ಬೃಂದಾವನದಲಿ ಒಂದು ದಿನ: ಎಲ್ಲವಳು ರಾಧೇ ರಾಧೇ..!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಹೇಗೆ ಸುರಂ ಎಕ್ಕುಂಡಿಯವರ ‘ಮಿಥಿಲೆ’ ಕವಿತೆ ಓದುತ್ತಾ ಓದುತ್ತಾ ಅದರ ಸಾಲಿನಂತೆ, ʻಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ ಬೀದಿ ಬೀದಿಯನಲೆದು ನೋಡಬೇಕು… ಅಲ್ಲಿ ಎಲ್ಲಾದರೂ ಮರದ ನೆರಳಿಗೆ ಕುಳಿತು ರಾಮಭದ್ರನ ಮಹಿಮೆ ಹಾಡಬೇಕು…ʼ ಅಂತ ನಮಗೂ ಅನಿಸುತ್ತದೋ ಹಾಗೆಯೇ, ಬೃಂದಾವನಕ್ಕೂ ಒಮ್ಮೆ ಹೋಗಬೇಕು! ಅಲ್ಲಿ ಯಮುನೆಯ ತೀರದಲ್ಲಿ ಕೂತು ರಾಧಾಕೃಷ್ಣರ ಪ್ರೇಮಕಥೆಯನ್ನೊಮ್ಮೆ ಅಲ್ಲಿನ ಅಂಬಿಗರಿಂದ ಆಲಿಸಬೇಕು.

ಅಲ್ಲಿನ ಬೀದಿ ಬೀದಿಯನೊಮ್ಮೆ ಸುತ್ತಿ, ಕಣ್ಣು ಹಾಯಿಸಿದೆಡೆಯಲ್ಲೆಲ್ಲ ಕಾಣುವ ತುಳಸೀಮಾಲೆಗಳ ಗಂಧವನ್ನು ಆಘ್ರಾಣಿಸಬೇಕು! ʻರಾಧಾ ನಾಮ್‌ ಲಸ್ಸೀ, ಕೃಷ್ಣಾ ನಾಮ್‌ ಮಲೈʼ ಎಂಬುದನ್ನು ಅಕ್ಷರಶಃ ಭಕ್ತಿಭಾವದಿಂದ ನಂಬುವ ಈ ಊರಿನ ಬೀದಿಬದಿಯ ಸಾಲು ಸಾಲು ಅಂಗಡಿಗಳಲ್ಲಿ ಮಣ್ಣಿನ ದೊಡ್ಡ ದೊಡ್ಡ ಲೋಟಗಳಲ್ಲಿ ಸುರಿಸುರಿದು ಕೊಡುವ ಸಿಹಿಸಿಹಿ ಕೆನೆಭರಿತ ಹಾಲು, ಲಸ್ಸಿಗಳನ್ನು ಹೊಟ್ಟೆ ತುಂಬ ಕುಡಿದು ತೇಗಬೇಕು.

ಅಲ್ಲಿನ ಪ್ರತಿ ಅಂಗಡಿಯಲ್ಲೂ ಗುಡ್ಡೆ ಹಾಕಿ ಅವರ ಕೈಯಲ್ಲಿ ಉಂಡೆಯಾಗಿ, ಕೃಷ್ಣನ ಪ್ರಸಾದವಾಗಿ ಬಿಡುವ ಮಧುರಾತಿಮಧುರ ಪೇಡದ ರುಚಿಯನ್ನೊಮ್ಮೆ ಸವಿಯಬೇಕು. ಯಮುನೆಯ ತೀರದಲ್ಲಿ ಬೆಳ್ಮುಗಿಲಿಗೆ ಪೈಪೋಟಿ ಕೊಡುವಂತೆ ಸಾಲು ಸಾಲು ಸಾಗುವ ಹಾಲು ಬಣ್ಣದ ದನಕರುಗಳನ್ನೂ, ಅಲ್ಲೆಲ್ಲೋ ಪಕ್ಕನೆ ಮಿಂಚಿ ಮರೆಯಾಗುವ ಕಾಮನಬಿಲ್ಲಿನಂತೆ ಕಾಣುವ ನವಿಲುಗಳನ್ನು ಕಣ್ತುಂಬಿಕೊಳ್ಳಬೇಕು. 

ಅಲ್ಲಿನ ಜನರ ಮಾತು ಮಾತಲ್ಲೂ ಬರುವ ʻರಾಧೇ ರಾಧೇʼ ಕೇಳುತ್ತಾ ಕಳೆದುಹೋಗಬೇಕು. ಸಂಜೆಯಾದರೆ ಮತ್ತೆ ಸುಖಾಸುಮ್ಮನೆ ಆ ಕೇಸೀ ಘಾಟಿನ ಮರದ ಕಟ್ಟೆಯಲ್ಲೊಮ್ಮೆ ಕೂತು ಪುತಿನರ “ಬರುತಿಹನೇ ನೋಡೇ ವಾರಿಜ ಲೋಚನ, ಬರುವನೆ ಇದ್ದೆಡೆ ಪೇಳೇ ನನ್ನಾಣೆ… ಕೊರಳಿನ ತುಳಸೀ ಮಾಲೆಯ ಮೇಲೆ, ಬೀಸಿ ಬಂದಂತಿರುವ ಎಲರನು ಕೇಳೇ…” ಅಂತ ಗುನುಗಬೇಕು!

ಮಿಥಿಲೆಗೆ ಹೋಗಲು ಹೇಗೆ ಎಕ್ಕುಂಡಿಯವರ ಕವಿತೆಯೊಂದೇ ಸಾಕೋ, ಹಾಗೆಯೇ ಬೃಂದಾವನಕ್ಕೊಮ್ಮೆ ಹೋಗಲು ಬಿ.ವಿ ಕಾರಂತರ ಕೈಲರಳಿದ ಪುತಿನರ ಗೋಕುಲ ನಿರ್ಗಮನ!

“ ಎಲ್ಲವಳೆಲ್ಲವಳೆಲ್ಲವಳು… ನಿಲದಾಡುವ ಕಂಗಳ ಸೊಲ್ಲವಳು ಗಿಡಗಳ ಮರೆಯಿಂದಾರಿಗು ತೋರದೆನನ್ನನೆ ನೋಡುವ ಮರುಳವಳು… ” ಗೋಕುಲ ನಿರ್ಗಮನದ ಈ ಹಾಡು ಬೃಂದಾವನದ ಆ ʻನಿಧಿವನʼದೊಳಕ್ಕೆ ಕಾಲಿಡುವಾಗ ಥಟ್ಟನೆ ನೆನಪಾಗದಿದ್ದರೆ ಹೇಳಿ! ಈ ಬಾರಿ ಇದು ಸ್ವಲ್ಪ ಗಾಢವಾಗಿಯೇ ನೆನಪಾಯಿತೆಂದರೂ ತಪ್ಪಿಲ್ಲ.

ಬಹುಶಃ ಯಾವ ಗಡಿಬಿಡಿಯೂ ಇಲ್ಲದೆ ಯಮುನೆಯ ತೀರದಲ್ಲಿ ಹಾಗೆ ಸುಮ್ಮನೆ ಸಮಯ ಕಳೆದದ್ದರಿಂದಲೋ, ದೋಣಿಯಲ್ಲಿ ಕೂತು ಕೈಲಾಶ್ ಕೇವಟ್‌(ಅಂಬಿಗ), ರಾಧೆ ತನ್ನ ಮನೆ ಮಗಳೋ ಎಂಬಂತೆ ಪ್ರೀತಿ ಸುರಿಸಿ ಹೇಳಿದ ಕಥೆ ಕೇಳಿದ್ದರಿಂದಲೋ, ಯಮುನೆಯಲ್ಲಿಳಿದು ಆ ತುದಿಯ ಕೇಸೀ ಘಾಟಿನ ಫೋಟೋಗಳನ್ನು ಕ್ಲಿಕ್ಕಿಸುವಾಗ ನನ್ನ ಪಕ್ಕದಲ್ಲಿದ್ದ ಇಬ್ಬರು ಈ ಜಗವೇ ಮರೆತು ʻರಾಧೇ ರಾಧೇʼ ಎಂದು ಜಪಿಸುತ್ತಾ ಮುಳುಕು ಹಾಕಿದ್ದರಿಂದಲೋ, ಓ ಅದೇ ನೋಡಿ ಆ ಮರದ ಕಟ್ಟೆ ಕಾಣುತ್ತದಲ್ಲವೇ ಅಲ್ಲೇ ಗೋಪಿಕೆಯರೆಲ್ಲ ನೀರಿಗಿಳಿದಾಗ ಶ್ರೀಕೃಷ್ಣ ಪರಮಾತ್ಮ ಅವರ ವಸ್ತ್ರ ಅಪಹರಿಸಿ ಸತಾಯಿಸಿದ್ದು ಎಂದು ಹುಟ್ಟು ಹಾಕುತ್ತಾ ಆ ಕೇವಟ್ ತೋರಿಸಿದ್ದರಿಂದಲೋ, ಇದೇ ಯಮುನೆಯಲ್ಲಿ ನೋಡು ಕಾಳಿಂಗನ ಹೆಡೆಯನ್ನು ಮೆಟ್ಟಿ ಕೃಷ್ಣ ಚಾಮಿ ಕುಣಿದಾಡಿದ್ದು ಎಂದು ಮಗನಿಗೆ ಹೇಳಿದಾಗ, ಅವನ ಕಣ್ಣಲ್ಲಿ ಮಿಂಚಿದ ಮುಗ್ಧ ಕುತೂಹಲದಿಂದಲೋ, ಅಥವಾ ಆ ದಿನ ಕುಂತಲ್ಲಿ ನಿಂತಲ್ಲಿ ನಡೆದಲ್ಲಿ ಕುಡಿದಲ್ಲಿ ತಿಂದಲ್ಲಿ ಎಲ್ಲೆಲ್ಲೂ ಲೆಕ್ಕವಿಲ್ಲದಷ್ಟು ಬಾರಿ ಕೇಳಿದ ʻರಾಧೇ ರಾಧೇʼಯಿಂದಲೋ… ಒಟ್ಟಾರೆ ಆ ದಿನ ಈ ರಾಧೆ ಅಲ್ಲೆಲ್ಲೋ ಇಣುಕಿ ನೋಡುತ್ತಿದ್ದಾಳೋ ಎಂಬಷ್ಟು ಆವರಿಸಿಕೊಂಡುಬಿಟ್ಟಳು!

ಪ್ರಪಂಚದಲ್ಲಿ ಏನು ನಡೆಯುತ್ತಿದ್ದರೇನು, ನಮಗೆ ರಾಧೆಯಿಲ್ಲದೆ ಬೇರೆ ಜಗವಿಲ್ಲ, ಈ ಊರಿನೆಲ್ಲರ ಹೊಟ್ಟೆ ಹೊರೆಯುವುದು ಆಕೆಯೂ, ಆಕೆಯ ಸಖ ಕೃಷ್ಣನೂ ಎಂದು ಶತಾಯಗತಾಯ ನಂಬುವ ಮತ್ತು ಹಾಗೆಯೇ ಇರುವ ಊರಿದು. ಚುರುಕು ಬೆಳಗು ಕಾಣುವ ಈ ಊರು ಮಧ್ಯಾಹ್ನ ಊಟದ ಹೊತ್ತಿಗಾಗಲೇ ಶಾಂತವಾಗುತ್ತದೆ.

ತಿಂದುಂಡು ಒಂದು ಗಡದ್ದಾಗಿ ನಿದ್ದೆಹೊಡೆಯಲು ಅಂಗಡಿಗಳೆಲ್ಲವೂ ಬಂದ್‌. ಅರೆ ಈವರೆಗೆ ಗಲಗಲಿಸುತ್ತಿತ್ತಲ್ಲಾ ಎಂದರೆ ಮತ್ತೆ  ಖಾಲಿಖಾಲಿ, ದಂಡುದಂಡು ಸಾಗಿ ಹೊಸಬರನ್ನು ಮಂಗಗಳನ್ನಾಗಿ ಮಾಡಿಬಿಡುವ ಇಲ್ಲಿನ ೫,೦೦೦ ಮಂಗಗಳ ಸಾಮ್ರಾಜ್ಯ ಬಿಟ್ಟರೆ! ಸಣ್ಣ ಬ್ರೇಕಿನ ನಂತರ ಸಂಜೆಯಾದೊಡನೆ ಮತ್ತೆ ರಂಗು.

ರಾಧಾಕೃಷ್ಣರ ಈ ಊರಲ್ಲಿ ನಮಗಿನ್ಯಾವ ಚಿಂತೆ ಎಂಬಂತೆ ಬದುಕುವ ನೆಲದ ಘಮಲಿನ ತಣ್ಣನೆಯ ಊರು. ಮನೆಗೊಂದು ಮರ ಊರಿಗೊಂದು ವನ ಎಂದು ಸರ್ಕಾರ ಹೇಳಿದೆಯಲ್ಲ, ಹಾಗೆಯೇ ನಮ್ಮ ಭಾರತದಲ್ಲಿ ಊರಿಗ್ಯಾಕೆ ಬಿಡಿ, ಗಲ್ಲಿಗಲ್ಲಿಗೂ ಒಂದೊಂದು ಕಥೆಯಿದೆ. ಬಹುತೇಕ ಎಲ್ಲವೂ ನಮ್ಮ ಪುರಾಣದ ಸೊಗಡನ್ನು ಮೆತ್ತಿಕೊಂಡಿರುವ ಮಣ್ಣಕಂಪಿನ ಕಥೆಗಳು.

ಯಾವುದೇ ಜಾಗವೊಂದು ಮನಸ್ಸಿಗೆ ಹತ್ತಿರವಾಗಲು ಆ ಊರಿನ ಕಥೆಯೊಂದು ಸಾಕು. ನಂಬುತ್ತೇವೋ ಬಿಡುತ್ತೇವೋ… ಕಥೆಯನ್ನು ಕಥೆಯಾಗಿ ನೋಡಿದರೂ ಹೃದಯಕ್ಕೆ ನಾಟಲು ಇನ್ನೇನು ಬೇಕು! ರಾಧಾಕೃಷ್ಣರ ಈ ಊರಿನಲ್ಲಿ ಹೆಜ್ಜೆಯಿಟ್ಟಲ್ಲೂ ಕಥೆಗಳಿವೆ. ಅಂಥ ಕಥೆಗಳು ಸೋಜಿಗ ಎನಿಸುವುದು ನಿಧಿವನದ ಕಥೆ.

ನಿಧಿವನದೊಳಕ್ಕೆ ಕಾಲಿಟ್ಟರೆ ಚಕ್ಕನೆ ಗಮನ ಸೆಳೆಯುವುದು ಅಲ್ಲಿನ ವಿಚಿತ್ರ ಆಕಾರದ ಮರಗಳು. ಹೆಚ್ಚೇನೂ ಎತ್ತರವಲ್ಲದ ಬಳುಕುವ ಬಳ್ಳಿಯಂತೆ ಒಂದಕ್ಕೊಂದು ಬೆಸೆದಂತೆ ಕಾಂಡವಿರುವ ಚೆಂದನೆಯ ಮರಗಳು. ಕಾಡು ತುಳಸಿಯಂತೆ! ಹೊಕ್ಕ ಕೂಡಲೇ, ಇನ್ನೊಂದು ಕಥೆಯೂ ತೆರೆದುಕೊಳ್ಳುತ್ತದೆ. ಇವು ಬರಿಯ ಮರಗಳಲ್ಲ. ರಾತ್ರಿಯಾದರೆ ಗೋಪಿಕೆಯರಾಗುವ ಜೀವಗಳು. ರಾತ್ರಿಯಾದರೆ ಈ ಮರಗಳೆಲ್ಲ ಗೋಪಿಕೆಯರಾಗಿ ರಾಧಾಕೃಷ್ಣರೊಡಗೂಡಿ ರಾಸಲೀಲೆಯಾಡುತ್ತಾರೆ! ಅಂಥದ್ದೊಂದು ನಂಬಿಕೆ ಅಲ್ಲಿಯ ಜನರದ್ದು.

ಹಾಗಾಗಿಯೇ, ಮುಸ್ಸಂಜೆಯಾದೊಡನೆ ನಿಧಿವನದ ಬಾಗಿಲು ಮುಚ್ಚುತ್ತದೆ. ಮುಚ್ಚುವ ಮೊದಲು ಪ್ರತಿನಿತ್ಯವೂ, ಅರಸಿನ ಕುಂಕುಮ ವೀಳ್ಯದೆಲೆಗಳಿಟ್ಟು ಹೊರಬರಲಾಗುತ್ತದೆ. ನಿಧಿವನದ ಸುತ್ತಲ ಮನೆಗಳು ಆ ಭಾಗಕ್ಕೆ ತೆರೆದಿರುವ ಕಿಟಕಿಗಳನ್ನು ಮುಚ್ಚುತ್ತಾರೆ. ರಾತ್ರಿಯ ವೇಳೆ ಇಲ್ಲಿ ನಡೆಯುವುದನ್ನು ಯಾರೂ ನೋಡಬಾರದು, ಈ ಮಾತು ಮೀರಿ ನೋಡಿದರೆ, ಮರುದಿನ ಅವರು ಕುರುಡ/ಕಿವುಡರಾಗುತ್ತಾರೆಯೆಂಬುದು ಇಲ್ಲಿನವರ ನಂಬಿಕೆ.

ಹಗಲಿನಲ್ಲಿ ವನದೊಳಗೆ ಸುತ್ತುವ ಮಂಗಗಳೂ ಕೂಡಾ ಕತ್ತಲಾವರಿಸುವ ಮುನ್ನ ವನ ಬಿಟ್ಟು ಹೊರಬರುತ್ತವೆ. ಮರುದಿನ ನೋಡಿದರೆ ಇಟ್ಟ ವಸ್ತುಗಳೆಲ್ಲವೂ ಯಾರೋ ಬಳಸಿದಂತೆ, ಅಸ್ತವ್ಯಸ್ತವಾಗಿ ಬಿದ್ದಿರುತ್ತವೆ ಎಂಬುದು ಇಲ್ಲಿನ ಹಿನ್ನೆಲೆ. ಬೃಂದಾವನವೆಂಬ ಇಂಥಾ ಊರಿಗೆ ಕಾಲಿಡುತ್ತಿದ್ದಂತೆ ನಮ್ಮಂಥ ಪರವೂರ ಮಂದಿಯನ್ನು ಗಬಕ್ಕೆಂದು ಹಿಡಿದು, ‘ಐವತ್ತೇ ರೂಪಾಯಿ ಕೊಡಿ ಸಾಕು, ಮೂರ್ನಾಲ್ಕು ಜಾಗ ತೋರಿಸಿ ಬಿಡುತ್ತೇವೆ, ಹಾಗೆ ಮಾಡಿ ಠಾಕೂರ್ ಜೀ ಕೃಪೆಗೆ ಪಾತ್ರರಾಗಿ, ನಮ್ಮಗಳ ಹೊಟ್ಟೆಗೂ ಹಿಟ್ಟು ಹಾಕಿ ಪುಣ್ಯ ಕಟ್ಟಿಕೊಳ್ಳಿ’ ಅಂತೆಲ್ಲಾ ಗೋಗರೆದು ಹಿಂದೆ ಬಿದ್ದು, ನಮಗೂ ಅಯ್ಯೋ ಪಾಪ ಅನಿಸಿ, ಸರಿ ಎಂದೆವೋ ಒಂದರ್ಧ ಗಂಟೆಲಿ ಎಲ್ಲ ಮುಗಿಸಿ ವಾಪಸ್ಸು ಹೊರಟು ಬಿಡಬಹುದು.

ಇವರನ್ನು ಮೀರಿ ನಾವೇ ನೋಡಿಕೊಳ್ಳುತ್ತೇವೆ ಬಿಡ್ರಪ್ಪಾ ಅಂತ ಮುಂದೆ ಹೋದೆವೋ ನಾವು ಗೆದ್ದಂತೆ. ನಮ್ಮಷ್ಟಕ್ಕೆ ನಾವು ಸುತ್ತಿದರೆ ಸಿಕ್ಕುವ ಮಜಾವೇ ಬೇರೆ. ಇದು ಬಿಟ್ಟು, ನಾವು ಆ ಊರಿನಲ್ಲಿ ಸಿಕ್ಕಸಿಕ್ಕಲ್ಲಿ ನಿಮ್ಮ ಕನ್ನಡಕವೋ, ಮೊಬೈಲಿಗೋ ಕೈಹಾಕಿ ಎಳೆದು ಕಾಟಕೊಡುವ ಮಂಗಗಳ ಬಗ್ಗೆಯೋ, ಇಕ್ಕಟ್ಟಿನ ರಸ್ತೆಗಳ ಬಗ್ಗೆಯೋ, ತೀರ ಕಾಟ ಕೊಟ್ಟು ಆ ಪೂಜೆ ಮಾಡಿಸಿ, ಈ ದಾನ ಮಾಡಿ ಎಂದೆಲ್ಲ ಹಿಂದೆ ಸುತ್ತುವವರ ಬಗ್ಗೆಯೋ, ಅಥವಾ ಬೀದಿ ಬೀದಿಯಲ್ಲಿ ಕೈಚಾಚಿ ಭಿಕ್ಷುಕರ ಬಗ್ಗೆಯೋ ಹೆಚ್ಚು ಚಿಂತಿಸಿ ಕಿರಿಕಿರಿ ಮಾಡಿಕೊಂಡರೆ, ನಾನು ಹೇಳಿದ ಯಾವುದೂ ಒಳಗಿಳಿಯಲಿಕ್ಕಿಲ್ಲ.

ಆಹಾ..! ಊರೊಂದರ ಘಮವನ್ನು ಇಡಿಯಾಗಿ ಕುಡಿಯಲು ಇಲ್ಲಿಗೆ ಬರಬೇಕು. ಆ ಊರಿನ ನೆಲದ ಪ್ರತಿ ಕಣಕಣವೂ ರಾಧೇ ರಾಧೇ ಎನ್ನುತ್ತದೆ. ಅಲ್ಲೇ ರಸ್ತೆಬದಿಯ ಅಂಗಡಿ ಮುಂದೆ ನಿಲ್ಲಿ, ಚಹಾ ಕೇಳಿ ಆತ ನಿಮ್ಮನ್ನು ಕಂಡ ಕೂಡಲೇ ರಾಧೇ ರಾಧೇ ಎನ್ನುತ್ತಾನೆ. ಆಟೋ ಹತ್ತಿ ಆ ದೇವಸ್ಥಾನವೋ ಘಾಟಿನ ಮುಂದೆಯೋ ನಿಲ್ಲಿಸಲು ಹೇಳಿ ಚಿಲ್ಲರೆ ವಾಪಾಸು ತೆಗೆದುಕೊಳ್ಳುವಾಗ ಧನ್ಯವಾದ ಹೇಳಿ, ಆತನೂ ರಾಧೇ ರಾಧೇ ಎನ್ನುತ್ತಾನೆ. ಯಾರಲ್ಲಿ ಏನೇ ಮಾತಾಡಿ, ಅಲ್ಲೂ ರಾಧೇ ರಾಧೇ.

ಅಬ್ಬಾ! ಈ ರಾಧೆ ಕೃಷ್ಣನಿಗಿಂತಲೂ ಪುಣ್ಯ ಮಾಡಿದ್ದಳಪ್ಪ! ಊರೆಲ್ಲ ತಿರುಗಾಡಿ, ಪೇಡಾ ತಿಂದು, ಹಾಲು/ಲಸ್ಸಿ ಕುಡಿದು, ಯಮುನೆಯ ಮಡಿಲಲ್ಲೂ ತೇಲಿ, ಆ ಮಟಮಟ ಮಧ್ಯಾಹ್ನ, ಇನ್ನೇನು ದೋಣಿಯಿಂದಿಳಿಯಬೇಕು ಅನ್ನುವಷ್ಟರಲ್ಲಿ, ಅಲ್ಲೇ ತೀರದಲ್ಲಿ ಕಂಡ ಅಪ್ಪ ಮಗ ನಮ್ಮ ಹಿಂದೆ ಬಿದ್ದರು.

ಆ ಅಂಬಿಗನಿಗೋ ದುಡ್ಡು ಕೊಟ್ಟಿರಿ. ನಾವು ಅಂಬಿಗರಲ್ಲವಲ್ಲ. ನಮಗೆ ದುಡ್ಡೆಲ್ಲಿಂದ ಬರಬೇಕು ಎಂದರು. ನಾನು ನಕ್ಕು, ಅವರಿಬ್ಬರ ಕೈಯಲ್ಲಿ ಹಿಡಿದಿದ್ದ ತೆಳ್ಳನೆಯ ಹಗ್ಗ ಹಾಗೂ ಅದರ ಇನ್ನೊಂದು ತುದಿ ನೀರಲ್ಲಿ ಬಿಟ್ಟು ಕಾಯುತ್ತಿದ್ದರಿಂದ ಸಹಜವಾಗಿಯೇ ಮೀನು ಹಿಡಿಯುತ್ತಿದ್ದಾರೆಂದು ಭಾವಿಸಿ, ‘ಮೀನು ಹಿಡಿಯುತ್ತಿದ್ದೀರಲ್ಲ, ಕಾಯಕವೇ ಕೈಲಾಸ’ ಎಂದೆ.

ಆತ, ‘ಅಯ್ಯೋ, ಎಲ್ಲಾದರೂ ಉಂಟೇ, ಯಮುನೆಯಲ್ಲಿ ಮೀನು ಹಿಡಿಯೋದಾ!’ ಅಂದ. ಈ ಪವಿತ್ರ ಜಾಗದಲ್ಲಿ ಮೀನು ಹಿಡಿಯೋದಿಲ್ಲ. ಅದಕ್ಕಾಗಿಯೇ ಈ ತಾಯಿ ಯಮುನೆ  ನಮ್ಮ ಮೇಲೆ ಕರುಣೆ ತೋರಿದ್ದಾಳೆ. ಆಕೆಯೇ ನಮ್ಮ ಹೊಟ್ಟೆಪಾಡಿಗೊಂದು ವ್ಯವಸ್ಥೆ ಮಾಡಿದ್ದಾಳೆ ನೋಡಿ’ ಎನ್ನುತ್ತಾ ಹಗ್ಗ ಎಳೆದರು. ಹಗ್ಗದ ತುದಿಯಲ್ಲಿ ಎರಡು ರೂ ನಾಣ್ಯ.

ಭಕ್ತಾದಿಗಳು ಅತಿ ಭಕ್ತಿಯಿಂದ ಯಮುನೆಗೆ ಎಸೆಯುವ ನಾಣ್ಯಗಳನ್ನು ಹಗ್ಗದ ತುದಿಗೆ ಅಯಸ್ಕಾಂತ ಕಟ್ಟಿ ಯಮುನೆಗೆ ಗಾಳ ಹಾಕುವ ಇವರನ್ನು ‘ಯಮುನೆ’ ಪೊರೆಯುತ್ತಾಳೆ! ತೀರ ದಾಟಿ ಮುಂದೆ ಹೋದ ನಾನು ಮತ್ತೆ ತಿರುಗಿ ನೋಡುತ್ತೇನೆ, ಯಮುನೆಯ ತೀರದಲ್ಲಿ ಸಾಲು ಸಾಲಾಗಿ ನಿಂತ ಮಕ್ಕಳ ಕೈಲೆಲ್ಲ ಈ ಅಯಸ್ಕಾಂತ ಗಾಳ!

‍ಲೇಖಕರು ರಾಧಿಕ ವಿಟ್ಲ

November 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: