ಹೋಗಿ ಬನ್ನಿ ಮೇಷ್ಟ್ರೇ…

ಗಿರಿಜಾ ಶಾಸ್ತ್ರೀ

ಕಂಬನಿದುಂಬಿದ ವಿದಾಯ ನಿಮಗೆ

೧೯೭೯ ನೆಯ ಇಸವಿ. ನಾನು ಕನ್ನಡ ಎಂ.ಎ.ಗೆ ಸೇರಿದ ಹೊಸತು. ನಮ್ಮ ರಾಜಾಜಿನಗರದ ಮನೆಯ ಹಿಂಬಾಗದಲ್ಲೇ ಒಂದು ‘ನವರಂಗ್ ಬಾರ್’ ಜ್ಞಾನ ಭಾರತಿಗೆ ಹೋಗುವ ಬಸ್ಸು ನಿಲ್ಲುತ್ತಿದ್ದುದು ಅಲ್ಲಿಯೇ. ನಾನು ಅಲ್ಲಿಯೇ ಹತ್ತುತ್ತಿದ್ದೆ. ನನ್ನ ಜೊತೆಗೆ ಕಾಲೇಜು ಹುಡುಗನಂತೆ ಕಾಣುತ್ತಿದ್ದ ಒಬ್ಬ ವ್ಯಕ್ತಿಯೂ ಅದೇ ನಿಲ್ದಾಣದಲ್ಲಿ ಹತ್ತುತ್ತಿದ್ದರು. ವಿಭಾಗಕ್ಕೆ ಹೋದಾಗಲೇ ಗೊತ್ತಾದದ್ದು. ಅವರು ವಿಭಾಗದ ಅಧ್ಯಾಪಕರಲ್ಲಿ ಒಬ್ಬರಾದ ಸಿದ್ಧಲಿಂಗಯ್ಯ ಮೇಷ್ಟ್ರು ಎಂದು. ಅಗ ಅವರು ವಿಭಾಗದಲ್ಲಿ ಸಂಶೋಧನ ವಿದ್ಯಾರ್ಥಿಯಾಗಿ ಸೇರಿದ್ದರು.

‘ನಮ್ಮ ಮನೆ ಪ್ರಕಾಶ್ ನಗರದ ದೊಡ್ಡ ಮೋರಿ ಹತ್ತಿರ’ ಎಂದು ಒಮ್ಮೆ ಬಸ್ ಸ್ಟಾಪಿನಲ್ಲಿ ನಿಂತಾಗ ಯಾರ ಬಳಿಯೋ ಹೇಳುತ್ತಿದ್ದರು. ಆಗ ಪ್ರಕಾಶನಗರ ಒಂದು ಕೊಳಗೇರಿಯಂತಿತ್ತು. ಪಕ್ಕದಲ್ಲೇ ಹರಿಶ್ಚಂದ್ರ ಘಾಟ್. ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ ಮೇಷ್ಟ್ರದ್ದು. ಅವರ ಊರು ಕೇರಿ, ಅವತಾರಗಳು ಓದಿದ ಯಾರಿಗಾದರೂ ಇದು ಅನುಭವಕ್ಕೆ ಬಂದೇ ಬರುತ್ತದೆ.

ಅಣ್ಣಮ್ಮನನ್ನು ‘ನೀನು ಮೆಜೆಸ್ಟಿಕ್ ಮುಂಡೆ’ ಎಂದು ದೇವರು ಮೈಮೇಲೆ ಬಂದ ಇಬ್ಬರು ವೈರಿಗಳು ತಮ್ಮ ತಮ್ಮ ದೇವರುಗಳನ್ನು ಮುಂದಿಟ್ಟುಕೊಂಡು ಜಗಳವಾಡುತ್ತಿದ್ದ ಹಾಸ್ಯಪ್ರಸಂಗವನ್ನು ಮೇಷ್ಟ್ರು ರಸವತ್ತಾಗಿ ಬಣ್ಣಿಸುತ್ತಿದ್ದರು. ಅದನ್ನು ಕೇಳಿ ನಾವು ಬಿದ್ದು ಬಿದ್ದು ನಗುತ್ತಿದ್ದೆವು. ಅವರ ಪಿಎಚ್.ಡಿ ವಿಷಯವೂ ‘ಗ್ರಾಮದೇವತೆಗಳ’ ಕುರಿತಾದುದೇ ಆಗಿತ್ತು.

ನಾವು ಎಂ.ಎ. ಗೆ ಸೇರಿದ ಹೊಸತರಲ್ಲೇ ಬಂಡಾಯ ಸಾಹಿತ್ಯ ಸಮಾವೇಶ ಕಾರ್ಪೋರೇಷನ್ ಬಳಿಯ ದೇವಾಂಗ ಹಾಸ್ಟೆಲ್ ನಲ್ಲಿ ನಡೆಯಿತು. ಆಗ ವಿದ್ಯಾರ್ಥಿಗಳಾದ ನಾವೆಲ್ಲಾ ಹೋಗಿದ್ದ ನೆನಪು ಇನ್ನೂ ಹಸಿಯಾಗಿದೆ. ಅಲ್ಲಿ ಕೆಲವು ಯುವಕರು ಬಂಡಾಯದ ಹಾಡುಗಳನ್ನು ತಮಟೆ ಬಾರಿಸುತ್ತ ಆವೇಶದಿಂದ ಹಾಡುತ್ತಿದ್ದರು. ಆ ಹಾಡುಗಳೆಲ್ಲಾ ಸಿದ್ಧಲಿಂಗಯ್ಯ ಮೇಷ್ಟ್ರು ರಚಿಸಿದ ಕವಿತೆಗಳು ಎಂದು ಗೊತ್ತಾದದ್ದು ನಾನು ಕ್ಯಾಂಪಸ್ ಬಿಟ್ಟ ಮೇಲೆಯೇ.

ನಾನು ಅವರ ನೇರ ವಿದ್ಯಾರ್ಥಿನಿಯಾಗಿರಲಿಲ್ಲ. ಜಾನಪದ ಅವರ ಕ್ಷೇತ್ರವಾದದ್ದರಿಂದ ಜಾನಪದವನ್ನು ವಿಶೇಷ ವಿಷಯವನ್ನಾಗಿ ಅಧ್ಯಯನ ಮಾಡುವವರಿಗೆ ಅವರು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ತರಗತಿಗಳಿಂದ ಹೊರ ಬಂದ ಮೇಲೆ ನಮ್ಮ ನಮ್ಮ ಅಧ್ಯಾಪಕರುಗಳ ಗುಣಗಾನ, ಅವರು ತರಗತಿಯಲ್ಲಿ ಹೇಳಿದ ಜೋಕುಗಳನ್ನು ಹಂಚಿಕೊಳ್ಳುವುದು, ಯಾರ ಮೇಲೆ ಯಾರಿಗೆ ಕ್ರಷ್ ಆಗಿದೆಯೆಂಬುದನ್ನು ಮೊಗಮ್ಮಾಗಿ ಛೇಡಿಸುವುದು ಮುಂತಾದವುಗಳೆಲ್ಲಾ‌ ಗೆಳತಿಯರ ಮಧ್ಯೆ ನಡೆಯುತ್ತಿತ್ತು. ನಮಗಿಂತ ಮೇಲಿನ ತರಗತಿಯಲ್ಲಿ ಬೆಳ್ಳಗಿನ ಒಬ್ಬ ಬ್ರಾಹ್ಮಣ ಹುಡುಗಿಯಿದ್ದಳು. ಅವಳು ಗುಂಪಿನಲ್ಲಿದ್ದಾಳೆ ಎಂದರೆ ಬೇಕೆಂದೇ ಸಿದ್ಧಲಿಂಗಯ್ಯನವರ ಮಾತು ತೆಗೆಯುತ್ತಿದ್ದೆವು. ಅವಳು ಎಷ್ಟು ಕೆಂಪಾಗುತ್ತಿದ್ದಳೆಂದರೆ ಅವಳನ್ನು ಮತ್ತೂ ಛೇಡಿಸಿ ಗೋಳು ಹುಯ್ದುಕೊಳ್ಳುತ್ತಿದ್ದೆವು. ಅವರ ಮೇಲಿನ ಕ್ರಷ್ ನ್ನು ಅಪ್ಪಚ್ಚಿ ಮಾಡಿ ಅವಳು ಎಲ್ಲಿ ಹೋದಳೋ ತಿಳಿಯದು.

ಎಂ. ಎ. ಮುಗಿದ ಮೇಲೆ ಒಮ್ಮೆ ಕ್ಯಾಂಪಸ್ಸಿಗೆ ಹೋಗಿದ್ದೆ. ಇನ್ನೊಬ್ಬ ಅಧ್ಯಾಪಕರ ಜೊತೆ ಅವರು ವಿ.ವಿ. ಆಡಳಿತ ಬ್ಲಾಕ್‌ನಿಂದ ನಡೆದು ಬರುತ್ತಿದ್ದರು. ‘ಏನ್ರೀ ಹೇಗಿದ್ದೀರಾ?’ ಎಂದು ಕೇಳಿದಾಗ ನಾನು ಒರಟಾಗಿ ಉತ್ತರಿಸಿ ಅವರ ಮೇಲೆ ರಾಚಿದ್ದೆ. ಇದಕ್ಕೆ, ನನ್ನ ಕೊರಳ ಗೆಳತಿಯನ್ನು ಪ್ರೇಮಿಸಿದ ಒಬ್ಬ ಅಧ್ಯಾಪಕರು ಅವಳಿಗೆ ಕೈಕೊಟ್ಟಿದ್ದೇ ಕಾರಣವಾಗಿತ್ತು. ಆ ‘ಮಹಾತ್ಮ’ ಸಿದ್ಧಲಿಂಗಯ್ಯನವರ ಖಾಸಾ ಗೆಳೆಯರೂ ಆಗಿದ್ದರು ( ಈಗ ಅವರೂ ಇಲ್ಲ). ಅವರ ಗೆಳೆಯನ ಹೀನ ನಡವಳಿಕೆಯನ್ನು ಪ್ರಶ್ನಿಸಿ ಅವರ ಮೇಲೆ ರೇಗಿದ್ದೆ. ಆಗ ನನ್ನ ಬಳಿಯಲ್ಲೇ ಇದ್ದ ಇನ್ನೊಬ್ಬ ಗೆಳತಿ ‘ಅವರು ಕೈ ಕೊಟ್ಟರೆ ಇವರೇನು ಮಾಡೋಕೆ ಆಗುತ್ಯೇ?’ ಎಂದು ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದಳು.

ಮೇಷ್ಟ್ರು ಮುಂಬಯಿಗೂ ಎರಡು ಸಲ ಬಂದಿದ್ದರು. ನನ್ನ ಆಧ್ಯಯನದ ಕುರಿತಾಗಿ ಮೆಚ್ಚಿಕೊಂಡು ಮಾತನಾಡಿದ್ದರು. ಆವೇಳೆಗೆ ಅವರ ವಿಚಾರಗಳು ಬದಲಾಗಿದ್ದವು. ಗೆಳತಿ ಸುಮಾ ‘ವಿಶ್ವಪ್ರಜ್ಞೆಯ ಉದಯ’ ಹೆಸರಿನಲ್ಲಿ ದಾದಾ ಗಾವಂಡ್ ಎಂಬ ದಾರ್ಶನಿಕ ಸಾಧಕರೊಬ್ಬರ ಆತ್ಮ ಚರಿತ್ರೆ ಯನ್ನು ಕನ್ನಡಕ್ಕೆ ಅನುವಾದ ಮಾಡಿದಾಗ ಅದನ್ನು ಮೆಚ್ಚಿಕೊಂಡಿದ್ದಲ್ಲದೆ, ದಾದಾಜಿಯವರ ಚರಿತ್ರೆಯಿಂದ ಬಹಳ ಪ್ರಭಾವಿತರಾದ ಅವರು ಸತಾರಾದ ಆಸ್ಪತ್ರೆಯಲ್ಲಿ ಮಲಗಿದ್ದ ಗಾವಂಡರನ್ನು ನೋಡಲು ಬಹಳ ಪಾಡುಪಟ್ಟುಕೊಂಡು ಹೋಗಿದ್ದರು.

‘ಪೋಲೀಸರ ದೊಣ್ಣೆಗಳು ಏಜಂಟರ ಕತ್ತಿಗಳು’ ಎಂದು ಕೈಯೆತ್ತಿ ಅಭಿನಯ ಪೂರ್ವಕ ತಮ್ಮ ಗೆಳೆಯನ ಸಾಲುಗಳನ್ನು ಅಷ್ಟೇ ಶಕ್ತಿಯುತವಾಗಿ ತರಗತಿಗಳಲ್ಲಿ ಪ್ರಸ್ತುತ ಪಡಿಸುತ್ತಿದ್ದ ಡಿ.ಆರ್. ಎನ್. ಅವರ ಅಂದಿನ ಹಾವ ಭಾವಗಳೂ ಕಣ್ಣಮುಂದೆ ಬರುತ್ತವೆ. ಈಗ ಇಬ್ಬರೂ ಇಲ್ಲ! ಕಣ್ಣು ಮಂಜಾಗುತ್ತದೆ.

ಮೇಷ್ಟ್ರು ಎಂದರೆ ಅನೇಕ ನೆನಪುಗಳು ಹೀಗೆ ಮುಗಿ ಬೀಳುತ್ತವೆ. ಕ್ಷುಲ್ಲಕ ಎಂದು ಪರಿಗಣಿಸಿದ ನೆನಪುಗಳಿಗೂ ಸಾವಿನ ಸಮ್ಮುಖದಲ್ಲಿ ಎಲ್ಲಿಲ್ಲದ ಮಹತ್ವ ಬಂದು ಬಿಡುತ್ತದೆ.

ಹೋಗಿ ಬನ್ನಿ ಮೇಷ್ಟ್ರೇ ನೀವು ಬಿತ್ತಿದ ಕ್ರಾಂತಿಯ ಬೀಜಗಳು ನಿಷ್ಫಲವಾಗುವುದಿಲ್ಲ. ಅದರ ಮೂಲಕ ಯಾವಾಗಲೂ ನೀವು ಚಲಿಸುತ್ತಲೇ ಇರುತ್ತೀರಿ

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: