ಜಿ ಎನ್ ನಾಗರಾಜ್ ಅಂಕಣ: London Bridge is falling, ಮದಗದ ಕೆರೆ breaking- ಎರಡಕ್ಕೂ ಏನು ಸಂಬಂಧ! 

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

London bridge is falling down
falling down, falling down,
London bridge is falling down
My fair lady

Build it up with lime and stones
Lime and stones, lime and stones
Build it up with lime and stones
My fair lady

Lime and stones will not stay
Will not stay, will not stay
Lime and stones will not stay
My fair lady

Build it up with wood and clay
Woods and clay, woods and clay
Build it up with woods and clay
My fair lady

Woods and clay will wash away, wash away, wash away,
Woods and clay will wash away
My fair lady.

Build it with iron and steel,
Iron and steel, iron and steel
Build it up with iron and steel
My fair lady

Iron bars will bend and break
Bend and break, bend and break
Iron bars will bend and break

ಹೀಗೇ ಸಾಗುವ ಈ ಜನಪ್ರಿಯ ಶಿಶುಪ್ರಾಸವನ್ನು ಬಹಳ ಜನ ಕೇಳಿರಬಹುದು. ಈ ಹಾಡಿನ ತಿರುಳು ಈ ಸೇತುವೆಯನ್ನು ನೀವು‌ ಎಂತಹ ಗಟ್ಟಿವಸ್ತುಗಳಿಂದ ಕಟ್ಟಿದರೂ ಸೇತುವೆ ನಿಲ್ಲುವುದಿಲ್ಲ, ಬಿದ್ದು ಹೋಗುತ್ತದೆ ಎಂದು ಹೇಳುತ್ತದೆ.

ಈ ಹಾಡು ಕರ್ನಾಟಕದ “ಮಾಯದಂತಾ ಮಳೆ ಬಂತಣ್ಣಾ ಮದಗದಾ ಕೆರೆಗೆ” ಎಂಬ ಪ್ರಸಿದ್ಧ ಜನಪದಗೀತೆಯನ್ನು ನೆನಪಿಗೆ ತರುತ್ತದೆ. ಅದರ ಈ ಸಾಲುಗಳ ಜೊತೆಗೆ ಲಂಡನ್ ಬ್ರಿಡ್ಜ್ ಗೀತೆಯನ್ನು ಹೋಲಿಸೋಣ:
ಮಾಯದಂತಾ ಮಳೆ ಬಂತಣ್ಣ ಮದಗಾದ ಕೆರೆಗೆ,

ಮಾಯದಂತಾ ಮಳೆ ಬಂತಣ್ಣಾ ಮದಗಾದ ಕೆರೆಗೆ
ಆರು ಸಾವಿರ ವಡ್ಡರ ಕರೆಸಿ,

ಮೂರು ಸಾವಿರ ಗುದ್ದಲಿ ತರಿಸಿ,

ಸಾಲು‌ಸಾಲಿಗೂ ಮಣ್ಣನು ಹಾಕಿಸಯ್ಯೋ
ನಾ ನಿಲ್ಲುವಳಲ್ಲ.
ಮಾಯದಂತಾ ಮಳೆ ಬಂತಣ್ಣಾ ಮದಗಾದ ಕೆರೆಗೆ

ಆರು ಸಾವಿರ ಕುರಿಗಳಾ ತರಿಸಿ
ಮೂರು ಸಾವಿರ ಕುಡುಗೋಲು ತರಿಸಿ
ಕಲ್ಲಿ ಕಲ್ಲಿಗೂ ರೈತವ ಬಿಡಿಸಯ್ಯೋ
ನಾ ನಿಲ್ಲುವಳಲ್ಲ.
ಮಾಯದಂತಾ ಮಳೆ ಬಂತಣ್ಣಾ ಮದಗಾದ ಕೆರೆಗೆ

ಒಂದು ಬಂಡೀಲಿ ವೀಳೆದಡಿಕೆ
ಒಂದು ಬಂಡೀಲಿ ಚಿಗಳಿ ತಮಟ
ಮೂಲೆ ಮೂಲೆಗೂ ಗಂಗಮ್ನ ಮಾಡಿಸಯ್ಯೋ
ನಾ ನಿಲ್ಲುವಳಲ್ಲ.

ಈ ಗೀತೆಯ ತಿರುಳೂ ಕೂಡ, ನೀವು ಎಂತಹಾ ಕಟ್ಟೆ ಕಟ್ಟಿದರೂ, ಎಂತಹಾ ಪೂಜೆ ಮಾಡಿದರೂ  ʻನಾ ನಿಲ್ಲುವಳಲ್ಲʼ ಎಂಬುದೇ ಆಗಿದೆ.

ಈ ಎರಡೂ ಕಟ್ಟೋಣಗಳು, ಈ ಎರಡೂ ಕೂಡಾ ನಿಲ್ಲುವುದಿಲ್ಲ. ಬ್ರಿಡ್ಜ್ ಬಿದ್ದು ಹೋಗುತ್ತದೆ, ಕೆರೆ ಒಡೆದು ಹೋಗುತ್ತದೆ ಎಂದು ಬಹಳ ಒತ್ತು ನೀಡಿ ಸೂಚಿಸುತ್ತಿವೆ.

ಈ ಎರಡೂ ಗೀತೆಗಳ ಬಗೆಗಿನ ಸಾಮ್ಯತೆ ಇಷ್ಟಕ್ಕೇ ನಿಲ್ಲುವುದಿಲ್ಲ. ಈ ಎರಡೂ ಕೂಡ ಈ ಕಟ್ಟೋಣಗಳು ಭದ್ರವಾಗಿ ನಿಲ್ಲುವುದಕ್ಕೆ ಮತ್ತೇನೋ ಮುಖ್ಯವಾದುದು ಬೇಕು ಎಂದು‌ ಸೂಚಿಸುತ್ತಿವೆ.‌ ಏನದು?

ಮದಗದ ಕೆರೆಗೆ ಸಂಬಂಧಿಸಿದ ಗೀತೆಗಳು, ಕಥನಗಳಿಂದ ಮದಗದ ಕೆರೆಯ ಗಂಗಮ್ಮ ಬಯಸಿದ್ದೇನು ಎಂಬುದು ತಿಳಿದಿದೆ. ಅಂತಿಂತಾ ಪೂಜೆ, ಪ್ರಾಣಿ ಬಲಿಗಳಲ್ಲ, ನರಬಲಿ. ಈಗ ದೇವಿಯಾಗಿ ಪೂಜಿಸಲ್ಪಡುತ್ತಿರುವ ಮದಗದ ಕೆಂಚಮ್ಮನ ಆಹುತಿ, ಗಂಗಮ್ಮ ಮೊರೆದು ಉಕ್ಕುಕ್ಕಿ ಬರುತ್ತಿರುವುದನ್ನು ಊರ ಜನರಿಗೆ ಸುದ್ದಿ ಮುಟ್ಟಿಸಿದ ಬೆಸ್ತರ ಹುಡುಗ, ನೀರಗಂಟಿಯ ಬಲಿ.

ಕರ್ನಾಟಕದಲ್ಲಿ ಇಂತಹ ʻಕೆರೆಗೆ ಹಾರʼಗಳು ಹಲವಾರು ನಡೆದಿವೆ. ಅವುಗಳಲ್ಲಿ ಕೆಲವು ಜಾನಪದ ಸಾಹಿತ್ಯ, ದೇವತೆಗಳ ಐತಿಹ್ಯ, ಸ್ಥಳಪುರಾಣ, ಜನರ ನಂಬಿಕೆ, ಆಚರಣೆಗಳಲ್ಲಿ ಉಳಿದುಕೊಂಡು ಇಂದಿನವರೆಗೂ ಹರಿದು ಬಂದಿವೆ.

ಅದೇ ಸಮಯದಲ್ಲಿ ಈ  ರೀತಿ ಬಲಿ ಕೊಡುವ ಪ್ರವೃತ್ತಿ ಭಾರತಕ್ಕೆ ಮಾತ್ರ ಮೀಸಲಾಗಿಲ್ಲ.

London bridge ಬೀಳದೆ ಗಟ್ಟಿಯಾಗಿ ನಿಲ್ಲಲು ಏನು ಬಯಸಿತು? ಅದೂ ಕೂಡ ನರಬಲಿಯನ್ನು ಬಯಸಿತು. ಮೇಲೆ ಉಲ್ಲೇಖಿಸಿದ ಶಿಶುಗೀತೆಯ ಬೇರೆ ಬೇರೆ ರೂಪಗಳಲ್ಲಿ ಇದು ವ್ಯಕ್ತವಾಗುತ್ತದೆ ಎಂದು ಈ ಗೀತೆಯ ವಿವಿಧ ರೂಪಗಳ ಸಂಗ್ರಾಹಕಿ ನಿರೂಪಿಸಿದ್ದಾಳೆ.
ಈ ಶಿಶುಗೀತೆ ಕೇವಲ ಒಂದು ಶಿಶುಗೀತೆಯಲ್ಲ. ಇದೊಂದು ಮಕ್ಕಳ ಆಟ. ಗೇಮ್‌ನ ಭಾಗವಾಗಿದೆ. ಈ ಆಟದಲ್ಲಿ ಎರಡು ಮಕ್ಕಳು ಸೇತುವೆಯನ್ನು‌ ನಿಲ್ಲಿಸಲು ಬಳಸಿದ ಒಂದು ಕಮಾನನ್ನು ಪ್ರತಿನಿಧಿಸುವಂತೆ ಇಬ್ಬರು ಮಕ್ಕಳು ಕೈಗಳನ್ನು ಮೇಲಕ್ಕೆತ್ತಿ ಜೋಡಿಸಿ ನಿಲ್ಲುತ್ತಾರೆ. ಆಗ ಇತರ ಮಕ್ಕಳು ಒಬ್ಬರ ಹಿಂದೆ ಒಬ್ಬರು ಈ ಕಮಾನಿನ ಕೆಳಗೆ ತೂರಿ ಬರುತ್ತಾರೆ. ಆಗ ಸೇತುವೆಯ ಕಮಾನಾಗಿದ್ದ ಮಕ್ಕಳು ಕೆಳಗೆ ತೂರಿ ಬರುತ್ತಿದ್ದವರನ್ನು ಹಿಡಿದು ಹಾಕುತ್ತಾರೆ. ಇದು ಇಂತಹ ನರಬಲಿಯ ಸಂಕೇತ ಎಂದು ಹೇಳಲಾಗಿದೆ.

ಈ ಗೀತೆಯ ಹಿಂದೆ ಇಂತಹ ಅಮಾನಷ ನರಬಲಿಯ ಕ್ರೌರ್ಯ ಅಡಗಿದೆ ಎಂಬುದನ್ನು ಮರೆ ಮಾಡಲು ಬಹಳ ಪ್ರಯತ್ನ ಮಾಡಲಾಗಿದೆ. ಆದರೂ ಈ ಸಂಗತಿಯ ವಾಸ್ತವವನ್ನು ಮುಚ್ಚಿ‌ ಹಾಕಲು‌ ಸಾಧ್ಯವಾಗಿಲ್ಲ.

ನರಬಲಿಯಂತಹ ಕ್ರೌರ್ಯ ಕೇವಲ ಅತ್ಯಂತ ಹಿಂದುಳಿದ ಚಿಂತನೆಯ ಭಾರತದ್ದು ಎಂದು ಯುರೋಪಿಯನ್ನರು ದೂಷಿಸುತ್ತಿದ್ದರು. ನರಬಲಿ ಎಂಬುದು ಅತ್ಯಂತ ಅಮಾನುಷ ಕ್ರೌರ್ಯ ಎಂಬುದರಲ್ಲಿ ಅನುಮಾನವಿಲ್ಲ. ಈ ಅಮಾನುಷ ನರಬಲಿಗಳು ಯುರೋಪಿನಲ್ಲೂ ವ್ಯಾಪಕವಾಗಿದ್ದವು. ಭಾರತದಲ್ಲಿ ಕೆರೆ, ಕೋಟೆ, ಅರಮನೆ ಇತ್ಯಾದಿಗಳ ಕಟ್ಟೋಣಕ್ಕೆ ಮೊದಲು ಅಥವಾ ಕೊನೆಯಲ್ಲಿ ಪ್ರಾಣಿಬಲಿಯ ಜೊತೆಗೆ ನರಬಲಿಯನ್ನು ಕೊಡುವ ಹಲವು ಪ್ರಕರಣಗಳಿದ್ದಂತೆ ಯುರೋಪಿನಲ್ಲೂ ನೀರಿನ ಮೂಲಗಳು, ಕೋಟೆ, ರಾಜ, ಮನ್ನೆಯರ ಅರಮನೆಗಳು, ಚರ್ಚ್‌ಗಳ ಕಟ್ಟೋಣಗಳಿಗೆ ನರಬಲಿಯನ್ನು ಕೊಡಲಾಗುತ್ತಿತ್ತು.

ಇಂಗ್ಲೆಂಡ್‌ನಲ್ಲಿ ಮಾತ್ರ ಅಲ್ಲದೆ ನೆದರ್‌ಲ್ಯಾಂಡ್, ಜರ್ಮನಿ, ಡೆನ್ಮಾರ್ಕ್, ಸ್ವೀಡನ್, ಗಾಲ್ ಪ್ರದೇಶಗಳಲ್ಲಿ ಗಣನೀಯವಾಗಿತ್ತು.
ಸಮುದ್ರದ ಮಟ್ಟಕ್ಕಿಂತ ತಳಕ್ಕಿರುವ ನೆದರ್‌ಲ್ಯಾಂಡ್ಸ್‌ನಲ್ಲಿ ಪಟ್ಟಣದೊಳಕ್ಕೆ ಸಮುದ್ರದ ನೀರು ನುಗ್ಗದಂತೆ ರಕ್ಷಿಸಲು ಉದ್ದಕ್ಕೂ ಗೋಡೆಯೊಂದನ್ನು ನಿರ್ಮಿಸಲಾಗಿತ್ತು. ಒಂದು ದಿನ ಒಬ್ಬ ಬಾಲಕ ಬೆಳಗ್ಗೆ ಬೆಳಗ್ಗೆ ಈ ಗೋಡೆಯತ್ತ ಹೋಗಿದ್ದಾಗ ಗೋಡೆ ಒಂದು ಸ್ಥಳದಲ್ಲಿ ಬಿರುಕು ಬಿಟ್ಟಿತ್ತಂತೆ. ಪಟ್ಟಣದ ಒಳಗೆ ಹೋಗಿ ಮುಖ್ಯಸ್ಥರಿಗೆ ಸುದ್ದಿ ಮುಟ್ಟಿಸುವಷ್ಟರಲ್ಲಿ ಈ ಬಿರುಕು‌ ದೊಡ್ಡದಾಗಿ ಪಟ್ಟಣದ ಜನರೆಲ್ಲ ಬಲಿಯಾಗುವಂತಾಗುತ್ತದೆ ಎಂದು ಯೋಚಿಸಿದ ಬಾಲಕ ತನ್ನ ತಲೆಯನ್ನೇ ಆ ಬಿರುಕಿಗೆ ಅಡ್ಡವಾಗಿಟ್ಟು ನೀರು ನುಗ್ಗುತ್ತಿದ್ದುದನ್ನು ನಿಲ್ಲಿಸಿದನೆಂಬುದು ಒಂದು ಬಲಿಯ ಐತಿಹ್ಯ.

ಜರ್ಮನಿಯಲ್ಲಿ ಒಂದು ಸರೋವರ. ಅದರಲ್ಲಿ ನೀರು ಮೇರೆ ಮೀರಿ ಹೆಚ್ಚಿ ಮನೆಗಳನ್ನು,  ಜನರ ಜೀವವನ್ನು ನಾಶ ಮಾಡುವುದನ್ನು ತಪ್ಪಿಸಲು ಇಂತಹ ಸಂದರ್ಭದಲ್ಲಿ ಪ್ರತಿ ವರ್ಷವೂ ಒಬ್ಬ ಕನ್ಯಾಮಣಿಯನ್ನು ಬಲಿ ಕೊಡಲಾಗುತ್ತಿತ್ತು.

ಇದೇ ದೇಶದ ಮತ್ತೊಂದು ಪ್ರದೇಶದಲ್ಲಿ‌ ಇಂತಹ ಸರೋವರದ ಹೊರ ಗೋಡೆಯಲ್ಲಿ ಕನ್ಯೆಯರನ್ನು ಜೀವಂತ ಹುಗಿದು ಗೋಡೆಯನ್ನು ಕಟ್ಟಲಾಗುತ್ತಿತ್ತು.

ಹೌನ್ ಎಂಬ ಯುರೋಪಿನ ನದಿಗೆ ಅಡ್ಡಗಟ್ಟೆ ಕಟ್ಟಿದ ಕೋಡಿ ಪದೇಪದೆ ಒಡೆದು ಹೋಗುತ್ತಿತ್ತು. ಅದನ್ನು ತಪ್ಪಿಸಲು ಈ ಅಡ್ಡಗಟ್ಟೆಯ ಮಾಲೀಕನಿಗೆ ಒಬ್ಬ ಕುಡುಕ ಹುಡುಗನೊಬ್ಬನನ್ನು ಜೀವಂತ ಹೂತುಬಿಟ್ಟರೆ ಕೋಡಿ ಗಟ್ಟಿಯಾಗಿ ನಿಲ್ಲುತ್ತದೆಂದು ಸಲಹೆ ನೀಡಿದ್ದೇ ಅಲ್ಲದೆ  ಒಬ್ಬ ಹುಡುಗನನ್ನು ಕದ್ದು ತಂದು ಕೊಟ್ಟ.  ಇಬ್ಬರೂ ಸೇರಿ ಕೋಡಿಯ ಅಡಿಪಾಯದ ಕಲ್ಲಿನ ಅಡಿಯಲ್ಲಿ ಬಾಲಕನನ್ನು ಜೀವಂತ ಹೂತು ಹಾಕಿದರಂತೆ.

ಆದರೆ ಅಡ್ಡಗಟ್ಟೆಯ ಮಾಲೀಕನಿಗೆ ತನ್ನ ಪಾಪಪ್ರಜ್ಞೆಯಿಂದ ಹುಚ್ಚು ಹಿಡಿದು ಸತ್ತ. ಸತ್ತ ನಂತರ ಅವನ ಪ್ರೇತ ಆ ನದಿಯ ಬಳಿಯೇ ಸುತ್ತಾಡುತ್ತಾ ಪ್ರತಿವರ್ಷ ಒಬ್ಬನಾದರೂ ಕುಡುಕನನ್ನು ನದಿಗೆ ಬಲಿ‌ ಕೊಡುತ್ತದಂತೆ.

ಕೋಟೆ, ಅರಮನೆ, ಚರ್ಚ್‌ಗಳಿಗೂ ಕೂಡಾ, ಅವುಗಳನ್ನು‌ ಕಟ್ಟಿದ ನೆಲದೊಳಗಿನ ದುಷ್ಟಶಕ್ತಿಗಳಿಗೆ ಬಲಿಯಾಗಿ ಬಹಳಷ್ಟು ಬಾರಿ ಅನಾಥ ಅಥವಾ ವಿವಾಹಕ್ಕೆ ಮೊದಲೇ ಹುಟ್ಟಿದ ಬಾಲಕರನ್ನು ಬಲಿ ಕೊಡುವುದು ಸಾಮಾನ್ಯವಾಗಿತ್ತು ಎಂದು ಮಧ್ಯಕಾಲೀನ ಯುರೋಪಿನ ಇತಿಹಾಸ ಹೇಳುತ್ತದೆ.

ಕೆರೆಗಳಿಗೆ ಹೆಣ್ಣಿನ ಬಲಿಯ ಕ್ರೌರ್ಯ, ಅದರಲ್ಲೂ ಕೇವಲ ಸೊಸೆಯರದೇ!

ನಮ್ಮ ಇತಿಹಾಸಕಾರರು ಬಹಳಷ್ಟು ಶಾಸನಗಳು, ಕೆಲವು ಸಾಹಿತ್ಯಿಕ ಆಕರಗಳಿಗೆ ಸೀಮಿತವಾಗಿ ಬರೆದದ್ದೂ ಬರೆದದ್ದೇ! ಅದೇ ಶಾಸನಗಳಿರುವ ನೆಲದ ಮೇಲೇನಿದೆ ಎಂದು ಕೂಡಾ ಕಣ್ಣುಬಿಟ್ಟು ನೋಡುವುದಿಲ್ಲ. ಕರ್ನಾಟಕದ ಕೆರೆಗಳ ಬಗ್ಗೆ ಪ್ರಸಿದ್ಧ ಇತಿಹಾಸ ತಜ್ಞರು ಒಂದು ಬಹು ಉಲ್ಲೇಖಿತವಾದ ಅಧ್ಯಯನ ಒಂದಿದೆ. Tank irrigation in Karnataka ಅಂತ. ಅದರಲ್ಲಿ ಕೆರೆಗಳನ್ನು ಆ ರಾಜ ಕಟ್ಟಿಸಿದ, ಈ ರಾಜ ಕಟ್ಟಿಸಿದ ಎಂದು ಹೇಳುವುದೇ ಮುಖ್ಯವಾಗಿದೆ. ಆ ಕೆರೆಗಳಿಗಾಗಿ ಎಷ್ಟೊಂದು ಹೆಣ್ಣುಗಳ ಬಲಿಯಾಗಿದೆ! ಎಷ್ಟೊಂದು ದಲಿತರ, ದಮನಿತರ ಬಲಿಯಾಗಿದೆ! ಈ ಬಗ್ಗೆ ಒಂದು ಸಣ್ಣ ಉಲ್ಲೇಖವೂ ಇಲ್ಲ. ಕನ್ನಡ ವಿಶ್ವವಿದ್ಯಾಲಯ ಹೊರತಂದಿರುವ ಪ್ರಬಂಧಗಳ ಸಂಕಲನದಲ್ಲೂ ಕೂಡಾ ಈ ಬಲಿಗಳ ಬಗ್ಗೆ ಒಂದು ಪ್ರಬಂಧ ಕೂಡಾ ಇಲ್ಲ. ಇತಿಹಾಸ ರಚನಾಶಾಸ್ತ್ರದಲ್ಲಿ ಸಮಗ್ರ ಆಕರಗಳ ಪರಿಶೀಲನೆ ಅಗತ್ಯ. ಎಲ್ಲಕ್ಕಿಂತ ಮಿಗಿಲಾಗಿ ನೆಲದ ಮೇಲೇನಿದೆ ಎಂಬುದರ ಅಧ್ಯಯನ ದೃಷ್ಟಿಕೋನದ ಮಾತು ಅಲ್ಲಲ್ಲಿ ಕೇಳಿ‌ ಬರುತ್ತಿದ್ದರೂ, ಅವುಗಳ ಅನ್ವಯ ಮಾತ್ರ ಹೆಚ್ಚೇನೂ ಕಾಣುತ್ತಿಲ್ಲ.

ನನ್ನ ಗಮನಕ್ಕೆ ಬಾರದ, ಕೆರೆ ಬಲಿಗಳ ಬಗ್ಗೆಯೇ ನಡೆದ ವಿಶೇಷ ಅಧ್ಯಯನ, ಸಂಶೋಧನೆ  ಗೊತ್ತಿದ್ದವರು ದಯವಿಟ್ಟು ತಿಳಿಸಿ.
ಈ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿದವರು ಕನ್ನಡ ಜಾನಪದ ವಿದ್ವಾಂಸರು. ಅದನ್ನು ಆಧರಿಸಿ ಸಾಮಾಜಿಕ ಮಾನವಶಾಸ್ತ್ರೀಯ ಅಧ್ಯಯನ,  ಮೌಲಿಕ ವಿಶ್ಲೇಷಣೆ ಮಾಡಿದವರು ಈಶಾ ಶಾ ಎಂಬ ಬ್ರಿಟನ್ನಿನ ವಿವಿಯೊಂದರ ಸಂಶೋಧಕಿ.

ಈಗ ಸದ್ಯಕ್ಕೆ ಜಾನಪದ ವಿದ್ವಾಂಸರು ಸಂಗ್ರಹಿಸಿದ ಲಾವಣಿಗಳ ಮೂಲಕ ಹತ್ತಾರು ಮಹಿಳೆಯರು ಕೆರೆಗಳಿಗೆ ಆʻಹಾರʼವಾಗಿದ್ದಾರೆ, ಬಲಿಯಾಗಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಕನ್ನಡ ಭಾಷಿಕರ ಹೆಮ್ಮೆಯನ್ನು ಸಾರುವ ʻಕನ್ನಡ ಬಾವುಟʼವೆಂಬ ಕನ್ನಡ ಸಾಹಿತ್ಯ ಪರಿಷತ್ತಿನ  ಪ್ರಕಟಣೆಯಲ್ಲಿ ಕೆರೆಗೆ ಹಾರ ಎಂಬ ಕೋಲಾಟದ ಪದ ಸೇರ್ಪಡೆಯಾಗಿತ್ತು. ಈ ಹಾಡು ಮುಂದೆ ಹಲವಾರು ಪಠ್ಯಪುಸ್ತಕಗಳಲ್ಲಿ ಸೇರಿ ಜನಪ್ರಿಯವಾಗಿದೆ. ನಂತರ ಪ್ರಸಿದ್ಧ ಜಾನಪದ ಸಂಶೋಧಕ  ಜೀಶಂಪ, ಟಿ.ಎಸ್. ರಾಜಪ್ಪ, ಎಚ್.ಎಲ್ ನಾಗೇಗೌಡ ಮೊದಲಾದವರು ಕೆರೆಗೆ ಬಲಿಯಾದ ಜಾನಪದ ಹಾಡುಗಳನ್ನು ಸಂಗ್ರಹಿಸಿದ್ದಾರೆ. ಕನ್ನೀರಾಂಬೆಯ ಕಥೆ ಎಂಬ ಸಾಂಗತ್ಯ ಕಾವ್ಯವೂ ಎಂ. ಧ್ರುವನಾರಾಯಣರಿಂದ ಸಂಗ್ರಹಿತವಾಗಿದೆ.

ಈ ಹಾಡು, ಲಾವಣಿ, ಕಾವ್ಯಗಳಲ್ಲಿ ಸಂಗ್ರಹವಾಗಿರುವ ಕೆರೆಗೆ ಬಲಿ ಪ್ರಕರಣಗಳಲ್ಲಿ ಹಲವರ ಹೆಸರು ಹೊನ್ನಮ್ಮ ಎಂದಿದೆ. ಕೆರೆ ಹೊನ್ನಮ್ಮ, ಅಣಜಿ ಹೊನ್ನಮ್ಮ, ಬಾಳಗಂಚಿ ಹೊನ್ನಮ್ಮ, ಕುಣಿಗಲ್ ಕೆರೆಯ ಹೊನ್ನಾಲದೇವಿ ಹೀಗೆ. ಮದಗದ ಕೆಂಚಮ್ಮ, ಹುಳಿಯಾರು ಕೆಂಚಮ್ಮ ಎಂಬ ಇಬ್ಬರು, ಕೆರೆಗೆ ಹಾರದ ಭಾಗೀರಥಿ ಎಂಬ ಮಹಿಳೆಯರ ಹೆಸರು ಈ ಹಾಡುಗಳಲ್ಲಿ ನಮೂದಾಗಿದೆ. ಹೊಸಪೇಟೆ ಬಳಿಯ ಡಣಾಯಕನ ಒಂದು ಕೆರೆಗೆ ಬಲಿ‌ ನೀಡಲಾದವರು ವಿವಿಧ ಜಾತಿಗಳ 12 ಜನ. ಅದರಲ್ಲಿ ಮಡಿವಾಳ, ಮಾದಿಗ, ಗೊಲ್ಲ ಸೂಲದವರ, ಲಿಂಗಾಯತರ, ಬ್ರಾಹ್ಮಣರ ಕನ್ಯೆಯೂ ಸೇರಿದಂತೆ 8  ಜನ ಮಹಿಳೆಯರು. ಅದರಲ್ಲಿ ಬ್ರಾಹ್ಮಣ ಕನ್ಯೆಯನ್ನು ಕನ್ನೇರಮ್ಮ ಎಂದು ಪೂಜಿಸಲಾಗುತ್ತಿದೆ. ಸಾಂಗತ್ಯ ಕಾವ್ಯದಲ್ಲಿ ಉಳಿದ ಮಹಿಳೆಯರಲ್ಲಿ  ಉಡುಚಲಮ್ಮ, ಮಡಿವಾಳರ ಚೆನ್ನಮ್ಮ, ಸೂಲದ ರಾಯಮ್ಮ ಎಂಬ ಹೆಸರುಗಳು ನಮೂದಾಗಿ ಉಳಿದವರ ಹೆಸರು ಅಸ್ಪಷ್ಟವಾಗಿದೆ. 8 ಜನ ಮಹಿಳೆಯರ ಜೊತೆಗೆ ಬಾಲಕರನ್ನೂ‌ ಬಲಿ‌ ‌ನೀಡಲಾಗಿದೆ.

ಇವೆಲ್ಲವೂ ಬಹಳ ವೇದನೆ ಉಂಟು ಮಾಡುವ ಪ್ರಸಂಗಗಳು. ಆದರೆ ಈ ಪ್ರಸಂಗ ನೋಡಿ. ಕೃಷ್ಣದೇವರಾಯನ ಕಾಲದಲ್ಲಿ ಹಂಪಿಗೆ, ಸುತ್ತಲಿನ ಕೃಷಿಗೆ ನೀರಿನ ಅನುಕೂಲಕ್ಕಾಗಿ ಕಟ್ಟಿಸಿದ ರಾಯರ ಕೆರೆಗೆ 60 ಜನರನ್ನು ಬಲಿ ಕೊಡಲಾಯಿತೆಂದು ಪ್ರಸಿದ್ಧ ವಿಜಯನಗರಕಾಲದ ಪ್ರವಾಸಿಗಳಾದ ಡೊಮಿಂಗೋ ಪಾಯೆಸ್ ಮತ್ತು ನ್ಯೂನಿಜ್ ವರದಿ ಮಾಡಿದ್ದಾರೆ. ಇವರಲ್ಲಿ ಎಷ್ಟು ಜನ ಮಹಿಳೆಯರು ಎಂಬುದು ತಿಳಿಯದು.

ಹೀಗೆ ಹಾಡು, ಕತೆಗಳ ಮೂಲಕ ದಾಖಲೆಯಾದವರು ಬಹಳ ಸ್ವಲ್ಪ ಮಂದಿ ಮಹಿಳೆಯರು ಮಾತ್ರ. ಜೀಶಂಪ ಹೇಳುವಂತೆ “ಕೆರೆಗೆ ಬಲಿಯಾದವರ ಕತೆಗಳು ಕರ್ನಾಟಕದ ಪ್ರಸಿದ್ಧ ಕೆರೆಗಳಿಗೆಲ್ಲ ಸಂಬಂಧಪಟ್ಟಂತೆ ಲಭ್ಯವಾಗುತ್ತವೆ. ದೊಡ್ಡ ಕೆರೆಯೊಂದು ಕಾಣಿಸಿದಾಗ ಅದರ ಮೇಲೊಂದು ಸಣ್ಷ ಮಣ್ಣುಗುಡಿಯೂ ಇರುತ್ತದೆ. ಸಣ್ಣ ಕಲ್ಲೊಂದು ಇಟ್ಟು ಹೊನ್ನಮ್ಮನ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಕೆರೆಗೆ ಬಲಿಯಾಗುವ ಹೆಂಗಸು ಸಾಮಾನ್ಯವಾಗಿ ಹೊನ್ನಮ್ಮ ಎಂದೇ ಇರುತ್ತದೆ”.

ಹೆಣ್ಣೇ ಬಲಿಯಾಗಬೇಕೇ?

ಕೆರೆ ಬಲಿಯ ಬಗೆಗಿನ ಜಾನಪದ  ಕಥನಗಳು ಮತ್ತು ಇತರ ಮೂಲಗಳು ಹೆಣ್ಣು ಮಾತ್ರ ಬಲಿಯಾಗಬೇಕು ಎಂಬುದು ಸಾರ್ವತ್ರಿಕ  ಸತ್ಯ, ಧಾರ್ಮಿಕ ಕಟ್ಟಪ್ಪಣೆ ಎಂದು ಸಾರುವುದಿಲ್ಲ. ಉದಾಹರಣೆಗೆ ಈ ಕೆರೆ ಹೊನ್ನಮ್ಮ ಲಾವಣಿಯ ಸಾಲುಗಳನ್ನು ಗಮನಿಸಿ:
ಕೆರೆಯ ಏರಿಯ ಮೇಲೆ ಒಂದು ದನಿ –
ಎನಂತ ಕೂಗುತೈತೆ
ನಿನ್ನ ಎಡದ ಕಿರುಬೆಟ್ಟು ನನಗೆ
ಆಹುತಿಯ ಕೊಡೋ
ಅದಕ್ಕೆ ಕೆರೆ ಕಟ್ಟಿಸಿದ ಮಳತೆ ಮಲ್ಲೇಗೌಡ ಹೇಳುತ್ತಾನೆ –
ನನ್ನ ಕಿರುಬೆಟ್ಟ ಕೊಟ್ಟರೆ
ನನ್ನ ಮೋಟ ಎನ್ನುತಾರೆ
ನಾ ಸರಕಾರ ಸಭೆಯ
ತಿರುಗೋನು ನಾನು
ಆ ದನಿ – ನಿನ್ನ ಹೆಂಡತಿಯಾನೆ
ನನಗೆ ಆಹುತಿಯಾನೆ ಕೊಡೋ
‌ಗೌಡ – ನನ್ನ ಹೆಂಡತಿಯ ಕೊಟ್ಟರೆ
ಮನೇಲಿ ಯಜಮಾನಿಕೆ ಮಾಡೋರಿಲ್ಲ
ದನಿ – ನಿನ್ನ ಕಿರಿಯ ಮಗನ ನನಗೆ
ಆಹುತಿಯಾ ಕೊಡೋ
ಗೌಡ – ಕಿರಿಯ ಮಗನ ಕೊಟ್ಟರೆ
ನನ್ನ ಆರಂಭ ಮಾಡೋರಿಲ್ಲ
ದನಿ – ನಿನ್ನ ಹಿರಿಯ ಮಗನ
ನನಗೆ ಆಹುತಿಯ ಕೊಡೋ
ಗೌಡ – ನನ್ನ ಹಿರಿಯ ಮಗನ ಕೊಟ್ಟರೆ
ಘಟ್ಟ ತಿರುಗೋರಿಲ್ಲ
ದನಿ – ನಿನ್ನ ಹಿರಿಯ ಸೊಸೆಯ
ನನಗೆ ಆಹುತಿಯ ಕೊಡೋ

ಇಲ್ಲಿಗೆ ಆ ಅಗೋಚರ ದನಿ ಹಾಗೂ ಗೌಡನ ನಡುವೆ ನಡೆಯುತ್ತಿದ್ದ ಚೌಕಾಶಿ ಮುಗಿಯುತ್ತದೆ. ಗೌಡ ಮನೆಗೆ ಬಂದು ಹಿರಿಯ ಸೊಸೆಯ ಮುಂದೆ ಸೋಗು ಹಾಕುತ್ತಾನೆ. ಹಿರಿಯ ಸೊಸೆ, ಒಂದು ಮಗುವಿನ ತಾಯಿ ಹೊನ್ನಮ್ಮನನ್ನು ಒಪ್ಪಿಸುತ್ತಾನೆ.

ಬಲಿ ಕೇಳುವ ಶಕ್ತಿ ಅಥವಾ ದೈವದ ಬಳಿಯ ಈ  ಚೌಕಾಶಿಯಲ್ಲಿ ಗೌಡ ಕಿರುಬೆರಳನ್ನು ಕತ್ತರಿಸಿಕೊಳ್ಳಲಾರದೆ ಒಂದು ಜೀವವನ್ನೇ ಬಲಿ ಕೊಡುವ ಕ್ರೌರ್ಯವನ್ನು ನೋಡುತ್ತೇವೆ. ನಂತರ ಗಂಡು ಮಕ್ಕಳನ್ನು ಕೊಡಲು ಒಪ್ಪದಿರುವುದು, ತನ್ನ ಹೆಂಡತಿಯನ್ನು ಕೊಡಲು ಒಪ್ಪದಿರುವುದು ಪರರ ಮನೆಯಿಂದ ಬಂದ ಸೊಸೆಯನ್ನು ಬಲಿ ಕೊಡಲು ಸಿದ್ಧನಾಗುವುದು ಧಾರ್ಮಿಕ ಕಟ್ಟಳೆ, ದೈವದ ಇಚ್ಛೆಯ ಹೇರಿಕೆ ಇಲ್ಲಿಲ್ಲ. ಕೇವಲ ಪುರುಷಾಧಿಪತ್ಯದ ದಬ್ಬಾಳಿಕೆಯ ಮೌಲ್ಯಗಳ ವಿಜೃಂಭಣೆ ಎಂಬುದು ಸ್ಪಷ್ಟವಾಗಿದೆ.

ಅಣಜಿ ಹೊನ್ನಮ್ಮನ ಲಾವಣಿಯಲ್ಲಿ ಕಿರುಬೆರಳ ಪ್ರಸಂಗವಾಗಲಿ ಗೌಡನ ಬಲಿ ಕೇಳುವ ಪ್ರಸಂಗವಾಗಲಿ ಇಲ್ಲ. ಆದರೆ ಚೌಕಾಶಿ ಅವನ ಹೆಂಡತಿ, ಮಗನ ಬಗ್ಗೆ ನಡೆದು ಕೊನೆಗೆ ಸೊಸೆಯನ್ನು ಕೊಡುವುದು ಎಂದು ತೀರ್ಮಾನಿಸುತ್ತಾನೆ.

ಇಂತಹ ಪ್ರಸಂಗಗಳಲ್ಲಿ ಗೌಡ ಒಬ್ಬನೇ ಏಕಾಂಗಿಯಾಗಿ ತೀರ್ಮಾನ ಕೈಗೊಳ್ಳುವುದೇ ಹೊರತು, ಯಾರೊಡನೆಯೂ ಬಲಿಯ ಬೇರೆ ಸಾಧ್ಯತೆಗಳ ನಡುವೆ ನಡೆದ ಚೌಕಾಶಿಯ ಬಗ್ಗೆ ಸೊಲ್ಲೇ ಎತ್ತುವುದಿಲ್ಲ. ಸ್ವತಃ ಬಲಿಯಾಗುವ ಸೊಸೆಯ ಗಂಡನಿಗೂ ತಿಳಿಸುವುದಿಲ್ಲ. ಸಾಮಾನ್ಯವಾಗಿ ಅವನನ್ನು ಮನೆಯಿಂದ ದೂರ ಸಾಗಿ ಹಾಕಿಬಿಡುತ್ತಾನೆ. ಅವನ ಗೈರುಹಾಜರಿಯಲ್ಲಿ ಸೊಸೆಗೆ ದೈವ ಅವಳ ಬಲಿಯನ್ನೇ ಬಯಸಿದೆ ಎಂದು‌ ಸುಳ್ಳು ಹೇಳಿ, ಬಹಳ ದುಃಖ ಪಡುವವನಂತೆ ಸೋಗು‌ ಹಾಕಿ ಒಪ್ಪಿಸುತ್ತಾನೆ.

ಗೌಡನ ಕುಟುಂಬದವರನ್ನೇ ಬಲಿ ಕೊಡಬೇಕು ಎಂಬ ಷರತ್ತೂ ಕೂಡಾ ಹಲವೆಡೆ ಇಲ್ಲ. ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಮಹಿಳೆಯರ ಬಲಿಯ ಮಾಹಿತಿ ನೀಡಿದ ಸಂಶೋಧಕಿ ಅನಿತಾರವರು ಅವುಗಳಲ್ಲಿ ಬಹುಭಾಗ ದಲಿತ ಮಹಿಳೆಯರನ್ನೇ ಕೊಡಲಾಗಿದೆ ಎಂದು ಹೇಳಿದರು. ಚಿತ್ರದುರ್ಗದ ಜಿಲ್ಲೆಯ ಎರಡು ಕೆರೆಯ ಉದಾಹರಣೆ ನೀಡಿದರು. ಮೇಲೆ ಉಲ್ಲೇಖಿಸಲಾದ ಡಣಾಯಕನ ಕೆರೆಯ ಪ್ರಸಂಗದಲ್ಲಿಯೂ ಬಲಿಯಾದವರು ಕಟ್ಟಿಸಿದವರ ಕುಟುಂಬದ ಹೊರಗಿನವರೇ. ಇಂತಹ ಮಹಿಳೆಯರ ಕುಟುಂಬದವರ ಮೇಲೆ ಒತ್ತಡ, ಹಣ ಕೊಟ್ಟು ಕೊಳ್ಳುವ ಮೂಲಕ ಮಹಿಳೆಯರನ್ನು ಬಲಿ ನೀಡಲಾಗಿದೆ.

ಬಲಿಯ ವಿಧಾನ:

ಈ ಹೆಣ್ಣುಗಳ ಬಲಿಯ ವಿಧಾನ ಹೇಗೆ ಎನ್ನುವಾಗ ಬಹಳಷ್ಟು ಕಥನಗಳು ಬಲಿಯಾಗುವ ಮಹಿಳೆ ಕೆರೆಯ ಮೆಟ್ಟಲುಗಳನ್ನು ಇಳಿಯುತ್ತಾ ಹೋದಂತೆ ನೀರಿಲ್ಲದ ಕೆರೆಯಲ್ಲಿ ನೀರು ಉಕ್ಕುಕ್ಕಿ ಬಂದು ಆ ಮಹಿಳೆಯನ್ನು ಸೆಳೆದುಕೊಂಡಿತು ಎನ್ನಲಾಗುತ್ತದೆ. ಇದು ಬಲಿಯ ಕ್ರೌರ್ಯವನ್ನು ಮರೆ ಮಾಡಲು ಮಾಡಿದ ತಂತ್ರವಷ್ಟೇ. ಗೌಡ, ಜೋಯಿಸ ಮತ್ತಿತರ ಕೆರೆಯ ಸ್ಥಾಪಕರು ಕುರಿ, ಕೋಳಿ ಬಲಿ ಕೊಟ್ಟಂತೆ ಇವರ ತಲೆಯನ್ನೂ ಕಡಿಸಿದರು ಎಂಬ ಕ್ರೌರ್ಯದಿಂದ ಬಚಾವು ಮಾಡಲು, ಜನರ ಮನಸ್ಸಿನಲ್ಲಿ ಉದಾರತೆಯ, ತ್ಯಾಗದ ಚಿತ್ರಣ ಮೂಡಿಸಲು ಮಾಡಿದ ತಂತ್ರವಷ್ಟೇ.

ಕೆಲವು ಕಥನಗಳು ಬಲಿಯಾದ ಮಹಿಳೆ ಸಂತೋಷದಿಂದಲೇ ಪ್ರಾಣತ್ಯಾಗಕ್ಕೆ ಒಪ್ಪಿದಳು ಎಂದು ಚಿತ್ರಿಸಿದರೆ, ಹಲವು ಬಾರಿ ಕುಟುಂಬ ಹಾಗೂ ಸಾಮಾಜಿಕ ಒತ್ತಡಕ್ಕೆ ಬಲಿಯಾಗಿ ಪ್ರಾಣ ತೆತ್ತಿದ್ದಾರೆ. ಕೆಲವು ಪ್ರಸಂಗಗಳಲ್ಲಿ ಬಲಿ ನೀಡುವ ತೀರ್ಮಾನ ಮಾಡಿದವರನ್ನು ಶಪಿಸಿದ ಪ್ರಸಂಗಗಳೂ‌ ದಾಖಲಾಗಿವೆ.

ಇದು ಜಾನಪದ ಕಾವ್ಯದ ಮೂಲಕವೇ ಸ್ಪಷ್ಟವಾಗುತ್ತದೆ. ಕನ್ನೀರಾಂಬೆಯ ಕಥನದಲ್ಲಿ ಬ್ರಾಹ್ಮಣ ಕನ್ಯೆಯ ಬಲಿಯನ್ನು ಈ ರೀತಿ ಮರೆಮಾಚುವ ಯತ್ನ ಕಂಡರೂ, ಉಳಿದ ಏಳು ಮಹಿಳೆಯರನ್ನು ಕೆರೆಯ ತೂಬು, ಕೋಡಿ ಮುಂತಾದವಕ್ಕೆ ಆಹುತಿ ನೀಡಲಾಯಿತು ಎಂದೇ ಹೇಳಲಾಗಿದೆ.

ಮಹಿಳೆಯರನ್ನು ಮಾತ್ರವಲ್ಲದೆ ಪುರುಷರನ್ನೂ ಕೆರೆಗಳಿಗೆ ಬಲಿ ಕೊಡಲಾಗಿದೆ. ಬಹುವಾಗಿ ಇಂತಹ ಪುರುಷರು ನೀರಗಂಟಿಗಳಾಗಿದ್ದಾರೆ. ಮಹಿಳೆಯರು ಹೆಚ್ಚಾಗಿ ಕೆರೆಯಲ್ಲಿ ನೀರು ಶೇಖರವಾಗದ ಸಂದರ್ಭಗಳಲ್ಲಿ ಬಲಿಯಾದರೆ, ನೀರಗಂಟಿಗಳನ್ಮು ಮಳೆ ವಿಪರೀತವಾಗಿ ಕೆರೆಯ ಏರಿ ಒಡೆಯುವಂತಹ ಪ್ರಸಂಗಗಳಲ್ಲಿ ಬಲಿ ನೀಡಲಾಗಿದೆ. ಹೀಗೆ ಕೆರೆ ಒಡೆಯುವ ಅಪಾಯದಲ್ಲಿದೆ ಎಂದು ಊರ ಮುಖಂಡರಿಗೆ ಸುದ್ದಿ ಮುಟ್ಟಿಸಿ ತನ್ನ ಕರ್ತವ್ಯ ಪಾಲಿಸಲು ಹೋದ ನೀರಗಂಟಿಯನ್ನೇ ಕತ್ತರಿಸಿ ತುಂಡು ತುಂಡು ಮಾಡಿ ಕೆರೆಗೆ ಬಲಿ ನೀಡಿದ ನಾಲ್ಕಾರು ಉದಾಹರಣೆಗಳಿವೆ. ಇದನ್ನೂ ಕೂಡಾ ಉದಾತ್ತೀಕರಿಸಿ ತಾನು ಸುದ್ದಿ ನೀಡಿ ಮರಳಿ ಬರುವವರೆಗೂ ಕೆರೆಗೆ ಹಾನಿ ಮಾಡಬಾರದೆಂದು ನೀರಗಂಟಿ ಗಂಗವ್ವನಿಂದ ಮಾತು ಪಡೆದು ಬಂದಿದ್ದ; ಅವನ ಪ್ರಾಣ ತೆಗೆಯಲು ತಾನೇ ಒತ್ತಾಯ ಮಾಡಿದ ಅಥವಾ ಅವನ ಮನವೊಲಿಸಿ ಬಲಿ ನೀಡಲಾಯಿತು ಎಂಬ ಕಥನಗಳನ್ನು ಕಾಣುತ್ತೇವೆ.

ಅದೇ ರೀತಿ ಕೆರೆಯನ್ನು ಕಟ್ಟಿದ ವಡ್ಡರ ಮಹಿಳೆಯರನ್ನು ಅಥವಾ ಪುರುಷರನ್ನು ಬಲಿ ಕೊಡಲಾಗುತ್ತಿತ್ತು. ಆದ್ದರಿಂದ ಅವರು ಕೆರೆ ಕಟ್ಟಿದ ಕೂಲಿಯನ್ನು ಬೇಗ ಪಡೆದು ರಾತ್ರೋರಾತ್ರಿ ಗುಡಿಸಲುಗಳನ್ನು ಕಿತ್ತು ಪರಾರಿಯಾಗುತ್ತಿದ್ದರೆಂಬ ಸೂಚನೆಯೂ ಈ ಲಾವಣಿಗಳಲ್ಲಿ ಸಿಗುತ್ತದೆ.

ಬಲಿಯಾದರೂ ಏಕೆ ಬೇಕು?:

ಇದು ಈ ಬಲಿ ಪದ್ಧತಿಯ ಅಡಿಪಾಯದಲ್ಲಿಯೇ ಇರುವ ಪ್ರಶ್ನೆ. ಕೇವಲ ಕೆರೆಗಳು ಮಾತ್ರವಲ್ಲ, ಎಲ್ಲ ಕಟ್ಟೋಣಗಳಿಗೆ ನೀಡುವ ಬಲಿಯ ಪ್ರಶ್ನೆಯೂ ಆಗುತ್ತದೆ. ಕೇವಲ ನರಬಲಿ ಅಷ್ಟೇ ಅಲ್ಲ ಪ್ರಾಣಿಬಲಿಯ ಬಗೆಗೂ ಈ ಪ್ರಶ್ನೆ ವ್ಯಾಪಿಸುತ್ತದೆ.

ಸಾಮಾನ್ಯವಾಗಿ  ಸಾವಿರಾರು ವರ್ಷಗಳ  ಮೂಢನಂಬಿಕೆ, ಯಜ್ಞಯಾಗಾದಿಗಳಲ್ಲಿ ಪ್ರಾಣಿ ಬಲಿ ನರಬಲಿ ನೀಡುವ ಪದ್ಧತಿಯಿಂದ, ಗ್ರಾಮದೇವತೆಗಳಿಗೆ ಬಲಿ ನೀಡುವ ಪದ್ಧತಿಯಿಂದ ಎಂಬ ಉತ್ತರಗಳು ದೊರೆಯುತ್ತವೆ.

ಆದರೆ ಇದು ತಂತ್ರಜ್ಞಾನದ ಪ್ರಶ್ನೆ. ತಂತ್ರಜ್ಞಾನದ ಮಿತಿಯ ಪ್ರಶ್ನೆ.  ಕೆರೆಯ ವಿಷಯಕ್ಕೆ ಸೀಮಿತಗೊಳಿಸಿ ಹೇಳುವುದಾದರೆ ಒಂದು ಪ್ರದೇಶದಲ್ಲಿ ಎಷ್ಟು ಪ್ರಮಾಣದ ನೀರು ಬರಬಹುದು, ಬೇರೆ ಬೇರೆ ವರ್ಷಗಳಲ್ಲಿ ಮಳೆಯ ಏರುಪೇರು ಹೇಗಿರುತ್ತದೆ? ಅದನ್ನು ಕಂಡುಕೊಳ್ಳುವುದು ಹೇಗೆ? ಮಳೆಯ ಆಧಾರದ ಮೇಲೆ ನಿರ್ದಿಷ್ಟ ಜಾಗದಲ್ಲಿ ಎಷ್ಟು ನೀರು ಸಂಗ್ರಹವಾಗಲು ಸಾಧ್ಯ? ಆ ನೀರಿನ ಪ್ರಮಾಣಕ್ಕೆ ತಕ್ಕಂತೆ ಏರಿಯ ದಪ್ಪ, ಎತ್ತರ, ಕೋಡಿಯ ಜಾಗ, ಅದರ ಅಗಲ, ಇತ್ಯಾದಿಗಳನ್ನು ಸರಿಯಾಗಿ ಲೆಕ್ಕಿಸಲು ಅಗತ್ಯವಾದ ಮಾಹಿತಿ ಇಲ್ಲದುದೇ ಮುಖ್ಯ ಕಾರಣ. ಅಂತಹ ಮಾಹಿತಿ ಪಡೆಯಲು ಅವಶ್ಯವಾದ ವಿಧಾನಗಳನ್ನು ಇಲ್ಲದುದು ಕಾರಣ.

ವಡ್ಡರು ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕೆರೆಗಳನ್ನು ಕಟ್ಟಬಲ್ಲ, ಸಾವಿರ ವರ್ಷಗಳಿಗಿಂತ ಹೆಚ್ಚುಕಾಲ ಗಟ್ಟಿಯಾಗಿ ಉಳಿದು ಉಪಯುಕ್ತವಾಗಬಲ್ಲ ತಂತ್ರಜ್ಞಾನ ರೂಪಿಸುವಲ್ಲಿ ಯಶಸ್ವಿಯಾಗಿದ್ದರೂ ಕೂಡಾ ಆ ತಂತ್ರಜ್ಞಾನ ಭಾರತದ ಸಾಮಾಜಿಕ ರಚನೆಯ ನಿರ್ಬಂಧ ಹಾಗೂ ಕಾಲಘಟ್ಟದ ಅರಿವಿನ ಮಿತಿಯ ಚೌಕಟ್ಟಿನ ಒಳಗೇ ಕೆಲಸ ಮಾಡಬೇಕಾಗಿತ್ತು.

ಭಾರತದಲ್ಲಿ ಕ್ರಿಸ್ತಶಕದ ಆರಂಭದ ವೇಳೆಗಾಗಲೇ ಮಳೆಯ ಪ್ರಮಾಣವನ್ನು ಅಳೆಯಲು ಅಗಲ ಬಾಯ ಮಡಕೆಯ ವಿಧಾನವನ್ನು ಕಂಡುಕೊಳ್ಳಲಾಗಿತ್ತು. ಕೌಟಲ್ಯನ ಅರ್ಥಶಾಸ್ತ್ರದಲ್ಲಿ ಈ ವಿಧಾನವನ್ನು ವಿವರಿಸಲಾಗಿದೆ. ಇದರ ಉಪಯೋಗದಿಂದ ಒಂದು ಪ್ರದೇಶದಲ್ಲಿ ಆಗುವ ಮಳೆ ಎಷ್ಟು ದ್ರೋಣ ಎಂಬ ಅಳತೆ, ವಿವಿಧ ಪ್ರದೇಶಗಳಲ್ಲಿ ಎಷ್ಟು ದ್ರೋಣ ಮಳೆಯಾಗುತ್ತದೆ ಎಂದು ವರ್ಗೀಕರಿಸುವ  ವಿಧಾನ ಅಸ್ತಿತ್ವಕ್ಕೆ ಬಂದಿತ್ತು.

ಆದರೆ ದಕ್ಷಿಣ ಭಾರತದಲ್ಲಿ ಲಕ್ಷಾಂತರ ಕೆರೆ ಕಟ್ಟಿದ ವಡ್ಡರಿಗೆ, ವಿದ್ಯೆಯ ಸಾಧ್ಯತೆಯನ್ನೇ ನುಂಗಿ ಹಾಕಿ ಹೀನ‌ಸ್ಥಿತಿಗೆ ದೂಡಲ್ಪಟ್ಟಿದ್ದ ವಡ್ಡರಿಗೆ ಅರ್ಥಶಾಸ್ತ್ರದಿಂದ ಅಥವಾ ಬೇರಾವುದೇ ಮೂಲದಿಂದ ಈ ತಿಳುವಳಿಕೆ ವರ್ಗಾವಣೆ ಹೇಗೆ?
ಈ ಶಾಸ್ತ್ರಗಳನ್ನು ಓದಬಲ್ಲವರು ಇವರೊಡನೆ ಮಾತಾದರೂ ಆಡುತ್ತಿದ್ದರೆ?
ಇದು ಭಾರತದ ವಿಶಿಷ್ಟ ಪ್ರಶ್ನೆಯಾದರೆ, ವಿಶ್ವಾದ್ಯಂತ ನರಬಲಿಗಳ ಮೂಲಕ ಕಟ್ಟೋಣಗಳನ್ನು ಭದ್ರವಾಗಿಸುವ ನಂಬಿಕೆಗೆ ತಂತ್ರಜ್ಞಾನದ ಬೆಳವಣಿಗೆಯ‌ ಆ ಹಂತದಲ್ಲಿನ ಮಿತಿಗಳೇ ಕಾರಣ.

ಇಂತಹ ಅರಿವಿನ ಮಿತಿಗಳು, ತಂತ್ರಜ್ಞಾನದ ಬೆಳವಣಿಗೆಯ ಮಿತಿಗಳು ಎಲ್ಲ ಆಯಾಮಗಳಲ್ಲಿಯೂ ಕಾಣದ ಶಕ್ತಿಗಳ ಕೈವಾಡ ಎಂಬ ನಂಬಿಕೆಗೆ, ಆ ಶಕ್ತಿಗಳನ್ನು ತೃಪ್ತಿಪಡಿಸುವ ಪ್ರಯತ್ನಗಳಿಗೆ ಕೈ‌ಹಾಕುವಂತೆ ಮಾಡಿವೆ.

‍ಲೇಖಕರು admin j

July 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: