ಗೋವಿಂದ ಹೆಗಡೆ
1 ಸಂಜೆಗಳು
ಸಂಜೆಗಳಿಗೆ ಸಾಮಾನ್ಯವಾಗಿ ಬಣ್ಣ ಮೆತ್ತಿರುತ್ತದೆ
ಕೆಂಪು ಹಳದಿ ಇನ್ನೂ ಏನೇನೋ ಕಲಸಿಕೊಳ್ಳುತ್ತ ಕೊನೆಯಲ್ಲಿ ಕಪ್ಪಗೆ ಮುಗಿಯುತ್ತವೆ
ಸಾಮಾನ್ಯವಾಗಿ ಗಾಳಿ ಆಡುತ್ತಿರುತ್ತದೆ ಕೊನೆಯಲ್ಲಿ ಭಾರವಾಗಿ ಉಸಿರು.
ಇನ್ನು ಕೆಲವು ಸಂಜೆಗಳಲ್ಲಿ ಮಳೆ ಬರುವ ಮಬ್ಬು ಕವಿದ ಸೂಚನೆ ಗಾಳಿಯಲ್ಲಿ ತೇವ
ಮುದುಕನೊಬ್ಬನ ಕಣ್ಣುಗಳಲ್ಲಿ ಅಂತಹದೇ ಸಂಜೆ ಮುಸುಕಿರುತ್ತದೆಯೇ
ಕೆಲವರಿಗೆ ಸಂಜೆ ಎಂದರೆ ವಾಕಿಂಗು ಆಟದ ಸಮಯ ಅಥವಾ ಕುರುಕಲು ತಿಂಡಿ ಮೆಲ್ಲುತ್ತ ಕಾಫಿ ಕುಡಿಯುತ್ತ ಚಾನೆಲ್ ಬದಲಿಸುವ ಸಂದರ್ಭ
ಶಾಲೆಯಿಂದ ಮರಳುವ ಪೋರನ ಕಣ್ಣಲ್ಲಿ ಬಳಲಿಕೆ. ಇನ್ನು ಹೋಮ್ ವರ್ಕ್, ಟ್ಯೂಷನ್…
ಕಳೆದ ಬಾಲ್ಯಕ್ಕೆ
ಕಳೆದು ಹೋದ ಬಯಲಲ್ಲಿ ಶರಾ ಬರೆಯುತ್ತದೆ ಸಂಜೆ. ಮೆಂದು ಹಸುಗಳು ಮರಳುವ ಗೋಧೂಳಿ
ಸಮಯ ಶಬ್ದಕೋಶದ ಪುಟ ಸೇರಿ…
ಈಗ ಟ್ರಾಫಿಕ್ ಜಾಮು ಕರ್ಕಶ ಹಾರನ್ ಮುಗಿಯದ ಚಡಪಡಿಕೆ
ಈ ಗೀಜಗ ಮಾತ್ರ ಕೊಕ್ಕಿನಲ್ಲಿ
ಹುಲ್ಲೆಳೆಯ ಕಚ್ಚಿ ಹಾರುತ್ತಲೇ ಇದೆ
ಯಾವ ತುರ್ತೋ ಅದಕ್ಕೆ
ತುಟಿಗೆ ಬಳಿದ ರಂಗನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದಾಳೆ ಆ ಡ್ಯಾನ್ಸರ್
ತನ್ನ ಕಂಕುಳ ಮಾದಕತೆಯಲ್ಲಿ
ಇನ್ನವಳು ಸಂಜೆಯನ್ನು ಕುಣಿಸಬೇಕಿದೆ
ಸುಗಂಧ ಪೂಸಿ ಮುಖಕ್ಕೆ ನಗುಮೆತ್ತಿ ಮೈಮಾರಹೊರಟ ಇವಳ ಎದೆಯಲ್ಲಿ ದುಗುಡ
ಜ್ವರ ಬಂದ ಮಗುವಿನ ಔಷಧಕ್ಕೆ
ಇಂದಾದರೂ ಕಾಸು ಸಿಗಬಹುದೇ
ಆ ಮೂಲೆಯ ಗುಡಿಸಿಲಲ್ಲಿ ಹಾಸಿಗೆ ಹಿಡಿದ ಮುದುಕಿಯ ಕನವರಿಕೆಯಲ್ಲಿ
ಈ ಸಂಜೆಯೂ ಜೀವಂತವಿದ್ದಾನೆ ಮಗ.
ಅವನು ತೀರಿಹೋಗಿ ವರ್ಷಗಳೇ ಸಂದವೆಂದು ದಯವಿಟ್ಟು ಯಾರೂ ಹೇಳಬೇಡಿ
ಸಂಜೆಗಳೇ ಹಾಗೆ
ಎಷ್ಟೆಲ್ಲ ನೆನಪು ನಿರೀಕ್ಷೆಗಳ ಕಲಸಿ ಕಲಸಿ
ಮುಗಿಯುತ್ತವೆ ಕೊನೆಯ ಪಯಣಿಗನನ್ನು ಹೊಳೆ ದಾಟಿಸಿ ಒಬ್ಬಂಟಿ ಹಿಂದಿರುಗುತ್ತಿದೆ
ತಾರಿ ದೋಣಿ
ಅಂಬಿಗನನ್ನು ಮನೆ ಸೇರಿಸುವ ಹೊಣೆ ಹೊತ್ತು.
ದಣಿದ ಮುಖದಲ್ಲಿ ಮಂಕುನಗೆ ಚಿಮ್ಮಿಸಿ ಮರೆಯಾದ ಸೂರ್ಯನಿಗೆ
ಇನ್ನೂ ನಾಳೆಯಿದೆ
ಕೆಲವೊಮ್ಮೆ ಮಾತ್ರ
ನುಡಿಯಲು ಕಾದು ಕುಳಿತ ಏಕತಾರಿ ಸಂಜೆಯನ್ನು
ಮಿಡಿಯಲು ಯಾರೂ ಇರುವುದಿಲ್ಲ
2 ತೊಳೆಯುತ್ತ
ಇವಳಿಗೋ ಶುಭ್ರತೆಯ ಗೀಳು
ದಿನವಿಡೀ ಗುಡಿಸುತ್ತಾ ಒರೆಸುತ್ತ
ಉದ್ದನೆಯ ಕೋಲಿಗೆ ಪೊರಕೆ ಕಟ್ಟಿ
ಮೂಲೆ ಮೂಲೆಯ ಇಲ್ಲಣ, ಇಲ್ಲದ
ಜೇಡರ ಬಲೆ ಕೊಳೆಯ ತೆಗೆ
-ಯುತ್ತಲೇ ಇರುತ್ತಾಳೆ
“ಮನೆ ಕನ್ನಡಿ ಹಾಗೆ ಲಕಲಕ ಅಂತಿದೆ”
-ಅತಿಥಿಗಳ ತಾರೀಫಿಗೆ ಮುಖ ಊರಗಲ!
ಹೊರಗಿಂದ ಬಂದವ ಕಾಲು ತೊಳೆದೇ
ಒಳಗೆ ಬರಬೇಕು ಹಾಗೂ ಕೊಂಚ
ಹೆಜ್ಜೆ ಕಂಡಿತೆಂದರೆ ಇವಳು ಹೌಹಾರಿ
ಒರಸು ಬಟ್ಟೆ ಹಿಡಿದು ಹಾಜರು!
ಊರೆಲ್ಲ ಅಲೆದು ಮೈ ಕೈ ಮುಖ
ಮೂಗು ದೂಳಾಗಿ ಬರುವ ನಾನು
ಇವಳ ಕಣ್ಣಿಗೆ ಕಿಸುರು
ಬಾಗಿಲ ಹೊರಗೇ ಕೊಡ ನೀರು ಸುರಿದು
‘ಈಗ ಬನ್ನಿ ಒಳಗೆ’ ಅಂದಿಲ್ಲ ಸದ್ಯ!
ಹಾಗೂ ಭಂಡ ಸಮಾಧಾನ-
ನಾನು ಇವಳು ಪರಸ್ಪರ ಪೂರಕ
ಗಲೀಜು ಬರದೇ ತರದೇ
ಇವಳೇನು ಗುಡಿಸುತ್ತಾಳೆ
ಆದರೂ ಅಳುಕು- ಪೊರಕೆ ಹಿಡಿದು
ಒಳ ಹೊರಗೆ ಗುಡಿಸುತ್ತ ತೊಳೆಯುತ್ತ
ಇರುವವಳು
ಯಾವಾಗ ನನಗೆ ಕೈಹಚ್ಚಿ
ಗುಡಿಸುವಳೋ
ತೊಟ್ಟ ಕವಚ ಕೀಳುವುದು
ಅಷ್ಟು ಸುಲಭವೇ?!






0 Comments