ಜಿ ಎನ್ ನಾಗರಾಜ್ ಅಂಕಣ- ವ್ಯಾಕ್ಸೀನು ಕೊರತೆ ಮತ್ತು ಕೊರೋನಾ ಅಲೆಗಳ ಆತಂಕ

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ಕರ್ನಾಟಕದ ಎಲ್ಲೆಡೆ ವ್ಯಾಕ್ಸೀನ್‌ಗಳಿಗಾಗಿ ದೊಡ್ಡ ಸರತಿ ಸಾಲುಗಳು. ಹಲವಾರು ದಿನ ಬಂದು ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾದು ಸುಸ್ತಾಗು ಮರಳುತ್ತಿರುವ ಜನ. ಇದೇ ಚಿತ್ರಣ ಯುಪಿ, ಒಡಿಶಾ, ಮಹಾರಾಷ್ಟ್ರ, ದೆಹಲಿ ಮೊದಲಾದ ಹಲವು ರಾಜ್ಯಗಳಲ್ಲಿ.

ಅದೇ ಸಮಯದಲ್ಲಿ ಸುದ್ದಿ ಚಾನೆಲ್‌ಗಳಲ್ಲಿ ಮೂರನೇ ಅಲೆಯ ಬಗ್ಗೆ ಬೊಬ್ಬಿರಿತ. ಎರಡನೇ ಅಲೆಯ ಅಬ್ಬರ, ಸಾವುಗಳ ಮೆರವಣಿಗೆ ನೋಡಿದ ಜನರಲ್ಲಿ ಮತ್ತೆ ಮನೆ ಮಾಡಿದ ಆತಂಕ. ಇವುಗಳ ಜೊತೆಗೆ ಕೊರೋನಾ ವೈರಾಣುವಿನ ಹೊಸ ಹೊಸ ರೂಪಗಳ ಬಗ್ಗೆ ಚರ್ಚೆ. ಡೆಲ್ಟಾ ರೂಪವಂತೆ ಅದೇ ಭಾರತದ ಎರಡನೇ ಅಲೆಯ ಆಕ್ರಮಣಕಾರಿತೆಗೆ ಕಾರಣವಂತೆ.

ಈಗ ಡೆಲ್ಟಾ ಪ್ಲಸ್ ಎಂಬ ಮತ್ತೊಂದು ಹೊಸ ರೂಪ ತಳೆದಿದೆಯಂತೆ. ಅಲ್ಲಿ ಕಾಣಿಸಿದೆಯಂತೆ. ಇಲ್ಲಿ ಕಂಡಿದೆಯಂತೆ. ಆಗಲೇ ವಿಶ್ವದ ಹಲವಾರು ದೇಶಗಳಿಗೆ ಹಬ್ಬಿದೆಯಂತೆ ಎಂಬ ಸುದ್ದಿಗಳು.
ವ್ಯಾಕ್ಸೀನ್‌ನ ತೀವ್ರ ಕೊರತೆ, ಕೊರೋನಾದ ಮೂರನೇ ಅಲೆಯ ಆತಂಕ, ವೈರಾಣುವಿನ ಹೊಸ ರೂಪ ಈ ಮೂರೂ ಒಂದಕ್ಕೊಂದು ಹೆಣೆದುಕೊಂಡಿವೆ. ಹೆಚ್ಚು ಹೆಚ್ಚು ಕಾಂಪ್ಲೆಕ್ಸ್‌ಗೊಳ್ಳುತ್ತಿವೆ.

ಈ ಹೆಣಿಕೆಯನ್ನು ಅರ್ಥ ಮಾಡಿಕೊಳ್ಳಲು ವೈರಾಣುವಿನ ಸ್ವರೂಪವನ್ನು ತಿಳಿದುಕೊಳ್ಳುವುದು ಅಗತ್ಯ.
ಎಲ್ಲ ವೈರಾಣುಗಳು ಜೀವವಿಲ್ಲದ ಆದರೆ ಜೀವದ ಮೂಲಾಧಾರವಾದ ಮಹಾಣುಗಳು. ಅವುಗಳಿಗೆ ಸೂಕ್ತವಾದ ಜೀವಿಯೊಂದು ಸಿಕ್ಕಿದರೆ ಅವುಗಳ ಜೀವಕೋಶಗಳ ಒಳ ಹೊಕ್ಕು ಆ ಜೀವಿಯ ಜೀವ ದ್ರವ್ಯವನ್ನೇ ಬಳಸಿಕೊಂಡು ಬಹು ವೇಗವಾಗಿ ವೃದ್ದಿಸುತ್ತವೆ.

ಕೊರೋನಾ ವೈರಾಣು  ಆರ್‌ಎನ್‌ಎ ಎಂಬ ಮಹಾಣು. ಅದು ಮನುಷ್ಯ ಮೊದಲಾದ ಜೀವಿಗಳಲ್ಲಿರುವ ಡಿಎನ್‌ಎ ಯ ಎರಡು ಎಳೆಗಳಲ್ಲಿರುವ ಒಂದು ಎಳೆಯ ರೂಪದ ಅಣುಗಳು. ಡಿಎನ್‌ಎ ತನ್ನನ್ನು ತಾನು ನಿಖರವಾಗಿ ಪುನರುತ್ಪತ್ತಿ ಮಾಡಿಕೊಳ್ಳುವ ಶಕ್ತಿ ಪಡೆದಿದೆ. ಅಂತಹ ವ್ಯವಸ್ಥೆ ವೈರಾಣುಗಳಿಗಿಲ್ಲ.

ಆದ್ದರಿಂದ ಜೀವಿಗಳನ್ನು ಹೊಕ್ಕ ನಂತರ ವೇಗವಾಗಿ ವೃದ್ಧಿಯಾಗುವಾಗ ಬಹಳ ತಪ್ಪುಗಳಾಗುತ್ತವೆ. ಆಗ ಮೂಲ ರೂಪಕ್ಕಿಂತ ಭಿನ್ನವಾದ  ಹಲ ಹಲವು ಬೇರೆ ಬೇರೆ ರೂಪಗಳು ಉದ್ಭವಿಸುತ್ತವೆ. ಈ ರೂಪಗಳಲ್ಲಿ ಬಹಳಷ್ಟು ಕೆಲಸಕ್ಕೆ ಬಾರದವು. ವೈರಾಣುವನ್ನು ದುರ್ಬಲಗೊಳಿಸುತ್ತವೆ. ಆದರೆ ಕೆಲ ರೂಪಗಳು ಮತ್ತಷ್ಟು ಪರಿಣಾಮಕಾರಿಯಾಗಿ ಜೀವಕೋಶಗಳ ಒಳಹೊಗುವ, ಮತ್ತಷ್ಟು ಹೆಚ್ಚು ವೇಗವಾಗಿ ವೃದ್ಧಿಯಾಗುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ. ಇಂತಹ ರೂಪಗಳಿಗೆ variants of concern (ಎಚ್ಚರಿಕೆಯಿಂದಿರಬೇಕಾದ ರೂಪಗಳು ಎಂಬ ಅರ್ಥದಲ್ಲಿ) ಎನ್ನುತ್ತಾರೆ ವೈರಾಣು ವಿಜ್ಞಾನಿಗಳು. ಇವು ಈಗಾಗಲೇ ಸೋಂಕು ತಗುಲಿ ವಾಸಿಯಾದವರಿಗೂ ಮತ್ತೆ ಸೋಂಕು ಉಂಟುಮಾಡುವ ಶಕ್ತಿಯನ್ನೂ ಪಡೆದುಕೊಂಡಿರುತ್ತವೆ.

ಕೊರೋನಾ ವೈರಾಣುವಿನಲ್ಲಿ ಇಲ್ಲಿಯವರೆಗೆ ಅಂತಹ ನಾಲ್ಕು ಪ್ರಬಲ ರೂಪಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಡೆಲ್ಟಾ ರೂಪ ಇತರ ರೂಪಗಳಿಗಿಂತ ಬಹಳ ಸಮರ್ಥವಾಗಿ ಮಾನವರ ಒಳಹೊಗುವ ಮತ್ತು ಬಹಳ ವೇಗವಾಗಿ ದೇಹವನ್ನು ಆಕ್ರಮಿಸಿಕೊಳ್ಳುವ ರೂಪ ಅದು. ಅದೇ ಭಾರತದ ಎರಡನೇ ಅಲೆ ಹಬ್ಬಿದ ವೇಗ , ಉಂಟು ಮಾಡಿದ ಸಾವುಗಳ ಪ್ರಮಾಣಕ್ಕೆ ಕಾರಣ. ಆದರೆ ಈ ಡೆಲ್ಟಾ ಈಗ ಡೆಲ್ಟಾ ಪ್ಲಸ್ ಎಂಬ ಮತ್ತೊಂದು ರೂಪ ತಾಳಿದೆ. ಅದು ಆಗಲೇ ವಿಶ್ವದ ಹಲವು ದೇಶಗಳಲ್ಲಿ ಕಾಣಿಸಿಕೊಂಡಿದೆ.

ಹೆಚ್ಚು ಹೆಚ್ಚು ಜನರಿಗೆ ಸೋಂಕು ತಗುಲಿದಷ್ಟೂ‌ಅವರ ದೇಹದೊಳಗೆ ಹೆಚ್ಚು ಹೆಚ್ಚು  ವೇಗವಾಗಿ ವೃದ್ಧಿಯಾಗುತ್ತಾ ಹೊಸ ಹೊಸ ರೂಪಗಳಿಗೆ ಕಾರಣವಾಗುತ್ತವೆ. ಅವುಗಳಲ್ಲಿ ಕೆಲವು ತೀಕ್ಷ್ಣವಾಗಿ ಆಕ್ರಮಣ ಮಾಡುತ್ತವೆ. ಇಂತಹ ತೀಕ್ಷ್ಣ ರೂಪಗಳು ಉಂಟಾದಂತೆಲ್ಲಾ ಮತ್ತಷ್ಟು ವೇಗವಾಗಿ ಸೋಂಕು ಹರಡುತ್ತವೆ. ಈಗಾಗಲೇ ಸೋಂಕು ತಗುಲಿದವರ ದೇಹವನ್ನೂ ಹೊಕ್ಕರೆ ಆ ದೇಹದಲ್ಲಿ ಬೆಳೆದಿರುವ ಪ್ರತಿರೋಧ ಶಕ್ತಿಯನ್ನೂ ಮೀರುವ ರೂಪಗಳೂ ಉಂಟಾಗುತ್ತವೆ. ಅದರಿಂದ ಮತ್ತೊಂದು ಅಲೆ, ಮತ್ತೆ ಲಾಕ್ ಡೌನ್, ಮತ್ತೆ ಕೋಟ್ಯಾಂತರ  ಜನರ ಸಂಕಟ.ಮತ್ತಷ್ಟು ಸಾವುಗಳು.

ಈ ಅಲೆಗಳನ್ನು ತಡೆಯಲು ಇರುವ ಮಾರ್ಗವೆಂದರೆ  ಜನಸಂಖ್ಯೆಯ ಬಹುಭಾಗದಲ್ಲಿ ವೈರಾಣು ನಿರೋಧಕ ಶಕ್ತಿ   ಉಂಟುಮಾಡುವುದು. ಇದಕ್ಕೆ ಹರ್ಡ್ ಇಮ್ಯೂನಿಟಿ ಅಥವಾ ಸಾಮೂಹಿಕ ನೀರೋಧ ಶಕ್ತಿ ಎಂದು ಕರೆಯುತ್ತಾರೆ. ಇದು ಉಂಟಾಗುವುದು ಎರಡು ಮೂಲಗಳಿಂದ. ಒಂದು ಸೋಂಕು ತಗುಲಿ ಉಂಟಾದ ನಿರೋಧ ಶಕ್ತಿ.

ಮತ್ತೊಂದು ಲಸಿಕೆ/ ವ್ಯಾಕ್ಸೀನುಗಳಿಂದ ಉಂಟಾಗುವ ನಿರೋಧ ಶಕ್ತಿ. ಸಿಡುಬು, ಪೋಲಿಯೋ ಮೊದಲಾದ ವೈರಾಣು ರೋಗಗಳು ಬಹುಕಾಲ ವಿಶ್ವಾದ್ಯಂತ ಮಾನವರನ್ನು ಪೀಡಿಸಿ ಸಾಂಕ್ರಾಮಿಕಗಳಾಗಿ ಈಗ ವ್ಯಾಪಕ ಲಸಿಕೀಕರಣದಿಂದ ಹೊಡೆದೋಡಿಸಲ್ಪಟ್ಟಿವೆ. ಮಕ್ಕಳಲ್ಲಿ ಹಲವು ಹಂತಗಳ ಲಸಿಕೀಕರಣ ಹಲವು ರೋಗಗಳನ್ನು ದೂರ ಮಾಡಿವೆ.

ಈಗಲೂ ಅಂತಹುದೇ ವ್ಯಾಪಕ, ಸಾಮೂಹಿಕ ಲಸೀಕೀಕರಣ ಅಗತ್ಯವಿದೆ. ಈ ವೈರಾಣುವಿನ ಜೀವಹಾನಿಯ ವೈಪರೀತ್ಯದಿಂದಾಗಿ , ಮತ್ತಷ್ಟು ಪ್ರಬಲ ರೂಪಗಳು ಮತ್ತಷ್ಟು ಅಲೆಗಳು ಉಂಟಾಗುವುದನ್ನು ತಪ್ಪಿಸಲು ಬಹು ವೇಗವಾದ ಲಸಿಕೀಕರಣ ಅಗತ್ಯ.

ಏಕೆಂದರೆ ಕೆಲವರು ಲಸಿಕೆ ಹಾಕಿಸಿಕೊಂಡವರು, ಮತ್ತೆ ಕೆಲವರು ಲಸಿಕೆ ಹಾಕದವರಿದ್ದರೆ ಅವರಿಂದ ಇವರಿಗೆ ಮತ್ತೆ ಇವರಿಂದ ಅವರಿಗೆ ಸೋಂಕು ತಗುಲಿ ಹೊಸ ರೂಪಗಳು ಉಂಟಾಗಲು ಫಲವತ್ತಾದ ಪರಿಸ್ಥಿತಿ ನಿರ್ಮಾಣ ಮಾಡಿಕೊಟ್ಟಂತಾಗುತ್ತದೆ. ಅವುಗಳಲ್ಲಿ ಕೆಲವು ಲಸಿಕೆ ನಿರೋಧ ಶಕ್ತಿ ಪಡೆದುಕೊಂಡು ಮತ್ತೆ ಹೊಸ ಲಸಿಕೆಗಳನ್ನು ಕಂಡುಹಿಡಿಯುವವರೆಗೂ ಬಹು ದೊಡ್ಡ ಹಾನಿಯನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಲಸಿಕೆ ಹಾಕುವುದು ಕೆಲವರಿಗಷ್ಟೇ ಸೀಮಿತವಾಗದೆ ವೇಗವಾಗಿ, ವ್ಯಾಪಕವಾಗಿ ಸಾರ್ವತ್ರಿಕ ಲಸೀಕೀಕರಣ ಮಾಡುವ ಹಾಗೂ ಜನ ಬಾಹುಳ್ಯದಲ್ಲಿ ಕೊರೋನಾ ನಿರೋಧ ಶಕ್ತಿ ಉಂಟುಮಾಡುವ ಅವಶ್ಯಕತೆ ಇದೆ.

ಇಂದಿನ ಸಮಾಜದ ಪ್ರಧಾನ ಮನೋಭಾವವಾದ – ನಾನು ಹಾಕಿಸಿಕೊಂಡಿದ್ದೇನೆ. ಉಳಿದವರು ಏನಾದರಾಗಲಿ ಎಂಬ ಭಾವನೆ ಅವರಿಗೇ ಮುಳುವಾಗುತ್ತದೆ. ಇಂದಿನ ಬೃಹತ್ ನಗರಗಳು, ದೊಡ್ಡ ಪ್ರಮಾಣದ ವಲಸೆಗಳು, ವೇಗವಾದ ಸಂಪರ್ಕ ಸಾಧನಗಳಿಂದಾಗಿ ಒಂದು ರೂಪ ಈಗ ಇಲ್ಲಿದೆ ಎಂದು ಕಂಡುಹಿಡಿದುಕೊಳ್ಳುವಷ್ಟರಲ್ಲಿ ಎಲ್ಲೆಲ್ಲಿಯೋ ಕಾಣಿಸಿಕೊಂಡು ದಿಗ್ಭ್ರಮೆಗೊಳಿಸಿದೆ. ಆದ್ದರಿಂದ ಇಡೀ ದೇಶದವರೆಲ್ಲರ ಲಸಿಕೀಕರಣ ವ್ಯಾಪಕವಾಗಿ, ವೇಗವಾಗಿ ಸಾರ್ವತ್ರಿಕವಾಗಿ ಮಾಡುವ ತುರ್ತು ಇದೆ.

ವಿಜ್ಞಾನಿಗಳ ಶೋಧದಂತೆ  ಆರೆಂಟು ತಿಂಗಳಲ್ಲಿ ಇಡೀ ದೇಶದ ಜನರಿಗೆ ಲಸಿಕೆ ನೀಡಬೇಕಾಗಿದೆ. ಮೂರನೇ ಅಲೆ ಉಂಟಾಗುವುದನ್ನು ತಪ್ಪಿಸಲು, ಆರಂಭವಾದರೂ ಅದರ ತೀವ್ರತೆಯನ್ನು ತಗ್ಗಿಸಲು ಈ ತುರ್ತು ಕ್ರಮ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಲಸಿಕೆಗಳ ಕೊರತೆ ದೇಶದ ಜನರ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಗೆ ಮಾರಕವಾಗುವಂತಹ ಬಹು ಮುಖ್ಯ ಅಂಶ. ನಮ್ಮ ದೇಶದಲ್ಲಿ ಲಸಿಕೆ ನೀಡಿಕೆ ಆರಂಭವಾಗಿದ್ದೇ ತಿಂಗಳು ತಡವಾಗಿ ಜ. 16 ರಲ್ಲಿ. ಮಾರ್ಚ್ 1 ರ ವೇಳೆಗೆ ಹಾಕಿಕೊಂಡಿದ್ದ ಗುರಿಯ ಅರ್ಧದಷ್ಟನ್ನೂ ಮುಟ್ಟಲಿಲ್ಲ.

ನಂತರ ಮೇ, ಜೂನ್‌ಗಳಲ್ಲಿ ಎರಡನೇ ಅಲೆ ವೇಗವಾಗಿ ಹರಡತೊಡಗಿದಾಗ ಬಹು ದೊಡ್ಡ ಪ್ರಮಾಣದಲ್ಲಿ ಕೊರತೆ ಉಂಟಾಯಿತು. ಲಸಿಕೀಕರಣ ಬಹಳ ಕುಗ್ಗಿತು. ಈ ಕೊರತೆ ಇನ್ನೂ ತೀವ್ರವಾಗಿ ಮುಂದುವರೆದಿದೆ.

ಇಡೀ ವಿಶ್ವದ ಔಷಧಿ ಕಾರ್ಖಾನೆ, ವಿಶ್ವದ ಲಸಿಕೆ ತಯಾರಿಕೆಯ ಕಣ್ಮಣಿ ಎಂದು ಹೆಸರಾದ ಭಾರತದಲ್ಲಿ ಈ ಪರಿಯ ಲಸಿಕೆ ಕೊರತೆ ಇದೇಕೆ ? ಇದು ಈ ಬಗ್ಗೆ ಅರಿವಿರುವ ಎಲ್ಲರನ್ನೂ ಕಾಡುವ ಪ್ರಶ್ನೆ.

ಭಾರತ ಕೊರೋನಾ ಪೂರ್ವದ ದಿನಗಳಲ್ಲಿ ಹಲವು ರೋಗಗಳಿಗೆ ಸಂಬಂಧಿಸಿ ವಿಶ್ವದ ಲಸಿಕೆ ಅಗತ್ಯದ ಅರ್ಧದಷ್ಟನ್ನು ಪೂರೈಸುತ್ತಿದ್ದ ಖ್ಯಾತಿ ಹೊಂದಿದೆ. ಅತ್ಯಂತ ಅಗ್ಗವಾಗಿ ಇವುಗಳನ್ನು ತಯಾರಿಸಿ ಬಡ, ಮಧ್ಯಮ ದೇಶಗಳಿಗೆ ಒದಗಿಸಿ ಅವರ ಕೃತಜ್ಞತೆಯನ್ನು ಗಳಿಸಿದೆ.

ವಿಶ್ವದ ಅತಿ ದೊಡ್ಡ ಲಸಿಕಾ ತಯಾರಿಕಾ ಘಟಕ ಭಾರತದ ಸೀರಂ ಸಂಸ್ಥೆ. ಹೀಗಿರುವಾಗ ನಮ್ಮ ದೇಶದ ಕೊರೋನಾ ಲಸಿಕೆ ಅಗತ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುವುದಲ್ಲದೆ ವಿಶ್ವದ ಅಗತ್ಯದ ಗಣನೀಯ ಭಾಗವನ್ನೂ ಪೂರೈಸುವ ನಿರೀಕ್ಷೆ ಸಹಜವಾಗಿಯೇ ಇತ್ತು. ಹಾಗಾದರೆ ಸಮಸ್ಯೆ ಉಂಟಾಗಿದ್ದೆಲ್ಲಿ? ನಮ್ಮ ದೇಶದಲ್ಲಿ ಏಳು ಸರ್ಕಾರಿ ಸಂಸ್ಥೆಗಳೂ ಸೇರಿದಂತೆ 25 ವ್ಯಾಕ್ಸೀನು ತಯಾರಿಕಾ ಘಟಕಗಳಿವೆ.

ಹಲವಾರು ದಶಕಗಳಿಂದ ವ್ಯಾಕ್ಸೀನ್ ಸಂಶೋಧನೆ, ತಯಾರಿಕೆಗಳಲ್ಲಿ ತೊಡಗಿಕೊಂಡಿವೆ. ಕೆಲವಂತೂ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತವಾಗಿವೆ. ಆದರೆ ಅವುಗಳನ್ನು ಪರಿಣಾಮಕಾರಿಯಾಗಿ ಸಂಶೋಧನೆ ತಯಾರಿಕೆ ಎರಡರಲ್ಲೂ ಸರ್ಕಾರ ಬಳಸಿಕೊಳ್ಳಲಿಲ್ಲ. ಅಮೆರಿಕ, ಇಂಗ್ಲೆಂಡ್‌, ಜರ್ಮನಿ, ರಷ್ಯಾ,ಚೀನಾ ದೇಶಗಳು, ಅತ್ಯಂತ ಆರ್ಥಿಕ  ಸಂಕಟದಲ್ಲಿರುವ, ವೈದ್ಯಕೀಯ ಅಗತ್ಯಗಳಿಗೂ ನಿಷೇಧ ಹೇರಲಾಗಿರುವ ಕ್ಯೂಬಾ ಕೂಡಾ ಕೊರೋನಾ ನಿವಾರಣೆಯ ವ್ಯಾಕ್ಸೀನ್ ಸಂಶೋಧನೆಯಲ್ಲಿ 2020 ರ ಮಾರ್ಚ್‌ನಿಂದಲೇ ತೊಡಗಿಕೊಂಡವು. ತಮ್ಮ ಸಂಶೋಧನಾ ಸಂಸ್ಥೆಗಳಿಗೆ ಹಣ, ಇತರ ಸಂಪನ್ಮೂಲಗಳನ್ನು ಒದಗಿಸಿದವು.

ಅಮೆರಿಕದ ಟ್ರಂಪ್ ಕೂಡಾ 84, 000 ಕೋಟಿಯಷ್ಟು ಬೃಹತ್ ಪ್ರಮಾಣದ ಹಣವನ್ನು ಹಲವು ವಿಶ್ವ ವಿದ್ಯಾಲಯ, ಮತ್ತು ಸ್ವಾಯತ್ತ ಸಂಶೋಧನಾ ಸಂಸ್ಥೆಗಳಿಗೆ ನೀಡಿದರೆ, ಮೇಲೆ ಉಲ್ಲೇಖಿಸಿದ ಇತರ ದೇಶಗಳು ಹತ್ತಾರು ಸಾವಿರ ಕೋಟಿ ರೂಗಳನ್ನು ಹೂಡಿದವು. ಇವುಗಳ ನಡುವೆ ಒಂದು ದೊಡ್ಡ ಸ್ಫರ್ಧೆಯೇ ಆರಂಭವಾಯಿತು. ನವೆಬರ್ ವೇಳಿಗೆ ಒಂದೊಂದು ದೇಶವೂ ಒಂದಲ್ಲ ಹಲವು ಲಸಿಕೆಗಳನ್ನು ಶೋಧಿಸಿದವು. ಅದರ ಫಲವಾಗಿ ಇಂದು 300 ಕ್ಕಿಂತ ಹೆಚ್ಚು ಲಸಿಕೆಗಳನ್ನು ಕಂಡುಹಿಡಿಯಲಾಗಿದೆ. ಇವೆಲ್ಲ ವಿವಿಧ ಹಂತದ ಪರೀಕ್ಷೆಗಳಲ್ಲಿವೆ. ಅವುಗಳಲ್ಲಿ 20 ಆಗಲೇ ಬಳಕೆಗೆ ಬಂದಿವೆ.

ಇಂತಹ ಸಮಯದಲ್ಲಿ ಅತ್ಯಂತ ಉತ್ತಮ ಸಂಸ್ಥೆಗಳು, ಉತ್ತಮ ದರ್ಜೆಯ ಸಂಶೋಧಕರನ್ನುಳ್ಳ ಭಾರತದಲ್ಲಿ ಒಕ್ಕೂಟ ಸರ್ಕಾರ ಆರಂಭದಿಂದಲೇ ಹಣ ಸಂಪನ್ಮೂಲ, ಇತರ ಸೌಕರ್ಯಗಳನ್ನು ಒದಗಿಸಲು ಗಮನ ನೀಡಲಿಲ್ಲ. ಕೇಂದ್ರಿಯ ವೈರಾಣು ಸಂಶೋಧನಾ ಸಂಸ್ಥೆ ಒಂದು ಲಸಿಕೆಯನ್ನು ತಯಾರಿಸಿ ಎಲ್ಲ ಹಂತದ ಪರೀಕ್ಷೆ ಮುಗಿಸಲು 2021ರ  ಮೇ ತಿಂಗಳಾಯಿತು. ಆದರೆ ನಮ್ಮ ದೇಶದ ಅತ್ಯುನ್ನತ ಸಂಸ್ಥೆಗಳಲ್ಲಿ ಹಲವಕ್ಕೆ ಉತ್ತೇಜನ ನೀಡಿದ್ದರೆ ಉತ್ತಮ ಗುಣಮಟ್ಟದ ಹಲವು ಲಸಿಕೆಗಳನ್ನು ಸಂಶೋಧಿಸುವ ಸಾಮರ್ಥ್ಯ ಐಐಎಸ್ಸಿ ಮೊದಲಾದ ಸಂಸ್ಥೆಗಳ ವಿಜ್ಞಾನಿಗಳಿಗಿತ್ತು.

ಸಂಶೋಧಿಸಿದ ಒಂದು ಲಸಿಕೆಯನ್ನು ಆತುರಾತುರವಾಗಿ ಎಲ್ಲ ಹಂತದ ಪರೀಕ್ಷೆಗಳಿಗೆ ಮೊದಲೇ ಕೊವಾಕ್ಸಿನ್ ಎಂಬ ಹೆಸರಿನಲ್ಲಿ ಸಾರ್ವಜನಿಕರಿಗೆ ನೀಡಲು‌ ಅನುಮತಿ ನೀಡಿ ಅದೊಂದು ದೊಡ್ಡ ವಿವಾದವೇ ಆಯಿತು ಎಂಬುದು ನೆನಪಿನಲ್ಲಿರಬಹುದು. ಈಗಲೂ ಅದು WHO ಅನುಮತಿ ಪಡೆದಿಲ್ಲ. ಆದರೆ ಬೇರೆ ದೇಶಗಳ ವ್ಯಾಕ್ಸೀನ್‌ಗಳು 2020 ರ ನವೆಂಬರ್‌ನಲ್ಲಿಯೇ ತುರ್ತು ಅನುಮತಿಗಳನ್ನು ಪಡೆದರು. ಡಿಸೆಂಬರ್ ವೇಳೆಗೆ ಕೋಟಿಗಟ್ಟಲೆ ತಯಾರಿಸಿ ಸಾರ್ವತ್ರಿಕ ಉಚಿತ ಲಸಿಕೆ ಕಾರ್ಯಕ್ರಮ ಆರಂಭಿಸಿದರು. ಇವುಗಳಲ್ಲಿ ಚೀನಾ, ಕ್ಯೂಬಾ ಬಿಟ್ಟರೆ ಉಳಿದುವೆಲ್ಲಾ ಬಂಡವಾಳಶಾಹಿ ದೇಶಗಳೇ ಆದರೂ ಕೂಡಾ ಉಚಿತ ಸಾರ್ವತ್ರಿಕ ಲಸಿಕೆ ನೀಡಿಕೆಯನ್ನು ಭರದಿಂದ ನಡೆಸುತ್ತಿದ್ದಾರೆ.

ಭಾರತದಲ್ಲಿ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿವಿಯ ಜೆನ್ನರ್ ಸಂಶೋಧನಾ ಸಂಸ್ಥೆ ಸಂಶೋಧಿಸಿದ ಲಸಿಕೆಯನ್ನು ಸೀರಂ ಇನ್ಸ್ಟಿಟ್ಯೂಟ್ ಎಂಬ ಖಾಸಗಿ ಸಂಸ್ಥೆ ತಯಾರಿಸಲು ಒಪ್ಪಂದ ಮಾಡಿಕೊಂಡಿತು. ಹೀಗೆ ನಮ್ಮ ದೇಶದಲ್ಲಿ ಕೋವಿಶೀಲ್ಡ್ , ಕೋವ್ಯಾಕ್ಸಿನ್ ಎಂಬ ಎರಡು ಲಸಿಕೆ ಲಭ್ಯವಾಯಿತು. ಈ‌ ಎರಡೂ  ಖಾಸಗಿ ಸಂಸ್ಥೆಗಳೇ ಎಂಬುದು ಗಮನಾರ್ಹ.

ಕೊರೋನಾ ಬಹು ವ್ಯಾಪಕವಾಗಿ ಹಬ್ಬಲಿದೆ. ಎರಡನೇ ಅಲೆ ತೀವ್ರವಾಗಲಿದೆ ಎಂಬೆಲ್ಲ ಎಚ್ಚರಿಕೆಯನ್ನು ವಿಜ್ಞಾನಿಗಳು 20 ರ  ಅಕ್ಟೋಬರ್- ನವೆಂಬರ್ ತಿಂಗಳಿಂದಲೇ ಕೊಡುತ್ತಾ ಬಂದರೂ ಮೋದಿ ಸರ್ಕಾರ ಅಗತ್ಯ ಆರೋಗ್ಯ ವ್ಯವಸ್ಥೆಯ ಕ್ರಮಗಳನ್ನು, ಚುನಾವಣೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ‌ ಜನಸಂದಣಿ ತಪ್ಪಿಸುವುದನ್ನೂ ಮಾಡಲಿಲ್ಲ. ದೇಶದ ಬೃಹತ್ ಜನ ಸಂಖ್ಯೆಗೆ ಅಗತ್ಯ ಪ್ರಮಾಣದ ಲಸಿಕೆ ತಯಾರಿಕೆಯನ್ನೂ ಯೋಜಿಸಲಿಲ್ಲ. ಇಷ್ಟೊಂದು ಒಳ್ಳೆಯ  ಬದಲಾಗಿ ಕೇವಲ ಎರಡು ಖಾಸಗಿ‌ ಸಂಸ್ಥೆಗಳು ಮಾತ್ರ ತಯಾರಿಸಿ ಅಪಾರ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು.

ಸರ್ಕಾರಿ ಸಂಸ್ಥೆ ಶೋಧಿಸಿದ ಕೊವ್ಯಾಕ್ಸಿನ್ ‌ಅನ್ನು ಹತ್ತಾರು ಸಂಸ್ಥೆಗಳಿಗೆ, ಸರ್ಕಾರದ ಆರೇಳು ಸಂಸ್ಥೆಗಳಿಗೆ ತಯಾರಿಸಲು ಅವಕಾಶ ನೀಡಿ ಅಗತ್ಯ ಹಣಕಾಸು ಒದಗಿಸಿದ್ದರೆ ಅತ್ಯಂತ ಅಗ್ಗವಾಗಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ತಯಾರಿಸುವುದು ಸಾಧ್ಯವಾಗುತ್ತಿತ್ತು. ಆದರೆ ಮೋದಿಯವರ ಕಾರ್ಪೊರೇಟ್ ಮೋಹ ಅದನ್ನೂ ಕೂಡಾ ಖಾಸಗಿಯವರ ಲಾಭಗಳಿಕೆಗೆ ಅರ್ಪಿಸಿಬಿಟ್ಟಿತು. ಈ ತಯಾರಿಕೆ ಕಂಪನಿಯ ಉತ್ಪಾದನಾ ಸಾಮರ್ಥ್ಯ ಬಹಳ ಸೀಮಿತವಾದದ್ದು ಎಂಬುದು ಈಗ ಸಾರ್ವಜನಿಕವಾಗಿದೆ. ಹೀಗಾಗಿ ಇಂಗ್ಲೆಂಡ್‌ನ ಕೋವೀಶೀಲ್ಡ್ ಲಸಿಕೆಯೇ ದೇಶದ ಶೇ80 ರಷ್ಟು ಜನರಿಗೆ ನೀಡಿರುವ ಲಸಿಕೆ. ಈ ಲಸಿಕೆಯನ್ನು ಕೂಡಾ ಸರ್ಕಾರಿ ಸಂಸ್ಥೆಗಳೂ ಸೇರಿದಂತೆ ಇನ್ನೂ ಹಲವಾರು ಸಂಸ್ಥೆಗಳಿಗೆ ನೀಡಬಹುದಾಗಿತ್ತು.

ಮತ್ತೊಂದು ಬಹು ಟೀಕೆಗೊಳಗಾದ ಅಂಶವೆಂದರೆ ಈ ಎರಡು ಸಂಸ್ಥೆಗಳಿಗೂ ವ್ಯಾಕ್ಸೀನ್ ಎಷ್ಟು, ಯಾವಾಗ ಬೇಕು ಎಂಬ ಆರ್ಡರ್‌ಅನ್ನೇ ಬಹುಕಾಲ ನೀಡಿರಲಿಲ್ಲ. ಹೀಗಾಗಿ ಸೀರಂ ಸಂಸ್ಥೆ ಮೂಲ ಕಂಪನಿಯೊಂದಿಗೆ ಮತ್ತು ಯುರೋಪ್ WHO ನೊಂದಿಗೆ ಮಾಡಿಕೊಂಡ ಒಪ್ಪಂದಗಳ ಪ್ರಕಾರ ಅವುಗಳಿಗೆ ಸರಬರಾಜು ಮಾಡಿತು. ಅಷ್ಟೇ ಅಲ್ಲದೆ ನಮ್ಮ ದೇಶದಲ್ಲಿ ಕೊರೋನಾ ಅಲೆ ಕುದಿಬಿಂದುವಿನಲ್ಲಿದ್ದಾಗಲೇ ಬೇರೆ ದೇಶಗಳಿಗೆ ಸರ್ಕಾರವೇ ವ್ಯಾಕ್ಸೀನ್ ಮೈತ್ರಿ ಹೆಸರಿನಲ್ಲಿ ನೀಡಿತು. ಒಟ್ಟಾರೆಯಾಗಿ ದೇಶದಲ್ಲಿ ತಯಾರಾದ ಆರು ಕೋಟಿ ಡೋಸ್‌ಗಳು ಬೇರೆ ದೇಶಗಳಿಗೆ ನೀಡಲಾಯಿತು.

ಹೀಗೆ ಒಂದು ಕಡೆ ಲಕ್ಷಾಂತರ ಜನ ಲಸಿಕೆ ಗಳಿಗಾಗಿ ದಿನಗಟ್ಟಲೆ ಬಿಸಿಲಿನಲ್ಲಿ ನಿಂತು ಬೇಯುತ್ತಿದ್ದಾರೆ. ಕೇಂದ್ರದಿಂದ ಕೇಂದ್ರಕ್ಕೆ ಅಲೆಯುತ್ತಿದ್ದಾರೆ. ದೇಶದ ಲಸಿಕೆ ತಯಾರಿಕೆ ಘಟಕಗಳು, ಸಂಶೋಧನಾ ಸೌಲಭ್ಯ‌ಗಳು, ವಿಜ್ಞಾನಿಗಳು ಕೈ ಕಟ್ಟಿ ವಿಷಾದದಿಂದ ನೋಡುವ ಪರಿಸ್ಥಿತಿ ಉಂಟಾಗಿದೆ.

ಇಂದು ವಿಶ್ವದಲ್ಲಿ ಬೇರೆ ಬೇರೆ ಲಸಿಕೆಗಳು ಲಭ್ಯವಾಗುತ್ತಿವೆ. ಅವುಗಳನ್ನು ಪಡೆದು ತ್ವರಿತವಾಗಿ ತಯಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಆದರೆ ರಷ್ಯಾದ ಲಸಿಕೆಯನ್ನು ಅನುಮೋದಿಸಲು ಬಹಳ ತಡ ಮಾಡಿ ಈಗ ಐದು ಕಂಪನಿಗಳು ಅದರ ತಯಾರಿಕೆಗೆ ಕೈ ಹಾಕಿವೆ. ಆರಂಭದಲ್ಲಿ ಒಂದಷ್ಟು ಆಮದು ಮಾಡಿಕೊಳ್ಳಲಾಗಿದೆ. ಚೀನಾದ ಹಲವು ಲಸಿಕೆಗಳು ಯುರೋಪಿನ ಕೆಲವು ದೇಶಗಳೂ ಸೇರಿ ಜಗತ್ತಿನ ಹಲವು ದೇಶಗಳು ಬಳಸುತ್ತಿದ್ದರೂ, ಅದು ಯಥೇಚ್ಛವಾಗಿ ಲಭ್ಯವಾಗಿದ್ದರೂ ಭಾರತಕ್ಕೆ ಅವು ಬೇಡವಾಗಿವೆ. ಚೀನಾದ ಪಿಪಿಇ , ಆಕ್ಸಿಜನ್ ಕಾನ್ಸಂಟ್ರೇಟರ್‌ ಮೊದಲಾದವು ಈಗಲೂ ಬೇಕು ಆದರೆ ಲಸಿಕೆ ಬೇಡ. ಇದೊಂದು ವಿಚಿತ್ರ ನೀತಿ. ಇರಲಿ. ಒಟ್ಟಿನಲ್ಲಿ ದೇಶದೆಲ್ಲರಿಗೂ ಅಗತ್ಯ ಗುಣಮಟ್ಟದ ಲಸಿಕೆ ಲಭ್ಯವಾದರೆ ಸಾಕು.

ಇಡೀ ದೇಶದ 18 ವಯಸ್ಸಿನ ಮೇಲಿನ ಎಲ್ಲರಿಗೂ ಲಸಿಕೆ ನೀಡಬೇಕೆಂದರೆ 90 ಕೋಟಿಗಿಂತ ಹೆಚ್ಚು ಜನರಿಗೆ 180 ಕೋಟಿ ಡೋಸ್‌ಗಳು ಅಗತ್ಯ. ಮೇಲೆ ಹೇಳಿದಂತೆ ವೇಗವಾಗಿ, ಸಾರ್ವತ್ರಿಕವಾಗಿ,ವ್ಯಾಪಕವಾಗಿ ಲಸಿಕೆ ನೀಡಿಕೆ ಪೂರ್ಣಗೊಳಿಸದಿದ್ದರೆ ಲಸಿಕೆ ನಿರೋಧ ಶಕ್ತಿಯುಳ್ಳ ಕೊರೋನಾ ರೂಪಗಳು ಉದ್ಭವವಾಗಿ ಲಸಿಕೆಗಳೂ  ವಿಫಲವಾಗುವ ಪರಿಸ್ಥಿತಿ, ಮೂರನೇ ಅಲೆ, ಮುಂದಿನ ಅಲೆಗಳೂ ಬೇಗ ಹಬ್ಬುವ ಸಂಕಟ, ಇವುಗಳಿಗೆ ಹೊಸ ಲಸಿಕೆಗಳ ಶೋಧ,ಉತ್ಪಾದನೆ ಮಾಡಬೇಕಾದ ಅಗತ್ಯ ಉಂಟಾಗುತ್ತದೆ.

ಜೊತೆಗೆ ನಗರಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳು,ಆದಿವಾಸಿ ಹಾಡಿಗಳು, ಸಣ್ಣ ಪಟ್ಟಣಗಳಿಗೂ ಗಮನ ನೀಡಬೇಕು. ಆದರೆ ಮೋದಿ ಸರ್ಕಾರದ ಒಂದು ಮುಖ್ಯ ನೀತಿ ಕಾರ್ಪೊರೇಷನ್ ಆಸ್ಪತ್ರೆಗಳಿಗೆ ಅತ್ಯಂತ ಕೊರತೆ ಉಂಟಾಗಿರುವ ಸಂಪನ್ಮೂಲವಾದ ಲಸಿಕೆಗಳ ಶೇ.25  ಭಾಗವನ್ನು ಕಾರ್ಪೊರೇಟ್ ಆಸ್ಪತ್ರೆಗಳು ಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಪರಿಣಾಮವೆಂದರೆ ಕೇವಲ ಹತ್ತು ಬಹುದೊಡ್ಡ, ಮಹಾನಗರದಲ್ಲಿ ಮಾತ್ರ ಇರುವ ಆಸ್ಪತ್ರೆಗಳು ಇದರಲ್ಲಿ ಅರ್ಧ ಭಾಗವನ್ನು ಕೊಂಡಿವೆ. ಉಳಿದ ಅರ್ಧ ಭಾಗವನ್ನು 300 ಮಧ್ಯಮ ಗಾತ್ರದ ಆಸ್ಪತ್ರೆಗಳ ವಶವಾಗಿದೆ. ಇವೂ ಕೂಡಾ ನಗರಗಳಲ್ಲಿ ಕೇಂದ್ರೀಕೃತ.

ಈ ಆಸ್ಪತ್ರೆಗಳು ಒಂದು ಡೋಸ್‌ಗೆ ಸಾವಿರದಿಂದ ಸಾವಿರದ ಐನೂರರವರೆಗೂ ಬೆಲೆ ಪಡೆಯುತ್ತಿವೆ. ದೊಡ್ಡ ಕಾರ್ಪೊರೇಟ್ ಕಂಪನಿಗಳು, ಮೇಲ್ಮಧ್ಯಮ ವರ್ಗದವರ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ನೀಡಲಾಗುತ್ತಿರುವ ಈ ಲಸಿಕೆಗಳು ನಗರಗಳ ಅಸಂಘಟಿತ ಕಾರ್ಮಿಕರಿಗೂ ಲಭ್ಯವಾಗುತ್ತಿಲ್ಲ. ಶೇ.25 ಭಾಗ ನಗರ, ಮಹಾನಗರಗಳ ಶ್ರೀಮಂತರಿಗೆ ಮೀಸಲಿಟ್ಟಂತಾಗಿದೆ. ಆದರೆ ಅವರ ಮನೆಗಳಲ್ಲಿ, ಮನೆಗಳ ಸುತ್ತ ಕೆಲಸ ಮಾಡುವ ಕೂಲಿಕಾರರಿಗೆ ಲಭ್ಯವಾಗದಿದ್ದರೆ ಲಸಿಕೆ ಪಡೆದರೂ ಇವರೆಲ್ಲ ಕ್ಷೇಮವಾಗಿರುವುದು ಹೇಗೆ ?

ಲಸಿಕೆ ನೀಡಿಕೆ ನೀತಿಯನ್ನು ಮತ್ತೆ ಮತ್ತೆ ಬದಲಾಯಿಸಿ ಗೊಂದಲಗೊಳಿಸಲಾಗಿದೆ. ಹೆಬ್ಬುಬ್ಬೆಯ ಮಾತುಗಳಲ್ಲದೆ ದೇಶಕ್ಕೆಲ್ಲ ವೇಗವಾಗಿ ಲಸಿಕೆ ನೀಡುವ  ಒಂದು ನಿರ್ದಿಷ್ಟ, ನಿಖರ ಯೋಜನೆಯನ್ನು ದೇಶದ ಜನರ ಮುಂದೆ ಮೋದಿ ಸರ್ಕಾರ ಇಡುತ್ತಿಲ್ಲ. ಮೇನಿಂದ ಜೂನ್ 21 ರವರೆಗೆ ಲಸಿಕೆ ಕೊರತೆಯಿಂದಾಗಿ ನೀಡಿಕೆ ಕುಸಿಯಿತು. ಒಂದು ದಿನದ ಅಬ್ಬರದ  ನಂತರ ಮತ್ತೆ ಕುಸಿದಿದೆ.   ಅದರ ಬಗ್ಗೆ ಹಿಂದೆ ಈ ಅಂಕಣದಲ್ಲಿ ವಿವರಿಸಲಾಗಿದೆ. ಈ ವರ್ಷದ ಡಿಸೆಂಬರ್‌ ಒಳಗೆ ದೇಶದೆಲ್ಲ ಜನರಿಗೆ ಲಸಿಕೆ ನೀಡುವ ಘೋಷಣೆ ಆಗಿದೆ. ಆದರೆ ಅದನ್ನು ಕಾರ್ಯಗತಗೊಳಿಸುವ ಸಾಧ್ಯತೆ ಕಾಣುತ್ತಿಲ್ಲ.

ಸುಪ್ರೀಂ ಕೋರ್ಟ್ ಆಕ್ಸಿಜನ್ ಮುಂತಾದವುಗಳ ಜೊತೆಗೆ ಲಸಿಕೆ ನೀಡಿಕೆಯ ವಿಷಯವನ್ನೂ ಕೈಗೆತ್ತಿಕೊಂಡು ಇಪ್ಪತ್ತು ಪ್ರಶ್ನೆಗಳಿಗೆ ನಿಖರ ಉತ್ತರವನ್ನು ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳಿಂದ ಬಯಸಿದೆ. ಒಕ್ಕೂಟ ಸರ್ಕಾರ ಕೋರ್ಟ್ ಮುಂದೆ ಸಲ್ಲಿಸಲಾದ ಅಫಿಡಾವಿಟ್‌ನಲ್ಲಿ ನೀಡಿದ ಅಂಕಿ ಅಂಶಗಳು ಪ್ರಶ್ನಾರ್ಹವಾಗಿದೆ. ಉತ್ಪಾದನೆಯ ಸಾಧ್ಯತೆಗಳನ್ನು ಬಹುವಾಗಿ ಉತ್ಪ್ರೇಕ್ಷೆಗೊಳಿಸಲಾಗಿದೆ ಹಾಗೂ ಒಟ್ಟು ಗುರಿಯನ್ನು ಹಿಂದೆ ಸರ್ಕಾರವೇ ನೀಡಿದ ಅಂಕಿ ಅಂಶಗಳಿಗಿಂತ ಶೇ. 35 ರಷ್ಟು ತಗ್ಗಿಸಲಾಗಿದೆ.

ಇಲ್ಲಿಯವರೆಗೆ ಕೇವಲ ಶೇ. 7.5 ಯಷ್ಟು ಜನರಿಗೆ ಮಾತ್ರ ಎರಡೂ ಡೋಸ್ ನೀಡಲಾಗಿದೆ. ಈ ವರ್ಷದ ಕೊನೆಯೊಳಗೆ ಲಸಿಕೆ ನೀಡಿಕೆ ಪೂರ್ಣಗೊಳ್ಳಬೇಕಾದರೆ ದಿನಕ್ಕೆ 90 ಲಕ್ಷದಿಂದ ಒಂದು ಕೋಟಿಯಷ್ಟು ಲಸಿಕೆ ನೀಡಬೇಕಾಗಿದೆ. ಆದರೆ ಈಗ ಸರಾಸರಿಯಾಗಿ ಕೇವಲ 40-50 ಲಕ್ಷದಷ್ಟು ಮಾತ್ರ ನೀಡಲಾಗುತ್ತಿದೆ . ಈ ವೇಗದಲ್ಲಿಯೇ ‌ಮುಂದುವರೆದರೆ ಮುಂದಿನ ವರ್ಷದ ಮಧ್ಯ ಭಾಗದವರೆಗಾದರೂ ಮುಂದೂಡಲ್ಪಡುತ್ತದೆ‌.

ಜುಲೈ 2 ರಂದು ಸುಪ್ರೀಂ ಕೋರ್ಟ್‌ನಲ್ಲಿ ಲಸಿಕೆ ಯೋಜನೆ ವಿಚಾರಣೆ ಮತ್ತೆ ನಡೆಯಲಿದೆ. ಸುಪ್ರೀಂ ಕೋರ್ಟ್‌ನ ಒತ್ತಾಯದಿಂದ ಬದಲಾದ ಮೋದಿಯವರ ಲಸಿಕೆ ನೀತಿ ಮತ್ತೆ ಕೋರ್ಟ್‌ನಿಂದಲೇ ನಿರ್ದೇಶಿತವಾಗುತ್ತದೆಯೋ ಕಾದು ನೋಡಬೇಕು.

ಲಸಿಕೆ ಕೊರತೆಗೊಂದು ಜಾಗತಿಕ ಆಯಾಮ :
ಭಾರತದ ಲಸಿಕೆ ಕೊರತೆಗೆ ಮುಖ್ಯವಾಗಿ ನಮ್ಮ ದೇಶದ ನೀತಿಗಳೇ ಕಾರಣ. ಆದರೆ ಅದಕ್ಕೆ ಜಾಗತಿಕ ಆಯಾಮಗಳೂ ಇವೆ.

ಜಗತ್ತಿನಲ್ಲೂ ಚೀನಾ,ಭಾರತ ಹೊರತಾಗಿ ಶ್ರೀಮಂತ ದೇಶಗಳ ಕೆಲವೇ ಬೃಹತ್ ಕಾರ್ಪೊರೇಟ್ ಔಷಧಿ ಕಂಪನಿಗಳೇ ಲಸಿಕೆ ತಯಾರಕರು. ಈ ಲಸಿಕೆಗಳ ಬಹುಭಾಗವನ್ನು ಜಗತ್ತಿನ ಶ್ರೀಮಂತ  ದೇಶಗಳು ತಮ್ಮ ಸಂಪತ್ತಿನ ಬಲದಿಂದ ಮುಂಗಡ ಹಣ ಕೊಟ್ಟು ಬಾಚಿಕೊಂಡಿವೆ. ಅಮೆರಿಕ ಸರ್ಕಾರ ತನ್ನ  ಜನಸಂಖ್ಯೆಯ ಅಗತ್ಯಗಳಿಗಿಂತ ಎರಡರಷ್ಟನ್ನು ಶೇಖರಿಸಿಕೊಂಡರೆ, ಬ್ರಿಟನ್ ಮೂರುವರೆ ಪಟ್ಟು ಪಡೆದುಕೊಂಡಿದೆ.

ಹಾಗೇಯೇ ಕೆನಡಾ,ಆಸ್ಟ್ರೇಲಿಯಾ, ಜಪಾನ್ ಮತ್ತು ಯುರೋಪಿನ ಕೆಲ ದೇಶಗಳು ಕಾದಿರಿಸಿಕೊಂಡಿವೆ.‌ ಇದರಿಂದ ಭಾರತದ ಮೇಲೆಯೂ ಸ್ವಲ್ಪ ಪರಿಣಾಮ ಉಂಟಾದರೂ ಕೂಡಾ ತಮ್ಮ ದೇಶದಲ್ಲಿ ಲಸಿಕೆ ತಯಾರಿಕೆ ಸಾಮರ್ಥ್ಯವಿಲ್ಲದ ಜಗತ್ತಿನ ನೂರಾರು ಬಡ ಹಾಗೂ ಮಧ್ಯಮ ದೇಶಗಳು ಲಸಿಕೆಯ ಬಹು ದೊಡ್ಡ ಕೊರತೆಯನ್ನು ಅನುಭವಿಸುತ್ತಿವೆ. ಹಲವು ದೇಶಗಳಿಗೆ ಲಸಿಕೆ ಮುಟ್ಟಿಯೇ ಇಲ್ಲವೆನ್ನುವ ಸ್ಥಿತಿ ಇದೆ. ಇತ್ತೀಚೆಗೆ ಜಿ.7 ರಾಷ್ಟ್ರಗಳ ಸಭೆಯಲ್ಲಿ ನೂರು ಕೋಟಿ ಡೋಸ್‌ಗಳನ್ನು ಬಡ ದೇಶಗಳಿಗೆ ದಾನವಾಗಿ ನೀಡುವ ಘೋಷಣೆ ಮಾಡಲಾಗಿದೆ. ಅಂದರೆ ಏಳು ನೂರು ಕೋಟಿ ಜನರಲ್ಲಿ ಕೇವಲ ಐವತ್ತು ಲಕ್ಷ ಜನರಿಗೆ ಮಾತ್ರ ಲಸಿಕೆ ನೀಡಲು ಸಾಧ್ಯ ಅಷ್ಟೇ. ಅಂದರೆ ಶೇ. 7.5 ರಷ್ಟು ಮಾತ್ರ.

ಭಾರತದಂತಹ ಒಂದು ದೇಶದೊಳಗೆ ಮೂರನೇ ಅಲೆ, ನಾಲ್ಕನೇ ಅಲೆಗಳನ್ನು ತಪ್ಪಿಸಬೇಕಾದರೆ ಕೇವಲ ಕೆಲ ಶ್ರೀಮಂತರಿಗೆ, ಮಧ್ಯಮ ವರ್ಗದವರಿಗೆ ಲಸಿಕೆ ಸಿಕ್ಕರೆ ಮಾತ್ರ ಸಾಧ್ಯವಿಲ್ಲ. ಅದೇ ರೀತಿ ಅತ್ಯಂತ ಹೆಚ್ಚು ಕೈಗಾರಿಕಾ, ಶಿಕ್ಷಣ, ಉದ್ಯೋಗಗಳ ಸಲುವಾಗಿ ವಲಸೆ, ಪರಸ್ಪರ ವಾಣಿಜ್ಯ ಸಂಬಂಧಗಳು, ವೇಗದ  ಸಂಪರ್ಕ ಸಾಧನಗಳಿಂದಾಗಿ ಒಂದೆಡೆ ಕೊರೋನಾ ಹೊಸ ರೂಪ ತಳೆದರೆ ಕೆಲವೇ ದಿನಗಳಲ್ಲಿ ವಿಶ್ವವನ್ನು ಆವರಿಸುತ್ತದೆ. ಆದ್ದರಿಂದ ವಿಶ್ವದ ಎಲ್ಲರಿಗೂ ಲಸಿಕೆ ನೀಡುವುದು, ಎಲ್ಲ ದೇಶಗಳಲ್ಲಿ ವೇಗವಾಗಿ, ವ್ಯಾಪಕವಾಗಿ ಸಾರ್ವತ್ರಿಕವಾಗಿ ಲಸಿಕೆ ನೀಡಿ ಇಡೀ ವಿಶ್ವದ ಜನಸಂಖ್ಯೆಯನ್ನು ಆವರಿಸಬೇಕಾದ್ದು ಇಂದಿನ ತುರ್ತು. 

ಭಾರತದಲ್ಲಿ ಲಸಿಕೆ ಕೊರತೆಗೆ ಅಡ್ಡಿಯಾಗಿರುವ ಮುಖ್ಯ ಅಂಶವೇ ಭಾರತವೂ ಸೇರಿದಂತೆ ವಿಶ್ವದ ತ್ವರಿತ ಲಸಿಕೀಕರಣಕ್ಕೆ ಬಹು ದೊಡ್ಡ ಅಡ್ಡಿಯಾಗಿದೆ. ವಿಶ್ವದಲ್ಲಿ ನೂರಾರು ಕಂಪನಿ, ಸಂಸ್ಥೆಗಳು ಲಸಿಕೆ ತಯಾರಿಸುವ ಸಾಮರ್ಥ್ಯ ಪಡೆದಿದ್ದರೂ ಕೇವಲ ಕೆಲವೇ ಬೃಹತ್ ಕಾರ್ಪೊರೇಟ್‌ಗಳು ಮಾತ್ರ ಲಸಿಕೆ ತಯಾರಿಸುವ ಹಕ್ಕು ಪಡೆದಿರುವುದು. ಮೇಲೆ ಹೇಳಿರುವಂತೆ ವಿಶ್ವದ ಬಹಳಷ್ಟು ಲಸಿಕೆಗಳ ಸಂಶೋಧನೆಗೆ ಹೂಡಲಾಗಿರುವ ಹಣ ಆಯಾ ದೇಶಗಳ ಜನರದ್ದು. ಸರ್ಕಾರಗಳು ವಿಶ್ವ ವಿದ್ಯಾಲಯ, ಸಂಶೋಧನಾ ಸಂಸ್ಥೆಗಳಿಗೆ  ನೀಡಿರುವ ಹಣ. ಆದರೆ ಜನಗಳ ಹಣದ ಫಲದ ಒಡೆತನ ಕೆಲವೇ ಬೃಹತ್ ಕಂಪನಿಗಳ ಕೈ ಸೇರಿಬಿಟ್ಟಿದೆ.

ಈ ಕಂಪನಿಗಳಿಗೆ ಲಾಭವೇ ಮುಖ್ಯವಾದುದರಿಂದ ಕೊರತೆ ಸೃಷ್ಟಿಸುವುದು ಬಹಳ ಲಾಭದಾಯಕ. ಕೊರತೆಯನ್ನು ಬಳಸಿ ತತ್‌ಕ್ಷಣದ ಲಾಭ ಪಡೆಯುವುದಷ್ಟೇ ಅಲ್ಲ. ಕೊರೋನಾ ಲಸಿಕೆ ಇಡೀ ಜಗತ್ತಿಗೆಲ್ಲ ಒಮ್ಮೆಲೇ ನೀಡಿ ಕೊರೋನಾ ತಗ್ಗಿ ಹೋಗುವುದಕ್ಕಿಂತ ಅದು ದೀರ್ಘಕಾಲ ಜಗತ್ತಿನ ವಿವಿಧ ಭಾಗಗಳಲ್ಲಿ ಸಂಕಟ ಉಂಟು ಮಾಡುತ್ತಿರುವುದು ಅವರಿಗೆ ದೀರ್ಘ ಕಾಲ ಲಾಭವನ್ನು ತಂದುಕೊಡುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಬಹಳ ಮುಖ್ಯವಾಗಬಹುದಾದ ಆರ್‌ಎನ್‌ಎ ಚಿಕಿತ್ಸಾ ವಿಧಾನದ ಮೇಲಿನ ಸಂಪೂರ್ಣ ಹಿಡಿತವನ್ನು ತಮ್ಮಲ್ಲೇ ಉಳಿಸಿಕೊಳ್ಳುವುದು ಅವರ ಕುತಂತ್ರ.

ಕೋವಿಶೀಲ್ಡ್ ಲಸಿಕೆಯ ಪ್ರಸಂಗ ಒಂದು ಟಿಪಿಕಲ್ ಉದಾಹರಣೆ. ಅದರ ಸಂಶೋಧನೆಗೆ ಹಣ ಹೂಡಿದ್ದು ಬ್ರಿಟಿಷ್ ಸರ್ಕಾರ. ಸಂಶೋಧನೆ ನಡೆಸಿದ್ದು ಆಕ್ಸ್‌ಫರ್ಡ್ ವಿವಿಯ ಜೆನ್ನರ್ ಸಂಸ್ಥೆ. ಈ ಸಂಸ್ಥೆ ಮತ್ತು ಆಕ್ಸ್‌ಫರ್ಡ್ ವಿವಿಗೆ ಈ ಲಸಿಕೆಯನ್ನು ವಿಶ್ವದ ಮಾನವ ಸಮುದಾಯಕ್ಕೆ ಅರ್ಪಿಸಿಬಿಡಬೇಕೆಂಬ ಇಚ್ಛೆಯಿತ್ತಂತೆ. ಪೋಲಿಯೋ ಲಸಿಕೆ ಜಗತ್ತಿನಲ್ಲಿ ಎಷ್ಟು ದೊಡ್ಡ ಕೊಡುಗೆ ನೀಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದನ್ನು ಸಂಶೋಧನೆ ಮಾಡಿದ ವಿಜ್ಞಾನಿ ಜೋನಾಸ್ ಸಾಲ್ಕ್  ಅದರ ಮಾಲೀಕತ್ವದ ಹಕ್ಕು – ಪೇಟೆಂಟ್ ಅಥವಾ ಬೌದ್ಧಿಕ ಹಕ್ಕನ್ನು ತಾನು ಇಟ್ಟುಕೊಂಡು ಕೋಟ್ಯಾಧೀಶನಾಗುವ ಯೋಚನೆ ಮಾಡದೆ ಜಗತ್ತಿಗೆ ಅರ್ಪಿಸಿಬಿಟ್ಟ.

ಅದರಿಂದಾಗಿ ಅದನ್ನು ಜಗತ್ಯಿನ ಯಾರು ಬೇಕಾದರೂ ಉತ್ಪಾದನೆ ಮಾಡಬಹುದು. ಅದರ ಫಲವೇ ಜಗತ್ತು ಪೋಲಿಯೋ ಮುಕ್ತವಾಗುವ ಹಾದಿಯಲ್ಲಿರುವುದು. ಅದೇ ರೀತಿ ಮಾಡಬೇಕೆಂಬ ವಿವಿ ಇಚ್ಛೆಗೆ ತಡೆ ಹಾಕಿದ್ದು ಬಿಲ್ ಗೇಟ್ಸ್ ಎಂಬ ಬೃಹತ್ ಕಾರ್ಪೊರೇಟ್ ಧಣಿ. ಅವನು ವಿವಿಗೆ ಬಹು ದೊಡ್ಡ ದೇಣಿಗೆ ನೀಡುವವನಾದ್ದರಿಂದ ಇಂತಹ ಯೋಚನೆ ಒಪ್ಪದೆ ಒಂದು ಕಂಪನಿಗೇ ಅದನ್ನು ನೀಡಬೇಕೆಂದು ಒತ್ತಾಯಿಸಿದ. ಅದು ಅಸ್ಟ್ರಾ ಜೆನಿಕಾ ಎಂಬ ಕಾರ್ಪೊರೇಟ್ ಕಂಪನಿಗೆ ನೀಡಲಾಯಿತು. ಅದರ ಪರಿಣಾಮವೆಂದರೆ ಅಸ್ಟ್ರಾ ಜೆನಿಕಾ ಭಾರತದ ಎಸ್‌ಐಐನಂತಹ  ಯಾವ ಕಂಪನಿಗೆ ಅದರ ತಯಾರಿಕೆಯ ಲೈಸೆನ್ಸ್ ನೀಡುತ್ತದೆಯೋ ಅದಕ್ಕೆ ಮಾತ್ರ ಅದನ್ನು ತಯಾರಿಸುವ ಹಕ್ಕು.

ಹೀಗೇ ಈ ಲಸಿಕೆಗಳೆಲ್ಲ ಕೆಲವೇ ಕಾರ್ಪೊರೇಟ್‌ಗಳ ಪಾಲಾದವು. ಇದು ಭಾರತದಲ್ಲಾದಂತೆ ಲಸಿಕೆಯ ದೊಡ್ಡ ಕೊರತೆ ಸೃಷ್ಟಿಸಿದೆ. ಇಡೀ ಮಾನವ ಸಮುದಾಯಕ್ಕೇ ದೊಡ್ಡ ಅಪಾಯ ತಂದೊಡ್ಡಿರುವ
ಕೊರೋನಾದಂತಹ ರೋಗವನ್ನು ದೂರ ಮಾಡಲು ತಾತ್ಕಾಲಿಕವಾಗಿ ಪೇಟೆಂಟ್ ಕಾಯಿದೆಯನ್ನು ತಡೆ ಹಿಡಿಯಬೇಕು.

ಯಾರು ಬೇಕಾದರೂ ಲಸಿಕೆ, ಔಷಧಿ, ಇತರ ವೈಜ್ಞಾನಿಕ ಉಪಕರಣಗಳು ಮೊದಲಾದವುಗಳ ಮೇಲಿನ‌ ಪೇಟೆಂಟ್ ತೆಗೆಯಬೇಕೆಂಬ ಪ್ರಸ್ತಾವ ಕೊರೊನಾ ಬಾಧಿಸಿದ ಕೆಲವೇ ತಿಂಗಳ ನಂತರ 20 ರ ಮೇನಲ್ಲಿ ಸೇರಿದ್ದ WHO ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಲಾಯಿತು. ಜಗತ್ತಿನ ಬಹು ದೊಡ್ಡ ಸಂಖ್ಯೆಯ ರಾಷ್ಟ್ರಗಳು ಅದನ್ನು ಅನುಮೋದಿಸಿದವು. ಆದರೆ ಅಮೇರಿಕದ ಮತ್ತು ಯುರೋಪಿನ ಹಲವು ರಾಷ್ಟ್ರಗಳು ಒಪ್ಪಲಿಲ್ಲ. ಭಾರತ ಮತ್ತು ದ.ಆಫ್ರಿಕಾ ದೇಶಗಳು ಇಂತಹುದೇ ಪ್ರಸ್ತಾಪವನ್ನು ವಿಶ್ವ ವಾಣಿಜ್ಯ ಸಂಸ್ಥೆ WTO ಮುಂದೆ ಕಾಬೂನು ಬದ್ಧವಾಗಿ ಮಂಡಿಸಿವೆ. ಇದಕ್ಕೂ ನೂರು ದೇಶಗಳಿಗಿಂತ ಹೆಚ್ಚು ಬೆಂಬಲ ದೊರೆಯಿತು. 

ಮೊದಲು ಒಪ್ಪದಿದ್ದ ಅಮೆರಿಕ , ಅಲ್ಲಿಯ ಜನಾಭಿಪ್ರಾಯ ಪೇಟೆಂಟ್ ಅಮಾನತ್ತಿನ‌ ಪರವಾಗಿ ರೂಪುಗೊಂಡ ಹಾಗೂ ಸ್ಯಾಂಡರ್ಸ್‌ನಂತಹ ಎಡಪಂಥೀಯರ ಒತ್ತಡದಿಂದಾಗಿ ಇತ್ತೀಚೆಗೆ ತಾನೂ ಬೆಂಬಲಿಸುವುದಾಗಿ ಘೋಷಿಸಿದೆ. ಆದರೆ ಮೊನ್ನೆ ನಡೆದ. ಜಿ. 7 ಸಭೆಯಲ್ಲಿ ಅಮೆರಿಕ ಮತ್ತು ಫ್ರಾನ್ಸ್ ಹೊರತುಪಡಿಸಿ ಉಳಿದ ಐದು ರಾಷ್ಟ್ರಗಳೂ ಇದಕ್ಕೆ ಒಪ್ಪಲಿಲ್ಲ. ಜಿ.7 ದೇಶಗಳು ನೂರು ಕೋಟಿ ಡೋಸ್ ದಾನ ನೀಡುವುದಕ್ಕಿಂತ ಈ ಪ್ರಸ್ತಾವ ಒಪ್ಪಿದ್ದರೆ ಜಗತ್ತು ಕೊರೋನಾದಿಂದ ಬೇಗ ಮುಕ್ತವಾಗಲು ದೊಡ್ಡ ಸಹಾಯವಾಗುತ್ತಿತ್ತು ಎನ್ನುತ್ತಾರೆ ಪ್ರಬಾತ್ ಪಟ್ನಾಯಕ್ ಎಂಬ ವಿಶ್ವ ಪ್ರಸಿದ್ಧ ಎಡಪಂಥೀಯ ಅರ್ಥಶಾಸ್ತ್ರಜ್ಞರು.

ಅವರು ಬ್ರಿಟನ್ನಿನದೇ ಸಾರ್ವಜನಿಕ ಸೇವಾ ಸಂಸ್ಥೆ ಆಕ್ಸ್‌ಫಾಮ್‌ನ ಅಧ್ಯಯನವೊಂದನ್ನು ಉಲ್ಲೇಖಿಸಿದ್ದಾರೆ. ಪೇಟೆಂಟ್‌ ಒಡೆತನ ಇಲ್ಲದಿದ್ದರೆ ಆಗ ಇಡೀ ಜಗತ್ತಿಗೆ ಬೇಕಾದ ಲಸಿಕೆಯನ್ನು ತಯಾರಿಸಲು ಕೇವಲ 6.5 ಬಿಲಿಯನ್ ಡಾಲರ್ ವೆಚ್ಚವಾಗುತ್ತದೆ. ಆದರೆ ಪೇಟೆಂಟ್ ಒಡೆತನದ ಪರಿಣಸಮವಾಗಿ ಅಷ್ಟು ಲಸಿಕೆಗಳ ವೆಚ್ಚ 80 ಬಿಲಿಯನ್ ಡಾಲರ್ ಆಗುತ್ತದೆ. ಅಂದರೆ ಹತ್ತು ಪಟ್ಟಿಗಿಂತ ಹೆಚ್ಚು ವೆಚ್ಚವನ್ನು ಲಸಿಕೆ ಕೊಳ್ಳಲು ಜಗತ್ತಿನ ವಿವಿಧ ದೇಶಗಳು ಅಥವಾ ಜನ ಸಾಮಾನ್ಯರು ಭರಿಸಬೇಕಾಗುತ್ತದೆ. ಬೃಹತ್ ಕಾರ್ಪೊರೇಟ್‌ಗಳ ದುರ್ಲಾಭದ ಪ್ರಮಾಣ ಇಷ್ಟು ದೊಡ್ಡ ಪ್ರಮಾಣದ್ದಾಗಿದೆ.

ದುರ್ಲಾಭದ ಈ ತಹತಹ ಈ ಕಂಪನಿಗಳು ಮತ್ತು ಅವುಗಳ ಪಿತೃ ದೇಶಗಳನ್ನು ಎಂತಹ ಕೀಳು ಮಟ್ಟಕ್ಕೆ ದೂಡಿವೆಯೆಂದರೆ ಯುರೋಪಿನ ರಾಷ್ಟ್ರಗಳು ಜರ್ಮನಿಯ ಒತ್ತಡದಲ್ಲಿ ಅಸ್ಟ್ರಾ ಜೆನಿಕಾ ಕೋವಿಶೀಲ್ಡ್ ಮೇಲೆ ಅಪಪ್ರಚಾರ ಮಾಡುವುದು, ಅಮೇರಿಕದ ಕಂಪನಿಗಳು ಕೋವಿಶೀಲ್ಡ್ ಬಗ್ಗೆ ಅಪಸ್ವರ ಎತ್ತವುದು ಇವುಗಳ ಮೂಲಕ ಹಲವು ವಾರಗಳ ಕಾಲ ಕೋವಿಶೀಲ್ಡ್ ನೀಡಿಕೆ ತಡೆ ಹಿಡಿಯುವುದು, ಭಾರತದಲ್ಲಿ ಕೋವಿಶೀಲ್ಡ್ ಪಡೆದವರಿಗೆ ವೀಸಾ ನಿರಾಕರಣೆ, WHO ನಲ್ಲಿ ಅಮೆರಿಕ, ಯುರೋಪಿನ ಹೊರಾತಾದ ರಷ್ಯಾ, ಚೀನಾ, ಭಾರತದ ಲಸಿಕೆಗಳಿಗೆ ಅನುಮತಿ ಸಿಗದಂತೆ ವಿಳಂಬ ಮಾಡುವುದು, ಅವುಗಳ ಗುಣಮಟ್ಟದ ಬಗ್ಗೆ ದೊಡ್ಡ ಅಪಪ್ರಚಾರ ಮಾಡುವುದು, ಅದಕ್ಕೆ ತಮ್ಮ ದೇಶಗಳ ಬೃಹತ್ ಮಾಧ್ಯಮ ಜಾಲದ ಬಳಕೆ ಮಾತ್ರವಲ್ಲದೆ ವೈಜ್ಞಾನಿಕ ಸಂಶೋಧನೆಗಳ ಪತ್ರಿಕೆಗಳು ಮತ್ತು ವಿಜ್ಞಾನಿಗಳನ್ನೇ ದುರ್ಬಳಕೆ ಮಾಡುವುದು ಅಸಹ್ಯ ಹುಟ್ಟಿಸುತ್ತದೆ.

ಈ ಎಲ್ಲದರೆ ನಡುವೆ ಭಾರತ ದೇಶದಲ್ಲಿ ತಯಾರಾದ ಲಸಿಕೆಯನ್ನು ನೂರಕ್ಕೆ ನೂರು ರಾಷ್ಟ್ರ ಮಟ್ಟದಲ್ಲಿಯೇ ಕೊಂಡು ಸಾರ್ವತ್ರಿಕವಾಗಿ ,ಉಚಿತವಾಗಿ ವಿತರಿಸಬೇಕು. ಲಸಿಕೆ ತಯಾರಿಕೆಗೆ ಈಗಲಾದರೂ ಇರುವ ಎಲ್ಲ ಸೌಲಭ್ಯ ಬಳಸಿಕೊಂಡು ಅತಿ ಶೀಘ್ರದಲ್ಲಿಯೇ ಉತ್ಪಾದನೆಯನ್ನು ಹೆಚ್ಚಿಸಬೇಕು. ಡಿಸೆಂಬರ್ ಒಳಗೆ ದೇಶದ 90 ಕೋಟಿ ವಯಸ್ಕರಿಗೆಲ್ಲ ಲಸಿಕೆ ನೀಡಬೇಕು. ಕೊರೋನಾದ ಹೊಸ ರೂಪಗಳಿಗೆ ನಿರೋಧ ಶಕ್ತಿಯನ್ನು ಉಂಟುಮಾಡುವ ಮಾರ್ಗಗಳ- ಈಗಿನ ಲಸಿಕೆಗಳನ್ನು ಮಾರ್ಪಡಿಸುವುದು, ಬೂಸ್ಟರ್ ಡೋಸ್ ಲಸಿಕೆ ಶೋಧಿಸುವುದು ಇತ್ಯಾದಿ ಕ್ರಮಗಳಿಗೆ ಕೂಡಲೇ ಯೋಜಿಸಿ ಬಜೆಟ್ ಹಣ ನೀಡಬೇಕು.

ವಿಶ್ವ ಮಟ್ಟದಲ್ಲಿ ಪೇಟೆಂಟ್ ರದ್ದು ಮಾಡುವ ಹೋರಾಟದ ಜೊತೆಗೆ ಮೂರನೇ ಜಗತ್ತಿನ ರಾಷ್ಟ್ರಗಳ ಜೊತೆ ಸೇರಿ WTO ನಿಯಮಗಳಲ್ಲಿ ಲಸಿಕೆ,ಔಷಧಿಗಳ ಕಡ್ಡಾಯ ತಯಾರಿಕೆಯ ಅವಕಾಶವನ್ನು ಬಳಸಿಕೊಳ್ಳಬೇಕು.

‍ಲೇಖಕರು Admin

July 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: