ಜೀವಪ್ರಜ್ಞೆಯ ನಿವೇದನೆ…

ನಾಗೇಶ ಹೆಗಡೆ

ಆಚಿನ ಲೋಕದೊಂದಿಗೆ ನಿರಂತರ ಸಂಭಾಷಿಸಲೆಂದು ಭೂಮಿ ರೂಪಿಸಿಕೊಂಡ ಸಾಧನವೇ ವೃಕ್ಷ ಎಂಬರ್ಥದಲ್ಲಿ ಗುರುದೇವ ರವೀಂದ್ರನಾಥ್ ಟಾಗೋರ್ ಹೇಳಿದ್ದರು. ಅದು ತತ್ವಜಿಜ್ಞಾಸೆಯ, ಕವಿಸಮಯದ ಮಾತಷ್ಟೇ ಅಲ್ಲ; ಅದರ ಹಿಂದೆ ವೈಜ್ಞಾನಿಕ ಸತ್ಯವೂ ಇದೆ. ಸೌರಮಂಡಲದ ಏಕೈಕ ಜೀವಂತ ಗ್ರಹವೆನಿಸಿದ ಭೂಮಿ ತನ್ನೊಳಗಿನ ಖನಿಜ, ನೀರು, ಗಾಳಿ, ಇಂಗಾಲ ಚಕ್ರ, ಸಾರಜನಕ ಚಕ್ರಗಳ ಮೂಲಕ ತನ್ನಷ್ಟಕ್ಕೆ ಅದೆಷ್ಟೇ ಸರ್ವತಂತ್ರ ಸ್ವತಂತ್ರ ಅಂತ ಅನ್ನಿಸಿದರೂ, ಬಾಹ್ಯಲೋಕದಿಂದ ಚೈತನ್ಯ ಸತತವಾಗಿ ಹರಿದುಬರುತ್ತಿದ್ದರೇನೇ ಅದು ಜೀವಂತ ಇರುತ್ತದೆ.

ಆ ಚೈತನ್ಯವನ್ನು ಹೀರಿಕೊಳ್ಳಬಲ್ಲ ಪತ್ರಹರಿತ್ತನ್ನು ಆಧರಿಸಿಯೇ ಸಕಲ ಜೀವಿಗಳೂ ಜೀವಿಗಳೆನಿಸುತ್ತವೆ. ಗಿಡಮರಗಳ ಹಸಿರೆಲೆಗಳು ಬಾಹ್ಯಚೈತನ್ಯದೊಂದಿಗೆ ಸಂಪರ್ಕದಲ್ಲಿರುವುದರಿಂದಲೇ ನಾವು ಅಸ್ತಿತ್ವದಲ್ಲಿದ್ದೇವೆ.

ವೃಕ್ಷಗಳ ಮೂಲಕ ಬಾಹ್ಯವಿಶ್ವದೊಂದಿಗೆ ತಾನು ನಡೆಸುತ್ತಿರುವ ಆ ಸಂವಾದದ ನಡುವಣ ಬಿಡುವಿನಲ್ಲಿ ಭೂಮಿ ತನ್ನ ಮಕ್ಕಳೊಂದಿಗೂ ಮಾತಾಡುವುದಾದರೆ ಅದು ಹೇಗಿದ್ದೀತು? ಅದರ ವಿಶಿಷ್ಟ ಮಾದರಿಯೊಂದು ಇದೀಗ ನಿಮ್ಮ ಕೈಯಲ್ಲಿದೆ. ‘ಮಹಾವೃಕ್ಷ’ ಒಂದು ಅಶ್ವತ್ಥ ಮರದ ಆತ್ಮಕಥೆಯೂ ಹೌದು, ಇಡೀ ಭೂಮಿಯ ಜೀವಜಾಲವನ್ನು ಪೊರೆಯುವ ಪಂಚಭೂತಗಳ ಕಥನವೂ ಹೌದು.

ನಮ್ಮ ಸಂಸ್ಕೃತಿಯಲ್ಲಿ ಅಶ್ವತ್ಥ (ಅರಳಿ) ಮರಕ್ಕಿರುವಷ್ಟು ಪ್ರಾಧಾನ್ಯ ಬೇರೆ ಯಾವ ಮರಕ್ಕೂ ಇಲ್ಲ. ಅತಿ ದೀರ್ಘಕಾಲ, ಅಂದರೆ ಮೂರು ಸಾವಿರ ವರ್ಷಗಳವರೆಗೂ ಬದುಕಿರಬಲ್ಲ ವೃಕ್ಷ ಎಂಬ ಪ್ರತೀತಿ ಇದಕ್ಕಿದೆ ಎಂದಮೇಲೆ ಕೃತಿಕಾರರು ಅರಳಿಮರದ ಮೂಲಕವೇ ಮನುಕುಲದ ಕತೆಯನ್ನು ಹೇಳಲು ಹೊರಟಿದ್ದು ಸಹಜವೇ ಸರಿ.

ಅಶ್ವತ್ಥ ವೃಕ್ಷದ ಕೆಳಗೇ ರಾಜಕುಮಾರ ಸಿದ್ಧಾರ್ಥ ಧ್ಯಾನಕ್ಕೆ ಕೂತು ಜ್ಞಾನೋದಯ ಪಡೆದು ಬುದ್ಧನಾಗಿದ್ದರಿಂದ ಅದಕ್ಕೆ ಬೋಧಿವೃಕ್ಷ ಎಂಬ ಹೆಸರು ಬಂದಿದೆಯಾದರೂ ಬುದ್ಧನಿಗಿಂತ ಮೊದಲೇ ಈ ವೃಕ್ಷದ ಮಹತ್ವವನ್ನು ನಮ್ಮವರು ಅರಿತಿರಬೇಕು. ಏಕೆಂದರೆ, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ತನ್ನನ್ನು ಬಣ್ಣಿಸಿಕೊಳ್ಳುವಾಗ ವೃಕ್ಷಗಳಲ್ಲಿ ತಾನು ಅಶ್ವತ್ಥ ಎಂದು ಹೇಳಿಕೊಂಡಿದ್ದಾನೆ. ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಅದಕ್ಕಿರುವ ಧಾರ್ಮಿಕ ಮಹತ್ವವನ್ನು ಅರಿತೇ ಸಸ್ಯವಿಜ್ಞಾನಿಗಳೂ ಅದಕ್ಕೆ ಫೈಕಸ್ ರಿಲಿಜಿಯೋಸಾ ಅಂದರೆ, ಧಾರ್ಮಿಕ ವೃಕ್ಷ ಎಂತಲೇ ಹೆಸರಿಟ್ಟಿದ್ದಾರೆ.

ಅಶ್ವತ್ಥಮರದ ಕುರಿತು ನಾವು ಗಮನಿಸಬೇಕಾದ ಅಸಾಮಾನ್ಯ ಸಂಗತಿಯೊಂದಿದೆ. ನೆರಳೊಂದನ್ನು ಬಿಟ್ಟರೆ ಮನುಷ್ಯನ ದಿನಬಳಕೆಗೆ ಬೇಕಾಗುವ ಹೂವು, ಹಣ್ಣು, ಎಲೆ, ಸೊಪ್ಪು, ಕಾಂಡ, ದಿಮ್ಮಿ ಹಾಗಿರಲಿ, ಕೊನೆಗೆ ಸೌದೆಯನ್ನೂ ನೀಡದ ವೃಕ್ಷ ಇದು. ಆದರೂ ಸಾವಿರಾರು ವರ್ಷಗಳ ಹಿಂದೆ, ಅಶುದ್ಧ ಗಾಳಿ ಹೇಗಿರುತ್ತದೆ ಎಂಬುದೇ ಗೊತ್ತಿಲ್ಲದ ದಿನಗಳಲ್ಲಿ, ಇದನ್ನೊಂದು ರಕ್ಷಿಸಲೇಬೇಕಾದ ವೃಕ್ಷವೆಂದು ಜನಮಾನಸದಲ್ಲಿ ಬಿಂಬಿಸಿ, ಅದಕ್ಕೊಂದು ಪಾವಿತ್ರ್ಯವನ್ನು ದೈವತ್ವದ ಪ್ರಭಾವಳಿಯನ್ನು ನೀಡಿದ್ದು ಏಕಿರಬಹುದೆಂದು ತರ್ಕಿಸಲು ಹೋದರೆ ಜೀವಲೋಕದ ಕುರಿತ ನಮ್ಮ ಹಿರಿಯರ ಸ್ಪಂದನೆ ಅದೆಷ್ಟು ಸೂಕ್ಷ್ಮ ಮತ್ತು ಗಹನದ್ದಾಗಿತ್ತು ಎಂಬುದನ್ನು ಮನಗಾಣಬಹುದು.

ನಿಸರ್ಗದ ಒಡಲಲ್ಲಿ ವ್ಯಕ್ತವಾಗುವ ಭೂಮಿಗೀತವೇ ಅರಳೀಮರ. ಚಳಿಗಾಲದಲ್ಲಿ ತನ್ನ ಎಲೆಗಳನ್ನೆಲ್ಲ ಉದುರಿಸಿ, ಮತ್ತೆ ಚಂದದ ಕೆಂಬಣ್ಣ ಚಿಗುರುಗಳನ್ನು ಹೊಮ್ಮಿಸಿ, ತಾಮ್ರ ವರ್ಣಕ್ಕೂ ನಂತರ ದಟ್ಟ ಹಸಿರಿಗೂ ತಿರುಗುತ್ತ ಋತು ಬದಲಾವಣೆಯನ್ನು ಅದರಷ್ಟು ಕಾವ್ಯಾತ್ಮಕವಾಗಿ ನಿರೂಪಿಸುವ ವೃಕ್ಷ ಬೇರೊಂದಿಲ್ಲ. ಸುಂದರ ಹೃದಯಾಕಾರದ ಎಲೆಯಂತೂ ಗಾಳಿಯಲ್ಲಿನ ತೇವವನ್ನು ಇಬ್ಬನಿಯಾಗಿ ಬಿಂದುರೂಪದಲ್ಲಿ ತೊಟ್ಟಿಕ್ಕಿಸಲು ಸಹಾಯವಾಗುವಂತೆ ನೀಳ ಉದ್ಧರಣೆಯಂತೆ ರೂಪುಗೊಂಡಿವೆ; ಎಲೆಗಳ ಉದ್ದುದ್ದ ತೊಟ್ಟಿನಿಂದಾಗಿ ಗಾಳಿ ಅದೆಷ್ಟೇ ಮೆಲ್ಲಗೆ ಸೂಸಿದರೂ ಉತ್ಸಾಹದ ಚಿಲುಮೆಯಂತೆ ಎಲೆಗಳು ಒಟ್ಟೊಟ್ಟಾಗಿ ನರ್ತಿಸುತ್ತ ಪ್ರತಿಕ್ಷಣದ ಜೀವಂತಿಕೆಯನ್ನು ಪ್ರದರ್ಶಿಸುತ್ತಿರುತ್ತವೆ.

ಕೊನೆಗೆ ಹಣ್ಣಾಗಿ ಒಣಗಿ ನೆಲಕ್ಕೆ ಸೇರಿದ ನಂತರವೂ ಎಲೆಯ ಅಸ್ಥಿಪಂಜರವೂ ಜಾಳಿಗೆಯ ನೇಯ್ಗೆಯಂತಿರುವುದೂ ನಿಸರ್ಗದ ಕಲಾಕೌಶಲದ ಪ್ರತೀಕವಾಗಿದೆ. ಬೇರೆ ಯಾವ ವೃಕ್ಷಗಳಲ್ಲೂ ಕಾಣದ ಈ ಎಲ್ಲ ವೈಶಿಷ್ಟ್ಯಗಳನ್ನು ತುಂಬ ಹಿಂದೆಯೇ ಗುರುತಿಸಿ, ಅದರ ಎಲೆ, ತೊಗಟೆ, ಕಾಂಡ ಬೇರುಗಳಲ್ಲಿ ಐವತ್ತಕ್ಕೂ ಹೆಚ್ಚು ಬಗೆಯ ಔಷಧೀಯ ಗುಣಗಳಿವೆಯೆಂದು ಶ್ಲಾಘಿಸಿ, ಪರಂಪರಾಗತವಾಗಿ ನಾವು ಕೊಡುತ್ತ ಬಂದ ಗೌರವದ ಪ್ರತೀಕವಾಗಿ ಈಗಲೂ ಅಶ್ವತ್ಥ ಮರ, ಆಲದ ಕಟ್ಟೆಗಳನ್ನು ಊರೂರಲ್ಲೂ ದೇವಸ್ಥಾನಗಳ ಬಳಿ, ಕೂಡುರಸ್ತೆಗಳ ನಡುವೆ, ಹೆದ್ದಾರಿಗಳ ಪಕ್ಕದಲ್ಲಿ ಕಾಣಬಹುದಾಗಿದೆ.

ಅಂಥ ಯಾವುದೇ ಅಶ್ವತ್ಥವೃಕ್ಷದ ವಂಶವೃಕ್ಷವನ್ನು ಕೆದಕುತ್ತ ಇತಿಹಾಸದ ಆಳಕ್ಕಿಳಿಯುತ್ತ ಹೋದರೆ, ಮನುಷ್ಯನಿಗಿಂತ ಮೊದಲೇ ವಿಕಾಸಗೊಂಡ ಅನೇಕ ಜೀವಿಗಳು ಈ ವೃಕ್ಷದ ಮಹತ್ವವನ್ನು ಮನಗಂಡಿದ್ದವು ಎಂಬುದು ನಮಗೆ ಮನದಟ್ಟಾಗುತ್ತದೆ.

ಫೈಕಸ್ ಜಾತಿಗೆ ಸೇರಿದ (ಆಲ, ಅತ್ತಿ, ಗೋಣಿ, ಬಸ್ರಿ, ಅಶ್ವತ್ಥ) ವೃಕ್ಷಗಳನ್ನು ಜೀವಾಸರೆಯ ವೃಕ್ಷಗಳು ಎನ್ನುತ್ತಾರೆ. ಅರಣ್ಯದಲ್ಲಿ ಬೇರೆಲ್ಲೂ ಆಹಾರದ ಉತ್ಪಾದನೆ ಕುಂಠಿತವಾಗಿರುವಾಗ ಇವು ಎಲ್ಲ ಋತುಮಾನಗಳಲ್ಲೂ ಹೂವು ಹಣ್ಣು, ಎಳೆಚಿಗುರುಗಳನ್ನು ಕೊಡುತ್ತವೆ. ಇತರ ಅದೆಷ್ಟೊ ವನ್ಯ ಜೀವಿಗಳು ಸಂಕಷ್ಟದ ದಿನಗಳಲ್ಲಿ ಈ ಮರಗಳನ್ನೇ ನೆಚ್ಚಿಕೊಳ್ಳುತ್ತವೆ. ಅದರಲ್ಲೂ ಅಶ್ವತ್ಥ ವೃಕ್ಷವೆಂದರೆ ಕೆಲವು ಋತುಗಳಲ್ಲಿ ಜೀವಿಗಳ ಕಲರವದ, ಇಂಚರದ ಸಂತೆಯೆಂದೇ ಹೇಳಬೇಕು.

ಅಶ್ವತ್ಥ ಮರದಲ್ಲಿ ಮಾತ್ರ ಬದುಕುವ (ಬೇರೆ ಯಾವ ವೃಕ್ಷದಲ್ಲೂ ಬದುಕಲಾರದ) ಪರಾಗಸ್ಪರ್ಶಿ ದುಂಬಿಗಳನ್ನೂ ವಿಜ್ಞಾನಿಗಳು ಗುರುತಿಸಿದ್ದಾರೆ. ಜೀವರಕ್ಷಕ, ಜೀವಪೋಷಕವಾದ ಇಂಥದ್ದೊಂದು ವೃಕ್ಷಕ್ಕೆ ಊರ ಮಧ್ಯೆ ಪೂಜನೀಯ ಸ್ಥಾನವನ್ನು ಕೊಟ್ಟು ರಕ್ಷಿಸಬೇಕೆಂಬ ಪರಿಕಲ್ಪನೆ ಹಿಂದಿನವರಿಗೆ ಹೇಗೆ ಬಂತೊ?

ಅವರಿಗೆ ಹೋಲಿಸಿದರೆ ಈಗಿನ ಆಧುನಿಕ ತಲೆಮಾರಿನ ಜನರ ಮನಸ್ಥಿತಿ ಅಚ್ಚರಿಯೆಂಬಂತಿದೆ. ಇವರಿಗೆ ಆಮ್ಲಜನಕದ ಮಹತ್ವ ಗೊತ್ತಿಲ್ಲವೆ? ಗೊತ್ತಿದೆ; ಪ್ರಕೃತಿಯಲ್ಲಿ ದುಂಬಿ, ಜೇನ್ನೊಣ, ಚಿಟ್ಟೆ ಪತಂಗಗಳ ಮಹತ್ವ ಏನೆಂಬುದು ಗೊತ್ತಿಲ್ಲವೆ? ಗೊತ್ತಿದೆ; ಮಳೆನೀರನ್ನು ನೆಲದೊಳಕ್ಕೆ ಇಂಗಿಸುವಲ್ಲಿ, ವಾತಾವರಣದ ತೇವಾಂಶವನ್ನು ಕಾಪಾಡುವಲ್ಲಿ ಮರಗಳ ಪಾತ್ರ ಅದೆಷ್ಟೆಂದು ಗೊತ್ತಿದೆ. ಆದರೂ ಮನೆಯೆದುರಿನ ವೃಕ್ಷವೆಂದರೆ ಅದೇಕೆ ಅಷ್ಟು ದ್ವೇಷವೊ? ತರಗೆಲೆ ಉದುರುತ್ತದೆ ಎಂದೋ, ಪಕ್ಷಿಗಳು ಪಿಚಿಕ್ ಮಾಡುತ್ತವೆಂದೋ, ಹಾವು ಹಲ್ಲಿಗಳ ಕಿರಿಕಿರಿ ಹೆಚ್ಚುತ್ತದೆಂದೋ, ಬೇರುಗಳು ಮನೆಯೊಳಕ್ಕೆ ಬಂದಾವೆಂದೋ, ಮನೆಯ ಶೋಭೆಗೆ ಅಡ್ಡಿಬರುತ್ತದೆಂದೋ ಅಥವಾ ವಾಸ್ತು ದೋಷವೆಂದೋ ಕ್ಯಾತೆ ತೆಗೆದು ಮನೆಯ ಬಳಿ ಇದ್ದ ಮರವನ್ನು ಕಡಿಸಿ ಹಾಕುವವರ ಸಂಖ್ಯೆ ನಗರಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಹಾಗೆ ಕಡಿಸಲು ಹೋದರೆ ಅದಕ್ಕೆ ಅನುಮತಿ ಪಡೆಯುವುದು ಕಷ್ಟವೆಂದು, ಮರದ ಬೊಡ್ಡೆಗೇ ಆಸಿಡ್ ಸುರಿದು -ಅದು ತಂತಾನೆ ಒಣಗಿ ಹೋಗುವಂತೆ ಮಾಡುವವರೂ ನಮ್ಮಲ್ಲಿದ್ದಾರೆ.

ಇನ್ನು ಅಶ್ವತ್ಥವನ್ನು ನೆಟ್ಟು ಬೆಳೆಸುವ ಪ್ರಸ್ತಾವನೆಗಂತೂ ಸಮುದಾಯ ಮಟ್ಟದಲ್ಲೂ ವಿರೋಧ ವ್ಯಕ್ತವಾಗುತ್ತಿರುತ್ತದೆ; ಏಕೆಂದರೆ ಅದು ನಾಳೆ ಬೆಳೆಯುತ್ತ ಹೋಗಿ ಎಕರೆಗಳಷ್ಟು ವಿಸ್ತೀರ್ಣದ ರಿಯಲ್ ಎಸ್ಟೇಟನ್ನು ಆಕ್ರಮಿಸಿಕೊಳ್ಳುತ್ತಿರುವಾಗ ಕಡಿದುರುಳಿಸುವಂತೆಯೂ ಇಲ್ಲ, ಬೆಳೆಯಲು ಬಿಡುವಂತೆಯೂ ಇಲ್ಲವೆಂಬ ಆತಂಕ ಯೋಜನಾತಜ್ಞರನ್ನು ಬಾಧಿಸುತ್ತಿರುತ್ತದೆ. ನೀರು, ಗೊಬ್ಬರ, ರಕ್ಷಣೆಯಂಥ ಯಾವುದೇ ತೆರನಾದ ನೆರವನ್ನೂ ಆರೈಕೆಯನ್ನೂ ಬೇಡದೆ, ತಾನಾಗಿ ಬೆಳೆದು ಜೀವಲೋಕಕ್ಕೆ ಆಸರೆಯಾಗಿ ನಿಲ್ಲಬಲ್ಲ ವೃಕ್ಷಕ್ಕೆ ನಗರವಾಸಿ ಮನುಷ್ಯನಿಂದಾಗಿ ನೂರೊಂದು ಕಂಟಕಗಳು ಎದುರಾಗುತ್ತವೆ.

ಅದಕ್ಕೆಂದೇ ಕತೆಗಾರ ಕಂನಾಡಿಗಾ ಅವರು ಅಶ್ವತ್ಥವನ್ನೇ ಪೃಥ್ವಿಯ ಜೀವಪ್ರಜ್ಞೆಯನ್ನು ಪ್ರತಿನಿಧಿಸುವ ಕತೆಗಾರನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮಣ್ಣು, ನೀರು, ಗಾಳಿಯನ್ನೂ ಬೆಂಕಿಯನ್ನೂ ಆಕಾಶವನ್ನೂ ತನ್ನೊಳಗೆ ಆವಾಹಿಸಿಕೊಂಡು ಅನಾದಿ ಕಾಲದಿಂದ ಲೋಕವನ್ನು ನೋಡುತ್ತ ಬಂದ ನನಗೋ ಮೈತುಂಬ ಭಾವಕೋಶಗಳೇ ತುಂಬಿದ್ದರಿಂದ.. ನೆನಪುಗಳು ಇಡಿಕಿರಿದು ತುಂಬಿವೆ… ಎಂಬ ನಿವೇದನೆಯಿಂದ ಕಥನ ಆರಂಭವಾಗುತ್ತದೆ. ನಿವೇದನೆ ಕ್ರಮೇಣ ವೇದನೆಯಾಗಿ, ಮನುಷ್ಯನ ನೂರೊಂದು ವಿಕಾರಗಳ ಅಕ್ಷರಗನ್ನಡಿಗಳಾಗುತ್ತ ಕಥನ ಸಾಗುತ್ತದೆ.

ಕಾಲೋ ನ ಯಾತೋ ವಯಮೇವ ಯಾತಃ (ಕಾಲವೇನೂ ಚಲಿಸುವುದಿಲ್ಲ, ನಾವೇ ಚಲಿಸುತ್ತೇವೆ) ಎಂಬ ಭರ್ತೃಹರಿಯ ಮಾತು ಮತ್ತೆ ಮತ್ತೆ ನೆನಪಾಗುವಂತೆ ಇಲ್ಲಿ ಕಾಲಾತೀತವಾದ ನಿಶ್ಚಲ ವೃಕ್ಷವೊಂದು ತನ್ನ ಸುತ್ತಲಿನ ಜೀವಕೋಟಿಯ ಚಲನೆಗಳನ್ನು ದಾಖಲಿಸುತ್ತ ಹೋಗುವ ಪರಿ ಕನ್ನಡ ಸಾಹಿತ್ಯಕ್ಕೆ ಹೊಸದು. ಅದರಲ್ಲೂ ನಿಂತಲ್ಲೇ ನಿಂತ ಮರವೊಂದರ ಬಗ್ಗೆ (ಸುಧಾ ವಾರಪತ್ರಿಕೆಯ ಮೂಲಕ ಪ್ರತಿ ವಾರವೂ) ಸಾಮಾನ್ಯ ಓದುಗನ ಆಸಕ್ತಿ ಎಲ್ಲೂ ಕುಂದದಂತೆ ಕತೆಯನ್ನು ಹೆಣೆಯುತ್ತ ಹೋಗಬೇಕೆಂದರೆ ಅದಕ್ಕೆ ವಿಶೇಷ ಕೌಶಲ ಬೇಕಾಗುತ್ತದೆ.

ಈಗಾಗಲೇ ನಾಲ್ಕು ಕಾದಂಬರಿಗಳು, ಏಳಕ್ಕೂ ಹೆಚ್ಚು ಕಥಾಸಂಕಲನಗಳು, ನಾಲ್ಕಾರು ಮಕ್ಕಳ ಕತೆಪುಸ್ತಕಗಳು ಮತ್ತು ಆರೆಂಟು ಸಂಪಾದಿತ ಕೃತಿಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿರುವ ಕಂನಾ ಅವರಿಗೆ ಕಥನ ಕಲೆ ಎಂದೋ ಸಿದ್ಧಿಸಿದೆ. ಆದ್ದರಿಂದಲೇ ತೀರ ಸಹಜವಾಗಿ ಈ ಕಾದಂಬರಿಯ ವಿಶಿಷ್ಟ ವಸ್ತುವಿಷಯಕ್ಕೆ ಆರಂಭದಲ್ಲೇ ಸೂಕ್ತ ಭೂಮಿಕೆಯನ್ನು ಒದಗಿಸಿದ್ದಾರೆ. ತನ್ನ ಸುದೀರ್ಘ ಬದುಕಿನಲ್ಲಿ ಶೇಖರಿಸಿಕೊಂಡ ಅರಿವಿನ ಅನೇಕ ಪದರಗಳ ಮೂಲಕ ಹಿಂದಿನ ಹಾಗೂ ದೂರದ ಆಗುಹೋಗುಗಳನ್ನೆಲ್ಲ ತಾನು (ಈ ಜೀವಂತ ವೃಕ್ಷ) ನಿಂತಲ್ಲೇ ಗ್ರಹಿಸುತ್ತೇನೆಂದು ಹೇಳಿ, ಕೃತಿಕಾರರು ಕಥನ ನಿರೂಪಣೆಗೆ ಬೇಕಿದ್ದ ಲೈಸನ್ಸನ್ನು ಸಲೀಸಾಗಿ ಗಿಟ್ಟಿಸಿಕೊಂಡಿದ್ದಾರೆ.

ಹಾಗಾಗಿಯೇ ಈ ಮರಕ್ಕೆ ದಿವ್ಯದೃಷ್ಟಿ ಪ್ರಾಪ್ತವಾಗಿದೆ. ಕಾಲಗರ್ಭದಲ್ಲಿ ಸೇರಿಹೋದ ಮಲೆಯಾಳಿ ಮೂಲಕ್ಕರದ ಬಗ್ಗೆ, ಗುಜರಾತಿನ ಸಿಂಹಿಣಿಯರ ಬೇಟೆಸಾಹಸಗಳ ಬಗ್ಗೆ, ಶಿವಪ್ಪ ನಾಯಕನನ್ನು ಕೊಲ್ಲಲು ಬಹಮನಿ ಸುಲ್ತಾನರು ಹೂಡಿದ ಪಿತೂರಿಯ ಬಗ್ಗೆ, ಸಿನೆಮಾ ನಟರ ಕಾಲ್ಶೀಟ್ ಬಗ್ಗೆ, ಸರಕಾರಿ ಇಲಾಖೆಗಳ ಗೋಲ್ಮಾಲ್ ಬಗ್ಗೆ ಅಷ್ಟೇಕೆ, ಕೋವಿಡ್-೧೯ರ ಅವಾಂತರಗಳ ಮಧ್ಯೆ ಚಿಗುರಿಕೊಂಡ ಹೈಟೆಕ್ ಆಸ್ಪತ್ರೆಗಳ ಮೆಡಿಕಲ್ ಮಾಫಿಯಾಗಳ ಬಗ್ಗೆ ಕೂಡ ಈ ಮರ ತನ್ನ ವ್ಯಾಖ್ಯಾನವನ್ನು ನೀಡುತ್ತದೆ.

ಮರವೊಂದು ಈ ಬಗೆಯ ಸ್ವಾತಂತ್ರ್ಯವನ್ನು ದಕ್ಕಿಸಿಕೊಂಡಿದ್ದರಿಂದಲೇ ನಮಗೆ ಗೊತ್ತಿರುವ ಕತೆಗಳನ್ನು ಭಿನ್ನ ದೃಷ್ಟಿಯಿಂದ ಓದುಗರೆದುರು ನಿರೂಪಿಸಲು ಕೃತಿಕಾರರಿಗೆ ಸಾಧ್ಯವಾಗಿದೆ. ಕನ್ನಡದ ಮಕ್ಕಳ ಹೃದಯವನ್ನು ನೇರವಾಗಿ ತಟ್ಟುವ ಗೋವಿನ ಹಾಡು ಇಲ್ಲಿ ಬಂದ ಪರಿಯನ್ನೇ ನೋಡಬಹುದು. ಹಾಡಿನ ಮಾಮೂಲು ಕೊನೆಯಲ್ಲಿ ಬರುವ…. ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು ಎಂಬ ಸಾಲುಗಳು ಪ್ರೌಢ ಓದುಗರಿಗೆ ಅಸಹಜವಾಗಿ ಕಾಣುತ್ತದೆ. ಆದರೆ ಈ ಕಾದಂಬರಿಯಲ್ಲಿ ಚಂಡವ್ಯಾಘ್ರನ ಸಾವು ಅರಳೀಮರಕ್ಕೆ ಬೇರೆ ರೀತಿಯಲ್ಲೇ ಕಾಣುತ್ತದೆ. ಕಾಳಿಂಗ ಗೊಲ್ಲನ ಕೊನೆಯ ಮಗನ ಮೂಲಕ ಆ ಹಾಡು ಏಕೆ, ಹೇಗೆ ಹುಟ್ಟಿತು ಎಂಬುದೂ ಇಲ್ಲಿ ರಸಬದ್ಧವಾಗಿ ಬಂದಿದೆ.

ಇದು ಏಕೆ, ಹೇಗೆ ಎಂದು ಓದುಗರು ತಲೆಕೆರೆದುಕೊಳ್ಳುವಂಥ ಅನೇಕ ಪ್ರಸಂಗಗಳು ಈ ಕಥನದ ಉದ್ದಕ್ಕೂ ಅಲ್ಲಲ್ಲಿ ಬಂದಿವೆ. ಅದು ಗಾಂಧೀ ವೇಷಧಾರಿ ಮುದ್ದುಮಾರಪ್ಪನನ್ನು ನೋಡಲು ಗಾಂಧೀಜಿಯೇ ಸ್ವತಃ ಬಂದಿದ್ದು ಇರಬಹುದು ಅಥವಾ ಗುರುಪಾದಪ್ಪ ಎಂಬ ನಾಟೀ ವೈದ್ಯನ ಮಲಪರೀಕ್ಷಾ ವಿಧಾನದ ಪ್ರಸಂಗವೂ ಇರಬಹುದು.

ಈ ಡಾಕ್ಟರು ರೋಗಿಯ ಜೊತೆಗೆ ಅವರ ಮನೆಯ ಹಿಂಬದಿಯ ಹಾಳಿತ್ತಲಿನಲ್ಲಿ ವಿಸರ್ಜನೆಯಿದ್ದ ತಾಣಕ್ಕೇ ಹೋಗಿ ಅಲ್ಲಿ ಕಂಡಿದ್ದನ್ನು ಕೆದಕುವಾಗಿನ ಮೂರು ಪುಟಗಳ ವಿವರಣೆಗಳು ಓದುಗರ ಸಂವೇದನೆಯನ್ನೇ ಕೆದಕುವಂತಿವೆ. ಫ್ರೆಂಚ್ ಕಾದಂಬರಿಕಾರ ಡೊಮಿನಿಕ್ ಲೇಪಿಯರ್ ಎಂಬಾತ ತನ್ನ ಸಿಟಿ ಆಫ್ ಜಾಯ್ ಕೃತಿಯಲ್ಲೂ ಇಂಥದ್ದೊಂದು ಪ್ರಸಂಗವನ್ನು ತರುತ್ತಾನೆ. ಕೋಲ್ಕತಾದ ಬಡವರ ಕಾಲೊನಿಯ ಇಕ್ಕಟ್ಟಿನ ಬೀದಿಗಳಲ್ಲಿ ಮಲದ ತೊಪ್ಪೆಗಳನ್ನು ಒಂದೊಂದಾಗಿ ನಿರೂಪಕ ನಿಧಾನವಾಗಿ ವರ್ಣಿಸುತ್ತ ಹೋಗುತ್ತಾನೆ. ಅಮೇಧ್ಯದ ಅಂಥದ್ದೇ ವರ್ಣನೆ ಇಲ್ಲಿ ಬೇರೊಂದು ರೂಪದಲ್ಲಿ ಬರುತ್ತದೆ.

ಅನ್ನವನ್ನು ತಿನ್ನುವ ಶ್ರೀಮಂತರ ಮನೆಯವರದಾದರೆ ಬಂಗಾರದ ಗಟ್ಟಿಯಂತೆಯೂ ನವಣೆ ತಿಂದವರದ್ದಾಗಿದ್ದರೆ ಬೆಳ್ಳಿಯ ಗಟ್ಟಿಯಂತೆಯೂ ಸೆಜ್ಜೆ ರೊಟ್ಟಿಯನ್ನೋ ಮುದ್ದೆಯನ್ನೋ ತಿಂದವರದಾಗಿದ್ದರೆ ಒಳ್ಳೆ ತಾಮ್ರದಂತೆಯೂ ವಿವಿಧ ಬಣ್ಣ ಆಕಾರಗಳಲ್ಲಿ ಕಂಗೊಳಿಸುತ್ತಿದ್ದವು ಎಂದು ಹೇಳಿ ವೈದ್ಯ ಮಹಾಶಯ ಅದನ್ನು ಕೆದಕಿ ಬೆದಕಿ ಆಘ್ರಾಣಿಸಿ ರೋಗಪತ್ತೆ ಮಾಡುವಾಗಿನ ವಿವರಣೆಗಳು ಹಾಸ್ಯರಸದಂತೆ ಹರಿದರೂ ಅದೇ ಮುಂದೆ ಕ್ರಮೇಣ ರೌದ್ರರಸವಾಗುತ್ತದೆ.

ಸದರಿ ಮಲದ ಗುಪ್ಪೆಯ ಒಡತಿಗೆ ಸ್ತನಕ್ಯಾನ್ಸರ್ ಇದೆಯೆಂದು ಹೇಳಿದ ವೈದ್ಯ ಅವಳಿಗೆ ನೀಡುವ ಚಿಕಿತ್ಸೆ ಅದೆಷ್ಟು ಘೋರ ಎಂದರೆ ಆಕೆಗೆ ಏನೂ ಆಗದಂತೆ ಬಲವನ್ನು ಕೊಡು ಎಂದು ಪ್ರಾರ್ಥಿಸುವ ಮಹಾವೃಕ್ಷ ತನ್ನ ಕೈಲಾದಷ್ಟು ಗಾಳಿಯನ್ನು ನಿರ್ಮಿಸಿ ಪೂರ್ಣ ಆಮ್ಲಜನಕವನ್ನೇ ಆಕೆಯ ಮುಖಕ್ಕೆ ಬೀಸುತ್ತದೆ.

ಅಧ್ಯಾಯಗಳನ್ನು ಕೊಂಬೆಗಳನ್ನಾಗಿಸಿ, ಮಾನವನ ನಡಾವಳಿಗಳ ಬೇರುಬೇರುಗಳನ್ನೂ ಜಾಲಾಡುತ್ತ ‘ಯಾವ ದೇವರ ಹೆಸರನ್ನೂ ಈ ನರಮನುಷ್ಯನಿಗೆ ಇಡಬಾರದೆಂದು’ ಶಪಿಸುವ ಈ ಮಹಾವೃಕ್ಷ ತಾನೂ ಮನುಷ್ಯನ ಗುಣಗಳನ್ನು ಆವಾಹಿಸಿಕೊಂಡಂತೆ ಆಗೊಮ್ಮೆ ಈಗೊಮ್ಮೆ ಸ್ವಗತಕ್ಕೆ ಬರುತ್ತದೆ. ಬೇವಿನ ಮರವನ್ನು ಅರಳಿಯ ಪತ್ನಿಯೆಂದು ಮನುಷ್ಯರು ತಳುಕು ಹಾಕಿದ್ದರಿಂದ ಈ ವೃಕ್ಷ ತಾನೂ ಬೇವನ್ನು ಹಾಗೇ ಪರಿಭಾವಿಸಿಕೊಂಡು ಆಗಾಗ ದಾಂಪತ್ಯದ ಸರಸ-ಸೆಡವು ವ್ಯಕ್ತಪಡಿಸುತ್ತಿರುತ್ತದೆ.

ಕೊನೆಗೆ, ತನ್ನದಲ್ಲದ ತಪ್ಪಿನಿಂದಾಗಿ ಪತ್ನಿ ಕುಸಿದು ಬಿದ್ದಾಗ ಇಷ್ಟು ದಿನ ನನ್ನ ಹೆಂಡತಿಯಂತೇ ಬದುಕಿದ್ದ ಆಕೆಯನ್ನು ನಾನೇ ಸಾಯಿಸಿಬಿಟ್ಟೆ ಎನ್ನುತ್ತಲೇ ಮಹಾವೃಕ್ಷ ತನ್ನ ಅಂತ್ಯವನ್ನೂ ವರ್ಣಿಸುತ್ತ ಹೋಗುವಾಗ ನವರಸಗಳಲ್ಲಿ ಅದುವರೆಗೆ ಕಾಣಿಸಿಕೊಳ್ಳದಿದ್ದ ಕರುಣಾರಸವೂ ಇಲ್ಲಿ ಧಾರಾಕಾರ ಹರಿಯುತ್ತದೆ. ಕಥನದ ಹರಿವು ತೀರ ದುರಂತದಂಚಿಗೆ ಹೋಗದಂತೆ ಹೊಸ ಚಿಗುರಿನ ಆಶಯವನ್ನು ಉಳಿಸಿಕೊಂಡಿದ್ದರಿಂದ ಮಹಾವೃಕ್ಷ ೨.೦ ಬೆಳೆದು ನಿಂತು ಹೊಸ ಕಥೆಯನ್ನು ಹೇಳುವ ಸಾಧ್ಯತೆಯನ್ನೂ ಕಂನಾ ಕಾದಿಟ್ಟಂತಾಗಿದೆ.

ʼಮನುಷ್ಯನಿರ್ಮಿತ ಏನನ್ನೇ ಯಾರಾದರೂ ಹಾಳುಗೆಡವಿದರೆ ಅದನ್ನು ನಾವು ವಿಧ್ವಂಸಕ ಕೃತ್ಯ ಎನ್ನುತ್ತೇವೆ; ನಿಸರ್ಗನಿರ್ಮಿತ ಏನನ್ನಾದರೂ ನಾವು ಹಾಳುಗೆಡವಿ ಅದನ್ನು ಅಭಿವೃದ್ಧಿ ಎನ್ನುತ್ತೇವೆʼ ಎಂದಿದ್ದಾನೆ, ಅಮೆರಿಕದ ನಿಸರ್ಗವೀಕ್ಷಕ ಕತೆಗಾರ, ರಂಗವಿಮರ್ಶಕ ಜೋಸೆಫ್ ವುಡ್ಕ್ರಚ್. ಅಭಿವೃದ್ಧಿಯ ಹಪಾಹಪಿಯಲ್ಲಿ ದೇಶದೆಲ್ಲೆಡೆ ಮರಗಳ ಹನನ ದಿನದಿನಕ್ಕೆ ಹೆಚ್ಚುತ್ತಿದೆ. ಜ್ವರಪೀಡಿತ ಭೂಮಿಯ ಆಕ್ರಂದನವೂ ಹೆಚ್ಚುತ್ತಿದೆ. ಬೌದ್ಧ ಧರ್ಮಗುರು ದಲಾಯಿಲಾಮಾ ಹೇಳುವಂತೆ, ಮನುಷ್ಯನ ಕೃತ್ಯಗಳನ್ನೆಲ್ಲ ಮೌನವಾಗಿ ಸಹಿಸುವಷ್ಟು ತಾಳ್ಮೆ ಭೂಮಿಗೆ ಉಳಿದಿಲ್ಲ. ಇನ್ನು, ಕವಿಗುರು ರವೀಂದ್ರರು ಹೇಳಿದಂತೆ ಆಚಿನ ಲೋಕದೊಂದಿಗೆ ಸಂವಾದ ನಡೆಸುವಷ್ಟೂ ಸಂಯಮ ಭೂಮಿಗೆ ಉಳಿದಿರಲಾರದು.

ಕೃತಿಕಾರರ ಆಶಯ ಮತ್ತು ಆಕೃತಿ ಎರಡನ್ನೂ ಸಮರ್ಥವಾಗಿ ಮೇಳವಿಸಿಕೊಂಡ ಈ ವಿಶಿಷ್ಟ ಕಥನವನ್ನು ಧಾರಾವಾಹಿಯಾಗಿ ಪ್ರಕಟಿಸಿದ ಸುಧಾ ಪತ್ರಿಕೆಗೆ ಮೊದಲ ಅಭಿನಂದನೆಗಳು ಸಲ್ಲಬೇಕು. ಅದನ್ನು ಅಷ್ಟೇ ಆಸಕ್ತಿಯಿಂದ ಕಾದಂಬರಿಯಾಗಿ ಪ್ರಕಟಿಸುತ್ತಿರುವ ನವಕರ್ನಾಟಕ ಪ್ರಕಾಶನವೂ ಅಭಿನಂದನೆಗೆ ಭಾಜನವಾಗಿದೆ. ಹಾಲಿವುಡ್ನ ಅದೆಷ್ಟೊ ನಿರ್ಮಾಪಕರು ನಾನಾ ಬಗೆಯ ಪ್ರಾಣಿ-ಪಕ್ಷಿ, ಜಲಚರಗಳನ್ನು ಹೀರೋಗಳನ್ನಾಗಿ ಮಾಡಿ ಅವುಗಳ ಮೂಲಕ ಮನುಷ್ಯರ ನಾನಾ ಮುಖಗಳನ್ನು ಅನಾವರಣ ಮಾಡಿದ್ದಾರೆ.

ನಿಶ್ಚಲ ವೃಕ್ಷವೊಂದಕ್ಕೆ ನಾಯಕತ್ವ ಕೊಟ್ಟ ಚಿತ್ರವೇನೂ ಬಂದಂತಿಲ್ಲ. ಬಂದಿದ್ದರೆ ನನಗಂತೂ ಗೊತ್ತಿಲ್ಲ. ದೃಶ್ಯಮಾಧ್ಯಮದ ಮೂಲಕ ಮಹಾವೃಕ್ಷದ ಕತೆಯನ್ನು ಮುಂದಿಡುವುದು ಎಂಥ ನಿರ್ಮಾಪಕರಿಗೂ ಸವಾಲಿನ ಕೆಲಸವೇ ಆದೀತು. ಆದರೆ ಧ್ವನಿಮಾಧ್ಯಮದಲ್ಲಿ ಅದು ಸಾಧ್ಯವಿದೆ.

ಪುಸ್ತಕಗಳನ್ನು ಓದುವಷ್ಟೂ ವ್ಯವಧಾನವಿಲ್ಲದಷ್ಟು ಧಾವಂತದಲ್ಲಿ ಮನುಕುಲ ಓಡುತ್ತಿರುವಾಗ ಈ ಕಾದಂಬರಿ ಕೇಳುಪುಸ್ತಕವಾಗಿಯೂ ಬರಲೆಂದು ಆಶಿಸುತ್ತೇನೆ. ಏಕೆಂದರೆ, ಅಶ್ವತ್ಥಮರದ ಮೂಲಕ ವ್ಯಕ್ತವಾದ ನಿವೇದನೆ ನಮ್ಮೆಲ್ಲರ ನಿವೇದನೆಯೂ ಹೌದು.

‍ಲೇಖಕರು Admin

December 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: