ಒಳಮನೆಯಿಂದ ನಡೆದು ಬಂದಳು ಆಕೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

5

ನನಗೆ ಕೈಲಾಸಂ ಅವರ ‘ತಾಳಿಕಟ್ಟೋಕ್ಕೂ ಕೂಲಿನೇ’ ನಾಟ್ಕ ನೆನಪಾಯಿತು…

ಹೆಣ್ಣು ನೋಡುವ ಶಾಸ್ತ್ರ ಸಂದರ್ಭದ ಆ ಎಲ್ಲಾ ಮನೋ ವ್ಯಾಪಾರಗಳು ಅಲ್ಲಿ ಮೇಳೈಸಿದ್ದವು. ಆ ಪುಟ್ಟ ಮನೆಯ ಹಾಲಿನಲ್ಲಿ ಏನೆಲ್ಲ ಭಾವಗಳು ತುಂಬಿದ್ದೋ. ಮಗಳಿಗೆ ಬಂದ ಒಳ್ಳೆಯ ಸಂಬಂಧ ಕೂಡಿ ಬರಲಪ್ಪ ಹಾಗೂ ಅದು ಕೈಬಿಟ್ಟು ಹೋಗದಿರಲಪ್ಪ ಎಂಬ ತಂದೆ ತಾಯಿಗಳ ಜವಾಬ್ದಾರಿಯ ನೊಗವೊತ್ತ ಆತಂಕದ ಭಾವ… ಬಂದ ಸಂಬಂಧ ಹೇಗೂ ಏನೋ ಎಂಬ ಸಹೋದರರ ಪರೀಕ್ಷಕ ಅನುಮಾನದ ಭಾವ.

ಅಕ್ಕನಿಗೆ ಬಂದ ಗಂಡು ಹೇಗಿದ್ದಾನೊ… ಸುಂದರವಾಗಿದ್ದಾನಾ… ಬೆಳ್ಳಗಿದ್ದಾನಾ… ಕುಳ್ಳಗಿದ್ದಾನಾ… ಡುಮ್ಮನಾ… ನರಪೇತಲನಾ ಎಂಬ ಕುತೂಹಲ ಭರಿತ ನೋಟ ಅಕ್ಕ ತಂಗಿಯರಿಗೆ. ತನಗೆ ಗಂಡನಾಗುವವನು ಹಣವಂತನಾ… ಸ್ಥಿತಿವಂತನಾ ಅನ್ನುವುದಕ್ಕಿಂತ ಒಳ್ಳೆಯವನಾ… ಸಂಭಾವಿತನಾ… ಆತನ ಕೈಹಿಡಿದ ಮೇಲೆ ತನ್ನನ್ನೆಗೆ ಕಂಡಾನು… ಮುಂದಿನ ಬಾಳೇನೂ… ಬದುಕೇನು… ತೌರ ತೊರೆದು ಹೋದ ಮೇಲೆ ಕಾಣದ ಮನೆಯಲ್ಲಿ ಮೊದಲಿನಂತೆಯೇ ಪ್ರೀತಿ ಸಿಕ್ಕೀತೇ… ಅತ್ತೆ ಮಾವರು ಹೇಗೆ ಕಂಡಾರೂ… ಭಾವ ಮೈದುನರು… ಅತ್ತಿಗೆ ನಾದಿನಿಯರೊಡನೆ ಸಹಬಾಳ್ವೆ ಹೇಗಿದ್ದೀತೂ… ಎಂಬ ಆತಂಕ ತುಂಬಿದ ಬೆರಗು ನೋಟ ಆ ಹೆಣ್ಣೊಳಗೆ.

ಸುಮ ಮಧುರ ಕನಸುಗಳು
ನವಿರು ಭಾವಗಳ ಮೆರವಣಿಗೆ
ಮನದೊಳಗೆ ಬಣ್ಣ ಬಣ್ಣದ ಚಿಟ್ಟೆ
ಅದಾವುದೋ ರಾಗ ಎದೆಯೊಳಗೆ ಮೀಟಿದಂತೆ
ನವಿಲು ಕುಣಿದಂತೆ ಮನೋರಂಗದೊಳಗೆ

ಹೆಣ್ಣು… ಹೆಣ್ಣು ಕಾಣುತ್ತಾಳೆ… ನಿರೀಕ್ಷಿಸುತ್ತಾಳೆ… ಅಲ್ಲಿ ಆ ಮನೆಯಲ್ಲಿ ಅವನ ಮನದಲ್ಲಿ ಹೊಂಗೆ ಮರದ  ನೆರಳಾ.

ಇಂತಹವೆಲ್ಲ ಹೆಣ್ಣು ನೋಡಲು ಹೋದ ಸಂದರ್ಭದಲ್ಲಿ ಆ ಮನೆಯಲ್ಲಿ… ಮನೆಯವರಲ್ಲಿ… ಆ ಹೆಣ್ಣಿನಲ್ಲಿ… ಇಂತೆಲ್ಲಾ ಭಾವಗಳು ಮೂಡುತ್ತಲ್ವಾ… ಅನುಭವಿಗಳು ಹೇಳ್ಬೇಕ್ರಪ್ಪಾ…

ಗಂಡಾದವನಿಗೆ… ಗಂಡಿನ ಮನೆಯವರಿಗೆ…??

ನೋಡುತ್ತಿರುವವಳು… ನನ್ನ ಮಡದಿಯಾಗಿ ಬರುವವಳು ರೂಪವತಿಯಾ… ಗುಣವಂತೆಯಾ… ವಿದ್ಯಾವಂತೆಯಾ… ಉದ್ಯೋಗಸ್ಥೆಯಾ… ಸಂಸಾರದ ನೊಗ ಹೇಗೆ ಹೊತ್ತಾಳು… ತನ್ನೊಡನೆ ಹೇಗೆ ಸಹಬಾಳ್ವೆ ಮಾಡಾಳು… ಮನೆಯೊಳಗೆ ಹೊಂದಾಣಿಕೆ ಮಾಡಿಕೊಂಡಾಳೋ ಹೇಗೆ… ಹೀಗೆಲ್ಲಾ ಹಲವು ಆಲೋಚನೆಗಳು ಮೂಡುತ್ತವೆ.

ಈ ಎಲ್ಲಾ ಮನೋ ವ್ಯಾಪಾರಗಳು ಹೆಣ್ಣಿನ ಮನೆಯವರಲ್ಲಿ… ಹೆಣ್ಣಿನಲ್ಲಿ ಹಾಗೂ ಗಂಡಿನಲ್ಲಿ ಅವರ ಮನೆಯವರಲ್ಲೂ ಇರುವುದು ಸಹಜ.

ಅಂದೂ ಸಹ ಆ ಹುಡುಗಿಯ ಮನೆಯಲ್ಲಿ ಕೂತ ನನ್ನಲ್ಲೂ ಇಂತಹ ಭಾವಗಳು ಮೂಡಿದೊ… ಏಕೆಂದರೆ ನಾನು ಹಳ್ಳಿಯಲ್ಲಿ ಬೆಳೆದ ಹುಡುಗ. ಬೆಡಗು ಗೊತ್ತಿಲ್ಲದವ… ಬದುಕಿಗಾಗಿ ನಗರ ಸೇರಿದವನು… ಹಲವು ದಿನಗಳ ಕಾಲ ಒಬ್ಬಂಟಿಯಾಗಿ ಬದುಕಿದವನು… ಊರಿನ… ತಂದೆ ತಾಯಿಯ… ಮನೆಯ ಜವಾಬ್ದಾರಿಗಳನ್ನು ಹೊತ್ತಿದ್ದವನು… ಜೊತೆಗೆ ನಾಟಕದ ಗೀಳನ್ನು ಹತ್ತಿಸಿಕೊಂಡಿದ್ದವನು. ಆ ಗಳಿಗೆ, ನನಗೆ… ನನ್ನ ಮನೆಗೆ ಹೊಂದಾಣಿಕೆ ಆಗುವಂತ ಹುಡುಗಿ ಇವಳಾದಾಳೆ ಎಂದುಕೊಂಡವನೇ ನಾನು… ನಿಜ ಹೇಳ್ಬೇಕಲ್ವಾ…

ಮದುವೆ ಅನ್ನುವುದು… ಎರಡು ಜೀವಗಳ ಸಹಬಾಳ್ವೆ… ಎರಡು ಆತ್ಮಗಳ ಸಮ್ಮಿಲನ… ಎರಡು ಕುಟುಂಬಗಳ ನಡುವಿನ ಪ್ರೀತಿ, ಸ್ನೇಹ, ಬಾಂಧವ್ಯಗಳ ಬಂಧನ… ಮನೆ ಮನಸ್ಸುಗಳು ಒಂದಾಗುವ ಶುಭಕಾರ್ಯ.

ವಳಮನೆಯಿಂದ ನಡೆದುಬಂದಳಲ್ಲಾ ಅವಳು…

ವಾರೆ ನೋಟ ಬೀರಿ ನನ್ನ ಮಳ್ಳ ಮಾಡಿದಳು. ಮೆಳ್ಳಗಣ್ಣನ ಹುಡುಗಿ, ತುಟಿಯಂಚಿನಲಿ ನೆಗೆ ತೂರಿ ನನ್ನ ಕಳ್ಳ ಮಾಡಿದಳು ಮಾಲುಗಣ್ಣಿನ ಬೆಡಗಿ.

ಗೋದೀಯಾ ಮೈಬಣ್ಣದವಳಲ್ಲ ಅವಳು
ಶಿಲಾಬಾಲಿಕೆಯಂತಾ ರೂಪಸಿಯೇನಲ್ಲ
ಶಕುಂತಲೆಯ ಮರಿಮಗಳು ಇವಳೇನಲ್ಲ
ಮೊನಾಲೀಸಳ ನಗು ಇವಳದೇನಲ್ಲ
ಆದರೂ ಇವಳೆ ಇವಳೇ ನನ್ನವಳೆ ಇವಳು
ಎಂದಂದುಕೊಂಡೆ ಮನದಲ್ಲೇ
ಮಹಾಸತಿಯಾಗಿ ಬರಲಿ
ಮನದನ್ನೆಯಾಗಿ ಇವಳೇ ಇರಲಿ
ಮೆಳ್ಳಗಣ್ಣಿನ ಹುಡುಗಿಯೇ ನನ್ನ ಹೆಣ್ಣಾಗಲಿ… ನನ್ನ ಕಣ್ಣಾಗಲಿ

ಎಂದು ಮನೆದೇವರು ಆ ಮಾದೇವನಿಗೆ ಮನದಲೇ ಮೊದಲೇಳಿ ಕಾಫಿ ಲೋಟ ಹಿಡಿದು ನಿಂತ ಆ ಕುಸುಮದೆಡೆಗೆ ನನ್ನ ಕಣ್ಗಳನ್ನೂ ಮೆಳ್ಳಗಣ್ಣು ಮಾಡಿ ನೋಡಿ ತುಂಟ ನಗೆ ಚೆಲ್ಲಿದೆ. ನಾನು ಕಾಲವಿದ ಅಲ್ವೇನ್ರಪ್ಪಾ… ಆ ಮೆಳ್ಳಗಣ್ಣಿಗೆ ಒಂದು ಝಲಕ್ ತೋರ್ಸ್ಗೆ. ಓ… ಈ ಹುಡುಗನದೂ  ನನಂಥೆ ಮೆಳ್ಳಗಣ್ಣೇ ಎಂದು ಆ ಹುಡುಗಿ ನನ್ನನ್ನು ತನ್ನ ಪತಿರಾಯನನ್ನಾಗಿ ಒಪ್ಪಿಕೊಂಡು ಬಿಡಲಿ ಹಾಗೂ ಇವನದೂ ಮೆಳ್ಳಗಣ್ಣಾದ್ದರಿಂದ ನನ್ನಂತಾ ಮೆಳ್ಳಗಣ್ಣಿನವಳನ್ನು ಈತ ತಿರಸ್ಕರಿಸಲಾರ ಎಂಬ ಭರವಸೆಯು ಅವಳಲ್ಲಿ ಮೂಡಲಿ ಎಂದು ಒಂದಾಟ ಕಟ್ದೆ ಕಣ್ರಿ. ಆ ಮೆಳ್ಳಗಣ್ಣಿ ತನಗೆ ಬಂದ ನಗುವನ್ನು ತುಟಿಯಂಚಿನಲ್ಲೇ ತಡೆದು ನನ್ನೆಡೆಗೆ ಬಾಗಿ ಕಾಫಿ ತೋಟವನ್ನು ನನಗೆ ಕೊಡುವಾಗ ಆಕೆಯ ಮೃದಾಂಗುಲಿಗಳಿಗೆ ನನ್ನ ತೋರು ಬೆರಳ ತುದಿ ತಾಕಿ ಅವಳ ಹಣೆಯಲ್ಲಿ ಸಣ್ಣಗೆ ಬೆವರು ಹನಿಗಳು ಮಾಲೆಯಾಗಿ ಮೂಡಿ ಗಲ್ಲದ ಮೇಲೂ ಹರಿದವು. ಬೆದರಿದ ಜಿಂಕೆಯ ಕಣ್ಣುಗಳಂತೆ ಈ ಜಿಂಕೆಯ ಮೆಳ್ಳಗಣ್ಣುಗಳೂ ಬೆದರಿದವು.

ಆ ಹುಡುಗಿ ನಮಗೆಲ್ಲರಿಗೂ ಕಾಫಿಯನ್ನಿತ್ತು ಎಷ್ಟೊತ್ತಿಗೆ ಒಳಮನೆ ಸೇರೇನೊ ಎಂಬ ಭಾವದಿಂದ ಆಕೆ ನಮಗೆ ಕಾಫಿ ಕೊಟ್ಟು ಒಳ ನಡೆದವಳನ್ನು… ನಮ್ಮ ಬಾವಾಜಿಯವರು ತಡೆದು ನಿಲ್ಲಿಸಿ…

‘ಬಾರಮ್ಮ ಇಲ್ಲಿ… ಕೂತ್ಕೋ ಬಾ…’ ಎಂದು ಕೂರಿಸಿ ವಧು ಪರೀಕ್ಷೆ ಪ್ರಾರಂಭಿಸಿದರು.

‘ಏನಮ್ಮ ನಿನ್ನ ಹೆಸರು’ ಬಾವ ಕೇಳಿದರು.

‘ಗಂಗಾಂಭಿಕೆ ಅಂತ ಹೆಸರಿಟ್ಟೀವಿ ಗಂಗಾ ಅಂತ ಕರಿತೀವ್ರಾ…’ ಎಂದು ಹುಡುಗಿಯ ತಾಯಿಯವರು ಹೇಳಿದಾಗ… ‘ಏಯ್ ನಿನ್ನ ಕೇಳಿದ್ರೆ… ನೀನು ಸುಮ್ನಿರಕ್ಕೇನು… ಅವ್ರು ಮಗಿನ್ನ ಕೇಳಿದ್ರೂ’ ಎಂದು ಯಜಮಾನರು ಹೆಂಡತಿಯ ಕಡೆ ಕಣ್ಣು ಬಿಟ್ಟರು.

‘ಹೇಳ್ಳೀ ಬಿಡಿ ಯಜಮಾನ್ರೆ… ಹುಡ್ಗಿ ತಾಯಿಯಲ್ವಾ’ ಎಂದು ‘ಏನಮ್ಮ… ಎಲ್ಲಿ ಕೇಲ್ಸ ಮಾಡ್ತಿದ್ದಿ… ಟೀಚರ್ ಅಂತೇ ಹೌದೊ’ ಎಂದು ಹುಡುಗಿಯನ್ನು ಬಾವಾಜಿಯವರು ಕೇಳಿದಾಗ… ತಲೆ ಬಗ್ಗಿಸಿ ಕುಳಿತಿದ್ದ ಆ ಮೆಳ್ಳಗಣ್ಣಿನ ಹುಡುಗಿ ನೆಲ ನೋಡುತ್ತಿದ್ದ ಕತ್ತನ್ನು ತುಸು ಮೇಲೆತ್ತಿ ‘ಹೂನಣ್ಣಾ… ಆದಿವಾಲದ ಗರ‍್ನಮೆಂಟ್ ಸ್ಕೂಲಲ್ಲಿ ಟೀಚರ್ ಆಗಿದ್ದೀನಿ’ ಎಂದಳು… ಎಷ್ಟೋರ್ಷ ಆಯ್ತು ಸರ್ವಿಸೂ… ಬಾವನ ಪ್ರಶ್ನೆ… ‘ಆರು ತಿಂಗಳಾಯ್ತು’ ಆಕೆಯ ಉತ್ತರ… ‘ಮನೆ ಕೆಲ್ಸ… ಅಡಿಗೆ ಮಾಡೋದೂ ಎಲ್ಲ ಬತ್ತದೋ, ಬಾವನ ಮತ್ತೊಂದು ಪ್ರಶ್ನೆ… ‘ಬತ್ತದೇಳಿ… ಎಲ್ಲಾ ಕೆಲ್ಸನೂವೆ ಮಾಡ್ತಾಳೆ ಹೇಳೇ ಗಂಗಾ’ ಎಂದು ಒಳಮನೆಯ ಬಾಗಿಲಿಂದೆ ನಿಂತಿದ್ದ ಆ ತಾಯಿ ನುಡಿದಳು. ಹೆಂಡತಿಯೆಡೆಗೆ ಯಜಮಾನರು ಮತ್ತೆ ಕಣ್ಣು ಬಿಟ್ಟರು… ಒಳ ಮನೆ ಮತ್ತೆ ನಕ್ಕಿತು.

ಬಾವಾಜಿ ಮತ್ತೆ ಮಾತು ಮುಂದುವರಿಸಿದರು… ‘ನಮ್ಮ ಸ್ವಾಮಿಯೋರ ನೋಡ್ದೇನಮ್ಮಾ…’ ಆಕೆಯದು  ಮೌನವೇ ಉತ್ತರ. ಕತ್ತು ಮೇಲೆತ್ತಿ ಕೆಳನೋಡುತ್ತಾ ಕುಳಿತಿದ್ದ ಹುಡುಗಿ ಕತ್ತನ್ನು ಮತ್ತೆ ಕೆಳಗಾಕಿದಳು. ನಮ್ಮ ಹುಡುಗ ಇಷ್ಟ ಆದನೇನಮ್ಮ… ಬಾವನದು ಮತ್ತೊಂದು ಪ್ರಶ್ನೆ. ಆಕೆಯದು ‘ಮೌನ’ವೇ ಉತ್ತರ. ನಮ್ಮುಡಗನನ್ನು : ನಾನು ಒಪ್ಪಿಸುತ್ತೇನೆ. ನಿನಗೆ ಒಪ್ಪಿಗೆ ಇದೆಯೇನಮ್ಮ… ಬಾವನ ಮಾತು. ಆಕೆಯದು ‘ಮೌನವೇ ಉತ್ತರ’.

ಹೀಗೆ ನಮ್ಮ ಬಾವಾಜಿಯವರು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕ್ತಾನೇ ಇದ್ರೂ… ಎನ್‌ ಕ್ವಾಯಿರಿ ಮೇಲೆ ಎನ್‌ ಕ್ವಾಯಿರಿ ಮಾಡ್ತನೇ ಇದ್ರು… ನಿನಗೆ ‘ಶಿವಪೂಜೆ’ ಮಾಡಕ್ಕ ಬರುತ್ತಾ, ‘ಡ್ಯಾನ್ಸ್’ ಬರುತ್ತಾ… ಮಾಡ್ತಾನೇ ಇದ್ರೂ ಎಲ್ಲಿ ನಡೆದಾಡು ನೋಡೋಣ… ಎಲ್ಲಿ ಒಂದಾಡೇಳು ಕೇಳೋಣ ಎಂದು ಮಾತ್ರ ಕೇಳಲಿಲ್ಲ ಸದ್ಯ.

ವಧು ಪರೀಕ್ಷೆ ಮುಗಿಸಿದ ಬಾವಾಜಿಯವರು ನನ್ನತ್ತ ತಿರುಗಿ ‘ಸ್ವಾಮ್ಯೋರೆ’ ಹುಡ್ಗೀನ ನೀವೇನಾದ್ರೂ ಕೇಳ್ತಿರೇನ್ರಿ’ ಎಂದರು.

ಅಲ್ಲಾ… ನಮ್ಮ ಬಾವಾಜಿ ನಿಮಗೆ ಹುಡುಗಿ ಇಷ್ಟ ಆದ್ಲಾ ಇಲ್ಲಾ ಅಂತಾ ಏನೂ ಕೇಳ್ಳಿಲ್ಲ… ನಿಮಗೆ ಒಪ್ಪಿಗೆಯಾ ಎಂದೂ ವಿಚಾರಿಸಲಿಲ್ಲ. ‘ನಮ್ಮ ಹುಡ್ಗನ್ನ ನಾನು ಒಪ್ಪಿಸುತ್ತೇವೆ’ ಎಂಬ ಮಾತುಗಳನ್ನು ಈಗಲೇ ಆಡಿಬಿಟ್ಟಿದ್ದಾರೆ. ಈ ಇಂತಹ ಸಂದರ್ಭದಲ್ಲಿ ನಾನೇನು ಮಾತನಾಡುವುದು ಎಂದು ‘ಏನಿಲ್ಲಾ ಅಮ್ಮ-ಅಪ್ಪಾಜಿ ಮತ್ತು ನೀವೇನೇಳುತ್ತಿರೊ ಹಂಗೆ’ ಅಂದ್ಬುಟ್ಟೆ…’ ನೋಡಿದ್ರಾ ನಮ್ಮ ಸಾಮ್ಯೋರು ಎಷ್ಟು ಸಂಭಾವಿತರು ಅಂತ ಗೊತ್ತಾಯ್ತಾ… ನನ್ನ ಮಾತ್ಗೆ ಅವರು ಎರಡು ಮಾತಾಡಕ್ಕಿಲ್ಲ… ಹಿರಿಯರ ಮಾತ್ಗೆ ಬೆಲೆ ಕೊಡೋಂತವರು ಎಂದು ಹೇಳಿ ನನಗೆ ಸಂಭಾವಿತನ ಸರ್ಟಿಫಿಕೇಟನ್ನೂ ಕೊಟ್ಟು ತಮಗೆ ತಾನೇ ಹಿರಿತನದ ಪಟ್ಟವನ್ನೂ ತಮ್ಮದಾಗಿಸಿಕೊಂಡರು.

ಹುಡುಗಿಯ ಅಣ್ಣನತ್ರ ತಿರುಗಿ. ನಮ್ಮ ಹುಡುಗನ್ತಾ… ನೀವೇನಾದ್ರೂ ಕೇಳ್ತಿರರ‍್ರಿ… ರೇಣಕಪ್ಪನವರೆ’ ಎಂದರು… ಅವರ ಉತ್ತರಕ್ಕೂ ಕಾಯದೆ ‘ಯಜಮಾನ್ರೆ ನೀವು… ಅಮ್ಮವರೇ ನೀವೂ ಎನ್ನುತ್ತಾ ನನಗೆ ಮತ್ತೆ ಆ ಹುಡುಗಿಗೆ ಅಂದೇ… ಆ ಗಳಿಗೆಯಲ್ಲೇ ತಾಳಿ ಕಟ್ಟಿಸಿಬಿಡುತ್ತಾರೇನೋ ಅನ್ನುವಷ್ಟು ಭಾವಾಜಿಯವರೇ ಸಡಗರ ಪಟ್ಟರು.

‘ಹೂಂ… ನೀ ಒಳಗೋಗಮ್ಮ’ ನಾವು ಯಜಮಾನ್ರತ್ತಿರ ನಿಮ್ಮ ಅಣ್ಣಾವರತ್ರ ಸ್ವಲ್ಪ ಮಾತಾಡೋದಿದೆ ಎಂದು ಆ ಮೆಳ್ಳಗಣ್ಣಿಯನ್ನು ಒಳಕಳಿಸಿದರು.

ಆ ಹುಡುಗಿ ಬದುಕಿದೆಯಾ ಬಡ ಜೀವವೇ ಎಂದು ಒಳಮನೆಗೊಡಿದಳು. ಒಳಮನೆಯಲ್ಲಿ ಮತ್ತೆ ಗುಸುಗುಸು ಪಿಸುಪಿಸು ಸಣ್ಣ ನಗು ಹರಿದಾಡಿತು…

ಭಾವಾಜಿಯವರರು ಮತ್ತೆ ಮಾತು ಪ್ರಾರಂಭಿಸಿದರು…

‘ಏನೆಜಮಾನ್ರೆ… ನೀವೇನೇಳ್ತೀರ…’ ನಿಮ್ಮ ಮಗಳನ್ನು ನಮ್ಮುಡ್ಗನಿಗೆ ಕೊಡ್ತೀರಾ ಹೆಂಗೆ ಎಂದರೆ… ‘ಅಂದೆಗೇಳಕ್ಕಾದದು… ಮಗಿನೇ ಕೇಳ್ದಲೆಯಾ… ಅವಳ್ನೊಂದು ಮಾತ್ನಾ ಕೇಳಬೇಡ್ವೆ…’ ಎಂದರು ಯಜಮಾನರು… ‘ಗಂಗ ಒಪ್ಕೊಳ್ತಳೆ ಬಿಡಪ್ಪ… ನಾನೂಪ್ಪುಸ್ತೀನಿ’ ಎಂದರು ಹುಡುಗಿ ಅಣ್ಣ ರೇಣಕಪ್ಪನವರು…

ಅಲ್ಲಾ ‘ಮುಂದಿನ ಮಾತುಕತೆನೆಲ್ಲಾ… ಆಮೇಲೆ ಮಾತಾಡನಂತೆ ಮುಂದಿನ ಸ್ವಾಮಾರನೇ ನಮ್ಮ ಅತ್ತೆ-ಮಾವರನ್ನು ಇವರ ಅಕ್ದಿರನ್ನು ಎಲ್ರನ್ನು ಕರುಸ್ತಿನಿ ಕಣ… ಅದೇನು ತಗಳದು…ಬಿಡೋದು… ಹುಡ್ಗನಿಗೆ ನೀವೇನ್ ಕೊಡ್ತೀರಿ… ಮಗಿಗೆ ಅವರೇನ್ ಹಾಕ್ತಾರೆ … ಒಡವೆ ವಸ್ತ್ರ… ಮತ್ತೊಂದು ಮಗದೊಂದು… ವರದಕ್ಷಿಣೆ ಪರದಕ್ಷಿಣೆ… ಎಲ್ಲನೂ ಅರ‍್ಬಂದ್ಮೇಲೆ… ಅವರ ಸಮ್ಮುಖದಲ್ಲೇ ಮಾತಾಡಾನಾ… ಈಗೇನೇಳ್ತಿರಾ ಹೇಳಿ’ ಎಂದು ಭಾವಾಜಿಯರು ಯಜಮಾನರ ಕಡೆಗೆ ಪಟ್ಟಾಕಿದರು…

ನನಗೆ ಕೈಲಾಸಂ ಅವರ ‘ತಾಳಿಕಟ್ಟಕ್ಕೂ ಕೂಲೀನೇ’ ನಾಟ್ಕ ನೆನಪಾಯಿತು… ಹಾಗೆಯೇ ನಾನು, ಕತೆಗಾರ ಹಾಗೂ ಚುಕ್ಕಿ ಚಿತ್ರಗಾರ ಮೋಹನ್ ವಣೇಕರ ಮತ್ತು ಬರಹಗಾರ ಮುಕುಂದ ಪುರೋಹಿತ… ಇನ್ನೂ ಹತ್ತನ್ನೆರಡು ಗೆಳೆಯರು ಕೂಡಿ ‘ವರದಕ್ಷಿಣೆ ವಿರೋಧಿ ವೇದಿಕೆ’ ಅಂತೋನೋ ಮಾಡ್ಕೊಂಡು ನಾವು ಮದುವೆ ಆಗುವ ಸಂದರ್ಭಗಳಲ್ಲಿ ‘ವರದಕ್ಷಿಣೆ’ ತಗೆದುಕೊಳ್ಳಬಾರದೆಂದೂ… ಹಾಗೂ ನಮ್ಮ ಗೆಳೆಯರಿಗೂ ವರದಕ್ಷಿಣೆ ತೆಗೆದುಕೊಳ್ಳದಂತೆ ಪ್ರೇರಣೆಯನ್ನು ಮಾಡುವುದು… ಮನ ಒಲಿಸುವುದು… ಹಾಗೂಮೀರಿ ಅವರೇನಾದರೂ ವರದಕ್ಷಿಣೆ ತೆಗೆದುಕೊಂಡರೆ ಅಂತವರನ್ನು ಗುರುತಿಸಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದೆಂದೂ ಸಾಧ್ಯವಾದರೆ ಪೊಲೀಸರಿಗೆ ಹಿಡಿದುಕೊಟ್ಟು ಕಾನೂನು ಜರುಗಿಸಿ ಜೈಲಿಗೆ ಹಾಕಿಸುವುದೆಂತಲೂ ‘ಶ್ರೀನಗರ ಬಸ್ ಸ್ಟಾಂಡಿನ ಹಿಂಬದಿಯಲ್ಲಿದ್ದ ಪಾರ್ಕಿನಲ್ಲಿ ಸಭೆ ಸೇರಿ ತೀರ್ಮಾನವನ್ನು ಮಾಡಿದ್ದೋ. ಹಾಗೂ ‘ವರದಕ್ಷಿಣೆ ವಿರೋಧಿ ಚಳವಳಿ’ಯನ್ನು ಎಲ್ಲೆಡೆಯೂ ರೂಪಿಸಬೇಕೆಂದು ಮೈದುಂಬಿ ಮಾತಾಡಿದವ ಮಾತಿಗೆ ಚಪ್ಪಾಳೆಯನ್ನು ತಟ್ಟಿದ್ದೊ… ಆಮೇಲೆ ನಾವ್ಯಾರು ‘ವರದಕ್ಷಣೆ’ ತೆಗೆದುಕೊಳ್ಳುವುದಿಲ್ಲವೆಂದು ಹಸ್ತದ ಮೇಲೆ ಹಸ್ತ ಹಾಕಿ ‘ಭಾಷೆ ಪ್ರಮಾಣ’ವನ್ನು ಮಾಡಿದ್ದೊ… ಅದೆಲ್ಲಾ ನಮ್ಮ ಬಾವಾಜಿ ಯಜಮಾರು ಮಾತಾಡುವ ಸಂದರ್ಭದಲ್ಲಿ ನನಗೆ ನೆನಪಿಗೆ ಬಂದುಬಿಟ್ಟಿತು…!!!

ಅವರೆಲ್ಲಾ ಅವರ ಪಾಡಿಗೆ ಮಾತಾಡುತ್ತಲೇ ಇದ್ದಾರೆ… ನಾನೋ ಆ ಕಡೆ ಈ ಕಡೆ ತಿರುಗುತ್ತಾ ಮಿಕಿ… ಮಿಕಿ ಕಣ್ಣು ಬಿಡುತ್ತಾ ಏನೂ ಹೇಳದೇ ತೋಚದೆ ಅವರೆಲ್ಲಾ ಮಾತುಗಳು ಕೇಳುತ್ತಾ ಸುಮ್ಮನೆ ಕುಳಿತಿದ್ದೆ ಬೆಪ್ಪನಂತೆ.

‘ಇರಿ… ಇರಿ… ಮಗಿನೊಂದು ಮಾತ್ ಕೇಳ್ಬುಡನಾ’ ಎಂದರು ಯಜಮಾನರು… ಅಂಗಾರೆ ‘ಒಂದ್ಕೆಲ್ಸ ಮಾಡಾನಾ’ ಹುಡ್ಗ-ಹುಡ್ಗಿನೇ ಸಪ್ರೇಟಾಗಿ ಮಾತಾಡ್ಲಿ ಬುಡಿ ಎಂದ ಬಾವಾಜಿಯವರು ನನ್ನತ್ತಿ ತಿರುಗಿ ಸ್ವಾಮ್ಯಾರೆ ನೀವು ಆಚೆ ರೂಮಲ್ಲಿ ಕುಂತಿರೋಗಿ. ಅಲ್ಲಿಗೇ ಹುಡ್ಗೀನಾ ಕಳುಸ್ತೀವಿ ಕಣ. ನೀವ್ ನೀನೇ ಮಾತಾಡಿ… ಅದೇನಂತಾ ಹೇಳಿ… ಮುಂದೆ ಜೊತೆಯಾಗಿ ಬಾಳೋರು ಬದುಕೋರು ನೀವು. ಹೋಗಿ ಹೋಗಿ ಎಂದರು.

ನಾನು ಆಚೆಯಿದ್ದ ರೂಮಿಗೋಗಿ ಕುಳಿತೆ. ತುಸು ಸಮಯ ಕಳೆಯಿತು… ಅವಳು ಬರಲಿಲ್ಲ. ಆಕೆಯನ್ನು ನಾನೇನು ಕೇಳುವುದು ಎಂದು ಯೋಚಿಸುತ್ತಾ ಕುಳಿತೆ. ರೂಮಿಗೊಳಗೆ ಸಂಜೆಗತ್ತಲು ಆವರಿಸುತ್ತಿತ್ತು.

ಏನು ಕೇಳುವುದು
ಏನೆಂದು ಹೇಳುವುದು
ಮುಸುಕಿದೀ ಮಬ್ಬಿನರಿ ಕೈ ಹಿಡಿದು ನಡೆಸೆನ್ನನು…
ಬಾಗಲಿ ಬಳಿ ಯಾರೋ ಬಂದಂಗಾಯಿತು.
ಬಳೆಗಳ ಸದ್ದಾಯಿತು…
ಅವಳು ಒಳ ಬಂದಳು…
ನನ್ನೆದುರು ನಿಂದಳು…
ದೀಪ ಹತ್ತಿಸಿದಳು…
ಒಳಗೆ ಬೆಳಕಾಯಿತು…

‍ಲೇಖಕರು Admin

July 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: