ಸದಾಶಿವ್ ಸೊರಟೂರು ಕಥಾ ಅಂಕಣ -ಹೆಸರು ಬೇಡ, ಊರು ಬೇಡ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

48

ಮೇಲ್ ಬಂದು ಇನ್ಬಾಕ್ಸಿನ ಬಾಗಿಲು ಬಡಿದು ಆಗಲೇ ಎರಡು ದಿನಗಳು ಕಳೆದಿದ್ದವು. ಇನ್ನೇನು ಸಂಜೆಗೆ ತಪ್ಪಿದರೆ ಬೆಳಗ್ಗೆ ಸಂಪಾದಕರಿಂದ ಕರೆ ಬರಬಹುದು. ಏನ್ ನಿಮ್ಮದು ಈ ನಡುವೆ ತಡವಾಗುತ್ತಿದೆಯಲ್ಲಾ? ಅನ್ನುತ್ತಲೇ ಮಾತನಾಡಲು ಆರಂಭಿಸಿ ಒಂದರ್ಧ ಗಂಟೆ ಮಾತನಾಡದೆ ಅವರು ಫೋನ್ ಇಡುವುದಿಲ್ಲ. ಅಂತಹ ಬಿಡುವಿಲ್ಲದ ಕೆಲಸದ ನಡುವೆಯೂ ಒಂದರ್ಧ ಗಂಟೆ ಅನಾಯಾಸವಾಗಿ ಹರಟಿ ಫೋನಿಡುತ್ತಾರೆ. ಅದನ್ನು ಬರೆಯುವುದು ಸಂಪಾದಕರೇ ಅಂತ ಈಗಾಗಲೇ ಓದುಗರು ನಂಬಿದ್ದಾರೆ. ಆದರೆ ಪ್ರತಿಪತ್ರವನ್ನು ಓದಿ ಅದಕ್ಕೊಂದು ಜವಾಬ್ದಾರಿಯುತ ಉತ್ತರ ಬರೆಯುವುದು ʻನಾನೇʼ ಆಗಿತ್ತು. ʻಆಪ್ತಮಾತುʼ ಅಂಕಣಕ್ಕೆ ಬರುತ್ತಿದ್ದ ಎಲ್ಲಾ ಪತ್ರಗಳಿಗೂ ನಾನೇ ಉತ್ತರಿಸುತ್ತಿದ್ದೆ. ಆದರೆ ಅವು ಪತ್ರಿಕೆಯಲ್ಲಿ ಸಂಪಾದಕರ ಹೆಸರಿನಲ್ಲಿ ಪ್ರಕಟವಾಗುತ್ತಿದ್ದವು. ಈ ವಿಷಯ ನನಗೆ ಮತ್ತು ಸಂಪಾದಕರಿಗೆ ಮಾತ್ರ ತಿಳಿದಿತ್ತು.

ಸಂಪಾದಕರಿಗೆ ತೀರ ಈ ವಿಷಯದಲ್ಲಿ ಒಂದು ಸಮಾಧಾನದ ಉತ್ತರ ಬರೆಯಲಿಕ್ಕೆ ಆಗುವುದಿಲ್ಲವೇ? ಎನ್ನುವ ಪ್ರಶ್ನೆಯಲ್ಲ ಅದು. ನಿರಂತರ ಬಿಡುವಿಲ್ಲದ ಕೆಲಸದಲ್ಲಿ ತುಂಬಾ ಸಮಯ ಬೇಡುವ ಈ ಪತ್ರಗಳಿಗೆ ಉತ್ತರಿಸಲು ಒಂದು ವಿಶೇಷ ಮನಸ್ಥಿತಿಯೇ ಬೇಕಾಗುತ್ತದೆ. ಇದು ಮೊದ-ಮೊದಲು ಅವರಿಗೆ ಒಂದು ಸವಾಲಾಗಿಯೇ ಕಾಡಿದ್ದರಿಂದ ನನಗೆ ಒಪ್ಪಿಸಿದ್ದರು. ಅದು ಬರೀ ಇಷ್ಟೇ ಆಗಿದ್ದರೆ ನನಗೆ ಒಪ್ಪಿಸುತ್ತಿರಲಿಲ್ಲವೇನೊ! ನಾನು ಮನಃಶಾಸ್ತ್ರದ ವಿಷಯದಲ್ಲಿ ಡಾಕ್ಟರಿಕೆ ಓದಿಕೊಂಡಿದ್ದು ಒಂದು ಕಾರಣವಿತ್ತು. ನನಗೆ ಮೇಲ್ ಬಂದು ಬೀಳುತ್ತಿದ್ದ ಪತ್ರಗಳು ಯಾರವು ಎಂದು ತಿಳಿಯುತ್ತಿರಲಿಲ್ಲ. ಖುದ್ದು ಸಂಪಾದಕರೇ ಎಲ್ಲಾ ಹೆಸರುಗಳನ್ನು ತೆಗೆದುಹಾಕಿ ಕೇವಲ ಪತ್ರಗಳನ್ನಷ್ಟೇ ಕಳುಹಿಸುತ್ತಿದ್ದರು. 

ಬಂದಿರಬಹುದಾದ ಮೇಲ್ ಬಗ್ಗೆ ಯೋಚಿಸುತ್ತಲೇ ಒಮ್ಮೆ ಕನ್ನಡಿ ನೋಡಿಕೊಂಡೆ. ತಲೆಯ ಮೇಲಿಂದ ಇಣುಕಿ ನೋಡಲು ಯಾವುದೇ ಬಿಳಿ ಕೂದಲುಗಳು ಇರಲಿಲ್ಲ.  ನೆನ್ನೆಯಷ್ಟೇ ಸೆಲೂನ್‌ಗೆ ಹೋಗಿ ಬಣ್ಣ ಬಳಿಸಿಕೊಂಡು ಬಂದು ನನ್ನ ವಯಸ್ಸನ್ನು ಮೂರ್ನಾಲ್ಕು ವರ್ಷದಷ್ಟು ಕಡಿಮೆ ಮಾಡಿಕೊಂಡಿದ್ದೆ. ಮೂವತ್ತಾರು ತುಂಬಿದರೂ ನನಗೊಬ್ಬಳು ಹೆಂಡತಿ ಇಲ್ಲ ಎಂಬುದು ನನ್ನ ಕೊರಗಿಗಿಂತ ಪದೇಪದೆ ʻಇನ್ನೂ ಎಲ್ಲೂ ಸೆಟ್ ಆಗಿಲ್ಲವೇನೋ ನಿಮಗೆ?ʼ ಅನ್ನುವವರ ಕೊರಗೆ ಹೆಚ್ಚಾಗಿತ್ತು. ನನಗೆ ಮದುವೆ ಆಗಿಲ್ಲ ಅನ್ನುವುದಕ್ಕೆ ಯಾವುದೇ ಬೇಸರಗಳಿರಲಿಲ್ಲ. ಅವರಿವರು ಕೇಳುವ ಪ್ರಶ್ನೆಗಳನ್ನೇ ನಾನು ಹೆಚ್ಚು ಎಂಜಾಯ್ ಮಾಡುತ್ತಿದ್ದೆ. 

ಕನ್ನಡಿಯಿಂದ ಕತ್ತು ಹೊರಳಿಸಿ ಕಿಟಕಿಯಾಚೆ ನೋಡಿದೆ. ಎಲ್ಲವೂ ತಮ್ಮ ತಮ್ಮ ಪಾಡಿಗಿದ್ದವು. ರಸ್ತೆಯ ಬದಿಯಲ್ಲಿ ಶಾಲಾ ಮಕ್ಕಳು ತಮಗಿಂತ ದೊಡ್ಡದಾದ ಬ್ಯಾಗುಗಳನ್ನು ಹೊತ್ತುಕೊಂಡು ಹೋಗುವುದು ನನ್ನ ಗಮನ ಸೆಳೆಯಿತು. ಮಕ್ಕಳಾಗುವುದು ಪ್ರೀತಿಯ ಫಲವಾ? ಪ್ರೀತಿ ಇರದ ಕಡೆ ಮಕ್ಕಳೇ ಆಗುವುದಿಲ್ಲವೇ? ಹೆಣ್ಣು-ಗಂಡು ಲೈಂಗಿಕತೆಯಲ್ಲಿ ತೊಡಗಿದಾಗ ಅವರ ಗಮನ ಸುಖದ ಕಡೆರೋ? ಮಕ್ಕಳ ಕಡೆಗೋ? ಸಂತಾನ ಸುಖದ ಬೈಪ್ರಾಡಕ್ಟಾ? ಅಥವಾ ಮಕ್ಕಳಿಗಾಗಿನ ಕೂಡುವಿಕೆಯಲ್ಲಿ ಸುಖವೆಂಬುದು ಬೈಪ್ರಾಡಕ್ಟಾ? ರೀನಾಳ ಇಂತಹ ಮಾತುಗಳು ನೆನಪಾಗಿ ಒಂದು ಕ್ಷಣ ಸಣ್ಣಗೆ ಬೆವೆತು ಹೋದೆ. ಕಿಟಕಿಯಿಂದ ದೃಷ್ಟಿ ಕದಲಿಸಿದೆ. ಹತ್ತಾರು ಪುಟ ಓದಿ ನಿಲ್ಲಿಸಿದ್ದ ಪುಸ್ತಕವನ್ನು ಕೈಗೆತ್ತಿಕೊಂಡೆ. ʻಹೀಗೆ ಓದಿ ಓದಿಯೇ ನಿನ್ನ ಮದುವೆ ತಡವಾಗಿರೋದು. ಹುಡುಗರು ಮದುವೆಯಂದ್ರೆ ಎಷ್ಟೊಂದು ಸಂಭ್ರಮಪಡ್ತಾರೆ. ನಿನಗೇನಾಗಿದೆಯೊ?ʼ ಅನ್ನುತ್ತಿದ್ದ ಅಮ್ಮನ ಮಾತುಗಳು ನೆನಪಾದವು

ಮುವತ್ತಾರಾದ್ರೂ ಮದುವೆಯಾಗಿಲ್ಲ ಅಂದ್ರೆ ಸಮಾಜವೊಂದು ಕಣ್ಣು ನೆಡುತ್ತದೆ ಅಂತ ಗೆಳೆಯ ಪರಮು ಕೊರೆದಿದ್ದ. ʻಐಬಿನ ಮಾತುಗಳು ಕೇಳಿಬರುತ್ತವೆ. ನಿಂಗೆ ಅದೆ ಇಲ್ಲ ಅಂದುಕೊಳ್ಳುತ್ತಾರೆ ಮಾರಾಯʼ ಅಂದಿದ್ದ. ನಾನು ʻಐಬಿಲ್ಲದವ ಅಂತ ಸಾಬೀತುಪಡಿಸಿಕೊಳ್ಳಲು ಮದುವೆಯೇ ಆಗಬೇಕಿಲ್ಲ ಪರಮುʼ ಅಂದಿದ್ದೆ. ಅವನು ನನ್ನನ್ನು ವಿಚಿತ್ರವಾಗಿ ನೋಡಿದ್ದ. ಪ್ರತಿಯೊಬ್ಬ ಹುಡುಗ ಹುಡುಗಿ ಮದುವೆಯ ಹೊಸ್ತಿಲು ತುಳಿಯುವಾಗ ತಮ್ಮ ತಮ್ಮ ತಾಕತ್ತುಗಳನ್ನು ಪರೀಕ್ಷಿಸಿಕೊಳ್ಳಬೇಕು. ಹುಡುಗನ ಆಸ್ತಿ, ಹುಡುಗಿಯ ಬಣ್ಣ, ಹೇಗೆ ನಡೆಯುತ್ತಾಳೆ? ಹುಡುಗ ಯಾಕೆ ಒಂದು ಕಾಲು ಎಳೆಯುತ್ತಾನೆ? ಅನ್ನುವುದನ್ನು ಇಂಚಿಂಚು ನೋಡುವವರು ನಾಳೆ ಮದುವೆಯಾದ ಮೇಲೆ ಇಬ್ಬರು ಪಲ್ಲಂಗದಲ್ಲಿ ಸರಿಸಮನಾಗಿ ನಿಲ್ಲುತ್ತಾರೆಯೇ ಎಂಬುದನ್ನು ಗಮನಿಸುವುದೇ ಇಲ್ಲ. ಅವೆಲ್ಲಾ ಹೊಂದಿಕೊಂಡು ಹೋಗುವ ವಿಚಾರಗಳು ಅನ್ನುತ್ತಾರೆ.

ಕಾಲು ಎಳೆಯುತ್ತಾನೆ ಅಥವಾ ಹುಡುಗಿ ಬಣ್ಣ ಕಪ್ಪು ಅನ್ನುವ ಕಾರಣಕ್ಕೆ ಸಂಸಾರಗಳು ಬಿದ್ದು ಹೋಗಿರುವ ಉದಾಹರಣೆಗಳು ತೀರಾ ಕಡಿಮೆ. ಇದೆಲ್ಲವನ್ನೂ ಪರಮವಿಗೆ ವಿವರಿಸಿ, ವಿವರಿಸಿ ಹೇಳುತ್ತಿದ್ದರೆ ಅವನು  ಗಾಬರಿಗೊಂಡವನಂತೆ ಸುಮ್ಮನೆ ಕಣ್ಣುಗಳನ್ನು ಬಿಟ್ಟುಕೊಂಡು ನೋಡುತ್ತಾ ಕೂರುತ್ತಿದ್ದ. ನನಗಾದರೂ ಇಂತಹ ಅನುಭವಗಳು ಎಲ್ಲಿ ಬರಬೇಕಿತ್ತು? ʻಆಪ್ತಮಾತುʼ ಕಾಲಂಗೆ ಬರುತ್ತಿದ್ದ ಬಹುಪಾಲು ಪ್ರಶ್ನೆಗಳು ಮದುವೆ, ಪ್ರೀತಿ, ಅನೈತಿಕ ಸಂಬಂಧಗಳದ್ದೇ ಆಗಿರುತ್ತಿದ್ದವು ಮತ್ತು ಹೆಚ್ಚೂಕಡಿಮೆ ಒಂದೇ ತೆರನಾದ ಪ್ರಶ್ನೆಗಳು ಇರುತ್ತಿದ್ದವು. ಒಂದು ಪತ್ರಕ್ಕೆ ಬರೆದ ಉತ್ತರವನ್ನೇ ಹತ್ತಾರು ಪತ್ರಗಳಿಗೂ ಅನ್ವಯಿಸಬಹುದಾಗಿತ್ತು. 

ತಿರುಗಿ ಬಂದು ಕುರ್ಚಿಯಲ್ಲಿ ಕೂತು ಮೇಲ್ ಓಪನ್ ಮಾಡತೊಡಗಿದೆ. ಒಂದಷ್ಟು ಪತ್ರಗಳಿಗೆ ಉತ್ತರಿಸಿ ಬಿಟ್ಟರೆ ಇಂದಿನ ಕೆಲಸದ ಒತ್ತಡ ಕಡಿಮೆಯಾದೀತು ಅನಿಸಿತು. ಸಂಚಿಕೆಗೆ ಹೋಗಬೇಕಾದ ನಾಲ್ಕು ಪ್ರಶ್ನೆಗಳು ಬಂದಿದ್ದವು. ಓದುತ್ತಾ ಕೂತೆ ಮತ್ತದೇ ಸಂಸಾರದ ಕುರಿತಾದ ರೋದನೆಗಳು. ಪ್ರೀತಿ, ಅನೈತಿಕತೆ, ಖಿನ್ನತೆ ಕುರಿತಾಗಿಯೇ ಇದ್ದವು.  ಆದರೆ ಕೊನೆಯ ಪತ್ರ ಮಾತ್ರ ನನ್ನ ಗಮನವನ್ನು ತೀವ್ರವಾಗಿ ಸೆಳೆಯಿತು. ಅದನ್ನು ಪದೇಪದೆ ಹತ್ತಾರು ಬಾರಿ ಓದಿಕೊಂಡೆ. 

****

ಪರಮವಿನ ಬಲವಂತಕ್ಕೆ ಅವತ್ತು ಹೋಟೆಲ್ ನಿವಾಸದಲ್ಲಿ ರೀನಾಳನ್ನು ಭೇಟಿಯಾದೆ. ಈ ಮೊದಲು ನಾನು ಆಕೆಯನ್ನು ನೋಡಿರಲಿಲ್ಲ. ನಾನು ಹೋಟೆಲ್ ನಿವಾಸದ ಸ್ಪೆಷಲ್‌ ರೂಮಿನ ಒಳಹೊಕ್ಕು ನೋಡಿದಾಗ ಒಂದು ಬದಿ ಕುಳಿತು ನನಗಾಗಿ ಕಾಯುತ್ತಿದ್ದಳು. ಪರಮು ಫೋಟೋದಲ್ಲಿ ತೋರಿಸಿದ ಮುಖ ನೆನಪಿತ್ತು. ಅವಳನ್ನು ಗುರುತಿಸಿ ʻಹಲೋ…ʼ ಹೇಳುತ್ತಾ ಮುಂದೆ ಹೋಗಿ ಕೂರಲು ನನಗೇನು ಹೆಚ್ಚು ಸಮಯ ಬೇಕಾಗಲಿಲ್ಲ. ʻಆರ್ ಯು ತರುಣ್?ʼ ಕೇಳಿದಳು ರೀನಾ. ನಾನು ʻಯೆಸ್ʼ ಅಂದೆ. ಕಡುಕಪ್ಪು ಬಣ್ಣದ ಜೀನ್ಸ್‌ಗೆ ಮೆರೂನ್ ಬಣ್ಣದ ಟಿಶರ್ಟ್ ತೊಟ್ಟಿದ್ದಳು. ಬಿಚ್ಚಿದ ಕೂದಲು ಹೆಗಲ ಮೇಲೆ ಹರಡಿಕೊಂಡಿದ್ದವು. ಹಾಲು ಬಣ್ಣದ ಮೈಬಣ್ಣ.

ಒಂಚೂರು ಉದ್ದ ಮೂಗು ಆದರೆ ಮೂಗುತಿ ಇರಲಿಲ್ಲ. ತುಟಿಯಲ್ಲಿ ನಗುವಿತ್ತು. ಹೊಸಬರನ್ನು, ಅಪರಿಚಿತರನ್ನು ಭೇಟಿ ಮಾಡುವಾಗ ಇರಬೇಕಾದ ದುಗುಡ ಮುಖದಲ್ಲಿ ಕಾಣಸಿಗಲಿಲ್ಲ. ʻತಲೆಗೆ ಎಣ್ಣೆ ಹಾಕಿಕೊಂಡು ಬಾಚಿ, ಒಂದೊಳ್ಳೆಯ ಸೀರೆ ಉಟ್ಟುಕೊಂಡು ಕಾಫಿಯೊಂದಿಗೆ ನಿಮ್ಮ ಮುಂದೆ ಬರುತ್ತೀನಿ‌ ಅಂತ ಭಾವಿಸಿದ್ರಾ?ʼ ಅವಳು ಮಾತು ಶುರುವಿಟ್ಟುಕೊಂಡಳು. ಅವಳ ಮಾತಿಗೆ ಪ್ರತಿಯಾಡದೆ ಸುಮ್ಮನೆ ನಕ್ಕೆ. 

ನನ್ನ ಬಳಿ ಒಂದು ಬಂಡಿಯಷ್ಟು ಪ್ರಶ್ನೆಗಳಿದ್ದವು. ಅವುಗಳನ್ನು ಹೇಗೆಲ್ಲಾ ಕೇಳಬಹುದು ಅಂತ ಯೋಚಿಸುವಷ್ಟರಲ್ಲಿ ಅವಳು ಮೊದಲ ಪ್ರಶ್ನೆ ಮುಂದಿಟ್ಟಳು. ʻಹೌದು ತರುಣ್, ಮದುವೆ ಯಾಕೆ ಆಗ್ಬೇಕು? ನನಗೆ ಅನಿಸುತ್ತೆ ಎಷ್ಟೋ ಜನ ಮದುವೆಯಾಗುವವರು ಈ ಪ್ರಶ್ನೆಯನ್ನು ತಮ್ಮಗಳ ಮಧ್ಯೆ ಕೇಳಿಕೊಂಡಿರುವುದಿಲ್ಲ ಅಂತʼ. ನಾನು ಒಂದು ಕ್ಷಣ ಗಲಿಬಿಲಿಗೊಂಡೆ. ಯಾಕೆಂದರೆ ನಾನು ಕೇಳಬೇಕಾಗಿದ್ದ ಮೊದಲ ಪ್ರಶ್ನೆಯೂ ಅದೇ ಆಗಿತ್ತು. ʻನನ್ನದು ಕೂಡ ಅದೇ ಪ್ರಶ್ನೆ. ನಿಮ್ಮ ಬಳಿ ಉತ್ತರ ಉಂಟಾ?ʼ ಕೇಳಿದೆ. ಇಬ್ಬರೂ ಒಂದು ಕ್ಷಣ ಸುಮ್ಮನಾದೆವು. ʻಉತ್ತರವೇ ಇಲ್ಲ ಎಂದ ಮೇಲೆ ಮದುವೆ ಎಂತಕೆ ಆಗೋದು?ʼ ಅಂದಳು.

ʻಜಗತ್ತಿನಲ್ಲಿ ಈಗಾಗಲೇ ಆಗಿರುವ ಮತ್ತು ಆಗುತ್ತಿರುವ ಮದುವೆಗಳಿಗೆ ಒಂದು ಕಾರಣ ಇದೆ ಅನಿಸುತ್ತಾ?ʼ ನಾನು ಕೇಳಿದೆ. ʻಬಹುಶಃ ಅವರೆಲ್ಲ ಉತ್ತರ ಹುಡುಕುವ ಗೋಜಿಗೆ ಹೋಗದೆ ಜೊತೆಯಾಗಿರಬಹುದು. ಎಲ್ಲಾ ಮದುವೆಗಳು ಸಕ್ಸಸ್ ಆಗಿರುವುದರ ಬಗ್ಗೆ ನಾನು ಗ್ಯಾರಂಟಿ ಕೊಡುವುದಿಲ್ಲʼ ಅಂದಳು. ʻಒಂದೇ ಮನೆಯಲ್ಲಿ ಒಟ್ಟಿಗೆ ಇದ್ದ ಕಾರಣಕ್ಕೆ ದಾಂಪತ್ಯದಲ್ಲಿ ಸುಖವಿದೆ ಅಂತ ಅರ್ಥ ಅಲ್ಲʼ ಅಂದಳು. ನಾನು ಕೇಳಿದೆ, ʻಮದುವೆ ಅನ್ನೋದು ಬಯಕೆಯಾ? ಪ್ರೀತಿಯಾ? ಅಥವಾ ಪ್ರೀತಿಯ ಬಯಕೆ, ಮಕ್ಕಳ ಬಯಕೆ, ಸುಖದ ಬಯಕೆ, ರಕ್ಷಣೆಯ ಬಯಕೆ ಎಲ್ಲವೂ ಸೇರಿ ಆದ ಒಂದು ಕಮಿಟ್ಮೆಂಟಾ?. ಇದೆಲ್ಲವೂ ಬರೀ ಸ್ವಾರ್ಥದಿಂದ ಕೂಡಿದ್ದು ಅನ್ಸಲ್ವಾ? ಅದೊಂದು ಬಯಕೆಯೇ ಅಂತಾದರೆ ಆದರೆ ಅದರ ಸುತ್ತ ಬೇಕುಗಳು ಹುಟ್ಟಿಕೊಳ್ಳುತ್ತವೆ. ಬೇಕುಗಳು ಈಡೇರದಿದ್ದಾಗ ಜಗಳಗಳು, ಮನಸ್ತಾಪಗಳು ಹುಟ್ಟಿಕೊಳ್ಳುತ್ತವೆ. ಬಿಡಲೂ ಆಗದೆ ಇರಲೂ ಆಗದೆ ನಲುಗಬೇಕಾಗುತ್ತದೆʼ. ನಾನವಳ ಮಾತು ಕತ್ತರಿಸಿ, ʻನೋಡಿ ಪ್ರೀತಿಯಲ್ಲೂ ಬಯಕೆ ಉಂಟಲ್ಲ?ʼ ಅಂತ ಕೇಳಿದೆ. ʻಪ್ರೀತಿಯಲ್ಲಿ ಪ್ರೀತಿ ಮಾತ್ರ ಇರುತ್ತೆ ಮತ್ತೇನು ಇರಲ್ಲ. ಒಂದು ಏನಾದ್ರೂ ಇದ್ದರೆ ಅದು ಪ್ರೀತಿ ಆಗಲ್ಲ ಜಸ್ಟ್ ಬಯಕೆಯಾಗುತ್ತದೆʼ ಅಂದಳು.  

ʻನೀವು ಏನೇ ಹೇಳಿ ಮದುವೆಗೆ ಪ್ರೀತಿಗಿಂತ ಒಂದು ಒಳ್ಳೆಯ ಅಡಿಪಾಯ ಬೇರೆ ಇಲ್ಲʼ ಅಂದೆ. ಅವಳು ಅದನ್ನು ಒಪ್ಪಲಿಲ್ಲ. ʻಅದಕ್ಕೆ ಪ್ರೀತಿಯ ಮೈಲೇಜ್ ಮುಖ್ಯ ಆಗುತ್ತೆ. ಎಷ್ಟೋ ಪ್ರೀತಿಗಳಿಗೆ ಮೈಲೇಜೇ ಇರುವುದಿಲ್ಲ. ಮದುವೆಯಾದ ತಕ್ಷಣ ಕುಂಟಲು ಆರಂಭಿಸುತ್ತವೆ. ಎಷ್ಟೋ ಬಾರಿ ಬಯಕೆ ಪ್ರೀತಿ ಎಂಬಂತೆ ಕಾಣಿಸುತ್ತದೆ. ಕಾಮದಂತಹ ಒಂದು ಆಕರ್ಷಣೆಯೂ ಪ್ರೀತಿ ಅನಿಸುತ್ತದೆ. ಎಲ್ಲಾ ಕಾಮದಲ್ಲೂ ಪ್ರೀತಿ ಇರಲ್ಲ ಮತ್ತು ಎಲ್ಲಾ ಪ್ರೀತಿಗಳಲ್ಲೂ ಕೂಡ ಕಾಮ ಇರಲ್ಲ. ಪ್ರೀತಿಗೆ ಕಾಮ ಕಂಪಲ್ಸರಿ ಅಲ್ಲʼ ಅಂದಳು. ನಾನು ಈ ಬಾರಿ ಉತ್ತರಿಸಲು ಸಿಗರೇಟ್ ಹಚ್ಚಲೇ ಬೇಕಾಯಿತು. ʻಎನಿ ಅಬ್ಜೆಕ್ಷನ್?ʼ ಅಂತ ಕೇಳಿದೆ. ಅವಳು ʻನೋʼ ಅಂದಳು.

ನಾನು ಸಿಗರೇಟು ಹಚ್ಚಿಕೊಂಡು ಎರಡು-ಮೂರು ಬಾರಿ ಎಳೆದೆ. ಇನ್ನೂ ಉದ್ದವಿದ್ದ ಸಿಗರೇಟನ್ನು ಟ್ರೇ‌ನಲ್ಲಿ‌ ತೂರಿ ಅವಳತ್ತ ನೋಡಿದೆ. ಅವಳು ಉತ್ತರವೆಂದು ಬಳಸಿಕೊಳ್ಳಲಿ ಎಂಬುದಾಗಿತ್ತು ನನ್ನ ನೋಟ. ಇಷ್ಟನ್ನು ಮಾತನಾಡಿದವಳಿಗೆ ಗಂಡಿನ ಒಂದು ಲುಕ್ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಲಾರದು ಅಂದುಕೊಂಡೆ.  ʻಇಫ್ ಯೂ ಡೋಂಟ್ ಮೈಂಡ್, ನಾಳೆ ಇದೇ ಹೊತ್ತಿಗೆ ಇಲ್ಲಿ ನಿಮಗೆ ಸಿಗೋಕೆ ಆಗುತ್ತಾ?ʼ ಕೇಳಿದೆ. ಅವಳು ತುಂಬಾ ಆಸಕ್ತಿಯಿಂದಲೇ ʻಶೂರ್‌ʼ ಅಂದಳು. ಇಬ್ಬರು ಒಟ್ಟಿಗೆ ಎದ್ದು ಅಲ್ಲಿಂದ ಕದಲಿದೆವು. ದಾರಿಯಲ್ಲಿ ಇಬ್ಬರ ಹೆಜ್ಜೆಗಳು ಜೊತೆಜೊತೆಯಾಗಿಯೇ ಮೂಡಿದವು. ನಾನು ಹೀಗೆ ಮೌನ ಮೆತ್ತಿಕೊಂಡು ಕೊಡುವ ಉತ್ತರದಿಂದ ತಪ್ಪಿಸಿಕೊಂಡಿದ್ದೆ. 

ದಿನವಿಡೀ ಅವಳ ಗುಂಗಲೇ ಇದ್ದೆ. ಭೇಟಿಯಲ್ಲಿ ಯಾಕೋ ಯಾವುದೂ ಕ್ಲಿಯರಿಟಿ ಇರಲಿಲ್ಲ ಅನಿಸಿತು. ಅವಳು ಮದುವೆ ಮತ್ತು ಪ್ರೀತಿ ಪದಗಳನ್ನು ಹಿಡಿದುಕೊಂಡು ದಾಳಿಗೆ ನಿಂತತಿತ್ತು. ಬಹುಶಃ ಮದುವೆ ತಡವಾಗಿರುವುದು ಅವಳನ್ನು ಆ ಪರಿ ಕಾಡಿರಬಹುದು. ನಾನು ಯಾಕೆ ಅವಳ ಮಾತಿನ ಮುಂದೆ ಮಂಕಾಗಿ ಕೂತೆ. ನನ್ನಲ್ಲೂ ಅಂತದ್ದೇ ಭಾವನೆಗಳಿದ್ದರೂ ಕನಿಷ್ಠ ಮಾತನ್ನಾದರೂ ಜೋಡಿಸಬಹುದಿತ್ತು. ನಾನು ಅವಳ ಮಾತುಗಳಲ್ಲಿ ನಾನು ಆಡಬೇಕಾಗಿದ್ದ ಮಾತುಗಳನ್ನು ಹುಡುಕಿಕೊಂಡು ಸಮಾಧಾನಪಟ್ಟುಕೊಳ್ಳುತ್ತಿದ್ದೆ ಅನಿಸಿತು. ರೀನಾ ಅವಳ ಆ ವಿಚಾರಗಳ ಸಮೇತ ನನಗೆ ಇಷ್ಟವಾಗಿಬಿಟ್ಟಿದ್ದಳು. ಇದೇ ಮೊದಲ ಬಾರಿಗೆ ಮೊದಲ ಭೇಟಿಯಲ್ಲಿ ಹುಡುಗಿಯಬ್ಬಳು ʻನನಗೆ ಇವಳಾದರೆ ಓಕೆʼ ಅನಿಸಿದ್ದು. 

ನಾವು ಎರಡು ಮೂರು ದಿನಗಳಲ್ಲಿ ಮತ್ತೆ ಮೂರ್ನಾಲ್ಕು ಬಾರಿ ಭೇಟಿಯಾದೆವು. ಅವಳು ಮುಂದಿಡುತ್ತಿದ್ದ ಮದುವೆ ಕುರಿತಾದ, ಮದುವೆ ಕುರಿತಾಗಿ ಸಣ್ಣಪುಟ್ಟ ಮಾತುಗಳು ನಡೆಯುತ್ತಲೇ ಇದ್ದವು. ಈ ಮಾತಿಗಿಂತ ಇಬ್ಬರ ನಡುವೆ ಮೌನ ಕುದುರಿತ್ತಿದೆ ಅನಿಸತೊಡಗಿತು.‌ ಇಂತಹ ಸಂಬಂಧಗಳಲ್ಲಿ ಮೌನ ಅಪಾಯಕಾರಿ. ಅದು ಸುಮ್ಮನಿದ್ದೇ ಏನೆಲ್ಲವನ್ನು ಸೃಷ್ಟಿ ಮಾಡಿಬಿಡುತ್ತದೆ. ಇಷ್ಟೆಲ್ಲ ಚರ್ಚೆಗಳಾದರೂ ನಾವು ʻವಿಲ್‌ ಯೂ ಮ್ಯಾರಿ ಮಿʼ ಅಂತ ಇಬ್ಬರೂ ಕೇಳಿಕೊಂಡಿರಲಿಲ್ಲ

**** 

ಸಂಪಾದಕರಿಂದ ಬಂದಿದ್ದ ಆ ಕೊನೆಯ ಪತ್ರ ಹೀಗಿತ್ತು. 

ಸರ್ ನನ್ನ ಹೆಸರು ಆರ್ ಅಂತ. ನನ್ನ ಪ್ರಶ್ನೆ ಮದುವೆಯದ್ದು. ಮದುವೆಯಾಗಬೇಕೋ ಬೇಡವೋ ಅನ್ನುವುದು ಎಂದೂ  ಮುಗಿಯದ ಚರ್ಚೆಯೇ ಸರಿ. ನನಗೀಗ ಮೂವತ್ತೈದು ವಯಸ್ಸು. ಕೈತುಂಬಾ ಹಣ ಬರುವ ಕೆಲಸವಿದೆ. ಅಪ್ಪ-ಅಮ್ಮ ಇದ್ದಾರೆ. ಇನ್ನೂ ಮದುವೆಯಾಗದೆ ಉಳಿದೆ ಅನ್ನುವುದು ಲೋಕದ ದೂರು. ಇರಲಿ, ನಾನು ಅದಕ್ಕೆ ದಾದು ಮಾಡುವುದಿಲ್ಲ. ಒಂದು ಮದುವೆ ಅನ್ನುವುದು ಬದುಕಿಗೆ ಬೇಕು ಅಂತ ನನಗೆ ಅನಿಸಲೇ ಇಲ್ಲ. ಬಂದ ಹುಡುಗರಲ್ಲಿ ನಾನು ಉತ್ತರಗಳನ್ನು ಹುಡುಕುತ್ತಿದ್ದೆ. ಅಷ್ಟಕ್ಕೂ ನನ್ನ ಬಳಿ ಮದುವೆ ಕುರಿತಾದ ಅತಿಮೂಲ ಅನ್ನಿಸುವ  ಪ್ರಶ್ನೆಗಳೇ ಇರಲಿಲ್ಲ ಎಂಬುದು ಈ ನಡುವೆ ತಿಳಿಯುತ್ತಿದೆ. ಬದುಕಿನ ಎಲ್ಲಾ ಸಂಬಂಧಗಳಂತೆ ಮದುವೆಯನ್ನು ಅದರ ಮಿತಿಯಲ್ಲೇ ಒಪ್ಪಿಕೊಳ್ಳಬಹುದು ಎಂಬುದು ಅವರಿಂದ ಅರ್ಥವಾದಂತಾಗಿದೆ. ಅವರೊಬ್ಬ ಮನೋವೈದ್ಯರು. ತಮ್ಮ ಯಥಾಪ್ರಕಾರದ ಕೌನ್ಸಿಲಿಂಗ್ ಸ್ಕಿಲ್‌ನಲ್ಲಿ ಇದನ್ನು ಸಾಧಿಸಿ ಬಿಟ್ಟರಾ? ಗೊತ್ತಿಲ್ಲ. ಅವರು ನನಗೆ ಗಂಡ ಆದರೆ ಹೇಗೆ? ಅಂತ ಈಗೀಗ ಯೋಚನೆಗಳು ಬರುತ್ತಿವೆ. ಅವರ ಯೋಚನೆಗಳಲ್ಲೂ ನಾನಿದ್ದೇನಾ? ಗೊತ್ತಿಲ್ಲ! ತಡವಾಗಿರುವ ಈ ಮದುವೆಯೊಂದು ಅವರೊಡನೆ ಆಗಿಬಿಡಲಿ ಅನಿಸುತ್ತಿದೆ ಮನಸ್ಸು. ಅವರು ಇದಕ್ಕೆಲ್ಲ ಒಪ್ಪುತ್ತಾರೆಂಬುದು ಗೊತ್ತಿಲ್ಲ. ನಿಮ್ಮ ಸಲಹೆಗಳು ಏನಿರಬಹುದೆಂದು ಕುತೂಹಲದಿಂದ ಕಾಯುತ್ತೇನೆ.

–  ಹೆಸರು ಬೇಡ ಊರು ಬೇಡ

ಮೊದಲೇ ಹೇಳಿದ್ದೆನಲ್ಲಾ, ಆ ಪತ್ರವನ್ನು ಹತ್ತಾರು ಬಾರಿ ಓದಿಕೊಂಡೆ ಅಂತ. ಅನುಮಾನವೇ ಇಲ್ಲ ಇದು ರೀನಾಳ ಪತ್ರವೇ. ಇವಳು ತನ್ನ ಮದುವೆಯ ನಿರ್ಧಾರದ ಬಗ್ಗೆ ಅಷ್ಟು ದೊಡ್ಡ ದೊಡ್ಡದಾಗಿ ಪ್ರಬುದ್ಧಳಂತೆ ಮಾತನಾಡಿದವಳು ಸಿಲ್ಲಿಯಂತೆ ಪತ್ರ ಬರೆಯುತ್ತಾಳೆ ಅಂದುಕೊಂಡಿರಲಿಲ್ಲ. ನಮ್ಮ ನಿರ್ಧಾರಗಳಿಗೆ ಹೊರಗಿನಿಂದ ಸಿಗಬಹುದಾದ ಒಂದು ಸಣ್ಣ ಸಪೋರ್ಟ್ ಎಂಥದ್ದೋ ಧೈರ್ಯ ಕೊಡುತ್ತದೆ. ಎಷ್ಟೋ ಜನರು ಇಂತಹ ಮಾತಿನ ಹಸಿವಿನಲ್ಲೇ ಉಳಿದಿದ್ದಾರೆ ಅನಿಸಿತು. 

ನನ್ನ ಒಪ್ಪಿಗೆಯ ನಿರ್ಧಾರವನ್ನು ಯಾರೋ ಹೇಳಿದಂತೆ ತಿಳಿಸಬೇಕಾಗಿ ಬಂದಿರುವುದು ಎಂತಹ ವಿಚಿತ್ರ ನೋಡಿ. ಉತ್ತರ ಏನು ಬರೆಯಬಲ್ಲೆ ಅನ್ನುವುದು ನಿಜಕ್ಕೂ ನನ್ನಷ್ಟಕ್ಕೆ ನನಗೆ ಕುತೂಹಲ. ಉಳಿದ ಪತ್ರಗಳಿಗೆ ಉತ್ತರ ಟೈಪ್ ಮಾಡಿ ಇದೊಂದು ಪತ್ರವನ್ನು ಬಾಕಿ ಉಳಿಸಿಕೊಂಡೆ. ನನ್ನ ಯೋಚನೆಗಳನ್ನು ಎರಡು ದಿನ ನೆನೆಹಾಕಿ ಒಂದು ಮುಂಜಾನೆ ಲವಲವಿಕೆಯಿಂದ ಎದ್ದು ಕೂತೆ. ಬರೆದ ಒಂದು ಪುಟ್ಟ ಉತ್ತರ ಹೀಗಿತ್ತು…

ಪ್ರೀತಿಯ ಆರ್,

ನಿಮ್ಮ ಸಾಲುಗಳನ್ನು ಓದಿದೆ. ನೀವು ಒಮ್ಮೊಮ್ಮೆ ಮಗುವಿನಂತೆ, ಮಗದೊಮ್ಮೆ ಬದುಕಿನ ದೊಡ್ಡ ಅನುಭವವುಳ್ಳರಂತೆ ಕಂಡಿರಿ. ಒಂದೇ ಮಾತಿನಲ್ಲಿ ಹೇಳುವುದಾದರೆ ನಿಮಗೆ ಅವರು ಇಷ್ಟವಾಗಿದ್ದರೆ ಮದುವೆಯಾಗಬಹುದು. ಒಂದು ಗಂಡಿಗೆ ಒಂದು ಹೆಣ್ಣು ಇರಬೇಕಾದದ್ದು ಲೋಕರೂಢಿ. ನಾವು ಎಷ್ಟೇ ಬದಲಾಗಿದ್ದೇವೆ ಅಂದರೂ, ನಾವು ನಮ್ಮ ಕುಟುಂಬದಿಂದ ಆಚೆ ನಿಂತು ಬದುಕಲು ಸಾಧ್ಯವಿಲ್ಲ. ಅಂತಹ ಕುಟುಂಬವೊಂದು ಮದುವೆಯ ಆಧಾರವಿಲ್ಲದೆ ನಿಲ್ಲುವುದಿಲ್ಲ. ನಿಮ್ಮಂತಹ ಎಷ್ಟೋ ಹುಡುಗಿಯರು ಹೀಗೆ ಏನೆಲ್ಲಾ ಯೋಚಿಸಿಕೊಂಡು ಹಾಗೇ ಉಳಿದುಬಿಡುತ್ತೀರಿ. ಸರಿ ಅವರು ಸಾಧಿಸಿದ್ದಾದರೂ ಏನು ಅಂತ ಕೇಳಿದರೆ ಹಣ, ಪ್ರಶಸ್ತಿ, ಮಾಡಿಕೊಂಡ ಹೆಸರಿನ ಲಿಸ್ಟಗಳನ್ನು ಮುಂದಿಡುತ್ತಾರೆ. ನೋಡಿ ಆರ್, ಬದುಕು ಅಂದರೆ ಅಷ್ಟೇ ಅಲ್ಲ. ಅದು ಥಿಯರಿಯೂ ಅಲ್ಲ. ಅದು ಪ್ರಾಕ್ಟಿಕಲ್. ಕುಟುಂಬ ಕೊಡುವಷ್ಟು ಮತ್ತು ಅದು ಆಧಾರವಾಗುವಷ್ಟು ಬದುಕಿನಲ್ಲಿ ಮತ್ಯಾವುದು ಆಗುವುದಿಲ್ಲ. ಪ್ರೀತಿ ಮತ್ತು ಮದುವೆಗಳ ಯಶಸ್ಸು ಜೊತೆಯಾಗುವ ವ್ಯಕ್ತಿಗಳನ್ನು ಆಧರಿಸಿರುತ್ತದೆ. ನಿಮಗೆ ಅಂತಹ ವ್ಯಕ್ತಿ ಆ ಮನೋವೈದ್ಯರಲ್ಲಿ ಸಿಗಬಹುದು ಅನ್ನುವುದಾದರೆ ಖುಷಿಯಿಂದ ಮುನ್ನಡೆಯಿರಿ. ಒಳ್ಳೆಯದಾಗಲಿ.

ಅಂತ ಬರೆದು ಒಮ್ಮೆ ಸುಮ್ಮನೆ ನಕ್ಕೆ. ನನ್ನ ಕುತೂಹಲವಿದ್ದದ್ದು ಇದನ್ನು ಓದಿದ ನಂತರದ ಅವಳ ವರ್ತನೆಯ ಬಗೆಗೆ! ಬರೆದದ್ದನ್ನು ಪತ್ರಿಕೆಗೆ ಕಳುಹಿಸಿ ಒಂದು ವಾರದ ಮಟ್ಟಿಗೆ ನಿರಮ್ಮಳವಾದೆ. ಈ ನಡುವೆ ಒಮ್ಮೆ ಮಾತ್ರ ರೀನಾ ಸಿಕ್ಕಿದ್ದಳು. ಅವತ್ತು ಗಂಟೆಗಟ್ಟಲೇ ಕೂತರೂ ಮಾತನಾಡಿದ್ದು ಏಳೆಂಟು ಮಾತುಗಳು. ಮೌನ ಆಗಲೇ ತನ್ನ ಕೆಲಸವನ್ನು ಆರಂಭಿಸಿತ್ತು. 

**** 

ಅದೊಂದು ಬೆಳಿಗ್ಗೆ ʻಆಪ್ತಮಾತುʼ ಅಂಕಣದ ಕಟಿಂಗ್ ಅನ್ನು ನನಗೆ ವಾಟ್ಸಾಪ್ ಮಾಡಿದ್ದಳು. ಇದು ನನ್ನದೇ ಪತ್ರವೆಂದು ಭಾವಿಸಿ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ ಅಂತ ಇತ್ತು. ಇದಕ್ಕೆ ಉತ್ತರ ಬರೆದಿದ್ದು ನಾನು ಎಂಬುದು ಅವಳಿಗಾದರೂ ಹೇಗೆ ಗೊತ್ತಾಗಬೇಕು? ನಾನು ಬರೆದ ಉತ್ತರವನ್ನು ನಾನೇ ಓದಿಕೊಳ್ಳಬೇಕಾಯಿತು. ನಾನು ಪ್ರತಿಕ್ರಿಯೆಯಾಗಿ ಒಂದು ಕೆಂಪನೆಯ ಹೃದಯ ಮಾರ್ಕಿನ ಎಮೋಜಿ ಕಳುಹಿಸಿದೆ.  ಆ ಕಡೆಯಿಂದ ಅಂತದ್ದೇ ಎರಡು ಎಮೋಜಿ ಕಳುಹಿಸಿದಳು. ಸಂಜೆ ಸಿಗಿ ನಿಮಗೊಂದು ಸರ್ಪ್ರೈಸ್ ಇದೆ ಅಂದಳು. ಏನೂ ಗೊತ್ತಿಲ್ಲದವನಂತೆ ನಟಿಸಲು ನಾನು ಸಿದ್ಧನಾದೆ. ಸಂಜೆಯಾಗುವುದನ್ನೇ ಕಾದು ಕೂತೆ. 

‍ಲೇಖಕರು admin j

July 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: