ಜಿ ಎನ್ ನಾಗರಾಜ್ ಅಂಕಣ- ಸರ್ಕಾರದ ಕಪಾಳಕ್ಕೆ ಬಾರಿಸಿದ ಕೋರ್ಟ್‌ಗಳು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

‘ನೀವು ಕುರುಡಾಗಬಹುದು, ನಾವು ಕುರುಡರಂತೆ ವರ್ತಿಸಲು ಸಾಧ್ಯವಿಲ್ಲ’

‘ನೀವು ಆಸ್ಟ್ರಿಚ್ ಪಕ್ಷಿಯಂತೆ ಮರಳಿನಲ್ಲಿ ತಲೆ ಹುದುಗಿಸಬಹುದು. ನಾವು ಹಾಗೆ ಮಾಡುವುದಿಲ್ಲ.’

‘ಸಂವಿಧಾನ ಬದ್ಧ ಜೀವಿಸುವ ಹಕ್ಕನ್ನು ಖಾತರಿಗೊಳಿಸಲು ಪ್ರಭುತ್ವ ಸೋತಿದೆ. ನಾವು ನಿಸ್ಸಹಾಕರಾಗಿದ್ದೇವೆ’
ಇವು ಒಕ್ಕೂಟ ಸರ್ಕಾರದ ಬಗ್ಗೆ ದೆಹಲಿ ಹೈಕೋರ್ಟ್‌ನ ಖಂಡನೆಗಳು, ಉದ್ಗಾರಗಳು.

‘ಹಿಂದಿನ 10-15 ತಿಂಗಳ ಕಾಲ ನೀವೇನು ಮಾಡುತ್ತಿದ್ದಿರಿ?’ ಒಕ್ಕೂಟ ಸರ್ಕಾರದ ನಿಷ್ಕ್ರಿಯತೆಯನ್ನು ಖಂಡನೆಗೆ ಗುರಿ ಮಾಡಿ ಮದ್ರಾಸ್ ಹೈಕೋರ್ಟ್ ಕೇಳಿದ ಮೊನಚು ಪ್ರಶ್ನೆ.

‘ಚುನಾವಣಾ ‌ರ‍್ಯಾಲಿಗಳು ನಡೆಯುತ್ತಿದ್ದಾಗ ನೀವು ಬೇರೆ ಗ್ರಹದಲ್ಲಿದ್ದಿರೇನು?… ಬಹುಶಃ ನಿಮ್ಮ ಅಧಿಕಾರಿಗಳನ್ನು ಕೊಲೆ ಅಪಾದನೆ‌ ಕೇಸು ಹಾಕಬೇಕಾಗುತ್ತದೆ’

ಎರಡನೇ ಅಲೆಯ ತೀವ್ರತೆಗೆ ಕೇಂದ್ರ ಚುನಾವಣಾ ಆಯೋಗವೇ ಏಕೈಕ ಕಾರಣ ಎಂದು ಕಠಿಣವಾಗಿ ಟೀಕಿಸಿದ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಈ ಉದ್ಗಾರಗಳು ಸಿಡಿಲಿನಂತೆ ಎರಗಿದವು.

‘ನೀವು ವಾಸ್ತವದ ಚಿತ್ರಣವನ್ನು ಮುಚ್ಚಿಟ್ಟು, ನಿಖರವಾದ ಅಂಕಿ ಅಂಶಗಳನ್ನು ಅದುಮಿಟ್ಟರೆ… ಭಯ, ಅಲ್ಲೋಲ ಕಲ್ಲೋಲ ಉಂಟಾಗುತ್ತದೆ.’ ಇದು ಗುಜರಾತ್ ಹೈಕೋರ್ಟ್ ಅಲ್ಲಿಯ ರಾಜ್ಯ ಸರ್ಕಾರದ ಬಗ್ಗೆ ಮಾಡಿದ ಟೀಕೆ.

‘ನಿಮಗೆ ನಿಮ್ಮ ಬಗ್ಗೆ ನಾಚಿಕೆಯಾಗದಿರಬಹುದು, ಆದರೆ ಇಂತಹ ಅಸಹ್ಯಕರ ಸಮಾಜದ ಭಾಗವಾಗಿರುವ ಬಗ್ಗೆ ನಮಗೆ ನಾಚಿಕೆಯಾಗುತ್ತದೆ.’ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ನೋವಿನ ಮಾತು.

ಈ ಕಟು ಟೀಕೆಗಳಲ್ಲಿ ಬಹಳಷ್ಟು ಮೋದಿ ಸರ್ಕಾರವನ್ನೇ ಗುರಿಮಾಡಿದ್ದವು. ನಾಲ್ಕಾರಲ್ಲ, ದೇಶದ 15 ರಾಜ್ಯಗಳ 20 ಹೈಕೋರ್ಟ್ ಪೀಠಗಳು ಕೊರೋನಾ ಸಾವು, ಸಂಕಟಗಳ ದುಸ್ಥಿತಿಯ ಬಗ್ಗೆ ಸ್ವಯಂ ಇಚ್ಛೆಯಿಂದ (suo moto) ದಾಖಲಿಸಿಕೊಂಡ  ಕೇಸುಗಳು ಅಥವಾ ಸಾರ್ವಜನಿಕ ಹಿತಾಸಕ್ತಿಯ ಕೇಸುಗಳಲ್ಲಿ ಹಲವು ಕಟು ಟೀಕೆಗಳನ್ನು ಮಾಡಲಾಯಿತು.

ಭಾರತದ ನ್ಯಾಯಾಂಗದಲ್ಲಿ ಇಂತಹ ವಿಶೇಷ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಸ್ವಾತಂತ್ರ್ಯಾನಂತರದಲ್ಲಿ ಭಾರತದ ಜನತೆಗೂ ಇಂತಹ ಮಹಾ ಸಂಕಟ ಎಂದೂ ಬಂದೆರಗಿರಲಿಲ್ಲವಲ್ಲ.

ಕೋರ್ಟ್‌ಗಳ ಆಜ್ಞೆಗಳ ಈ ಪರಿ

ಹೈಕೋರ್ಟ್‌ಗಳ ಈ ಪರಿಯ ಸಿಟ್ಟು, ಸಂಕಟಗಳು ಬರಿಯ ಉದ್ಗಾರಗಳಿಗಷ್ಟೇ ಸೀಮಿತವಾಗಿರಲಿಲ್ಲ. ಅವುಗಳ ನಿರ್ದೇಶನಗಳೂ ಅಷ್ಟೇ ಕಟುವಾಗಿದ್ದವು. ಕೊರೋನಾ ವ್ಯಾಧಿಯ ಹಲವು ತುರ್ತುಗಳಿಗೆ ಸಂಬಂಧಪಟ್ಟಿದ್ದವು.

‘ಎರಡು ದಿನದ ಮಧ್ಯ ರಾತ್ರಿ 12 ಗಂಟೆಯ ವೇಳೆಗೆ 700 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಯಾಗಬೇಕು. ಇಲ್ಲದಿದ್ದರೆ ಕೋರ್ಟ್ ನಿಂದನೆ ಪ್ರಕರಣ’ ಇದು ದೆಹಲಿ ಕೋರ್ಟ್ ಆಜ್ಞೆ.

ಬಾಂಬೆ ಹೈಕೋರ್ಟ್, ಮಹಾರಾಷ್ಟ್ರಕ್ಕೆ ಆಕ್ಸಿಜನ್ ಪ್ರಮಾಣದ ಬಗ್ಗೆ ಆಜ್ಞೆ. ಕರ್ನಾಟಕ ಹೈಕೋರ್ಟ್ ಕರ್ನಾಟಕಕ್ಕೆ 1200 ಮೆ.ಟನ್ ಆಕ್ಸಿಜನ್ ಪೂರೈಸಬೇಕು ಎಂದು ಆಜ್ಞೆ. ಆಕ್ಸಿಜನ್ ಕೊರತೆಯ ಸಾವುಗಳನ್ನಂತೂ ಅಲಹಾಬಾದ್ ಹೈಕೋರ್ಟ್ ನರಮೇಧ ಎಂದು ಬಣ್ಣಿಸಿತು. ಕರ್ನಾಟಕ ಹೈಕೋರ್ಟ್ ಚಾಮರಾಜನಗರದ 24 ಸಾವುಗಳ ಬಗ್ಗೆ ವಿಚಾರಣೆಗೆ ಸರ್ಕಾರ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಿದ ಆಜ್ಞೆಯನ್ನು ಬದಿಗೊತ್ತಿ ತಾನೇ ನಿವೃತ್ತ ಹೈಕೋರ್ಟ್ ನ್ಯಾಯಾಧಿಶರನ್ನು ತನಿಖೆಗೆ ನೇನಿಸಿದ ವಿಶೇಷ ಪ್ರಸಂಗ ನಡೆಯಿತು. ಆಕ್ಸಿಜನ್ ಜೊತೆಗೆ ರೆಮ್ಡಿವಿಸಿರ್‌ನಂತಹ ತುರ್ತು ಔಷಧಿಗಳು, ಬೆಡ್‌ಗಳು,ಐಸಿಯುಗಳು, ಅದರಲ್ಲಿ ಭ್ರಷ್ಟಾಚಾರಗಳು ಹಲವು ಹೈಕೋರ್ಟ್‌ಗಳ ನಿರ್ದೇಶನಕ್ಕೆ ಒಳಗಾದವು.

ರಾಜಸ್ಥಾನ ಹೈಕೋರ್ಟ್ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲ ಪ್ರತೀ ಜಿಲ್ಲೆಗೂ ಒಂದೊಂದು ಸಮಿತಿಯನ್ನೇ ಕೊರೋನಾ ಸಮಸ್ಯೆಗಳಿಗೆ ಗಮನ ನೀಡುವುದಕ್ಕಾಗಿ ನೇಮಿಸಿತು. ಗುಜರಾತ್ ಹೈಕೋರ್ಟ್ ಲಾಕ್ ಡೌನ್ ಹಾಕುವ ಬಗ್ಗೆ ತುರ್ತಾಗಿ ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರೆ, ಅಲಹಾಬಾದ್ ಹೈಕೋರ್ಟ್ ಸ್ವತಃ ತಾನೇ ಐದು ನಗರಗಳಲ್ಲಿ ಲಾಕ್ ಡೌನ್ ವಿಧಿಸಿ ತಾನೇ ಆಡಳಿತ ನಡೆಸಲು ಕೈ ಹಾಕಿತು.

ಪಟ್ನಾ ಹೈಕೋರ್ಟ್ ಬಿಹಾರದಲ್ಲಿ ಕೊರೋನಾ ಸಾವುಗಳ ಲೆಕ್ಕಾಚಾರದ ಸುಳ್ಳುಗಳ ಬಗೆಗೆ ಆಡಿಟ್‌ಗೆ ಆಜ್ಞೆ ಮಾಡಲಾಗಿ ಬಿಹಾರದ ಸಾವುಗಳ ಲೆಕ್ಕ ಸುಮಾರು 5,500 ದಿಂದ 9500 ಸಾವಿರಕ್ಕೆ ಏರಿತು.

ಈ ಮಧ್ಯೆ ಏಪ್ರಿಲ್ ಕೊನೆಯಿಂದ ವ್ಯಾಕ್ಸೀನುಗಳ ತೀವ್ರ ಕೊರತೆ ತಲೆದೋರಿತು. ಮೋದಿ ಸರ್ಕಾರ ವ್ಯಾಕ್ಸೀನ್ ಪಡೆದುಕೊಳ್ಳುವ, ಸರಬರಾಜು ಮಾಡುವ ಕೆಲಸದಲ್ಲಿ ಆರಂಭದಿಂದಲೂ ಸಂವಿಧಾನದಿಂದ ನಿರ್ದೇಶಿತವಾದ ವಿದೇಶ ವ್ಯಾಪಾರ ಮತ್ತು ರಾಷ್ಟ್ರ ಮಟ್ಟದ ಕರ್ತವ್ಯಗಳ ಭಾಗವಾಗಿ ಕೈಗೆತ್ತಿಕೊಂಡಿತ್ತು. ಆದರೆ  ವ್ಯಾಕ್ಸೀನ್ ‌ತಯಾರಕ ಕಾರ್ಪೋರೇಟ್‌ಗಳ ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳ ಲಾಬಿಗೆ ಮಣಿದು ಈ ಹೊಣೆಯಿಂದ ಜಾರಿಕೊಂಡು ಏಕಾಏಕಿಯಾಗಿ ರಾಜ್ಯಗಳ ಹೆಗಲಿಗೆ ದಾಟಿಸಲು ಪ್ರಯತ್ನಿಸಿತು.

ರಾಜ್ಯಗಳು ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳ ನಡುವೆ ವ್ಯಾಕ್ಸೀನ್ ಕೊಳ್ಳಲು ಅನಾರೋಗ್ಯಕರ ಸ್ಫರ್ಧೆ ಉಂಟುಮಾಡಿ ಕಾರ್ಪೊರೇಟ್ ತಯಾರಕರಿಗೆ ದುರ್ಲಾಭ ಮಾಡಿಕೊಳ್ಳಲು ಫಲವತ್ತಾದ ವಾತಾವರಣ ಸೃಷ್ಟಿಸಿತು. ಈ ಸಮಸ್ಯೆ ಕೂಡಾ ಹೈಕೋರ್ಟ್‌ಗಳ ಗಮನ ಸೆಳೆಯಲಾರಂಭವಾಯಿತು. ಹೈಕೋರ್ಟ್‌ಗಳ ಈ ಎಲ್ಲ ಟೀಕೆ,ನಿರ್ದೇಶನಗಳು ಮೋದಿ ಸರ್ಕಾರ ತನ್ನ ಕ್ರೂರ ನಿಷ್ಕ್ರಿಯತೆಯಿಂದ ಎಚ್ಚರಗೊಂಡು ತರಾತುರಿಯಿಂದ  ಸಮಸ್ಯೆಗಳ ಪರಿಹಾರಕ್ಕೆ, ಮುಖ್ಯವಾಗಿ ಆಕ್ಸಿಜನ್ ಒದಗಿಸುವುದಕ್ಕೆ ಒಂದಿಷ್ಟಾದರೂ ಗಮನ ಕೊಡಲೇ ಕೊಡಲೇಬೇಕಾಯಿತು. ಹೈಕೋರ್ಟ್‌ಗಳ ಈ ಕ್ರಿಯಾಶೀಲತೆಯ ಬಗ್ಗೆ ಜನ ಮೆಚ್ಚಿಕೆ ವ್ಯಕ್ತಪಡಿಸಿದರು.

ಮೋದಿ ಬಚಾವು ತಂತ್ರ ತಿರುವು ಮುರುವಾಯಿತು

ಹೈಕೋರ್ಟ್‌ಗಳ ಈ ಖಂಡನೆ, ಟೀಕೆಗಳು ಮೋದಿ ಸರ್ಕಾರದ ಕಪಾಳಕ್ಕೆ ಫಟೀರ್, ಫಟೀರ್ ಎಂದು ಬಾರಿಸಿದಂತಾಗುತ್ತಿತ್ತು. ಜನರ ಸಂಕಟ,ಸಿಟ್ಟುಗಳ ಅಭಿವ್ಯಕ್ತಿಯಾಗಿತ್ತು. ಆದರೆ ಇದರಿಂದ ಕೆಲವರಿಗೆ ಬಹಳ ಕಸಿವಿಸಿ, ಸಂಕಟವಾಯಿತು. ನ್ಯಾಯಾಧೀಶರುಗಳೇನೂ ಸರ್ವಜ್ಞ‌ರಲ್ಲ ಎಂದ ಸಿ.ಟಿ.ರವಿ, ಇದ್ದಕ್ಕಿದ್ದಂತೆ ಇಷ್ಟೇ ಕೊಡಿ,‌ ಅಷ್ಟೇ ಕೊಡಿ ಎಂದರೆ ಎಲ್ಲಿಂದ ತರಬೇಕು ಎಂದು ಸಚಿವ ಸದಾನಂದಗೌಡ ಕೋರ್ಟ್ ಗಳನ್ನು ಟೀಕಿಸಿದರು.

ಯಾರಿಗೆ ಏನಾದರೂ ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬೊಬ್ಡೆಯವರಿಗಂತೂ ಬಹಳ ಸಂಕಟವಾಯಿತು. ಮೋದಿ ಸರ್ಕಾರವನ್ನು ಈ ಕಪಾಳಮೋಕ್ಷದಿಂದ ಪಾರು ಮಾಡಬೇಕೆಂದು ಅವರು ದೃಢ ನಿಶ್ಚಯ ಮಾಡಿದರು. ಅವರ ಅವಧಿ ಕೆಲವೇ ದಿನಗಳಲ್ಲಿ ಮುಗಿದುಹೋಗುವುದರಲ್ಲಿತ್ತು. ಆದರೂ ಬಿಡದೆ, ತಾವು ನಿವೃತ್ತರಾಗುವ ಎರಡೇ ದಿನದಲ್ಲಿ ಈ ಪವಿತ್ರ ಕೈಂಕರ್ಯವನ್ನು ಮುಗಿಸಬೇಕೆಂದು ಅವರು ನಿವೃತ್ತರಾಗಲಿರುವ ಹಿಂದಿನ ದಿನ, ಏಪ್ರಿಲ್ 22 ರಂದು ತಮ್ಮ ಸ್ವಯಂ ಇಚ್ಛೆಯ ಕೇಸೊಂದನ್ನು ದಾಖಲಿಸಿಕೊಂಡು ಬಿಟ್ಟರು.

ಮಾತ್ರವಲ್ಲ, ಕೇಂದ್ರ ‌ಸರ್ಕಾರ, ರಾಜ್ಯ ಸರ್ಕಾರಗಳು, ರಾಜ್ಯ ಹೈಕೋರ್ಟ್‌ಗಳ ಮುಂದಿದ್ದ ಕೆಲ ಪಿಐಎಲ್‌ಗಳ ಅರ್ಜೀದಾರರೆಲ್ಲ ಒಂದೇ ದಿನದ ಅಂತರದಲ್ಲಿ ಅಫಿಡಾವಿಟ್‌ಗಳನ್ನು ಸಲ್ಲಿಸಿ ಮರು ದಿನ ತಮ್ಮ ಮುಂದೆ ಹಾಜರಾಗಬೇಕೆಂದು ನಿರ್ದೇಶಿಸಿದರು. ತಮ್ಮ ಉದ್ದೇಶವನ್ನು ಕೂಡಾ ಸ್ಪಷ್ಟಪಡಿಸಿದ್ದರು. ಈ ಎಲ್ಲರೂ ರಾಜ್ಯ ಹೈಕೋರ್ಟ್‌ಗಳ ಮುಂದಿರುವ ವಿಚಾರಣೆಗಳನ್ನೆಲ್ಲಾ ಸುಪ್ರೀಂ ಕೋರ್ಟ್‌ಗೆ ಏಕೆ ವರ್ಗಾಯಿಸಿಕೊಳ್ಳಬಾರದು ಎಂಬುದಕ್ಕೆ ಪ್ರತಿಕ್ರಿಯೆ ಬಯಸಿದ್ದರು. ಆದರೆ ಹೈಕೋರ್ಟ್‌ಗಳ ವಿಚಾರಣೆಗೆ ತಡೆಯೊಡ್ಡಿ ಎಲ್ಲ ಕೇಸುಗಳನ್ನೂ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಿಕೊಳ್ಳುವ ಅವರ ಗುರಿ ಈಡೇರಲಿಲ್ಲ.

ಆ ವೇಳೆಗೆ ಸುಪ್ರೀಂ ಕೋರ್ಟ್‌ನ ಹಲವು ಹಿರಿಯ ವಕೀಲರುಗಳು ಹಾಗೂ ಕೆಲ ರಾಜಕೀಯ ಪಕ್ಷಗಳು ಅವರ ಈ ಕ್ರಮದ ಮೇಲೆ ಕಟಕಿ, ವ್ಯಂಗ್ಯಗಳಿಂದ ಕೂಡಿದ ಕಟುಟೀಕೆಗಳ ಸುರಿಮಳೆಯನ್ನೇ ಕರೆದರು. ಏಪ್ರಿಲ್ 23 ರಂದು ಕೊನೆಯ ದಿನ ತಾವು ಕೇಳಬೇಕಾಗಿ ಬಂದ ಟೀಕೆಗಳ ಬಗ್ಗೆ ದುಃಖ ವ್ಯಕ್ತಪಡಿಸುತ್ತಾ ಹೈಕೋರ್ಟ್‌ಗಳ ಯಾವ ಆಜ್ಞೆ, ನಿರ್ದೇಶನಗಳನ್ನೂ ತಡೆ ಹಿಡಿಯುವ ಇಚ್ಛೆ ಇಲ್ಲವೆಂದು ಹೇಳಿ ಕೇಸನ್ನು ಮುಂದೂಡಬೇಕಾಯಿತು.

ಮುಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ರಮಣರು ಅಧಿಕಾರ ವಹಿಸಿಕೊಂಡ ಮೇಲೆ ಈ ಕೇಸು ನ್ಯಾಯಮೂರ್ತಿ  ಚಂದ್ರಚೂಡ್‌ರವರ ನೇತೃತ್ವದ ಮೂರು ನ್ಯಾಯಮೂರ್ತಿಗಳ ಪೀಠಕ್ಕೆ ವಹಿಸಲ್ಪಟ್ಟಿತು. ಅಕಸ್ಮಾತ್ ಬೊಬ್ಡೆಯವರ ಅವಧಿ ಇನ್ನೂ ಒಂದಿಷ್ಟು ದಿನ ಉಳಿದಿದ್ದರೆ ಹೈಕೋರ್ಟ್‌ಗಳ ಕ್ರಿಯಾಶೀಲತೆ, ಆಜ್ಞೆಗಳ ಗತಿ ಏನಾಗುತ್ತಿತ್ತೆಂದು ಯಾರಾದರೂ ಊಹಿಸಬಹುದು. ಈ ಕೆಳಗಿನ ಉದಾಹರಣೆಗಳನ್ನು ನೋಡಿ.

ಮೊದಲನೇ ಅಲೆಯ ರಾಷ್ಟ್ರ‌ವ್ಯಾಪಿ ಬಿರುಸು ಲಾಕ್‌ಡೌನ್ ಘೋಷಿತವಾದ ಕೆಲವೇ ದಿನಗಳಲ್ಲಿ‌ ಮಾನವ ಮಹಾ ಪ್ರವಾಹ ಹೊರಟಿತಲ್ಲ, ಆಗ 31.3.20 ರಂದು ಒಂದು ಪಿಐಎಲ್ ಸುಪ್ರೀಂ ಕೋರ್ಟ್ ಮುಂದೆ ಬಂತು. ಮೋದಿ ಸರ್ಕಾರದ ಸನ್ಮಾನ್ಯ ಸಾಲಿಸಿಟರ್ ಜನರಲ್‌ರವರು ‘ಮೈ ಲಾರ್ಡ್, ಯಾವ ವಲಸೆಗಾರ ಕಾರ್ಮಿಕನೂ ರಸ್ತೆಯ ಮೇಲಿಲ್ಲ, ಅದೆಲ್ಲವೂ ಕೇವಲ ಫೇಕ್ ನ್ಯೂಸ್. ಭಯ ಹುಟ್ಟಿಸಲು ಸೃಷ್ಟಿಸಲಾಗಿದೆ’ ಎಂದು ಬಹಳ ವಿನಯದಿಂದ ಅವರು ತಯಾರಿಸಿದ ಸತ್ಯವನ್ನು ಮುಂದಿಟ್ಟರು. ಕೋರ್ಟ್ ಪೀಠ, ‘ಹೌದೇ, ಅಷ್ಟೇಯೇ ಸರಿ ಬಿಡಿ’ ಎಂದು ಆ ಪರಮ ಸತ್ಯವನ್ನೊಪ್ಪಿ ಕೇಸನ್ನು ಅಷ್ಟಕ್ಕೇ ಮುಗಿಸಿಯೇ ಬಿಟ್ಟಿತು.

ನಂತರ ಇಡೀ ಮೇ, ಜೂನ್‌ನಲ್ಲಿ ಏನು ನಡೆಯಿತು, ಎಷ್ಟು ನೂರು ಜನ ದಾರಿಯಲ್ಲಿ ಅನ್ನ ನೀರಿಲ್ಲದೆ ಪ್ರಾಣ ಕಳೆದುಕೊಂಡರು ಎಂಬ ಯಾವ ‘ಫೇಕ್ ನ್ಯೂಸ್’ ಕಡೆಗೂ ಸುಪ್ರೀಂ ಕೋರ್ಟ್‌ ಕಣ್ಣು ಮುಚ್ಚಿಕೊಂಡು ಬಿಟ್ಟಿತ್ತು. ಗಾಂಧೀಜಿಯವರ ಮೂರು ಕೋತಿಗಳ  ಪಾಠವನ್ನು ಕಟ್ಟುನಿಟ್ಟಾಗಿ ಪಾಲಿಸಿದರು.

ಈ ವಲಸೆ ಸಾವುಗಳ ಬಗ್ಗೆ ತಳಮಳಗೊಂಡಿದ್ದ  ಕೆಲವು ಹಿರಿಯ ವಕೀಲರು ಹಲವು ಪತ್ರಗಳನ್ನು ಬರೆದ ಮೇಲೆ ತೆರೆಯಲಾಗದ ಕಣ್ಣನ್ನು ಕಷ್ಟಪಟ್ಟು ತೆರೆದ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ವಿವರಗಳನ್ನು ನೀಡುವಂತೆ ನೋಟೀಸು ನೀಡಿ ಮತ್ತೆ ಕಣ್ಣು ಮುಚ್ಚಿಯೇ ಬಿಟ್ಟಿತು. ಆ ಕೇಸು ಹಾಗೆಯೇ ಇದೆ. ಮತ್ತೆ ವಿಚಾರಣೆಗೆ. ಆ ಕೋಟಿಗಟ್ಟಲೆ ವಲಸೆಗಾರ ಕಾರ್ಮಿಕರು ಈಗ ಎರಡನೇ ಅಲೆಯ ಸಂದರ್ಭದಲ್ಲಿ ಎಲ್ಲಿದ್ದಾರೆ? ಅವರಿಗೆ ಕೊರೋನಾ ಅಂಟಿದೆಯೇ, ಚಿಕಿತ್ಸೆ ದೊರೆತಿದೆಯೇ, ಅವರಿಂದ ಊರವರಿಗೆಲ್ಲ ಅಂಟಿತೇ, ಅವರ, ಅವರ ಮಕ್ಕಳ ಊಟ, ವಿದ್ಯಾಭ್ಯಾಸಗಳ ಗತಿ ಏನಾಗಿದೆ ಎಂಬ ಯಾವ ಪ್ರಶ್ನೆಯೂ ಸುಪ್ರೀಂ ಕೋರ್ಟ್ ಮುಂದಿಲ್ಲ. ಕೇಸು ಹಾಗೆಯೇ ಇದೆ.

ನಂತರ ಮತ್ತೊಂದು ಕೇಸು, ಎರಡನೇ ಅಲೆಗೆ ಬಹಳ ಮುಖ್ಯವಾದ ಕೇಸು ಬಹಳ ಜನರ ಗಮನಕ್ಕೆ ಬರಲಿಲ್ಲ. ಹಿಂದಿನ ವರ್ಷದ ಆಗಷ್ಟ್‌ನಲ್ಲಿ  ಹಾಕಿದ ಪಿಐಎಲ್ ಅರ್ಜಿ: ವಿಪತ್ತು ನಿರ್ವಹಣಾ ಕಾನೂನಿನ ಪ್ರಕಾರ ಒಕ್ಕೂಟ ಸರ್ಕಾರ ಒಂದು ರಾಷ್ಟ್ರೀಯ ಯೋಜನೆಯನ್ನು ರಾಜ್ಯಗಳು ಹಾಗೂ ತಜ್ಞರೊಂದಿಗೆ ಸಿದ್ಧ ಮಾಡಬೇಕು. ಈ ಯೋಜನೆ ತಯಾರಿಸಲು ನಿರ್ದೇಶನ‌ ನೀಡಿ ಎಂದು. ಯಥಾ ಪ್ರಕಾರ ಮೋದಿ ಸರ್ಕಾರದಿಂದ ಸತ್ಯದ ದರ್ಶನ ಪಡೆದ ಸುಪ್ರೀಂ ಕೋರ್ಟ್ ‘ಒಂದು ರಾಷ್ಟ್ರೀಯ ಯೋಜನೆ ಇಲ್ಲವೆಂಬ ಅರ್ಜಿದಾರರ  ವಾದ ಸರಿಯಲ್ಲ. ಕೊರೋನಾ ನಿಯಂತ್ರಣದ ಬಗ್ಗೆ ಮೋದಿ ಸರ್ಕಾರದಲ್ಲಿ ಯೋಜನೆಗಳು, ವಿಧಾನ (procedure) ಗಳಿಗೇನೂ ಕೊರತೆಯಿಲ್ಲ ಎಂದು ಆಗಸ್ಟ್ 20 ರಂದು ಅರ್ಜಿಯನ್ನು ತಳ್ಳಿ ಹಾಕಿತು.

ಈಗ ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿರುವ ಸ್ವಯಮಿಚ್ಛೆಯ ಈ ಕೇಸಿನಲ್ಲಿ ಒಂದು ಮುಖ್ಯ ಅಂಶವೇ ರಾಷ್ಟ್ರೀಯ ಯೋಜನೆ ತಯಾರಿಕೆ.

20 ರ ಆಗಸ್ಟ್‌ನಲ್ಲಿಯೇ ರಾಷ್ಟ್ರೀಯ ಯೋಜನೆ ವಿವರವಾಗಿ, ವೈಜ್ಞಾನಿಕವಾಗಿ ತಯಾರಿಸಲ್ಪಟ್ಟಿದ್ದರೆ ಎರಡನೇ ಅಲೆಯನ್ನು ಹೇಗೆ ಎದುರಿಸಬಹುದಿತ್ತು ಎಂಬ ಬಗ್ಗೆ ಈಗ ಯೋಚಿಸಿದರೆ ?!? ಇದು ಸುಪ್ರೀಂ ಕೋರ್ಟ್‌ನ ಅಂದಿನ ವರ್ತನೆ.

ಆ ಸಮಯದಲ್ಲಿಯೇ ಮಹಾರಾಷ್ಟ್ರದ ಒಬ್ಬ ಜಿಲ್ಲಾಧಿಕಾರಿ, ಮಧುರೈನ ಒಬ್ಬ ಲೋಕಸಭಾ ಸದಸ್ಯ, ಕೇರಳದಂತಹ ಒಂದು ರಾಜ್ಯ ಆಕ್ಸಿಜನ್, ಬೆಡ್, ಐಸಿಯು‌ಗಳ ಬಗ್ಗೆ ಮಾಡಿಕೊಂಡ ಸಿದ್ಧತೆಯ ಯೋಜನೆ ಹೇಗೆ ಅವರನ್ನು ಎರಡನೇ ಅಲೆಯ ಕೊರತೆಯ ಮಹಾಪೂರಗಳಿಂದ ರಕ್ಷಿಸಿದೆ ಎಂಬುದನ್ನು ಕಾಣಬಹುದು.

ಆದರೆ ಈ ಬಾರಿ ಬೊಬ್ಡೆಯವರ ದುರುದ್ದೇಶ ತಿರುಗುಮುರುಗಾಗಿ ಚಂದ್ರಚೂಡ್‌ರವರ ನೇತೃತ್ವದ ಪೀಠ ಹೈಕೋರ್ಟ್‌ಗಳು ತುಳಿದ ದಾರಿಯಲ್ಲಿ ಮತ್ತಷ್ಟು ತೀವ್ರತೆಯಿಂದ ಮುಂದುವರೆದಿದೆ. ಅವರ ಪೀಠ ಈ ಕೇಸನ್ನು ಕೈಗೆತ್ತಿಕೊಂಡ ಏಪ್ರಿಲ್ 27ರಿಂದಲೇ ಮೋದಿ ಸರ್ಕಾರಕ್ಕೆ ಹಲ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಮಧ್ಯಂತರ ನಿರ್ದೇಶನಗಳನ್ನೂ ನೀಡಿದ್ದಾರೆ.

ಪೀಠ ಕೇಳಿದ ಪ್ರಶ್ನೆಗಳಿಗೆ ಮೋದಿ ಸರ್ಕಾರ ಸಲ್ಲಿಸಿದ ಅಫಡಾವಿಟ್‌ನಲ್ಲಿ ನೀಡಿದ ಜಾರಿಕೆಯ ಉತ್ತರಗಳು, ಹೊಣೆ ಜಾರಿಕೆಯ, ನಿಷ್ಕ್ರಿಯತೆಯ ನಿಲುವು ಸ್ಪಷ್ಟವಾದುದರಿಂದ ಮೇ 31 ರಂದು ನಿರ್ದಿಷ್ಟವಾದ ಮಧ್ಯಂತರ ನಿರ್ದೇಶನಗಳನ್ನು ನೀಡಿದೆ. ವಿವರವಾದ ಪ್ರಶ್ನಾವಳಿಗಳನ್ನು ಕೇಳಿದೆ. ವ್ಯಾಕ್ಸೀನುಗಳನ್ನು ಯಾವಾಗ, ಎಷ್ಟು ಕೊಳ್ಳಲು ಕಂಪನಿಗಳಿಗೆ ಆರ್ಡರ್ ನೀಡಿದ್ದೀರಿ, ಕೊರತೆ ನೀಗಿಸಲು ಕ್ರಮ ಏನು? ಅದಕ್ಕಾಗಿ ಮೀಸಲಿಟ್ಟ 35,000 ಕೋಟಿ ಏನಾಗಿದೆ? ನಿಮ್ಮ ಕಡತಗಳನ್ನು ಅವುಗಳಲ್ಲಿನ ಟಿಪ್ಪಣಿ ಸಹಿತ 15 ದಿನಗಳಲ್ಲಿ ಸಲ್ಲಿಸಿ ಎಂಬ ಆಜ್ಞೆ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಅದರ ನಂತರ ಕೋರ್ಟ್ ಬೀಸಿದ ದೊಣ್ಣೆಯನ್ನು ತಪ್ಪಿಸಿಕೊಳ್ಳಲು, ದೇಶದೆಲ್ಲ ಬಿಜೆಪಿಯೇತರ ರಾಜ್ಯ ಸರ್ಕಾರಗಳ ವಿರೋಧ, ಜನರ ಹೋರಾಟಗಳು, ಅತೃಪ್ತಿ ಮೋದಿಯವರು ತರಾತುರಿಯಲ್ಲಿ ವ್ಯಾಕ್ಸೀನು ನೀತಿ ಬದಲಾವಣೆಯನ್ನು ಘೋಷಿಸಲು ಒತ್ತಾಯಿಸಿವೆ. ಅವುಗಳ ವಿವರಗಳೀಗ ಎಲ್ಲರಿಗೂ ಗೊತ್ತಿವೆ. ಈ ಬದಲಾವಣೆಗೆ ಸಂಬಂಧಿಸಿ ಸರ್ಕಾರ ಹೊರಡಿಸಿದ ಆಜ್ಞೆ‌ಗಳು, ಡಿಸೆಂಬರ್ ಒಳಗೆ ವ್ಯಾಕ್ಸೀನೀಕರಣದ ರಾಷ್ಟ್ರೀಯ  ಯೋಜನೆಗಳನ್ನು ಕೋರ್ಟ್‌ಗೆ ಇನ್ನಷ್ಟೇ ಸಲ್ಲಿಸಬೇಕಾಗಿದೆ. ಆ ನಂತರ  ಚಂದ್ರಚೂಡ್ ಪೀಠ ನೀಡುವ ತೀರ್ಪಿಗೆ ಕಾಯೋಣ.

ಒಟ್ಟಿನಲ್ಲಿ 20 ಹೈಕೋರ್ಟ್ ಹಾಗೂ ಅವುಗಳ ಪೀಠಗಳು ಜೊತೆಗೆ ಸುಪ್ರೀಂ ಕೋರ್ಟ್ ಸೇರಿ ಮೇ, ಜೂನ್ ಈ ಎರಡು ತಿಂಗಳ ಕಾಲ ಕೊರೋನಾಕ್ಕೆ ಸಂಬಂಧಿಸಿದ ಆಡಳಿತವನ್ನು ತಾವೇ ಕೈಗೆತ್ತಿಕೊಂಡು ಬಿಟ್ಟಿದ್ದಾವೆ ಎಂಬ ಭಾವನೆ ಮೂಡಿಸಿತು. ಅಂದರೆ ಮೋದಿ ಸರ್ಕಾರ  ಜನರ ಬಗೆಗಿನ ತನ್ನ ದಿವ್ಯ ಹಾಗೂ ಕ್ರೂರ ನಿರ್ಲಕ್ಷ್ಯದಿಂದಾಗಿ ಆಡಳಿತವನ್ನು ಕೋರ್ಟ್‌ಗಳ ಕೈಗೊಪ್ಪಿಸಿದಂತಾಯಿತು.

ಅದೇ ಸಮಯದಲ್ಲಿ ಕೋರ್ಟ್‌‌ಗಳು ತಮ್ಮ ಮಿತಿ ಮೀರಿ ಆಡಳಿತದಲ್ಲಿ ಕೈ ಹಾಕಿದ್ದು ಒಂದು ಮಹಾ ಬಿಕ್ಕಟ್ಟಿನ ತುರ್ತಿನ ಕ್ಷಣದಲ್ಲಿ ಸ್ವಾಗತಾರ್ಹವೆನಿಸಿದ್ದರೂ ಕೂಡಾ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಕ್ತವಾದುದೇ ಎಂಬ ಪ್ರಶ್ನೆ ಎದ್ದಿದೆ. ನ್ಯಾಯಾಂಗ, ಕಾರ್ಯಾಂಗಗಳ ಸ್ವಾಯತ್ತತೆಯ ಪ್ರಶ್ನೆ ಪ್ರಜಾಪ್ರಭುತ್ವದ ಒಂದು ಮುಖ್ಯ ತತ್ವ. ಅದನ್ನು ಕೋರ್ಟ್‌ಗಳು ಉಲ್ಲಂಘಿಸುವ ದುರ್ದೆಸೆಗೆ ಭಾರತದ ಪ್ರಜಾಪ್ರಭುತ್ವವನ್ನು ನೂಕಿದ್ದಕ್ಕೆ ಮೋದಿ ಸರ್ಕಾರವೇ ಹೊಣೆ ಹೊರಬೇಕಾಗಿದೆ.

ಆಶಾ ಭಾವನೆ
ಈ ಬೆಳವಣಿಗೆಗಳು ದೇಶದ ಜನರಲ್ಲಿ ಸುಪ್ರೀಂ ಕೋರ್ಟ್ ಬಗ್ಗೆ ಮೂಡಿದ್ದ ಅತೃಪ್ತಿ, ನಿರಾಶೆಗಳ ಬದಲಾಗಿ ಆಶಾ ಭಾವನೆಯನ್ನು ಮೂಡಿಸಿದೆ. ಕೇರಳದ ಒಬ್ಬ ಹುಡುಗಿ ಸುಪ್ರೀಂ ಕೋರ್ಟ್‌ಗೆ ಬರೆದ ಪತ್ರ ಈ ಭಾವನೆಯ ಸಂಕೇತವಾಗಿದೆ. ಈ ಸ್ವಯಮಿಚ್ಛೆಯ ಕೇಸಿನ ಹಲವು ಅಂಶಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ. ಈ ಪೀಠವೇ ಒಂದು ರಾಷ್ಟ್ರೀಯ ಕಾರ್ಯ ಪಡೆಯನ್ನು ನೇಮಿಸಿದೆ. 12 ಜನ ತಜ್ಞರ ಈ ಪೀಠಕ್ಕೆ 12 ಅಂಶಗಳ ಕಾರ್ಯಸೂಚಿಯನ್ನು ಪೀಠ ನೀಡಿದೆ. ಅದಕ್ಕೆ ಆರು ತಿಂಗಳ ಸಮಯ, ಅನೇಕ ಉಪ ಸಮಿತಿಗಳ ನೇಮಕಕ್ಕೆ ಅವಕಾಶ ನೀಡಲಾಗಿದೆ.

ಕೊರೋನಾ ನಿರ್ವಹಣೆಗೆ ತುರ್ತಾದ ಆಕ್ಸಿಜನ್, ಔಷಧಿಗಳು, ವೆಂಟಿಲೇಟರ್‌ಗಳು, ಅದರ ತಯಾರಿಕೆ, ವ್ಯಾಕ್ಸೀನೀಕರಣ, ಕೊರೋನಾ ನಿವಾರಿಸಲು ಸಂಶೋಧನೆಯ ಅಗತ್ಯ ,ಇವು ಈ ಕಾರ್ಯ ಸೂಚಿಯ ಅಂಗಗಳು. ಇದರಲ್ಲಿ ಕೊರೋನಾ ಕಾಲದ ಬದುಕಿನ ಬವಣೆಗಳ ಪ್ರಶ್ನೆ ಇಲ್ಲ. ಪಿ.ಎಂ.ಕೇರ್ಸ್ ಫಂಡ್ ಮತ್ತದರ ಯೋಜನೆ ಬಗ್ಗೆ ಬೇರೊಂದು ಕೇಸಿನಲ್ಲಿ ಅಂಶಿಕವಾಗಿ ವಿಚಾರಣೆ ನಡೆಸಲಾಗುತ್ತಿದೆ.

ಕೊರೋನಾ ನಿರ್ವಹಣೆಗೆ ಬಹಳ ಮುಖ್ಯವಾದ ಆರೋಗ್ಯ ವ್ಯವಸ್ಥೆಯ ಸಮಗ್ರ ಪರಿಶೀಲನೆ ಕೈಗೆತ್ತಿಕೊಳ್ಳಲಾಗುತ್ತದೆಯೇ ಕಾದು ನೋಡಬೇಕು.

ಸುಪ್ರೀಂ ಕೋರ್ಟ್‌ನಲ್ಲಿ ವರ್ಷಗಟ್ಟಲೆ ನೆನೆಗುದಿಗೆ ಬಿದ್ದಿರುವ, ದೇಶದ ಹಾಗೂ ಪ್ರಜಾಪ್ರಭುತ್ವದ ದೃಷ್ಟಿಯಿಂದ ಮುಖ್ಯವಾಗಿರುವ ಸಂವಿಧಾನದ 370 ನೇ ಪರಿಚ್ಛೇದದ ಪ್ರಶ್ನೆ,  ಜಮ್ಮು ಕಾಶ್ಮೀರ ರಾಜ್ಯ ನಾಶ, ಸಿಎಎ- ಎನ್.ಪಿ.ಆರ್., ಕೃಷಿ ಕಾಯಿದೆಗಳ ಸಂವಿಧಾನ ಬದ್ಧತೆ, ಸೆಡಿಷನ್ ಹಾಗೂ ಯುಎಪಿಎ (ಭಯೋತ್ಪಾದನೆ ಬಗೆಗಿನ) ಕಾಯಿದೆಯ ದುರುಪಯೋಗ, ಜೈಲಿನಲ್ಲಿ ಕೊಳೆಯುತ್ತಿರುವ ವೃದ್ಧ ಸಾಮಾಜಿಕ ಕಾರ್ಯಕರ್ತರು, ವಿದ್ವಾಂಸರುಗಳ ಬಿಡುಗಡೆ ಹೀಗೆ ಹಲ ಹಲವು ಕೇಸುಗಳಿವೆ. ದೇಶದ ಜನರಲ್ಲಿ ಹುಟ್ಟಿದ ಆಶಾ ಭಾವನೆ ಈ ಕೇಸುಗಳಲ್ಲಿ ಸಂವಿಧಾನ, ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೆ ಬದ್ಧವಾದ ತೀರ್ಪು ಬರುವುದೆಂಬ ನಿರೀಕ್ಷೆಯನ್ನಂತೂ ಹುಟ್ಟಿಸಿದೆ.

ಕೊರೋನಾಗೆ ಸಂಬಂಧಿಸಿ ಯಾವ ಜನಾಭಿಪ್ರಾಯದ ಒತ್ತಡ ಸುಪ್ರೀಂ ಕೋರ್ಟ್‌ನ ಮನಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಕಾಣಲು ಕಾರಣವಾಗಿದೆಯೋ ಆ ಜನಾಭಿಪ್ರಾಯವನ್ನು ರೂಪಿಸುವುದರಲ್ಲಿ ಕ್ರಿಯಾಶೀಲರಾಗೋಣ.

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: