ಕನ್ನಡಿಗ ನೋಡಲೇಬೇಕಾದ ‘ಕನ್ನಡಿಗ’

ಜೋಗಿ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.
ಯಾರೂ ಗುಲಾಮನಾಗದಂತೆ ಮಾಡುವವನೇ ಗುರು!

ಬಿಎಂ ಗಿರಿರಾಜ್ ನಿರ್ದೇಶಿಸಿದ ಕನ್ನಡಿಗ ಚಿತ್ರದಲ್ಲಿ ಬರುವ ಸಂಭಾಷಣೆ ಇದು. ಇಂಥ ಹತ್ತಾರು ಮಾತುಗಳು ಅಲ್ಲಲ್ಲಿ ಬರುತ್ತವೆ. ಒಬ್ಬ ನಿರ್ದೇಶಕ ಸೆನ್ಸಿಬಲ್ ಆಗಿದ್ದಾಗ, ಕತೆ ಹೇಳುವಾಗಲೂ ತನ್ನ ಜವಾಬ್ದಾರಿಯನ್ನು ಮರೆಯದೇ ಇದ್ದಾಗ ಮಾತ್ರ ಇವನ್ನೆಲ್ಲ ಒಂದು ಸಿನಿಮಾದೊಳಗೆ ತರಲು ಸಾಧ್ಯ.

ಅಸಾಧ್ಯ ಹಿಂಸೆ, ಅವಮಾನ ಅನುಭವಿಸಿದವನು ಅದನ್ನು ಬೇರೆಯವರ ಮೇಲೆ ಪ್ರಯೋಗಿಸುವಾಗ ಗುಣಭದ್ರನ ಬಾಯಿಯಿಂದ ಗಿರಿರಾಜ್ ಹೇಳಿಸುವ ಮಾತಿದು: ಹಿಂಸೆ, ಅವಮಾನಕ್ಕೆ ಒಳಗಾದವನು ಅದರಿಂದ ಪಾಠ ಕಲಿಯಬೇಕು. ಮತ್ತಷ್ಟು ಕರುಣಾಮಯಿ ಆಗಬೇಕು. ನೋವನ್ನು ಉಂಡವನಿಗೆ ನೋಯುವ ಸಂಕಟ ಗೊತ್ತಿರಬೇಕು.

ಲಿಪಿಕಾರ ಗುಣಭದ್ರ, ಅವನನ್ನು ಹುಡುಕಿಕೊಂಡು ಬರುವ ಫರ್ಡಿನಾಂಡ್ ಕಿಟೆಲ್, ಲಿಪಿಕಾರರ ವಂಶಕ್ಕೆ ದ್ವೀಪ ಬರೆದುಕೊಟ್ಟ ಚೆನ್ನಭೈರಾದೇವಿ, ಆಕೆಯ ಕೊನೆಗಾಲದ ಕತೆ, ಬ್ರಿಟಿಷರ, ಪೋರ್ಚುಗೀಸರ, ಫ್ರೆಂಚರ ಆಕ್ರಮಣದ ನಡುವೆಯೇ ಜರ್ಮನಿಯಿಂದ ಬಂದವರು ಕನ್ನಡಕ್ಕೆ ಕೊಟ್ಟ ಕೊಡುಗೆ, ಮೌನವ್ರತ ಮಾಡುತ್ತಲೇ ಕರಗಿಹೋಗುವ ಹ್ಯಾನ, ಗುಣಭದ್ರನ ಎಲ್ಲ ಕೈಂಕರ್ಯಗಳ ಹಿಂದಿನ ಶಕ್ತಿಯಾಗಿ ನಿಂತ ಸಂಕವ್ವೆ- ಹೀಗೆ ಚರಿತ್ರೆಯಿಂದ ಹೆಕ್ಕಿಕೊಂಡ ಪಾತ್ರಗಳ ಮೂಲಕ ವರ್ತಮಾನ ಗೋಚರಿಸುವಂತೆ ಮಾಡುವ ಚಿತ್ರವೊಂದನ್ನು ಗಿರಿರಾಜ್ ಕಟ್ಟಿಕೊಟ್ಟಿದ್ದಾರೆ.

ಇಂಥ ಚಿತ್ರದಲ್ಲಿ ಅಭಿನಯಿಸುವ ಮೂಲಕ ರವಿಚಂದ್ರನ್, ತನ್ನ ವೃತ್ತಿಜೀವನದ ಮತ್ತೊಂದು ಮಜಲು ತಲುಪಿದ್ದಾರೆ. ಅವರು ತನ್ನ ಪಾತ್ರವನ್ನು ಜವಾಬ್ದಾರಿಯಿಂದ ಮತ್ತು ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಕಣ್ಣೋಟದಲ್ಲಿ ಕಾರುಣ್ಯ, ಗರ್ವ, ಸ್ವಾಭಿಮಾನ, ಗಾಂಭೀರ್ಯ ಮತ್ತು ವಿದ್ವತ್ತನ್ನು ದಾಟಿಸುವ ಕಲಾವಿದರಾಗಿ ಅವರು ಗಮನ ಸೆಳೆಯುತ್ತಾರೆ. ರವಿಚಂದ್ರನ್ ನಟನಾಜೀವನದ ಮತ್ತೊಂದು ಮಹತ್ವದ ಚಿತ್ರವಾಗಿ ಕನ್ನಡಿಗ ಚಿರಕಾಲ ಮನಸ್ಸಲ್ಲಿ ಉಳಿಯಲಿದೆ.

ಸಂಕವ್ವೆಯ ಪಾತ್ರದಲ್ಲಿ ಪಾವನಾ ಅಭಿನಯವೂ ನೆನಪಲ್ಲಿ ಉಳಿಯುತ್ತದೆ. ತುಂಟತನ, ಬಡತನ, ಸಹಾನುಭೂತಿ, ಸಂಶಯ- ಹೀಗೆ ನಾಲ್ಕು ವಿಭಿನ್ನ ಮುಖಗಳಿರುವ ಪಾತ್ರವದು. ಅದರಲ್ಲಿ ಪಾವನಾ ತನ್ಮಯರಾಗಿದ್ದಾರೆ.

ಗಿರಿರಾಜ್ ಎಂಥ ನಿರ್ದೇಶಕರೆಂದರೆ ಬ್ರಹ್ಮಾಂಡ ಗುರೂಜಿಯನ್ನು ಕೂಡ ತಮ್ಮ ಚಿತ್ರದಲ್ಲಿ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ರವಿ ಬಸ್ರೂರು ಕತೆಯ ಗುಂಗು ಉಳಿಯುವಂತೆ ಮಾಡಿದರೆ, ಬಹಳ ಕಾಲದ ನಂತರ ಕ್ಯಾಮರಾ ಹಿಡಿದ ಜಿಎಸ್ ವಿ ಸೀತಾರಾಮ್ ಚರಿತ್ರೆಯ ಪುಟಗಳಿಗೆ ತಕ್ಕ ಕಲರ್ ಟೋನ್ ನೀಡುವ ಮೂಲಕ ಚಿತ್ರದ ಮೆರುಗು ಹೆಚ್ಚಿಸಿದ್ದಾರೆ.

ಜೀವಿಕಾ, ಜಗದೀಶ್ ಮೈತ್ರಿ, ಬಾಲಾಜಿ ಮನೋಹರ್, ಅಚ್ಯುತ- ಹೀಗೆ ಪ್ರತಿಯೊಬ್ಬರೂ ತಮ್ಮನ್ನು ಕೊಟ್ಟುಕೊಂಡಿರುವ ‘ಕನ್ನಡಿಗ’ ಚಿತ್ರ ಗಿರಿರಾಜ್ ಅವರ ಶ್ರದ್ಧೆಯ ಫಲ.

‍ಲೇಖಕರು Admin

December 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: