ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವನಗಳು…

ಉಲ್ರೀಕ ಆಲ್ಮತ ಜ಼ಂಡಿಷ್

ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ 

ಈ ಹಿಂದಿನ ಪೂರ್ವ-ಜರ್ಮನಿಯಲ್ಲಿ ಜನಿಸಿದ ಉಲ್ರೀಕ ಆಲ್ಮತ ಜ಼ಂಡಿಷ್ (Ulrike Almut Sandig; ಜ: 1979), ಈಗ ಬರ್ಲಿನ್ ನಿವಾಸಿ.  ಕಾವ್ಯರಚನೆಯ ಆರಂಭದ ದಿನಗಳಲ್ಲಿ ಅವರು ತಮ್ಮ ಕವನಗಳನ್ನು ಆಗ ಅವರು ವಾಸಿಸುತ್ತಿದ್ದ ಲೀಪ್‌ಜಿಗ್ ನಗರದ ದಾರದೀಪದ ಕಂಬಗಳಿಗೆ ಅಂಟಿಸುತ್ತಿದ್ದರು, ಸಾರ್ವಜನಿಕ ಸ್ಥಳಗಳಲ್ಲಿ ಹಂಚುತ್ತಿದ್ದರು.  ಕಾವ್ಯವನ್ನು ಅದರ ಸಾಂಪ್ರದಾಯಿಕ ಪರಿಸರಗಳಿಂದ ಮುಕ್ತಗೊಳಿಸಿ ನೇರವಾಗಿ ಓದುಗರಿಗೆ ತಲುಪುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. 

ಉಲ್ರೀಕರ ಕವನಗಳು ಒಮ್ಮೆಗೆ ಸರಳ ಮತ್ತು ಅದ್ಭುತವಾಗಿದ್ದು, ಎರಡು ಭೂಗೋಳಾರ್ಧಗಳ ಮೂಲಕ ಪ್ರಪಂಚದ ಕೇಂದ್ರಕ್ಕೆ ಸೇರುವ ಪ್ರಯಾಣದ ನಕ್ಷಾರೇಖೆಗಳನ್ನು ಎಳೆಯುತ್ತವೆ.  ಅವರ ಕವನಗಳು ನಗರದ ವಾಸ್ತವತೆಯನ್ನು ಅನ್ವೇಷಿಸುತ್ತವೆ, ಆದರೆ ಆ ವಾಸ್ತವತೆಯು ದುಃಸ್ವಪ್ನಗಳು, ಬೈಬಲ್, ಕಾಲ್ಪನಿಕ ಕಥೆಗಳು ಮತ್ತು ನರ್ಸರಿ ರೈಮ್‌ಗಳ ಉಲ್ಲೇಖಗಳೊಂದಿಗೆ ಹೆಣೆದುಕೊಂಡಿದೆ.  ಕಣ್ಮರೆಯಾಗುತ್ತಿರುವ ಪ್ರಪಂಚಕ್ಕಾಗಿ ಹಂಬಲಿಸುತ್ತದೆ. 

ಹಾಸ್ಯ, ವ್ಯಂಗ್ಯ, ಸಂದೇಹ, ಮತ್ತು ನಾಸ್ಟಾಲ್ಜಿಯಾದಿಂದ ಕೂಡಿದ ಈ ಕವನಗಳು ಸಂಗೀತಕವೂ ಆಗಿವೆ, ಬಹು ಅರ್ಥಗಳನ್ನು ಬಳಸಿಕೊಳ್ಳುತ್ತವೆ ಮತ್ತು ವಾಕ್ಯರಚನೆಯನ್ನು ವಿಸ್ತರಿಸುತ್ತವೆ, ಆದ್ದರಿಂದ ಓದುಗರು ನಿರಂತರವಾಗಿ ಊಹೆ ಮಾಡುತ್ತಲೇ ಇರುತ್ತಾರೆ, ಮುಂಬರುವ ಸಾಲು ಪಡೆವ ತಿರುವನ್ನು ನೋಡಿ ಆಶ್ಚರ್ಯಪಡುತ್ತಾರೆ (‘ಥಿಕ್ ಆಫ಼್ ಇಟ್’ ಸಂಕಲನದ ಬೆನ್ನುಡಿಯಿಂದ ಆಯ್ದಕೊಂಡ ಸಾಲುಗಳು). 

ಉಲ್ರೀಕರು ಸಾಮಾನ್ಯವಾಗಿ ಅವರ ಕವನಗಳಿಗೆ ಶಿರ್ಷಿಕೆ ಕೊಡುವುದಿಲ್ಲ, ಆದರೆ ಕವನದ ಒಂದು ಸಾಲು ಅಥವಾ ವಾಕ್ಯಾಂಶವನ್ನು ದಪ್ಪಕ್ಷರದಲ್ಲಿ ತೊರಿಸುತ್ತಾರೆ. ಇದನ್ನು ಕವನದ ಕೇಂದ್ರವೆಂದು ಅಂದುಕೊಳ್ಳಬಹುದಾದರೂ, ಅವರು ಅದಕ್ಕೆ ಶಿರ್ಷಿಕೆಯ ಪಟ್ಟ ಕೊಡುವುದಿಲ್ಲ.  ಇಲ್ಲಿ ನಾನು ಅನುವಾದಿಸಿದ ಕವನಗಳಲ್ಲಿಯೂ ಇದನ್ನೇ ಅನುಸರಿಸಿರುವೆ.    ಪೂರ್ವ-ಜರ್ಮನಿಯಲ್ಲಿ ಬೆಳೆದ ಉಲ್ರೀಕರಿಗೆ ವರ್ಗಶ್ರೇಣಿಗಳ ಮೇಲಿರುವ ಅಪನಂಬಿಕೆ ಹಾಗೂ ಅವರ ಭಾಷೆಯ ಪಾರದರ್ಶಿಕತೆಯನ್ನು ಇದು ಎತ್ತಿ ತೋರಿಸುತ್ತದೆ ಎಂದು ಕ್ಯಾರೆನ ಲೀಡರ್ ಹೇಳುತ್ತಾರೆ.          

ನಾಲ್ಕು ಕವನ ಸಂಕಲನಗಳಲ್ಲದೇ, ಉಲ್ರೀಕ ಆಲ್ಮತ ಜ಼ಂಡಿಷ್ರು ಎರಡು ಕಥಾ ಸಂಕಲನಗಳು ಹಾಗೂ ಒಂದು ಕಾದಂಬರಿಯನ್ನು ಕೂಡ ಪ್ರಕಟಿಸಿದ್ದಾರೆ.  ತಮ್ಮ ಬರಹಗಳಿಗಾಗಿ ಅವರಿಗೆ ಜರ್ಮನಿಯ ಹಲವಾರು ಪ್ರತಿಷ್ಠಿತ ಪುರಸ್ಕಾರಗಳು ದೊರಕಿವೆ. ಖ್ಯಾತ ಸಂಗೀತ ಸಂಯೋಜಕರು ಹಾಗೂ ‘ಪರ್ಫಾರ್ಮೆನ್ಸ ಆರ್ಟಿಸ್ಟ್’ರ ಜತೆಗೂಡಿ ಇವರು ತಮ್ಮದೇ ಕವನಗಳ  ಕಾವ್ಯಾಭಿನಯ ಪ್ರದರ್ಶನಗಳನ್ನು ನೀಡಿದ್ದಾರೆ.  ಈ ಪ್ರದರ್ಶನಗಳ ವೀಡಿಯೋಗಳನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.  ಉಲ್ರೀಕ ಆಲ್ಮತ ಜ಼ಂಡಿಷ್ರು ಜರ್ಮನ್ ಸಾಹಿತ್ಯದ ಹೊಸ ತಲೆಮಾರಿನ ಮುಖ್ಯ ಕವಿಗಳಲ್ಲಿ ಒಬ್ಬರು ಹಾಗೂ ನಿಜವಾದ ಅರ್ಥದಲ್ಲಿ ಒಬ್ಬ ‘ಕಾವ್ಯಕಲಾವಿದೆ.’  

ಇಲ್ಲಿರುವ ಕವನಗಳನ್ನು ಕಲ್ಕತ್ತಾದ ‘ಸೀಗಲ್ ಬುಕ್ಸ’ (Seagull Books, Calcutta) ಪ್ರಕಟಿಸಿದ ಉಲ್ರೀಕರ ಇಂಗ್ಲಿಷ್ ಅನುವಾದಿತ ಎರಡು ಕವನ ಸಂಕಲನಗಳಿಂದ ಆಯ್ದುಕೊಂಡಿದ್ದೇನೆ – ‘ಥಿಕ್ ಆಫ಼್ ಇಟ್, 2018’ (Thick of It) ಮತ್ತು ‘ಐ ಆ್ಯಾಮ್ ಅ ಫೀಲ್ಡ್ ಫುಲ್ ಆಫ಼್ ರೇಪ್ಸೀಡ್… 2020’ (I am a Field Full of Rapeseed, Give Cover to Deer and Shine Like Thirteen Oil Paintings Laid One on Top of the Other).  ಈ ಸಂಕಲನಗಳಲ್ಲಿವ ಕವನಗಳನ್ನು ಜರ್ಮನ್ ಭಾಷೆಯಿಂದ ಇಂಗ್ಲಿಷ್ ಗೆ ಅನುವಾದ ಮಾಡಿದವರು ಕ್ಯಾರೆನ ಲೀಡರ್ (Karen Leeder). 

1 ಮೂಲ : YOU WROTE YOURSELF THE POEM OF IT

ನಿನ್ನ ಕೆಳಗೆ ಭೂಮಿ, ಯಾವಾಗಲೂ ತಿರುಗುತ್ತಿರುತ್ತೆ.
ನಿನ್ನ ಮೇಲೆ ಮರಗಳ ನೆರಳ್‌ಚಿತ್ರ, ಸೂರ್ಯನ ಕಡಿದಾದ
ಕಮಾನಿನ ಹಿನ್ನೆಲೆಯಲ್ಲಿ. ಆಗಸ ಅಗಲವಾಗಿ ತೆರೆದು ಬಿದ್ದಿದೆ
ಕಾಲದಲ್ಲಿ ತಿರುಗುತ್ತಿರುವ ಚಂದ್ರ.
ನಿನ್ನ ಹಿಂದೆ ಸದ್ದಿಲ್ಲದ ಹಿಮ ಕವಿದ ಕಲ್ಲಿನ ಮಲೆಗಳು.

ನಿನ್ನ ಮುಂದೆ ಮೋಡಗಳ ಚೆಕ್ಕೆಗಳು.
ಆಳ ಇಳಿವಿನಲ್ಲಿ ನಿನ್ನ ಮನೆಯಿದೆ,
ನೀನೆ ಬರೆದಿದ್ದೆ ಕವನ ಅದರ ಬಗ್ಗೆ.
ನಿನ್ನೊಳಗೆ ಸದಾ ಉತ್ತರದೆಡೆ ತೋರಿಸುವ ಕಂಪಿಸುವ ಸೂಜಿ,
ಇದ್ದರೂ ಅದರಾಚೆ ಏನಿದೆಯೆಂಬ ಕಲ್ಪನೆ ನಿನಗಿಲ್ಲ.

2 ಮೂಲ: EAR

ದೆವ್ವಗಳು ನೆನಪಿಸಿಕೊಳ್ಳುತ್ತಾವೆಯೇ? ಯಾವುವು ನೆನಪಿಸಿಕೊಳ್ಳುತ್ತಾವೆ?
ಯಾವುವು ನೆನಪಿಸಿಕೊಳ್ಳಲ್ಲ? ಹಾಗೆ, ನೆನಪಿಸಿಕೊಳ್ಳುವುದಾದರೆ, ಯಾವ ಅಂಗ

ಬಳಸಬಹುದು? ಮೆದುಳೋ, ಮೂಳೆಗಳೋ, ಕಣ್ಣುಗಳು ಇರಬಹುದೇ,
ಅಥವಾ, ಎಲ್ಲಾ ಅಂದ ಮೇಲೆ, ಬಹುಶಃ ಕಿವಿಯೆನೋ?

ಹಿತ್ತಲಿನ ಹಿಂದೆ ಎತ್ತರದ ಹುಲ್ಲಿನ ಕಾಡನ್ನು ಅವು ನೆನೆದುಕೊಳ್ಳುತ್ತಾವೆಯೇ?
ಹೇಗೆ ಮುಳ್ಳುಗಳು ತುರಿದವು ಗುಲಾಬಿಗಳು ಬೆಳೆದಂತೆ,

ಹೇಗೆ ಪೇರಳೆ ಮರ ಕೀರಿತು, ಹೇಗೆ ಮೆಗ್ನೋಲಿಯಾ ಗಿಡ ಹಾಡಿತು,
ಅದರ ಪ್ರತಿ ಗೆಲ್ಲಿನಲಿ ನೀರ್‌ಗಾಲಿಯಂತಿರುವ ಕುಸುಮಗಲೋಳಗೆ

ಬ್ಲೂಬಾಟಲ್‌ ನೊಣಗಳ ಸಾಲುಗಳು, ಹೇಗೆ ಏರೋಪ್ಲೇನುಗಳು
ಗುರುಗುಟ್ಟುತ್ತಿದ್ದವು ಹುಚ್ಚುಹಿಡಿಸುವ ನೀಲಿ ಬೋಗುಣಿಯಂತಿರುವ ಆಕಾಶದಲಿ

ಮತ್ತೆ, ಮರಗಳ ಶಿಖರಗಳಲ್ಲಿ, ಗಾಳಿಯ ಹೊದರಿನಲಿ
ದೆವ್ವಗಳ ಗುಂಯಗುಡುವಿಕೆಯನ್ನು ಯಾರಾದರೂ ನೆನಪಿಸಿಕೊಳ್ಳುತ್ತಾರೆಯೇ?

3 ಮೂಲ: BEHIND MY EYES

ನನ್ನ ಕಣ್ಣುಗಳ ಹಿಂದೆ ಅನ್ಯರು ಕೂತು ನೋಡುತ್ತಾರೆ
ನಾನು ನೋಡಿದ್ದನ್ನೆಲ್ಲವನ್ನೂ.
ನಾನು ಕಾಣ ಬಲ್ಲದ್ದನ್ನು ಮಾತ್ರ ನಾನು ನೋಡುವೆ.

ರಾತ್ರಿಯಲ್ಲಿ ವರಾಂಡಾದ ಬೆಳಕಿನಲ್ಲಿ ಮುಂಗುಸಿಯ ನೋಡುವೆ
ಫಾಕ್ಸ್‌ಗ್ಲವ್ ಪೊದೆಯ ಬುಡದಲ್ಲಿ, ಮಿಸುಕಾಡದೇ ಕೂತಿದೆ,
ಕಂದುವ ಬೆಳಕಿನಲ್ಲಿ ಅದೃಶ್ಯವಾಗುತ್ತಾ.
ನನಗೆ ಧೂಮಕೇತುಗಳು ಕಾಣಿಸಲ್ಲ, ಉಪಗ್ರಹಗಳು ಕಾಣಿಸಲ್ಲ.
ನನಗೆ ಏನೂ ಕಾಣಿಸಲ್ಲ ಚಂದ್ರನ ಚೂರೊಂದನ್ನು ಬಿಟ್ಟು
ಮತ್ತು ಗಾಜಿನಲ್ಲಿ ನನ್ನದೇ ಪ್ರತಿಬಿಂಬ,

ಹಗಲಲ್ಲಿ ನನಗೆ ಕಾಣುತ್ತೆ ಅಂಗಳದ ಹಿಂದಿರುವ ತೋಟದ ಮಸಕು ಹಸಿರಿನ ಮಿಂಚು,
ಯಾಂತ್ರಿಕವಾಗಿ ಗೋಣು ಹಾಕುತ್ತಿರುವ ಪಾರಿವಾಳ;
ಯಾವಾಗಲೂ ಅದೇ ಪೊದೆಯ ಮೇಲೆ.

ಮತ್ತೆ ಮೇಲೆ ಎತ್ತರದಲ್ಲಿ ಸುತ್ತಿ ಸುತ್ತಿ ದಾಳಿ ಮಾಡುವ ಜೆಟ್ ಪ್ಲೇನುಗಳು.
ಅವನ್ನೂ ನಾನು ನೋಡುವೆ.

ಮತ್ತೆ ಅನ್ಯರ ಬಗ್ಗೆ ಹೇಳಬೇಕಾದರೆ, ನಾನವರನ್ನು ಆದಷ್ಟು ಕಡಿಮೆ ಕಾಣುತ್ತೇನೆ,
ಅವರು ನನ್ನನ್ನು ಕಾಣುವಂತೆ,

ಅವರು ನನ್ನೊಳು ಕೂತಿದ್ದಾರೆ ಆಳದಲ್ಲಿ.

4 ಮೂಲ: THE PERFECT POEM

ಈ ಕವನವು ಸಂಪೂರ್ಣ ಪಾರದರ್ಶಕ.
ಅದನ್ನು ಓದಲಾಗದು. ಅದು

ಇಲ್ಲದಂತೆಯೇ. ಅದನ್ನು ಇನ್ನೂ
ಬರೆಯಲಿಲ್ಲ. ಪರಿಪೂರ್ಣ ಕವನವೆಂಬುದನ್ನು

ಹಾಡಬಹುದು ಹಾಗೂ ಆಡಬಹುದು ಅಷ್ಡೇ,
ಆಡಿಸಬಹದು ಹಾಗೂ ಆಲಿಸಬಹುದು ಅಷ್ಡೇ.

ಮತ್ತೆ ಮತ್ತೊಮ್ಮೆ ಆಡಿಸಬಹುದು:
ಕತ್ತಲುಕವಿದ ಕಟ್ಟಡದೊಳಗಿನ ಸದ್ದುಗಳು
ಮಹಾ ಮತ್ಸ್ಯದ ಹೊಟ್ಟೆಯೊಳಗೆ
ಬೆಳಗಿದ ಡಯೋಡುಗಳಿಂದ ಮಾಡಲ್ಪಟ್ಟಂತಹದ್ದು.
ನಿನಗೆ ಇನ್ನೂ ಏನೂ ಕಾಣಿಸುತ್ತಿಲ್ಲವೇ?
ಹಾಗಾದರೆ, ದಯಮಾಡಿ ಸ್ವಲ್ಪ ಪಕ್ಕಕ್ಕೆ ನೋಡು – ಮತ್ತೆ ಹಿಂದಕ್ಕೆ.

5 ಮೂಲ: A LULLABY FOR ALL THOSE

ನಿದ್ದೆಯ ಹೊತ್ತು ನಿದ್ದೆಯನ್ನು ತಡೆಯುವವರೆಲ್ಲರಿಗಾಗಿ ಇದೊಂದು ಜೋಗುಳ.
ನಿದ್ದೆಯೊಂದಿಗೆ ಕಾದಾಡುವವರೆಲ್ಲರಿಗಾಗಿ ಈ ಜೋಗುಳ,
ಯಾರಾದರೂ ಹೇಳಿದಾಗ: ದೀಪ ಆರಿಸು, ಮಾತು ನಿಲ್ಲಿಸು,
ನನ್ನ ದಣಿದ ಗೆಳೆಯರೇ, ಬಾರುಗಳಲ್ಲಿ ಕುರ್ಚಿಗಳನ್ನೆಲ್ಲಾ ಮೇಜುಗಳ ಮೇಲೆ ಜೋಡಿಸಲಾಗಿದೆ,
ಪೋಸ್ಟರುಗಳು ಬದಲಾಗುತ್ತಿದ್ದಂತೆ ಜಾಹಿರಾತು ಫಲಕಗಳ ಹಮ್‌ಮ್‌ಮ್ಮೆನ್ನುವ ಸದ್ದು,
ಬ್ಯಾಂಕುಗಳ ಖಾಲಿ ಹಾಲುಗಳನ್ನು ಸೆರೆಹಿಡಿಯುತ್ತಿರುವ ಕ್ಯಾಮರಾಗಳು,
ರಾತ್ರಿಯಂಗಡಿಗಳೆಲ್ಲವೂ ಬೆಳಗುತ್ತಿವೆ,
ರಾತ್ರಿ ಬಸ್ಸುಗಳೆಲ್ಲವೂ ಚರ್ಚಿನಂತೆ ಪ್ರಕಾಶಮಾನವಾಗಿರುವ
ಈ ಶಹರಿನಲ್ಲಿ ಪರ್ರರ್ರೆಂದು ಚಲಿಸುತ್ತಿವೆ.

ನಾವು ಚಿತ್ರಗಳ ಮೂಲಕ ಮಾತಾಡುತ್ತಿದ್ದೇವೆ ಅಷ್ಡೇ,

ಆದರೆ ನಮಗೇನಾದರೂ ಸುಳಿವಿದೆಯೇ ಕತ್ತಲು ಹೇಗೆ ಬರೆಯಲ್ಪಡುತ್ತದೆಂದು?
ನನ್ನ ದಣಿದ, ನನ್ನ ಇರುಳಾಂಧ ಗೆಳೆಯರೇ,
ನಾವು ಶುಭವಾರ್ತೆಗಳಿಗಾಗಿ ಕಾಯುತ್ತಿದ್ದೇವೆ,
ಶುಭವಾರ್ತೆಗಳು ಈ ದಿನಗಳಲ್ಲಿ ವಿರಳವಾಗುತ್ತಿವೆಯಾದರೂ,
ನಾವು ಕಾಯುತ್ತಿದ್ದೇವೆ ಎರಡು-ಮೂರು ಚೆನ್ನಾದ ಝೇಂಕರಿಸುವ ಕನಸುಗಳಿಗಾಗಿ,
ನಾಲ್ಕು ಶಾಂತಿ ಒಪ್ಪಂದಗಳಿಗಾಗಿ,
ಗಾಢ ನಿದ್ರೆಯಲ್ಲಿರುವ ಐದು ಸೇಬುಗಳಿಗಾಗಿ,
ನಾವು ಕಾಯುತ್ತಿದ್ದೇವೆ ಆರು ಚರ್ಚುಗಳಿಗಾಗಿ
ಹಾಗೂ ಏಳು ಕೊಬ್ಬಿದ ಹಸುಗಳಿಗಾಗಿ,
ಪ್ರಶಾಂತ ನಿದ್ರಾಭರಿತ ಎಂಟು ಗಂಟೆಗಳಿಗಾಗಿ,
ನಾವು ಕಾಯುತ್ತಿದ್ದೇವೆ ಕಾಣೆಯಾದ ಒಂಬತ್ತು ಗೆಳೆಯರಿಗಾಗಿ.
ನಾವು ನಮ್ಮ ಬೆರಳುಗಳನ್ನ ಎಣಿಸುತ್ತಿದ್ದೇವೆ.
ನಾವು ಈಗಲೂ ತಡೆಯುತ್ತಿದ್ದೇವೆ. ನಾವು ನಿದ್ದೆ ಮಾಡಲ್ಲ.

‍ಲೇಖಕರು Admin

February 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: