ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ.ಪಿ.ಬಸವರಾಜು ಬರೆದ ಕೊರೊನಾ ಪದ್ಯಗಳು

 

ಜಿ.ಪಿ.ಬಸವರಾಜು

1

ಬೀದಿಗೆ ಬಿಡಿ ನಮ್ಮನ್ನು

ನಿಮ್ಮೆಲ್ಲ ಗುಟ್ಟು-ಗೌಪ್ಯಗಳನ್ನು

ಮುಚ್ಚಿಟ್ಟುಕೊಂಡು

ಒಳಗೇ ಇರಿ–ಎಂದರೆ

ಹೇಗೆ ಇರುವುದು?

 

ಮನೆಗೆ ಮನೆ,

ಊರಿಗೆ ಊರು,

ಪಂಜರವಾದರೆ

ಉಸಿರಾಟ ಕಷ್ಟ

ನಗುವು ಅಳುವು ಸಿಟ್ಟು

ಅಟ್ಟಹಾಸದ ಮಾತುಗಳು

ಅಹಂಕಾರದ ಪೋಸುಗಳು

– ಎಲ್ಲವೂ ಉಸಿರುಗಟ್ಟಿ

ಮನೆಯೆಂಬುದು ಏನಾಗಬೇಡ?

 

ಬೀದಿ ಇತ್ತು ಬೀದಿಗೆ

ಬೀದಿ ಇತ್ತು ಹರಟೆಗೆ

ಬೀದಿ ಇತ್ತು ನಮ್ಮ ನಾಯಿಗಳಿಗೆ

ಬೀದಿ ಇತ್ತು ‘ಹಲೋ’ ಹೇಳಲು

ಬೀದಿ ಇತ್ತು ನಿಂತು ಕೈಕುಲುಕಿ,

ಕುಶಲ, ದೇಶಾಂತರದ ವಿಚಾರ, ವ್ಯವಹಾರ:

‘ವಿದೇಶದಲ್ಲಿರುವ ಮಗ ಬರಲಿಲ್ಲವೇ?,

ನೀವು ಹೋಗಬೇಕಲ್ಲ ಮಗಳ ಬಾಣಂತನಕ್ಕೆ’..

 

ಬಿಸಿಲೇರಿದರೂ, ಸಂಜೆ ಕತ್ತಲಿಳಿದು

ಬೀದಿ ದೀಪಗಳು ಕಣ್ಬಿಟ್ಟರೂ

ಮುಗಿತಾಯ ಇರುವುದಿಲ್ಲ ಮಾತಿಗೆ

ತಂಗಾಳಿ ತೀಡುವುದು ಬೀದಿಯಲ್ಲೇ;

ಬೆಳದಿಂಗಳು ಹಾಡುವುದು ಬೀದಿಯಲ್ಲಿ

ಓಡುವ ಕಳ್ಳನನ್ನು ಹಿಡಿಯುವುದು ಬೀದಿಯಲ್ಲಿ

ಉಳ್ಳಾಗಡ್ಡೆ, ಮೆಣಸಿನಕಾಯಿ, ಕರಿಬೇವು,

ಕೊತ್ತಂಬರಿ ಸೊಪ್ಪು ಬೆಳ್ಳುಳ್ಳಿ

ಮಾರುವುದು ಕೊಳ್ಳುವುದು

ಕಾಸಿಗೆ ಕಾಸು ಚೌಕಾಶಿ

ಎಲ್ಲ ಬೀದಿಯ ಅಖಾಡದಲ್ಲೇ;

ಏಕಾಂತವೆಂಬುದು ಬೀದಿಯಲ್ಲಿ

ಮೌನ ಧ್ಯಾನಗಳೂ ಅಲ್ಲೇ

 

ಶತಮಾನಗಳ ಹಳಸಲು ಗಾಳಿ ಮನೆಯಲ್ಲಿ

ಗೋಡೆಸಾಲಿನ ಚಿತ್ರಗಳಲ್ಲಿ ಬೀಡುಬಿಟ್ಟಿರುವ

ಪಿತೃಪಿತಾಮಹರ ಚೂಪುಗಣ್ಣುಗಳು ಮನೆಯಲ್ಲಿ

ತಟ್ಟೆಯ ಸದ್ದು ಲೋಟದ ಸದ್ದು

ಉಸಿರಾಟದ ಸದ್ದು, ಎಲ್ಲ ಸದ್ದುಗಳೂ ಇಲ್ಲೇ

ಮನೆಯೆಂಬುದು ಮಹಾಭಾರತ,

ರಾಮಾಯಣಗಳ ಮಹಾಯದ್ಧರಂಗ

ಬಿಡುವ ಬಾಣವೂ ಇಲ್ಲೇ ತೊಡುವ ಬಾಣವೂ

ಮನೆಯಲ್ಲೇ;

 

ಬಿಡಿ ನಮ್ಮನ್ನು ನಮ್ಮ ಬೀದಿಗೆ, ಎದುರಿಸುತ್ತೇವೆ

ಮೂರನೇ ಜಾಗತಿಕ ಕೊರೊನಾ ಯುದ್ಧವನ್ನು

 

2

ಮನೆಯೊಳಗೆ ಮೂರುಲೋಕ

 

ಗರಬಡಿದ ಬೀದಿಗಳ ಬಿಟ್ಟು

ಮನೆಗೆ ಮರಳಿದೆ;

 

ಒಳಗೆ ಕೇಕೆ ಕುಣಿತ ಆರ್ಭಟ

ದೇವ ದಾನವರು, ಬಡಪಾಯಿ

ಮಾನವರು, ಗಂಧರ್ವ ಗಾನಕ್ಕೆ

ಪಕ್ಕ ವಾದ್ಯಗಳ ಸೊಗಸುಗಾರರು

ಬಹುರೂಪದ ಮಾಯಾವಿಗಳು

ತೆರೆದ ಮಾಯಾಲೋಕದೊಳಗೆ

ಮಂತ್ರ ದಂಡವ ಹಿಡಿದವರು

ಆಕಾಶ ಮಾರ್ಗದಲ್ಲಿ ಹೊರಟವರು

 

ಭೀಮನ ಕಡೆಗೋಲು ಗದೆಗೆ

ಬೆಚ್ಚಿ, ಮಂಚದಡಿಯ ಸರಸ್ಸಿನಲ್ಲಿ

ಅಡಗಿ ಕುಳಿತಿದ್ದಾನೆ ಕುರುಭೂಪ

ಸದ್ದಿಲ್ಲದೆ ಉಸಿರ ಬಿಗಿಹಿಡಿದು,

ಮುಗಿಲು ಮುಟ್ಟಿದೆ ಭೀಮನ

ಅಂತ್ಯವಿಲ್ಲದ ಆಟಾಟೋಪ

 

ಕರ್ಣನ ರಥ ಹೂತುಹೋಗಿದೆ

ಕೆಸರಲ್ಲಿ, ಅರ್ಜುನನ ಬಾಣಗಳು

ನುಗ್ಗುತ್ತಿವೆ ಒಂದರ ಹಿಂದೆ ಒಂದು

ಸೀತೆಯ ಸೀರೆ ತೊಡರುತ್ತಿತ್ತು ಕಾಲಿಗೆ

ಮಾಯಾ ಜಿಂಕೆಯ ನಡಿಗೆ ಕುಂಟು ಕುಂಟು

ಆಟಕ್ಕುಂಟು ಲೆಕ್ಕಕ್ಕಿಲ್ಲ ರಾವಣನ ಹತ್ತು ತಲೆ

ರಾಮನ ರೋಷ, ಸೀತೆಯ ಸಿಟ್ಟು

ಲಕ್ಷ್ಮಣನ ಬುದ್ಧಿವಾದ, ತೆರೆದಿತ್ತು

ರಂಗುರಂಗಿನ ರಾಮಾಯಾಣ ಕಣ್ಣೆದುರಲ್ಲೇ

 

ನಾಲ್ಕು ಹೆಜ್ಜೆ ನಡೆದೆ, ಅಂಕದ ಪರದೆ

ಬಿದ್ದಿರಲಿಲ್ಲ ಇನ್ನೂ, ನೆಲಕ್ಕೆ ಬಿದ್ದ ಜಿಂಕೆ

ನರಳುತ್ತಿತ್ತು, ಮೀಸೆ ಇಲ್ಲದ ರಾಮ ಮುಸಿ

ಮುಸಿ ಅಳುತ್ತಿದ್ದ, ರಾವಣನ ಎಳೆದಾಟಕ್ಕೆ

ಸೀರೆಯ ತೊಡರಾಟಕ್ಕೆ ದಾರಿ ಕಾಣದೆ ಸೀತೆ

ಸುಸ್ತಾಗಿದ್ದಳು, ಹಾಲಲ್ಲಿ ಚಲ್ಲಾಪಿಲ್ಲಿ ಸಕಲ

ಸರಕು ಸರಂಜಾಮು, ಕೋಣೆಯೊಳಗೆ

ಯಾರದೋ ವೇಷ ಭೂಷಣದ ಸಡಗರ

 

ದಾರಿ ಕಾಣದೆ ನಿಂತು ಬಿಟ್ಟೆ, ಮನೆಯೊಳಗೇ

ತೆರೆದುಕೊಂಡ ಮೂರು ಲೋಕ, ಯಾವುದು

ನಿಜ, ಯಾವುದು ಭ್ರಮೆ ಕೊರೊನಾ ದಿನಗಳಲ್ಲಿ

 

 

 

‍ಲೇಖಕರು avadhi

6 May, 2020

4 Comments

  1. T S SHRAVANA KUMARI

    ಒಳ್ಳೆಯ ಕವಿತೆ

  2. nagraj harapanahalli

    Insight poem`s

  3. BASAVARAJU G P

    Thank you.

  4. gpbasavaraju

    thank you.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading