ಶಶಿಧರ ಹಾಲಾಡಿಯವರ ‘ಇಲ್ಲಿ ಶಾಸ್ತ್ರ ಹೇಳಲಾಗುವುದು‘
‘ಸ್ನೇಹ ಬುಕ್ ಹೌಸ್’ ಈ ಕೃತಿಯನ್ನು ಪ್ರಕಟಿಸಿದೆ.
ನಾಳೆ ಈ ಕೃತಿ ಬಿಡುಗಡೆಯಾಗುತ್ತಿದ್ದು ಈ ಕೃತಿಯ ಲೇಖಕರ ಮಾತು ಇಲ್ಲಿದೆ
–ಶಶಿಧರ ಹಾಲಾಡಿ
ಚಿಕ್ಕ ಚಿಕ್ಕ ಟಿಪ್ಪಣಿಗಳ ಮೂಲಕ ಆ ದೊಡ್ಡ ದೇಶದ ವಿಷಯಗಳನ್ನು ಮತ್ತು ಮುಖ್ಯವಾಗಿ ಅಲ್ಲಿನ ನನ್ನ ಅನುಭವಗಳನ್ನು ಬರೆಯುವ ಯೋಚನೆ ಇದೆ ಎಂದಾಗ, ನನ್ನ ಆತ್ಮೀಯರು ಒಬ್ಬರು ಸಣ್ಣಗೆ ತರಾಟೆಗೆ ತೆಗೆದುಕೊಂಡರು: ‘ಅದು ತುಂಬಾ ಕಷ್ಟದ ಕೆಲಸ; ಏಕೆಂದರೆ ಆ ದೊಡ್ಡ ದೇಶದಲ್ಲಿ ಎಲ್ಲವೂ ದೊಡ್ಡದು; ಅಲ್ಲಿನ ತಿಂಡಿಗಳು ಸಹ ದೊಡ್ಡ ಗಾತ್ರದವು; ಅಲ್ಲಿನ ಕಟ್ಟಡಗಳು ಬೃಹದಾಕಾರದಾವು; ಹೆದ್ದಾರಿಗಳು ಅಕ್ಷರಶಃ ಸಾವಿರಾರು ಮೈಲಿ ಉದ್ದಕ್ಕೆ ಇವೆ; ಅಲ್ಲಿನ ಎಲ್ಲವೂ ದೊಡ್ಡವು, ವಿಶಾಲವಾದವು; ಆ ದೇಶದ ಅನುಭವಗಳ ಕುರಿತು ಬರೆಯುವುದಾದರೆ, ನೀವು ದೊಡ್ಡ ಮತ್ತು ವಿಸ್ತೃತವಾದ ಅಧ್ಯಾಯಗಳನ್ನೇ ಬರೆಯುವುದು ಒಳ್ಳೆಯದು’ ಎಂದು ಆಗ್ರಹಿಸಿದರು. ಈಗಾಗಲೇ ನನ್ನ ಹಲವು ಬರಹಗಳನ್ನು ಮತ್ತು ಕಾದಂಬರಿಗಳನ್ನು ಓದಿದ್ದ, ಆ ಕುರಿತು ಉತ್ತಮ ಪ್ರತಿಕ್ರಿಯೆ ನೀಡಿದ್ದ ಅವರ ಪ್ರೀತಿಯ ಆಗ್ರಹವನ್ನು ಕೇಳಿಸಿಕೊಂಡೆ; ಆಲಿಸಿದೆ; ಆ ಕುರಿತು ಯೋಚಿಸಿದೆ. ಕೊನೆಗೆ, ನನ್ನಲ್ಲೇ ಒಂದು ನಿರ್ಧಾರವನ್ನು ತೆಗೆದುಕೊಂಡೆ: ಅದೇನೆಂದರೆ, ಚಿಕ್ಕ ಚಿಕ್ಕ ಟಿಪ್ಪಣಿಗಳ ಸ್ವರೂಪದ, ಒಂದರಿ೦ದ ಎರಡು ಪುಟಗಳ ವ್ಯಾಪ್ತಿಯ ಬರಹಗಳ ಮೂಲಕ, ನನ್ನ ಅನುಭವಗಳನ್ನು ಬರೆಯುವುದು ಎಂದು.
ಇದಕ್ಕೆ ಕೆಲವು ಕಾರಣಗಳಿವೆ. ಪುಟ್ಟ ಪುಟ್ಟ ಬರಹಗಳ ಸಂಕಲನದ ಸ್ವರೂಪದಲ್ಲಿರುವ ಈ ಪ್ರವಾಸಾನುಭವವು, ಹೀಗೆ ರೂಪಿತವಾಗಲು ಒಂದು ಕಾರಣವನ್ನು ಮುಂದೆಮಾಡಬಹುದು: ಅದೇಕೋ ಗೊತ್ತಿಲ್ಲ, ಈಗಿನ ಓದುಗರು ಪುಟ್ಟ ಪುಟ್ಟ ಬರಹಗಳನ್ನು ಇಷ್ಟಪಟ್ಟು ಓದುತ್ತಾರೆ ಎಂಬ ಭಾವನೆ ಇತ್ತೀಚಿನ ವರ್ಷಗಳಲ್ಲಿ ಬೆಳೆದುಬಿಟ್ಟಿದೆ! ೨೧ನೇ ಶತಮಾನದಲ್ಲಿ, ಕನ್ನಡದ ಓದುಗರನ್ನು ಲೇಖಕರು ಮತ್ತು ಪ್ರಕಾಶಕರು ಗ್ರಹಿಸಿದ ಒಂದು ಪರಿ ಇದು ಎಂದೇ ಹೇಳಬಹುದು; ಈ ಗ್ರಹಿಕೆ ಎಷ್ಟು ಸರಿಯೋ ತಪ್ಪೋ, ಕಾಲವು ಇನ್ನೂ ಸಷ್ಟವಾದ ಉತ್ತರವನ್ನು ನೀಡಿಲ್ಲ. ಕಾದಂಬರಿಗಳನ್ನು ಪ್ರಕಟಿಸುವಾಗಲೂ ಅಷ್ಟೇ, ‘ಈಗಿನ ಓದುಗರು ದೀರ್ಘ ಕಾದಂಬರಿಗಳಿಗಿಂತ, ಮಧ್ಯಮ ಮತ್ತು ಚಿಕ್ಕ ಗಾತ್ರದ ಕಾದಂಬರಿಯನ್ನು ಇಷ್ಟಪಡುತ್ತಾರೆ, ಬೇಗನೆ ಓದಲು ಕೈಗೆತ್ತಿಕೊಳ್ಳುತ್ತಿದ್ದಾರೆ’ ಎನ್ನುವರು ಹಲವು ಪ್ರಕಾಶಕರು. ಈ ನಿಟ್ಟಿನಲ್ಲಿ, ಟಿಪ್ಪಣಿಗಳ ರೂಪದಲ್ಲಿದ್ದರೆ, ಓದುಗರು ಕೈಗೆತ್ತಿಕೊಂಡು, ಬೇಗನೆ ಓದಬಹುದು ಎಂಬ ವಿಚಾರವೂ, ಇಲ್ಲಿನ ಬರಹಗಳಿಗೆ ಒಂದು ಸ್ಫೂರ್ತಿ. ಆದರೆ ದೀರ್ಘ ಬರಹಗಳನ್ನು ಓದುವ ಪ್ರಜ್ಞಾವಂತ ಓದುಗರು ಅಪಾರ ಸಂಖ್ಯೆಯಲ್ಲಿದ್ದಾರೆ ಎಂಬುದು ನನ್ನ ಖಚಿತವಾದ ಅಭಿಪ್ರಾಯ; ಮತ್ತು ಅಂತಹ ಪ್ರಾಜ್ಞ ಮತ್ತು ಸಹೃದಯೀ ಓದುಗರ ಕುರಿತು ನನ್ನಲ್ಲಿ ಅಪಾರ ಗೌರವವಿದೆ.
ಪುಟ್ಟ ಟಿಪ್ಪಣಿಗಳ ಸ್ವರೂಪದಲ್ಲಿ ಇಲ್ಲಿನ ಬರಹಗಳು ಮೂಡಿ ಬರಲು ನಾನೇ ಹುಡುಕಿದ ಇನ್ನೊಂದು ಕಾರಣವೆಂದರೆ, ಸನ್ನಿವೇಶಕ್ಕೆ ತಕ್ಕಂತೆ ಹೊಂದುವ ಛಾಯಾಚಿತ್ರಗಳನ್ನು ಬಳಸಿ ನನ್ನ ಅನುಭವಗಳನ್ನು ನಿರೂಪಿಸುವ ವಿಧಾನವನ್ನು ಅನುಸರಿಸಲು ಇದೇ ಸೂಕ್ತ ಎಂಬುದು. ನಾನು ಮತ್ತು ನನ್ನ ಮಡದಿ, ಸುಮಾರು ಮೂರು ತಿಂಗಳುಗಳ ಕಾಲ ಯು.ಎಸ್. (ಅಮೆರಿಕ) ದೇಶದಲ್ಲಿ ಪ್ರವಾಸ ಮಾಡುತ್ತಿದ್ದಾಗ, ನಾವಿಬ್ಬರೂ ಸೇರಿ, ಅಕ್ಷರಶಃ ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ತೆಗೆದಿದ್ದೇವೆ. ನನ್ನ ಬಳಿ ಒಂದು ಡಿಜಿಟಲ್ ಕ್ಯಾಮರಾ ಇದ್ದು, ಅದರಲ್ಲಿ ಕ್ಲಿಕ್ಕಿಸಿದ ನೂರಾರು ಫೋಟೋಗಳ ಜೊತೆ, ನಮ್ಮಿಬ್ಬರ ಮೊಬೈಲುಗಳು ಕ್ಲಿಕ್ಕಿಸಿದ ಫೋಟೋಗಳು ಸೇರಿ, ೧,೦೦೦ ದಾಟಿತು! ಇವುಗಳ ಜೊತೆ, ನಮ್ಮನ್ನು ಎಲ್ಲಾ ಕಡೆಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಮಗಳು ಸಹ ಅವಳ ಮೊಬೈಲ್‌ನಲ್ಲಿ ನೂರಾರು ಚಿತ್ರಗಳನ್ನು ಕ್ಲಿಕ್ಕಿಸಿದಳು. ಈ ಎಲ್ಲಾ ಛಾಯಾಚಿತ್ರಗಳನ್ನು ಒಂದೆಡೆ ಸೇರಿಸಿ, ವರ್ಗೀಕರಿಸಿ, ಚೆನ್ನಾಗಿ ಮೂಡಿ ಬಂದ ಛಾಯಾಚಿತ್ರಗಳನ್ನು ಆರಿಸಿ ಕೊಂಡಾಗ, ಆ ಚಿತ್ರಗಳೇ ಒಂದು ಕಥನವನ್ನು ಕಟ್ಟಿಕೊಡುವಂತೆ ಅನಿಸಿತು; ಒಂದಕ್ಕೊಂದು ಪೂರಕ ಎನಿಸಿರುವ ನೂರಾರು ಛಾಯಾಚಿತ್ರಗಳನ್ನು ಒಮ್ಮೆಗೇ ನೋಡಿದಾಗ, ನಿಮಗೂ ಇಂತಹ ಅನುಭವವಾಗಿರಬಹುದು: ಅವು ಒಂದರ ಹಿಂದೆ ಒಂದರಂತೆ ನೀಡುವ ದೃಶ್ಯಾನುಭವದಲ್ಲಿ, ಕಥನದ ಒಂದು ಸೆಲೆಯನ್ನೂ ನೀವು ಗುರುತಿಸಬಹುದು. ಈ ರೀತಿ, ನನ್ನ ಬಳಿಯಿರುವ ಅಂತಹ ನೂರಾರು ಚಿತ್ರಗಳಲ್ಲಿ, ಆಯ್ದ ಸುಮಾರು ೮೦ ಚಿತ್ರಗಳನ್ನು ಎದುರಿಟ್ಟುಕೊಂಡು, ಅವುಗಳನ್ನು ಹೇಗೆ ಪುಸ್ತಕ ಒಂದರಲ್ಲಿ ಬಳಸಬಹುದು ಎಂದು ತಲೆಕೆರೆಯುತ್ತಾ ಕುಳಿತಾಗ ಹೊಳೆದದ್ದೇ ‘ಟಿಪ್ಪಣಿ’ಗಳು! ಒಂದು ಚಿತ್ರಕ್ಕೆ ಒಂದು ಟಿಪ್ಪಣಿ; ಅವಶ್ಯವಾಗಿ ಆ ಟಿಪ್ಪಣಿಯು ನಮ್ಮ ಪ್ರವಾಸದ ಅನುಭವವನ್ನು ಒಳಗೊಂಡ ಭಾಗವಾಗಿರಬೇಕು ಮತ್ತು ಸ್ವಾರಸ್ಯವಾದ ವಿಷಯವನ್ನು ಒಳಗೊಂಡಿರಬೇಕು ಎಂಬ ಸಡಿಲ ಚೌಕಟ್ಟನ್ನು ಹಾಕಿಕೊಂಡು, ಟಿಪ್ಪಣಿಗಳನ್ನು ಬರೆಯುತ್ತಾ ಹೋದೆ; ನಡುನಡುವೆ, ಕೆಲವೇ ಕೆಲವು ಟಿಪ್ಪಣಿಗಳಲ್ಲಿ ಆ ದೇಶದ ಇತಿಹಾಸಕ್ಕೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿಗಳು ಮತ್ತು ಅಂಕಿಅಂಶಗಳು ಅಲ್ಲಲ್ಲಿ ನುಸುಳಿದ್ದರೂ, ಅವು ನಮ್ಮ ಪ್ರವಾಸಾನುಭವಕ್ಕೆ ಪೂರಕವಾಗಿರುವಂತೆ ಬರೆಯಲು ಪ್ರಯತ್ನಿಸಿದ್ದೇನೆ. ಈ ಪುಸ್ತಕದ ಮೊದಲ ಲೇಖನ “ಇಲ್ಲಿ ಶಾಸ್ತ್ರ ಹೇಳಲಾಗುವುದು!” ಬರೆಯಲು ಸ್ಫೂರ್ತಿ ಎಂದರೆ, ಶಿಕಾಗೋ ನಗರದ ಜನನಿಬಿಡ ಬೀದಿಯಲ್ಲಿ ಕಂಡ ಒಂದು ಫಲಕ “ ಅಸ್ಟ್ರಾಲಜಿ : ವಾಕ್ ಇನ್: 25 ಡಾಲರ್”! ಅಲ್ಲೂ ಜ್ಯೋತಿಷ್ಯ ಕೇಳುವವರಿದ್ದಾರೆ ಎಂಬುದೇ ಆ ಟಿಪ್ಪಣಿಯ ಸ್ವಾರಸ್ಯ.
ನಮ್ಮ ದೇಶಕ್ಕಿಂತ, ವಿಸ್ತೀರ್ಣದಲ್ಲಿ ಬಹು ವಿಶಾಲವಾದ, ಸಾಮರ್ಥ್ಯದಲ್ಲಿ ಹೆಚ್ಚು ಶಕ್ತಿಶಾಲಿಯಾದ, ಮೂಲಭೂತ ಸೌಕರ್ಯಗಳಲ್ಲಿ ಬಹಳಷ್ಟು ಮುಂದಿರುವ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಪಾರ ಪ್ರಗತಿಯನ್ನು ಸಾಧಿಸಿರುವ ಅಮೆರಿಕದ ಅನುಭವಗಳನ್ನು ಬರೆಯುವಾಗ, ಕೆಲವು ರೀತಿಯ, ‘ಬರಹಗಾರನ ತೊಡಕುಗಳು’ ಎದುರಾಗುತ್ತವೆ ಎಂಬುದು ನನ್ನ ಅನಿಸಿಕೆ. ಈಗಾಗಲೇ ಬೇರೆ ಬೇರೆ ಲೇಖಕರು ಬರೆದಿರುವ ಅಮೆರಿಕದ ಪ್ರವಾಸ ಕಥನಗಳನ್ನು ಓದಿದಾಗ, ನಿಮಗೂ ಹೀಗೆ ಅನ್ನಿಸಿರಬಹುದು: ಅದೇನೆಂದರೆ, ನಮ್ಮ ದೇಶದಿಂದ ಮೊದಲ ಬಾರಿ ಅಲ್ಲಿಗೆ ಹೋದವರು ಆ ದೊಡ್ಡ ದೇಶದಲ್ಲಿ ಸುತ್ತಾಡುವಾಗ, ಎದ್ದು ಕಾಣಿಸುವ ಅಲ್ಲಿನ ಪ್ರಗತಿ, ಹಣದ ಚಲಾವಣೆಯ ಪ್ರಮಾಣ, ಹೆದ್ದಾರಿಗಳ ಗುಣಮಟ್ಟ, ಬಹುಮಹಡಿ ಕಟ್ಟಡಗಳ ದಟ್ಟಣೆ, ವಿಶ್ವವಿದ್ಯಾಲಯಗಳ ಸಾರಸ್ವತ ಲೋಕ, ಮ್ಯೂಸಿಯಂಗಳ ಸಿರಿವಂತಿಕೆ ಮತ್ತು ವೈವಿಧ್ಯತೆ, ಮಿತಿಯೇ ಇಲ್ಲವೇನೋ ಎನ್ನುವಷ್ಟು ಮನರಂಜನೆಗೆ ಅವಕಾಶ, ಜಗಮಗಿಸುವ ಬೆಳಕಿನ ಹೊಳೆ ಎಲ್ಲವೂ, ಹೆಚ್ಚಿನವರಲ್ಲಿ, ಮೊದಲಿಗೆ ಅಚ್ಚರಿ ಮತ್ತು ವಿಸ್ಮಯವನ್ನು ಮೂಡಿಸುತ್ತವೆ, ನಂತರ ಬೆರಗು ಮತ್ತು ಸಣ್ಣ ದಿಗ್ಭ್ರಮೆಯನ್ನು ಮೂಡಿಸಬಲ್ಲವು, ಆನಂತರ ನಮ್ಮ ದೇಶದ ಕುರಿತು ಸಣ್ಣ ಕೀಳರಿಮೆಯನ್ನೂ (ಈ ಪದದ ಉಪಯೋಗ ಸಲ್ಲದೇನೋ ಎಂಬ ಅಳುಕಿನಲ್ಲೇ ಬಳಸಿದ್ದೇನೆ) ಮೂಡಿಸಬಹುದು. ಜನಸಂಖ್ಯೆ ನಮ್ಮ ದೇಶಕ್ಕಿಂತ ಕಡಿಮೆ, ೬ ತಿಂಗಳುಗಳ ಅವಧಿಯ ತೀವ್ರ ಚಳಿಗಾಲ, ಆ ಸಮಯದಲ್ಲಿ ಹೆಚ್ಚಿನ ಚಟುವಟಿಕೆ ಮಾಡುವುದು ಕಷ್ಟಸಾಧ್ಯ, ಆದರೆ ಆ ದೇಶದ ಪ್ರಗತಿ ಮಾತ್ರ ಹಲವು ಪಟ್ಟು ಹೆಚ್ಚು! ಇದು ಹೇಗೆ ಸಾಧ್ಯವಾಯಿತು ಎಂಬ ವಿಸ್ಮಯ ಅದು! ಆ ವಿಸ್ಮಯವು ಹಲವು ಲೇಖಕರ ಪ್ರವಾಸಕಥನಗಳ ಓಘದ ಮೇಲೆ ಪ್ರಭಾವವನ್ನೂ ಬೀರಿದ್ದನ್ನು ನೀವು ಗುರುತಿಸಿರಬಹುದು.
ನಾನು ಅಮೆರಿಕ ದೇಶಕ್ಕೆ ಹೋಗಿದ್ದು ಇದೇ ಮೊದಲ ಬಾರಿ; ಒಂದು ದೇಶಕ್ಕೆ ಮೊದಲ ಬಾರಿ ಹೋದಾಗ ಮೂಡುಬಹುದಾದ ಅಮಾಯಕತನವನ್ನು ಇಟ್ಟುಕೊಂಡೇ ಆ ದೇಶದಲ್ಲಿ ಸುತ್ತಾಡಿದಾಗ, ಈ ಮುಂಚಿನ ಪ್ಯಾರಾದಲ್ಲಿ ಹೇಳಿರುವ ವಿಚಾರವನ್ನು ನೆನಪಿನಲ್ಲಿಟ್ಟುಕೊಂಡು, ಅಲ್ಲಿನ ಜನಜೀವನವನ್ನು, ಅಲ್ಲಿನ ನಾಗರಿಕತೆಯ ಪ್ರಗತಿಯನ್ನು, ಮೂಲಭೂತ ಸೌಕರ್ಯಗಳನ್ನು ಗಮನಿಸಲು ಪ್ರಯತ್ನಿಸಿದೆ. ಇದುವರೆಗೆ ಆ ದೇಶದ ಕುರಿತು ನಾನು ಓದಿ ತಿಳಿದಿದ್ದ ಮಾಹಿತಿಗೂ, ಆ ದೇಶದ ಪ್ರಗತಿಯನ್ನು ಕಣ್ಣಾರೆ ನೋಡಿದಾಗ ಆದ ಅನುಭವಕ್ಕೂ, ಅಜಗಜಾಂತರ ವ್ಯತ್ಯಾಸ ಎನಿಸಿತು; ಅಲ್ಲಿನ ನಗರಗಳನ್ನು, ಹೆದ್ದಾರಿಗಳನ್ನು, ವಾಚನಾಲಯಗಳನ್ನು, ಮರದಿಂದಲೇ ನಿರ್ಮಿಸಿದ ಕಟ್ಟಡಗಳನ್ನು, ನಮ್ಮಂತಹ ಪ್ರವಾಸಿಗರನ್ನೂ ಗೌರವದಿಂದ ಕಾಣುವ ಅಲ್ಲಿನ ನಾಗರಿಕರನ್ನು ಕಂಡು, ಬಹು ಪ್ರಚಾರದಲ್ಲಿರುವ ಆ ದೇಶದ ಬದುಕನ್ನು ಗ್ರಹಿಸುವ ವಿಧಾನವನ್ನೇ ನಾನು ಬದಲಿಸಿಕೊಳ್ಳಬೇಕಾಯಿತು! ಅಲ್ಲಿನ ಬಹು ಮಹಡಿ ಕಟ್ಟಡಗಳನ್ನು, ಸಂವಹನ ಸೌಕರ್ಯವನ್ನು, ಜನರಲ್ಲಿರುವ ಶಿಸ್ತನ್ನು, ಬೀದಿಗಳ ಒಪ್ಪ ಓರಣವನ್ನು “ಅಕ್ಷರ ನಿಕಷ”ಕ್ಕೆ ಪೂರ್ತಿಯಾಗಿ ಒಡ್ಡುವುದು ಕಷ್ಟ; ಆದ್ದರಿಂದಲೇ ಇರಬಹುದು, ಆ ದೇಶದ ಕುರಿತಾದ ಕೆಲವು ಲೇಖಕರು ಬರೆದ ಪ್ರವಾಸ ಕಥನಗಳ ವಿವರಗಳು, ನಾನಾ ರೀತಿಯ ವಿಶೇಷಣಗಳಿಂದ ತುಂಬಿ ಹೋಗಿರುತ್ತವೆ.
ಪ್ರಗತಿಯ ವಿಚಾರದಲ್ಲಿ ನಮ್ಮ ದೇಶವನ್ನು ಯು.ಎಸ್.ಗೆ ಹೋಲಿಸುವಾಗ ನಾನು ಮೊದಲಿಗೆ ಪ್ರಸ್ತಾಪಿಸಬಯಸುವುದು, ‘ಸ್ವಾತಂತ್ರ‍್ಯ’. ಒಂದು ದೇಶವು ಪ್ರಗತಿ ಹೊಂದಲು, ಅಲ್ಲಿನ ಜನರು ಮುಕ್ತವಾಗಿ ಚಿಂತಿಸಲು, ಸ್ವತಂತ್ರವಾಗಿ ಬರೆಯಲು, ಧೈರ್ಯದಿಂದ ಅಭಿವ್ಯಕ್ತಿಸಲು, ಮುನ್ನುಗ್ಗಿ ಉದ್ದಿಮೆಗಳನು ಸ್ಥಾಪಿಸಲು, ಆ ದೇಶವೂ ಸ್ವತಂತ್ರವಾಗಿರಬೇಕು, ಅಲ್ಲಿನ ನಾಗರಿಕರಿಗೂ ಸ್ವಾತಂತ್ರ‍್ಯ ಅತ್ಯಗತ್ಯ; ಮತ್ತು ಆ ಸ್ವಾತಂತ್ರ‍್ಯವನ್ನು ವಿವೇಚನೆಯಿಂದ, ಜಾಗರೂಕರಾಗಿ, ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ಸಹ ಅಷ್ಟೇ ಅಗತ್ಯ. ೧೭೭೬ರಲ್ಲಿ ಅಮೆರಿಕವು ಬ್ರಿಟಿಷರಿಂದ ಸ್ವಾತಂತ್ರ‍್ಯವನ್ನು ಪಡೆಯಿತು. (ಅದಾಗಿ ಒಂದುವರೆ ಶತಮಾನದ ನಂತರ ನಾವು ಬ್ರಿಟಿಷರಿಂದಲೇ ಸ್ವಾತಂತ್ರ‍್ಯ ಪಡೆದೆವು ಎಂಬುದನ್ನು ನಾನಿಲ್ಲಿ ಚರ್ಚಿಸಲು ಹೋಗುವುದಿಲ್ಲ.) ನಾಲ್ಕು ದಶಕಗಳ ಕಾಲ ಜಗತ್ತಿನ ಅತಿ ಎತ್ತರದ ಬಹುಮಹಡಿ ಕಟ್ಟಡವಾಗಿದ್ದ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ಅನ್ನು ಅವರು ೧೯೩೦ರ ಸುಮಾರಿಗೆ ನಿರ್ಮಿಸಿದರು. ೧೯೩೦ರಿಂದ ೧೯೭೦ರ ತನಕ ಆ ೧೦೪ ಮಹಡಿ ಕಟ್ಟಡದ ದಾಖಲೆಯನ್ನು ಜಗತ್ತಿನಲ್ಲಿ ಯಾರೂ ಮುರಿಯಲಿಲ್ಲ! ಆ ಕಟ್ಟಡದ ಎತ್ತರ ೧೪೫೪ ಅಡಿ; ೧೯೪೭ ರಲ್ಲಿ ಸ್ವಾತಂತ್ರ‍್ಯ ಪಡೆದ ನಮ್ಮ ದೇಶವು, ಇಂದಿಗೂ ಅಷ್ಟು ಎತ್ತರದ ಕಟ್ಟಡವನ್ನು ಕಟ್ಟಲು ಸಾಧ್ಯವಾಗಿಲ್ಲ. (ಈಗ ನಮ್ಮ ದೇಶದಲ್ಲಿರುವ ಅತಿ ಎತ್ತರದ ಕಟ್ಟಡವು ಮುಂಬೈಯಲ್ಲಿದೆ. ೧೦೫೦ ಅಡಿ ಎತ್ತರ). ಇದನ್ನು ನಾನು ಕೀಳರಿಮೆಯಿಂದ ಬರೆದಿಲ್ಲ, ಬದಲಿಗೆ, ಇಂದಿಗೆ ಸುಮಾರು ೧೦೦ ವರ್ಷಗಳ ಮುಂಚೆಯೇ ಅವರೆಷ್ಟು ಮುಂದುವರಿದಿದ್ದರು ಎಂಬುದರ ಸಣ್ಣ ಅಳತೆಗೋಲಾಗಿ ಬರೆದಿದ್ದೇನೆ. ಒಮ್ಮೆ ಕಾರನ್ನು ಏರಿದರೆ, ಎಲ್ಲೂ ನಿಲ್ಲಿಸದೆ ಅಕ್ಷರಶಃ ಸಾವಿರಾರು ಮೈಲಿಗಳ ತನಕ ಚಲಿಸುವಂತಹ ಹೆದ್ದಾರಿಗಳನ್ನು ಅವರು ೧೯೨೦ರ ದಶಕದಲ್ಲೇ ನಿರ್ಮಿಸಲು ಆರಂಭಿಸಿದ್ದರು! ಇದಕ್ಕೆ ಪ್ರತಿಯಾಗಿ, ೧೯೪೭ರಲ್ಲಿ ಸ್ವಾತಂತ್ರ‍್ಯ ಪಡೆದ ನಂತರ, ನಾವು ಹೊಸದಾಗಿ ದೇಶವನ್ನು ಕಟ್ಟಲು ಆರಂಭಿಸಬೇಕಾಯಿತು. ಇಲ್ಲಿ, ಒಂದು ದೇಶದ ಪ್ರಗತಿಗೆ ಸ್ವಾತಂತ್ರ‍್ಯ ಎಷ್ಟು ಮುಖ್ಯ ಎಂಬುದನ್ನು ಗುರುತಿಸಬಹುದು. ಆ ದೇಶದಲ್ಲಿ ಓಡಾಡುವಾಗ ಎದುರಾಗುವ ಇಂತಹ ಸನ್ನಿವೇಶಗಳಿಂದಾಗಿಯೇ ಇರಬಹುದು, ಅಲ್ಲಿ ಮೊದಲ ಬಾರಿ ಪ್ರವಾಸ ಮಾಡುವಾಗ ಉದಿಸುವ ಬೆರಗು, ವಿಸ್ಮಯವು, ಕೆಲವರಲ್ಲಿ ಸಣ್ಣ ಕೀಳರಿಮೆಯನ್ನು ಮೂಡಿಸಬಹುದು! ಅಂತಹ ಸಾಧ್ಯತೆಯನ್ನು ಕಲ್ಪಿಸಿಕೊಂಡು, ಅದರಿಂದ ದೂರವಿರಲು ಪ್ರಯತ್ನಿಸುತ್ತಾ, ಆ ದೊಡ್ಡ ದೇಶದ ಕುರಿತು ಪುಟ್ಟ ಪುಟ್ಟ ಟಿಪ್ಪಣಿಗಳನ್ನು ಬರೆದಿದ್ದೇನೆ, ಅವುಗಳನ್ನು ಸಂಕಲನ ರೂಪದಲ್ಲಿ ಇಲ್ಲಿ ಕೊಟ್ಟಿದ್ದೇನೆ – ನನ್ನ ಈ ಪ್ರಯತ್ನ ಎಷ್ಟು ಸಫಲವಾಯಿತು ಎಂದು ಓದುಗರಾದ ನೀವೇ ಹೇಳಬೇಕು!






0 Comments