ಝುಣಕಾ, ಝುಣಕದೊಡಿ, ಉದುರು ಪಿಟ್ಲಾ.. ಪಿಟ್ಲಾ..

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ…

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ಝುಣಕಾ, ಝುಣಕದೊಡಿ, ಉದುರು ಪಿಟ್ಲಾ.. ಪಿಟ್ಲಾ.. ಹಿಂಗೆಲ್ಲ ಮಾತಾಡಕಾ ಶುರು ಮಾಡಿದ್ರ ನಮ್ಮ ಪಂಢರಪುರದ ಪಂಢರಿನಾಥ, ವಿಟ್ಟಲಾ ಸಹ ಪಿಟ್ಲಾ ಪಿಟ್ಲಾ ಅಂತಾರಂತ. ಶಿರಡಿಯ ಸಾಯಿಬಾಬಾ ಸಹ ಭಾಕರ್‌ ಪಿಟ್ಲಾ, ಭಾಕರ್‌ ಝುಣಕಾ ಅಂತಾರಂತ.

ಹೌದು ಎಲ್ಲ ಧರ್ಮದವರೂ ನಂಬುವ ಈ ಭಕ್ತವತ್ಸಲ ದೇವರಿಬ್ಬರೂ ಝುಣಕಾ ಪ್ರಿಯರು. ಅಗ್ದಿ ಕಡಿಮಿ ಸಾಮಗ್ರಿಗಳಿಂದ ಅತಿ ರುಚಿಯಾದ ಖಾದ್ಯ ತಯಾರಿಸಬಹುದು ಅಂತಿದ್ರ ಅದು ಝುಣಕಾ ಒಂದೇನೆ. ಮತ್ತ ಅನ್ನಕ್ಕು, ರೊಟ್ಟಿಗೂ, ಚಪಾತಿಗೂ.. ಎಲ್ಲದಕ್ಕೂ.. ತಾಳಿಯಾಗೂದು ಇದೇ ಝುಣಕಾನೆ.  ಅಗ್ದಿ ದೂರಲೂ, ಆರ್ತ್ರನಾಗಿ ಬೇಡಲೂ, ಆರ್ದ್ರನಾಗಿ ಕಣ್ಣೀರು ಹಾಕಲೂ, ನಮ್ಮ ಪ್ರೀತಿಯ ದೇವರಿದ್ದಂತೆ! ದೇವರಿಗೆ ಪ್ರಿಯ ಈ ಝುಣಕಾ.

ಮನ್ಯಾಗ ಕಡಲಿಬ್ಯಾಳಿ ಘಮ್ಮಂತ ಹುರುದು, ಬೆನ್ನು ಕೆಂಪಾಗುಮುಂದ, ಅವನ್ನು ನೆರಳಾಗಿ ಆರಿಸಿ, ಬೀಸಾಕ ಕಳಸ್ತಾರ. ಈ ಹಿಟ್ಟು ಅಗ್ದಿ ನುಣ್ಣಗೂ ಇರೂದಿಲ್ಲ. ತರಿತರಿನೂ ಇರೂದಿಲ್ಲ. ಮಧ್ಯಮ ಮಂದ.. ಇದ್ದಂಗ. ಹಂಗ ಬೀಸಿ ತಂದ ಹಿಟ್ಟನ್ನು ಜರಡಿ ಹಿಡೀತಾರ. ಅಗ್ದಿ ಸಣ್ಣ ಹಿಟ್ಟು ಝುಣಕದೊಡಿ ಮಾಡಾಕ ಬಳಸ್ತಾರ. ಇಲ್ಲಾಂದ್ರ ತಿಳಿ ಝುಣಕಾ ಮಾಡಾಕ ಬಳಸ್ತಾರ. ತರಿತರಿ ಇರೂದನ್ನ ಉದುರು ಝುಣಕಾ ಅಥವಾ ಪಿಟ್ಲಾ ಮಾಡಾಕ ಬಳಸ್ತಾರ.

ದೇವರಿದ್ದಂಗ ಆಪದ್ಬಾಂಧವ ಹಿಟ್ಟಿನ ಪಲ್ಯೆ ಇದು. ಯಾಕಂದ್ರ ತರಕಾರಿ ಇರಲಿ, ಬಿಡಲಿ, ಕಾಳು ಕಡಿ ಇರಲಿ ಬಿಡಲಿ, ಮನ್ಯಾಗ ಕಡಲಿ ಹಿಟ್ಟಿದ್ರ ಸಾಕು. ಸರ್ವ ಖಾದ್ಯಗಳಿಗೂ ಸಾಲುವ ಸೈಡರ್‌ ಇದು. ಮಾಡೂದೂ ಅಗ್ದಿ ಸರಳ.

ಮೊದಲು ಬುತ್ತಿಗೆ ಕಟ್ಟುವ ಉದುರು ಪಿಟ್ಲಾ ಬಗ್ಗೆ ಮಾತಾಡೂನು. ಈ ಕಡೆ ನವರಾತ್ರಿ, ಶ್ರಾವಣ ಮಾಸ, ದೀಪಾವಳಿ ಸಮಯಕ್ಕ ಪಾದಯಾತ್ರೆಗೆ ಹೊರಡ್ತಾರ. ತುಳಜಾಪುರ ಭವಾನಿ, ಘತ್ತರಗಿ ಭಾಗಮ್ಮ, ಪಂಢರಪುರದ ವಿಟ್ಠಲ.. ಹಿಂಗ. ಪಾದಯಾತ್ರೆಗೆ ಹೋಗುಮುಂದ, ಮೊದಲೆರಡು ದಿನಗಳಿಗೆ ಉದುರು ಪಿಟ್ಲಾ, ರೊಟ್ಟಿ ಬುತ್ತಿಯೂಟ ಇರ್ತದ. ಯಾಕಂದ್ರ ಇದು ಎರಡು ದಿನ ಆದ್ರೂ ಕೆಡೂದಿಲ್ಲ. ಮೂರನೆ ದಿನದ ತನ ಉಳಿಯೂದೆ ಇಲ್ಲ. ಹಂಗಾಗಿ ಕೆಡ್ತದೊ ಇಲ್ಲೋ ಅಂತ ಹೇಳಾಕ ಆಗೂದಿಲ್ಲ.

ಸಾಕಷ್ಟು ಉಳ್ಳಾಗಡ್ಡಿ ಹೆಚ್ಚಬೇಕು. ಹಿಂಗ ಹೆಚ್ಚೂಮುಂದ ಅಳ್ತಾರೊ, ಅಳೂಮುಂದ ಹೆಚ್ತಾರೊ ಗೊತ್ತಿಲ್ಲ. ಆದ್ರ ಹೆಚ್ಗೊಂತ ಕಣ್ಣೀರು ಹಾಕೂದಂತೂ ಖರೆ. ಹಂಗ ಅತ್ಗೊಂತ, ಅತ್ಗೊಂತ, ಉಳ್ಳಾಗಡ್ಡಿ ಸಿಪ್ಪಿ ಬಿಚ್ಕೊಂತಲೇ ಬಯಲಾಗ್ತಾವ ಮನಸಿನ ಭಾವನೆಗಳು. ನಮ್ಮ ಹತಾಶೆ, ದುಃಖ, ದೂರು ಏನೇ ಇರಲಿ, ಇವೆಲ್ಲವೂ ಈ ಕಣ್ಣೀರಿನೊಂದಿಗಿಳಿದು ನಿರಾಳ ಆಗೂದಂತೂ ಖರೆ.

 ಹಿಂಗ ಹೆಚ್ಚಿದ ಉಳ್ಳಾಗಡ್ಡಿಯನ್ನು, ಎಣ್ಣಿ ಒಗ್ಗರಣಿಯೊಳಗ ಬಾಡಸ್ತಾರ. ಇವುಗಳ ಜೊತಿಗೆ ಸಾಸಿವಿ, ಜೀರಗಿ, ಇಂಗು, ಕರಿಬೇವು ಎಲ್ಲ ಗರಿಗರಿ ಅನ್ನೂಮುಂದ ಬೆಳ್ಳನೆಯ ಈರುಳ್ಳಿ ಒಗ್ಗರಣಿಗೆ ಹಾಕೂದು. ಸ್ವಲ್ಪ ಹಸಿ ಇರೂಮುಂದ ಹುಣಸೀಹಣ್ಣು ನೆನೆಸಿಟ್ಟ ಹುಳಿಯನ್ನು ಇದಕ್ಕ ಹಿಂಡ್ಕೊಂತ ಹೋಗೂದು. ಈ ಹುಳಿ ಹೀರ್ಕೊಂಡು, ಮತ್ತ ಎಣ್ಣಿಯೊಳಗ ಬೇಯುಮುಂದ, ಅಚ್ಚು ಖಾರದ ಪುಡಿ ಮತ್ತು ಬೆಲ್ಲನೂ ಹಾಕೂದು. ಇವೆಲ್ಲವೂ ಒಂದು ಗೊಜ್ಜಿನ ಹಂತಕ್ಕ ಬಂದಾಗ ಕಡಲಿ ಹಿಟ್ಟು ಒಂದು ಕೈಲಿ ಉದುರಸ್ಕೊಂತ, ಇನ್ನೊಂದು ಕೈಲೆ ಕದಡಕೊಂತ ಬರಬೇಕು. 

ಕಡಲಿಹಿಟ್ಟು ಒಂಥರಾ ಜಿಗುಟುತನದ ಗುಣ ಇರ್ತದ. ಅದಕ್ಕ ನೀವು ಕೈ ಆಡಸ್ಕೊಂತ, ಅದರ ಕಡೆನೆ ಗಮನ ಕೊಡಲಿಲ್ಲಂದ್ರ, ಅಕ್ಕರೆಯಿಂದ ಅದಕ್ಕಷ್ಟೇ ನೋಡಲಿಲ್ಲಂದ್ರ ಗಂಟುಗಂಟಾಗಿ, ನಿಮಗ ಅಡುಗೆ ಮಾಡುವ ಹದವೇ ಗೊತ್ತಿಲ್ಲ ಅನ್ನೂಹಂಗ ಮರ್ಯಾದಿ ಕಳೀತದ. ಎಲ್ಲ ಬಾಂಧವ್ಯಗಳೂ ಹಂಗೆನೆ. ರೇಷ್ಮೆಯ ದಾರವಿದ್ದಂಗ. ಒಂದು ಸಣ್ಣ ಗಂಟೂ ಅಲ್ಲೊಂದು ಬಗೆಹರಿಯದ ಗುರುತು ಉಳಿಸುವಂತೆ.. 
ಇರಲಿ ಹೊಳ್ಳಿ ಝುಣಕಕ್ಕ ಬರೂನು. ಹಿಂಗ ಹಿಟ್ಟು ಉದುರಿಸಿಕೊಂಡು ಹೊಂಟಾಗ, ಉಳ್ಳಾಗಡ್ಡಿಯ ಪ್ರತಿಚೂರಿಗೂ ಈ ಕಡಲೆಹಿಟ್ಟು ಅಂಟ್ಕೊಂತದ. ಘಮ್ಮಂತ ವಾಸ್ನಿ ಬರ್ತದ. ಕಾವು ಕಡಿಮಿ ಮಾಡಿ, ಕೈ ಆಡಸ್ಕೊಂತ ಇದ್ರ, ಕಡಲಿಹಿಟ್ಟಿನ ವಾಸನಿ ಮನಿತುಂಬಾ ಹರಡಿದಾಗ, ಎಲ್ಲವೂ ಕಡು ಕಂದು ಬಣ್ಣಕ್ಕ ಬಂದಾಗ, ಹಿಟ್ಟು ಕೈಗೆ ಅಂಟಿಕೊಳ್ಳದೇ ಇದ್ದಾಗ ಇದು ಬೆಂದದ ಅಂತರ್ಥ.

ಇನ್ನ ಇದನ್ನ ರೊಟ್ಟಿ, ಚಪಾತಿ ಜೊತಿಗೆ ಸವಿಯಬಹುದು. ಈ ಝುಣಕದ ಜೊತಿಗೆ ಮೊಸರು, ಗುರೆಳ್ಳುಪುಡಿ, ಸೆಂಗಾಪುಡಿ, ಹುರದಿದ್ದ ಸೇಂಗಾ, ಮೂಲಂಗಿ ಸೊಪ್ಪಿನ ಪಚಡಿ ಇದ್ರಂತೂ ಮಸ್ತ್‌ ಮಜಾ. ಅವಾಗ ಗೊತ್ತಾಗೂದು, ದೇವರಿಗೆ ಯಾಕಿದು ಇಷ್ಟ ಅಂತ.

ಇನ್ನ ಝುಣಕದ ಒಡಿ ಮಾಡುವ ಹದವೇ ಬೇರೆ. ಒಂದು ಪಾತ್ರಿಯೊಳಗ ಕಡಲಿಹಿಟ್ಟನ್ನು ದೋಸೆ ಹಿಟ್ಟಿನ ಹದಕ್ಕ ಕಲಸ್ಕೊಂಡು, ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ, ಕರಿಬೇವು, ಸಾಸಿವಿ, ಜೀರಗಿ ಒಗ್ಗರಣಿಗೆ ಅರಿಷಿನ ಹಾಕಿ, ಈ ಹಿಟ್ಟನ್ನು ಕಲಕಿಕೊಂತ ಹೋಗಬೇಕು. ಅದೊಂದು ಹದಕ್ಕ ಬರೂಮುಂದ ಎಣ್ಣೀ ಹಾಕ್ಕೊಂತ ಹೋಗಬೇಕು. ಕಡಲೆ ಹಿಟ್ಟಿನೊಳಗ ಒಂದು ಕುದಿ ಬಂದು, ಕುದಿಬಿಂದು ಪಾತ್ರೆಯ ನಟ್ಟನಡಬರಕ, ಭ್ರೂಮಧ್ಯಕೇಂದ್ರದ್ಹಂಗ ದುಂಡಗೆ ಒಡಿಯೂಮುಂದ, ಒಂಚೂರು ಮುಚ್ಚಿಡಬೇಕು. ಗಂಟಿಲ್ಲದೇ ಕಲಕೂದು ಒಂದು ಕಲಾನೂ ಹೌದು. ವಿಜ್ಞಾನವೂ ಹೌದು. ಹಿಂಗ ಇದನ್ನ ಕುದಿಯಾಕ ಬಿಟ್ಟು, ಆ ದುಂಡನೆಯ ರಂಧವ್ರೂ ಮುಚ್ಚಿ ಒಂದು ಹಂತದೊಳಗ ಒಂದು ಲೆವಲ್ಲಿಗೆ ಬರೂದ್ರೊಳಗ, ಒಂದು ತಾಟಿಗೆ ಎಣ್ಣಿ ಅಥವಾ ತುಪ್ಪ ಸವರಬೇಕು. 

ಹಂಗ ಎಣ್ಣಿ ಹಚ್ಚಿದ ತಾಟಿನ ಮೇಲೆ ಒಂದು ಹದದೊಳಗ ಈ ಝುಣಕಾ ಸುರುವುಕೊಂತ ಬರಬೇಕು. ಅಗ್ದಿ ಚಂದಗೆ ತಾಟಿನ ತುಂಬ, ಮೈ ಹರವಿಕೊಂಡು ಮಲಗಿದ ಈ ಝುಣಕದ ಒಡಿಗೆ, ಇನ್ನು ಅಲಂಕರಿಸುವುದೇ ಚಂದದ ಕೆಲಸ. 

ಬಿಸಿ ಇದ್ದಾಗಲೇ, ಚಂದನೆಯ ಹೆಣ್ಮಗುವಿನ ಕೆನ್ನೆಯ ಮೇಲಿನ ದೃಷ್ಟಿಬೊಟ್ಟಿನಂತೆ ಕರಿ ಎಳ್ಳುಗಳನ್ನು ಉದುರಿಸಬೇಕು. ಹಳದಿ ಬಣ್ಣದ ಮೇಲಿನ ಈ ಕರಿಚುಕ್ಕೆಗೆ ದೃಷ್ಟಿಯಾಗದಿರಲಿ ಅಂತ ಬಿಳೀ ಕೊಬ್ಬರಿ ತುರಿ ಉದುರಿಸಬೇಕು. ಕರಿಬಿಳಿ ಹಳದಿ ವರ್ಣ ವೈವಿಧ್ಯಕ್ಕೆ ಕೊತ್ತಂಬರಿಸೊಪ್ಪಿನ ವರ್ಣ ವೈವಿಧ್ಯ ಇರಲಿ ಅನ್ನೂಹಂಗ ಸಣ್ಣಗೆ ಹೆಚ್ಚಿದ್ದನ್ನೂ ಉದುರಿಸಬೇಕು. 

ರಾಣಿ ಗಾಯತ್ರಿ ದೇವಿ ಉಡ್ತಿದ್ದ ಶಿಫಾನ್‌ ಸೀರಿಯ ವಿನ್ಯಾಸದಂತೆ ಈ ಇಡೀ ವರ್ಣವೈವಿಧ್ಯ ಕಂಗೊಳಸ್ತದ. ಅವಾಗ ತಣ್ಣಗ ತಣಿಯಾಕ ಸುಮ್ನ ಬಿಟ್ಬಿಡಬೇಕು. ಬಿಸಿ ಹೊರಮೈಗೆ ಇವೆಲ್ಲ ಅಂಟ್ಕೊಂಡಾಗ ಒಂದು ಚಮಚೆಯಿಂದ ಇಲ್ಲಾಂದ್ರ ಚಾಕುವಿನಿಂದ ಉದ್ದುದ್ದ ಗೆರೆಗಳನ್ನು ಕೊರೆಯಬೇಕು. ನಂತರ ಅಡ್ಡಡ್ಡ ಕೊರೆಯಬೇಕು. ವಜ್ರಾಕಾರದ ಈ ಬಿಲ್ಲೆಗಳನ್ನು ನೋಡಿದೊಡನೆ ಬಾಯೊಳು ನೀರೂರ ತೊಡಗುತ್ತದೆ.

ಮಂದವಾದ ಹಿಟ್ಟಿನ ಪಲ್ಯಕ್ಕೆ ಎಳೆ ಮೆಣಸಿನಕಾಯಿಕ ಖಾರ, ಕೊಬ್ಬರಿಯ ಸ್ವಾದ, ಎಳೆನಿಂಬೆಯ ಘಮ ಮತ್ತು ನವಿರಾದ ಹುಳಿ. ಮೃದುಕೋಮಲವಾದ ಸ್ವರೂಪ.. ಒಟ್ಟಿನಲ್ಲಿ ನೋಡಿದೊಡನೆ ಹಾಗೆಯೇ ತಿನ್ನುವಂತೆನಿಸುತ್ತದೆ.

ಇದೇ ಝುಣಕಾನ್ನ ತಿಳಿ ಮಾಡಿದ್ರ, ಬಿಸಿ ಅನ್ನ, ತುಪ್ಪ, ಮೆಂತ್ಯ ಹೆಟ್ಟು, ನಿಂಬೆಹಣ್ಣು, ಝುಣಕದ ಜೊತಿಗೆ ಉಂಡ್ರ, ಬೆರಳು ನೆಕ್ಕೊಂತ ಕುಂದ್ರೂಹಂಗ ಆಗ್ತದ. ಆ ರುಚಿಗೆ ಮತ್ತ ಯಾವ ರುಚಿನೂ ಬ್ಯಾಡನಿಸ್ತದ.  

ಇಂಥ ಝುಣಕದ ಒಡಿ ಹಾಗೂ ಬಿಸಿರೊಟ್ಟಿ, ಮೊಳಕೆ ಕಾಳಿನ ಉಸುಳಿಯೊಂದಿಗೆ ಸವಿದವನಿಗೆ ‘ಪೆಹಲೆ ಪೇಠೋಬಾ, ಫಿರ್‌ ವಿಠೋಬಾ’ (ಮೊದಲು ಅನ್ನದೇವರು. ನಂತರ ವಿಟ್ಠಲ ದೇವರು) ಅನ್ನುವ ಗಾದೆ ನೆನಪಾಗದೇ ಇರದು.

‍ಲೇಖಕರು avadhi

November 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: