ಕೃತಿಕಾರನೊಂದಿಗೆ ವಿಕ್ರಂ ಹೆಜ್ಜೆ ಹಾಕಿದ ಬಗೆ…

ಒ.ಕೆ. ಜೋಣಿಯವರ ಕೃತಿ ‘ಕಾವೇರಿ ತೀರದ ಪಯಣ’.

ಪತ್ರಕರ್ತ ವಿಕ್ರಂ ಕಾಂತಿಕೆರೆ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ

ನವಕರ್ನಾಟಕ ಪ್ರಕಾಶನ ಇದನ್ನು ಪ್ರಕಟಿಸಿದೆ.

ಈ ಕೃತಿಗೆ ಕೃತಿಕಾರ ವಿಕ್ರಂ ಬರೆದ ಮಾತು ಇಲ್ಲಿದೆ-

ವಿಕ್ರಂ ಕಾಂತಿಕೆರೆ

ಗ್ರಾಮೀಣ ಪರಿಸರದ ‘ತೋಡು’ ಎಂಬ ತೊರೆಯಲ್ಲಿ ಮಿಂದು- ಮೀನು ಹಿಡಿದು ಬೆಳೆದ ನನಗೆ ನದಿಗಳ ಸಂಪರ್ಕ ಇದ್ದದ್ದು ಅಷ್ಟಕ್ಕಷ್ಟೆ. ಉತ್ತರದ ಕಾಳಿಂದಿ, ಸರಯೂ, ಗಂಗೆ, ಬ್ರಹ್ಮಪುತ್ರ, ದಕ್ಷಿಣದ ಪಂಪ, ಭಾರತ, ಪೆರಿಯಾರ್, ಕಲ್ಲಾಯಿ, ಕಬಿನಿ, ಪಯಸ್ವಿನಿ, ಚಂದ್ರಗಿರಿ, ನೇತ್ರಾವತಿ ಮುಂತಾದ ಹೆಸರುಗಳನ್ನು ‘ಕೇಳುತ್ತಾ’ ಬೆಳೆದ ಕಾರಣ ನದಿಗಳು ಮತ್ತು ನದಿಸಂಸ್ಕೃತಿಯ ಬಗ್ಗೆ ಆಸಕ್ತಿ ಇದ್ದೇ ಇತ್ತು.

ಈ ಹೆಸರುಗಳ ಪೈಕಿ ಹೆಚ್ಚಿನವು ಕಿವಿಗೆ ಬಿದ್ದದ್ದು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಮಲಯಾಳಂ ಹಾಡುಗಳ ಮೂಲಕ. ಮೈಸೂರು–ಹುಬ್ಬಳ್ಳಿಯಲ್ಲಿ ಉದ್ಯೋಗದ ಭಾಗವಾಗಿ ಅಲೆಯುವಾಗ ಕಾವೇರಿ, ಕೃಷ್ಣೆ, ತುಂಗೆ–ಭದ್ರೆ, ಕಾಳಿ ನದಿಗಳನ್ನು ಹತ್ತಿರದಿಂದ ನೋಡಿ-ತಿಳಿಯುವ ಅವಕಾಶ ಸಿಕ್ಕಿತ್ತು. ಹೀಗಿರಲು ಒಂದು ದಿನ ಕೋಯಿಕ್ಕೋಡಿನವರಾದ ಹಿತೈಷಿ ವಾಸುದೇವನ್ ‘ಕಾವೇರಿ ನದಿ ಬಗ್ಗೆ ಒ.ಕೆ.ಜೋಣಿಯವರು ಪುಸ್ತಕ ಬರೆದಿದ್ದಾರೆ’ ಎಂದರು. ನನ್ನ ಆಸಕ್ತಿ ಅರಿತೋ ಏನೋ ಎರಡೇ ದಿನಗಳಲ್ಲಿ ಕೃತಿಯನ್ನು ಕಳುಹಿಸಿಯೇಬಿಟ್ಟರು.

ಇತಿಹಾಸದ ಪುಟಗಳತ್ತ ಇಣುಕಿ, ಸಂಸ್ಕೃತಿಯ ಒಳನೋಟಗಳ ಮೇಲೆ ಬೆಳಕು ಚೆಲ್ಲಿ, ಜನಜೀವನದ ಕುರಿತು ಆಳವಾದ ಅಧ್ಯಯನ ನಡೆಸಿ, ಮೇಲ್ನೋಟಕ್ಕೆ ಗಮನಕ್ಕೆ ಬಾರದೇ ಇರುವ ವಿಚಾರಗಳತ್ತ ಸೂಕ್ಷ್ಮದೃಷ್ಟಿ ಬೀರಿ ಪ್ರವಾಸಕಥನವನ್ನು ಅನುಭವ ದರ್ಶನವಾಗಿಸಿರುವ ಒ.ಕೆ.ಜೋಣಿ ಒಮ್ಮೆ ಪತ್ರಕರ್ತನಾಗಿ, ಮತ್ತೊಮ್ಮೆ ಅಧ್ಯಯನಕಾರನಾಗಿ, ಇನ್ನೊಮ್ಮೆ ಸಾಮಾಜಿಕ ಚಿಂತಕನಾಗಿ, ಆಗೊಮ್ಮೆ ಈಗೊಮ್ಮೆ ಭಕ್ತನಾಗಿ, ಮಗದೊಮ್ಮೆ ಚಾರ್ವಾಕನಾಗಿ, ಪೂರ್ವಗ್ರಹಗಳನ್ನು ದೂರ ಅಟ್ಟಿ ಹೃದಯ ವೈಶಾಲ್ಯ ಮೆರೆಯುವ ಉದಾರಿಯಾಗಿ ಕಾವೇರಿ ಸೀಮೆಯ ಚಿತ್ರಣ ಕಟ್ಟಿಕೊಟ್ಟಿದ್ದಾರೆ.

ಸಾಹಿತ್ಯದ ರಸ ಸೂಸುವ, ಕಠಿಣ ಪದಪುಂಜಗಳ ಸುದೀರ್ಘ ವಾಕ್ಯಗಳನ್ನು ಒಳಗೊಂಡ ನಿರೂಪಣಾ ಶೈಲಿ ಅನೇಕ ಭಾಗಗಳಲ್ಲಿ ನನಗೆ ಸವಾಲೆಸೆದಿತ್ತು. ಹೀಗಾದಾಗಲೆಲ್ಲ ಹೆಚ್ಚುವರಿ ಸಮಯ ವ್ಯಯಿಸಿ ಸೂಕ್ಷ್ಮವಾಗಿ ಗ್ರಹಿಸುವ ಪ್ರಯತ್ನ ಮಾಡಿ ಮೂಲಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಿದ್ದೇನೆ. ನಮ್ಮ ಸಂದರ್ಭಕ್ಕೆ ತೀರಾ ಪರಿಚಿತವಾಗಿರುವ ಕೆಲವು ಅಂಶಗಳನ್ನು ಲೇಖಕರ ಅನುಮತಿಯೊಂದಿಗೆ ಬಿಟ್ಟು ಮೂಲದ ಸತ್ವವನ್ನು ಕನ್ನಡನಾಡಿನ ಮುಂದೆ ಇರಿಸಿದ್ದೇನೆ.

ಉದ್ಯೋಗ, ಹವ್ಯಾಸಗಳ ನಡುವಿನ ಒತ್ತಡ ನಿಭಾಯಿಸಿ ಸಮಚಿತ್ತ ಉಳಿಸಿಕೊಳ್ಳಲು ಜೊತೆಯಾಗಿರುವ, ಪತಿ-ಪತ್ನಿ ಸಂಬಂಧದ ನಿರ್ಬಂಧಗಳ ಆಚೆ ಗೆಳೆತನದ ಬಿಸುಪು ನೀಡುತ್ತಿರುವ ಶೀಲಾಗೆ, ಮಗನ ವಿನಯವನ್ನು ಉಳಿಸಿಕೊಂಡೇ ಸಲಹೆ ನೀಡುವಷ್ಟು ಪ್ರಬುದ್ಧತೆ ಬೆಳೆಸಿಕೊಂಡಿರುವ ವಿನ್ಯಾಸನಿಗೆ ಕೃತಜ್ಞತೆ ಔಪಚಾರಿಕ ಮಾತ್ರ.

ಗೆಳೆತನದ ವಿಷಯದಲ್ಲಿ ನನ್ನದು ‘ಪದ್ಮಪತ್ರದ ಜಲಬಿಂದು’ ಸೂತ್ರ. ಅಳೆದು-ತೂಗಿ ಆತ್ಮೀಯತೆಯನ್ನು ಉಳಿಸಿಕೊಳ್ಳುವ ಕೆಟ್ಟಚಾಳಿಯವನಾಗಿದ್ದರೂ ಅದನ್ನು ಲೆಕ್ಕಿಸದೆ ನಿಸ್ಪೃಹ ಸ್ನೇಹದ ಧಾರೆ ಎರೆಯುತ್ತಲೇ ಇರುವವರ, ನನ್ನನ್ನು ನಾನಾಗಿಸಿದವರ ಪಟ್ಟಿ ದೊಡ್ಡದಿದೆ. ಅವರೆಲ್ಲರ ನೆನಪನ್ನು ಎದೆಯಾಳದಲ್ಲಿ ಕಾಪಿಟ್ಟಿದ್ದೇನೆ. ಕುಟುಂಬದವರ ಕಾಳಜಿ, ಕಾಂತಿಕೆರೆ ಗ್ರಾಮದ ಮಮತೆಯನ್ನು ಮರೆಯಲುಂಟೇ…? ಪಾಲಕನಾಗಿ, ಪೋಷಕನಾಗಿ ನನ್ನ ಸಾಧನೆಗಳ ಕಾಂತಶಕ್ತಿಯಾಗಿದ್ದ, ಅಕಾಲದಲ್ಲಿ ಅಗಲಿದ ದೊಡ್ಡಣ್ಣನ ನಸುನಗುವನ್ನು, ಚಿಂತನಾ ಶಕ್ತಿಯನ್ನು ಮೈಗೂಡಿಸಿದ ಅಮ್ಮ, ಸ್ವಾವಲಂಬಿಯಾಗಿಸಿದ ಅಪ್ಪನನ್ನು ನೆನಪಿಸದೇ ಇರುವುದಾದರೂ ಹೇಗೆ…?

ಅನ್ನ ನೀಡುತ್ತಿರುವ ‘ಪ್ರಜಾವಾಣಿ’ಗೆ, ಪತ್ರಿಕೋದ್ಯಮದಲ್ಲಿ ‘ಹೆಸರು’ ತಂದುಕೊಟ್ಟ ‘ಆಂದೋಲನ’ಕ್ಕೆ, ಮಣ್ಣಿನಲ್ಲೇ ಕೆಲಸ ಮಾಡಿ ಬೆಳೆದ ನನಗೆ ಮೊದಲ ಬಾರಿ ‘ವೈಟ್ ಕಾಲರ್ ಜಾಬಿನ’ ವೇತನ ನೀಡಿದ ‘ಮಂಗಳೂರು ಮಿತ್ರ’ಕ್ಕೆ ವಂದನೆ ಸಲ್ಲಲೇಬೇಕು. ಅನುವಾದಕ್ಕೆ ಒಪ್ಪಿಗೆ ನೀಡಿದ ಜೋಣಿ ಮತ್ತು ಮಾತೃಭೂಮಿ ಪಬ್ಲಿಕೇಷನ್ಸ್, ಕೃತಿ ಪ್ರಕಟಿಸುತ್ತಿರುವ ನವಕರ್ನಾಟಕ ಪಬ್ಲಿಕೇಷನ್ಸ್ ಸಹಕಾರ ಅವಿಸ್ಮರಣೀಯ.

ಮೂಲ ಕೃತಿಗೆ ಮುನ್ನುಡಿ ಬರೆದವರು ಎಂ.ಪಿ.ವೀರೇಂದ್ರ ಕುಮಾರ್. ನನ್ನಿಂದ ಕೆಲವು ಅಧ್ಯಾಯಗಳನ್ನು ತರಿಸಿಕೊಂಡು ಕನ್ನಡದಲ್ಲೇ ಓದಿ ಕೇಳಿಸಿಕೊಂಡು ಅನುವಾದದ ಕುರಿತು ಅವರು ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಕೃತಿ ಪ್ರಕಟವಾಗುವ ಮೊದಲೇ ಅವರು ನಮ್ಮನ್ನು ಅಗಲಿರುವುದು ಸಮಾಜವಾದಿ ಚಿಂತನೆಗಳಿಗೂ ವೈಯಕ್ತಿಕವಾಗಿ ನನಗೂ ತೀರದ ನೋವು ಉಂಟುಮಾಡಿದೆ. ಅವರ ಚರಣಗಳಿಗೆ ಪುಷ್ಪಾಂಜಲಿ…

‍ಲೇಖಕರು Admin

July 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: