ನಂದಿನಿ ಹೆದ್ದುರ್ಗ ಹೊಸ ಕವಿತೆ- ಮರಳಿ ಹೊಂದುತ್ತೇನೆ ನಿನ್ನನ್ನೇ

ನಂದಿನಿ ಹೆದ್ದುರ್ಗ

ಹೇಮೆಯ ತೀರದಲ್ಲಿ
ಮರುಳು ಮರುಳು ಮರಳ ಹಾಸ ಮೇಲೆ
ನೀನೆಂಬ ನಿನ್ನ ಮಡಿಲ ತೇರಿನಲ್ಲಿ
ಹೊರಟವಳು‌‌ ನಾನು.
ನೆಲದ ಕಾವಿಗೆ ಹೇಮೆಯದ್ದು
ಸೀಮೆಯಿಲ್ಲದ ಪ್ರೇಮ.
ನಿನ್ನ ತುಟಿ, ಬೆರಳು, ನೋಟ
ನನ್ನ ತೋಯ್ದ ಮೈಯಲ್ಲಿ
ಮಿಂಚುಹುಳುಗಳ
ಹುಡುಕುವಾಗೆಲ್ಲಾ ಹರೆಯದ ಕುರಿತು
ಹೊಸದಾಗಿ ಯೋಚಿಸುವೆ.

ನೀನು ಕಾಯುತ್ತಿ, ನಾನು ಬೇಯುತ್ತೇನೆ.
ನಾನು ಮಾಗುವಾಗೆಲ್ಲಾ
ನೀನು ಸಾಗಿಹೋಗುತ್ತಿ.
ಹಗಲುಗಳು ಹೊಸತಾದ ಈ ಪ್ರೇಮಕ್ಕೆ
ಅರಳುತ್ತವೆ, ನರಳುತ್ತವೆ.
ಒಂದು ಆಕಳಿಕೆ, ಒಂದು ನಿಟ್ಟುಸಿರು, ಒಂದು ಬೇಸರ
ತಾಸು ಮಾತ್ರದ ಅಗಲಿಕೆಗೆ ಪ್ರಸವಿಸಿ
ಸುಖದ ಪ್ರಭೆಯೊಳಗೆ ಪಳಪಳಿಸುತ್ತೇವೆ ನಾವು.

ಹೇಳು..
ಹೀಗೇ ಆದರೆ ನಮ್ಮ ನಾಳೆಗಳು ಏನಾದವು
ಎನ್ನುವಾಗೆಲ್ಲಾ
‘ಪ್ರೇಮ ದಾರಿ ತೋರುತ್ತದೆ ನನ್ನ ಹೆಣ್ಣೇ’
ಎನ್ನುತ್ತಾ ನನ್ನ ಗುಲಾಬಿ ತುಟಿಗಳ
ನಿನ್ನ ಕಡುಗಪ್ಪು ತುಟಿಯ ಹಿಡಿತಕ್ಕೆ
ಪಡೆಯುತ್ತಿ.
ಆಗೆಲ್ಲಾ ಆ ಕಂದು ಕಣ್ಣುಗಳ
ಆಳ ಸುಳಿಯೊಳಗೆ ಇಳಿದು ಬೆತ್ತಬೆತ್ತಲು
ಈಜುವೆ ನಾನು

ನಿನ್ನ ಕಟ್ಟುಮಸ್ತಿಗೆ ನನ್ನ ನಡುವಿನ ಓರೆ
ತುಸು ಹೆಚ್ಚೆ ಕಿರಿದಾಗುತ್ತಿದೆ.
ಇಲ್ಲೇ ಜಾರಿದ್ದು ನಲ್ಲೆ
ಎನ್ನುವಾಗೆಲ್ಲ
ನನ್ನ ಹೊಕ್ಕುಳಲಿ ಜೀವ ಸಂಚಾರ.
ಮನೆಗೆ ಹೊರಡುತ್ತಿ.
ನಿನ್ನ ಹಿಂದೆ ಹಿಂದೆ ಹೊರಳುತ್ತೇನೆ ನಾನು.
ಅತ್ತ.. ಅಥವಾ…ಇತ್ತ..?
ದಾರಿಯುದ್ದಕೂ ಮಾತು, ತಲುಪಿದ ಮೇಲೂ..
ಉಂಡ ಮೇಲೂ, ಹೊದ್ದ ಮೇಲೂ,
ನಡುರಾತ್ರಿಯಲ್ಲೂ, ಎದ್ದ ಮೇಲೂ….

ಸಂಪಿಗೆ ಅಭಿಷೇಕ ಮಾಡಿ
ಸೌಗಂಧಿನಿ
ಎಂದವನೇ,
ಒಂದಡೀ ಅಯಸ್ಸಿನ ಹಸಿವು ಹೀಗೆ ತಣಿವಾಗ
ಒಲವಿಗೆ ಸೋಲು
ಬರುವುದಾದರೆ ಎನ್ನುವ ಕಲ್ಪನೆಗೇ
ಸಾವು ಆವಾಹಿಸಿಕೊಂಡೆ ಮೊನ್ನೆ ಎಂದರೆ
ಯಾಕೋ ಅಂದು ನೀನು ಗಂಭೀರ.
‘ಎಲ್ಲ ಆರಂಭಗಳೂ ಮುಗಿಯುತ್ತವೆ’
ಬಳಸಿ ಪಿಸುಗುಟ್ಟೆ.

ಏನೋ ಹೇಳಿದೆ ನೀನು?
ಯಾವ ಶಕುನವಿತ್ತು ಆ ನಾಲ್ಕು ಪದಗಳಲಿ.?
ನಾಳೆಯೂ ನನ್ನವೇ, ನಾಡಿದ್ದೂ…
ಜನ್ಮ ಕಳೆದರೂ
ಕಾದು ಕವುಚಿಕೊಳ್ಳುತ್ತೆನೆ ನಿನ್ನ
ಎನ್ನುವ ನನ್ನ ಎದೆ ಒಡೆದೇ ಹೋಯಿತು.
ನನ್ನವನೇ..
ಮುಗಿಲು ತಿಳಿಯಾಗುತಿದೆ
ಹೇಮೆ ಇಳಿಯುತ್ತಿದ್ದಾಳೆ, ತಿಳಿಯುತ್ತಿದ್ದಾಳೆ.
ತಾಸು ಅಗಲಿಕೆಯೆಲ್ಲ ತೀರಾ ಹಳತೀಗ
ವಾರಕ್ಕೆ ಏರುತ್ತಿದೆ ದೂರ.
ಕೃಷ್ಣ ಪಕ್ಷವೋ, ಶುಕ್ಲಪಕ್ಷವೋ.?

ಈಗೀಗ ನಿನಗೆಷ್ಟು ಗಡಿಬಿಡಿ,
ಸಿಡಿಮಿಡಿ.
ಘಳಿಗೆ ಬಿಡುವಿರದ ಮಹತ್ತಿನ‌ ಮನುಷ್ಯ
ನೀನಾದೆ
ನೋಡನೋಡುತ್ತಲೇ.

ಒಣಗಿದೆ ನದಿ ಪಾತ್ರ
ಚಿಟ್ಟೆ, ಮೊಟ್ಟೆ, ಹಕ್ಕಿ, ಹೂವು
ಈಗ ಕಾಣಸಿಗುವುದಿಲ್ಲ ಅಲ್ಲಿ.
ಹಾಗಂದರೆ ಆ ಹೊಸಪ್ರೇಮಿಗಳು
ನಗುತ್ತಾ ಹೂವು ತೋರುತ್ತಾರೆ.
ಕಣ್ಣು ಹೊಸಕಿ ಪೆಚ್ಚುನಗೆ ನಕ್ಕು
ಹುಚ್ಚಿಯಾದೆನೆಂಬ ಎಚ್ಚರಿಕೆಗೆ
ಬಿಚ್ಚಲೋ ಮುಚ್ಚಲೋ ತೋಚದು.

ನನ್ನವನೇ
ನವುರು ಬಿಸಿ ಹರವಿದವನೇ
ನಿನ್ನೆಗಳ ಬೆಳಗಿದವನೇ
ಎದೆಯ ಹದವಾಗಿ ತಲುಪಿದವನೇ
ಹೆಗಲು ನೀಡಿದವನೇ
ಇಳಿಸಂಜೆಗಳ ಒಲವಿನಲಿ ಅದ್ದಿ ತೆಗೆದವನೆ
ಮುಂಜಾವುಗಳ ಬೆಳಗಿದವನೆ
ನನಗಾಗಿ ತನ್ನನ್ನೇ ಕಳೆದುಕೊಂಡವನೇ

ಒಪ್ಪಿದೆ..
ನಿನ್ನೆಯ ಆರಂಭಗಳು ನಾಳೆ ಮುಗಿಯಲೇಬೇಕು.
ಕೇಳಿಲ್ಲಿ,
ನಾಳೆಯೂ ನನಗೆ ಹೊಸದೊಂದು ನಿನ್ನೆ.
ಖಾತ್ರಿಯಿದೆ.
ಮರಳಿ ಹೊಂದುತ್ತೇನೆ ನಿನ್ನನ್ನೇ..

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಿಷ್ಣು

    ನಾಳೆ ಎಂಬುದೇ ಇವತ್ತಿಗೆ ಭರವಸೆ.
    ಚೆನ್ನಾಗಿದೆ ಕವಿತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: