ಜೋಗ್ ಮತ್ತು ನಾಟರಾಗದ ಜುಗಲ್ ಬಂದಿ…

ಗಿರಿಜಾ ಶಾಸ್ತ್ರಿ

ಉಸ್ತಾದ್ ನಿಸಾರರ ಸಂಗೀತ ಶಾಲೆಯ‌ ಮೆಟ್ಟಿಲೇರಿ ವಿಜು ಕರೆಗಂಟೆ ಒತ್ತಿದಳು. ಅದು ಶಾಲೆಯೇ? ಒಂದು ದೊಡ್ಡ ಮನೆ. ಬೆಚ್ಚಗಿನ ಮನೆ!

“ಬಹುತ್ ದೇರ್ ಕರ್‌ ದೀ? ” ಒಳಗಿನಿಂದ ಪರಿಚಿತ ದನಿ.

“ಅದು.,.ಬಸ್ ಸ್ಟಾಪಿನಲ್ಲಿ ಇಳಿದು …ರಿಕ್ಷಾ ಹತ್ತೋವಾಗ ರಿಕ್ಷಾವಾಲಾ ಭಾಳ ನಖರಾ ಮಾಡ್ತಿದ್ದಾ….”ವಿಜು ಹೇಳುತ್ತಿದ್ದಂತೆ

“ಒಳಕ್ಕ ಬಾರ… ಮೊದ್ಲು ಕೂಡು. ಏನ್ ಬಾಗಲಾಗೇ ಎಲ್ಲ ಒಪ್ಪಿಸಬೇಕೇನು? ” ನಗುತ್ತಾ ಉಸ್ತಾದರು ಎರಡೂ ಬಾಗಿಲು ತೆಗೆದರು.

ಗೊತ್ತಾತು ಬಿಡ್ರಿ ಸರ್, ನಾನು ಇಷ್ಟ್ ದಪ್ಪ ಇದ್ದೀನಿ ಅಂತ ಹೀಂಗ್ ಚಾಷ್ಟೀ ಮಾಡ್ತೀರಿ….ಎರಡೂ ಬಾಗಿಲ್ ತೆಗೆದೂ…

ಇಲ್ಲೇ…ಎರಡ್ ಹಡದ್ ಮ್ಯಾಗೂ ಹೀಂಗ ಅಂದ್ರ? ನೀ ಏನ್ ಇನ್ನಾ ಹುಡಿಗ್ಯಿದ್ದೀ? ಮಕ್ಕಳಾದ ಮ್ಯಾಲೆ ಲಟ್ಠ ಆಗೋದು ಸಹಜ್ ಅಲ್ಲಾ! ಭಾಳ ಹೈರಾಣಾಗಿದ್ದೀ ಬಾ ಕೂಡು…ಸೋಫಾದ ಮೇಲಿನ ಧೂಳು ಹೊಡೆಯುತ್ತಾ ಕೂರುವಂತೆ ಕೈ ಮಾಡಿದರು.

ಬಸ್ಸಿನಾಗ ಭಾಳ ಗರ್ದಿ ಇತ್ತೇನು? ಕೇಳುತ್ತಲೇ ಉತ್ತರಕ್ಕೆ ಕಾಯದೇ ಒಳಹೋಗಿ ಬಂದು ಕೆಂಪು ದ್ರವ ತುಂಬಿದ ಒಂದು ಗಾಜಿನ ಲೋಟ ಮುಂದೆ ಹಿಡಿದರು.

“ವಾಹ್ …ರೂಅಬ್ಝಾ!” ಗಟಗಟನೆ ಕುಡಿದಳು.

ಸಾವಕಾಶ್ …ಸಾವಕಾಶ್ ಎನ್ನುತ್ತಾ ಅವಳನ್ನೇ ದಿಟ್ಟಿಸುತ್ತಿದ್ದರು.

ಹಿಂಗ್ಯಾಕ ನೋಡ್ತೀರಿ?

ಏನಿಲ್ಲ ಅಷ್ಟು ದೂರದಿಂದ ಹೈರಾಣಾಗಿ‌ ನೀ ಬಂದಿ. ಆದ್ರ ಇವತ್ ರಿಯಾಝ್ ಬ್ಯಾಡೇನೋ ಅಂತಾ… ಮುಂಜಾನೀನಾ ನೋಡು ಈ ತಾನಪುರ ಶ್ರುತಿಮಾಡಿಟ್ಟಾ….
ಆದ್ರೂ…ಯಾಕೋ ಬ್ಯಾಡನಸ್ತದಾ

ತಂಬೂರೀ ಟೊಂಯ್… ಟೊಂಯ್… ಉಸ್ತಾದರ ಬಿಳಿಯ ನೀಳ ಬೆರಳುಗಳು ತಂಬೂರಿಯ ತಂತಿಯನ್ನು ಮೀಟುತ್ತಿದ್ದವು. ಆಳವಾದ ತೀಕ್ಷ್ಣ ಕಣ್ಣುಗಳು ಅವುಗಳ ಮೇಲೆಯೇ ನಾಟಿದ್ದವು! ಕಪ್ಪು ಬಿಳಿ ಬೆರೆತ ಗಡ್ಡ. ತಕ್ಷಣವೇ ಅವಳತ್ತ ತಿರುಗಿ ,

“ಹೀಂಗ್ ಮಾಡೋಣು…ಇವತ್ ಸುಮ್ಮ ಮಾತಾಡೋಣು, ಚಲೇಗಾ?”

“ಯಾವುದರ ಕುರಿತು ಸರ್?”

ಮುಂಜಾನಿಂದ ಈ ಜೋಗ್ ರಾಗ ಕಾಡ್ಲಿಕ್ಕ್ ಹತ್ಯದಾ…ಇದಕ್ಕ ನಿಮ್ಮ ಕರ್ನಾಟಕಿನಾಗ ಏನಂತೀರಿ? ಹ್ಞಾಂ ನಾಟ… ನಾಟರಾಗ.. “ಜಗದಾನಂದಕಾರಕ…” ಕೈಮೇಲೆತ್ತಿ ನಗುತ್ತಾ ಪಲುಕಿದರು.

“ಸರ್ ನೀವು ತಮಾಷೆ ಮಾಡ್ತಿದ್ದೀರಿ?

“ಮಝಾಕ್! ಹಂಗ್ ಎಂದಾದ್ರೂ ಹೇಳೀಯ ತಾಯಿ! ನಾನೊಬ್ಬ ಕಲಾವಿದ ಇದ್ದೀನಿ. ಎರಡೂ ಆ ದೇವಿ ನಾಲಗೇನಾ ಅಲ್ಲೇನ? ಸುಮ್ಮ… ನೀ ಸಿಟ್ಟಿಗೆದ್ದರ ನಿನ್ ಮಾರಿ ಕೆಂಪ್ ಆಗ್ತಾವಲ್ಲ! ನೋಡಬೇಕನಸ್ತಪಾ…ನೋಡ್ ನೋಡ್ ವಿಜಿಶರ್ಮಾನ ಕಿವಿ ಕೂಡ ಈಗ ಕೆಂಪಾತಲ್ಲ? ಉಸ್ತಾದರು ಜೋರಾಗಿ ನಗಹತ್ತಿದರು.
ಚಾಷ್ಟೀ ಸಾಕಿನ್ನ… ಹ್ಞು ಎಲ್ಲಿದ್ದಾ? ಜೋಗ್ …ಜೋಗ್ ಸಂಜೀರಾಗ ರಾತ್ರಿರಾಣಿ…ಅಂತಾರ ಭಕ್ತಿ… ಯೋಗ…ಪ್ರೀತಿ ಇದರಾಗ ತುಂಬಿ ತುಳಕ್ತದಾ ಅಂತಾರ…

ಸರ್ ಆದರೆ ಕರ್ನಾಟಕ ಸಂಗೀತ ದೊಳಗೆ ಭಕ್ತಿ ಮಾತ್ರ ಮುಖ್ಯ. ಭಕ್ತಿ ಇಲ್ಲದ ಸಂಗೀತ ಸಂಗೀತವೇ ಅಲ್ಲ. ಮನುಷ್ಯರ ಭೌತಿಕ ಪ್ರೀತಿ ಮುಖ್ಯ ಅಲ್ಲ…

ಭಕ್ತಿನಾಗ ಪ್ರೀತಿ ಇಲ್ಲೇನು? ಪ್ರೀತಿನಾಗ ಭಕ್ತಿ… ಅಂದ್ರಾ ಪರಸ್ಪರ ಶರಣಾಗೋದಿಲ್ಲೇನು? ಹುಚ್ಚಿ ಇದ್ದೀ ..!ಎರಡೂ ಹ್ಯಾಂಗ ಬ್ಯಾರೆ ಬ್ಯಾರೆ ಆಕ್ಕೇತಿ?ಮನಶಾರೆ ಪ್ರೀತಿ ಬ್ಯಾರೆ , ದೇವ್ರ ಪ್ರೀತಿ ಬ್ಯಾರೇನು? ಮನಶಾರ ಪ್ರೀತಿ ಮಾಡೋಹಂಗಾ ಅಲ್ಲೇನ ದೇವ್ರನ್ನಾ ಪ್ರೀತಿ ಮಾಡೋದು? ಮೀರಾ, ಅಕ್ಕನ ಹಾಡಿನೊಳಗಾ ಇಬ್ರ ಅಂಕಿತಾನೂ ತೆಗೆದು ಜರಾ ಹಾಡಿನೋಡು..ಹೆಂಗನಸ್ತದಾ ಹೇಳು. ಜಯದೇವ ಎಷ್ಟು ಎರೋಟಿಕ್ ಆಗಿ ಬರ್ದಾನ
“ಪ್ರಿಯೇ ಚಾರು ಶೀಲೆ……ಸಪದಿ ಮದನಾನಲೋ ದಹತಿ ಮಮ ಮಾನಸಂ / ದೇಹಿ ಮುಖ ಕಮಲ ಮಧುಪಾನಂ” ಇದ್ನೂ ಭಕ್ತಿಸಂಗೀತಾನೇ ಅಂತಾರಲ್ಲವ್ವ?

ನಿನ್ ಕ್ಲಾಸಿಫಿಕೇಷನ್ ಛಂದ್ ಅದಾ ವಿಜು. ಸಾಮಾಜಿಕವಾಗಿ ಬದುಕಲಿಕ್ಕ ಛಂದದಾ. ಆದ್ರ ಪ್ರಕೃತಿ ಒಳಗಾ ಈ ಯಾ ಕ್ಲಾಸಿಫಿಕೇಷನ್ ಇಲ್ಲ ಬಿಡು….ಪ್ರಕೃತಿ ಅಂದ್ರಾನೇ ಸಂಗೀತ ಅಲ್ಲೇನು?ಈ ಗಾಳಿಗಂಧ, ಮಳಿ, ಈ ಹಣ್ಣ ಹಂಪಲಾ, ಬಣ್ಣದ ಭೂಮಿ, ಕಾಪೂಸಿನಂತಹ ಮೃದು ಹೂ ಕೇಸರ, ಹಕ್ಕಿ ಕೂಜನ ಇವೇ ಅಲ್ಲೇನು ಸಂಗೀತ. ಇವೆಲ್ಲ ಬಿಟ್ಟ್ ಸಂಗೀತ ಅದೆ ಅಂತೀಯ? ಸಂಗೀತಂದ್ರ ಬರೀ ಶಬ್ದ ಅಂತಾ ಮಾಡೀಯೇನು? ಪ್ರೀತಿ ಇಲ್ದೇ ಇದ್ರ ಇವೆಲ್ಲ ಸಾಧ್ಯ ಅಂತೀಯೇನು?

ರಿವರ್ಸ್ ಗೇರ್ ಹಾಕಿದ ಉಸ್ತಾದರು
ಮತ್ತಾ ರಾಗಕ್ಕ ಕಾಲಗೀಲ ಏನಿಲ್ಲೇ…ಹಂಗ ನೋಡದ್ರ ಎಲ್ಲಾ ರಾಗಾನೂ ಸಾರ್ವಕಾಲಿಕಾನ ಅದಾ..ಮುಗುಳ್ನಗುತ್ತಾ,… ಇವನವ್ನಾ ಈ ಜೋಗ್ ಮಾತ್ರ ಬಿಡವೊಲ್ದ್ ನೋಡ.
“ಸಾಜನ್ ಮೋರೆ ಘರ್ ಆಯೆ…” ಜೋಗ್ ನ ಜಲಪಾತದಲ್ಲಿ ಉಸ್ತಾದರು ಮುಳುಗಿಹೋದರು. ತನ್ಮಯರಾಗಿ, ಉತ್ಕಂಠಿತರಾಗಿ ಹಾಡುತ್ತಿದ್ದವರು ಸ್ವಲ್ಪ ಹೊತ್ತಿನ ನಂತರ ಕಣ್ಣು ತೆರೆದು,
ಮೇಘದೂತದಾಗ ಒಬ್ಬಳು ನಾಯಕಿ ಬರ್ತಾಳ ನೋಡು. ಆಕಿ ಸಿಂಗಾರ ಮಾಡ್ಕೊಂಡು ತನ್ನ ಪ್ರಿಯತಮನೆಡೆಗೆ ಕತ್ತಲಲ್ಲಿ ಯಾರಿಗೂ ಕಾಣದ್ಹಂಗ ಓಡಿ ಹೋಗುತ್ತಿರುವಾಗ… “ಆ ಹೆಣಮಗಳ ಮುಂದ ನೀ ಘರ್ಜಿಸಿ ಆಕೀನ ಭಯಬೀಳಿಸಬ್ಯಾಡ” ಅಂತ ಕವಿ ಮೇಘಕ್ಕ ತಾಕೀತು ಮಾಡ್ತಾನ… ಅಂತಾ ನಾಯಕಿಗೆ ಏನಂತಾರ? ಅಭಿಸಾರಿಕೆ ಹೌದಲ್ಲೋ? ಭರತನ ಅಷ್ಟ ನಾಯಕಿಯರಲ್ಲಿ ಒಬ್ಳು‌!

ನಾಯಕಿಯರಿಗೆ ಮಾತ್ರ ಎಂಟು ಹೆಸರು ಆದ್ರೆ ನಾಯಕರಿಗೇಕಿಲ್ಲ?ಪಾಟಿ ಸವಾಲು ಹಾಕಿದಳು ವಿಜು.

“ಹಂಗಂತೀಯಾ? ಥಟ್ಟನೇ “ನಾಯಕರಿಗಾದ್ರ ಎಂಟಲ್ಲ ನೂರೆಂಟಲ್ಲ ಸಾವಿರದೆಂಟು ಹೆಸರಿಟ್ಟರೂ ಕಮ್ಮಿ ಆಕ್ಕೈತಿ ಬಿಡು” ಎಂದು ಜೋರಾಗಿ ನಕ್ಕರು. ಮತ್ತೆ ಗಂಭೀರವಾಗಿ
“ನೋಡು ಈ ಜೋಗ್ ನೊಳಗಾ ಆ ಮೇಘದೂತದ ಅಭಿಸಾರಿಕಾ ಕಾಣಿಸಿದ್ಳು ನನಗಾ…ಎಂಥ ಹಪಾಹಪಿ! ಏನು ಆತಂಕ,ಭಯ, ಅದೆಷ್ಟು ಅವಸರ! ಏರ್ತಾ ಇಳೀತಾ ಇದ್ದದ್ದು ಆಕಿ ಎದೀನಾ ? ಇಲ್ಲ ಕದ್ದು ಮುಚ್ಚಿ ಓಡುವ ರಸ್ತೀನಾ? ಕಣ್ಣಾಮುಚ್ಚಾಲೆ ಆಡ್ತ್ಯಾವಲ್ಲ, ಅವು ರಸ್ತೀ ಮ್ಯಾಲೀನ್ ಬೆಳಕಾ? ಆ ಬೆಳಕು ಹೊರಗಿದ್ದುದಾ ಇಲ್ಲ ಆಕಿ ಒಳಗಿತ್ತಾ? ಆಕಿ ಅವನ್ನ ಸೇರಿದಳಾ? ಇಲ್ವಾ? ಸೇರಬೇಕಾ? ನನ್ ಕೇಳಿದೀ ಅಂದ್ರ ಅವಳು ಸೇರಲೇ ಬಾರದು”

“ಯಾಕೆ?” ಆಶ್ಚರ್ಯದಿಂದ ಕೇಳಿದಳು.

ಏನು ಧಡ್ಡಿ ಇದ್ದೀ ನೀನು, ನನ್ ಶಿಷ್ಯಳಾಗಿ ! ಯಾಕಂದ್ರ ಇಬ್ರೂ ಸೇರಿದರಂದ್ರ ಸಂಗೀತ ನಿಂತು ಹೋಗ್ತದಲೇ… ಹಾಡೇ ಮುಗೀತಂದ್ರ ಇನ್ ಬದುಕೆಲ್ಲಿರ್ತಾದಾ? ಯೋಗ / ಜೋಗ್ ಶಾರೀರದೊಳಗಾ ಇರ್ಬೇಕ್! ಶರೀರದಲ್ಲಿ ಅಲ್ಲ, ವಿಚಾರ ಮಾಡು” ಎಂದರು.

ವಿಜು ನಾಟರಾಗದೊಳಗೆ ಕಳೆದು ಹೋಗಿದ್ದಳು. ಗಂಡ ಮಕ್ಕಳ ಜೊತೆ ದೋಣಿವಿಹಾರ ಮಾಡುತ್ತಿದ್ದಳು. ಮೇಲೆ ನೀಲಿ ಆಕಾಶ ನೀರೊಳಗೂ ನೀಲಿ. ನೀಲಿ ನೀರೊಳಗೆ ಜಗದಾನಂದಕಾರಕ ವೀಣೆ ಮಿಡಿಯುತ್ತಿತ್ತು. ಬದಿಯಲ್ಲೇ ಜೋಗ್ ರಾಗದ ಅಲೆಗಳೆದ್ದವು. ಸಾಜನ್ ಮೋರೆ ಘರ್ ಆಯೇ….ತರಂಗಗಳು ಸುತ್ತುವರೆದವು…
ದೂರದಿಂದ ಗಾಳಿಯಲ್ಲಿ ಜೋಗ್ ಮತ್ತು ನಾಟರಾಗದ ಜುಗಲ್ ಬಂದಿ‌ಕೇಳಿ ಬರುತ್ತಿತ್ತು.. “ಸೂರ್ಯ ಚಂದ್ರರೇ ನಯನವಾಗುಳ್ಳ, ನಾಗೇಂದ್ರಶಯನ…ಸೃಷ್ಟಿ ಸ್ಥಿತ್ಯಂತಕಾರ …ಓಂಕಾರ ಪಂಜರದಲ್ಲಿ ಗಿಣಿಯಾಗಿರುವ …ಸರೋಜ ಭವ ಕೇಶವ” ಥಳ ಥಳ ಹೊಳೆಯುತ್ತಿದ್ದ

‍ಲೇಖಕರು Admin

January 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: