ಜ್ಯೋತಿ ಇರ್ವತ್ತೂರು ಕಥೆ- ಬೆಳ್ಳಿಗೆಜ್ಜೆ ಮತ್ತು ಅಪ್ಪ…

ಜ್ಯೋತಿ ಇರ್ವತ್ತೂರು

ಅದ್ಯಾಕೋ ಒಂದು ಕಾಲಿಗೆ ಬೆಳ್ಳಿ ಕಡ ಹಾಕಬೇಕೆಂಬ ಹಂಬಲ ಇತ್ತೀಚೆಗೆ ಬಹಳ ಕಾಡಿತು. ಯಾಕೆಂದು ನನಗಂತು ಗೊತ್ತಿಲ್ಲ. ಅದು ಈ  ವಯಸ್ಸಿನಲ್ಲಿ ಇನ್ನು ಸೆಕೆಂಡ್ ಪಿಯುಸಿ ಓದೋ ಮಗಳಿರುವಾಗ ಈ ಹುಚ್ಚು ಯಾಕೆ ಎಂದು ನೀವು ಕೇಳಿದ್ರೆ ಆಮ್ ಸಾರಿ. ನಾನಂತು ಇನ್ನೂ ಮಗು ಅಂತಾನೆ ತಿಳ್ಕೊಂಡಿದ್ದೀನಿ  ನನ್ನನ್ನು. ಹೊಸತನಕ್ಕಾಗಿ ಹಂಬಲವನ್ನಪ್ಪಿ ಮುಗ್ಧತೆಯನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂಬುದು ನನ್ನ ನಿಲುವು.

ಹಾಗಾಗಿ ಊರಿಗೆ ಹೋದಾಗ ಮರದ ಮೇಲೆ ಕೋತಿಯಂತೆ ಹತ್ತಿ ಮಜಾ ಮಾಡೋದನ್ನು ನಾನಂತು ಬಿಡೋದಿಲ್ಲ.ನಮ್ಮಲ್ಲಿ ದೊಡ್ಡದೊಂದು ತಪ್ಪು ಕಲ್ಪನೆಇದೆ. ದೊಡ್ಡವರೆಂದರೆ ಗಂಭೀರ ಮುಖ ಹಾಕೋಬೇಕು. ಜೋರಾಗಿ ನಕ್ರೆ ಅದಕ್ಕೇನೋ  ಕಮೆಂಟ್ ಬಂದೇ ಬರುತ್ತೆ. ಅದ್ಯಾಕೆ ಚಿಕ್ಕ ಮಗು ತರ ಆಡ್ತೀರಾ ಎಂಬ ಕಮೆಂಟ್ ಅಂತು ಸಾಮಾನ್ಯಅದಕ್ಕೆಲ್ಲ  ಕೇರ್  ಮಡ್ಬಾರ್ದು  ಮಾರಾಯರೆ.ಸುಮ್ನೇ ನಮಗಿಶ್ಟದಂತೆ ಜೀವಿಸಬೇಕು. 

ನಮ್ಮೂರಲ್ಲಿ  ಬಂಡೆಯೊಂದಿದೆ. ಚಿಕ್ಕವರಿರುವಾಗ ಅದರ ಮೇಲೆಸೊಪ್ಪುಹಾಕಿ ಜಾರೋದೆಂದರೆ ಅದೇನೋ ಮಜಾ.  ನಾನು ನನ್ನಗೆಳತಿಯರು  ಗೆಳೆಯರು ಜಾರುಬಂಡೆಯಲ್ಲಿ ಜಾರಲು ಸರತಿ ಸಾಲಿನಲ್ಲಿ  ನಿಲ್ಲುತ್ತಿದ್ದೆವು.

ಬೆಳ್ಳಿ ಕಡದ ಬಗ್ಗೆ ಮಾತಾಡಿ ವಿಶಯಾಂತರ ಆಯ್ತು ಅಂದ್ಕೋಬೇಡಿ. ಇನ್ನು ಬಾಲ್ಯದಲ್ಲಿದ್ದ ದಿನಗಳು ನಮ್ಮಪ್ಪ ಶಾಲಾ ಅಧ್ಯಾಪಕ ಬರೋ  ಸಂಬಂಳದಲ್ಲಿ ಐದು ಮಕ್ಕಳ ವಿಧ್ಯಾಭ್ಯಾಸದ ಹೊರೆ ಅವರ ಮೇಲೆ.ಆದರು ಯಾವತ್ತು  ನನ್ನಮೇಲೆ ಸಿಟ್ಟು ಮಾಡಿಕೊಂಡ ದಿನವೇ ನೆನಪಿಲ್ಲ.ಬದಲಾಗಿ ನಾನು ಹಠ ಮಾಡಿದ ದಿನಗಳು ನೆನಪಿವೆ.

ಅಪ್ಪನ ಬೆನ್ನ ಹಿಂದೆಯೇ ತಿರುಗುತ್ತಿದ್ದ ನನ್ನನ್ನು  ಹೋದಲೆಲ್ಲಾ ಹೆಚ್ಚಾಗಿ ಕರೆದುಕೊಂಡು ಹೋಗ್ತಾ ಇದ್ರು. ಅವರು ಪೇಪರ್ ವ್ಯಾಲ್ವೇಶನ್ ಅಂತ ಬೆಂಗಳೂರು ಹಳಿಯಾಳ, ಮೈಸೂರು ಹೀಗೆಎಲ್ಲಿ ಹೋದ್ರು ನನ್ನನ್ನು ಕರ್ಕೊಂಡು ಹೋಗ್ತಾ ಇದ್ರು. ಅದೇನೋ ಅವರ ಆತ್ಮದ ಭಾಗವೇ ಆಗಿಬಿಟ್ಟಿದ್ದೆ ನಾನು.

ಇನ್ನು  ಗೆಜ್ಜೆಯ  ವಿಚಾರಕ್ಕೆ ಬರೋಣ.ಬಾಲ್ಯದಲ್ಲಿ ಗೆಜ್ಜೆ ಬೇಕೆಂಬ ಆಸೆ. ಹಾಕಿ ಕುಣೀಬೇಕು. ಕಾಲು ನೋಡ್ತಾನೆ ಇರ್ಬೇಕು ಹೀಗೆ ಏನೇನೋ ಆಸೆಗಳು.ಆದರೆ ಅಪ್ಪನ ಹತ್ತಿರ ದುಡ್ಡಿರ್ತಿರಲಿಲ್ಲ, ಆದರೆ ನಾನು ಹಿಡಿದ ಹಠ ಬಿಡ್ತೀನಾ ಸಾಧ್ಯವೇ ಇಲ್ಲ. ಹೀಗೊಂದು ಸಲ ಅಪ್ಪ ನನ್ನ ಬಿಟ್ಟು ಹೋದಾಗ ಅವರು ಹೋದ ಮೇಲೆ ಹಾಗೆ ಅಳ್ತಾ  ಅವರು ಹೋದ ಕೆಲವು ಸಮಯದ ನಂತರ  ಹಿಂದೆನೆ ಹೋಗಿದ್ದೆ.. ತುಂಬಾ ದೂರ ಸಾಗಿದ್ದೆ. ಅಪ್ಪ ಕಾಣಲೇ ಇಲ್ಲ. ಅಳ್ತಾ ಇದ್ದ ನನ್ನನ್ನು  ಅಲ್ಲಿದ್ದ ಮನೆಯವರು ಮತ್ತೆ ಮನೆಗೆ ಕರ್ಕೋಂಡು ಬಂದು ಬಿಟ್ಟಿದ್ರು. ಮತ್ತೆ ಅಮ್ಮನ  ಕೈಯಿಂದ ಬೆಸ್ತೊಂಡಿದ್ದು  ಆಯ್ತು. ಇರ್ಲಿ  ಈಗ ಗೆಜ್ಜೆ ಕಥೆಗೆ ಮತ್ತೆ ವಾಪಾಸಾಗ್ತೀನಿ,

ನಾನು ಮಾಡಿದ ಹಠದ ರೀತಿಯಿಂದ ಅಪ್ಪನಿಗು ಸಾಕಾಯ್ತು. ಹೋಗ್ಲಿ ಪಾಪ ಅಂತ ಅಪ್ಪ ಗೆಜ್ಜೆ ತಂದೇ ಬಿಟ್ರು. ಇನ್ನು ಕೇಳ್ಬೇಕೇ  ನನ್ನ ಖುಶಿಗಂತು ಪಾರವೇ ಇರಲಿಲ್ಲ, ನನ್ನೊಳಗೊಂದು ಗೆಜ್ಜೆ ಪ್ರಪಂಚವೇ ಸೃಶ್ಟಿಯಾಗಿಬಿಟ್ಟಿತ್ತು. ಕಾಲಿಗೆ ಹಾಕಿಕೊಂಡ ನಾನಂತು ಓಡಾಡಿದ್ದೇ ಓಡಾಡಿದ್ದು.ಊರೆಲ್ಲಾ ಏನೂ ಇಲ್ವೇನೋ ಬರೀ ಗೆಜ್ಜೆ ಸದ್ದೇ ತುಂಬಿಕೊಂಡಿದೆಯೇನೋ ಅನ್ನೋ ಭ್ರಮೆ ನನಗೆ.

ಮನೆಯೊಳಗೆ ಹೊರಗೆ ಓಡಾಡಿದ ಮೇಲೇ ನದಿಯತ್ತ ಮನ ಹರಿಯಿತು. ನನ್ನ ಅತ್ಯಂತ ಪ್ರೀತಿಯ ವಿಶಯ ಅಂದ್ರೆ ನದಿ ಮೇಲಿರುವ ಕಲ್ಲಿನ ಮೇಲೆ ಕೂತು ಕಾಲು ಚಾಚಿ ನೀರಿನಿದ ಕಾಲನ್ನು ನೋಡೋದು. ಕೆಲವೊಮ್ಮೆ ಮೀನುಗಳು ಮೆಲ್ಲನೆ ಕಚ್ಚಿ ಕಚಗುಳಿಯಿಡುತ್ತಿದ್ದರೆ ಅದೇನೋ ಆನಂದ. ಈ ಬಾರಿ ಕಾಲುಗಳಲ್ಲಿ ಗೆಜ್ಜೆಯಿತ್ತು. ಬಂಡೆ ಮೇಲೆ ಕೂತು  ಕಾಲನ್ನು ಕೆಳಗೆ ಬಿಟ್ಟು  ಗೆಜ್ಜೆಯನ್ನೇ  ನೋಡುತ್ತಿದ್ದೆ. ತುಂಬಾ ಹೊತ್ತಾಗಿತ್ತು. ಇನ್ನು ವಾಪಾಸು ತೆರಳುವ ಎಂದು ಕಾಲು ಮೇಲೆ ಎತ್ತಿದ್ದರೆ ಗೆಜ್ಜೆಯೊಂದು ಮಾಯವಾಗಿತ್ತು ಹಾಗೆ ನನ್ನ ಖುಶಿಯುಕೂಡ.

ಒಂದೇ ದಿನದಲ್ಲಿ ಪಾರವೇ ಇಲ್ಲದ ಖುಶಿ ಈಗ ಮಾಯವಾಗಿತ್ತು. ನನ್ನನ್ನು ಯಾವುದೋ ಒಂದು ಶೋಕ ಗೀತೆಯು ಕಾಡಿದಂತೆ ಭಾಸವಾಯಿತು. ಸಪ್ಪೆ ಮುಖದಿಂದ ಕಂಬನಿಗರೆಯುತ್ತಾ ಮನೆಯತ್ತ ತೆರಳಿದರೆ ಅಮ್ಮನ ಎಂದಿನ ಬೈಗುಳ, ಏನು ತಂದ್ಕೊಟ್ಟರು ಇಟ್ಕೊಳ್ಳೋಕೆ ಬರಲ್ಲ  ಅಂತ. ನನಗಂತು ಗಾಯದ ಮೇಲೆ ಬರೆ ಎಳೆದಂತಾಯಿತು. ಅಪ್ಪನಂತು ಎಂದಿನಂತೆ ಇನ್ನೊಂದು ಹೊಸತು ತರೋಣವೆಂದರು. ನಿಜ ಈ ಅಪ್ಪ ಎಂದರೆ ಮುಗಿಯದ ಅಕ್ಷಯಪಾತ್ರ.. ಅಮ್ಮ ಮಮತೆಯ ಮಡಿಲಾದರೆ ಅಪ್ಪ ಅಮೃತ..

ಅಪ್ಪನಿಲ್ಲದ ಅಂಗಳವೆಂಬ ಕವನವನ್ನು ಕೆಲ ವರುಶಗಳ ಹಿಂದೆ ಬರೆದಿದ್ದೆ. ಅದ್ಯಾಕೋ ಬರೆದಿದ್ದೆ ಗೊತ್ತಿಲ್ಲ.  ಅಪ್ಪನಿಗೆ ಎಶ್ಟೇ ವರುಶ ಆದರು ಅವರ ಕೈಯ ನೆರಿಗೆ ಕಾಣಿಸದು ಕಾಣುವುದು ಪ್ರೀತಿಯ ತ್ಯಾಗದ ಗೆರೆಗಳು ಮಾತ್ರ ಅಲ್ವಾ.ಅದ್ಯಾಕೋ ನಿಜವಾಗಿ ಅಪ್ಪ ತೀರಿಕೊಂಡಾಗ ಅಂಗಳ ಪ್ರವೇಶಿಸುವ ಧೈರ್ಯ ಬರಲಿಲ್ಲ. ತುಂಬಾ ಕಶ್ಟಪಟ್ಟು ಹೋದ ಮೇಲೆ  ಮತ್ತೆ ಈಗ ಅಪ್ಪನಿಲ್ಲದ ಮನೆಗೆ ಇನ್ನೂನಾನು ಹೋಗಿಲ್ಲ. ಹೋಗಲು ತುಂಬಾನೆ  ತ್ರಾಸವೆನಿಸುತ್ತಿದೆ..

ಆ ಗೆಜ್ಜೆಯ ನೆನಪಾಗಿ ಮತ್ತೆ ಕಾಲಿಗೆ ಕಡ ತರಿಸಿಕೊಂಡಿದ್ದೇನೆ. ಅಮೆಜಾನ್ ನಲ್ಲಿ ತರಿಸಿದ್ದು ಚಿಕ್ಕದಾದಾಗ ನನ್ನ ನಾದಿನಿ ಪ್ರಫುಲ್ಲ  ತಮ್ಮಲ್ಲಿದ್ದ ಬೆಳ್ಳಿಕಡ ಕಳಿಸಿಕೊಟ್ಟಿದ್ದಾರೆ. ಹಾಕಿಕೊಂಡು ದಿನ ಸಂಭ್ರಮ ಪಡುತ್ತಲೇ ಇದ್ದೇನೆ.ಬೆಳ್ಳಿ ಗೆಜ್ಜೆಯ ಜೊತೆ  ಅಪ್ಪನ ನೆನಪು ಬೆಳದಿಂಗಳಾಗಿ ನನ್ನ ಬೆಸೆದುಕೊಂಡಿದೆ.

‍ಲೇಖಕರು Admin

February 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: