ಕಡಲ ತೀರದಿಂದ: ನಮ್ಮ ಬದುಕೇ ಹೊಳಹುಗಳ ಗಂಗೋತ್ರಿ…

 

ಕನ್ನಡ ಕತೆಗಾರ, ಕವಿ ಮೋಹನ್ ಹಬ್ಬು ಈ ವಾರ ‘ಅವಧಿ’ಯ ಜೊತೆ ಇದ್ದಾರೆ.

ಅವರು ಅಂಕೋಲೆಯ ವಂದಿಗೆ ಗ್ರಾಮದಲ್ಲಿ ನೆಲಸಿದ್ದಾರೆ.

ಭೌತಶಾಸ್ತ್ರದ ಅಧ್ಯಾಪಕರಾಗಿ ಅಂಕೋಲೆಯ ಜೆ.ಸಿ.ಕಾಲೇಜಿನಲ್ಲಿ ಕೆಲಸ ಮಾಡಿದರು. ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾದರು.

ತಮ್ಮ ಬದುಕಿನ ಉದ್ದಕ್ಕೂ ಅವರು ಸಾಹಿತ್ಯದ ನಂಟು ಉಳಿಸಿಕೊಂಡೇ ಬೆಳೆದವರು. ಕವನ, ಕಥೆ, ನಾಟಕ ಕೃತಿಗಳನ್ನು ಅವರು ರಚಿಸಿದ್ದಾರೆ. ವಿಜ್ಞಾನ ಅವರ ಆಸಕ್ತಿಯ ವಿಷಯಗಳಲ್ಲೊಂದು. ೧೫ ಕೃತಿಗಳನ್ನು ಈವರೆಗೆ  ಪ್ರಕಟಿಸಿದ್ದಾರೆ. ತೆಂಕನ ಹಸಿರು ನಿಶಾನೆ, ಕುಸುರಿಯೊಳಗಣ ಕಸರು, ನಾಗಮುರಿ ಅವರ ಕವಿತಾ ಸಂಕಲನಗಳು. ಲಾಘವದ ಕ್ಷಣಗಳು ಅವರ ಹನಿಗವನಗಳ ಕೃತಿ. ನಾಗಮುರಿ ಅವರ ಪ್ರಧಾನ ಕವಿತಾ ಸಂಕಲನ. ಅವರ ಮೆಚ್ಚಿನ ಆಂಗ್ಲ ಕವಿಗಳ ಕವಿತೆಗಳ ಅನುವಾದವೂ ಈ ಕವನ ಸಂಕಲನದಲ್ಲಿವೆ.

ನನಗೆ ತೀವ್ರವಾಗಿ ಸೆಳೆದದ್ದು ಪಾಶ್ಚಿಮಾತ್ಯ ಕವಿಗಳ ಕವಿತೆಗಳ ಅನುವಾದ. ‘ಮನುಷ್ಯ ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ, ಪ್ರೇಮ ತೀವ್ರತೆ, ಆಳ ಮತ್ತು ಪ್ರೀತಿಯ ಸೆಳೆತವನ್ನು ಕುರಿತ ಅವನ ಸಂವೇದನೆ ಭಿನ್ನವಾಗಿರಲು ಸಾಧ್ಯವಿಲ್ಲ. ಕವಿ ಸದಾ ಸ್ವಾತಂತ್ರ್ಯಕ್ಕಾಗಿ ತುಡಿಯುತ್ತಿರುತ್ತಾನೆ. ಅಕ್ಷರಗಳ ಮೂಲಕ ತನ್ನ ಸುತ್ತಲಿನವರಿಗೆ ಬೆಳಕು ಚೆಲ್ಲುವುದು ಕವಿಯ ಕೆಲಸ. ಕವಿತೆ ಎಂದರೆ ಸದಾ ಹುಟ್ಟುವ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ. ಎಲ್ಲ ಬಚ್ಚಿಡುವುದೆಂದರೆ ಸಾವ ಹೊದ್ದು ಮಲಗಿದೆ ಹಾಗೆ’ ಎನ್ನುವ ಕವಿ `ಪೂರ್ತಿ ಬಚ್ಚಿಕೊಂಡರೆ ಫಲಿಸದ ಮೊಟ್ಟೆ, ಪೂರ್ತಿ ಬಿಚ್ಚಿಕೊಂಡರೆ ಹಾರುವ ಚಿಟ್ಟೆ’ ಎಂಬ ನುಡಿಗಟ್ಟಿನಲ್ಲಿ ಅವರ ಕವಿತೆ ಹರಡಿಕೊಳ್ಳುತ್ತದೆ.

ಓದುಗರು ಕಡಿಮೆಯಾಗುತ್ತಿದ್ದಾರೆ ಎಂಬ ಆತಂಕ ಕವಿಗೆ ಇದ್ದರೂ, ಅವ ಬರೆಯುವುದು ಬಿಡಲಾರ. ಕವಿತೆ ಎಂಬುದು ಸದಾ ಹುಟ್ಟುವ ಒಂದಿಲ್ಲೊಂದು ಪ್ರಶ್ನೆಗಳಿಗೆ ಉತ್ತರಗಳನ್ನು ಅರಸುತ್ತಾ ಹೋಗುತ್ತಿರುತ್ತಾನೆ. ಅಂತ ಹುಡುಕಾಟ ಮೋಹನ್ ಹಬ್ಬು ಅವರ ಕವಿತೆಗಳಲ್ಲಿ ಇದೆ. ನಾಗಮುರಿ ಸಂಕಲನದಲ್ಲಿ ನಾಗರಹಾವು ಮತ್ತು ಬೆಕ್ಕು, ಬೋಧಿಸತ್ವ, ದೇವನೂರು ಮಹಾದೇವ ಅಂದದ್ದು, ಹಳಿ ತಪ್ಪಿದಾಗ, ಪ್ರೀತಿಸಿ ಉಪ್ಪಿನ ಹಾಗೆ , ಬದಲಾಗಬೇಕಿದ್ದರೆ ಎಂಬ ಕವಿತೆಗಳು ಗಮನಾರ್ಹವಾದವು.
………….
ಸದಾ ಹಸನ್ಮುಖಿಯಾದ ಕವಿ ಮೋಹನ್ ಹಬ್ಬು ಲವಲವಿಕೆಯ ಜೀವ. ಅವರ ಜೊತೆ ಇರುವುದೇ ಸಂತೋಷ. ಸದಾ ಸಾಹಿತ್ಯದ ಮಾತು. ೮೦ ವರ್ಷ ತುಂಬಿರುವ ಅವರು ಹಿರಿಯರು, ಕಿರಿಯರು ಎನ್ನದೇ ಬೆರೆಯುವ ಜೀವ. ಇಗೋ, ಸ್ಟೇಟಸ್ ಮೆಂಟೇನ್ ಎಂಬುದು ಅವರಲ್ಲಿ ಇಲ್ಲವೇ ಇಲ್ಲ. ನಾನು ಅವರನ್ನು ಅನೇಕ ಸಲ ಕಾರವಾರದ ಸಾಹಿತ್ಯ ವೇದಿಕೆ ಕಾರ್ಯಕ್ರಮಗಳಿಗೆ ಕರೆದು ಅವರೊಳಗಿನ ಮನುಷ್ಯನನ್ನು ಹೊರತೆಗೆದದ್ದು ಇದೆ. ಭಾಷಾ ದಿನದ ಅಂಗವಾಗಿ ಕಾರವಾರ ಆಕಾಶವಾಣಿಗೆ ಬಂದಾಗ ಹಾಗೇ ಅವರ ಬದುಕಿನ ಸುತ್ತಮುತ್ತ ಮಾತಿಗೆ ಇಳಿದಾಗ, ಅವರು ತೆರೆದು ಕೊಂಡದ್ದು ಅಕ್ಷರ ರೂಪದಲ್ಲಿದೆ.
…………………..

‘ಕಡಲತೀರದಿಂದ..ಕ್ಕಾಗಿ ಮೋಹನ್ ಹಬ್ಬು ಅವರ ಜೊತೆ ಮಾತಿಗಿಳಿದೆ.

ಮನುಷ್ಯ ಅಕ್ಷರಗಳ ಮೂಲಕ ಯಾಕೆ ಬದುಕಲು ಬಯಸುತ್ತಾನೆ ಎಂಬ ಕುರಿತು ಮಾತಿಗೆಳೆದಾಗ ಮೋಹನ್ ಹಬ್ಬು ಸರ್ ಪ್ರತಿಕ್ರಿಯಿಸಿದ್ದು ಹೀಗೆ….

ಬದುಕಲು ಅಗತ್ಯವಿರುವ ಕೆಲವು ಮೂಲಭೂತ ಸಂಗತಿಗಳಿವೆ-ಅಶನ, ವಸನ ಮತ್ತು ಆವಾಸ. ಇವಿಷ್ಟೇ ಬದುಕನ್ನು ಪೂರ್ಣತೆಯತ್ತ ಕೊಂಡೊಯ್ಯಲಾರವು. ಇತರ ಪ್ರಾಣಿಗಳಲ್ಲಿ ಕಾಣದ ಗುಣಲಕ್ಷಣಗಳು ಮನುಷ್ಯನಲ್ಲಿವೆ. ಆತ ಮಾತನಾಡಬಲ್ಲ, ಆಲೋಚಿಸಬಲ್ಲ. ತನ್ನ ಆಲೋಚನೆಗಳನ್ನಾತ ಇತರರೊಡನೆ ಹಂಚಿಕೊಳ್ಳಬಲ್ಲ. ಬದುಕಿನಲ್ಲಿ ತನಗಾದ ಅನುಭವಗಳನ್ನು ನೆನಪಿಸಿಕೊಳ್ಳಬಲ್ಲ, ಆತನಿಗೆ ಬೆಳೆದ ಮೆದುಳಿದೆ. ಸಂವಹನಕ್ಕೆ ಭಾಷೆಯೆಂಬ ಮಾಧ್ಯಮವಿದೆ. ಭಾಷೆಗೊಂದು ಅಕ್ಷರಮಾಲೆಯಿದೆ. ತನ್ನ ಅನುಭವಗಳಿಗೆ ಆತ ಅಕ್ಷರರೂಪ ನೀಡಲು `ಮನಸ್ಸು ಮಾಡಿದಾಗ’ ಅವು ಕವಿತೆಯಾಗಿಯೋ, ಕತೆಯಾಗಿಯೋ ಹೊರಹೊಮ್ಮುತ್ತವೆ.

ಎಲ್ಲರೂ ಕವಿಯೋ ಕತೆಗಾರನೋ ಆಗಲು ಸಾಧ್ಯವಿಲ್ಲ. ಬರಹಗಾರನಿಗೆ ವಿಶಿಷ್ಟ ಮನೋಧರ್ಮದ ಅಗತ್ಯ ಇದ್ದೇ ಇದೆ. ತನ್ನ ಬರಹಗಳ ಮೂಲಕ ಓರ್ವ ಕವಿ, ಕತೆಗಾರ ಇತರರು ಕಾಣದ್ದನ್ನು ತನ್ನದೇ ವಿಶಿಷ್ಟ ಬಗೆಯಲ್ಲಿ ಅಕ್ಷರಗಳಲ್ಲಿ ಹಿಡಿದಿಡುತ್ತಾನೆ. ಬರೆಯುವುದು ಆತನಿಗೆ ಅನಿವಾರ್ಯವಾಗುತ್ತದೆ. ಬರೆದದ್ದು ಕೇವಲ ಪದಗಳ ಗುಚ್ಛವಾಗದೆ ಅನುಭವದಾಚೆ ಏನನ್ನೋ ಹೇಳಲು ಬಯಸುತ್ತದೆ. ಕತೆಯನ್ನಾಗಲಿ ಕವಿತೆಯನ್ನಾಗಲಿ ರಚಿಸಲು ಒಂದು ಹೊಳಹಿನ ಅಗತ್ಯವಿದೆ. ನಮ್ಮ ಬದುಕೇ ಇಂಥ ಹಲವು ಹೊಳಹುಗಳ ಗಂಗೋತ್ರಿ.. ಲೋಕಾನುಭವ, ಸೂಕ್ಶ್ಮಾವಲೋಕನ, ಚಿಂತನ, ಮಂಥನ ಇವು ಬರಹದ ಪರಿಕರಗಳು. ಕವಿತೆಯಾಗಲಿ, ಕಥೆಯಾಗಲಿ-ಅದೊಂದು ಬಗೆಯ ಆವಿಷ್ಕಾರವೇ ಸರಿ. ನನ್ನ ಒಂದು ಹನಿಗವನ ಕಾವ್ಯದ ಕುರಿತು ಹೀಗೆ ಹೇಳುತ್ತದೆ:

ಒಂದು ವಿಷಯ ಒಂದು ಹೊಳಹು
ಏಕಾಂತದ ಸ್ಪಂದನ
ಒಂದು ಭಾವ ಒಂದು ರಾಗ
ಕುಸುರಿಗೊಲಿವ ಹದ ಪದ
ಕೂಡಲು ಸಂಗಮದಲಿ
ಉದಯ ಕಾವ್ಯಸಂಪದ

ನನ್ನ ಇನ್ನೊಂದು ಕವಿತೆ ಮತ್ತು ಕತೆಗಳ ನಡುವಣ ಭಿನ್ನ ನೆಲೆಗಳ ಕುರಿತೇ ಮಾತನಾಡುತ್ತದೆ:

ಕವಿತೆಯ ಈಚೆ ಕಂಡರಿಸಲಾಗದ ಶೂನ್ಯ
ಆಚೆ ತೆರೆದ ಬಯಲು
ನಡುವೆ ವಿಶಿಷ್ಟ ಪದಗತಿಯ ಹೊನಲು….

ಕತೆಯನ್ನು ಬರೆಯಲಾಗುತ್ತದೆ; ಆದರೆ ಕವಿತೆಯನ್ನು ಯಾರೂ ಬರೆಯಲಾರರು; ಅದು ಆಗುತ್ತದೆ. ಅದು ಯಾವುದೋ ಮಾಯಕದಲ್ಲಿ ಧುತ್ತೆಂದು ಅವತರಿಸುವ ದಿವ್ಯ ಕ್ಷಣ ; ಅಷ್ಟೆ.

ಸರ್, ಕವಿತೆ ಧುತ್ತೆಂದು ಆವತರಿಸುವ ಕ್ಷಣ ಸರಿ. ಹಾಗಾದರೆ ನಿಮ್ಮನ್ನು ಪದೇ ಪದೇ ಕಾಡುವ ಸಂಗತಿ ಯಾವುದು? 

ಕವಿತಾರಚನೆ ಒಂದು ಗಂಭೀರ ಕಾಯಕ ಎಂದುಕೊಂಡಿದ್ದೇನೆ. ಸಾಕಷ್ಟು ಪ್ರಬುದ್ಧತೆಯನ್ನು ಗಳಿಸಿದ ನಂತರವೇ ನಾನು ಕಾವ್ಯಲೋಕವನ್ನು ಪ್ರವೇಶಿಸಿದೆ. ಆದ್ದರಿಂದ ನನ್ನ ಕವಿತೆಗಳಲ್ಲಿ ಬಾಲ್ಯದ ಪ್ರಭಾವವಿಲ್ಲ. ಅದೇ, ನನ್ನ ಮೊದಲ ಕಥಾಸಂಕಲನ `ವೈಶಾಖದ ಮಳೆ’ಯಲ್ಲಿ ಬಾಲ್ಯ ಮತ್ತು ಹರಯದ ಕಾಲಘಟ್ಟದ ದಟ್ಟ ಪ್ರಭಾವವಿದೆ. ಈ ಕಾಲಘಟ್ಟದಲ್ಲಿ ನನಗೆದುರಾದ ವ್ಯಕ್ತಿಗಳು/ ಸಂಗತಿಗಳು ಬೀರಿದ ಪ್ರಭಾವ ಗಾಢವಾದುದು. ಇದು ಎಲ್ಲ ಬರಹಗಾರರಿಗೂ ಅನ್ವಯಿಸುವಂತಹ ಮಾತು. ಅನುಭವ ವಿಸ್ತಾರಗೊಂಡಂತೆ ನನ್ನ ಕತೆಗಳ ವಸ್ತುಗಳು ಮಾನವನನ್ನು ಕಾಡುವ ಅನೇಕ ಸಂಗತಿಗಳತ್ತ ತೆರೆದುಕೊಂಡವು.

ಪ್ರಾಯಶಃ ನಾನು ನೀಳ್ಗತೆಗಳನ್ನು ಬರೆಯಲಾರೆ. ನನ್ನ ವಯಸ್ಸು ಇದಕ್ಕೆ ಕಾರಣ. ನನ್ನ ಎಲ್ಲ ಕತೆಗಳು ಅತಿ ಹೆಚ್ಚೆಂದರೆ ೨೫೦೦ ಪದಗಳನ್ನು ದಾಟುವುದಿಲ್ಲ. ಮನುಷ್ಯ ತನ್ನ ಬದುಕಿನಲ್ಲಿ ಎದುರಿಸುವ ದ್ವಂದ್ವಗಳು ನನ್ನ ಕತೆಗಳಲ್ಲಿ ಹೆಚ್ಚಿನ ಸ್ಥಾನ ಪಡೆದಿವೆ. ನನ್ನ ಕಥಾನಾಯಕರು ,ನಾಯಕಿಯರು ಪ್ರೇಮ, ಕಾಮ, ಸರಸ, ವಿರಸ, ಪ್ರೀತಿ, ದ್ವೇಷ ಮುಂತಾದ ಮನುಷ್ಯಸಹಜ ಗುಣಗಳನ್ನು ವ್ಯಕ್ತಪಡಿಸುವ ಸಾಮಾನ್ಯ ವ್ಯಕ್ತಿಗಳು. ಮನುಷ್ಯಸಹಜ ಲಕ್ಷಣಗಳಾದ ಪ್ರೇಮ, ಕಾಮ, ಹುಟ್ಟು, ಸಾವು ನನ್ನನ್ನು ಪದೇಪದೇ ಕಾಡುವ ಅಂಶಗಳು. ಶೋಷಣೆ, ಭ್ರಷ್ಟಾಚಾರ, ಜಾಗತೀಕರಣ ಮುಂತಾದ ವಿದ್ಯಮಾನಗಳು ಕೂಡ ಅಲ್ಲಲ್ಲಿ ಇಣುಕಿವೆ.

ಬದುಕಿನ ಪ್ರೇಮ, ಕಾಮ, ಸಾವಿನ ಬಗ್ಗೆ ಹೇಳಿದಿರಿ, ನನಗೆ ನಿಮ್ಮ ರಾಜಕೀಯ ನಿಲುವಿನ ಬಗ್ಗೆ ನನಗೆ ಕುತೂಹಲವಿದೆ. ಸ್ವಲ್ಪ ವಿವರಿಸುವಿರಾ ?

ನಮ್ಮ ದೇಶದ ಆರ್ಥಿಕ ಹಿಂಜರಿತದ ಕುರಿತಾದ ವಿವಿಧ ಸಮೀಕ್ಷೆಗಳು ಮತ್ತು ತದನಂತರದ ಹೇಳಿಕೆಗಳು ಗೊಂದಲಕಾರಿಯಾಗಿವೆ. ವಾಸ್ತವವೇನು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ನಮ್ಮಂಥ ಶ್ರೀಸಾಮಾನ್ಯರಿಗೆ ಬಲು ಕಷ್ಟ. ಜಾಗತಿಕ ಮಟ್ಟದ ವೇದಿಕೆಗಳು ನಡೆಸಿದ ಆರ್ಥಿಕ ಸಮೀಕ್ಷೆಗಳನ್ನು, ನಾಮಾಂಕಿತ ಅರ್ಥಶಾಸ್ತ್ರಜ್ಞರ ಅಭಿಪ್ರಾಯಗಳನ್ನು ನಂಬಬೇಕೆ, ಬೇಡವೇ? `ಕನ್ಸರ್ನ್ ವರ್ಲ್ಡ್ವೈಡ್’ ಮತ್ತು `ವೆಲ್ಟ್ ಹಂಗರ್ ಹಿಲ್ಛ್’ ಎಂಬ ಸಂಸ್ಥೆಗಳು ಸಿದ್ಧಪಡಿಸಿರುವ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ೧೦೨ನೇ ಸ್ಥಾನದಲ್ಲಿದೆ.

ಅಪೌಷ್ಟಿಕತೆ, ಶಿಶುಮರಣ, ಮಕ್ಕಳ ಕುಂಠಿತ ಬೆಳವಣಿಗೆ ಮುಂತಾದ ಪ್ಯಾರಾಮೀಟರ್‌ಗಳನ್ನಾಧರಿಸಿ ಸಿದ್ಧಪಡಿಸಿದ ಈ ಸೂಚ್ಯಂಕಗಳ ಯಾದಿಯಲ್ಲಿ ನೆರೆಯ ರಾಷ್ಟ್ರಗಳು ನಮ್ಮ ದೇಶಕ್ಕಿಂತ ಮೇಲ್ಮಟ್ಟದಲ್ಲಿವೆ! ಇದು ಆಡಳಿತ ನಡೆಸುವವರ ಆತಂಕಕ್ಕೆ ಕಾರಣವಾಗಬೇಕಲ್ಲವೇ? ನನ್ನ ಗಣಿತಜ್ಞ ಸನ್ಮಿತ್ರರು ಎಲ್ಲ ಸಮೀಕ್ಷೆಗಳ ಫಲಿತಾಂಶವನ್ನು ನಂಬುವಂತಿಲ್ಲ; ಆಯ್ಕೆ ಮಾಡಿದ ಪ್ಯಾರಾಮೀಟರ್‌ಗಳು ಮುಖ್ಯ ಎನ್ನುತ್ತಾರೆ. ಹಾಗಿದ್ದರೆ ಈ ಸಮೀಕ್ಷಾ ವರದಿಗಳ ಬಗ್ಗೆ ನಮ್ಮಂತಹ ಪಾಮರರು ಏನೆಂದು ತೀರ್ಮಾನಿಸಬೇಕು? ಎಲ್ಲಕ್ಕಿಂತ ಹೆಚ್ಚಿನ ದುರಂತವೆಂದರೆ, ನಮ್ಮ ದೇಶದ ಪ್ರಸಕ್ತ ರಾಜಕೀಯ (ರಣ)ರಂಗದಲ್ಲಿ ವಿರೋಧದ ದನಿ ಹೇಳಹೆಸರಿಲ್ಲದೆ ಕ್ಷೀಣಗೊಂಡಿದೆ. ಪ್ರಜಾಪ್ರಭುತ್ವದ ನೆಲೆಯಲ್ಲಿ ಇದು ಉತ್ತಮ ಲಕ್ಷಣವಲ್ಲ.

ರಾಜಕೀಯ ಮುಗಿಸಿದ್ವಿ, ಎಲ್ಲರನ್ನು ಒಂದಿಲ್ಲೊಂದು ಸಂದರ್ಭದಲ್ಲಿ ಕಾಡಿರುವ ಮತ್ತು ಕಾಡುವ ಧರ್ಮ ದೇವರು ವಿಷಯದ ಬಗ್ಗೆ ಏನ್ ಹೇಳಲು ಇಷ್ಟಪಡ್ತಿರಾ ಸರ್ ?

ದೇವರ ಪರಿಕಲ್ಪನೆ ಹುಟ್ಟಿದ್ದು ಭಯದಿಂದ. `ಭಯ-ಭಕ್ತಿ’ ಈ ಜೋಡಿ ಪದವನ್ನೇ ನೋಡಿ. ಮೊದಲು ಭಯ, ಆ ಮೇಲೆ ಭಕ್ತಿ. ಕಾರ್ಯಕಾರಣ ತರ್ಕದಿಂದ ದೇವರ ಅಸ್ತಿತ್ವನ್ನು ಸಾಧಿಸಲಾಗುತ್ತದೆ. ಸ್ಥೂಲಾರ್ಥದಲ್ಲಿ ಧರ್ಮ ದೇವರ ಕಲ್ಪನೆಯ ಉಪೋತ್ಪನ್ನ. ಎಲ್ಲ ಧರ್ಮಗಳೂ ತಮ್ಮತಮ್ಮ ಧರ್ಮಗಳ ಪಾರಮ್ಯವನ್ನೇ ಪ್ರತಿಪಾದಿಸುತ್ತವೆ. `ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವೃಜ’ ಎನ್ನುತ್ತದೆ ಭಗವದ್ಗೀತೆ. ಅಂತೆಯೇ ಇತರ ಧರ್ಮಗಳೂ ಕೂಡ. ವಿಚಾರವೇನೋ ಸರಿ. ಆದರೆ, ಧರ್ಮ ಉಪದೇಶಿಸಿದಂತೆ ಅನುಯಾಯಿಗಳು ನಡೆದುಕೊಳ್ಳುತ್ತಿದ್ದಾರೆಯೇ?

ನನ್ನ ದೃಷ್ಟಿಯಲ್ಲಿ, ದೇವರು ಮತ್ತು ನಮ್ಮ ವಿಶ್ವ ಎರಡೂ ಒಂದೇ. ದೇವರು ಅನಂತ. ವಿಶ್ವವೂ ಅನಂತ. ದೇವರು ಮಾತನಾಡುವುದಿಲ್ಲ. ವಿಶ್ವವೂ ಮಾತನಾಡುವುದಿಲ್ಲ. ಅದು ಯಾರನ್ನೂ ಕೇಳದೆ ಹುಟ್ಟಿಸುತ್ತದೆ; ಸಾಯಿಸುತ್ತದೆ ಕೂಡ. ನಂಬಿಕೆಯುಳ್ಳವರು ಈ ವಿಶ್ವ ದೇವರ ಆಡುಂಬೊಲ ಎನ್ನಬಹುದು.

ಸಮಾಜದಲ್ಲಿ ಸಜ್ಜನರೂ ಇದ್ದಾರೆ, ದುರ್ಜನರೂ ಇದ್ದಾರೆ. ಆ ದಯಾಮಯ ದೇವರು (!) ಇಬ್ಬರಿಗೂ ಬದುಕಲು ಅವಕಾಶ ಮಾಡಿಕೊಟ್ಟಿದ್ದಾನೆ! ದೇವರನ್ನು ನಂಬಿದರೂ ಅಷ್ಟೆ, ನಂಬದಿದ್ದರೂ ಅಷ್ಟೆ; ಪರಿಣಾಮ ಒಂದೆ. ನಾಸ್ತಿಕರಾದ ಎ.ಎನ್. ಮೂರ್ತಿರಾವ್ ಶತಾಯುಷಿಗಳಾಗಿ ಅರ್ಥಪೂರ್ಣ ಬದುಕನ್ನು ಬಾಳಿ ಹೋಗಲಿಲ್ಲವೇ? ಅಂತೆಯೇ ಶಿವರಾಮ ಕಾರಂತರೂ ಕೂಡ. ದೇವರನ್ನು ಕಂಡವರು ಯಾರೂ ಇಲ್ಲ. ಬುದ್ಧನ ಸಾಕ್ಷಾತ್ಕಾರದ ಸ್ವರೂಪ ಬುದ್ಧ ಚರಿತೆಯನ್ನು ಅರಿತವರಿಗೆ ಗೊತ್ತು.

ಶಿವರಾಮ ಕಾರಂತರ ಮೂಕಜ್ಜಿಯ ಪ್ರಕಾರ ನಂಬಿದರೆ ದೇವರು ಇದ್ದಾನೆ, ಇಲ್ಲದಿದ್ದರೆ ಇಲ್ಲ! ಚಾರ‍್ಲಿ ಚಾಪ್ಲಿನ್ ಅವರ ನುಡಿಯನ್ನು ಇಲ್ಲಿ ನೆನೆಸಿಕೊಳ್ಳಬೇಕು. ಅವರ ಪ್ರಕಾರ `ಚಂದ್ರನನ್ನು ನೋಡಿದರೆ ದೇವರ ಸೌಂದರ್ಯವನ್ನು ನೋಡಿದಂತೆ. ಸೂರ್ಯನನ್ನು ನೋಡಿದರೆ ದೇವರ ಶಕ್ತಿಯನ್ನು ನೋಡಿದಂತೆ. ಕನ್ನಡಿಯನ್ನು ನೋಡಿದರೆ ದೇವರ ಶ್ರೇಷ್ಠ ಸೃಷ್ಟಿಯನ್ನು ನೋಡಿದಂತೆ ಎಂದರು.

ಮುಂದೆ ನಮ್ಮ ಮಾತು ಸಾಹಿತ್ಯ ಸಂಗೀತ, ಕಲೆ, ಮಾಧ್ಯಮದ ಕಡೆ ಹೊರಳಿತು. ಅಲ್ಲಿನ ಸೋಲು ಗೆಲುವುಗಳ ಬಗ್ಗೆ ಮಾತು ಹೊರಳಿಕೊಂಡಿತು.

ಓದು ಎಂಬುದು ವ್ಯಾಪಾರವಲ್ಲ, ಅದೊಂದು ಸಂಸ್ಕೃತಿ ಎಂದು ಬಿಂಬಿಸಲು ನಾವು ಸೋತಿದ್ದೇವೆಯಾ ?

ಒಂದು ನಾಡಿನ ಸಾಂಸ್ಕೃತಿಕ ಕ್ಷೇತ್ರ ಅಲ್ಲಿನ ಸಾಹಿತ್ಯ, ಸಂಗೀತ, ನಾಟಕ, ಕಲೆ, ಮಾಧ್ಯಮಗಳು ಇತ್ಯಾದಿ ಹತ್ತು ಹಲವು ಅಂಶಗಳನ್ನು ಒಳಗೊಂಡಿರುತ್ತದೆ. ಈ ವಿವಿಧ ಕ್ಷೇತ್ರಗಳು ಜನರನ್ನು ಎಷ್ಟು ಪ್ರಮಾಣದಲ್ಲಿ ಪ್ರಭಾವಿಸಿವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಬರಹಗಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ವರ್ಧಿಸಿದ್ದು, ಓದುಗರ ಸಂಖ್ಯೆ ವಿಲೋಮಾನುಪಾತದಲ್ಲಿ ಇಳಿದಂತೆ ಕಾಣುತ್ತದೆ. ಓದು ಎಂಬುದು ಒಂದು ಸಂಸ್ಕೃತಿ ಎಂದು ತಿಳಿಹೇಳಲು ಬರಹಗಾರರಾದಿಯಾಗಿ ನಾವೆಲ್ಲರೂ ವಿಫಲರಾಗಿದ್ದೇವೆ.

ಪುಸ್ತಕ ಪ್ರಕಟಣೆ ಒಂದು ಬಿಸಿನೆಸ್ ಆಗಿದೆ. ಸಂಗೀತಜ್ಞರು ಸಾಕಷ್ಟಿದ್ದಾರೆ. ಸಂಗೀತವನ್ನು ಆಸ್ವಾದಿಸುವ ನಿರ್ದಿಷ್ಟ ವಲಯವಿದೆ. ಕೆಲವು ದೃಷ್ಟಾಂತಗಳನ್ನು ಬಿಟ್ಟರೆ, ರಂಗಭೂಮಿ ಕೆಲವೇ ಕೆಲವು ರೆಪರ್ಟರಿಗಳಿಗೆ ಮಾತ್ರ ಸೀಮಿತವಾಗಿದೆ. ಹಳ್ಳಿಗಳ, ಶಾಲಾಕಾಲೇಜುಗಳ ರಂಗಭೂಮಿ ಮಾಯವಾಗಿದೆ. ಕರಾವಳಿ ಮತ್ತು ಮಲೆನಾಡ ಪ್ರದೇಶಗಳಲ್ಲಿ ಯಕ್ಷಗಾನ ಕ್ರಿಯಾಶೀಲವಾಗಿದೆ. ಉತ್ತರ ಕರ್ನಾಟಕದ ದೊಡ್ಡಾಟ,ಬಯಲಾಟದ ಸ್ಥಿತಿಯ ಅರಿವು ನನಗಿಲ್ಲ.

ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳು ಸಾಕಷ್ಟು ಬೆಳೆದಿದ್ದು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ. ಬಹಳಷ್ಟು ಪತ್ರಿಕೆಗಳು/ವಾಹಿನಿಗಳು ರಾಜಕೀಯ ಪಕ್ಷಗಳ ಮುಖವಾಣಿಗಳಾಗಿವೆ. ಹತ್ತು ಹಲವು ಪತ್ರಿಕೆಗಳ,ಚಾನೆಲ್‌ಗಳ ನಡುವೆ ತೂಕದ (Balanced) ಪತ್ರಿಕೆ, ಚಾನೆಲ್ ಯಾವುದು ಎಂಬುದನ್ನು ಪ್ರಜ್ಞಾವಂತ ವಾಚಕ, ನೋಡುಗ ತಾನೇ ನಿರ್ಧರಿಸಿಕೊಳ್ಳುವುದು ಸೂಕ್ತ.

ಸರ್ ,ಮತ್ತೊಂದು ಸಂಗತಿ; ಇದನ್ನು ಚರ್ಚಿಸದೇ ಹೋದರೆ ಎನೋ ಬಿಟ್ಟಂತೆ ಆದೀತು., ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ಹೇಳಿ ಸ್ವಲ್ಪ ಎಂದು ತಮಾಷೆಯಿಂದ ಕಣ್ಣು ಮಿಟುಕಿಸಿದೆ……

ಎಲ್ಲಿ ಹಣ/ಚುನಾವಣೆ ಇರುವುದಿಲ್ಲವೋ ಅಲ್ಲಿ ಸಾಮಾನ್ಯವಾಗಿ ರಾಜಕಾರಣ ಕ್ರಿಯಾಶೀಲವಾಗಿರದು. ಒಂದು ಕಾಲದಲ್ಲಿ ಸಾಹಿತ್ಯದ ಕೆಲಸಗಳಿಗೆ ಸರಕಾರಗಳ ನೆರವು ಇರಲಿಲ್ಲ. ಎಂದಿಗೆ ಸಾಹಿತ್ಯ ಸಮ್ಮೇಳನಗಳ ಸಂಘಟನೆಗೆ ಸರಕಾರದ ನೆರವು ಒದಗಿ ಬಂತೋ ಅಲ್ಲಿಂದ ಸಾಹಿತ್ಯ ವಲಯಕ್ಕೆ ರಂಗು ಬಂತು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳು ಆರಂಭಗೊಂಡವು. ಸಾಹಿತ್ಯ ವಲಯ ವಿಭಜಿತವಾಯಿತು. ಅಂದೇ ಸಾಹಿತ್ಯ ವಲಯದಲ್ಲಿ ರಾಜಕಾರಣ ಪ್ರವೇಶಿಸಿತು. ಸಾಹಿತ್ಯ ಸಂಘಗಳ ಅಧ್ಯಕ್ಷ ಸ್ಥಾನಕ್ಕೆ ಎಂಥವ ಅಭ್ಯರ್ಥಿಯಾಗಬೇಕು ಎಂಬುದಕ್ಕೆ ನಿರ್ದಿಷ್ಟ ಮಾನದಂಡಗಳಿಲ್ಲ. ನನ್ನ ಅಭಿಪ್ರಾಯದಲ್ಲಿ, ಮೊದಲನೆಯದಾಗಿ, ಆ ಅಭ್ಯರ್ಥಿಗೆ ಸಾಹಿತ್ಯದಲ್ಲಿ ಆಸಕ್ತಿ ಇರತಕ್ಕದ್ದು. ಎರಡನೆಯದು, ಆತನಿಗೆ ಸಾಹಿತ್ಯದ ಆಳ ಅಗಲಗಳ ಸ್ಥೂಲ ಪರಿಚಯ ಇರಬೇಕು. ಮೂರನೆಯದು, ಆತ ಉತ್ತಮ ಸಂಘಟಕನಾಗಿರಬೇಕು, ನಾಲ್ಕನೆಯದು, ಆತ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರಬೇಕು. ಇವುಗಳಲ್ಲಿ ಕನಿಷ್ಟ ಎರಡು ಗುಣಗಳಿದ್ದರೆ ಸಾಕು.

ಇರಲೇ ಬೇಕಾದ ಇನ್ನೊಂದು ಗುಣವಿದೆ. ಅದು ಪ್ರಾಮಾಣಿಕತೆ. ಈ ನಡುವೆ ಯಾವ ಜಂಜಡಗಳೂ ಇಲ್ಲದೆ ಕೇವಲ ಸಾಹಿತ್ಯಕ್ಕಾಗಿ ಕೆಲಸ ಮಾಡುವ ವೇದಿಕೆಗಳೂ ಇವೆ ಎಂಬುದು ಸಮಾಧಾನಕರ ಸಂಗತಿ. ಇನ್ನು ತಾತ್ವಿಕ ನೆಲೆಯಲ್ಲಿ ಎಡ-ಬಲ ಪಂಥಗಳು ಕ್ರಿಯಾಶೀಲವಾಗಿವೆ. ಈ ನಡುವೆ ಡಾ. ಗಿರಡ್ಡಿ ಗೋವಿಂದರಾಜ್ ಮತ್ತು ಅವರ ಗೆಳೆಯರು ಹುಟ್ಟುಹಾಕಿದ ಮಧ್ಯಮ ಮಾರ್ಗೀಯರ ಗುಂಪು ಕೂಡ ಅಸ್ತಿತ್ವದಲ್ಲಿದೆ.

ರಾಜಕಾರಣವನ್ನು ಬದಿಗಿಟ್ಟು ಹೇಳುವುದಾದರೆ, ದೇಶದಲ್ಲಿ ನೆಮ್ಮದಿ ನೆಲೆಸಬೇಕು. `ಸರ್ವೇ ಜನಾಃ ಸುಖಿನೋ ಭವಂತು’ ಎಂಬುದು ಆರ್ಷೇಯವಾಣಿಯ ಆಶಯ ಇದೇ ಅಲ್ಲವೇ?. ನಮ್ಮ ದೇಶದ ಜನಪದರ ಜಾತಿ ಮತ, ಪಂಥ, ಧರ್ಮ, ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳು ವಿಭಿನ್ನವಾಗಿವೆ. ಮತಭೇದಗಳು ಇವೆ, ನಿಜ. ಆದರೆ, ಅದು ಸಹಬಾಳ್ವೆಗೆ ಅಡ್ಡಿಯಾಗದಿರಲಿ. ಬಹುತ್ವ ನಮ್ಮ ಪರಂಪರೆಯೇ ಆಗಿದೆ. ಅದು ನಮ್ಮ ಶಕ್ತಿ ಕೂಡ. ‘ವಸುದೈವ ಕುಟುಂಬಕಮ್’ ಎಂದು ಸಾರುವ ನಾವು ನಮ್ಮ ದೇಶದಲ್ಲಿ ಕೂಡಿ ಬಾಳಲಾರೆವೇ? ದೇಶ ಕಟ್ಟುವಲ್ಲಿ ಏಕತೆ ಇರಲಿ. ಆದರೆ, ನಮ್ಮ ಜೀವನ ವಿಧಾನವೇ ಆಗಿರುವ ವಿವಿಧತೆ ನಿರಂತರವಾಗಿರಲಿ ಎಂದರು.

ಅಂತೂ ಮಧ್ಯಮ ಮಾರ್ಗೀಯ ಗುಂಪು ಎನ್ನುವುದನ್ನು ಚಾಲ್ತಿಗೆ ತರಲು ಹಬ್ಬು ಸಹಾ ಕೈ ಜೋಡಿಸಿದ್ದು ಸ್ಪಷ್ಟವಾಗಿತ್ತು. ಅವರ ಮಾತಾಡಿದ್ದನ್ನು ಮೆಲುಕು ಹಾಕುತ್ತಾ ಅವರನ್ನು ಕಾರವಾರದಿಂದ ಅಂಕೋಲೆಗೆ ಬೀಳ್ಕೊಟ್ಟೆ.

‍ಲೇಖಕರು avadhi

May 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: