ಜಯಶ್ರೀ ಭಂಡಾರಿ
ದುಂಡಾದ ಮಲ್ಲಿಗೆಯ ಮುಖವು ಸೆಳೆಯುತ ಅರಳಿದೆ ತನಿಷ್ಕಾ.
ಬೆಂಡಾಗಿ ಮೆಲ್ಲನೆ ಬೆರಳು ಚೀಪುವ ಕಲೆಯು ವಿರಳಿದೆ ತನಿಷ್ಕಾ.
ಮುದ್ದು ಬಂಗಾರಾ ಆ ದೇವನು ಸಂಯಮದಿ ತಿದ್ದಿರುವನೇನೆ.
ಹೊದ್ದು ದುಪ್ಪಟಿಯ ಕದ್ದು ನೋಡುವ ಪರಿಗೆ ಹೊರಳಿದೆ ತನಿಷ್ಕಾ.
ಬೊಚ್ಚು ಬಾಯಿ ಅಗಲಿಸಿ ನಕ್ಕರೆ ಜಗವೆ ಅಕ್ಕರೆಯ ಸಕ್ಕರೆ.
ಬಿಚ್ಚು ಕಂಗಳ ಚಂದದ ಕುಡಿನೋಟ ಬೀರುತ ಮರಳಿದೆ ತನಿಷ್ಕಾ

ಕಾಮನ ಬಿಲ್ಲು ಹೋಲುವ ಹುಬ್ಬುಗಳಿಗೆ ಸೋತು ಹೋದೆನಲ್ಲಾ
ಸುಮನ ಸುಂದರಾಂಗಿಯ ಸಲುಹುವ ಖುಷಿಯು ಸರಳಿದೆ ತನಿಷ್ಕಾ
ತೊಂಡೆ ಹಣ್ಣಿನ ಕೆಂಪು ತುಟಿಗಳ ಬಣ್ಣಿಸಲು ಪದಗಳಿಲ್ಲ ನೋಡು
ಚಂಡೆ ಹಿಡಿದು ಅತ್ತರೆ ಎತ್ತಿಕೊಂಡು ಓಡಾಡುತ ನರಳಿದೆ ತನಿಷ್ಕಾ.
ಮೃದುವಾದ ಪಾದಗಳಿಗೆ ಮುತ್ತಿಟ್ಟು ಮರುಳಾಗಿ ಮೈಮರೆತೆನು
ಹದವಾದ ಹಾಲ ಬೆಳದಿಂಗಳ ಹಣೆ ಕಂಡು ಸಗ್ಗವಾಗಿ ತೆರಳಿದೆ ತನಿಷ್ಕಾ.
ಬಾಳ ಬಾನಿನ ಬಾಲ ಚಂದಿರನ ತೂಗುತ ಜಯ ಲಾಲಿ ಹಾಡುತಿಹಳು
ನೀಳ ಕೇಶರಾಶಿಯ ತಲೆಯ ಟೊಪ್ಪಿಗೆಯಿಂದ ಮುಚ್ಚಿ ಸುರಳಿದೆ ತನಿಷ್ಕಾ






0 Comments