ್ಷ್ಮಿ

ಅದು 1973ನೇ ಇಸವಿ. ಭದ್ರಾವತಿಯ ಭದ್ರಾಕಾಲೇಜಿನಲ್ಲಿ ಬಿ.ಎ.ಕೊನೆಯ ವರ್ಷದಲ್ಲಿದ್ದೆ.

ಆಗ ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲೆಯಿಂದ ಕಾಲೇಜು, ಪಿಯೂಸಿ, ಪ್ರೌಢಶಾಲೆಗಳಿಗೆ ಪ್ರಬಂಧಸ್ಪರ್ಧೆ ಏರ್ಪಡಿಸಿತ್ತು. ಈ ಸ್ಪರ್ಧೆಗೆ ನನ್ನ ಕಾಲೇಜು ನನ್ನನ್ನು ಕಳಿಸಿಕೊಟ್ಟಿತ್ತು.

ಸ್ಪರ್ಧೆಯ ವಿಷಯ ಈಗ ಮರೆತಿದ್ದೇನೆ. ಕಮಲಾ ನೆಹರೂ ಕಾಲೇಜಿನಲ್ಲಿ ಸ್ಪರ್ಧೆ ಇತ್ತು. ನಾನು ಒಬ್ಬಂಟಿಯಾಗಿ ಎಲ್ಲಿಯೂ ಹೆಚ್ಚಾಗಿ ಹೋಗದವಳು ಅಳುಕುತ್ತಲೇ ಹೋದೆ. ಬಹುಷಃ ಒಂದು ಐವತ್ತು ಸ್ಪರ್ಧಿಗಳಿದ್ದಿರಬಹುದು ಅಲ್ಲಿ. ಪರೀಕ್ಷೆ ನಮ್ಮ ವಾರ್ಷಿಕ ಪರೀಕ್ಷೆಯಂತೇ ಇತ್ತು. ಪರೀಕ್ಷಕರು ಬಂದರು. ಪ್ರಬಂಧ ಬರೆಯಲು ಹಾಳೆ ಕೊಟ್ಟರು. ಬಹಳ ಉತ್ಸಾಹದಲ್ಲಿ ಶುರುಮಾಡಿದೆ.

masti with vijayalakshmiಒಂದರ ಮೇಲೊಂದು ಹಾಳೆ ಪಡೆಯುತ್ತ ಹದಿನಾರು ಹಾಳೆಗಳಾಯ್ತು. ತುದಿಯಲ್ಲಿ ಕುಳಿತಿದ್ದ ನನ್ನ ಬರವಣಿಗೆಯನ್ನು, ಪರೀಕ್ಷಾ ಹಾಲಿನ ತುಂಬ ಓಡಾಡುತ್ತಿದ್ದ ಪರೀಕ್ಷಕರು ಗಮನಿಸುತ್ತಲೇ ಇದ್ದರು. ಸಮಯ ಮುಗಿಯಿತು. ‘ಎಲ್ಲರೂ ಹಾಳೆಗಳನ್ನು ಟ್ಯಾಗ್ ಮಾಡಿ ‘ ಎಂದರು. ಈಗ ನನ್ನ ತಪ್ಪು ನನಗರ್ಥವಾಗಿತ್ತು. ಬರೆವ ಉತ್ಸಾಹದಲ್ಲಿ ಹಾಳೆಗಳಿಗೆ ಕ್ರಮಾಂಕ ಹಾಕುವುದನ್ನೇ ಮರೆತಿದ್ದೆ. ಇದುವರೆಗೆ ಕಾಣದಿದ್ದ ಭಯ, ಆತಂಕ, ಒತ್ತಡ ಎಲ್ಲ ಒಟ್ಟೊಟ್ಟಿಗೆ ಆಗಿ ಮೈ ಬೆವರು ಕಿತ್ತಿತು.

ಯಾವಾಗ ನಮ್ಮೊಳಗಿನ ಶಾಂತತೆ ಕದಡಿ, ಮನಸ್ಸೆಂಬ ಕೊಳದ ನೀರು ಕಲಕಿ ಬಿಡುವುದೋ ಆಗ ಬುದ್ಧಿ ಮುಂದೋಡುವುದೇ ಇಲ್ಲ. ಓಡಿದರೂ ಸಮರ್ಥವಾಗಿ ಓಡೋಲ್ಲ. ಎಲ್ಲ ಕಲಸುಮೇಲೋಗರ…!

ನನಗಾಗಿದ್ದು ಇದೇ. ತಿರುಗಾಮುರುಗಾ ಜೋಡಿಸಲು ಹೋದರೂ, ಒಂದಕ್ಕೊಂದು ತಾಳೆಯೇ ಆಗುತ್ತಿಲ್ಲ. ಮುಖ ಕೆಂಪಾಗಿ, ಬಿಸಿಯಾಗಿ ಪರದಾಡುತ್ತಿರುವಾಗಲೇ, ಎಲ್ಲರ ಇದಿರು ಕಪ್ ಮತ್ತು ಸಾಸರ್ ನಲ್ಲಿ ಹಬೆಯಾಡುವ ಕಾಫಿ ಬಂದಿತ್ತು. ನನಗೋ ಕಾಫಿ ಜೀವ, ಈಗ ಅಗತ್ಯವೂ ಇತ್ತು. ಆದರೆ, ಎರಡು ನಿಮಿಷದಲ್ಲಿ ಉತ್ತರಪತ್ರಿಕೆ ಪರೀಕ್ಷಕರಿಗೆ ಕೊಡಬೇಕು. ಕಾಫಿ ಬಟ್ಟಲಿನ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ಒಳಗಿಂದ ಅಳು ಒತ್ತರಿಸಿಕೊಂಡು ಬರುತ್ತಿತ್ತು. ನನ್ನ ಬರಹದ ಬಗ್ಗೆ ನನಗೆ ತುಂಬ ತೃಪ್ತಿಯಿತ್ತು. ಆದರೆ, ಈ ಎಡವಟ್ಟು ಸರಿಪಡಿಸದೆ ಕೊಡಲು ಸಾಧ್ಯವೇ ಇಲ್ಲ. ನನ್ನ ಸ್ಪರ್ಧೆ ನಿರರ್ಥಕವಾಯ್ತು ಎಂದೇ ಬಸವಳಿದುಬಿಟ್ಟೆ.

 

ಬಹುಷಃ, ನನ್ನ ಬರವಣಿಗೆಯನ್ನು ಗಮನಿಸುತ್ತಲೇ ಬಂದಿದ್ದ ಪರೀಕ್ಷಕರು, ನನ್ನ ಈ ಪೇಚಾಟವನ್ನೂ ಗಮನಿಸಿರಬೇಕು. ಹತ್ತಿರ ಬಂದರು. ‘ನಿನಗೇನೋ ತೊಂದರೆಯಾಗಿದೆ. ಮೊದಲು ಕಾಫಿ ಕುಡಿದು ಸುಧಾರಿಸ್ಕೋ. ಭಯ ಬೇಡ. ಟ್ಯಾಗ್ ಮಾಡೋಕೆ ಎರಡು ನಿಮಿಷ ಹೆಚ್ಚಿಗೆ ಕೊಡ್ತೀನಿ. ಒಳಗಿನ ಒತ್ತಡ ಕಮ್ಮಿ ಮಾಡ್ಕೋ. ನಿರಾಳವಾಗಿ, ಶಾಂತಚಿತ್ತದಿಂದ ಪೇಪರ್ ಜೋಡಿಸು’ ಎಂದರು.

ಅವರ ಮಾತು ಧೈರ್ಯ ನೀಡಿತು. ತಕ್ಷಣ ಕಾಫಿಲೋಟ ಕೈಗೆತ್ತಿಕೊಂಡೆ. ಹನಿಹನಿ ಹೀರುತ್ತಲೇ ಬಲಗೈನಿಂದ ಹಾಳೆಯ ತುದಿ, ಮರುಹಾಳೆಯ ಮೊದಲ ಪದಗಳನ್ನು ಜೋಡಿಸುತ್ತಾ ಬಂದಾಗ ಕೊನೆಗೂ ಗೆದ್ದಿದ್ದೆ…..

masti by darbeವಾರದ ನಂತರ ಫಲಿತಾಂಶ ಪ್ರಕಟವಾಯ್ತು. ಕಾಲೇಜು ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದ್ದೆ. ಕಾಲೇಜು ಪ್ರೇಯರ್ ಸಮಯದಲ್ಲಿ ಈ ಸುದ್ದಿಯನ್ನು ಪ್ರಿನ್ಸಿಪಾಲರು ಹೊರಗೆಡವಿದರು. ಕಸಾಪದಿಂದ ನನಗೆ ಲೆಟರ್ ಬಂದಿತು. ಇದೆಲ್ಲಕ್ಕಿಂತ ತುಂಬಾ ಖುಷಿಯಾದ ಸಂಗತಿಯೆಂದರೆ, ತಿಂಗಳ ನಂತರ ಶಿವಮೊಗ್ಗೆಯ ‘ಕರ್ನಾಟಕ ಸಂಘ’ದಲ್ಲಿ ನಡೆದ ಬೃಹತ್ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದವರು ಮತ್ತಾರೂ ಅಲ್ಲ, ‘ಕನ್ನಡದ ಆಸ್ತಿ’ ಶ್ರೀಯುತ ‘ಮಾಸ್ತಿ ವೆಂಕಟೇಶ ಐಯ್ಯಂಗಾರ್’ ಅವರು. ನಾನಂತೂ ಈ ಸುದ್ದಿ ತಿಳಿದು ಭೂಮಿಯ ಮೇಲೇ ಇದ್ದಂತಿರಲಿಲ್ಲ.

ಆ ದಿನ ಆ ದೊಡ್ಡಹಾಲ್ ನಲ್ಲಿ, ಸುಂದರವಾದ ವೇದಿಕೆಯಲ್ಲಿ ಸರಳ ಸಜ್ಜನರಾಗಿ ಮಗುವಿನಂತೆ ನಗು ನಗುತ್ತ ಕುಳಿತಿದ್ದರು ಮಾಸ್ತಿಯವರು. ನನ್ನ ಹೆಸರು ಕೇಳಿತು ಮೈಕಿನಲ್ಲಿ. ಡವಡವಗುಟ್ಟುವ ಎದೆಯನ್ನು ಸಂಭಾಳಿಸಿಕೊಳ್ಳುತ್ತ ವೇದಿಕೆಗೆ ಹತ್ತಿದೆ. ಪುಸ್ತಕ ಹಿಡಿದ ಮಾಸ್ತಿಯವರನ್ನೇ ನೋಡುತ್ತ, ಪಡೆಯಲು ನಾನೂ ಕೈಚಾಚಿದೆ.

ಆಗ ಅವರು ನನಗೆ ಹೇಳಿದ್ದು, ‘ನೀನು ಪ್ರಬಂಧವನ್ನು ತುಂಬಾ ಚೆನ್ನಾಗಿ ಬರೆದಿದ್ದೀ ಎಂದು ನಂಗೆ ಗೊತ್ತಾಯ್ತು. ಬರವಣಿಗೆ ಒಂದು ಶಕ್ತಿ. ಅದು ಇಲ್ಲಿಗೇ ನಿಲ್ಲಿಸ್ಬೇಡ. ಮುಂದಕ್ಕೂ ಏನಾದ್ರೂ ಬರಿಯೋ ಅಭ್ಯಾಸ ಮಾಡ್ಕೋ…’ ಭಯ, ಆನಂದ, ಭಕ್ತಿ, ಗೌರವ ಹೀಗೇ ಏನೇನೋ ಮಿಳಿತ ಭಾವಗಳಲ್ಲಿ ಒಂದೇ ಒಂದು ಉತ್ತರ ಕೊಡಲೂ ತೋಚದೆ, ‘ಹ್ಞೂಂ…’ಎಂದಷ್ಟೇ ಹೇಳಿದೆ. ಅಬ್ಬಾ, ಎಷ್ಟೊಂದು ಸಾರ್ಥಕಭಾವ ಆದಿನ ಅಂದ್ರೆ, ಈಗಲೂ ನೆನೆಸಿಕೊಂಡ್ರೆ ನನ್ನ ಮನಸ್ಸು ಆ ಸಮಾರಂಭದ ಕ್ಷಣಗಳಲ್ಲೇ ಮುಳುಗಿಹೋಗುವುದು.

ಅವರ ಈ ಮಾತುಗಳು ನನ್ನನ್ನು ಆಗಾಗ ಕಾಡುತ್ತಲೇ ಇತ್ತು. ಬಹುಷಃ, ಭೂಮಿಗೆ ಬಿದ್ದ ಬೀಜಕ್ಕೆ ಮೊಳೆಯಲು ಹದವಾದ ಸಮಯದ ಅಗತ್ಯವಿರುವಂತೆ, ನನ್ನೊಳಗೆ ಬಿದ್ದ ಆ ಪ್ರೇರಕಬೀಜ ಕಡೆಗೂ ತಡವಾದರೂ ಮೊಳಕೆ ಒಡೆಯಿತು. ಹತ್ತುವರ್ಷಗಳ ಹಿಂದೆ ಬರವಣಿಗೆಯ ಸಸಿ ಎದ್ದು , ಒಂದಷ್ಟು ಎಲೆಗಳನ್ನಾದರೂ ಕುಡಿಯೊಡೆಸಿದೆ. ಈ ಎಲ್ಲಕ್ಕೂ ಕಾರಣ, ಅಂದು ಕಂಡ ಆ ‘ಮಹಾನುಭಾವ’…

‍ಲೇಖಕರು Admin

June 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sangeeta Kalmane

    ಮೇಡಂ ನಿಮ್ಮ ಮಾತು ನಿಜ. ಎಲ್ಲದಕ್ಕೂ ಪ್ರೇರಣಾ ಶಕ್ತಿ ಬಡಿದೆಬ್ಬಿಸಬೇಕು.

    ಪ್ರತಿಕ್ರಿಯೆ
  2. ಆದಿವಾಲ ಗಂಗಮ್ಮ

    ಆಹಾ..ಎಂಥ ಧನ್ಯತೆ, ಸಾರ್ಥಕತೆ.ನಾನು ಊಹಿಸಿಕೊಳ್ಳಬಲ್ಲೆ ಆಗಿನ ನಿಮ್ಮ ಮನಸ್ಥಿತಿ, ತುಂಬಾ ಚೆನ್ನಾಗಿ ಆ ಸಂದರ್ಭವನ್ನು ವಿವರಿಸಿ ಬರೆದಿದ್ದೀರಿ ವಿಜಯಲಕ್ಷ್ಮಿಯವರೆ,ನಮಸ್ಕಾರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: