ಜೋಗಿ ಹೊಸ ಕವಿತೆ- ಅಮ್ಮ…

ಜೋಗಿ

ಅಮ್ಮನ ಸಿಟ್ಟನ್ನು ನೋಡಿದಷ್ಟು
ಅಮ್ಮನ ಪ್ರೀತಿಯನ್ನು ನೋಡಲಿಲ್ಲ ನಾನು.

ನಡುರಾತ್ರಿಯಲ್ಲಿ ನನ್ನ ನಿದ್ದೆ ಮಂಪರಿನಲ್ಲಿ
ಅಪ್ಪನ ಹತ್ತಿರ ಅಮ್ಮ ಜಗಳ ಕಾಯುತ್ತಿದ್ದಳು.
ಒಂದೆಳೆ ಅವಲಕ್ಕಿ ಸರ ಮಾಡಿಸಿಕೊಟ್ಟಿಲ್ಲ ಎಂದು
ಕೂಗಾಡುತ್ತಿದ್ದಳು. ತನಗಲ್ಲದೇ ಮತ್ಯಾರಿಗೋ ಬಂಗಾರ
ಮಾಡಿಸಿಕೊಟ್ಟಿರಬಹುದೆಂಬ ಗುಮಾನಿಯಲ್ಲಿಯೇ ಇರುತ್ತಿದ್ದಳು.
ಅನುಮಾನ ನಿಜವಾಗದಿರಲಿ ಅಂತಲೇ ಅವಳು ಅಪರಾಧ ನಡೆಯುವ
ಮೊದಲೇ ಶಿಕ್ಷೆಯನ್ನೂ ಘೋಷಿಸುತ್ತಿದ್ದಳೆಂದು ನನ್ನ ಗುಮಾನಿ.

ನಿನ್ನ ಜತೆ ಬಾಳಲಿಕ್ಕಾಗದು ಅಂತ ಅಮ್ಮ ರೇಗಿದಾಗೆಲ್ಲ
ಅಪ್ಪ ಕಲ್ಲುಬಂಡೆಯಂತೆ ವಿಚಲಿತನಾಗದೇ ಕೂತಿರುತ್ತಿದ್ದ.
ಮನೆ ಬಿಟ್ಟು ಹೋಗುತ್ತೇನೆ ಎಂದು ಘೋಷಿಸಿದ ದಿನ
ಹುಟ್ಟುಕಿವುಡನಂತೆ ಇದ್ದುಬಿಡುತ್ತಿದ್ದ. ಅವಳಾಡಿದ ಮಾತು ತನಗೆ ಕೇಳಿಸಲೇ
ಇಲ್ಲದಂತೆ ನಡೆದುಕೊಳ್ಳುತ್ತಿದ್ದ. ತಾನು ಅಂಥ ಮಾತು ಆಡಲೇ ಇಲ್ಲ
ಎಂಬಂತೆ ಅಮ್ಮ ಮಾರನೆಯ ಬೆಳಗ್ಗೆ ಮಂಜುಗಣ್ಣಲ್ಲಿ ಹಸಿಕಟ್ಟಿಗೆಯ
ಒಲೆ ಊದುತ್ತಿದ್ದಳು.

ಅಮ್ಮನಿಗೆ ಹೋಗಲಿಕ್ಕಾಗದರೂ ಜಾಗವೆಲ್ಲಿತ್ತು? ಮನೆ ಬಿಟ್ಟು ಅದೆಲ್ಲಿಗೆ ಹೋಗಬಹುದಾಗಿತ್ತು ಅವಳು ಎಂಬ ಯೋಚನೆ ಆಗ ಬಂದಿರಲಿಲ್ಲ. ಈಗ ಮತ್ತೆ
ಕತ್ತಲು ತಡಕಾಡುತ್ತಿದ್ದ ಆ ಮನೆಯೊಳಗೆ ಮನಸ್ಸು ನುಗ್ಗಿಸಿ ಆಲೋಚಸಿದರೆ
ಅಮ್ಮನಿಗೆ ತವರೆಂಬುದೇ ಇರಲಿಲ್ಲ. ಅಕ್ಕ ತಂಗಿಯರು ಅಮ್ಮನ ಹಾಗೆಯೇ ಇದ್ದರು.
ಬಾಲ್ಯದ ಗೆಳೆಯನೊಬ್ಬ ಇದ್ದದ್ದು ಕಾಣೆ. ಆಮೇಲೆ ಅವಳನ್ನು ಪ್ರೀತಿಸಿದವರನ್ನು ನಾನು ನೋಡಿಲ್ಲ. ಅಪ್ಪ ಪ್ರೀತಿಸುತ್ತಿದ್ದನೋ ಇವತ್ತಿಗೂ ಸ್ಪಷ್ಟವಿಲ್ಲ. ಆ ಕಾಲಕ್ಕೆ ಪ್ರೀತಿಯೆಂಬುದೇ ಇರಲಿಲ್ಲ,
ಇದ್ದದ್ದು ಸಂಸಾರ, ಅಡುಗೆ, ಹೆರಿಗೆ, ಉಪವಾಸ, ಕೊತ್ತಂಬರಿ ಡಬ್ಬ, ತೇಪೆ ಹಾಕಿದ ಸೀರೆ,
ತಣ್ಣೀರು ಸ್ನಾನ, ಮನೆಗೆ ಗಂಡಸರು ಬಂದರೆ ಮೌನ, ಹೆಂಗಸರು ಬಂದರೆ ಸಾಮೂಹಿಕ ನಿಟ್ಟುಸಿರು.

ಅಮ್ಮನ ಮೇಲೆ ಬಂದ ಕವಿತೆಗಳನ್ನೆಲ್ಲ ಓದಿದ ಮೇಲೆಯೂ ಅಮ್ಮ ಇಡಿಯಾಗಿ
ದಕ್ಕದ ಮೂರ್ತಿ.
ಪೂರ್ತಿ ನೆನಪಾಗದ ಚಿತ್ರ. ಅರ್ಧ ಬರೆದ ಆತ್ಮಕತೆ.
ನನ್ನ ಅಕಾಲಿಕ ಸಾವು.
ನಾನು ಹೊತ್ತು ತಿರುಗುವ ನನ್ನದೇ ಅನಾಥ ಶವ.

ಮೆರವಣಿಗೆಯ ನಡುವೆ ನಿಂತು ತಲೆಕೆರೆದುಕೊಂಡು
ಕಂಗಾಲಾಗಿ ಹುಡುಕಾಡಿದರೆ
ಅಮ್ಮನ ಪ್ರೀತಿ ನೆನಪಿರುವಷ್ಟು
ಅಮ್ಮನ ಸಿಟ್ಟು ನೆನಪಿಲ್ಲ ಈಗ.

‍ಲೇಖಕರು Admin

May 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: