ಆನಂದ್ ಋಗ್ವೇದಿ ಓದಿದ ‘ಇಂಜಿಲಗೆರೆ ಪೋಸ್ಟ್’

ಬೇಲಿ ಮತ್ತು ನೀಲಿ ಹೂ: ಪ್ರಕೃತಿ ಹಾಗೂ ಪ್ರಾಕೃತಿಕತೆಯ ಕಥನ

ಡಾ ಆನಂದ್ ಋಗ್ವೇದಿ

ಇದು ಸುನೀತಾ ಅವರ ಮೊದಲ ಕಥಾ ಸಂಕಲನ. ಆದರೆ ತಮ್ಮ ಲಲಿತ ಪ್ರಬಂಧಗಳ ಮೂಲಕ ಸಾಹಿತ್ಯ ಜಗತ್ತಿಗೆ ಈಗಾಗಲೇ ಪರಿಚಿತರಾದ ಸುನೀತಾರವರು ಗದ್ಯದಲ್ಲಿ ತಮ್ಮ ಭಾವಾಭಿವ್ಯಕ್ತಿಯನ್ನು ಕರಗತ ಮಾಡಿಕೊಂಡವರು. ಅವರ ಪ್ರಬಂಧಗಳಲ್ಲಿ ಬರವಣಿಗೆಯ ಓಘ, ಲಾಲಿತ್ಯವಷ್ಟೇ ಅಲ್ಲ ಪ್ರಬಂಧಾತ್ಮಕ ಸವಿವರತೆಯೂ ಇದೆ. ಅವರು ಚಿತ್ರಿಸಲು ಉದ್ದೇಶಿಸಿದ ವಸ್ತುವಿನ ಸಾವಯವ ವಿವರಗಳನ್ನು ಒಟ್ಟು ಹಾಕಿ ಅದನ್ನು ಕಾವ್ಯಾತ್ಮಕ ಗದ್ಯದಲ್ಲಿ ಪದ್ಯದಂತೆ ಮಂಡಿಸುವುದೇ ವಿಶೇಷ. ಅಂತಹುದೇ ನಿರೂಪಣೆ ಅವರ ಕತೆಗಳಿಗೂ ಸಿಕ್ಕಿದೆ.

ಕಥಾ ಭಿತ್ತಿಯ ಸಾವಯವ ವಿವರಗಳನ್ನು ಸಂಕ್ಷೇಪಗೊಳಿಸಿ, ನೇರ ಪಾತ್ರ ಒಂದರ ಭಾವ ಮತ್ತು ಭಾವನೆಗಳ ತೊಳಲಾಟವನ್ನು ಕಥನಿಸುವ ಅವರ ಕ್ರಮ ಕತೆಗಳಿಗೆ ಭಾವ ತೀವ್ರತೆಯನ್ನು ತಂದುಕೊಟ್ಟಿದೆ. ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ಘಟನೆಯನ್ನು ಆಧರಿಸಿದ ಈ ಸಂಕಲನದ ಕೆಲವು ಕಥಾನಕಗಳಲ್ಲಿ ಆ ಘಟನೆಗಳ ಸವಿವರತೆ ಕಡಿಮೆ ಇದ್ದರೂ ಮೂಲ ಘಟನೆ ಬಲ್ಲವರಿಗೆ ಕತೆಯ ಭಾವ ತೀವ್ರತೆ ಕಾಡಿಸದೇ ಇರದು.

ಮಡಿಕೇರಿ ಸೀಮೆಯ ಕುಶಾಲನಗರದವರಾದ ಕತೆಗಾರ್ತಿ ಅತಿಯಾದ ಮಳೆ, ಪ್ರವಾಹದಂತೆ ಹರಿದು ಕೊಚ್ಚಿಕೊಂಡು ಹೋದ ನೀರು, ಗುಡ್ಡದ ಒಂದು ಭಾಗವೇ ಜರುಗಿ ಅದರ ಕೆಳಗಿನ ಭೂ ಪ್ರದೇಶವನ್ನು ನಾಮಾವಶೇಷಗೊಳಿಸಿದ ದಾರುಣ ಪರಿ –  ಈ ಎಲ್ಲಾ ಸಂಗತಿಗಳನ್ನೂ ಕಂಡು ಕೇಳಿ ಕನಲಿದ್ದವರು. ಅಂತಹ ಮಿಡುಕು ಮತ್ತು ಕನಲುವಿಕೆಯೇ ಕಥಾ ರೂಪ ತಾಳುವಾಗ ಲೇಖಕಿ ತಾನೂ ಒಂದು ಪಾತ್ರವಾಗಿ ಕತೆಯನ್ನು ಪ್ರವೇಶಿಸಿ ಆ ಕತೆಯ ಭಾವ ತೀವ್ರತೆ ಸ್ವಕೀಯವೂ ಆಗಿರುವಂತೆ ಭಾಸವಾಗಿಸುತ್ತಾರೆ. ಅಂತಹ ಎಲ್ಲಾ ಕತೆಗಳಲ್ಲಿ ಬರುವ ಪ್ರಕೃತಿ ಮತ್ತು ಪ್ರಾಕೃತಿಕ ವಿಕೋಪದಂತಹ ಸನ್ನಿವೇಶಗಳು ಕತೆಯ ಮೂಲ ಸಂಗತಿಗಳನ್ನು ಸಾರ್ವಕಾಲಿಕವಾಗಿಸುತ್ತವೆ.

ಕಳೆದ ವರ್ಷದಿಂದ ಇಡೀ ಜಗತ್ತನ್ನು ವ್ಯಾಪಿಸಿ ಮನುಕುಲದ ಜಂಘಾ ಬಲವನ್ನೇ ಉಡುಗಿಸಿ ಕಾಡುತ್ತಿರುವ ಕೊರೋನಾದಿಂದ ಉಂಟಾದ ತಲ್ಲಣವನ್ನು ‘ಝಕಾತ್’ ಕತೆ ಮನೋಜ್ಞವಾಗಿ ಕಟ್ಟಿಕೊಡುತ್ತದೆ. ಮಡಿಕೇರಿ ಪ್ರಾಂತ್ಯದ ಹಳ್ಳಿಯೊಂದರ ಸೌಹಾರ್ದಯುತ ಬದುಕನ್ನು ಮೊದಲು ಪರಿಚಯಿಸುವ ಕತೆ ಅಬೂಬಕರ್ ಶರೀಫರ ಕಾಲದ ಆ ಕೊಡುಕೊಳ್ಳುವಿಕೆ, ಹಿಂದು ಮುಸ್ಲಿಮ್ ಕ್ರಿಶ್ಚಿಯನ್ನರ ಆ ಸೌಹಾರ್ದತೆ ಮತ್ತು ಸಾಮುದಾಯಿಕ ಬದುಕನ್ನು ಅತ್ಯಂತ ಸಹಜ ಎಂಬಂತೆ  ಕಥಾ ನಾಯಕ ಶಬ್ಬೀರನ ಬಾಲ್ಯದ ಅಬೋಧ ಕಣ್ಣುಗಳಲ್ಲಿ ಚಿತ್ರಿಸುತ್ತದೆ. ಹಾಗಾಗಿಯೇ ಇಲ್ಲಿ ಬರುವ ಎಲ್ಲಾ ಸಂಭ್ರಮ ದುರಂತ ಸಂಕಟಗಳೂ ಸಾಮುದಾಯಿಕ.

ಕೊರೋನಾ ಮೊದಲ ಅಲೆಯಲ್ಲಿ ಹೊಸದಾಗಿ ಪರಿಚಯವಾದ ಕ್ವಾರಂಟೈನ್, ಲಾಕ್ ಡೌನ್, ಸೀಲ್ ಡೌನ್, ಪಿಪಿಇ ಕಿಟ್ ಧರಿಸಿ ಶುಶ್ರೂಷೆ ಮತ್ತು ಚಿಕಿತ್ಸೆ ನೀಡುವ ಆಸ್ಪತ್ರೆಯವರ ಆ ಅಪಾರ ಮಾನವೀಯತೆ ಎಲ್ಲವೂ ಕತೆಯ ಸಂಕಟವನ್ನೂ ರಮ್ಯಗೊಳಿಸುವಂತಿದೆ. ಶಬ್ಬೀರನ ತಾಯಿ ಮರಿಯಾಳ ಉದ್ದ ಕೂದಲ ಚೆಲುವು ಮತ್ತು ಅದನ್ನು ಜೋಳದ ಶೆಲ್ಲರ್ ಯಂತ್ರಕ್ಕೆ ಸಿಕ್ಕು ಕಳೆದುಕೊಂಡು ಬೋಳಾದ ತಲೆಯ ದುರಂತ ಇಲ್ಲಿ ಸಂವೇದನೆಯನ್ನು    

 ತೀವ್ರವಾಗಿ ಕಲಕದೆಯೂ ದಾಖಲಾಗಿದೆ. ತಾಯಿಗೆ ವಿಗ್ ಖರೀದಿಸುವ ಮಗನ ಉತ್ಸಾಹ ಮತ್ತು ಅದನ್ನು ಕೊಟ್ಟು ಸಂಭ್ರಮ ಪಡುವಲ್ಲಿ ಅಡ್ಡಿಬಂದ ಕೊರೋನಾದ ಸಂಕಷ್ಟ ಎರಡೂ ಸಹಜ ಮಾನವೀಯ ಕಳಕಳಿಯಲ್ಲಿ ಚಿತ್ರಿಸಲ್ಪಟ್ಟಿವೆ. ‘ಝಕಾತ್’ ಎಂಬುದು ಸತ್ಯ ವಿಶ್ವಾಸಿಯೊಬ್ಬ ತನ್ನ ದುಡಿಮೆಯಿಂದ ನೀಡಲೇಬೇಕಾದ ಸುಂಕ. ಅದನ್ನೇ ಶೀರ್ಷಿಕೆಯನ್ನಾಗಿಸಿದ ಲೇಖಕಿ ಈ ಕೊರೋನಾ ಕಾಲದ ಸಂಕಷ್ಟವನ್ನು ನಾವು ಸಹಿಸಲೇ ಬೇಕಾದ, ಭರಿಸಲೇಬೇಕಾದ ಪ್ರಾಕೃತಿಕ ಸುಂಕ ಎಂದು ಹೇಳುತ್ತಿದ್ದಾರೆಯೇ!?

ಇರಬೇಕು. ಏಕೆಂದರೆ ಇಲ್ಲಿಯ ಕತೆಗಳಲ್ಲಿ ಹಾಗೆ ಆಗುವ ವಿಕೋಪದ ಅನಾಹುತದ ಸನ್ನಿವೇಶಗಳ ಸಂಕಟದ ಚಿತ್ರಣವಿದೆಯೇ ಹೊರತು ಅವುಗಳ ಬಗ್ಗೆ ಬೇಸರ, ಅಸಮಧಾನವಿಲ್ಲ. ಹಾಗಾಗಿಯೇ ‘ಕಲ್ಲು ಮೊಟ್ಟೆ’ ಕತೆಯಲ್ಲಿ ಕೆದಮುಳ್ಳೂರಿನ ಕೊರ್ತಿ ಕಾಡು ಮತ್ತು ಕುದುರೆ ಮೊಟ್ಟೆಯ ಬೆಟ್ಟದ ಸಾಲು ಜರುಗಿದ ಸನ್ನಿವೇಶದ ದಾರುಣ ವರ್ತಮಾನದ ವರ್ಣನೆಗಿಂತ ತುಂಬು ಗರ್ಭಿಣಿ ಕಾವೇರಿ ಮತ್ತಾಕೆಯ ಗಂಡ ಪದ್ಮನಾಭನ ಅನನ್ಯ ಪ್ರೇಮ, ಪ್ರಕೃತಿಯೇ ನುಂಗಿ ಹಾಕಿದ ಅವರ ಕನಸುಗಳ ಕನವರಿಕೆಯೇ ಸಾದೃಶವಾಗಿದೆ. ಅಂತಹುದೇ ದಾರುಣತೆ ಮತ್ತು ಅಗಲಿಕೆಯ ವಿದ್ರಾವಕತೆ ‘ಮೇಘಸ್ಪೋಟ’ ಕತೆಯಲ್ಲೂ ಇದೆ.

ಜೇನು ಕುರುಬ ಸಮುದಾಯದ ಜೀವ ಮತ್ತು ಜಾನಪದವೂ ಆ ಮಕ್ಕಂದೂರಿನ ಮಹಾಮಳೆಯಲ್ಲಿ ಕೊಚ್ಚಿಹೋದ ಸಂಕಟ ಮತ್ತೆ ಗರ್ಭಿಣಿಯೊಬ್ಬಳ ತೊಳಲಾಟದ ಮೂಲಕವೇ ಸಾದೃಶ್ಯವಾಗಿದೆ. ಕತೆಗಾರ್ತಿಯು ತಮ್ಮ ಹೆಣ್ತನದ ಗರ್ಭಸ್ಥ ಅನುಭವ ಮತ್ತು ಅಂತಃಕರಣದ ತೀವ್ರತೆ ಬೆರೆಸಿ ಬರೆದಂತಿರುವ ಈ ಕತೆಗಳು ಸಾವಯವ ವಿವರಗಳ ಸಂಕ್ಷೇಪದಲ್ಲೂ ತಟ್ಟುವಂತಿವೆ.

ಪ್ರಕೃತಿ ಎಂದರೆ ಕೇವಲ ಮರ ಗಿಡ ಬಳ್ಳಿ ಅಲ್ಲ. ಕಾಡು ಮೇಡು ತೋಡು ಗುಡ್ಡ ಗಿರಿ ಗಹ್ವರದ ರಮ್ಯ ಪ್ರಕೃತಿಯಂತೆಯೇ ನಿಸರ್ಗವು ನಮ್ಮೊಳಗೂ ಇರಿಸಿರುವ ನೈಸರ್ಗಿಕತೆಯೂ ಪ್ರಕೃತಿಯೇ. ಈ ನೈಸರ್ಗಿಕತೆಗೂ ನಿರ್ಬಂಧಗಳಿವೆ. ಅವು ಪೂರ್ವ ಪರಂಪರೆಯಿಂದ ನಿರ್ಮಾಣವಾಗಿರಬಹುದು. ನಮ್ಮ ವರ್ತಮಾನದ ಸಮಾಜ ಅದನ್ನು ಬೇಲಿಯಂತೆ ತನ್ನ ಸುತ್ತ ಆವರಣ ನಿರ್ಮಿಸಿಕೊಂಡು ಕಾಪಾಡಿಕೊಂಡು ಬಂದಿದೆ. ಆದರೆ ಈ ನಿರ್ಬಂಧಗಳು ಪ್ರಾಕೃತಿಕವಲ್ಲ.

ಮನುಷ್ಯ ತನ್ನ ವಿವೇಚನೆಯನ್ನು ಬಳಸದೇ ಕೇವಲ ಪರಂಪರೆಗೆ, ಈ ಹಿಂದಿನ ಸಾಮುದಾಯಿಕ ನಂಬಿಕೆ ನಿಲುವುಗಳಿಗೇ ನೇತು ಬೀಳುವುದರ ಮೂಲಕ ವರ್ತಮಾನವನ್ನು ಅಸಹಜಗೊಳಿಸುವ, ಅಸಹನೀಯವಾಗಿಸುವ ಪರಿಯೂ ಪ್ರಶ್ನಾರ್ಹ. ಅಂತಹುದೇ ಪ್ರಶ್ನೆಗಳನ್ನು ಮೆಲುದನಿಯಲ್ಲಿ ಕೇಳಿಕೊಂಡ ಈ ಸಂಕಲನದ – ‘ತೂಗುಸೇತುವೆ’ ಕತೆಯ ಲಿಲ್ಲಿ ಮತ್ತು ರಾಘವರ ನಡುವಿನ ಸಹಜ ಮಾನುಷ ಸೆಳೆತ ಪ್ರೇಮ ಅವಸಾನಗೊಂಡ ದುಃಖ, ‘ಪ್ರಶ್ನೆ’ ಕತೆಯ ಪುಟ್ಟಿ ಮತ್ತು ಕಾಳರ  ನಡುವಿನ ಸಹಜ ದಾಂಪತ್ಯದಲ್ಲಿ ಎಲ್ಲಾ ಅರೆ ಕೊರೆಗಳ ನಡುವೆಯೂ ನಳನಳಿಸುವ ಪ್ರೇಮದಲ್ಲೂ ನೈಸರ್ಗಿಕತೆಯನ್ನು ಮೀರಲಾಗದ ಕಾಳ ಏಡ್ಸ್ ಗೆ ಬಲಿಯಾದ ಸಂಕಟವೂ ಇದೆ. ಇಲ್ಲಿ ಸೇತುವೆಯನ್ನು ಭದ್ರಗೊಳಿಸದೇ ತೂಗುಸೇತುವೆಯಾಗಿಯೇ ಉಳಿಸಿದ ಕ್ರಮವೂ ಪ್ರಶ್ನಾರ್ಹವೇ. ಕತೆಗಳ ಮೂಲಕ ಪ್ರಶ್ನೆ ಕೇಳದೇ ಹೊಳೆಯುವ ಉತ್ತರದ ಮೂಲಕವೇ ಪ್ರಶ್ನೆಯನ್ನು ಹರಳುಗಟ್ಟಿಸುವ ಈ ಪರಿ – ಪ್ರಶ್ನಿಸುವಂತಹುದಲ್ಲ.

ಪ್ರಾಕೃತಿಕತೆಯಲ್ಲಿ ರಮ್ಯತೆ ಮತ್ತು ದಾರುಣತೆ ಎರಡನ್ನೂ ಕಂಡಂತೆ ಕಂಡರಿಸಿರುವ ಕತೆಗಳ ನಡುವೆ ಅದೇ ಪ್ರಕೃತಿಯ ಅಸಹಜ ಸೃಷ್ಟಿಯ ವ್ಯಾಕುಲತೆಯನ್ನು ಚಿತ್ರಿಸಿರುವುದು ‘ನೀಲಿ ಕರ್ಟನ್’ ಕತೆ. ಗಂಡಾಗಿ ಹುಟ್ಟಿ ತನ್ನೊಳಗೆ ಹೆಣ್ತನವನ್ನು ಆಧರಿಸಿರುವ ದೀಪುವಿನ ತೊಳಲಾಟ ಮತ್ತು ತಲ್ಲಣ ಇಲ್ಲಿ ನೃತ್ಯದ ಮೂಲಕ ಅಭಿವ್ಯಕ್ತಿ ಪಡೆದಿದೆ. ಲಿಂಗ ಬದಲಾವಣೆಯ ಮೂಲಕ ಹೆಣ್ಣೇ ಆಗಿಬಿಡಬಹುದಾದ ಸಾಧ್ಯತೆ ಮತ್ತು ಅವಕಾಶವನ್ನು ದೀಪುವಿನ ಕೌಟುಂಬಿಕ ಅನಿವಾರ್ಯತೆ ಮತ್ತು ಸುತ್ತಣ ಸಾಮಾಜಿಕತೆಯೇ ಹೊಸಕುತ್ತಿರುವ ಈ ನಿರ್ಬಂಧ ಕರ್ಟನ್ ಮೂಲಕ ಪರ್ಯಾಯವನ್ನೂ ಸೂಚಿಸುತ್ತಿದೆಯೇ!? ಹೌದು. ಬೇಲಿಯನ್ನು ಸರಿಸಲಾಗದೇ, ನಿವಾರಿಸಲೂ ಆಗದೇ ಅದರ ಮೇಲೇ ನೀಲಿ ಹೂ ಅರಳಿಸುವ ನಿಸರ್ಗದಂತೆಯೇ ಈ ನೈಸರ್ಗಿಕ ಸಂಗತಿಯೂ ಸಹ್ಯಗೊಳ್ಳಬೇಕಾದುದೇ ಅನಿವಾರ್ಯ.

ಅಂತಹುದೇ ಅನಿವಾರ್ಯತೆ ಮತ್ತು ಆ ಮೂಲಕವೇ ವರ್ತಮಾನವನ್ನು ಸಹ್ಯಗೊಳಿಸಿಕೊಳ್ಳಬೇಕಾದ ಅಗತ್ಯತೆಯ ಕಡೆಗೆ  ‘ಬೇಲಿ ಸಾಲಿನ ನೀಲಿ ಹೂ’ ಕತೆ ಗಮನ ಸೆಳೆಯುತ್ತದೆ. ಸಂಸಾರ ಎಂಬ ಸಾಮುದಾಯಿಕ ನಿರ್ಬಂಧಿತ ಬೇಲಿಯೊಳಗೇ ಇದ್ದು ಅರಳ ಬೇಕಾದ ಅನಿವಾರ್ಯತೆಯ ಎಲ್ಲಾ ಹೆಣ್ಣುಗಳ ರೂಪಕವಾದ ಈ ನೀಲಿ ಹೂ ಆ ಬೇಲಿ ದಾಟದೆಯೂ ಬೇಲಿ ಮೇಲೆ ಅರಳುವ ನೈಸರ್ಗಿಕತೆಯ ಹೊಸ ಸಾಧ್ಯತೆಯನ್ನು ರೂಪಕದಲ್ಲಿ ವಿವರಿಸಿದೆ.

ಬೇಲಿಯೊಳಗಿದ್ದೇ ಸ್ವಂತಿಕೆಯ ಆಶಿಸುವ ಸುಮಿ ಮತ್ತು ಸ್ವ ವಿವೇಚನೆಯ ಔಚಿತ್ಯವನ್ನು ಒತ್ತಿ ಹೇಳುವ ನಿರೂಪಕಿಯ ನಡುವಿನ ಸಂಭಾಷಣೆಯಂತಹ ಈ ಕತೆ ಬುದ್ದಿ ಮತ್ತು ಭಾವಗಳ ನಡುವಿನ ಸಂಘರ್ಷವೂ ಹೌದು. ಅಪರೂಪಕ್ಕೆ ಅರಳುವ ‘ಕುಂಜಾಲು ಕಣಿವೆಯ ಕೆಂಪು ಹೂ’ ನಂತೆ, ತಮ್ಮ ಕಾಲದ ಇರುವಿಕೆಗೆ ಮಾಪಕವಾಗಿ ರೂಪಕವಾಗಿ ಬಳಸಲಾಗುವ ‘ಕುರುಂಜಿ ಹೂ’ವಿನಂತೆ ಈ ನೀಲಿ ಹೂ ಸಮುದಾಯದ ಭಾವ ರೂಪಕ ಅಲ್ಲ ನಿಜ. ಆದರೆ ‘ಹೂವಿನೆದೆಯ ಸವಿ ದುಂಬಿ ಚಿಟ್ಟೆಗಳಿಗಷ್ಟೇ ಗೊತ್ತು’ ಎಂಬ ಕವಿವಾಣಿಯನ್ನು ಆಧರಿಸಿರುವ ಈ ಪ್ರಾಕೃತಿಕ ಸಹಜತೆಯು ಸಮಾಜವೇ ನಿರೂಪಿಸಿರುವ ಪ್ರೇಮ ಪ್ರಣಯ ದಾಂಪತ್ಯ ಎಂಬ ಸಿದ್ಧ ಪ್ರತಿಮೆಗಳಿಗಿಂತ ಭಿನ್ನವಾದುದು.

ಮನೋನ್ಮತ್ತ ಪ್ರೇಮ, ಮಲೆಯಾಳಂ ಪರಿಛಾಯೆಯ ಪ್ರೇಮವಾದ ಪ್ರಣಯ, ದಾಂಪತ್ಯ ಎಂಬ ಪರಸ್ಪರರ ಪ್ರೇಮ ತೀವ್ರತೆಯ ಅನುಸಂಧಾನ, ಊರಿನ ಸಹಜವಾದ ಮಾನುಷ ಸ್ನೇಹ ಸೌಹಾರ್ದತೆ, ಪ್ರಾಕೃತಿಕ ರಮ್ಯತೆ ಮತ್ತು ದಾರುಣತೆಗಳನ್ನು ಹೆಚ್ಚು ವಿವರಿಸದೇ ಅನುಭವ ಆಗಿಸುವಲ್ಲಿ ಇಲ್ಲಿಯ ಕತೆಗಳು ಗೆದ್ದಿವೆ. ಸಮಕಾಲೀನ ಕಥಾ ವಲಯದಲ್ಲಿ ದಾಖಲಾಗುವಾಗ ಯಾವುದೇ ವಿಶೇಷ ರಿಯಾಯಿತಿ ಬೇಡದ ಇಲ್ಲಿಯ ಕತೆಗಳು ನಮ್ಮವೇ ಆಗುವಷ್ಟು ಆಪ್ತ ನಿರೂಪಣೆ ಹೊಂದಿವೆ. ತಮ್ಮ ಪ್ರಬಂಧಾತ್ಮಕ ಗುಣಗಳ ಜೊತೆಗೇ ಕಥಾ ಭಿತ್ತಿಯ ಸಾವಯವ ವಿವರ ಮತ್ತು ವೈಚಾರಿಕ ಖಚಿತತೆಯ ಹೆಚ್ಚಳ ಇವುಗಳನ್ನು ಮತ್ತಷ್ಟು ಸುಪುಷ್ಟಗೊಳಿಸಬಲ್ಲುದು. ಅದನ್ನು ಎಳೆಗರುವ ಎತ್ತಾಗಿಸುವ ಕಾಲದ ಮಾಯಕತೆಗೆ ಬಿಟ್ಟು, ಸದ್ಯ ಕತೆಗಾರ್ತಿಯನ್ನು ಅಭಿನಂದಿಸುತ್ತೇನೆ.

‍ಲೇಖಕರು Admin

February 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: