ಇಂಜೆಕ್ಷನ್ ಚುಚ್ಚಿಸಿಕೊಳ್ಳದೆ ಜೈಲಿನ ಕಂಬಿ ಎಣಿಸಿದ ನಾಗೇಶ್ ಹೆಗಡೆ

nagesh-hegde-081

ಪತ್ರಕರ್ತ ನಾಗೇಶ ಹೆಗಡೆಯವರ super ಪ್ರವಾಸ ಕಥನ- “ಗಗನ ಸಖಿಯರ ಸೆರಗು ಹಿಡಿದು”. ಒಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳದ ಕಾರಣಕ್ಕೆ ಜೈಲಿನ ಕಂಬಿ ಎಣಿಸಬೇಕಾದ ಪರಿಸ್ಥಿತಿ ನಾಗೇಶ ಹೆಗಡೆಯವರಿಗೆ ಸಿಕ್ಕಿತ್ತು. ತಮ್ಮ ಟ್ರಂಪ್ ಕಾರ್ಡ್ ಹಾಸ್ಯದಲ್ಲಿ ನಾಗೇಶ ಹೆಗಡೆ ಇಡೀ ಘಟನೆಯನ್ನು ಬಣ್ಣಿಸಿದ್ದರ ಒಂದು ತುಣುಕು ಇಲ್ಲಿದೆ.

ಕೆನ್ಯಾದ ನಾಲ್ಕು ದಿನಗಳ ಪ್ರವಾಸ ಮುಗಿಸಿಕೊಂಡು ಅದೇ ತಾನೇ ಹಿಂದಿರುಗುತ್ತಿದ್ದೆ. ವಿಮಾನ ಸಾಂತಾಕ್ರೂಸ್ ನಲ್ಲಿ ನೆಲ ಸ್ಪರ್ಶ ಮಾಡಿ ದಡಬಡ ಸದ್ದಿನೊಂದಿಗೆ ಅದೇ ವೇಗದಲ್ಲಿ ರೊಯ್ಯೆಂದು ಸಾಗಿ ಮತ್ತೆ ಅರಬ್ಬಿ ಸಮುದ್ರಕ್ಕೇ ಧಾವಿಸಿದಂತೆ ಹೋಗಿ ಹೋಗಿ ಹೋಗಿ ಕೊನೆಗೂ ಮುಖ ತಿರುಗಿಸಿ ನಿಂತಿತು.

ಆ ಚುಮುಚುಮು ನಸುಕಿನಲ್ಲಿ ಮುಂಬೈ ನಗರ ಮಂಜಿನ ಚಾದರ ಹೊದೆದು ಮಲಗಿಯೇ ಇತ್ತು. ದಪ್ಪ ಶಾಲು ಹೊದೆದಿದ್ದ ಹಿರಿಯರೊಬ್ಬರು ನಿಧಾನವಾಗಿ ಇಳಿಯತೊಡಗಿದರು. ಇಳಿದು ಇಳಿದು ನೆಲ ಮುಟ್ಟಿದ್ದೇ ತಡ, ಮೊದಲು ಕಾಲೂರಿದರು. ನಂತರ ಮಂಡಿ ಊರಿದರು. ಎಲಾ! ಏನಾಯಿತು ಎನ್ನುವುದರೊಳಗೆ ಅಲ್ಲೇ ಉದ್ದಂಡ ಮಲಗಿಬಿಟ್ಟರು. ಅವರ ಹಿಂದೆಯೇ ಬರುತ್ತಿದ್ದ ನಾನು ಇನ್ನೇನು, ಅವರನ್ನು ಎತ್ತಿ ಹಿಡಿಯಲು ಬಾಗಬೇಕು ಅನ್ನುವಷ್ಟರಲ್ಲಿ ನೆನಪಾಯಿತು.

ಮಾತೃಭೂಮಿಗೆ ಅವರು ಉದ್ದಂಡ ನಮಸ್ಕಾರ ಹಾಕುತ್ತಿದ್ದರು.

isolationದೀರ್ಘಕಾಲ ತಾಯ್ನಾಡಿನಿಂದ ದೂರ ಇದ್ದವರು, ಮರಳಿ ಬಂದು ನೆಲ ಸ್ಪರ್ಶ ಮಾಡಿದಾಗ ಹೀಗೇ ನಮಸ್ಕಾರ ಮಾಡುತ್ತಾರೆ. ತಾಯ್ನಾಡಿನ ಬಗೆಗಿನ ಪುಲಕಿತ ಭಾವನೆಯನ್ನು ಪ್ರದರ್ಶಿಸುವ ರೀತಿ ಇದು. ಕ್ರಿಶ್ಚಿಯನ್ನರು ನೆಲವನ್ನು ಮುತ್ತಿಕ್ಕುತ್ತಾರೆ. ಯಹೂದಿಯರು ನೆಲವನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಾರೆ.

ಆ ಹಿರಿಯ ನಿಧಾನ ಎದ್ದು ಬ್ರೀಫ್ ಕೇಸ್ ಎತ್ತಿಕೊಂಡು, ವಾಹನ ಏರಿ, ವಿಮಾನ ನಿಲ್ದಾಣದ “ಆಗಮನ ಕಕ್ಷೆ”ಗೆ ಬರುವವರೆಗೂ ನಾನು ಅವರ ಬಗೆಗೆ, ಅವರ ದೇಶ ಪ್ರೇಮದ ಬಗೆಗೆ ಆಲೋಚಿಸುತ್ತಿದ್ದೆ. ಭಾರತ ಬಿಟ್ಟು ಹೋಗಿ ಎಷ್ಟು ವರ್ಷಗಳಾಗಿದ್ದುವೊ ಏನೊ. ದೂರ ಇದ್ದವರು ಮಾತ್ರ ಸಮೀಪದವರಾಗಿರಲು ಸಾಧ್ಯ ತಾನೆ?

ಇಮಿಗ್ರೇಶನ್ ಕಟ್ಟೆಯ ಬಳಿ ಭಾರೀ ನೂಕು ನುಗ್ಗಲು ಇತ್ತು. ಎಲ್ಲರೂ ಆಫ್ರಿಕಾದಿಂದ ಬಂದವರೇ ಆದುದರಿಂದ ನಮ್ಮ ಸಾಲಿನಲ್ಲಿ ತುಂಬಾ ಮಂದಿ ಕರಿಯರಿದ್ದರು. ಈ ಪ್ರಯಾಣಿಕರ ಬಗೆಗೆ ನಿಲ್ದಾಣದ ಅಧಿಕಾರಿಗಳೂ ತಾತ್ಸಾರ ಭಾವನೆ ಇರುವುದರಿಂದಲೊ ಏನೊ, ಪಾಸ್ ಪೋರ್ಟ್ ಗಳ ತಪಾಸಣೆಗೆಂದು ತುಂಬ ನಿಧಾನಗತಿಯಲ್ಲಿ ಕೆಲಸ ಮಾಡುವ ಒರಟು ಗುಮಾಸ್ತರನ್ನೇ ಹಾಕಿರುತ್ತಾರೆ.

ನನ್ನ ಸಾಲಿನ ಬಳಿ ಯಾರ್ಯಾರೋ ದಲ್ಲಾಳಿಗಳು ಸುಳಿದಾಡುತ್ತಿದ್ದರು. ಮಾಮೂಲಿನಂತೆ ಡಾಲರ್ ಇದೆಯಾ, ಮಾರಾಟಕ್ಕೆ ಏನಾದರೂ ತಂದಿದೀರಾ ಇತ್ಯಾದಿ ಗುಸುಗುಸು ಕುಶಲೋಪರಿಗಳ ನಂತರ ಈ ಹೈದ ಹೊಸ ಪ್ರಶ್ನೆ ಕೇಳಿದ: “ನಿಮ್ಮಲ್ಲಿ ಯೆಲ್ಲೋ ಫೀವರ್ ಸರ್ಟಿಫಿಕೇಟ್ ಇದೆಯಾ?” ಅಂತ.

“ಇಲ್ಲಪ್ಪಾ, ಏನೂ ಇಲ್ಲ, ನಡಿ ಆಚೆ!” ಎಂದು ಮೆಲ್ಲಗೆ ಹೇಳಿದೆ.

“ಸರ್ಟಿಫಿಕೇಟ್ ಇಲ್ಲಾಂದ್ರೆ ತುಂಬಾ ಕಷ್ಟ ಸಾರ್! ಬೇಕಾದರೆ ಹೇಳಿ, ವ್ಯವಸ್ಥೆ ಮಾಡ್ತೀನಿ: ಬರೀ ಐವತ್ತು ಡಾಲರ್” ಎಂದ.

ಈ ಬಾರಿ ರೇಗಿ ಹೋಯಿತು. “ನನ್ನ ತಲೆ ತಿನ್ನಬೇಡ ನಡಿ ಆಚೆ!” ಎಂದು ಗದರಿಸಿದ ಮೇಲೆ ಆತ ಇನ್ನೊಬ್ಬ ಗಿರಾಕಿಯನ್ನು ಹುಡುಕುತ್ತ ಕ್ಯೂ ಗುಂಟ ಸಾಗಿದ.

ಕ್ಯೂದಲ್ಲಿ ನಿಧಾನ ಸಾಗುತ್ತ ಮುಂಗಟ್ಟೆಯ ಬಳಿ ಬಂದಾಗ, ಅಲ್ಲಿ ಕೂತಿದ್ದ ಗುಮಾಸ್ತ ನನ್ನ ಪಾಸ್ ಪೋರ್ಟ್ ತೆರೆದು ನೋಡುವ ಮೊದಲೇ “ಯಲ್ಲೋ ಫೀವರ್ ಸರ್ಟಿಫಿಕೇಟ್ ಇದೆಯಾ?” ಎಂದು ಕೇಳಿದ.

inject“ಇಲ್ಲ” ಎನ್ನುತ್ತಲೇ ಆತ ಪಾಸ್ ಪೋರ್ಟನ್ನು ಪಕ್ಕದ ಡಬ್ಬಕ್ಕೆ ಬಿಸಾಕಿ “ಕ್ವಾರಂಟೈನ್ ಕ್ವಾರಂಟೈನ್!” ಎಂದು ಕೂಗಿದ. ಮೂರು ಮಂದಿ ಸಮವಸ್ತ್ರಧಾರಿ ಧಡಿಯರು ಅದೆಲ್ಲಿಂದಲೋ ಬಂದು ನನ್ನ ರಟ್ಟೆ ಹಿಡಿದು ಆಚೆ ಎಳೆದು ನಿಲ್ಲಿಸಿದರು. ನಾನು ಏನೇ ವಿವರಣೆ ಕೊಡಲು ಹೊರಟರೂ ಬಾಯಿ ಮುಚ್ಚಿಸುತ್ತ, “ಕ್ವಾರಂಟೈನ್” ಎಂದು ಗುಮಾಸ್ತ ಕೂಗಿದಾಗೆಲ್ಲ ಒಬ್ಬೊಬ್ಬನನ್ನು ಎಳೆದೆಳೆದು ತಂದು ನಿಲ್ಲಿಸತೊಡಗಿದರು. ಇದ್ದುದರಲ್ಲಿ ಒಬ್ಬ ಸಮವಸ್ತ್ರದವ ಮಾತ್ರ “ವ್ಯಾನ್ ಬರುತ್ತೆ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ, ಕೊಂಚ ಕಾಲ ನಿಂತಿರಿ” ಎಂದ.

ಕ್ಯೂ ಮುಗಿಯುತ್ತ ಬಂದ ಹಾಗೆ ನನ್ನ ಗುಂಪಿಗೆ ಇನ್ನೂ ನಾಲ್ಕು ಮಂದಿ ಸೇರ್ಪಡೆಯಾಗಿದ್ದರು. ಎಲ್ಲರೂ ಆಫ್ರಿಕಾದ ಕರಿಯರೇ ಆಗಿದ್ದರು.

ಕ್ಯೂ ಪೂರ್ತಿ ಕರಗಿದ ಮೇಲೆ ಒಬ್ಬ ಅಧಿಕಾರಿ ನಮ್ಮೆಲ್ಲರ ಪಾಸ್ ಪೋರ್ಟನ್ನೂ, ಜತೆಗೆ ಇನ್ನೊಂದಿಷ್ಟು ಕಾಗದಗಳ ಕಂತೆಗಳನ್ನೂ ಹಿಡಿದು ನಮ್ಮತ್ತ ಬಂದ. “ನಿಮ್ಮನ್ನೆಲ್ಲ ಕ್ವಾರಂಟೈನ್ ಗೆ ಒಯ್ಯುತ್ತೇವೆ. ಹನ್ನೆರಡು ದಿನ ಅಲ್ಲಿರಬೇಕು. ಆಫ್ರಿಕಾದಿಂದ ಬಂದವರು ಬೇಕಿದ್ದರೆ ಮರಳಿ ತಮ್ಮ ದೇಶಕ್ಕೆ ಹೋಗಬಹುದು. ಭಾರತೀಯರಿಗೆ ಕ್ವಾರಂಟೈನ್ ಕಡ್ಡಾಯ” ಎಂದು ನನ್ನತ್ತ ನೋಡಿ ಘೋಷಿಸಿದ.

ಗಾಢ ಮೌನ ಆವರಿಸಿತು. ಹಠಾತ್ತಾಗಿ ನನಗಿಂತ ಒಂದೂವರೆ ಅಡಿ ಎತ್ತರದ ಆಜಾನುಬಾಹು ನಿಗ್ರೊ ವ್ಯಕ್ತಿ ಬಿಕ್ಕಿ ಬಿಕ್ಕಿ ಅಳತೊಡಗಿದ. “ನನ್ನನ್ನು ಹಿಂದೆ ಕಳಿಸಬೇಡಿ ಪ್ಲೀಸ್! ನನ್ನ ಬಳಿ ಹಣ ಇಲ್ಲ. ನಾವು ತುಂಬಾ ಬಡವರು. ನನಗೆ ಪುಣೆಯಲ್ಲಿ ಎಂಜಿನಿಯರಿಂಗ್ ಕಾಲೇಜಿಗೆ ಅಡ್ಮಿಶನ್ ಸಿಕ್ಕಿದೆ. ನಾನು ಅಲ್ಲಿಗೆ ಹೋಗಲೇಬೇಕು… ಇಷ್ಟಿದೆ ತಗೊಳ್ಳಿ. ನಾವು ಬಡವರು ಪ್ಲೀಸ್!” ಎಂದೆಲ್ಲ ಅಂಗಲಾಚುತ್ತ ತನ್ನ ಬಳಿ ಇದ್ದ ಡಾಲರ್ ನೋಟುಗಳನ್ನು ಎತ್ತಿ ಎತ್ತಿ ತೋರಿಸುತ್ತಿದ್ದ.

ಸುಂಕದವರ ಮುಂದೆ ಸುಖ ದುಃಖವೆ?

ನಮ್ಮನ್ನೆಲ್ಲ ಹೊತ್ತೊಯ್ಯಲು ವ್ಯಾನ್ ಸಿದ್ಧವಾಗಿ ಬಂದಿತ್ತು. ಇಬ್ಬರು ಕರಿಯರು ಮರಳಿ ಆಫ್ರಿಕಾಕ್ಕೆ ಹೊರಡಲು ತಯಾರಾದರು. ಆದರೆ ವಿಮಾನದ ಬುಕಿಂಗ್ ಆಗುವವರೆಗೂ ಅವರು ಕ್ವಾರಂಟೈನ್ ನಲ್ಲೇ ಇರಬೇಕಾದ್ದರಿಂದ ಎಲ್ಲರನ್ನೂ ವ್ಯಾನಿಗೆ ನುಗ್ಗಿಸಿದರು.

ಆ ವ್ಯಾನೋ, ದೇವರಿಗೇ ಪ್ರೀತಿಯಾದವರನ್ನು ಹೊತ್ತೊಯ್ಯುವ ಶವ ವಾಹನದಂತಿತ್ತು. ಜತೆಗೆ ಪೊಲೀಸ್ ವ್ಯಾನಿನಂತೆ ಅದರ ಕಿಟಕಿಗೆಲ್ಲ ಜಾಳಿಗೆ, ಸಾಧಾರಣ ಜಾಳಿಗೆಯಲ್ಲ, ಸೊಳ್ಳೆಗಳೂ ನುಗ್ಗದಂಥ ದಟ್ಟ ಹೆಣಿಗೆಯ ಜಾಳಿಗೆ.

ಆಗ ನೆನಪಾಯಿತು. ಹೌದು, ಇನ್ನು ಹದಿನೈದು ದಿನಗಳ ಕಾಲ ನಮ್ಮನ್ನು ಭಾರತದ ಯಾವ ಸೊಳ್ಳೆಯೂ ಕಚ್ಚಬಾರದು. ಯಾಕೆಂದರೆ, ಆಫ್ರಿಕದಿಂದ ಬಂದಿರುವ ನಾವು, ಅಲ್ಲಿ ಸೊಳ್ಳೆಗಳಿಂದ ಕಚ್ಚಿಸಿಕೊಂಡೇ ಬಂದಿದ್ದೇವಾದ್ದರಿಂದ ನಮ್ಮ ರಕ್ತದಲ್ಲಿ “ಹಳದಿ ಜ್ವರ”ದ ವೈರಾಣುಗಳ ಬೀಜ ಇರಲಿಕ್ಕೇ ಬೇಕು. ನಮ್ಮನ್ನು ಭಾರತದ ಸೊಳ್ಳೆ ಕಚ್ಚಿದ್ದೇ ಆದರೆ, ಈ ವೈರಾಣು ಬೀಜಗಳು ಅದರ ಶರೀರಕ್ಕೂ ಹೋಗುತ್ತವೆ. ಆ ಸೊಳ್ಳೆ ಬೇರೆ ಯಾರನ್ನಾದರೂ ಕಚ್ಚಿಬಿಟ್ಟರೆ, ಹಳದಿ ಜ್ವರ ಅವರಿಗೂ ವ್ಯಾಪಿಸುತ್ತದೆ. ಕ್ರಮೇಣ ಇಡೀ ಇಂಡಿಯಾಕ್ಕೆ ಈ ರೋಗ ಹಬ್ಬುತ್ತದೆ.

prisonಆದ್ದರಿಂದ ನಾವು ಐದು ಮಂದಿ “ಕ್ವಾರಂಟೈನ್” ಎಂಬ ದಿಗ್ಭಂಧನದಲ್ಲಿ ಇನ್ನು ಆರು ದಿನಗಳ ಕಾಲ (ಅಂದರೆ ನಮ್ಮಲ್ಲಿರುವ ವೈರಾಣು ಬೀಜ ಫಲಿತಗೊಂಡು ನಮಗೆ ಜ್ವರ ಬರುವವರೆಗೆ) ಯಾವ ಸೊಳ್ಳೆಯಿಂದಲೂ ಕಚ್ಚಿಸಿಕೊಳ್ಳದೆ ವಾಸಿಸಬೇಕು. ಭಾರತ ದೇಶದ ಭದ್ರತಾ ದೃಷ್ಟಿಯಿಂದ ಈ ದಿಗ್ಭಂಧನ ಕಾರ್ಯ ನಡೆಯುತ್ತದಾದ್ದರಿಂದ ನಮ್ಮ ವಸತಿಯ ವೆಚ್ಚವನ್ನೆಲ್ಲ ಭಾರತ ಸರ್ಕಾರವೇ ಭರಿಸುತ್ತದೆ.

ಆಫ್ರಿಕಾದಿಂದ ಬರುವ ಎಲ್ಲ ಪ್ರಯಾಣಿಕರೂ “ಹಳದಿ ಜ್ವರ ನಿರೋಧಕ ಚುಚ್ಚುಮದ್ದು” ಕಡ್ಡಾಯವಾಗಿ ಹಾಕಿಸಿಕೊಂಡು ಬಂದಿರಲೇ ಬೇಕು. ಆ ಬಗ್ಗೆ ವೈದ್ಯರಿಂದ ಸರ್ಟಿಫಿಕೇಟ್ ತಂದಿರಬೇಕು. ಸಾಮಾನ್ಯವಾಗಿ ಭಾರತದಿಂದ ಹೋಗುವವರು, ಹೊರಡುವ ಮೊದಲೇ ಇಲ್ಲಿ ಚುಚ್ಚುಮದ್ದು ಹಾಕಿಸಿಕೊಂಡು ಹೋಗುತ್ತಾರೆ. ತುರ್ತಾಗಿ ನೈರೋಬಿಗೆ ಬರುವಂತೆ ನನಗೆ ಆಹ್ವಾನ ಬಂದಾಗ ನನ್ನ ಪತ್ನಿ ಈ ನಿಯಮದ ಬಗೆಗೆ ನನಗೆ ನೆನಪು ಮಾಡಿದ್ದಳು. ನಾನು ಹೊರಡುವ ತರಾತುರಿಯಲ್ಲಿ ಚುಚ್ಚುಮದ್ದು ಹಾಕಿಸಿಕೊಳ್ಳಲೆಂದು ನಗರಪಾಲಿಕೆಯ ಕ್ಲಿನಿಕ್ಕಿಗೆ ಹೋದಾಗ ಚುಚ್ಚುಮದ್ದು ಖಾಲಿಯಾಗಿತ್ತು. “ಹಣ ಕೊಟ್ಟರೆ ಏರ್ ಪೋರ್ಟ್ ನಲ್ಲೇ ಸರ್ಟಿಫಿಕೇಟ್ ಸಿಗುತ್ತದೆ” ಎಂದು ಕೆಲವರು ಹೇಳಿದ್ದರಿಂದ ನಾನು ಕೊಂಚ ಉದಾಸೀನ ಮಾಡಿದ್ದೆ.

ಜತೆಗೆ ನನಗೆ ಕುತೂಹಲವಿತ್ತು. ಹಿಂದೆ ಅನೇಕರು ನನ್ನಂತೆಯೇ “ಹಳದಿ ಜ್ವರ ನಿರೋಧಕ ಚುಚ್ಚುಮದ್ದು” ಹಾಕಿಸಿಕೊಳ್ಳದೆ ತುಂಬ ಧೈರ್ಯದಿಂದ ಆಫ್ರಿಕಾಕ್ಕೆ ಹೋಗಿ ಮರಳಿ ಬರುವಾಗ ನನ್ನಂತೆಯೇ ಸಿಕ್ಕಿ ಹಾಕಿಕೊಂಡವರಿದ್ದರು. ಹೆಸರಾಂತ ಪತ್ರಕರ್ತ ಖುಷವಂತ್ ಸಿಂಗ್ ಕೂಡಾ ಈ “ಕ್ವಾರಂಟೈನ್” ಸೇರಿ, ಹೇಗೆ ವಾರಗಟ್ಟಲೆ ಐಷಾರಾಮಾಗಿ ಕಾಸು ಖರ್ಚಿಲ್ಲದೆ ಕತೆ ಕಾದಂಬರಿ ಓದುತ್ತ, ಸ್ಕಾಚ್ ಹೀರುತ್ತ ಕಾಲ ಕಳೆದೆನೆಂದು ಬರೆದುಕೊಂಡಿದ್ದರು. ಅವರಿವರು ಹಾಗಿರಲಿ, ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ (ಹಿಂದೆ ಒಸ್ಮಾನಿಯಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ) ಆಲಿಯಾವರ್ ಜಂಗ್ ಅವರನ್ನೇ “ಕ್ವಾರಂಟೈನ್”ಗೆ ಹಾಕಿದ್ದರೆಂದ ಮೇಲೆ ನಾನೂ ಯಾಕೆ ಒಂದು ಕೈ ನೋಡಬಾರದು?

ಕುಲುಕಾಡುತ್ತ ನಮ್ಮ “ಚಲಿಸುವ ಸೊಳ್ಳೆ ಪರದೆ” ಅದೆಷ್ಟೋ ಕಾಲ ಅಲ್ಲೇ ಎಲ್ಲೋ ಸಾಂತಾಕ್ರೂಸ್ ವಿಮಾನ ನಿಲ್ದಾಣದ ಕಚೇರಿಗಳ ನಡುವಣ ಕಚೇರಿಗಳ ನಡುವಣ ಸಂದುಗೊಂದುಗಳ ಗಲ್ಲಿಗಳಲ್ಲಿ ಸುತ್ತುತ್ತಿದ್ದಂತಿತ್ತು. ಎಲ್ಲೋ ಗಕ್ಕೆಂದು ನಿಂತಿತು. ಚಾಲಕನ ಜತೆ ಕೂತಿದ್ದ ಆಸಾಮಿ ಇಳಿದು ಇಬ್ಬರು ಕರಿಯರ ಹೆಸರು ಹಿಡಿದು ಕರೆದ. ಅಳುಬುರುಕ ದಾಂಡಿಗ ಹಾಗೂ ಇನ್ನೊಬ್ಬಾತ ಇಳಿದರು. ಯಾರೊಂದಿಗೋ ಕೊಂಚ ಕಾಲ ಗುಸುಗುಸು ಸಂಭಾಷಣೆ ನಡೆಸಿದರು. ಬಾಗಿಲು ತೆರೆದೇ ಇತ್ತು. ನನಗೋ ಚಿಂತೆ. ಆ ಬಾಗಿಲಲ್ಲಿ ಸೊಳ್ಳೆ ಬಂದರೆ? ನಮ್ಮನ್ನು ಕಚ್ಚಿ ಕೈಗೆ ಸಿಗದಂತೆ ಹಾರಿ ಹೋದರೆ? ಇಡೀ ದೇಶಕ್ಕೆ ಹಳದಿ ಜ್ವರ ಹಬ್ಬಿದರೆ?

ಚಾಲಕ ಅವಸರದಲ್ಲಿ ಬಂದು ಬಾಗಿಲು ಹಾಕಿ ಅಗುಳಿ ಭದ್ರಪಡಿಸಿ. ಗಾಡಿ ಚಾಲೂ ಮಾಡಿದ. ಆ ಇಬ್ಬರು ಏನಾದರೋ? ಅಂತೂ ಇನ್ನುಳಿದ ನಮ್ಮ ಮೂವರನ್ನು ಹೊತ್ತು ಗಾಡಿ ಸಾಗಿತು.

ಜೆಟ್ ಲ್ಯಾಗ್; ಮಬ್ಬು ಕವಿದ ವ್ಯಾನು. ಹಳ್ಳ ತಗ್ಗುಗಳ ರಸ್ತೆ. ಎಷ್ಟು ಹೊತ್ತು ಅಲ್ಲಿ ತೂಕಡಿಸುತ್ತ ಕಳೆದೆವೋ ಗೊತ್ತಾಗಲಿಲ್ಲ. ಗಾಡಿ ನಿಂತು ಬಾಗಿಲು ತೆರೆದು “ಇಳೀರಿ ಕೆಳಗೆ” ಎಂದು ಆಜ್ಞಾಪಿಸಿದಾಗಲೇ ಎಚ್ಚರವಾಯಿತು. ವ್ಯಾನಿನ ಹಿಂಬಾಗಿಲ ಬಳಿಯೇ ಒಂದು ದೊಡ್ಡ ಜಾಲರಿಗಳ ದ್ವಾರ. ಅದನ್ನು ದಾಟಿ ಹತ್ತು ಹೆಜ್ಜೆ ಹೋದ ಮೇಲೆ ಜೋಡಿ ಜಾಲರಿಗಳ ಇನ್ನೊಂದು ದ್ವಾರ, ಅಬ್ಬ! ಸೊಳ್ಳೆ ಒಳಕ್ಕೆ ಬಾರದಂತೆ ಅದೆಂಥ ಭದ್ರ ವ್ಯವಸ್ಥೆ ಎಂದುಕೊಳ್ಳುತ್ತ ಒಳಕ್ಕೆ ಹೋಗುತ್ತಿದ್ದಾಗ ಕಿವಿಗಡಚಿಕ್ಕುವ ಜೆಟ್ ವಿಮಾನದ ಸದ್ದು ನೆತ್ತಿಯನ್ನೇ ಹೊಸೆಯುತ್ತ ಹೋದಂತಾಯಿತು. ಅಂತೂ ನಾವು ಈಗಲೂ ಸಾಂತಾಕ್ರೂಸ್ ನ ಯಾವುದೋ ತುದಿಯಲ್ಲಿದ್ದೇವೆ ಎಂದಾಯಿತು.

ಒಳಗಿನ ಹಜಾರದಲ್ಲಿ ಕಿಟಕಿಗಳೇ ಇಲ್ಲ. ಎತ್ತರದ ಜಾಲಂಧ್ರಕ್ಕೂ ಡಬಲ್ ಜಾಳಿಗೆ. ಮಬ್ಬುಗತ್ತಲು. ವೇಳೆ ನೋಡಲೆಂದು ಮುಂಗೈ ಎತ್ತಿದರೆ, ಓ ಮರೆತೇ ಹೋಗಿತ್ತು. ನನ್ನ ಕೈಗಡಿಯಾರ ಈಗಲೂ ನೈರೋಬಿಯ ವೇಳೆಯನ್ನೇ ತೋರಿಸುತ್ತಿತ್ತು. ೮.೩೦ ಅಂದರೆ ಇಲ್ಲಿ ಅಂದಾಜು ಬೆಳಗ್ಗೆ ಹನ್ನೊಂದೂವರೆ.

“ಕೂತ್ಕೊಳ್ಳಿ ಈಗ ಮೇಟ್ರನ್ ಬರ್ತಾರೆ” ಎಂದು ಹೇಳಿದ ವ್ಯಾನ್ ಚಾಲಕ ಒಳಗೆಲ್ಲೋ ನುಸುಳಿದ. ಮೇಟ್ರನ್ ರೂಮಿನ ಬಾಗಿಲು ತೆರೆದಿರಲಿಲ್ಲ. ಎಲ್ಲಿ ಕೂರುವುದು? ಸುತ್ತೆಲ್ಲ ಕಣ್ಣಾಡಿಸಿದ. ಆ ದೊಡ್ಡ ಹಜಾರದ ಒಂದು ಮೂಲೆಯಲ್ಲಿ ಟಿ.ವಿ.ಯ ಎದುರು ಎರಡು ಮುರುಕು ಕುರ್ಚಿ ಇದ್ದವು. ನಾಲ್ಕು ನೀಗ್ರೋಗಳು ನೆಲಕ್ಕೆ ಒರಗಿ ಹರಟುತ್ತಿದ್ದರು. ಇನ್ನೊಬ್ಬ ನಿದ್ರಿಸುತ್ತಿದ್ದ. ನನ್ನ ಜತೆ ಬಂದಿದ್ದ ಇಂಗ್ಲಿಷ್ ಬಾರದ ಇಬ್ಬರು ನೀಗ್ರೋಗಳು ಅತ್ತ ಚಲಿಸಿದರು. ಹಾಲ್ ನ ಈ ಕಡೆ ಮೂಲೆಯಲ್ಲಿ ಒಂದು ಟೇಬಲ್ ಟೆನಿಸ್. ಅದಕ್ಕೆ ನೆಟ್ ಇರಲಿಲ್ಲ. ನಜ್ಜುಗುಜ್ಜಾಗಿದ್ದ ಬಾಲ್, ಅದರ ಪಕ್ಕದಲ್ಲಿ ಬ್ಯಾಟ್ ಲೆಕ್ಕದ ಒಂದು ಪ್ಲೈವುಡ್ ಪಟ್ಟಿ.

prison sculptureಸೂಟ್ ಕೇಸನ್ನು ಗೋಡೆ ಪಕ್ಕಕ್ಕೆ ತಳ್ಳಿ ಅಲ್ಲೇ ನೆಲಕ್ಕೆ ಕೂರಲು ನೋಡಿದೆ. ನೆಲ ತುಂಬ ಕೊಳೆಯಾಗಿದ್ದರಿಂದ ಕೂತುಕೊಳ್ಳಲು ಮನಸ್ಸು ಬರಲಿಲ್ಲ. ಟಿಟಿ ಟೇಬಲ್ ಮೇಲಿನ ಧೂಳನ್ನು “ಉಫ್” ಎಂದು ಝಾಡಿಸಿ ಅದರ ಮೇಲೇರಿ ಕೂತೆ.

ಆಗ ಅರಿವಿಗೆ ಬಂತು. ಭಾರೀ ಗಾತ್ರದ ಸೊಳ್ಳೆಗಳು! ಆ ಕಡೆ ಈ ಕಡೆ ಕಚ್ಚತೊಡಗಿದ್ದವು. ಎಲಾ! ಇಲ್ಲೇಕೆ ಇಷ್ಟೆಲ್ಲ ಸೊಳ್ಳೆಗಳು? ಸುತ್ತೆಲ್ಲ ಕಣ್ಣಾಡಿಸಿದೆ. ಧೂಳು, ಜೇಡರ ಬಲೆಗಳ ಮಧ್ಯೆ ಒಂದು ಕಡೆಯ ಜಾಲಂಧ್ರದ ಜಾಳಿಗೆ ಹರಿದು ಹೋಗಿತ್ತು. ನರಕ ಸದೃಶ ಶೌಚಾಲಯದಲ್ಲಿ ನೀರು ನಿಂತು ಗವ್ವೆಂದು ಸೊಳ್ಳೆಗಳು ಮಿಸರಿ ನೊಣಗಳ ಹಾಗೆ ಮುತ್ತಿದವು. ಇಲ್ಲಿ ಬಲಿತ ಸೊಳ್ಳೆಗಳು ಸುಲಭವಾಗಿ ಹೊರಕ್ಕೆ ಹೋಗುವ ಹಾಗಿರಲಿಲ್ಲ.

ಇನ್ನು ಆರು ದಿನಗಳ ಕಾಲ ಇಲ್ಲಿ ಕಾಲ ಹಾಕಬೇಕೆ? ಜಂಘಾಬಲ ಉಡುಗಿ ಹೋದಂತಾಯಿತು. ಒಳಗೆಲ್ಲೋ ರೂಮ್ ಗಳಿರಬೇಕು; ಮೇಟ್ರನ್ ಬಂದ ಮೇಲೆ ಕೀಲಿ ಕೈ ಕೊಡುತ್ತಾರೆ ಎಂದುಕೊಂಡು ಪೊರಕೆ ಹುಡುಕಲೆಂದು ಅತ್ತಿತ್ತ ಅಡ್ಡಾಡಿದೆ. ಹಾಲ್ ನ ಒಂದು ತುದಿಯಲ್ಲಿ ತಿರುಗಿ ಚಿಕ್ಕ ರೂಮು ದಾಟಿ ಅಡುಗೆ ಮನೆ ಪ್ರವೇಶಿಸಿದೆ. ವ್ಯಾನಿನ ಚಾಲಕ ಬೀಡಿ ಸೇದುತ್ತ ಇನ್ನೊಬ್ಬನ ಜತೆ ಹರಟುತ್ತ ಕೂತಿದ್ದ.

ಹೊರಗಡೆ ಗಾಡಿಯ ಸದ್ದಾಯಿತು. “ಮೇಟ್ರನ್ ಬಂದರು” ಎಂದು ಗಡಬಡಿಸಿ ಇಬ್ಬರೂ “ಚಲಿಯೆ ಸಾಬ್!” ಎಂದು ನನ್ನನ್ನು ತಳ್ಳಿಕೊಂಡೇ ಹೊರ ನಡೆದರು.

ಬಾಗಿಲ ನಂತರ ಬಾಗಿಲು ಬಾಗಿಲು ತೆರೆದುಕೊಂಡು  ಮೇಟ್ರನ್ ಬಂದಳು. ಸ್ಥೂಲ ಕಾಯದ, ದಟ್ಟ ಕಪ್ಪು ವರ್ಣದ ಆಕೆ ಮೊದಲ ನೋಟಕ್ಕೆ ಆಫ್ರಿಕಾದವಳಂತೆಯೇ ಕಂಡಳು. ಪ್ರಾಯಶಃ ಕೇರಳದವಳಿರಬೇಕು. “ಹೊಸಬರು ಮೂರೇ ಮಂದಿ” ಎಂದು ವ್ಯಾನ್ ಚಾಲಕ ಹೇಳಿದಾಗ “ಒನ್ಲಿ ಥ್ರೀ?” ಎಂದು ಕಣ್ಣರಳಿಸಿ ಸೆರಗಿನಿಂದ ಸೊಳ್ಳೆ ಝಾಡಿಸಿದರು.

ಕೇರಳದವಳೇ, ಸಂಶಯವಿಲ್ಲ. ಹಾಲ್ ನ ಪಕ್ಕದ ರೂಮಿನ ಬೀಗ ತೆಗೆದು ಆಕೆ ಒಳ ಹೊಕ್ಕಾಗ ಸೊಳ್ಳೆಗಳ ದಂಡೂ ಹಿಂಬಾಲಿಸಿತು. ಇಬ್ಬರು ಚೇಲಾಗಳೂ ನಮ್ಮ ಕಾಗದ ಪತ್ರ, ಪಾಸ್ ಪೋರ್ಟ್ ಕಂತೆ ಹಿಡಿದು ಒಳ ಹೊಕ್ಕು ಲೈಟ್ ಫ್ಯಾನ್ ಹಾಕಿ, ಟೇಬಲ್ ಹಿಂದಿನ ಕುರ್ಚಿ ದರಿದರು. ನಾನೂ ಅವರ ಹಿಂದೆ ಹಿಂದೆ ನುಗ್ಗಿದವ, ಅಲ್ಲಿನ ಕಮಟು ವಾಸನೆಗೋ ಶಿಷ್ಟಾಚಾರಕ್ಕೋ ಹೊರಕ್ಕೆ ಬಂದೆ.

ಕೆಲ ನಿಮಿಷಗಳಲ್ಲಿ ನಮ್ಮ ಮೂವರಿಗೂ ಒಳಕ್ಕೆ ಕರೆ ಬಂತು. ಅಲ್ಲಿದ್ದ ದಪ್ಪ ರಿಜಿಸ್ಟರ್ ನಲ್ಲಿ ನಮ್ಮ ನಮ್ಮ ಹೆಸರು, ಊರು, ದೇಶ, ಪಾಸ್ ಪೋರ್ಟ್ ನಂಬರುಗಳೇ ಮುಂತಾದ ಪ್ರವರಗಳನ್ನು ದಾಖಲಿಸಲು ಮೇಟ್ರನ್ ಹೇಳಿದಳು. ನನ್ನ ಸರದಿ ಬಂದಾಗ, ಕುತೂಹಲಕ್ಕೆಂದು ದಾಖಲೆ ಪುಸ್ತಕದ ಹಿಂದಿನ ಪುಟಗಳನ್ನು ತಿರುವಿ ಹಾಕತೊಡಗಿದೆ. “ಹರ್ರಿ ಅಪ್” ಎಂದು ಆಕೆ ಅವಸರಿಸಿದಳು.

ಪ್ರವರ ಬರೆದು ಮುಗಿಸಿ “ಮೇಡಮ್ ಆರೂ ದಿನ ಇರಲೇಬೇಕಾ?” ಎಂದು ಕೇಳಿದೆ. ಆಕೆ ಕೆರಳಿರಬೇಕು. “ನಿಮಗೆ ಗೊತ್ತಿರಬೇಕು, ನೀವು ಜರ್ನಲಿಸ್ಟ್ ತಾನೆ?” ಎಂದು ಗೊಣಗಿದಳು. ಆಮೇಲೆ ರಿಜಿಸ್ಟರ್ ತನ್ನೆಡೆ ಎಳೆದುಕೊಳ್ಳುತ್ತ “ಹೌದು, ಆರೋಗ್ಯವಾಗಿದ್ದರೆ ಆರೇ ದಿನ. ಕೊನೆಯ ಆರನೇ ದಿನ ನಿಮ್ಮ ವೈದ್ಯಕೀಯ ತಪಾಸಣೆ ಆಗುತ್ತದೆ. ಜ್ವರ ಗಿರ ಬಂದಿಲ್ಲವೆಂದಾದರೆ ಹೋಗಬಹುದು. ಹಳದಿ ಜ್ವರ ನಿಮಗೆ ಬಂದರೆ ಅದು ಪೂರ್ತಿ ವಾಸಿಯಾಗುವವರೆಗೂ ಇಲ್ಲೇ ಇರಬೇಕು. ಅದು ಡೇಂಜರಸ್ ರೋಗ. ಯಾರೂ ಹೇಳಿಲ್ಲವಾ ನಿಮಗೆ?” ಎಂದು ಮತ್ತೆ ಕೆಣಕಿದಳು.

ನನಗೆ ನಗು ಬಂತು. ಅದೇ ರಿಜಿಸ್ಟರ್ ನ ಹಿಂದಿನ ಪುಟಗಳಲ್ಲಿ ಡಾಕ್ಟರುಗಳ ಹೆಸರೂ ಇದ್ದವು. ಹಳದಿ ಜ್ವರವನ್ನು ನಾವು ಆಫ್ರಿಕಾದಿಂದ ತಂದಿರದಿದ್ದರೂ, ಈ ಇಲ್ಲಿನ ಈ ಸೊಳ್ಳೆಗಳಿಂದ ಮಲೇರಿಯಾ ರೋಗ ಬರುವ ಸಂಭವವಂತೂ ಇದ್ದೇ ಇತ್ತು.

ಆಕೆ ಕಪಾಟಿನಲ್ಲಿ ನಮ್ಮ ದಾಖಲೆಗಳನ್ನು ಇಡುತ್ತಿರುವಾಗ “ತುಂಬಾ ಸೊಳ್ಳೆ ಇದಾವೆ ಮೇಡಮ್, ಸೊಳ್ಳೆ ಪರದೆ ಇರೋ ಕೊಂಚ ಒಳ್ಳೆ ರೂಮನ್ನೇ ಕೊಡ್ತೀರಾ?” ಕೇಳಿದೆ. ಆಕೆ ಚಕಿತಳಾಗಿರಬೇಕು.

“ರೂಮ್? ವಾಟ್ ರೂಮ್? ನೋ ರೂಮ್” ಎಂದಳು.

ರೂಮ್ ಇಲ್ಲವಾ? ನಾನು ಹೌಹಾರಿದೆ. “ಎಲ್ಲಿ ಮಲಗೋದು ನಾವು?” ಎಂದು ಕೇಳಿದೆ.

ಮೇಟ್ರನ್ ಬುಕ್ ಎತ್ತಿ ಹೊರಟೇ ಬಿಟ್ಟಳು. “ಇದೇನು ಪಂಚತಾರಾ ಹೋಟೆಲ್ ಅಂದುಕೊಂಡ್ರಾ? ಇಷ್ಟು ನಡೆಸೋಕೇ ಸರಕಾರದ ಬಳಿ ಹಣ ಇಲ್ಲ. ಇದು ಫ್ರೀ ಸರ್ವೀಸ್” ಎನ್ನುತ್ತ ಆಕೆ ಹೊರ ಹೊರಡುತ್ತಲೂ ಟೊಯ್ಯೆಂದು ಕಿವಿಯ ಬಳಿ ದೊಡ್ಡ ಸೊಳ್ಳೆಯೊಂದು ಕಚ್ಚುವುದಕ್ಕೂ ಸರಿ ಹೋಯಿತು. ಇದು ಫ್ರೀ ಸರ್ವೀಸ್!

ನಾನು ದಿಗಿಲುಗೊಂಡು, ಸ್ತಂಭೀಭೂತನಾಗಿ ಅಲ್ಲೇ ನಿಂತಾಗ ವ್ಯಾನಿನ ಚಾಲಕ ಮಹಾಶಯ ಮೇಟ್ರನ್ ರೂಮಿನ ಬೀಗ ಹಾಕುತ್ತ ಕಿವಿಯಲ್ಲಿ ಹೇಳಿದ: “ಆ ಅಡುಗೆ ಭಟ್ಟ ಜಾಧವ್ ನಿಗೆ ಹೇಳಿ, ಎಲ್ಲಾ ವ್ಯವಸ್ಥೆ ಮಾಡುತ್ತಾನೆ. ಹೆಚ್ಚಾಗಿ ಇಲ್ಲಿಗೆ ಬರೀ ನೀಗ್ರೋಗಳೇ ಬರ್ತಾರೆ. ಹಾಗಾಗಿ ಎಂಥ ವ್ಯವಸ್ಥೆಯೂ ಸಾಧ್ಯವಾಗುತ್ತಿಲ್ಲ. ನಿಮ್ಮಲ್ಲಿ ಡಾಲರ್ ಇದೆ ತಾನೆ?” ಎನ್ನುತ್ತ ಕಣ್ಣು ಮಿಟುಕಿಸಿ ಹೊರಟು ಹೋದ.

ಅಡುಗೆ ಭಟ್ಟನ ಹೆಸರು ಹೇಳುತ್ತಲೇ ನನಗೆ ಹಸಿವು ಕೆಣಕಿತ್ತು. ಅಡುಗೆ ಮನೆಗೆ ಹೋಗಿ ನೋಡಿದರೆ ಬೆಂಕಿಯ ಹೊಗೆಯ ಬದಲು ಬರೀ ಬೀಡಿ ಹೊಗೆ ತುಂಬಿತ್ತು. ಜಾಧವ ಅದೆಂಥದೋ ಬುಟ್ಟಿ ಖಾಲಿ ಮಾಡುತ್ತಿದ್ದ. “ನಮಗೆ ತಿಂಡಿ, ಕಾಫೀನೂ ಆಗಿಲ್ಲ – ಊಟದ ವ್ಯವಸ್ಥೆ ಏನು?” ಕೇಳಿದೆ.

ಹಿಂದಿ ಮಾತಾಡಬಲ್ಲ ಒಬ್ಬ “ಕೈದಿ” ಬಂದಿದ್ದರಿಂದ ಸಂತಸದಿಂದಲೇ ಆತ ಮಾತಾಡಿಸಿದ. ಊಟ ಬರುತ್ತೆ ಏರ್ ಪೋರ್ಟ್ ನಿಂದ, ಎರಡು ಗಂಟೆ ಕಾಯಬೇಕು ಅಂದ. “ಈ ನೀಗ್ರೋಗಳಿಗೆ ಇಂಗ್ಲಿಷೂ ಗೊತ್ತಾಗಲ್ಲ, ಹಿಂದೀನೂ ಇಲ್ಲ – ನೀವು ಬಂದಿದ್ದು ಒಳ್ಳೇದಾಯ್ತು” ಅಂದ.

“ಯಾರಿಗಪ್ಪಾ ಒಳ್ಳೆಯದಾಗಿದ್ದು? ಇದೇನು ಒಳ್ಳೇ ಜೈಲು ಥರಾ ಇದೆ. ರೂಮು ಇಲ್ಲ, ಮಂಚಾನೂ ಇಲ್ಲ, ನೆಲಕ್ಕೆ ಮಲಗೋಣವೆಂದರೆ ಚಾಪೆನೂ ಇಲ್ಲ, ಇನ್ನು ಈ ಸೊಳ್ಳೆ ಕಾಟ….” ಎಂದೆ. ಜಾಧವ ಮಧ್ಯೆ ಬಾಯಿ ಹಾಕಿದ.

“ನೀವೇನೂ ಚಿಂತೆ ಮಾಡಬೇಡಿ, ಮಲಗೋಕೆ ಈ ಡೈನಿಂಗ್ ಟೇಬಲ್ ನೀವೇ ಬುಕ್ ಮಾಡಿಕೊಳ್ಳಿ. ಐದು ಡಾಲರ್ ಕೊಡಿ, ಸೊಳ್ಳೆ ಮುಲಾಮು ತಂದುಕೊಡ್ತೀನಿ. ಸಿಗರೇಟು ಬೇಕಾದ್ರೂ ತರ್ತೀನಿ. ಆ ನೀಗ್ರೋಗಳ ಸಂಗ ಮಾತ್ರ ಮಾಡಬೇಡಿ. ಅವರು ಮದ್ದು ಹಾಕಿಕೊಂಡು ಸಿಗರೇಟು ಸೇದ್ತಾರೆ. ಹಾಡ್ತಾರೆ, ಕುಣೀತಾರೆ, ರಾತ್ರಿ ಎಲ್ಲ ಗದ್ದಲ ಮಾಡ್ತಾರೆ. ಭಾರೀ ದುಶ್ಚಟಗಳ ಜನ. ಗಂಡಸರನ್ನು ರೇಪ್ ಮಾಡ್ತಾರೆ. ನೀವು ಬಚಾವಾಗಿರಿ. ಅದೇನೋ ಯೇಟ್ಸ್ ರೋಗ ಬೇರೆ ಬರ್ತದಂತಲ್ಲ, ಕೊಳಕು ಜನ…”

ಆತ ಹೇಳುತ್ತ ಹೋದ ಹಾಗೆ ನಾನು ಬೆವರುತ್ತ ಹೋದೆ. ಹಾಲ್ ನಲ್ಲಿದ್ದ ಐದಾರು ಮಂದಿಯಲ್ಲಿ ಇಬ್ಬರು ಜ್ವರ ಹಿಡಿದವರಂತೆ ಮುಲುಗುತ್ತ ನೆಲ ಹಿಡಿದಿದ್ದರು. ಇನ್ನೊಬ್ಬ ಸಿಳ್ಳೆ ಹಾಕುತ್ತ, ಕಾಲಿಲ್ಲದ ಕುರ್ಚಿಯನ್ನು ಕಾಲಲ್ಲಿ ಪಲ್ಟಿ ಹೊಡೆಸುತ್ತ ಅದೇನೋ ಆಟದಲ್ಲಿ ಮಗ್ನವಾಗಿದ್ದ. ಹೊಸಬರು ಇಬ್ಬರು ಸೂಟ್ ಕೇಸ್ ಬಿಚ್ಚಿ ತಡಕಾಡುತ್ತಿದ್ದರು. ಇವರೊಂದಿಗೆ ಆರು ದಿನ ಕಳೆಯಬೇಕೇ?

ಊಟ ಬಂದಾಗ ಹಸಿದ ತೋಳಗಳಂತೆ ಡೈನಿಂಗ್ ಟೇಬಲ್ ಬಳಿ ನಾವೆಲ್ಲ ಧಾವಿಸಿದೆವು. ಜಾಧವ ಒಂದೊಂದೇ ಪೊಟ್ಟಣ ಬಿಚ್ಚುತ್ತ ಹೋದ ಹಾಗೆ ನನಗೆ ವಾಕರಿಕೆ ಬರುವಂತಾಗಿತ್ತು. ಅವೆಲ್ಲವೂ ವಿಮಾನ ಯಾತ್ರಿಗಳು ತಿಂದು ಮಿಕ್ಕಿದ್ದ ತಿಂಡಿಗಳಾಗಿದ್ದವು. ಬಿಚ್ಚದೇ ಇದ್ದ ಕೆಲವು ಪೊಟ್ಟಣಗಳನ್ನು ಎಳೆದೆಳೆದು ಹಿರಿಯ ಅನುಭವಿ ಕರಿಯರು ಬಾಚಿಕೊಂಡರು.

“ದಿನಾ ಇದೇನಾ ಊಟ?” ಕೇಳಿದೆ ಜಾಧವನಿಗೆ.

“ಏನ್ಮಾಡೋದು, ಸರಕಾರ ರೇಶನ್ ಕೊಡ್ತಾ ಇಲ್ಲ. ಆದರೆ ಈ ಊಟ ಯಾವುದಕ್ಕೂ ಕಮ್ಮಿ ಇಲ್ಲ. ಬಿರಿಯಾನಿ, ಎಗ್ ಕರಿ, ಸ್ಯಾಂಡ್ ವಿಚ್, ಕಟ್ಲೆಟ್, ಒಂದೊಂದ್ ದಿನ ಚಿಕನ್ ಫ್ರೈ, ಸ್ವೀಟ್ಸ್ ಎಲ್ಲ ಇರುತ್ತೆ!” ಅಂದ.

ಯಾರ್‍ಯಾರ ಎಂಜಲೊ ಏನೊ?”

ಬಂದು ಮೂರು ಗಂಟೆ ಆಗಿರಲಿಲ್ಲ. ನಾನು ಚಡಪಡಿಸತೊಡಗಿದ್ದೆ. ಆದರೆ ಎಲ್ಲೂ ಓಡುವ ಹಾಗಿಲ್ಲ. ಏನೂ ಮಾಡುವ ಹಾಗಿಲ್ಲ. ಟಿವಿ ಕೆಟ್ಟಿತ್ತು. “ಗ್ರಂಥಾಲಯ” ಹೆಸರಿನ ಮುರುಕು ಕಪಾಟಿನಲ್ಲಿ ಪುಟಗಳು ಕಿತ್ತು ಹೋದ ಆರೆಂಟು ಹಳೇ ಪುಸ್ತಕಗಳು ಇದ್ದವು. ಫೋನ್ ಮಾಡಿ ಯಾರನ್ನಾದರೂ ಸಹಾಯಕ್ಕೆ ಕರೆಯೋಣವೆಂದರೆ ಫೋನ್ ಸೌಕರ್ಯವೂ ಇರಲಿಲ್ಲ. ಒಂದು ದಿನ ಕಳೆಯುವುದೂ ಅಲ್ಲಿ ಸಾಧ್ಯವಿರಲಿಲ್ಲ.

ಜಾಧವನನ್ನೇ ಕೇಳಿದೆ, ಬಚಾವಾಗುವ ಮಾರ್ಗ ಏನಾದರೂ ಇದೆಯಾ ಎಂದು. ಆತನಿಗೆ ನಮ್ಮಂಥ ಚಿನ್ನದ ಮೊಟ್ಟೆ ಇಡುವ ಕೋಳಿಗಳನ್ನು ಕಳೆದುಕೊಳ್ಳುವುದು ಇಷ್ಟವಿರಲಿಲ್ಲ. ಆದರೂ ತುಂಬಾ ಗಣ್ಯ ವ್ಯಕ್ತಿಗಳ ಕ್ವಾರಂಟೈನ್ ಗೆ ಬೇರೊಂದು ಉತ್ತಮ ಸ್ಥಳ ಇರುವುದಾಗಿಯೂ ಅಲ್ಲಿಗೆ ಹೋಗಲು ಭಾರೀ ವಶೀಲಿ ಬೇಕೆಂದೂ, ದಿನಕ್ಕೆ ಸಾವಿರಾರು ರೂಪಾಯಿ ವೆಚ್ಚ ಬರುತ್ತದೆಂದೂ ಹೇಳಿದ. ಸಂಜೆ ಮೇಟ್ರನ್ ಬಂದಾಗ ಕೇಳಿ ನೋಡಿ ಅಂದ. ಎರಡು ಡಾಲರ್ ಕೊಟ್ಟರೆ (೫೦ ರೂಪಾಯಿ) ಕೊಟ್ಟರೆ ಒಂದು ಅಂತರ್ದೇಶಿ ತರಿಸಿ ಕೊಡುವುದಾಗಿ ಹೇಳಿದ.

ಮೇಟ್ರನ್ ಸಂಜೆ ಬರುವುದನ್ನೇ ಕಾಯುತ್ತ ಶತಪಥ ಹಾಕಿದೆ. ಎರಡು ಇನ್ ಲ್ಯಾಂಡ್ ಲೆಟರ್ ತರಿಸಿ ಮುಂಬೈನಲ್ಲಿರುವ ಮಿತ್ರರಿಗೆ ಆರ್ತನಾದ ಬರೆದೆ. ಇದು ತಂತಿ ಸಂದೇಶವೆಂದೇ ತಿಳಿದು ನೆರವಿಗೆ ಧಾವಿಸಲು ಕೋರಿದೆ. ಉಪವಾಸ ಮುಷ್ಕರದ ಬೆದರಿಕೆ ಒಡ್ಡಲು ಯೋಚಿಸಿದೆ.

prison2ಮೇಟ್ರನ್ ಬಂದಾಗ ಕೂಗಾಡುವ ಚೈತನ್ಯವೂ ಉಳಿದಿರಲಿಲ್ಲ. ಹಸಿವೆ, ನಿದ್ದೆ, ನೀರಡಿಕೆ, ಸೊಳ್ಳೆ, ಕಾಟ, ಏಕಾಂಗಿತನ, ಹತಾಶೆ, ಸಿಟ್ಟು ಎಲ್ಲ ಒಟ್ಟಾಗಿ ಬಂದರೂ ಅವುಡಗಚ್ಚಿ ನಾಜೂಕಾಗಿ ಅಲ್ಲಿಂದ ಪಾರಾಗುವ ಮಾರ್ಗ ಹುಡುಕಬೇಕಿತ್ತು.

ಕೈ ತೋಳನ್ನೆತ್ತಿ ಸೊಳ್ಳೆ ಕಚ್ಚಿದ ದದ್ದುಗಳನ್ನೆಲ್ಲ ಆಕೆಗೆ ತೋರಿಸಿದೆ. ಬೆಳಗಿನಿಂದ ಈವರೆಗೆ ಕಚ್ಚಿದ ನೂರಾರು ಸೊಳ್ಳೆಗಳಲ್ಲಿ ಕನಿಷ್ಠ ಹತ್ತಿಪ್ಪತ್ತಾದರೂ ಈ ಹರಕು ಮುರುಕು ಜಾಲಂಧ್ರಗಳ ಮೂಲಕ ತಪಿಸಿಕೊಂಡು ಆಚೆ ಹೋಗಿರಬಹುದು ಎಂದೆ.

“ದಿಸ್ ಈಸ್ ಎ ಫಾರ್ಸ್!” ಎಂದೆ.

ಆಕೆ ನಕ್ಕಳು. “ಅದು ನನಗೂ ಗೊತ್ತು, ನಾನೇನು ಮಾಡಬೇಕು?” ಎಂದು ಕೇಳಿದಳು.

“ನಾನೂ ಇಲ್ಲಿಂದ ತಪ್ಪಿಸಿಕೊಂಡು ಹೋಗಬೇಕು ಅದಕ್ಕೆ ನಿಮ್ಮ ಸಹಾಯ ಬೇಕು” ಅಂದೆ.

“ರೂಲ್ಸ್ ಆರ್ ರೂಲ್ಸ್, ನಾನೇನೂ ಮಾಡುವ ಹಾಗಿಲ್ಲ. ನಿಮ್ಮ ಪೇಪರ್ ಎಲ್ಲಿ ನೋಡೋಣ…” ಎನ್ನುತ್ತ ಡ್ರಾದಿಂದ ಕಡತ ತೆಗೆದಳು. ಅದರಲ್ಲಿ ಏನನ್ನೋ ಓದಿ ನೋಡಿ, ಕನ್ನಡಕ ತೆಗೆದು,

“ನಿಮ್ಮ ಬಳಿ ಎಷ್ಟು ಡಾಲರ್ ಇವೆ?” ಎಂದಳು.

“ಎಪ್ಪತ್ತು” ಎಂದೆ. ಕಿಸೆಯಿಂದ ಅಷ್ಟನ್ನೂ ತೆಗೆದು, ಟೇಬಲ್ ಮೇಲಿರಿಸಿದೆ. “ಇಷ್ಟೇನಾ?” ಕೇಳಿದಳು.

ಈಚೆ ಕಿಸೆಯಲ್ಲಿದ್ದ ನೂರು ರೂಪಾಯಿಗಳ ಎರಡು ನೋಟುಗಳನ್ನು ಕೆಲವು ಚಿಲ್ಲರೆಗಳನ್ನು ತೆಗೆದಿರಿಸಿದೆ.

ದೂರದಿಂದಲೇ ಅವನ್ನೆಲ್ಲ ಎಣಿಸಿ ನೋಡಿದ ಆಕೆ, ಕಡತದತ್ತ ಮತ್ತೆ ಇಣುಕಿದಳು.

“ಪಾರಾಗಿ ಹೋಗಲು ಒಂದೇ ಒಂದು ದಾರಿ ಇದೆ” ಎಂದಳು. ನನಗೆ ಅರ್ಧ ಜೀವ ಬಂದಂತಾಯಿತು.

“ನೀವು ಜನವರಿ ೨೩ಕ್ಕೆ ಬಂದಿದ್ದೀರಿ. ಜನವರಿ ೨೯ಕ್ಕೆ ನಿಮ್ಮ ಕ್ವಾರಂಟೈನ್ ಮುಗಿಯಬೇಕು. ಆದರೆ ವಿಮಾನ ನಿಲ್ದಾಣದ ಅಧಿಕಾರಿಗಳು ಈ ಆಜ್ಞಾಪತ್ರದಲ್ಲಿ ಒಂದು ತಪ್ಪು ಮಾಡಿದ್ದಾರೆ: ನಿಮ್ಮ ಕ್ವಾರಂಟೈನ್ ಅವಧಿ “ಜನವರಿ ೨೩ರಿಂದ ಜನವರಿ ೨೩ರವರೆಗೆ” ಎಂದು ಬರೆದಿದ್ದಾರೆ. ಆದ್ದರಿಂದ ಈ ಕಾಗದದ ಪ್ರಕಾರ ನೀವು ಇಂದೇ ಹೊರಡಬಹುದು. ಆದರೆ ಇವಿಷ್ಟು ಹಣವನ್ನು ನೀವು ಇಲ್ಲೇ ಬಿಟ್ಟು ಹೋಗಬೇಕಾಗುತ್ತದೆ” ಎಂದಳು.

ಈ ಜೈಲಿನಿಂದ ಇಂದೇ ಬಿಡುಗಡೆ! ಸಂತಸದ ಜತೆ ಆಶ್ಚರ್ಯವೂ ಆಯಿತು. ಏರ್ ಪೋರ್ಟ್ ಅಧಿಕಾರಿಗಳು ಇಂಥ ಅದ್ಭುತ ತಪ್ಪನ್ನು ಹೇಗೆ ಮಾಡಿರಬಹುದು? ಬೇಕಂತಲೇ ಮಾಡಿದ್ದಾರೆಯೆ? ಮತ್ತಿನ್ನೇನಾದರೂ ವ್ಯೂಹ ಇದೆಯೆ? ನಾನು ಶೀಘ್ರ ಯೋಚನೆ ಮಾಡಬೇಕಾಗಿತ್ತು.

ಮೇಟ್ರನ್ ದನಿ ಗಡಸಾಯಿತು. “ಯಾಕೆ? ಹಣ ಕೊಡಲಿಕ್ಕೆ ಇಷ್ಟವಿಲ್ಲವೆ? ಇಲ್ಲಾಂದ್ರೆ ಬಿಡಿ. ನಾನೂ ರಿಸ್ಕ್ ತಗೋಬೇಕು. ಈ ಆಜ್ಞಾ ಪತ್ರದಲ್ಲಿ ತಪ್ಪಾಗಿದೆ ಎಂದು ನಾನು ಏರ್ ಪೋರ್ಟ್ ಗೆ ವರದಿ ಕಳುಹಿಸುತ್ತೇನೆ. ಅವರು ಸರಿಪಡಿಸುತ್ತಾರೆ. ನೀವು ೨೯ರಂದೇ ಹೊರಡಿ, ಈ ಎಲ್ಲ ಹಣದ ಸಮೇತ” ಎನ್ನುತ್ತ ಎಮ್ಮೆಯಂಥ ಶರೀರವನ್ನು ಬಾಗಿಸಿ ಕಡತವನ್ನು ಡ್ರಾ ಒಳಕ್ಕೆ ಇಟ್ಟಳು.

ನೈರೋಬಿಯ ನ್ಯಾಷನಲ್ ಪಾರ್ಕಿನಲ್ಲಿ ನೋಡಿದ್ದ ಎಮ್ಮೆಗಳ ನೆನಪಾಯಿತು. ಅಲ್ಲಿ ಅವುಗಳ ಕಾಲುಗಳನ್ನು ಕಟ್ಟಿ ಲಾರಿಯ ಮೇಲೆ ಹೇರಿಕೊಂಡು ಹೋಗಿ, ಕ್ರೇನ್ ಮೂಲಕ ಸಿಂಹಗಳ ಬಾಯಿಗೆ ಜೀವಂತ ಬಿಸಾಕುವ ದೃಶ್ಯ ಕಣ್ಣಿಗೆ ಕಟ್ಟಿತು.

“ಓಕೆ, ಹಣ ನೀವೇ ಇಟ್ಟುಕೊಳ್ಳಿ; ನನ್ನನ್ನು ಬಿಡುಗಡೆ ಮಾಡಿ” ಎಂದೆ.

ನಸುನಗುತ್ತ ಆಕೆ ಅಷ್ಟೂ ಡಾಲರ್ ಮತ್ತು ರೂಪಾಯಿಗಳನ್ನೆಲ್ಲ ಡ್ರಾದೊಳಕ್ಕೆ ಎಳೆದುಕೊಂಡಳು.
“ಕೆಲವು ರೂಪಾಯಿಗಳನ್ನಾದರೂ ಕೊಡಿ, ನನ್ನ ಜೇಬು ಖಾಲಿ” ಎಂದೆ.

“ನಿಮಗೆ ಇನ್ನು ಹಣ ಯಾಕೆ ಬೇಕು? ಬೆಂಗಳೂರಿಗೆ ಹೋಗಲು ಟಿಕೆಟ್ ಇದೆ. ನಮ್ಮ ವ್ಯಾನಿನಲ್ಲೇ ನಿಲ್ದಾಣದವರೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ. ಸೈನ್ ಮಾಡಿ ಇಲ್ಲಿ” ಎನ್ನುತ್ತ ರಿಜಿಸ್ಟರನ್ನು ನನ್ನತ್ತ ತಳ್ಳಿದಳು.

‍ಲೇಖಕರು admin

October 31, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಮುದಗಲ್ ವೆಂಕಟೇಶ

    ಹಾಸ್ಯ ರಸಭರಿತ ಲೇಖನ ಻ದ್ಭುತವಾಗಿ ಓದಿಸಿಕೊಂಡು ಹೋಯಿತು. ಕೊನೆಗೂ ನಾಗೇಶ್ ಸರ್ ಆ ಕೂಪದಿಂದ ಹೊರಬಂದಿದ್ದು ಒಂದು ಸಾಧನೆಯೇ ಸೈ,,,,

    ಪ್ರತಿಕ್ರಿಯೆ
  2. Sushma

    Inhuman alva. Lekhana oodhi Namma Manaviyathe yallide Yemba Prashne Kaadu thide

    ಪ್ರತಿಕ್ರಿಯೆ
  3. savitri

    ನಾಗೇಶ್ ಹೆಗ್ಗಡೆ ಸರ್ ಆ ದಿನದ ತಮ್ಮ ಅನುಭವವನ್ನು ಹಾಸ್ಯಲೇಪಿತವಾಗಿಯೇ ಹಂಚಿಕೊಂಡಿದ್ದರೂ, ನಮ್ಮ ಸರಕಾರಿ ವ್ಯವಸ್ಥೆಯ ಅಡ್ನಾಡಿತನವು ಪ್ರಜೆಗಳನ್ನು ಕೊಲ್ಲದೇ ಕೊಲ್ಲುವ ಪರಿಯನ್ನು ಚೆನ್ನಾಗಿ ವಿವರಿಸಿದ್ದಾರೆ…

    ಪ್ರತಿಕ್ರಿಯೆ
  4. mahaveer hanchinal

    ಸರ್ ತಾವು ಬರೆದ ಹಾಸ್ಯ ಲೇಪಿತ ಗಂಭೀರ ವಿಚಾರ ನಮ್ಮ ನೌಕರಶಾಹಿಯ ಆಸೆಬುರುಕುತನದಿಂದ ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ ಎಂಬುದನ್ನು ಸೂಕ್ಷ್ಮವಾಗಿ ಅರುಹಿದ್ದೀರಿ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: