ಜಾನಪದದಲ್ಲಿ ಮಳೆ ಮತ್ತು ಬರ :
ಒಂದು ನೋಟ..

ಪ್ರೊ ಎಸ್ ಪಿ ಪದ್ಮಪ್ರಸಾದ್

ಮಳೆ-ಕೃಷಿ-ಬರ ಇವು ಪರಸ್ಪರ ಸಂಬಂಧಿಗಳು. ಮಳೆ ಇದ್ದರೆ ಬೆಳೆ, ಅದಿಲ್ಲದಿದ್ದರೆ ಬರ. ಅತ್ಯಂತ ಕ್ರೂರವಾದ ಮಳೆ ಮತ್ತು ಬರಗಳೆರಡನ್ನೂ ಮಾನವಕುಲ ಅನುಭವಿಸಿದೆ. ಹಿತವಾದ ಮಳೆಕೊಡುವ ಸುಖ ಅಮಿತವಾದದ್ದು. ಅದು ವಿಪರೀತವಾದಾಗ ಕೊಡುವ ದುಃಖವೂ ಘೂರವಾದದ್ದು. ಮಳೆಗೆ ಹೀಗೆ ಎರಡು ಮುಖಗಳಿದ್ದರೆ, ಬರಗಾಲಕ್ಕೆ ಇರುವುದು ಸಂಕಟಮಯವಾದ ಒಂದೇ ಮುಖ.

ಮಾನ್ಸೂನ್ ವಿಫಲವಾಯಿತೆಂದರೆ ಷೇರುಪೇಟೆಯೂ ಸೇರಿದಂತೆ ಇತರೆಲ್ಲಾ ವ್ಯವಹಾರಗಳೂ ಕುಸಿಯುತ್ತವೆ. ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಒಂದು ವರ್ಷ ಹದವಾದ ಮಳೆ ಬಿತ್ತೆಂದರೆ ಮೂರುವರ್ಷ ಜನ ನೆಮ್ಮದಿಯಿಂದ ಬದುಕುವಂತಾ ಭೂಗುಣವಿದೆ. ಆದ್ದರಿಂದ ಮಳೆ-ಕೃಷಿ-ಬರ ಇವುಗಳ ಜೊತೆಗೆ ಭೂಮಿ ಮತ್ತು ಆಕಾಶಗಳ ಸಂಬಂಧವೂ ಇದೆ. ಆದ್ದರಿಂದಲೇ ನಮ್ಮ ಹಿಂದಿನವರು ಪಂಚಭೂತಗಳಿಗೆ ನಮಿಸಿ ಆರಾಧಿಸಿದರು. ‘ ಕಾಲೇವರ್ಷತು ಪರ್ಜನ್ಯ! ಪೃಥಿವೀ ಸಸ್ಯಶಾಲಿನೀ..’ ಎಂದು ಹಾರೈಸಿದರು.

ಇದು ನಮ್ಮ ಕಾಲದಲ್ಲಿ ‘ ಸುಜಲಾಂ ಸುಫಲಾಂ ಮಲಯಜಾ ಶೀತಲಾಂ..’ ಎಂಬ ರೂಪು ಪಡೆಯಿತು. ಈ ಎಲ್ಲಾ ಅಂಶಗಳನ್ನು ಪ್ರೊ.ತೆಲಗಾವಿ ಅವರು ಕೂಲಂಕಷವಾಗಿ ಪರಿಭಾವಿಸಿದ್ದಾರೆ. ಇವುಗಳಲ್ಲಿ ಪ್ರತಿಯೊಂದು ಆಯಾಮವನ್ನೂ ಗಣನೆಗೆ ತೆಗೆದುಕೊಂಡು ಅದರ ಬಗ್ಗೆ ಸಿಗುವ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ವಿಶ್ಲೆಷಿಸಿದ್ದಾರೆ. ಅವರ ತಾಳ್ಮೆ ಮತ್ತು ಒಳನೋಟಗಳು ಪ್ರಶಂಸಾರ್ಹವಾದವು.

ಹದಿನೈದು ಅಧ್ಯಾಯಗಳ ಜೊತೆಗೆ ಒಂಬತ್ತು ಅನುಬಂಧಗಳನ್ನು ಹೊಂದಿರುವ ಈ ಕೃತಿ ಗ್ರಾಂಥಿಕ ಹಾಗೂ ಮೌಖಿಕ ಆಧಾರಗಳೆರಡನ್ನೂ ಸೊಗಸಾಗಿ ಬಳಸಿಕೊಂಡು ರಚಿತವಾಗಿದೆ ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಆಚಾರ್ಯ ಕೃತಿಯಾಗಿ ರೂಪುಗೊಂಡಿದೆ.

ಮಳೆ ಸಂಬಂಧಿ ಸಂಪ್ರದಾಯಗಳು, ಆಚರಣೆಗಳು, ಮಳೆಶಕುನಗಳು, ಪರ್ಜನ್ಯಸಂಬಂಧಿ ಶಿಷ್ಟವಿಧಿಗಳು, ಆ ಪರಿಕಲ್ಪನೆ ಬೆಳೆದುಬಂದ ಬಗೆ, ಮಳೆ ಕರೆಯುವ ಶಕ್ತಿ ಇದ್ದವರೆಂದು ಹೇಳಲಾಗುವ ಕೆಲವು ಪವಾಡಪುರುಷರು ಮಾಡಿದ ಪವಾಡಗಳ ದಾಖಲೆಗಳು, ಮಳೆಗಾಗಿ ನಡೆಸಿದ ಮೋಡಬಿತ್ತನೆಯಂಥಾ ವೈಜ್ಞಾನಿಕ ಕಾರ್ಯಕ್ರಮಗಳು ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯಿಕ ದಾಖಲೆಗಳನ್ನೂ ಜೋಡಿಸಿದ್ದಾರೆ.

ಪ್ರೊ.ತೆಲಗಾವಿಯವರು ಜೀವಮಾನ ಪೂರ್ತಿ ತಲಸ್ಪರ್ಶಿ ಸಂಶೋಧನೆಯನ್ನೆ ನಡೆಸುತ್ತಾ ಬಂದಿದ್ದಾರೆ. ಅವರ ಬರಹಗಳಲ್ಲಾಗಲಿ ಜೀವನಶೈಲಿಯಲ್ಲಾಗಲಿ ಯಾವುದೇ ಅಬ್ಬರವಿಲ್ಲ. ತಮ್ಮ ತವರು ಜಿಲ್ಲೆಯಾದ ಚಿತ್ರದುರ್ಗದ ಇತಿಹಾಸ, ಅಲ್ಲಿನ ನಾಯಕ ಮನೆತನಗಳ ಬಗ್ಗೆ ಪ್ರಕಟಿಸಿರುವ ಶೋಧಗಳು ನಿರ್ಲಕ್ಷಿಸಲಾರದಂಥವು.

ಈ ಕೃತಿಯಲ್ಲಿಯೂ ಚಿತ್ರದುರ್ಗದ ಬರ ಕುರಿತಾದ ಒಂದು ಅಧ್ಯಾಯವೇ ಇದೆ. ಇತರ ಅಧ್ಯಾಯಗಳಲ್ಲೂ ಚಿತ್ರದುರ್ಗ ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆಗೆ ಸಂಬಂಧಿಸಿದಂತೆ ಮಾಡುವ ಆಚರಣೆಗಳ ವಿವರಗಳಿವೆ.

ಈ ಕೃತಿ ಅಂತರ್ ಶಿಸ್ತೀಯ ಅಧ್ಯಯನದ ಉತ್ತಮ ಫಲ. ಇಲ್ಲಿ ಸಾಹಿತ್ಯಿಕ, ಜಾನಪದೀಯ, ಆರ್ಥಿಕ ಹಾಗೂ ಸಾಮಾಜಿಕ ದೃಷ್ಟಿಕೋನಗಳಿಂದ ಮಳೆ ಮತ್ತು ಬರಗಾಲ ಕುರಿತ ವಿಸ್ತೃತ ಒಳನೋಟಗಳಿವೆ. ಎಲ್ಲಾ ದೃಷ್ಟಿಕೋನಗಳಿಂದಲೂ ಇದೊಂದು ಗಮನಾರ್ಹ ಕೃತಿ.

‍ಲೇಖಕರು Admin

March 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: