ಎಚ್ ಎಲ್ ಪುಷ್ಪ ನೆನಪು-‌ ಎಲ್ಲಿಂದ ಆರಂಭಿಸಬಹುದು?

ಎಚ್ ಎಲ್ ಪುಷ್ಪ

ಬಹುಶಃ ಎಲ್ಲರೂ ಈಗಾಗಲೇ ಪ್ರಸ್ತಾಪಿಸಿರುವಂತೆ ನನ್ನ ಎಂ. ಎ ವಿದ್ಯಾರ್ಥಿ ದಿನಗಳಿಂದಲೇ ಆರಂಬಿಸಬೇಕು. ಮೊನ್ನೆ ತಾನೆ ಮರೆಯಾಗಿಹೋದ ನನ್ನ ತಮ್ಮನಂತಹ ವಿಠಲ ಭಂಡಾರಿ ಸಾವು ತೀವ್ರವಾಗಿ ಅಲ್ಲಾಡಿಸಿತ್ತು. ಸಾವು ಗಿಡುಗನ ಹಾಗೆ ಆಯ್ದು ತಿನ್ನುವ ಕೋಳಿಯ ಮೇಲೆ ಎರಗಿದರೆ ಹರ ಕೊಲ್ಲಲ್ ಪರ ಕಾಯ್ವನೇ ಎಂಬಂತಾಗುತ್ತದೆ ನಮ್ಮ ಪರಿಸ್ಥಿತಿ. ನಿನ್ನೆ ತಾನೇ ದೇವನೂರು ಮಹಾದೇವ ಹಾಗೂ ಡಾ.ಎಲ್.ಎಚ್. ಹನುಮಂತಯ್ಯ ಅವರುಗಳ ಹುಟ್ಟುಹಬ್ಬಕ್ಕೆ ನಾವೆಲ್ಲಾ ಹಾರೈಸಿದ್ದೆವು. ಇಂದು ಡಾ. ಸಿದ್ದಲಿಂಗಯ್ಯನವರು ನಮ್ಮೆಲ್ಲರಿಗೂ ವಿದಾಯ ಹೇಳಿದ ದಿನ. ನಮ್ಮಿಂದ. ಬಹಳ ಬೇಗ ನಿರ್ಗಮಿಸಿದ ಕವಿ ಕೆ.ಬಿ.ಸಿದ್ದಯ್ಯನವರು ಸಹ ಇಲ್ಲಿ ನೆನಪಾಗುತ್ತಿದ್ದಾರೆ.

ಕೋವಿಡ್ ಸಂಕಷ್ಟದ ಕಾಲವನ್ನು ಜೀವಗಳೆಂಬ ಎಲೆಗಳುದುರುವ ಕಾಲವೆಂದೇ ಕಾಣಬಹುದು. ಗಟ್ಟಿಯಾಗಿ ಕೊಂಬೆಗಳಿಗಂಟಿಕೊಂಡ ಹಸಿರು ಎಲೆಗಳು ಸ್ವಚ್ಛವಾದ ಆಮ್ಲಜನಕವನ್ನು ಉಸಿರಾಡುತ್ತವೆ. ಅದಕ್ಕೆ ಯೌವ್ವನವೂ ಕಾರಣವಾಗಿರುತ್ತದೆ. ಸ್ವಲ್ಪ ಮಾಗಿದ ಎಲೆಗಳು ಹಳದಿಗಟ್ಟಿ ಕೊಂಬೆಗಳಿಗಂಟಿಕೊಂಡರೂ ಹಾಳಾದ ಬಿರುಗಾಳಿ ರೊಯ್ ಎಂದು ಬೀಸತೊಡಗಿದರೆ ಹೇಗೆ ತಡೆದುಕೊಳ್ಳಬಹುದು.

ನೆನಪುಗಳು ಗರಿಗೆದರಿ ಬಿಚ್ಚಿಕೊಳ್ಳುವುದಕ್ಕೂ ಭಾರವಾಗಿ ಕಣ್ಬಿಡುವುದಕ್ಕೂ ವ್ಯತ್ಯಾಸವಿದೆ. ನನ್ನ ಕವಿತೆಗಳು ಕಣ್ತೆರೆದದ್ದು ಎಂ. ಎ ವಿದ್ಯಾರ್ಥಿ ಕಾಲಮಾನದಲ್ಲಿಯೇ. 1982- 1984ರ ಸಮಯದಲ್ಲಿ ನಾವೆಲ್ಲರೂ ಕವಿಗಳಾಗಿಬಿಟ್ಟಿದ್ದೆವು. ಎಲ್.ಎನ್. ಮುಕುಂದರಾಜ್, ಕೆ. ಸುಜಾತ, ಸಿ. ಸೋಮಶೇಖರ್ ನಾವೆಲ್ಲರೂ ಕವಿತೆಯನ್ನು ಉಸಿರಾಡುವವರಾಗಿದ್ದೆವು. ನಮ್ಮ ಜೊತೆಗೆ ನಮ್ಮ ಸೀನಿಯರ್ ಅಗಿದ್ದ ಜಿ. ವಿ. ಆನಂದಮೂರ್ತಿ ಇಲ್ಲಿ ನೆನಪಾಗುತ್ತಾರೆ. ನಾವು ಬಹಳಷ್ಟು ಒಳ್ಳೆಯ ಪುಸ್ತಕಗಳನ್ನು ಪಡೆದು ಓದಿದ್ದು ಅವರಿಂದಲೇ. ಕವಿತೆ ಹೇಗೆ ನನ್ನೊಳಗೆ ಬಂದಿತೋ, ನಾನು ಕವಿತೆಯನ್ನು ನನ್ನೊಳಗೆ ಹೇಗೆ ಬಿಟ್ಟುಕೊಂಡೆನೋ ತಿಳಿಯದು.

ಕವಿತೆಯ ವಾತಾವರಣವೆಂಬುದು ನಮ್ಮ ಮನೆಯ ವಾತಾವರಣದಲ್ಲಿ ಇರಲಿಲ್ಲ. ಕುಟುಂಬದ ಕಡೆ ಯಾರೂ ಬರಹ ಬಲ್ಲ ಲೇಖಕರಿರಲಿಲ್ಲ. ವಿಜ್ಞಾನದ ವಿದ್ಯಾರ್ಥಿಯಾದ ನಾನು ಕನ್ನಡ ಸಾಹಿತ್ಯ ಓದಲೇ ಬೇಕೆಂದು ಮನೆಯಲ್ಲಿ ಜಗಳವಾಡಿಕೊಂಡೇ ಬಂದಿದ್ದೆ. ಗುರುಗಳಾದ ಕಿ. ರಂ. ಸಿದ್ದಲಿಂಗಯ್ಯನವರ ಕವಿತೆಗಳನ್ನು ಕುರಿತು ಮಾತನಾಡಿದ್ದು, ಕಾವ್ಯದ ಲಯದ ಹುಚ್ಚನ್ನು ಹಿಡಿಸಿದ್ದನ್ನು ಹೇಗೆ ಮರೆಯಲಾದೀತು. ಒಂದು ರೀತಿಯ ಹತಾಶೆ, ದಕ್ಕದ ಯಾವುದನ್ನೋ ಪಡೆಯಬೇಕೆಂಬ ಹುಚ್ಚು ಆವೇಶ, ಮತ್ತೆ ಮತ್ತೆ ಆದ್ರವಾಗುತ್ತಿದ್ದ ವಯೋಸಹಜ ಪ್ರೀತಿ ಪ್ರೇಮ, ಕುಟುಂಬದ ನಿರೀಕ್ಷೆಗಳಿಗೆ ಭಿನ್ನವಾಗಿ ಬದುಕು ರೂಪಿಸಿಕೊಳ್ಳಬೇಕೆಂಬ ಹಠ ನಿರ್ದಿಷ್ಟವಾದ ಆಕಾರ ಪಡೆಯತೊಡಗಿತು.

ಹೀಗೆ ಕಂಪಿಸುತ್ತಿದ್ದ ಭಾವನೆಗಳಿಗೆ ಸ್ಷಷ್ಟ ರೂಪು ಕೊಟ್ಟಿದ್ದು ಬಂಡಾಯ ಹಾಗೂ ದಲಿತ ಸಾಹಿತ್ಯ. ಮತ್ತೆ, ಮತ್ತೆ ಸಿದ್ದಲಿಂಗಯ್ಯನವರ ಕವಿತೆಗಳು ಕಾಡಲಾರಂಭಿಸಿದ್ದವು. ಪ್ರಸಿದ್ದ ಹಾಡುಗಾರ ಅಪ್ಪಗೆರೆ ತಿಮ್ಮರಾಜು ಹಾಡುತ್ತಿದ್ದ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುತ್ತಾಡಬೇಡ ಗೆಳತಿ, ಮೃದುವಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವೋ ಬೆಳ್ಳಿಕಿರಣ’ ಎಂಬ ಕವಿತೆ ಮತ್ತೆ ಮತ್ತೆ ಕಾಡಲಾರಂಭಿಸಿತ್ತು. ನನ್ನೊಳಗಿನ ಕವಿ ಅಥವಾ ಕವಯತ್ರಿ ಕಣ್ಣು ಬಿಡಲಾರಂಭಿಸಿದ್ದು ಈ ಸಂದರ್ಭದಲ್ಲಿಯೇ. ಆ ಕವಿತೆಯೊಳಗಿನ ತಣ್ಣಗಿನ ಸುಡುವ ನೋವು, ಅಸಮಾನತೆಯ ನಡುವಿನ ಹತಾಶ ಭಾವಗಳು ಇಂದಿಗೂ ನನ್ನನ್ನು ಕಾಡುತ್ತವೆ.

ಒಂದೊಂದು ಕವಿತೆ ಓದುಗನ ಗ್ರಹಿಕೆ, ಅಭಿರುಚಿ, ಜೀವನ ವಿಧಾನಕ್ಕೆ ಅನುಗುಣವಾಗಿ ಬಿಚ್ಚಿಕೊಳ್ಳುತ್ತದೆ ಎಂಬ ಮಾತನ್ನು ನಾನು ಖಂಡಿತಾ ನಂಬುವವಳು. ಹೀಗಾಗಿ ಉಳಿದವರ ಕವಿತೆಗಳಿಗಿಂತ ಹೆಚ್ಚು ಕಾಡಿದ್ದು ಸಿದ್ದಲಿಂಗಯ್ಯನವರ ಕವಿತೆಗಳೇ. ಗಂಗಾಧರ ಚಿತ್ತಾಲರ ‘ಸಂಪರ್ಕ’ ನಾವು ಎರಡನೆಯ ವರ್ಷದಲ್ಲಿ ಪ್ರಕಟವಾಯಿತು. ಆಗ ಚಿತ್ತಾಲರು ಪಾರ್ಕಿನ್ಸನ್ ರೋಗದ ಉಪದ್ರವಕ್ಕೆ ಒಳಗಾಗಿದ್ದರು. ಸಾವಿನ ಮುಂದೆ ಮೊರೆವ ಜೀವದ ಹಾಡು ಕಾಡಲಾರಂಭಿಸಿತ್ತು. ನೀನೇ ಕೊಟ್ಟ ‘ಈ ಅಂಗಾಂಗದ ಬಂಧ ಕೆಡಿಸದಿರು’ ಎಂಬ ಜೀವದ ಹಾಡು ನನ್ನನ್ನು ಬೆದಕಲಾರಂಭಿಸಿತ್ತು. ನಂತರ ಉಪನ್ಯಾಸಕಳಾಗಿ ಕೆಲಸಕ್ಕೆ ಸೇರಿಕೊಂಡ ನಂತರ ಹೆಚ್.ಎಸ್. ಶಿವಪ್ರಕಾಶ್ ಅವರ ಕಾವ್ಯ ನನ್ನನ್ನು ಸೆಳೆಯಲಾರಂಭಿಸಿತು. ಸತ್ತ ಸತಿಯ ಹೆಗಲ ಮೇಲೊತ್ತು ಅಲೆವ ಶಿವನ ಸತಿಯ ಬಗೆಗಿನ ಪ್ರೇಮ, ವಿರಹದ ತೀವ್ರತೆ, ಉರಿವ ಪ್ರೇಮದ ಸಂಕಟವನ್ನು ಅರ್ಥಮಾಡಿಸಿತ್ತು. ಈ ಮೂವರೂ ಕವಿಗಳು ನನ್ನ ಕಾವ್ಯದ ಜೀವಸೆಲೆಗಳು. ಗುರುಪರಂಪರೆಯನ್ನು ನಾನು ಒಪ್ಪಿಕೊಂಡವಳೂ, ಆರಾಧಿಸುವವಳೂ ಆದ್ದರಿಂದ ಈ ಮೂವರೂ ನನ್ನ ಕಾವ್ಯದ ಮೂಲಸೆಲೆಗಳು.

ಸಿದ್ದಲಿಂಗಯ್ಯನವರ ತಾಯಿಯ ತವರಾದ ಮಂಚನಬೆಲೆಯಲ್ಲಿ ಐದು ವರ್ಷಗಳ ಕಾಲ ಪ್ರಾಂಶುಪಾಲಳಾಗಿ ಕೆಲಸ ಮಾಡಿದೆ. ಅವರು ‘ಊರುಕೇರಿ’ಯಲ್ಲಿ ತಮ್ಮ ಬಾಲ್ಯ ಕಾಲದಲ್ಲಿ ಓಡಾಡಿದ, ಆಟವಾಡಿದ ಸ್ಥಳಗಳ ಬಗ್ಗೆ ಅಲ್ಲಿ ಕೇಳಿ ತಿಳಿದಿದ್ದೆ. ಬಾಲ್ಯದಲ್ಲಿ ಮೀನು ಹಿಡಿಯುತ್ತಿದ್ದ ಡ್ಯಾಂ ನಮ್ಮ ಕಾಲೇಜಿನ ಎದುರಿಗೇ ಇತ್ತು. ಸಿಕ್ಕಾಗಲೆಲ್ಲಾ ತಮ್ಮ ಊರು ಬದಲಾಗಿದೆಯೇ ಎಂದು ಅವರು ಕುತೂಹಲದಿಂದ ಕೇಳುತ್ತಿದ್ದರು. ಬಸ್ಸುಗಳ ಸೌಲಭ್ಯವಿಲ್ಲದ ಸುತ್ತಲೂ ಬೆಟ್ಟಗಳಿರುವ ಆ ಊರಿಗೆ ಸುತ್ತಮುತ್ತಲಿನಿಂದ ಕಾಲೇಜಿಗೆ ಮೈಲುಗಟ್ಟಲೆ ನಡೆದ ಬರುವ ವಿದ್ಯಾರ್ಥಿಗಳ ಬವಣೆ ಈಗಲೂ ಹಾಗೆ ಇದೆ ಎಂದು ಹೇಳಿದ್ದನ್ನು ಅವರು ಕೇಳಿಸಿಕೊಂಡರು.

ಮೊನ್ನೆ ಎಂದರೆ ಏಪ್ರಿಲ್ ತಿಂಗಳ ಮೂರನೆ ವಾರದಲ್ಲಿ ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೊಂದರ ಆಯ್ಕೆ ಸಂದರ್ಭದಲ್ಲಿ ಕುಂವೀ ಅವರೊಂದಿಗೆ ಮೆಷ್ಟರನ್ನು ಭೇಟಿಯಾಗಿದ್ದು ಕೊನೆಯ ನೆನಪಾಗಿ ಉಳಿಯಿತು. ಅರ್ಹಕವಿಯೊಬ್ಬರಿಗೆ ಸಿಕ್ಕಬೇಕಾದ ಪ್ರಶಸ್ತಿ ಕೃತಿಯಲ್ಲಿನ ಕವಿಯ ನಿಲುವುಗಳಿಂದಾಗಿ ತಿರಸ್ಕ್ರತವಾಯಿತು. ನಮ್ಮ ಪ್ರಶ್ನೆಗಳಿಗೆ ಸಾವಧಾನದಿಂದ ಉತ್ತರಿಸಿದ ಅವರು ಸಿಟ್ಟುಗೊಳ್ಳಲಿಲ್ಲ. ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿಯೇ ತಿಳಿಸಿದರು.

ಈಗ ಗುರುಗಳಾದ ಸಿದ್ದಲಿಂಗಯ್ಯನವರು ನಮ್ಮಿಂದ ದೂರಾಗಿದ್ದಾರೆ. ಆರೋಗ್ಯವನ್ನು ಮರಳಿ ಪಡೆದು ಹಿಂದಿರುಗುತ್ತಾರೆ ಎಂದು ನಿರೀಕ್ಷೆಯಲ್ಲಿದ್ದ ನಾವೆಲ್ಲರೂ ಈಗ ನೊಂದಿದ್ದೇವೆ. ಒಂದು ಜನಾಂಗದ ಕಣ್ಣು ತೆರೆಸಿದ ಕವಿ, ಹೋರಾಟದ ಸಾಗರಕ್ಕೆ ನೂರಾರು ನದಿಗಳನ್ನು ಸೇರಿಸಿದ ಕವಿ ಮರೆಗೆ ಸರಿದ ವಾಸ್ತವವನ್ನು ಈಗ ಒಪ್ಪಿಕೊಳ್ಳಲೇಬೇಕಾಗಿದೆ. ಅವರು ಉಳಿಸಿ ಹೋದ ಹಾಡುಗಳನ್ನು ನಾಳಿನ ಜನಾಂಗಕ್ಕೆ ಮತ್ತಷ್ಟು ತಲುಪಿಸಬೇಕಾಗಿದೆ.

ನೆನ್ನೆ ತಾನೆ ಫೋನ್ ಮಾಡಿದ ಹೆಸರಾಂತ ಕವಿ ಸತ್ಯಾನಂದ ಪಾತ್ರೋಟ ಅವರು ಆತ್ಮಕತೆ ಬರೆಯುತ್ತಿದ್ದೇನೆ ಎಂದರು. ನಿಮ್ಮ ನೆನಪಾಯಿತು, ಮಾತನಾಡಿಸಲೆಂದು ಫೋನ್ ಮಾಡಿದೆ ಎಂದರು. ಮಾತಿನ ನಡುವೆ ನಾನು ಕನ್ನಡದ ಹಿರಿಯ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರನ್ನು ಮಲ್ಲಿಗೆಯ ಕವಿ ಎಂದು ಕರೆದರೆ ನಿಮ್ಮನ್ನು ಸಂಜೆ ಮಲ್ಲಿಗೆಯ ಕವಿ ಕರೆಯುತ್ತೇವೆ ಎಂದು ಹೇಳಿದೆ. ನಕ್ಕ ಅವರು ಛಲೋ ಹೇಳಿದ್ರಿ ಮೇಡಂ ಎಂದರು.

ಸಂಜೆಮಲ್ಲಿಗೆಯಂತಹ ಹಿರಿಯ ಚೇತನಗಳು, ನಮ್ಮನ್ನು ರೂಪಿಸಿದ ಹಿರಿಯ ವ್ಯಕ್ತಿತ್ವಗಳು ಒಂದೊಂದೇ ಕಣ್ಮರೆಯಾಗುತ್ತಿವೆ. ಈ ಸಾಲಿನಲ್ಲಿ ನಾವು ಎಲ್ಲಿ ನಿಂತಿರುವೆವೂ, ಯಾವಾಗ ಕರೆ ಬರುವುದೋ ತಿಳಿಯದು. ನಿಂತಿದ್ದೇವೆ ಅನ್ನುವುದಂತೂ ಪರಮಸತ್ಯ.

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: