ದೀಪಾ ಎಂ ಜಿ
‘ತನ್ನ ಅಂತ್ಯ ಸಂಸ್ಕಾರಕ್ಕಂತಲೇ
ಅಮ್ಮ
ಕಸೂತಿಯ ಬಾರ್ಡರ್ ಇದ್ದ
ಬಿಳಿಯ ನೈಟ್ ಡ್ರೆಸ್ ಕೊಂಡಿದ್ದಳು’
ಮಗ, ಉಸಿರೋದ ಪುಟ್ಟ
ಅಮ್ಮನ ವಿಗ್ರಹದ ಮುಂದೆ
ನಿಂತು ತನಗೆ ತಾನೇ
ಹೇಳಿಕೊಳ್ಳುತ್ತಿದ್ದ-
ಕತೆ ಅಲ್ಲಿಗೆ ನಿಲ್ಲಿಸಿದೆ
ತನ್ನ ಸಾವನ್ನ ತಾನೇ ಬಗೆದು
ಹೀಗೆ ಮುಂಚೆಯೇ
ತನ್ನ ಹೆಣಕ್ಕೆ ತೊಡಿಸಬೇಕಾದ
ಬಟ್ಟೆ ಕೊಂಡಿಟ್ಟುಕೊಳ್ಳುವುದು
ಎಷ್ಟು ಚೆಂದ
ಫ್ರೆಂಚ್ ಕತೆಯೊಂದು
ಇಂಗ್ಲಿಷಿಗೆ ಹೋಗಿ
ಕನ್ನಡಕ್ಕೆ ಬಂದಾಗ
ಸಿಕ್ಕ ಸಾಲಿನಲ್ಲಿ
ನಾನು ಗಂಟೆಗಟ್ಟಲೇ
ಸಿಕ್ಕಿಹಾಕಿಕೊಂಡೆ
ಒಮ್ಮೆ ಕೂತು
ಯೋಚಿಸಿದೆ
ನಾನು, ಯಾವತ್ತೊ
ಹೀಗೆ ಯತಾವತ್
ಯೋಚಿಸಿದ್ದೆ
ನನ್ನ ಹೆಣಕ್ಕೆ
ಯಾವ ಬಾರ್ಡರಿನ
ಜರಿಸೀರೆ
ಉಡಿಸಬೇಕು ಅಂತಾ
ಆದರೆ
ಆಗ
ಕೋವಿಡ್ ಕಾಲ
ಒಂದು ವೇಳೆ
ನನ್ನ ಹೆಣ ಕೊಡದೆ ಹೋದರೆ
ಬಿಳಿ ಬಟ್ಟೆಯಲ್ಲಿ ಸುತ್ತಿ
ದೊಡ್ಡ ಗುಂಡಿ
ತೆಗೆದು ರಾಶಿ ಹೆಣಗಳ
ಜೊತೆ
ಜೆಸಿಬಿಯಿಂದ
ಮಣ್ಣೆಳೆದುಬಿಟ್ಟರೆ!!?
ನನ್ನ ಜರಿಸೀರೆಯ ಗತಿ?
ನಗುತ್ತೇನೆ ಈಗ
ನನ್ನೊಳಗೆ ನಾನೇ
ಸಾವನ್ನ ಚೆಂದಗೊಳಿಸುವ
ತರಹೇವಾರಿ ಕನಸಹೆಣೆದು
0 ಪ್ರತಿಕ್ರಿಯೆಗಳು