ಡಾ ಕೆ ಎಸ್ ಚೈತ್ರಾ ಅಂಕಣ – ಪಿಓಪಿ ಎಂಬ ಮಹಾಪಾಪಿ!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

7

ದಂತವೈದ್ಯಕೀಯ ಶಿಕ್ಷಣದಲ್ಲಿ ಮೊದಲೆರಡು ವರ್ಷ ವೈದ್ಯಕೀಯ ಶಿಕ್ಷಣದ ವಿಷಯಗಳೊಂದಿಗೆ ಬಾಯಿ-ಹಲ್ಲಿಗೆ ಸಂಬಂಧಿಸಿದ ವಿಷಯಗಳನ್ನೂ ಕಲಿಯಲಾಗುತ್ತದೆ. ಮೂರನೇ ವರ್ಷದಿಂದ ರೋಗಿಗಳ ಜತೆ ನೇರವಾಗಿ ಹಂತಹಂತವಾಗಿ ಹಿರಿಯರ ನೇತೃತ್ವದಲ್ಲಿ ಕೆಲಸ ಮಾಡಬೇಕು. ಇದು ಕ್ಲಿನಿಕಲ್ಸ್. ಆದರೆ ಅದಕ್ಕೆ ಮುನ್ನ ಎರಡು ವರ್ಷಗಳು ಬಾಯಿ-ಹಲ್ಲು-ಒಸಡಿನ ರಚನೆ ಮಾತ್ರವಲ್ಲ, ರೋಗಿಯ ಮೇಲೆ ಮಾಡುವ ಮತ್ತು ಲ್ಯಾಬ್‍ನಲ್ಲಿ ನಡೆಯುವ ಪ್ರತಿ ಕೆಲಸದ ಎಲ್ಲಾ ಹಂತಗಳನ್ನೂ ನಾವು ಮಾಡಿಯೇ ಕಲಿಯಬೇಕು.

ಒಮ್ಮೆ ವೃತ್ತಿಪರರಾದ ನಂತರ ಅಸಿಸ್ಟೆಂಟ್‍ಗಳು ಚೇರ್‍ಬದಿಯ ಮತ್ತು ಲ್ಯಾಬ್‍ಟೆಕ್ನಿಶಿನ್‍ಗಳು ಉಳಿದ ಕೆಲಸ ಮಾಡಿಕೊಟ್ಟರೂ ಕಲಿಕೆಯ ಹಂತದಲ್ಲಿ ಎಲ್ಲವೂ ನಮ್ಮದೇ ಜವಾಬ್ದಾರಿ. ಅಂದರೆ ಮನೆ ಕಟ್ಟುವ ಮುನ್ನ ಮಣ್ಣುಕಲೆಸುವುದನ್ನು ಮೊದಲು ಕಲಿಯಬೇಕು! ಹೀಗೆ ಕಲೆಸಿ-ಕೊರೆಯುವುದನ್ನು ಕಲಿಸಿದ್ದು ಪ್ರಿ ಆಪರೇಟಿವ್ ತರಗತಿಗಳು! ನಮ್ಮಲ್ಲಿ ಹಲ್ಲಿನ ಅಳತೆಗಳನ್ನು ತೆಗೆದು ಅವುಗಳಿಂದ ಪ್ರತಿಕೃತಿ ಮಾಡುವಾಗ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ), ಡೆಂಟಲ್‍ಸ್ಟೋನ್, ಡೈ ಸ್ಟೋನ್ ಹೀಗೆ ವಿವಿಧ ರೀತಿಯ ವಸ್ತುಗಳನ್ನು ಉಪಯೋಗಿಸುತ್ತೇವೆ. ಹಲ್ಲಿನ ಅಳತೆಯನ್ನು ತೆಗೆದು ಕೂಡಲೇ ಅವುಗಳಲ್ಲಿ ಇದನ್ನು ತುಂಬಿ ಸ್ವಲ್ಪ ಹೊತ್ತು ಗಟ್ಟಿಯಾಗಲು ಬಿಟ್ಟು ನಂತರ ತೆಗೆದರೆ ಹಲ್ಲುಗಳ ಪ್ರತಿಕೃತಿ ಸಿದ್ಧವಾಗುತ್ತದೆ. ಇದಿಷ್ಟನ್ನು ಕೇಳಿದಾಗ ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಬಹುದಾದ ಕೆಲಸ; ಇದನ್ನೇನು ತಿಂಗಳುಗಟ್ಟಲೇ ಕಲಿಸುತ್ತಾರೆ ಎನಿಸಿತ್ತು.

ವಸ್ತುಗಳ ಗಟ್ಟಿತನದಲ್ಲಿ ವ್ಯತ್ಯಾಸವಿದ್ದರೂ ಎಲ್ಲದಕ್ಕೂ ನೀರು-ಪೌಡರ್ ಸರಿಯಾದ ಪ್ರಮಾಣದಲ್ಲಿ ಹಾಕಿ ಕಲೆಸುವುದು ಪ್ರಥಮ ಹಂತ. ಅದಕ್ಕೆ ಸರಿಯಾಗಿ ಅನುಭವಿ ಪ್ರೊಫೆಸರ್ ನಿಮಿಷದಲ್ಲಿ ಸರಸರ ಹಿಟ್ಟಿನಂತೆ ಕಲೆಸಿ ಅಚ್ಚಿಗೆ ತುಂಬಿ ಅರ್ಧಗಂಟೆಯಲ್ಲಿ ಪ್ರತಿಕೃತಿ ಮಾಡಿದಾಗ ‘ಈ..ಸಿ’ ಎಂದು ರಾಗವನ್ನೂ ಎಳೆದಿದ್ದೆವು.ಅಚ್ಚ ಬಿಳಿ ಏಪ್ರನ್ ಧರಿಸಿ ಕೈಯ್ಯಲ್ಲಿ ಎನಾಮೆಲ್ ಟ್ರೇ ತುಂಬಾ ಚಾಕು – ಚೂರಿಯಂಥ ಸಾಧನ, ಒಂದೆರಡು ಬೌಲ್ ಹಿಡಿದು ಪಿಓಪಿ ಮಿಶ್ರಣ ತಯಾರಿಸಲು ನಿಂತಾಗ ಹಲ್ಲಿನ ಮಾತ್ರವಲ್ಲ ಹಿಮಾಲಯದ ಪ್ರತಿಕೃತಿಯನ್ನು ಮಾಡಿ ಬಿಸಾಡುತ್ತೇವೆ ಎಂಬ ಆತ್ಮವಿಶ್ವಾಸ ತುಂಬಿತುಳುಕುತ್ತಿತ್ತು. ಒಂದೇ ತರಗತಿಯಲ್ಲಿ ಅದೆಲ್ಲಾ ತುಂಬಿ ತುಳುಕಿ ಹರಿದು ನೆಲ ಸೇರಿತು !! ಪೌಡರ್‍ನಂಥ ವಸ್ತುವನ್ನು ಬೌಲ್‍ನಲ್ಲಿ ಹಾಕಿ ಸೌಟಿನಂಥ ಸ್ಪಾಚುಲಾವನ್ನು ತಿರುಗಿಸುತ್ತಾ ಸರಿಯಾಗಿ ಹದಕ್ಕೆ ಬರುವ ತನಕ ತಿರುಗಿಸಬೇಕು ಎಂದು ಹೇಳಿದ್ದರು. ಸರಿ, ಬೌಲ್‍ನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಕಿ ನೀರು ಬೆರೆಸಿ ಜೋರಾಗಿ ತಿರುಗಿಸಿದ್ದಷ್ಟೇ.. ಮುಖ ಮೈ ಮೇಲೆಲ್ಲಾ ಅದು ಹಾರಿ ಬಿದ್ದಿತ್ತು. ಜತೆಗೇ ಪಕ್ಕದಲ್ಲಿ ನಿಂತವರಿಗೂ ಪ್ರೋಕ್ಷಣೆ. ಅದನ್ನು ಒರೆಸಿಕೊಳ್ಳುವಷ್ಟರಲ್ಲಿ ಮುಂದಿದ್ದ ಮಿಶ್ರಣ ಗಟ್ಟಿಯಾಗಿ ವ್ಯರ್ಥ. ಸರಿ ಎರಡನೇ ಸಲ ನೀರಾಗಿ ಕಲೆಸಿಟ್ಟರೆ ಎಷ್ಟು ಹೊತ್ತಾದರೂ ಗಟ್ಟಿಯೇ ಆಗದು. ಅದನ್ನು ಉಪಯೋಗಿಸಲಾಗದೇ ಸುರಿದಿದ್ದಾಯ್ತು. ಒಟ್ಟಿನಲ್ಲಿ ಒಂದಲ್ಲ ಒಂದು ಗೋಳು..ಈ ಪೌಡರ್‍ಗೆ ತಲೆ ಕೆಟ್ಟಿದೆ; ನಮ್ಮ ಕೈಗೆ ಬಂದೊಡನೆ ವಿಚಿತ್ರವಾಗಿ ಆಡುತ್ತದೆ, ಪಿಓಪಿ ಅಲ್ಲ ಇದು ಮಹಾಪಾಪಿ.. ಪ್ರೊಫೆಸರ್ ಹತ್ತಿರ ಎಷ್ಟು ಚೆನ್ನಾಗಿ ಹೇಳಿದ ಮಾತು ಕೇಳುತ್ತೆ ಎಂದು ನಮ್ಮೆಲ್ಲರಿಗೂ ಅನಿಸುತ್ತಿತ್ತು. ಕೆಲವರಂತೂ ಪ್ರೊಫೆಸರ್ ಉಪಯೋಗಿಸಿದ ಪಿಓಪಿ ಸುಪೀರಿಯರ್ ಕ್ವಾಲಿಟಿ ಎಂಬ ನಿರ್ಣಯಕ್ಕೆ ಬಂದಿದ್ದರು. ಇದರೊಂದಿಗೆ ಮತ್ತೊಂದು ತಲೆನೋವೆಂದರೆ ಪ್ರತಿ ಬಾರಿ ಇದನ್ನು ಮಾಡಿದಾಗಲೆಲ್ಲಾ ಮತ್ತೆ ಎಲ್ಲಾ ಉಪಕರಣಗಳನ್ನು ಸರಿಯಾಗಿ ತೊಳೆದು ಒಣಗಿಸಬೇಕು; ಇಲ್ಲದಿದ್ದಲ್ಲಿ ಮುಂದಿನದ್ದೂ ಹಾಳು.

ಸ್ಟಾರ್ಟ್ ಓವರ್
ಹೇಗೋ ಮಾಡಿ ಒಬ್ಬರನ್ನೊಬ್ಬರು ಬೈಯ್ಯುತ್ತಾ, ಪರಸ್ಪರ ಕಲಿಯುತ್ತಾ ಈ ಪಿಓಪಿ ಮಿಕ್ಸ್ ಮಾಡುವುದನ್ನು ಕಲಿತೆವು. ಅಲ್ಲಿಗೆ ಮುಗಿಯಿತೇ? ದೊಡ್ಡ ಸಾಧನೆ ಮಾಡಿದವರಂತೆ ಆ ಮಿಶ್ರಣ ತೆಗೆದು ಹಲ್ಲಿನ ಅಳತೆಗೆ ಹೊಯ್ದು ಅರ್ಧ ಗಂಟೆ ಕಾಯುವ ಕೆಲಸ. ಮೊದಲು ಮಾಡಿದವರು ಇನ್ನೂ ಪಿಓಪಿ ಕಲೆಸುತ್ತಿರುವವರ ಮುಂದೆ ಠೀವಿಯಿಂದ ನಮ್ಮದು ಮುಗಿಯಿತು ಎಂದು ಅತ್ತಿತ್ತ ಠಳಾ ಯಿಸಿದ್ದಾಯ್ತು. ಸಮಯ ಮುಗಿದು ಅಚ್ಚಿನಿಂದ ಪ್ರತಿಕೃತಿ ಹೊರತೆಗೆದರೆ ಹಲ್ಲುಗಳು ಇರಬೇಕಾದ ಸ್ಥಾನದಲ್ಲಿ ಬರೀ ಗುಳ್ಳೆಗಳು (ಏರ್ ಬಬಲ್ಸ್)! ನಮಗೋ ಗಾಬರಿ..ಓಡಿ ಹೋಗಿ ಸರ್/ ಮೇಡಂ ಬಳಿ ತೋರಿಸಿದರೆ ಮಿಕ್ಸ್ ಮಾಡಿದ್ದು ಸರಿ ಆಗಿಲ್ಲ. ಮಿಕ್ಸ್ ಮಾಡಿದ ನಂತರ ಅದರಲ್ಲಿದ್ದ ಗಾಳಿ ಹೊರಹೋಗುವಂತೆ ನಿಧಾನವಾಗಿ ಬೌಲ್ ಕುಟ್ಟಬೇಕು ಎಂಬ ಉತ್ತರ ಸಿಕ್ಕಿತು. ಹಾಗಾದರೆ ಇಷ್ಟು ಕಷ್ಟಪಟ್ಟು ಮಾಡಿದ್ದನ್ನು ಏನು ಮಾಡಬೇಕು ಎಂಬ ನಮ್ಮ ಪ್ರಶ್ನೆಗೆ ‘ಸ್ಟಾರ್ಟ್ ಓವರ್’ ಎಂಬ ಉತ್ತರ.

ಸರಿ ಗಮನವಿಟ್ಟು ಕಲೆಸಿ, ಗಾಳಿ ಇಲ್ಲದಂತೆ ಜಾಗ್ರತೆಯಾಗಿ ಮಿಕ್ಸ್ ಸಿದ್ಧಗೊಳಿಸಿ, ಅಚ್ಚಿನಲ್ಲಿ ಸುರಿದು ಕಾದು ಎಲ್ಲಾ ಸರಿ ಮಾಡಿದ್ದೇವೆ ಎಂಬ ಭರವಸೆಯಿಂದ ತೆಗೆದರೆ ಒಂದು ಮುರಿದ ಹಲ್ಲು/ ಅಥವಾ ಅಂಚು! ಕಾರಣ ಅಚ್ಚಿನಿಂದ ಹೊರತೆಗೆಯುವಾಗ ಅವಸರಿಸಿದ್ದು, ಅನಗತ್ಯವಾಗಿ ಬಲಪ್ರಯೋಗ ಮಾಡಿದ್ದು. ಕಾರಣ ಕೇಳಿ ಮುಂದೇನು ಎನ್ನುವ ಪ್ರಶ್ನೆ ಕೇಳದಷ್ಟು ಜಾಣರಾಗಿದ್ದೆವು. ಮತ್ತದೇ ಕಲೆಸು, ಬಿಸಾಡು, ತೊಳೆಯುವ ಚಕ್ರ ಆರಂಭ. ನಮ್ಮ ಮೇಲುಸ್ತುವಾರಿ ವಹಿಸಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳು ತಾವು ಹೇಗೆ ಕಷ್ಟಪಟ್ಟಿದ್ದೆವು ಎಂಬುದನ್ನೇ ಮರೆತವರಂತೆ ಕಠಿಣರಾಗಿ ವರ್ತಿಸುತ್ತಿದ್ದರು.( ನಮಗೆ ಆ ಸಮಯಕ್ಕೆ ಹಾಗನ್ನಿಸುತ್ತಿತ್ತು. ಈಗ ಪ್ರತೀ ಬಾರಿ ಅವರು ಹಾಗೆ ಕಲಿಸಿದ್ದಕ್ಕೆ ಹೀಗಿದ್ದೇವೆ ಎಂದು ಕೃತಜ್ಞತೆ ಮೂಡುತ್ತದೆ) ಪ್ರತಿ ಪ್ರಾಕ್ಟಿಕಲ್ ತರಗತಿಯ ಮುನ್ನ ಉಪಕರಣಗಳ ಪರೀಕ್ಷೆ ( ಇನ್ಸ್ಟ್ರುಮೆಂಟ್ ಚೆಕ್) ಬೇರೆ ಮಾಡುತ್ತಿದ್ದರು.ಎಲ್ಲವೂ ಸ್ವಚ್ಛವಾಗಿರಬೇಕು, ಒಂದಿಷ್ಟು ಕಸ- ಧೂಳು ಕಂಡರೂ ಉಜ್ಜುವ-ತೊಳೆಯುವ ಕೆಲಸ ಶುರು ! ಇದಿಷ್ಟು ತರಗತಿಯಲ್ಲಿ ಆದರೆ ಹಾಸ್ಟೆಲ್ಲಿಗೆ ಮರಳಿ ಏಪ್ರನ್ ಉಜ್ಜುವ ಕೆಲಸ.

ಎರಡು ಗಂಟೆ ಕಾಲ ಸತತವಾಗಿ ಈ ಕೆಲಸ ಮಾಡಿ ಏಪ್ರನ್ ಪೂರ್ತಿ ಕೊಳೆಯಾಗಿರುತ್ತಿತ್ತು. ಅದನ್ನು ನೆನೆಸಿ, ಉಜ್ಜಿ , ತೊಳೆದು ಹಿಂಡಿ, ಒಣಗಿಸಬೇಕು. ಏಪ್ರನ್ ಕೊಳೆಯಾಗಿದ್ದರೆ ಬೈಗುಳ ಕಟ್ಟಿಟ್ಟ ಬುತ್ತಿಯಾಗಿತ್ತು. ಉತ್ತರ ಭಾರತದ ಕೆಲವು ಹುಡುಗರಂತೂ ಈ ರೀತಿ ಕೆಲಸ ಮಾಡಿ ಅಳುವುದೊಂದೇ ಬಾಕಿ.. ಹಾಗಾಗಿಯೇ ಜತೆಗಿದ್ದ ಹಾಸ್ಯಪ್ರಿಯ ಸಿಂಗ್ ‘ ಈವರೆಗೆ ಒಂದು ಗ್ಲಾಸ್ ತೊಳೆದಿಲ್ಲ. ಒಂದು ಕರ್ಚೀಫ್ ತೊಳೆದಿಲ್ಲ. ಬೆಣ್ಣೆಯಲ್ಲಿ ತೇಲುತ್ತಾ ಬೆಳೆದವನು ನಾನು. ಇಲ್ಲಿ ಈ ರೀತಿ ಬೌಲ್, ಸೌಟು ಹಿಡಿದು ಬಗೆ ಬಗೆ ಹಿಟ್ಟು ಕಲೆಸುವುದು, ತಿಕ್ಕುವುದು ಮಾಡಬೇಕಾಯಿತೇ? ಈ ಕಲೆಯಾದ- ಕೊಳಕು ಕೋಟು, ಕೈಯ್ಯಲ್ಲಿ ಭಿಕ್ಷಾ ಪಾತ್ರೆ, ಗಡ್ಡದಲ್ಲಿ ಸಿಮೆಂಟ್..ಅವತಾರ ನೋಡಿ ನನಗೆ ಹೆಣ್ಣು ಸಿಗುವುದು ಬಹಳ ಅನುಮಾನ. ಬಹುಶಃ ಅಮ್ಮನ ಜತೆ ಆಲೂಪರಾಠಾ ಹಿಟ್ಟು ಕಲೆಸುತ್ತಾ, ಪಾತ್ರೆ ತೊಳೆಯುತ್ತಾ , ಬಟ್ಟೆ ಉಜ್ಜುತ್ತಾ ಜೀವನವಿಡೀ ಕಳೆಯಬೇಕೇನೋ’ ಎಂದು ನಗುತ್ತಿದ್ದ. ಆದರೆ ಜತೆಗೇ ಹಿಟ್ಟು ಕಲೆಸುವುದು ಮಾತ್ರವಲ್ಲ ಅಂಥಹ ನೂರಾರು ಕೆಲಸಗಳನ್ನು ದಿನವೂ ಕರಾರುವಾಕ್ಕಾಗಿ, ಪ್ರೀತಿಯಿಂದಲೇ ಮಾಡುವ ತನ್ನ ತಾಯಿಯಂಥ ಜನರ ಶ್ರಮದ ಬಗ್ಗೆ ತನಗೀಗ ಅರ್ಥವಾಗಿದೆ ಎಂದೂ ಗಂಭೀರವಾಗಿ ನುಡಿಯುತ್ತಿದ್ದ.

ದೇವತೆಯ ಕೃಪೆ
ನಮ್ಮ ಈ ಎಲ್ಲಾ ಉಪಕರಣಗಳನ್ನು ಇಟ್ಟುಕೊಳ್ಳಲು ಇಬ್ಬರಿಗೆ ಸೇರಿ ಲಾಕರ್ ಕೊಟ್ಟಿದ್ದರು. ದಿನದ ಕೆಲಸ ಮುಗಿದ ನಂತರ ಎಲ್ಲರೂ ದೊಡ್ಡ ಟ್ರೇಯಲ್ಲಿ ತುಂಬಿ ಅವುಗಳನ್ನು ಲಾಕರ್‍ನಲ್ಲಿಟ್ಟು ಬರುತ್ತಿದ್ದೆವು. ಸಾಧಾರಣವಾಗಿ ಹುಡುಗಿಯರು ತರಗತಿ ಮುಗಿದ ಮೇಲೂ ಎಲ್ಲವನ್ನೂ ಸ್ವಚ್ಛಗೊಳಿಸಿ ನಿಧಾನವಾಗಿ ರೂಮಿಗೆ ಬಂದರೆ ಹುಡುಗರಿಗೆ ಮುಗಿದೊಡನೆ ಓಡುವ ಅವಸರ. ಗಲೀಜಾದ ಉಪಕರಣಗಳನ್ನು ಅಲ್ಲಲ್ಲೇ ಸೇರಿಸಿ ಬೈಕ್ ಹತ್ತಿ ಹಾಸ್ಟೆಲ್‍ಗೆ ಓಡುತ್ತಿದ್ದರು. ಮುಂದಿನ ತರಗತಿಯಲ್ಲಿ ಈ ಚೆಕ್ ಮಾಡುವಾಗ ಬಹಳ ಫಜೀತಿಯಾಗುತ್ತಿತ್ತು. ನನ್ನ ಗುಂಪಿನಲ್ಲಿ ಪುಣ್ಯಕ್ಕೆ ಎಲ್ಲರೂ ಶಿಸ್ತಿನವರು. ನಮ್ಮ ಉಪಕರಣಗಳನ್ನು ಗುರುತಿಸಲು ಸುಲಭವಾಗಲಿ ಎಂದು ಇನಿಶಿಯಲ್ಸ್ ಬರೆದ ಪ್ಲಾಸಟರ್ ಹಾಕಿ ಎಲ್ಲವನ್ನೂ ನೀಟಾಗಿ ಜೋಡಿಸಿಡುತ್ತಿದ್ದೆವು.

ನಮ್ಮ ಪಕ್ಕದ ಗುಂಪಿನಲ್ಲಿ ಗೆಳತಿಯ ಜತೆ ಮೂವರು ಹುಡುಗರು. ಎಲ್ಲರ ಹೆಸರು ಒಂದೇ ಅಕ್ಷರದಿಂದ ಆರಂಭ. ಗೆಳತಿ ಎಲ್ಲವನ್ನೂ ಗಂಟೆಗಟ್ಟಲೇ ಸ್ವಚ್ಛ ಮಾಡಿ ಹೋದರೆ ಹುಡುಗರು ಎಂದೂ ಸ್ವಚ್ಛ ಮಾಡಿದ್ದನ್ನು ನೋಡಿಯೇ ಇರಲಿಲ್ಲ.ಆದರೆ ಆಶ್ಚರ್ಯವೆಂದರೆ ಪ್ರತಿ ಬಾರಿ ಫಳ ಫಳ ಹೊಳೆಯುವ ಉಪಕರಣವನ್ನು ಈ ಇನ್ಸ್ಟ್ರುಮೆಂಟ್ ಚೆಕ್‍ನಲ್ಲಿ ತೋರಿಸುತ್ತಿದ್ದರು. ನಮ್ಮ ಮೇಲ್ವಿಚಾರಕರೂ ಬೆಸ್ಟ್ ಟೀಂ ಎಂದು ಹೊಗಳುತ್ತಿದ್ದರು. ಕಡೆಗೊಮ್ಮೆ ಇದರ ರಹಸ್ಯ ಕೇಳಿದಾಗ ತಮ್ಮ ಸೀಕ್ರೆಟ್ ಹೇಳಿದರು ‘ಪ್ರತೀ ಬಾರಿ ನಾವು ಲಾಕರ್‍ನಿಂದ ಹುಡುಗಿಯ ಇನ್ಸ್ಟ್ರುಮೆಂಟ್ ತಂದು ತೋರಿಸುತ್ತೇವೆ. ಇನಿಶಿಯಲ್ಸ್ ಒಂದೇ ಆಗಿದೆ ಮತ್ತು ನಾವೆಲ್ಲಾ ಒಂದೇ ಎಂದು ತೋರಿಸಲು ಒಂದೇ ರೀತಿ ಸ್ಟಿಕ್ಕರ್ ಅಂಟಿಸಿದ್ದೇವೆ. ನಮ್ಮಲ್ಲಿ ಬೇಧ-ಭಾವವೇ ಇಲ್ಲ. ಅಷ್ಟು ಒಗ್ಗಟ್ಟು ಎಂದು ನಂಬಿಸಿದ್ದೇವೆ. ನಿಜ ಹೇಳಬೇಕೆಂದರೆ ಕೆಲಸ ಮಾಡುವುದು ಹುಡುಗಿಯೊಬ್ಬಳೇ! ಆಕೆ ನಮ್ಮ ಪಾಲಿನ ದೇವತೆ’. ಕಡೆಗೆ ಆ ದೇವತೆಗೆ ವಿಷಯ ಗೊತ್ತಾಗಿ ಆಕೆ ಶಾಪ ಕೊಟ್ಟು ಈ ಹುಡುಗರು ಎಲ್ಲಾ ಕೆಲಸ ಕಲಿಯಬೇಕಾಯಿತು ಎಂಬುದು ಬೇರೆ ಮಾತು.

ಸತತ ಅಭ್ಯಾಸಕ್ಕೆ ಒಲಿಯದ ವಿದ್ಯೆ ಯಾವುದಿದೆ? ಸಮಯ ಕಳೆದಂತೆ ಕೈ ಪಳಗಿತು. ಸರಿ ಪ್ರಮಾಣದ ನೀರು, ಪೌಡರ್ ಸೇರಿಸಿ ಚೆನ್ನಾಗಿ ಕಲಕಿ, ಅಚ್ಚಿನಲ್ಲಿ ಸುರಿದು ತಾಳ್ಮೆಯಿಂದ ಕಾದು ನಿಧಾನವಾಗಿ ಅಚ್ಚು ತೆಗೆಯುವುದನ್ನು ಕಲಿತೆವು. ಕಣ್ಣಿಗೆ ಕಾಣುವ ಹಾಗೆ ಮಾಡುವ ಕೆಲಸವಷ್ಟೇ ಮುಖ್ಯವಲ್ಲ. ಮರೆಯಲ್ಲಿ ಮಾಡುವ ಪ್ರತಿಯೊಂದು ಕೆಲಸವೂ ಮುಖ್ಯ. ಹಾಗೆ ನೋಡಿದರೆ ಆರಂಭಿಕ ಹಂತದ ಆ ಕೆಲಸಗಳು ಕೊನೆಯ ಹಂತದ ಕೆಲಸದಲ್ಲಿ ಅದೆಷ್ಟು ಮುಖ್ಯ ಪಾತ್ರ ವಹಿಸುತ್ತವೆ ಎಂಬುದು ಅರಿವಾಯಿತು. ಪ್ರೊಫೆಸರ್ ಹೇಳುತ್ತಿದ್ದ ‘ಮುಂದೆ ಈ ಎಲ್ಲಾ ಕೆಲಸಕ್ಕೆ ನಿಮಗೆ ಅಸಿಸ್ಟೆಂಟ್ ಇರಬಹುದು. ಆದರೆ ನೀವು ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಕಲಿತರೆ ಮಾತ್ರ ಬೇರೆಯವರಿಂದ ಅದನ್ನು ಮಾಡಿಸುವುದು ಸಾಧ್ಯ. ಒಂದೊಮ್ಮೆ ಯಾರೂ ಇರದಿದ್ದರೂ ಮಾಡುತ್ತೇನೆ ಎಂಬ ಆತ್ಮವಿಶ್ವಾಸ ಇರಬೇಕು.’ ಅದೆಷ್ಟು ನಿಜ ಆ ಮಾತು!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

May 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: