ನಿಮ್ಮ ಪ್ರೀತಿಗೆ.. ಅದರ ರೀತಿಗೆ..

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.

ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

। ಕಳೆದ ವಾರದಿಂದ ।

ಕಳೆದ ಸಂಚಿಕೆಯಲ್ಲಿ ದಿಯಾ (ಸೀತಾ) ಬಗ್ಗೆ ಹೇಳಿದ್ದೆ ಅಂತಹುದೇ ಒಬ್ಬ ಮಹಾನ್ ಕಲಾವಿದ ನಮ್ಮ ಪುಟ್ಟ ಮಾಣಿ (ವಾಸುದೇವ ಉರಾಳ)..

ಅವನನ್ನು ನೋಡಿದಾಗ ನನಗೇ ಆಶ್ಚರ್ಯವಾಗುತ್ತಿತ್ತು! ಕೆಲವು‌ ಮಕ್ಕಳು ಹುಟ್ಟುವಾಗಲೇ ಪ್ರತಿಭೆಯ ಮೂಟೆಯನ್ನು ಹೊತ್ತುಕೊಂಡೇ ಹುಟ್ಟುತ್ತಾರಾ ?.. ಭೂಮಿಗೆ ಬಂದು ಆರು ವರುಷವಾಗಿಲ್ಲ. ನಮ್ಮ ಮಾತೇ ನಮಗೆ ಆಡಲು ಸರಿಯಾಗಿ ಬಾರದಿರುವ ಸಂದರ್ಭದಲ್ಲಿ ಮತ್ತೊಂದು ಪಾತ್ರವಾಗಿ ನಟಿಸುವುದೆಂದರೆ ಆಶ್ಚರ್ಯವಲ್ಲವೇ, ಮೈಕ್ ನೋಡಿದರೆ ಮುಟ್ಟಬೇಕು ಕ್ಯಾಮೆರಾ ನೋಡಿದರೆ ನಗಬೇಕು ಅನ್ನುವ ಅಸಾಧ್ಯ ಕುತೂಹಲ ಮತ್ತು ತುಂಟಾಟದ ಆ ವಯಸ್ಸಿನಲ್ಲಿ, ಅಷ್ಟು ಶಿಸ್ತಿನಿಂದ ಇರಲು ಈ ಮಾಣಿಗೆ ಹೇಗೆ ಸಾಧ್ಯ?

ಅವನನ್ನು ಮೊದಲು ಭೇಟಿಯಾದಾಗ ಇಷ್ಟು ಸಲೀಸಾಗಿ ಅವನಿಂದ ಕೆಲಸ ತೆಗೆಯಬಹುದೆಂದು ಖಂಡಿತಾ ಅನಿಸಿರಲಿಲ್ಲ. ಹೊರಗೆ ಎಷ್ಟು ಚುರುಕೆಂದರೆ, ಇಡೀ ತಂಡದ ಮುಖ್ಯ ಆಕರ್ಷಣೆಯೇ ನಮ್ಮ ಮಾಣಿ… ಅವನ ಚಿನಕುರುಳಿ ಉತ್ತರಕ್ಕಾಗಿಯೇ ಎಲ್ಲರೂ ಅವನಿಗೆ ತಮಾಷೆ ಮಾಡುತ್ತಿದ್ದಾಗ ತನ್ನ ಮುದ್ದಾದ ಕುಂದಕನ್ನಡದಲ್ಲಿ ಎಲ್ಲರಿಗೂ ಉತ್ತರಿಸುತ್ತಿದ್ದ ಅವನ ಮಾತಿಗೆ ಮರುಳಾಗದವರೇ ಇಲ್ಲಾ.

ಹೊರಗೆ ಎಷ್ಟು ಚುರುಕೋ ನಟಿಸುವಾಗಲೂ ಅಷ್ಟೇ ಚುರುಕು ನಮ್ಮ ಮಾಣಿ.. ಖುಷಿಯ ಸನ್ನಿವೇಶದಲ್ಲಿ ನಗು, ದುಃಖದ ಸನ್ನಿವೇಶದಲ್ಲಿ ಗಾಂಭೀರ್ಯ, ನೋವಾದಾಗ ನೋವು ಎಲ್ಲವನ್ನೂ ಸಹಜವಾಗಿಯೇ ಮಾಡುತ್ತಿದ್ದ.. ಎಲ್ಲಕ್ಕಿಂತಾ ಮುಖ್ಯವೆಂದರೆ ಗಂಡಿನವರು ಬರುವ ಒಂದು ದೊಡ್ಡ ದೃಶ್ಯದಲ್ಲಿ ಅವನು ಸುಮ್ಮನೆ ನಿಂತಿರಬೇಕು. ಒಬ್ಬ ನಟನಿಗೆ ಎಲ್ಲಕ್ಕಿಂತಾ ಕಷ್ಟವೆಂದರೆ ವೇದಿಕೆ ‌ಮೇಲೆ ಅಥವಾ ಕ್ಯಾಮೆರಾದ ಮುಂದೆ ಸುಮ್ಮನೆ ನಿಲ್ಲುವುದು…

ಈ‌ ನಮ್ಮ ಪುಟ್ಟಮಾಣಿ ಎಷ್ಟು ಸಹಜವಾಗಿದ್ದನೆಂದರೆ, ನಿಜವಾಗಿ ತನ್ನ ಮನೆಯ ಒಂದು ಕಾರ್ಯಕ್ರಮದಲ್ಲಿ ತಾನು ಹೇಗೆ ಭಾಗವಹಿಸಬಹುದೋ? ಹೇಗೆ ಪ್ರತಿಕ್ರಿಯಿಸಬಹುದೋ ಹಾಗೇ…. ಅಕ್ಕು ಗಂಡ ಮನೆಗೆ ಬರುವ ದೃಶ್ಯದಲ್ಲಿ ಕೂಡಾ ಹಿರಿಯ ನಟರಾದ ಚಂದ್ರಹಾಸ ಉಳ್ಳಾಲರ ಜೊತೆಗೆ ಅವರ ಸಮಕ್ಕೂ ನಟಿಸಿ ಅವರಿಂದ ಸೈ ಎನಿಸಿಕೊಂಡವನು…

ಅಂದು, ದೀಪಾವಳಿ ಭಜನೆ ನೃತ್ಯದಲ್ಲಿ ಎಲ್ಲರೊಂದಿಗೆ ಖುಷಿಯಾಗಿ ಕುಣಿಯುತ್ತಿದ್ದ‌ ಮಾಣಿಗೆ ನಮ್ಮ ಕ್ಯಾಮೆರಾ ತಂಡದವರು ತಮಾಷೆ ಮಾಡುವಾಗ, ಶಾಟ್ ನಲ್ಲಿ ಕುಣಿಯುತ್ತಲೇ ಅವರಿಗೆ ಉತ್ತರ ಕೊಟ್ಟು , ಕ್ಯಾಮೆರಾ ಮುಂದೆ ಬಂದಾಗ ಮಾತ್ರ ಸುಮ್ಮನಾಗುತ್ತಿದ್ದ ಅವನ ಆ ಚಾಲಾಕುತನ, ಅವನ ಉತ್ಸಾಹ , ಸರಿ ರಾತ್ರಿಯ ಶೂಟಿಂಗ್ ನಲ್ಲಿ ಎಲ್ಲರಿಗೂ ಎನರ್ಜಿ ನೀಡುತ್ತಿತ್ತು… ಬಹುಶಃ ಅವನ ಪ್ರತಿಭೆಗೆ ನಮ್ಮ ಸಿನೆಮಾದ ಪಾತ್ರವೇ ಚಿಕ್ಕದಾಯಿತೇನೋ ಎನಿಸಿದ್ದೂ ಉಂಟು. ತಾತ ಗೋವಿಂದ ಉರಾಳರ ಗರಡಿಯಲ್ಲಿ ಪಳಗಿರುವ ಆ ಪುಟ್ಟ ಮಾಣಿಗೆ ಆ ಮಾಣಿಯೇ ಸಾಟಿ….

ಇಲ್ಲಿ, ಕೆಲವಷ್ಟೇ ಕಲಾವಿದರ ವಿಶೇಷತೆಗಳನ್ನು ಹೇಳುತ್ತಿರುವೆನಾದರೂ, ನಮ್ಮ ತಂಡದ ಎಲ್ಲಾ ಕಲಾವಿದರಲ್ಲೂ ಇದ್ದುದು ಅದೇ ಚೈತನ್ಯ.. ಎಲ್ಲರನ್ನೂ ಹೆಸರಿಸಲು ಸಾಧ್ಯವಾಗದ್ದಕ್ಕೆ ಕೆಲವರನ್ನಷ್ಟೇ ಉದಾಹರಿಸುತ್ತಿದ್ದೇನೆ…. ಆದರೆ ನಾನು ಉಲ್ಲೇಖಿಸಲೇಬೇಕಾದ ಮತ್ತೊಂದು ವಿಶೇಷ ಕಲಾವಿದರ ಬಳಗವಿದೆ ಅವರನ್ನಿಲ್ಲಿ ಹೆಸರಿಸಲೇಬೇಕು…

“ಅಕ್ಕು ನಾಟಕ” ದಲ್ಲಿ ಬಹುಮುಖ್ಯ ಪಾತ್ರ ಮಾಡಿ ಸೈ ಎನಿಸಿಕೊಂಡು, ಅನಿವಾರ್ಯ ಕಾರಣಗಳಿಂದ ಸಿನೆಮಾದಲ್ಲಿ ಆ‌ ಪಾತ್ರ ಮಾಡದೆ, ಬೇರೆ ಚಿಕ್ಕ ಚಿಕ್ಕ ಪಾತ್ರ ಮಾಡಿದ ಕಲಾವಿದರ ಬಳಗವದು. ನಾಟಕದಲ್ಲಿ ಅಕ್ಕು ಗಂಡನ ಪಾತ್ರ ಮಾಡಿದ್ದ ಮುರಳೀಧರ ನಾವುಡರು, ವೆಂಕಪಯ್ಯನಾಗಿದ್ದ ರಾಜೇಶ್ ಕಶ್ಯಪ್ .. ಅದ್ಭುತ ಕಲಾವಿದನಾದರೂ, ಮದುವೆ ಗಂಡಿನಂತ ಪುಟ್ಟ ಪಾತ್ರ ಮಾಡಿದ ಯೋಗೀಶ್, ಸಿನೆಮಾದಲ್ಲಿ ಗ್ಲಿಸರಿನ್ ಇಲ್ಲದೆ ಅತ್ತ ಸೀತಾ ಪಾತ್ರವನ್ನು, ನಾಟಕದಲ್ಲಿ ಮಾಡುತ್ತಾ , ನೋಡುತ್ತಿದ್ದ ಪ್ರೇಕ್ಷಕರು ಗ್ಲಿಸರಿನ್ ಇಲ್ಲದೇ ಅಳುವಂತೆ ಮಾಡುತ್ತಿದ್ದ ಅವನಿ ಶೆಟ್ಟಿ, ನಾಟಕದಲ್ಲಿ ಅಕ್ಕುವಾಗಿದ್ದು, ಸಿನೆಮಾದಲ್ಲಿ ಅಕ್ಕುವಿಗೆ ಧ್ವನಿಯಾದ ಯಶಸ್ವಿನಿ, ನಾಟಕದಲ್ಲಿ ಪುಟ್ಟನಾಗಿ ಮೆರೆದು ಸಿನೆಮಾದಲ್ಲಿ ಭಾಮಿನಿಯಾದ ಹಿತಾ ಮುಂತಾದವರು….

ಇಲ್ಲಿ ಇವರನ್ನೆಲ್ಲಾ ಹೆಸರಿಸಲೇಬೇಕೆನ್ನುವುದಕ್ಕೆ ಕಾರಣವಿದೆ. ಒಂದು ಕೃತಿ ಯಶಸ್ವಿಯಾಗುವುದು, ಕೇವಲ ಒಬ್ಬಿಬ್ಬರ ಪರಿಶ್ರಮದಿಂದ ಅಲ್ಲ ಇಂತಹಾ ಅನೇಕ ನಿಸ್ವಾರ್ಥ ಮನಸ್ಸುಗಳು ಯಶಸ್ಸಿನ ಹಿಂದಿರುತ್ತದೆ.. “ನಮಗೆ ಪಾತ್ರ ಮುಖ್ಯವಲ್ಲ, ತಂಡ ಮುಖ್ಯ ” ಎಂಬ ಭಾವನೆಯಿಂದ ನಮ್ಮೊಂದಿಗಿದ್ದು ನಮಗೆ ಬೆಂಬಲವಾಗಿ ನಿಂತ ಇವರೆಲ್ಲರ ತ್ಯಾಗ ಸಾಮಾನ್ಯವಲ್ಲ …

“ಇಲ್ಲಿ ಯಾರು ಮುಖ್ಯರಲ್ಲಾ ಯಾರೂ ಅಮುಖ್ಯರಲ್ಲಾ “., ಕುವೆಂಪು ಅವರ ಈ ಕವಿವಾಣಿ ನಮ್ಮ ತಂಡದ ಧ್ಯೇಯ ವಾಕ್ಯ. ಅಂತೆಯೇ ಅದನ್ನು ಎಲ್ಲರೂ ಎಲ್ಲಡೆಯೂ ಪಾಲಿಸುತ್ತಾ ಬಂದವರು ನಾವು.

ಶೂಟಿಂಗ್ ನಲ್ಲಿ ನಾನು ದಿನವೂ ಮಲಗುತ್ತಿದ್ದುದು ಕೇವಲ ನಾಲ್ಕು ಗಂಟೆಗಳು ಮಾತ್ರ, ದಿನವೂ ಬೆಳಗಿನ ಜಾವ ನಾಲ್ಕಕ್ಕೆ ಎದ್ದು ಆ ದಿನದ, ಶೂಟಿಂಗ್ ಮುಗಿದ ನಂತರ, ಕಲಾವಿದರು ಮತ್ತು ತಂತ್ರಜ್ಞರ ಜೊತೆಗೆ ರಾತ್ರಿ ತಪ್ಪದೆ ಮಾಡುತ್ತಿದ್ದ ಮೀಟಿಂಗ್… ಆನಂತರ ಮರುದಿನದ ಶಾಟ್ ಗಳಿಗೆ ಬೇಕಾದ ಕೆಲವು ತಯಾರಿಗಳು, ಮಾರ್ಪಾಡುಗಳೆಲ್ಲಾ ಮುಗಿಸಿ, ಮಲಗುವಾಗ ರಾತ್ರಿ ಒಂದು ಗಂಟೆಯಾಗುತ್ತಿತ್ತು… ಮರುದಿನದ ಶಾಟ್ ಗಳ ಬಗ್ಗೆಯೇ ಯೋಚಿಸುತ್ತಾ ಕಣ್ಣು ಮುಚ್ಚುವಷ್ಟರಲ್ಲಿ ಬೆಳಗಿನ ನಾಲ್ಕು ಗಂಟೆಯ ಅಲಾರಾಂ ಕೂಗುತ್ತಿತ್ತು… ಇಷ್ಟಾದರೂ ಒಂದು ದಿನವೂ ಆಯಾಸವಿಲ್ಲ… ಮೊದಲ ದಿನದ ಎನರ್ಜಿಯೇ ಕಡೆಯ ದಿನದವರೆಗೂ ಇತ್ತೆಂದರೆ, ಅದಕ್ಕೆ ಕಾರಣ ನಮ್ಮ ತಂಡದ ಉತ್ಸಾಹ… ಹಣದಲ್ಲಿ ಸಣ್ಣವರಾದರೂ ಗುಣದಲ್ಲಿ ಶ್ರೀಮಂತರು, ನಮ್ಮ ನಿರ್ಮಾಪಕರು…

ದಿನವೂ ಸುಮಾರು ಅರವತ್ತು ಜನರಿಗೆ ಹೊತ್ತು ಹೊತ್ತಿನ ವಿಶೇಷ ಊಟ ತಿಂಡಿಗಳ ಜೊತೆಗೆ, ನಡುನಡುವೆ ಹಣ್ಣು, ತರಕಾರಿಗಳ ಸಲಾಡ್ ಗಳು, ಜ್ಯೂಸ್ ಎಲ್ಲವೂ ಬರುತ್ತಿತ್ತು ಮತ್ತು ಎಲ್ಲರಿಗೂ…..

‘ಹೈರಾರ್ಕಿ’ ಎಂಬ ಪದ ನಮ್ಮ ಹತ್ತಿರವೂ ಸುಳಿಯುತ್ತಿರಲಿಲ್ಲ. ಊಟ ವಸತಿ ಎಲ್ಲವೂ ಎಲ್ಲರಿಗೂ ಒಂದೇ… ನಿರ್ಮಾಪಕ, ನಿರ್ದೇಶಕ, ಕಲಾವಿದ, ತಂತಜ್ಞರೆಂಬ ಯಾವ ಭೇದಭಾವಗಳೂ ನಮ್ಮಲ್ಲಿ ಇರಲಿಲ್ಲ..ಊಟದ ತಟ್ಟೆ ಹಿಡಿದು ಎಲ್ಲರೂ ಒಟ್ಟಾಗಿ ಒಂದೇ ಸಾಲಲ್ಲಿ ನಿಲ್ಲುತ್ತಿದ್ದುದೂ, ಒಂದೇ ಮನೆಯಲ್ಲಿ ಎಲ್ಲರೂ ಒಟ್ಟಾಗಿ ಮಲಗುತ್ತಿದ್ದುದು, ಸಿನೆಮಾದ ಸಾಮಾನ್ಯ ನಿಯಮಗಳನ್ನು ಮುರಿದ ಇಂತಹ ಕೆಲವು ಪದ್ದತಿಗಳು, ಕಲಾವಿದರು ಮತ್ತು ತಂತ್ರಜ್ಞರನ್ನು ಒಂದಾಗಿಸಿತ್ತು…

ಆದ್ದರಿಂದಲೇ ಅಲ್ಲಿ ಮನೆಯ ವಾತಾವರಣವೊಂದು ನಿರ್ಮಾಣವಾಗಿತ್ತು…. ಇದು ನಮಗೆ ರಂಗಭೂಮಿ ಕಲಿಸಿದ ನಿಯಮ… ತಂತ್ರಜ್ಞರು ನಮ್ಮೊಂದಿಗೆ ಹೇಗೆ ಬೆರೆತುಬಿಟ್ಟಿದ್ದರೆಂದರೆ, ಅವರೆಲ್ಲರೂ ಎಷ್ಟೋ ವರ್ಷಗಳಿಂದ ನಮ್ಮೊಡನೆಯೇ ಇದ್ದರೆಂಬ ಭಾವನೆ ನಮಗಷ್ಟೇ ಅಲ್ಲಾ ಅವರಿಗೂ ಇತ್ತು ಎಂಬುದಕ್ಕೆ ಕೆಲವು ಘಟನೆಗಳು ಸಾಕ್ಷಿಯಾಗಿವೆ…

ಘಟನೆ 1

ದಿನವೂ ಹೇಳಿದ ಸಮಯಕ್ಕೆ ಸರಿಯಾಗಿ ಶೂಟಿಂಗ್ ಪ್ಯಾಕಪ್ ಮಾಡುತ್ತಿದ್ದಾಗ “ಸರ್ ಆರೆಂದರೆ, ಆರೇ ಅಲ್ಲಾ ಸರ್ ಒಂದು ಗಂಟೆ ಲೇಟ್ ಆಗಿ ಪ್ಯಾಕಪ್ ಮಾಡಿದರೂ ಪರ್ವಾಗಿಲ್ಲ ಅಂತಾ ಮೇಡಂಗೆ ಹೇಳಿ ಸರ್” ಅಂತಾ ಮೆಲ್ಲನೆ ಶೆಟ್ರ ಹತ್ತಿರ ಬಂದು ಹೇಳಿದ ಯೂನಿಟ್ ಹುಡುಗರು

ಘಟನೆ 2

“ಸಂಕ್ರಾಂತಿ ದಿನಾ ನೈಟ್ ಶೂಟ್ ಪ್ಲಾನ್ ಮಾಡಿದಾಗ, ನಾಲ್ಕು ಕಾಲ್ ಶಿಟ್ ಆಗಿಬಿಡುತ್ತೇ ಸರ್ ಯೋಚನೆ ಮಾಡಿ” ಅಂತಾ ತಮ್ಮ ಲಾಭ ಮರೆತು, ಪ್ರೊಡ್ಯೂಸರ್ ದೃಷ್ಟಿಯಿಂದ ಯೋಚಿಸಿ ಹೇಳಿದ ಯೂನಿಟ್ ಮತ್ತು ಕ್ಯಾಮೆರಾ ಹುಡುಗರು.

ಘಟನೆ 3

ಶೂಟಿಂಗ್ ಕೊನೆಯ ದಿನ ಎಲ್ಲರೂ ಸೇರಿ ಸರ್ಕಲ್ ನಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾಗ “ನಾವು ಯಾವುದಾದಾರೂ ಔಟ್ ಡೋರ್ ಶೂಟಿಂಗ್ ಗೆ ಹೋದಾಗ ಯಾವಾಗ ಪ್ಯಾಕಪ್ ಆಗತ್ತೋ ಯಾವಾಗ ಮನೆಗೆ ಹೋಗ್ತೀವೋ ಅಂತಾ ಕಾಯುತ್ತಿರುತ್ತೇವೆ., ಇದು ಮೊದಲ‌ಬಾರಿ ಮನೆಬಿಟ್ಟು ಹೊರಹೋಗುತ್ತಿರುವ feel ಆಗುತ್ತಿದೆ.” ಅಂತಾ ಹೇಳಿದ ಕ್ಯಾಮೆರಾ ಅಸಿಸ್ಟೆಂಟ್ ಮನು…

ಘಟನೆ 4

ಸುಮಾರು ಒಂದು ತಿಂಗಳಿದ್ದರೂ ಮನೆಯವರ ಪ್ರೀತಿ‌ ಉಳಿಸಿಕೊಂಡು, ಹೊರಡುವ ಸಮಯದಲ್ಲಿ ಶೂಟಿಂಗ್ ಮನೆಯವರಿಗೆ ನಮ್ಮನ್ನು ಮರೆಯಬೇಡಿ ಎಂದು, ತಮ್ಮ ನೆನಪಿಗೆ ಅವರ ಅಂಗಳದಲ್ಲಿ ತೆಂಗಿನ ಸಸಿ ನೆಟ್ಟು ಬಂದ ಪ್ರೊಡಕ್ಷನ್ ಹುಡುಗರಾದ ಬಾಲಾಜಿ ಮತ್ತು ಗುಂಡಾ

ಘಟನೆ 5

ಶೂಟಿಂಗ್ ಮನೆಯವರಿಗೆ ಕೃತಜ್ಞತಾ ಪೂರ್ವಕವಾಗಿ ನಾವು ಕೊಟ್ಟ ಸಣ್ಣ ಮೊತ್ತದ ಚೆಕ್ ಅನ್ನು ಮಗನ ಕೈಯ್ಯಲ್ಲಿ ಕೊಟ್ಟು ಹಿಂದಿರುಗಿಸಲು ಹೇಳಿ,, “ನೀವು ಎಷ್ಟು ಕಷ್ಟ ಪಡುತ್ತಿದ್ದೀರಾ! ಎಲ್ಲಾ ಒಳ್ಳೆಯದಾಗಲಿ” ಅಂತಾ ಕಣ್ತುಂಬಿ ಹರಸಿದ ಮನೆಯ ಹಿರಿಯ ಅಜ್ಜಿ ಪ್ರಫುಲ್ಲಾ ಶೆಟ್ಟಿ. (ನಿಜಕ್ಕೂ ಅಜ್ಜಿಯ ಹೆಸರೇ)…

ಒಂದಾ! ಎರಡಾ! ಇಂತಹ ಎಷ್ಟೋ ಭಾವನಾತ್ಮಕ ಘಟನೆಗಳು ನಮ್ಮನ್ನು ಕಟ್ಟಿಹಾಕಿವೆ.. ಹೇಳದೆ ಉಳಿದಿಹ ಘಟನೆಗಳು ನೂರಾರು….
ಈ ಮಧ್ಯೆ,ಸಿನೆಮಾ ಗುಂಗಿನಲ್ಲಿಯೇ ಇದ್ದರೂ ಶೂಟಿಂಗ್ ನ ನಡುವೆ ಒಂದು ದಿನ ಮೈಸೂರಿಗೆ ಹೊರಟು ರಂಗಾಯಣದ ಬಹುರೂಪಿ ಉತ್ಸವದಲ್ಲಿ “ಅಕ್ಕು” ನಾಟಕ ಪ್ರದರ್ಶನ ಮಾಡಿ ಬಂದು ಮರುದಿನ ಬೆಳಿಗ್ಗೆ ಶೂಟಿಂಗ್ ಗೆ ತಯಾರಾದ ನಮ್ಮ ಕಲಾವಿದರ ರಂಗಬದ್ಧತೆಗೊಂದು ದೊಡ್ಡ ಸಲಾಂ….

ಇಷ್ಟೆಲ್ಲಾ ಹಿತವಾದ ಅನುಭವಗಳ ನಡುವೆ ಒಂದಾದರೂ ಕೆಟ್ಟ ಅನುಭವವೇ ಇಲ್ಲವೇ ಎಂದನಿಸುವುದೂ ಸಹಜ… ಇಲ್ಲಿ ನಾನು “ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು‌ ಪರರಿಗೆ” ಎಂಬ ಮಾತನ್ನು ಬೇರೊಂದು ರೀತಿಯಲ್ಲಿ ಅರ್ಥೈಸುತ್ತಿದ್ದೇನೆ.. ಇಲ್ಲಿಯವರೆಗೆ ನಾನು ಸಂತಸದಿಂದ ಹಂಚಿಕೊಂಡ ನವಿರಾದ ಅನುಭವಗಳು ನನಗೆ… ಬಚ್ಚಿಟ್ಟ ನೋವಿನ ಅನುಭವಗಳು ಪರರಿಗೆ (ತಲುಪಬೇಕಾದವರಿಗೆ)….

ಎಲ್ಲೆಡೆಯಂತೆ ನಮ್ಮಲ್ಲಿಯೂ ಸಣ್ಣ ಪುಟ್ಟ ನೋವುಗಳು, ತೊಂದರೆಗಳು ನಡೆದು ಹೋದವು….ಆದರೆ ಆ ನೋವನ್ನು ನುಂಗಿಕೊಂಡು ಮುನ್ನಡೆಸುವ ಶಕ್ತಿಯನ್ನು ನನಗೆ ನೀಡಿದ್ದು ಹಲವಾರು ವಿಶಾಲ ಹೃದಯಿಗಳನ್ನೊಳಗೊಂಡ ನಮ್ಮ ತಂಡ ಮತ್ತವರ ಪ್ರೀತಿ…..
ಸಿನೆಮಾ ಮಾಡಬೇಕೆಂಬ ಹಂಬಲ ಮತ್ತು ಪ್ರಾಮಾಣಿಕವಾದ ಪ್ರಯತ್ನವಷ್ಟೇ ನಮ್ಮ ಬಂಡವಾಳ… ಉಳಿದದ್ದೆಲ್ಲಾ ಆದದ್ದು ತನ್ನಷ್ಟಕ್ಕೆ..

“ಅಮ್ಮಚ್ಚಿ”ಯ ಈ ಪಯಣದಲ್ಲಿ ನಮಗೆ ಸಿಕ್ಕ ಸಹ ಪ್ರಯಾಣಿಕರು ಯಾರು? ಅವರಿಂದ ನಾವು ಕೊಟ್ಟದ್ದೆಷ್ಟೋ.. ಪಡೆದದ್ದೆಷ್ಟೋ ಅಂತಹಾ ಕೆಲ ಅನುಭವಗಳು ಮುಂದಿನ ಸಂಚಿಕೆಯಲ್ಲಿ…..

‍ಲೇಖಕರು avadhi

November 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Lalitha siddabasavayya

    ಇದೊಂದು ಓದಿದಾಗೆಲ್ಲ ಖುಷಿ ಕೊಡುವ ಬರಹಮಾಲೆ. ತ್ಯಾಂಕ್ಯೂ ಚಂಪಾ ಮೇಡಂ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: