ಅವಳ ನೆನಪಾದಾಗಲೆಲ್ಲ..

ರಾಜೇಶ್ವರಿ ಚೇತನ್ 

ಅವಳ ನೆನಪಾದಾಗಲೆಲ್ಲ ಅನ್ನಿಸುವುದು ಒಂದು ಸಲವಾದರೂ ಅವಳ ಬೆನ್ನ ಮೇಲೆ ಕೈಯಿರಿಸಿ, ನಾನಿದ್ದೇನೆ ಅಂದುಬಿಟ್ಟಿದ್ದರೆ ಎಲ್ಲೋ ಬದುಕಿಕೊಂಡಾದರೂ ಇರುತ್ತಿದ್ದಳು. ಇವತ್ತಿಗೂ ನನಗೇ ಅರಿವಾಗದ ನನ್ನದೇ ಮನಃಸ್ಥಿತಿಯೊಂದು ಕಣ್ಣೆದುರೇ ಒಂದು ದುರಂತಕ್ಕೆ ಸಾಕ್ಷಿಯಾಗಿ ಅದರಲ್ಲಿ ನಾನೂ ಭಾಗಿಯೇ ಎಂಬ ನೋವಿಗೆ ಕಾರಣವಾಗಿ, ಇಷ್ಟು ವರ್ಷಗಳ ನಂತರವೂ ನನ್ನನ್ನು ಕಾಡುವುದು.

ಯಾವಾಗಲೂ ಅವಳು ಮನೆಯ ಹೊರಗಿನ ತಂತಿ ಬೇಲಿಯ ಕೊನೆಯ ಮೂಲೆಯ ಮಲ್ಲಿಗೆಯ ಗಿಡಕ್ಕೆ ಒರಗಿ ಗಂಟೆಗಟ್ಟಲೆ, ಜನ ಬರುವ ದಾರಿಯನ್ನೇ ದಿಟ್ಟಿಸುತ್ತಾ ಕುಳಿತಿರುತ್ತಿದ್ದಳು.

ಎಂಥ ಬಿರುಬಿಸಿಲಿರಲಿ ಚಳಿಯೇ ಇರಲಿ ಒಂದು ಕಾಫಿ, ಮತ್ತೊಂದು ನೀಲಿ ಬಣ್ಣದ ಸ್ವೆಟರನ್ನು ಧರಿಸಿ.

ಹಾಗವಳು ಕಾಯುತ್ತಿದ್ದುದು  ಕಂಠಮಟ್ಟ ಕುಡಿದು ಬರುವ ಅಪ್ಪನನ್ನು, ಯಾವುದೋ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ತಂಗಿಯನ್ನು ಮತ್ತು ಇನ್ನೆಲ್ಲೋ ಕೆಲಸಕ್ಕೆ ಅಂತ ಹೋದ ಅಣ್ಣನನ್ನು. ಅವರು ಯಾರೂ ಮನೆಯೊಳಗೆ ಇಲ್ಲದಿದ್ದರೆ ಯಾರಾದರೂ ಒಬ್ಬರು ಬರುವವರೆಗಾದರೂ ಅಲ್ಲಿಯೇ ಇರುತ್ತಿದ್ದಳು. ಒಮ್ಮೊಮ್ಮೆ ಹೊತ್ತು ಮುಳುಗುವವರೆಗೂ.

ಎಂಥವರನ್ನಾದರೂ ಕರೆದು ಮಾತನಾಡಿಸಬಲ್ಲ ನನಗೆ, ‘ ಆಯ್ತಾ ಕಾಫಿ? ತಿಂಡಿ ಏನು ಮಾಡಿದ್ರಿ?’  ಇತ್ಯಾದಿ ಔಪಚಾರಿಕ ಮಾತುಗಳಲ್ಲಿ ಒಲವಿಲ್ಲ. ಆಕೆಯನ್ನು ಪರಿಚಯಿಸಿಕೊಳ್ಳಬಹುದಾದ ಯಾವ ದಾರಿಯೂ ಕಾಣದೆ, ಮಾತನಾಡಬೇಕೆಂಬ ಯೋಜನೆಯನ್ನು ಮುಂದೂಡುತ್ತಾ ಬಂದಿದ್ದೆ. ಮಧ್ಯದಲ್ಲಿ ಒಂದೆರಡು ಸಲ ಕಣ್ಣರಳಿಸಿ ನಕ್ಕು ಅವಳ ಜೊತೆ ಸಖ್ಯ ಬೆಳೆಸಿಕೊಳ್ಳುವ ಆಸಕ್ತಿಯನ್ನೂ ತೋರಿದ್ದೆ. ಅವಳು  ನಿರ್ಭಾವುಕ ನಗೆಯೊಂದನ್ನು ಚೆಲ್ಲಿ ತಕ್ಷಣ ಗಂಭೀರಳಾದದ್ದು ನನ್ನ ಉತ್ಸಾಹಕ್ಕೆ ಮಣ್ಣೆರಚಿತ್ತು.

ನಾವಾಗ ಹಾಸನದಲ್ಲಿದ್ದೆವು. ನಮ್ಮ ಬಾಡಿಗೆ ಮನೆಯ ಎದುರಿನ ಮನೆಯಲ್ಲೇ ಅವರಿದ್ದರು. ಆ ನಾಲ್ವರೂ  ಹೊರಗೆ ಪರಸ್ಪರ ಮಾತನಾಡುವುದನ್ನು ನಾನು ನೋಡಿಯೇ ಇರಲಿಲ್ಲ. ಎಲ್ಲರ ಮುಖದಲ್ಲೂ ಒಂದು ನೋವಿನ ಎಳೆ ಎದ್ದು ಕಾಣುತ್ತಿತ್ತು. ಆಮೇಲೆ ಗೊತ್ತಾಯ್ತು, ಹೀಗೆ ನಿಸ್ತೇಜಳಾಗಿ ಕುಳಿತುಕೊಳ್ಳುವ ಹುಡುಗಿಯ ಕಣ್ಣೆದುರಲ್ಲೇ ಗಂಟಲಲ್ಲಿ ಅನ್ನದ ಅಗುಳೊಂದು ಸಿಕ್ಕಿ ಅವಳಮ್ಮ ತೀರಿಹೋಗಿದ್ದ ವಿಷಯ. ಇದು ಗೊತ್ತಾದ ಕ್ಷಣವೇ ಹೇಗಾದರೂ ಮಾಡಿ ಈ ವಾರಾಂತ್ಯದಲ್ಲಾದರೂ ಅವಳ ಜೊತೆ ಮಾತನಾಡಲೇಬೇಕು ಎನ್ನುವ ಗಟ್ಟಿ ಮನಸ್ಸು ಮಾಡಿದೆ.

ಅದೇ ಶನಿವಾರ ಮಧ್ಯಾಹ್ನ ಎರಡು ಗಂಟೆ ಆಗಿರಬಹುದು, ಕಾಲೇಜಿನಿಂದ ಬಂದ ತಂಗಿಗೂ, ಕೆಲಸ ಬಿಟ್ಟು ಬಂದ ಅಣ್ಣನಿಗೂ ಅವಳು ಬಾಗಿಲು ತೆರೆಯಲಿಲ್ಲ. ಅಕ್ಕಪಕ್ಕದವರ ಜೊತೆ ಅಷ್ಟು ಹೊಕ್ಕುಬಳಕೆ ಇಲ್ಲದ್ದರಿಂದ ಅವಳಣ್ಣ ಎಲ್ಲಿಂದಲೋ ಗೆಳೆಯನೊಬ್ಬನನ್ನು ಕರೆದು ತಂದ. ಮಾಡಿನ ಹಂಚು ಸರಿಸಿ ನೋಡೋಣ ಅಂತ ಮೇಲೆ ಹೋದ ಆ ಹುಡುಗ ನೇಣು ಹಾಕಿಕೊಂಡ ಆ ಹುಡುಗಿಯನ್ನು ನೋಡಿ ಕಿರುಚಿದ. ಆಮೇಲೆ ಅಣ್ಣನೇ ಹೆಣವನ್ನೂ ಇಳಿಸಿದ. ಎಲ್ಲರಿಗೂ ವಿಷಯ ಗೊತ್ತಾಯಿತು. ಜನ ಸೇರಿದ್ರು. ಆದರೆ ಆಶ್ಚರ್ಯ ಅಂದ್ರೆ ಯಾರೊಬ್ಬರೂ ಅವರ ಕಂಪೌಂಡ್ ದಾಟಿ ಮನೆಯೊಳಗೆ ಕಾಲಿಡಲಿಲ್ಲ.

ಹೆಣವನ್ನು ನೋಡುವ ಯೋಚನೆಯೇ ಕಾಲಿನಲ್ಲಿ ನಡುಕ ಹುಟ್ಟಿಸುವುದು ನನಗೆ. ಆದರೂ ಅಲ್ಲಿ ಇನ್ನೂ ಡಿಗ್ರಿ ಓದುವ ಹುಡುಗಿಯನ್ನು ನೆನಪಾಗಿ ಸಂಕಟವಾಯಿತು. ಧೈರ್ಯದಿಂದ ಆ ಮನೆಯೊಳಗೆ ಹೋದೆ. ಅವಳು ಅಳುವನ್ನು ನಿಯಂತ್ರಿಸಿ ಅಕ್ಕನ ದೇಹದ ಬಟ್ಟೆಯನ್ನು ಸರಿ ಮಾಡುತ್ತಿದ್ದಳು.

ಅಷ್ಟು ಹೊತ್ತಿಗೆ ಪೊಲೀಸರು ಬಂದರು.. ಹೆಣ್ಣು ಪೇದೆ ಜೊತೆಯಿರಲಿಲ್ಲ. ಅದೆಂಥಾ ಅಮಾನವೀಯ ಮತ್ತು ದುರ್ದೆಸೆಯ ಘಳಿಗೆಯೆಂದರೆ ಯೋಚಿಸಿದಾಗ ಇನ್ನೂ ನನಗೆ ಅಳು ಉಕ್ಕಿ ಬರುವುದು. ಆ ಚಿಕ್ಕ ಹುಡುಗಿ ಮತ್ತು ನಾನು ಇಬ್ಬರೂ ಆ ದೇಹದ ಬಟ್ಟೆಯನ್ನೆಲ್ಲ ತೆಗೆದು, ಅವರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಬೇಕಾಯಿತು.

“ತಲೆಗೂದಲು ಎಷ್ಟುದ್ದ ಉಂಟಮ್ಮಾ”
ಅವರೇ ಸ್ಕೇಲ್ ಕೊಟ್ಟರು.

ನಾನು ದೇಹದ ಕೂದಲನ್ನು ಹಿಡಿದು ಕೊಟ್ಟೆ. ಅವಳ ತಂಗಿ ಅಳತೆ ಮಾಡಿ ಹೇಳಿದಳು. ಅವರು ಆ ಕಡೆ ನೋಡಿ ಬರೆದುಕೊಂಡರು.

“ಒಳ ಉಡುಪಿನ ಬಣ್ಣ?”
ಹೇಳಿದೆವು

“ನಾಲಿಗೆ ಹೊರಗೆ ಬಂದಿದ್ಯಾ”
ಇದನ್ನೆಲ್ಲ ಯಾರು ಪರೀಕ್ಷಿಸಬೇಕು ನಮಗಿಬ್ಬರಿಗೂ ಗೊತ್ತಿರಲಿಲ್ಲ.

ಇಂಥ ಪ್ರಶ್ನೆಗಳಿಗೆಲ್ಲ ಉತ್ತರ ಕೊಟ್ಟ ಮೇಲೆ ಕೊನೆಯ ಪ್ರಶ್ನೆ.
“ನೋಡಮ್ಮಾ ನಿಮ್ಮ ಅಕ್ಕ ಮಲ, ಮೂತ್ರ ಏನಾದರೂ ವಿಸರ್ಜಿಸಿದ್ದಾಳಾ?”

ಇಬ್ಬರೂ ಕುಸಿದೆವು. ನನಗೆ ದುಃಖ ಕೋಪ. ಆ ಕ್ಷಣ ಏನೂ ಮಾತನಾಡಬಾರದು. ಒಂದು ಮಹಿಳಾ ಪೇದೆಯನ್ನಾದರೂ ಕರೆದುಕೊಂಡು ಬರಬಹುದಿತ್ತಲ್ಲ ಎಂದು ಕೇಳುವ ಧೈರ್ಯವೂ, ಜ್ಞಾನವೂ ನನಗಿರಲಿಲ್ಲ ಆಗ. ನಾವಿಬ್ಬರೂ ಅಳುತ್ತಾ ಮುಖ ನೋಡಿಕೊಂಡೆವು. ಆ ತಂಗಿ ಅವಳ ಅಮ್ಮನ ಹಾಗೆ ಕಂಡಳು ನನಗೆ.

ಎಲ್ಲವೂ ಮುಗಿಯಿತು. ಪೋಲಿಸಿನವರು, ಯಾರಾದರೂ ಒಬ್ಬರು ಸಹಿ ಹಾಕುವಂತೆ ಹೊರಗಿದ್ದವರನ್ನು ಕೇಳಿಕೊಂಡರು. ಯಾರೂ ಹಾಕಲಿಲ್ಲ. ಕೊನೆಗೆ ನಾನೇ ಹಾಕಬೇಕಾಯಿತು.

ಆಂಬ್ಯುಲೆನ್ಸ್ ಬಂತು. ಹೆಣಕ್ಕೆ ಕೈಕೊಡುವರಿಲ್ಲ. ಆಂಬ್ಯುಲೆನ್ಸ್ ಡ್ರೈವರ್ ಜೊತೆ, ನನ್ನ ಗಂಡ ಮತ್ತು ನಾನು.

ಹೆಣ್ಣೊಬ್ಬಳು ಹೆಣ ಹೊರಲು ಹೆಗಲು ಕೊಟ್ಟದ್ದನ್ನು ಆ ಬೀದಿಯ ಜನ ತಮ್ಮ, ತಮ್ಮ ಮನೆಯ ಕಿಟಿಕಿಗಳಿಂದ, ಕಾಂಪೌಂಡಿನ ಗೋಡೆಯೊಳಗಿಂದ ನೋಡುತ್ತಿದ್ದರು.

‍ಲೇಖಕರು avadhi

May 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Sayilakshmi

    ಅಸಹಾಯಕ ಪರಿಸ್ಥಿತಿಯ ಚಿತ್ರಣ ನೈಜವಾಗಿ ಚಿತ್ರಿಸಲಾಗಿದೆ. ಹತಾಶೆಯಲ್ಲಿ ಕೊನೆಗೊಳ್ಳುವುದು ಬೇಡವಿತ್ತೇನೋ ಎನಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: