ಉದಯಕುಮಾರ ಹಬ್ಬು ಹೊಸ ಕವಿತೆ – ಬಾ ಬಾರೆ ಸಖಿ…

ಉದಯಕುಮಾರ ಹಬ್ಬು

ಕಾಲಪುರುಷ ನಮಗಾಗಿಯೇ ಈ ಪಡಖಾನೆಯನು
ತೆರೆದಿಟ್ಟಿದ್ದಾನೆ ಇಪ್ಪತ್ನಾಲ್ಕು ಗಂಟೆ.
ಬಾರೆ ಸಖಿ, ಸಾಕಿ ದೇವತೆ ಅಲ್ಲಿ ಕಾಯುತ್ತಿದ್ದಾಳೆ
ಈ ಪ್ರೀತಿ ಮದ್ಯವ ಸುರಾಪಾತ್ರೆಯಲಿ ತುಂಬಿಸಲು
ಗಂಟಲಿಗೆ ಅರಸಿ ದಾಹ ತೀರಿಸಿಕೊಳ್ಳೋಣ.

ಈ ಜಗಕೆ ಪ್ರೀತಿ ಮದು ಭಾಂಡವದ ರುಚಿ ನೋಡಿ ಗೊತ್ತಿಲ್ಲ
ದ್ವೇಷದ ವಿಷ ಭಾಂಡವನು ಮದುವೆಂಬಂತೆ ಸವಿಯುವರು.
ಕಾಲಪುರುಷ ನಮಗಾಗಿಯೇ ಇಡೀ ಪೃಥ್ವಿಯನು
ಪ್ರೀತಿ ಮದು ಪಾತ್ರೆಯನ್ನಾಗಿಸಿ ಇಟ್ಟಿದ್ದಾನೆ ನಮ್ಮ ಮುಂದೆ
ಕುಡಿಯಲದಕೇಕೆ ಹಿಂಜರಿಕೆ, ಯಾರ ಭಯ, ಯಾರ‌ ಬೇಲಿ?

ನಾವಿಲ್ಲಿರುವ ಕ್ಷಣಗಳು ಕಡಿಮೆ, ಪ್ರೀತಿ ಮದು ಅಮೃತವನು
ಕೊಟ್ಟ ಅವಗೆ ಋಣ ಕುಡಿದು ಸಂದಾಯ ಮಾಡೋಣ
ಒಮ್ಮೆ ಹೋದರೆ ಮೇಲೆ ಮತ್ತೆ ಬರುವೆವೆಯೇನು?

ಕುಡಿ ಹನಿ ಹನಿಯಾಗಿ‌‌ ಗುಟಕರಿಸು ತುಟಿಗೆ
ಸವರಿ.

ನೋಡು ನೋಡಲ್ಲಿ ಎಷ್ಟೊಂದು ಜನ ಬಲೆಗಳಲ್ಲಿ ಸಿಕ್ಕ
ಹಕ್ಕಿಗಳು! ಒದ್ದಾಡುತ್ತಿವೆ ತಪ್ಪಿಸಿಕೊಳಲು
ಈ ಬಲೆಯ ಅವನೇ ಸೃಷ್ಟಿಸಿ ಮೋಜು ನೋಡುತ್ತಿದ್ದಾನೆ
ದೂರದಲಿ ಕುಳಿತು ಪ್ರೀತಿ ಮದುವನು ಕೊಟ್ಟು
ಬಲೆಯನೇ ಮೋಹಿಸುವಂತೆ ಮಾಡಿದ ಜಾದುಗಾರ.
ನಾವು ಅಂತೆಯೇ ಬಲೆಯಲಿದ್ದೂ ಮರೆತೆಲ್ಲ ಸಿಕ್ಕುಗಳನು
ಅವ ಕೊಟ್ಟ ಮದುವನು ಚಪ್ಪರಿಸುತ ಎಲ್ಲ
ಕಳೆದು ಹೋಗೋಣ, ಬೇಕಿದ್ದರೆ ಅವನು ಹುಡುಕಲಿ ನಮ್ಮ.

ಮದು ಬಟ್ಟಲನು ತುಂಬಿಸಲು ಮುಂದೆ ಬಾ ಸಾಕಿ!
ಸಖಿಗೆ ತುಸು ನಾಚಿಗೆ, ಇದು ಹೊಸತಲ್ಲವೆ ಅವಳಿಗೆ?
ಹೊಸ ಚಪ್ಪಲಿ ಕಚ್ಚುವುದು, ಮತ್ತೆ ರೂಢಿ.
ಸುರಿ ಅವಳ ಬಟ್ಟಲಲಿ, ಕಲಿಸು ಅವಳಿಗೆ ಕುಡಿಯುವಿದನ್ನು,.
ಸವಿಯುವುದನ್ನು, ಅಮಲೇರುವುದನ್ನು ಕಲಿಯಲಿ ಆಗ.

ನಾವಿಬ್ಬರೂ ಮದೋನ್ಮತ್ತ ಜಗದ ಎಲ್ಲ ಸುಖವ ಬಗೆದೊಗೆವ ಹಾಯಿ
‘ಇಂದು’ ನಮಗೆ ಬೇಕು; ನಿನ್ನೆ ಮುಗಿದ ಕತೆ
ನಾಳೆ ಕೈಗೆಟುಕದ ಕನ್ನಡಿಯೊಳಗಣ ಗಂಟು.
ಕುಡಿದು ಮತ್ತಾಗುವ ಇಂದೇ ಸಖಿ!.
ಕಳೆದ ಕ್ಷಣವದು ಮತ್ತೆ ಬಾರದು, ಈ ಕ್ಷಣ ಮಾತ್ರ
ನಮ್ಮದು ಬಾ ಬಾರೆ ಕೈ ಬೆರಳುಗಳ ಹಿಡಿ.
ಸುರಾ ಬಟ್ಟಲು ಹಿಡಿದು ಕೈ ಕೈ ಹಿಡಿದು ಕುಣಿಯೋಣ.
ನಮಗೂ ಅವನಿಗೂ ನಡುವೆ ಇದುವೇ ಸೇತುವೆ
ಅವನಿಗೆ ನಮಿಸೋಣ ಈ ಸಾರಾಯಿ ಅಂಗಡಿ ತೆರೆದುದಕೆ.

ಇದು ಅಂತಿಂತ ಸುರೆಯಲ್ಲ; ದೇವತೆಗಳ ಸೋಮರಸವೂ
ಇದಕೆ ಸಾಟಿಯಿಲ್ಲ.
ಈಡನ್ ತೋಟದ ಸೇಬು ಹಣ್ಣುಗಳಲಿ
ತಯಾರಿಸಿದ ಅಮೃತಧಾರೆ ಬೆರಗಿನಲಿ
ಸವಿ, ಬತ್ತಲಾದೆವೆಂಬ ನಾಚಿಕೆ ಏಕೆ?
ಗೊತ್ತೊ, ಅದು ಈ ಸುಖದ ಅಮಲು.

ಸಖಿ, ನನ್ನಲ್ಲಿ ಕೆಲವು ತಪ್ಪುಗಳ ಕೊಳೆತ ಹಣ್ಣುಗಳಿವೆ
ನಿನ್ನೆದರು ಬತ್ತಲಾಗಲು ಶುದ್ಧನಾಗಲು
ಧೈರ್ಯ ಬೇಕಿದೆ; ತಪ್ಪೊಪ್ಪಿಗೆಯ ಹುತ್ತದ ಹಾವು
ನೀ ಮದು ಪುಂಗಿಯ ಊದಿ ಪಳಗಿಸು ನಲ್ಲೆ.

‍ಲೇಖಕರು Admin

February 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: