ಆಶಿಕ್‌ ಮುಲ್ಕಿ ಕಥೆ- ಪೋಸ್ಟ್ ಮ್ಯಾನ್ ಬಾಬಣ್ಣ !

ಆಶಿಕ್‌ ಮುಲ್ಕಿ

ಹಾಗೆ ಎಲ್ಲವೂ ಸರಿ ಇತ್ತು ಎನ್ನುವ ಹೊತ್ತಿಗೆ ನನಗೆ ಪರಿಚಯವಾದವರು ಪೋಸ್ಟ್ ಮ್ಯಾನ್ ಬಾಬಣ್ಣ. ಅತ್ತ ಬಯಲು ಸೀಮೆಯ ಒಂದು  ಸಂಗಮದ ಓಣಿಯಲ್ಲಿ ಲುಂಗಿ ಹರಿದ ಶರ್ಟು ಹಾಕಿಕೊಂಡು ಎಕ್ಸ್ ಎಲ್ ಮೇಲೆ ಅಂಚೆ ಪತ್ರಗಳನ್ನು ಊರೂರಿಗೆ ಹಂಚುತ್ತಾರೆ ಅವರು. ವಿಶೇಷ ಎಂದರೆ ಬೆಂಗಳೂರಿನಿಂದ ಸರಿಯಾಗಿ 90 ಕಿಲೋ ಮೀಟರ್ ದೂರದಲ್ಲಿ ಕೊಡ್ಡೆಗಾಲು ಎಂಬ ಸಣ್ಣ ಹಳ್ಳಿಯೊಂದಿದೆ. ಕೆಲಸ ನಿಮಿತ್ತ ಹಳ್ಳಿ ಹುಡುಕಿ ಹೊರಟ ನನಗೆ, ಆ ಹಳ್ಳಿಯಲ್ಲಿ ಸಿಕ್ಕ ವ್ಯಕ್ತಿಯೇ ಈ ರಾಮ್ ಬಾಬು. ಅಂದರೆ ಪೋಸ್ಟ್ ಮ್ಯಾನ್ ಬಾಬಣ್ಣ. 

ಗುಂಡಗಿನ ದೇಹಾಕಾರ. ಬಿಳಿ ಗಡ್ಡ. ಹವಾಯ್ ಚಪ್ಪಲಿ. ಪುರಾಣಕಾಲದ್ದಿದು ಎಂಬಂತಿರುವ ಒಂದು ಕನ್ನಡಕ. ಜೊತೆಗೆ ಬಾಯಿ ತುಂಬಾ ಮಾತು. ಕೊಡ್ಡೆಗಾಲು ಈ ಮೇಕದಾಟು ಹೋಗುವ ದಾರಿಯಲ್ಲಿರುವ ಪುಟ್ಟ ಹಳ್ಳಿ. ಇಲ್ಲಿನ ಅಂಗಡಿಯೊಂದರಲ್ಲಿ ನಾನು ನನ್ನ ಗೆಳತಿಯೊಬ್ಬಳು ಕೂತು ಹುರಿದ ಟೈಗರ್ ಮೀನಿನ ಮುಳ್ಳನ್ನೂ ಬಿಡದೆ ಚೀಪಿ ತಿನ್ನುತ್ತಿದ್ದೆವು. ‘ಏನಮ್ಮಾ ತುಳ್ಸಮ್ಮ… ಯಜಮಾನ್ರು ಬಂದಿಲ್ವಾ..? ಬಂದಿಲ್ಲಾಂದ್ರೆ ಹೇಳು… ಹೋಗಿ ಕರ್ಕೊಂಡು ಬರ್ತೀನಿ’ ಎನ್ನುತ್ತಾ ನಾ ಕೂತ ಮೇಜಿನ ಮತ್ತೊಂದು ತುದಿಗೆ ಬಂದು ಕೂತವರು ಪೋಸ್ಟ್ ಮ್ಯಾನ್ ಬಾಬಣ್ಣ. 

ತುಳ್ಸಮ್ಮ ಈ ಅಂಗಡಿಯ ಮಾಲೀಕೆ. ಪಕ್ಕದಲ್ಲೇ ಯಾರನ್ನೋ, ಏನನ್ನೋ ಹುಡುಕಿ ಓಡುತ್ತಿರುವವರಂತೆ ಹರಿಯುತ್ತಿರುವ ನದಿ. ಸಯಂಕಾಲದ ತೆಳು ಬಿಸಿಲಿಗೆ ಅಲ್ಲಲ್ಲಿ ಕೂತಿರುವ ಜನರು. ವಿಶೇಷ ಎಂದರೆ ಅಲ್ಲೊಂದು ಗಲ್ಲಿಯಿದೆ. ಆ ಗಲ್ಲಿಗೆ ಯಾವ ಗಂಡಸರೂ ಕೂಡ ಧೈರ್ಯದಿಂದ ನಡೆಯಲಾರರು. ಆದರೆ ಆ ಗಲ್ಲಿಗೆ ಹೋಗುವ ಕಿಮ್ಮತ್ತಿರುವುದು ಈ ಪೋಸ್ಟ್ ಮ್ಯಾನ್ ಬಾಬಣ್ಣನಿಗೆ ಮಾತ್ರ. 

ಕೊಡ್ಡೆಗಾಲು ರಸ್ತೆ ನೇರ ನಡೆದರೆ ಪ್ರಕೃತಿ ರಮಣೀಯವಾದ ಮೇಕೆದಾಟು ಸಿಗಲಿದೆ. ಇದರ ನಡುವಣ ಈ ಕೊಡ್ಡೆಗಾಲು ಬಲು ಚಂದದ ಹಳ್ಳಿ. ಅದೇನೋ ಅನ್ನಿಸಿ ಕೊಡ್ಡೆಗಾಲು ಹಳ್ಳಿಯ ಅಂಗಡಿಯೊಂದರ ಬಾಗಿಲಿಗೆ ಮೊಬೈಕು ನಿಲ್ಲಿಸಿದೆ. ಅಲ್ಲಿ ನನಗೆ ಪೋಸ್ಟ್ ಮ್ಯಾನ್ ಬಾಬಣ್ಣ ಪರಿಚಯವಾದರು. ಅಲ್ಲ, ನಾನೇ ಪರಿಚಯ ಮಾಡಿಕೊಂಡೆ. ಬಾಯಿ ತುಂಬಾ ಮಾತು ಹೊತ್ತಿರುವ ಬಾಬಣ್ಣ ನನಗೆ ಹಿಡಿಸಿದರು. ಅವರ ಬಾಯಿಂದ ಬಂದ ಆ ಗಲ್ಲಿಯ ಕತೆ ನನ್ನಲ್ಲಿ ಕ್ಷಣ ಕಾಲಕ್ಕೆ ರೋಮಾಂಚನ ಉಂಟು ಮಾಡಿತು. ಆ ಗಲ್ಲಿ. ಅದೊಂದೇ ಗಲ್ಲಿ. ಬಹುಶಃ ಕಿರುಗೂರಿನ ಗಯ್ಯಾಳಿಗಳು ಇವರೆಲ್ಲಾ ಎನ್ನುವಂತಿದ್ದರು. ಮಾತೆತ್ತಿದ್ದರೆ ಟಮಾರ್ ಪಡಾರ್. 

ಅಲ್ಲಿನ ಹೆಂಗಸರ ಬಾಯಿಗೆ ಬಲಿಯಾಗಬಾರದು ಎಂಬ ಕಾರಣಕ್ಕೆ ತಪ್ಪಿಯೂ ಆ ಕಡೆ ಯಾರೂ ತಲೆ ಹಾಕುತ್ತಿರಲಿಲ್ಲವಂತೆ. ಆದರೆ ಬಾಬಣ್ಣ ರಾಜಾರೋಷವಾಗಿ ಗಲ್ಲಿಯ ತುದಿಯೆರಡನ್ನೂ ಮುಟ್ಟಿ ಬರುತ್ತಾರೆ. ನನಗೇನೋ ಕುತೂಹಲ. ಬೀಡಿ ಸೇದುವ ಚಾಳಿ ಹೊಂದಿದ ಬಾಬಣ್ಣನಿಗೆ ಒಂದು ಸಿಗರೇಟು‌ ಕೊಡಿಸಿ ಗೆಳತನ ಗಟ್ಟಿ ಮಾಡಿಕೊಂಡೆ. ಮೊದಲು ಕೊಂಚ ಕಸಿವಿಸಿ ಮಾಡಿದರೂ ಎರಡನೇ ಸಿಗರೇಟು ಅವರು ನನ್ನನ್ನು ‘ಬರ್ರಿ’ ಎನ್ನುವಂತೆ ಮಾಡಿತು. 

ಬಾಬಣ್ಣ ರಾಮನಗರದವರು. ಸುಮಾರು 30 ವರ್ಷಗಳ ಹಿಂದೆ ಕೊಡ್ಡೆಗಾಲಕ್ಕೆ ಬಂದವರು. ಸಂಬಂಧಿಕರೆಲ್ಲಾ ಈಗಲೂ ರಾಮನಗರದಲ್ಲೇ ಇರುವುದು. ಇಲ್ಲಿ ಬಾಬಣ್ಣ ಒಬ್ಬರೇ. ಅಂಚೆ ಕಚೇರಿಯ ಹಿಂಬಂದಿಯಲ್ಲಿ ಯಾರದ್ದೋ ದಯೆಯಿಂದ ಅರಳಿದ‌ ಕೋಣೆ ಮತ್ತು ಶೌಚವಿದೆ. ಹೆಂಡತಿ.. ಒಬ್ಬ ಮಗ ಇವರಿಗೆ. ದೊಡ್ಡವನಾದ ಮೇಲೆ ಮಗ ಮನೆ ಕಡೆ ತಲೆ ಹಾಕಲೇ ಇಲ್ಲವಂತೆ. ಹೆಂಡತಿ‌ ಮಂಜುಳ ಇಲ್ಲ ಈಗ. ಅದೇನೋ ಅನಾರೋಗ್ಯ ಬಂದು ಅಸುನೀಗಿದ್ದಾಳೆ. ಮೊದಲೆಲ್ಲ ಅಗಾಗ್ಗೆ ಊರಿಗೆ ಹೋಗಿತ್ತಿದ್ದರು. ಹೆಂಡತಿ ತೀರಿಕೊಂಡ ಮೇಲೆ ಊರ ದಾರಿ ಬಲು ದೂರ. 

ಕೊಡ್ಡೆಗಾಲಿನ ಈ ಗಲ್ಲಿಯಲ್ಲಿ ಹೆಣ್ಪಡೆಯೇ ಇದೆ. ಹಾಗಂತ ಅವರೇನೂ ಕ್ರೂರಿಗಳಲ್ಲ. ಆದರೆ ಇವರ ಬಳಿ ಏಕೆ ಜನರು ಸೇರುವುದಿಲ್ಲ..? ಇವರೆಂದರೆ ಯಾಕೆ ಭಯ ಎಲ್ಲರಿಗೂ.? ಚಿಂತಿಸಲೇ ಬೇಕಾದ ಪ್ರಶ್ನೆಗಳಿವು ಎಂದೆನಿಸಿತು ನನಗೆ. ಬಾಬಣ್ಣ ಮಾತಿಗೆ ಮಾತು ಜೋಡಿಸಿ ಹರಟುತ್ತಿದ್ದರೆ, ನನ್ನ ಜೊತೆಗಿದ್ದ ಗೆಳತಿ ‘ಸಾಕು ನಡಿ’ ಎಂದು ಕಣ್ಣಲ್ಲೇ ಹೇಳಿದಳು. ಅದು ಬಾಬಣ್ಣನಿಗೆ ತಿಳಿಯಿತು. ಗೆಳತಿಯ ಮುಖ ನೋಡಿ ಇರು ಮಗಳೇ ಎಂದರು.‌ ಈಗಾಗಲೇ ಒಂದೆರಡು ಬಾರಿ ಗಲ್ಲಿಯ ವೃತ್ತಾಂತ ಕೇಳಿಯಾಗಿದೆ. ಬಾಬಣ್ಣ ಒಂದು ಮಾತಿನಿಂದ ಮತ್ತೊಂದಕ್ಕೆ ವಿಷಯಾಂತರ ಮಾಡಿಕೊಳ್ಳುತ್ತಲೇ ಮಾತಾಡುತ್ತಿದ್ದರು. 

ಕೊನೆಗೂ ಅಲ್ಲೇ ಪಕ್ಕದಲ್ಲಿದ್ದ ಕಲ್ಲಿನ ಮೇಲೆ ಕೂತು ಗಾಢವಾದ ಮಾತಿಗೆ ಇಳಿದರು ಬಾಬಣ್ಣ. ಅದೇ ಆ ಗಲ್ಲಿ ಇದೆಯಲ್ಲಾ. ಅದೊಂದು ವಿಚಿತ್ರ ಗಲ್ಲಿ. ನಮ್ಮ ಕೊಡಗು ಇದೆಯಲ್ಲಾ ಹಾಗೆ. ಹಾಗೆ ಎಂದರೆ, ಕೊಡಗಿನಿಂದ ದೇಶದ ಸೈನ್ಯಕ್ಕೆ ಹೋದವರ ಸಂಖ್ಯೆ ಎಷ್ಟು..? ನನಗಂತೂ ಗೊತ್ತಿಲ್ಲ. ಹಾಗೆ ಈ ಗಲ್ಲಿಯಲ್ಲಿರುವ ಒಟ್ಟು 12 ಮಂದಿ ಸೇನೆಯಲ್ಲಿದ್ದಾರಂತೆ. ಅಲ್ಲಿ ಭಾರತದ ಹಣೆಯಂತಿರುವ ಜಾಗದ ಹಿಮದಡಿಯಲ್ಲಿದ್ದಾರೆ ಎಲ್ಲರೂ.

ಈ ಗಲ್ಲಿಯಲ್ಲಿರುವ ಮಹಿಳೆಯರ ಗಂಡಂದಿರು ಅವರೆಲ್ಲಾ. ವರ್ಷಕ್ಕೊಮ್ಮೆ ಬಂದರೆ ಬಂದರು. ಇವರ ಭೇಟಿಯೆಲ್ಲಾ ಬಹಳ ಅಪರೂಪ. ಆದರೆ ಅಲ್ಲಿ ಜಮ್ಮುವಿನಿಂದ ಕಾಶ್ಮೀರದಿಂದ ಅವರು ತಮ್ಮ ಮಡದಿಯರಿಗೆ ಪತ್ರ ಬರೆಯುತ್ತಾರೆ. ಅದೇ ನೋಡಿ ಬಾಬಣ್ಣನ ಪರವಾನಿಗೆ. ಬಹುಶಃ ಕಟ್ಟಿಕೊಂಡವರು ಜೊತೆಯಲ್ಲಿಲ್ಲ ಎನ್ನುವ ವೇದನೆಯೇ ಇವರನ್ನು‌ ಹೀಗೆ ಮಾಡಿರಬಹುದು ಎಂದು ಭಾವಿಸಿದೆ ನಾನು.

ಇಲ್ಲಿನ ಮಹಿಳೆಯರು ಹಳ್ಳಿಯ ಬೇರೆ ಬೇರೆ ಭಾಗದಲ್ಲಿದ್ದವರು. ಆದರೆ ಒಂದೇ ದೋಣಿಯ ಯಾತ್ರಿಕರಂತೆ ಒಂದೇ ನೋವನ್ನು‌ ಹೊತ್ತುಕೊಂಡು ಬದುಕುತ್ತಿರುವ ಕಾರಣಕ್ಕೆ ಎಲ್ಲರೂ ಒಂದು ಕಡೆ ಸೇರಿ ಜೀವನ ಕಳೆಯುತ್ತಿದ್ದಾರೆ. ಮತ್ತೊಂದು ಕಾರಣವೇನೆಂದರೆ, ಎಲ್ಲರಿಗೂ ಅಂಚೆಗಳು ತಲುಪುತ್ತಿರಲಿಲ್ಲ. ಈ ಬಾಬಣ್ಣ ಸಂಧ್ಯಾರ್ಚನೆಯ ಬಳಿಕ ಮೈ ಮರೆಯುತ್ತಿದ್ದರು. ಎಲ್ಲಾದೊರೊಂದು ಕಡೆ ನಿದ್ದಿಗೆ ಬೀಳುತ್ತಿದ್ದರು.

ಹೀಗೆ ಅನೇಕ ಬಾರಿ ಬಂದ ಪತ್ರಗಳು ಬಂದ ದಾರಿಗೆ ಸುಂಕ ಕಟ್ಟುತ್ತಿದ್ದವು. ನೂರೆಂಟು ಬಾರಿ ಈ ಬಗ್ಗೆ ಬಾಬಣ್ಣನಿಗೆ ಬುದ್ದಿ ಹೇಳಿದರೂ ಹೆಂಗಳೆಯರ ಸಂಕಟವಾಗಲಿ ನೋವಾಗಲಿ ಬಾಬಣ್ಣನಿಗೆ ತಿಳಿಯಲಿಲ್ಲ.‌ ಹೀಗಾಗಿ ಎಲ್ಲರೂ ಒಂದೇ ಕಡೆ ಕೂತು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು‌ ಜೊತೆಗೇ ಇದ್ದಾರೆ. ಮಾತು ಮಾತಿಗೂ ಊರಿನ ಗಂಡಸರು ಇವರನ್ನು ಚೇಡಿಸುತ್ತಿದ್ದರು. ದೇಹ ಮತ್ತು ಮಾನಸಿಕ‌ ಆಸೆಗಳನ್ನು ಈಡೇರಿಸಿಕೊಳ್ಳಲಾಗದೆ ಕಷ್ಟ ಬೀಳುವುದಕ್ಕಿಂತ ನಮ್ಮ ಜೊತೆ ಬರ ಬಾರದೇ ಎಂಬ ಗಂಡಸರ ನೇರಕ್ಕೆ ಕತ್ತಿ ಎತ್ತುತ್ತಿದ್ದರು. ಇಂಥಾ ಹಲವಾರು ಘಟನೆಗಳು‌ ಕೊಡ್ಡೆಗಾಲಿನಲ್ಲಿ ಘಟಿಸಿದೆ. ಇಷ್ಟು ಹೇಳಿದ ಬಾಬಣ್ಣ ಜೋರಾಗಿ ನಗಲು ಶುರುವಿಟ್ಟುಕೊಂಡರು. 

ನಿಜ. ಅದೊಂದು ವಿಕೃತ ಮನಸ್ಥಿತಿ. ಗಂಡಸರು ಯಾವಾಗ ಸರಿ ಹೋಗ್ತಾರೆ ಎಂದು ಕೇಳಿದ್ದೇ ತಡ ನಗು ನಿಲ್ಲಿಸಿ ಬಿಟ್ಟರು. ಹರಿದ ಶರ್ಟಿನ ಮುಂಬದಿ ಪಾಕೆಟಿನಲ್ಲಿದ್ದ ಬೀಡಿ‌ ಕಟ್ಟಿನಿಂದ ಬಾಬಣ್ಣ ಒಂದನ್ನು‌ ತುಟಿಗಿಟ್ಟು ಹಚ್ಚಿದರು. ಮಾತು ಮುಂದುವರೆಯಿತು.

ಅಪರೂಪರಕ್ಕೆ ಬಾಬಣ್ಣ ತರುವ ಅಂಚೆ ಪತ್ರಗಳಿಗೆ ಈ ಗಲ್ಲಿ ಕಾದು ಕುಳಿತಿರುತ್ತದೆ.‌ ಗಲ್ಲಿಯ ಉದ್ದಗಲಕ್ಕೂ ಮೊಳಕೆ ಬಂದಿರುವ ಹುಲ್ಲುಕಡ್ಡಿಗಳಿಗೂ ಈ ಹೆಂಗಸರು ಆ ಪತ್ರ ಓದುವುದು ಕೇಳುವ ಕುತೂಹಲ. ಅದು ಕೇವಲ ಕಾಗದದ ಪತ್ರಗಳಲ್ಲ. ರಾತ್ರಿ ಹೊತ್ತು ಹೆಣ್ಣು ಗಂಡಿನ ನಡುವೆ ನಡೆಯುವ ಸಲ್ಲಾಪಗಳಿವೆಯಲ್ಲಾ ಅಂಥದ್ದೊಂದು ರೋಚಕ‌ ಕಹಾನಿಗಳವುಗಳು. ಅದನ್ನು ಹೊತ್ತು ತರುವ ಬಾಬಣ್ಣ ದೇವರಂತೆ ಅವರಿಗೆ. ಅದೇ ಈ ಬಾನಣ್ಣನ ಬಂಡವಾಳ.‌ ಸೇನೆಯಿಂದ ಬರುವ ಪೋಸ್ಟ್ ಕಾರ್ಡ್ ಗಳು ಬಾಬಣ್ಣನಿಗೆ ಗಲ್ಲಿಯ ರಹದಾರಿಗಿರುವ ಪರವಾನಿಗೆ. ಇದೇ ಕಾರಣಕ್ಕೆ ಇದು‌ ಕೊಡ್ಡೆಗಾಲದ ಮಿಲಿಟರಿ ಗಲ್ಲಿ. 

ಬಾಬಣ್ಣ ಬಹು ಪೋಲಿ ಮನುಷ್ಯ. ಎಲ್ಲದರಲ್ಲೂ ರಸಿಕತನ ಹುಡುಕುತ್ತಾರೆ. ಹೆಂಗಸರೆಂದರೆ ತುಸು ಹೆಚ್ಚೇ ರಸಿಕತನ. ಬಾಬಣ್ಣನ ಬದುಕೇ ಹಾಗೆ ಎಲ್ಲೂ ನಿಲ್ಲದೆ ಹರಿಯುವ ನದಿಯ‌ ನೀರು.‌ ಹರಿಯುತ್ತಲೇ ಇದೆ. ಈಗ ಬಾಬಣ್ಣನಿಗೆ  55 ವರ್ಷ ಆಸುಪಾಸು. ಇಷ್ಟೆಲ್ಲಾ ಮಾತು ನನ್ನ ಕಿವಿಗೆ ಕೊಡುವ ಹೊತ್ತಿಗೆ ಕತ್ತಲು ಕವಿದಿತ್ತು.‌ ಅಷ್ಟೊತ್ತಿಗೆ ತನ್ನ ಎಕ್ಸ್‌ಎಲ್ ನ ಮುಂಭಾಗದಲ್ಲಿ ನೇತು ಹಾಕಿದ್ದ ಚೀಲದಿಂದ ಒಂದು ಬಾಟಲಿ ತಂದು ಸಂಧ್ಯಾರ್ಚನೆ ಶುರುವಿಟ್ಟುಕೊಂಡರು. ಮಾತು ಮತ್ತೆ ಸಾಗಿತು.

ಕುಡಿದ ಅಮಲಿನಲ್ಲಿ ಬಾಬಣ್ಣನ ಮತ್ತೊಂದು ಮನುಷ್ಯನಾಗಿ ಬದಲಾದರು. ಭಯವಾಗಿದ್ದು ನಿಜ ನನಗೆ. ಅದೇನೇನೋ ಮಾತನಾಡಿದ ಬಾಬಣ್ಣ ಕೊನೆಗೆ ಹೆಂಡತಿ ಮಂಜುಳ ವಿಷಯಕ್ಕೆ ಬಂದರು. ಅವಳು… ಅವಳು… ಎನ್ನುತ್ತಾ ಅವುಡುಗಚ್ಚಿ ಅಳಲು ಶುರುವಿಟ್ಟುಕೊಂಡರು. ಅತ್ತು.. ಅತ್ತು.. ಅಲ್ಲೆ ಕುಸಿದರು.‌

ನಾನು ಬಾಬಣ್ಣ.. ಬಾಬಣ್ಣ ಅಂತ ಒಂದೆರಡು ಬಾರಿ ಕರೆದೆ. ಅಷ್ಟೊತ್ತಿಗೆ ನನ್ನ ಗೆಳತಿ ಆ ಅಂಗಡಿಯ ತುಳ್ಸಮ್ಮನ ಕರಕೊಂಡು ನಾವಿದ್ದ ಕತ್ತಲಿಗೆ ಬಂದಳು. ‘ಬಿಡು.. ಸ್ವಲ್ಪ‌ಹೊತ್ತಿನ ಬಳಿಕ‌ ಬಾಬಣ್ಣ ಎದ್ದು ಹೋಗ್ತಾರೆ’ ಎಂದರು ತುಳ್ಸಮ್ಮ.‌ ಒಲ್ಲದ ಮನಸ್ಸಿನಿಂದ ಬಾಬಣ್ಣನ ಅಲ್ಲೇ ಬಿಟ್ಟು ನಾನು ಗೆಳತಿ ಮೊಬೈಕು ಎತ್ತಿ ವಾಪಾಸು ಬೆಂಗಳೂರಿಗೆ ಬಂದೆವು.‌ ಕೆಲ ದಿನಗಳು ಬಾಬಣ್ಣ ನನ್ನಲ್ಲಿ‌ ಜೀವಂತವಿದ್ದರು. ಆ ಬಳಿಕ‌ ಬದುಕಿನ ಒತ್ತಡ ಅವರನ್ನು ಮರೆಯುವಂತೆ ಮಾಡಿತು. 

‍ಲೇಖಕರು Admin

July 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: