‘ಅರಣ್ಯ ಕಾಂಡ’ ಒಂದು ಅಸಾಧಾರಣ ಪ್ರೇಮ ಕಥೆಯೂ…

ಪ್ರಸನ್ನ

ನೋಯುತ್ತಿರುವ ಹಲ್ಲಿನತ್ತ ಮತ್ತೆ ಮತ್ತೆ ಹೊರಳುವ ನಾಲಗೆಯಂತೆ! ರಾಮಾಯಣವನ್ನು ಆಧರಿಸಿದ ತ್ರಿವಳಿ ನಾಟಕಗಳನ್ನು ರಂಗದ ಮೇಲೆ ತರುವ ನಿರ್ಧಾರ ಮಾಡಿದೆ ನವೋದಯ ರಂಗ ತಂಡ. ಅಯೋಧ್ಯಾಕಾಂಡವೆಂಬ ಹೆಸರಿನ ಮೊದಲ ನಾಟಕವು ಈಗಾಗಲೇ ನಿಮ್ಮ ಮುಂದಿದೆ. ಅರಣ್ಯಕಾಂಡವೆಂಬ ಎರಡನೆಯ ನಾಟಕವು ಈಗ ಪ್ರಸ್ತುತವಾಗಲಿದೆ. ಇಷ್ಟೆಲ್ಲ ರಾಮಾಯಣವೇಕೆ ಎಂದು ನೀವು ಕೇಳಬಹುದು.
ಸಭ್ಯತೆಗೆ ಸಂಕಟ ತಗುಲಿದೆ. ಮನುಕುಲವೇ ನಾಶವಾಗುವ ಎಲ್ಲ ಸಾಧ್ಯತೆಗಳಿವೆ. ಹಾಗೆಂದು ವಿಜ್ಞಾನವೇ ಸಾರತೊಡಗಿದೆ. ದುರಾಸೆಗೆ ಬಿದ್ದಿರುವ ನಾವು, ಇತ್ತ ಮಹಾನ್ ಸತ್ಯಗಳ ಅರ್ಥವನ್ನು ಒಂದೊಂದಾಗಿಯೇ ಪಲ್ಲಟಿಸಿ ಅದನ್ನು ಅದರ ತಲೆಯ ಮೇಲೆ ನಿಲ್ಲಿಸತೊಡಗಿದ್ದೇವೆ. ಮಹಾಕಾವ್ಯಗಳು ಧರ್ಮಗ್ರಂಥಗಳು ಧಾರ್ಮಿಕ ನಂಬಿಕೆಗಳು ಎಲ್ಲವೂ, ಯಾವಾವುದು ಸಭ್ಯತೆಯನ್ನು ರೂಪಿಸಿದವೋ ಅವೆಲ್ಲವೂ, ಅವುಗಳ ಮೂಲ ಆಶಯಕ್ಕೆ ತದ್ವಿರುದ್ದವಾದ ರೀತಿಯಲ್ಲಿ ಬಳಕೆಯಾಗತೊಡಗಿದೆ. ರಾಮಾಯಣವೂ ಈ ಮಾತಿಗೆ ಅಪವಾದವಾಗಿ ಉಳಿದಿಲ್ಲ.

ಸಾಂಸ್ಕೃತಿಕ ರಂಗವೆಂಬುದು ಸತ್ಯ ಅಸತ್ಯಗಳ ಮುಖಾಮುಖಿಗೆ ರಣರಂಗವಾಗಬೇಕಿತ್ತು. ಬದಲಿಗೆ ಅದು, ಸತ್ಯ ಅಸತ್ಯಗಳ ಮುಖಾಮುಖಿಯ ಅಣಕು ರಂಗವಾಗಿದೆ ಇಂದು. ಹಲವು ಸಮಾಜ ವಿಜ್ಞಾನಿಗಳು ಇಂದಿನ ಯುಗವನ್ನು ಸತ್ಯವು ಸಾವನ್ನಪ್ಪಿದ ಯುಗ, ಯಾನೆ ಪೋಸ್ಟ್ಟ್ರುತ್‌ ಯುಗ ಎಂದು ಕರೆಯತೊಡಗಿದ್ದಾರೆ. ವಿಶ್ವದಾದ್ಯಂತ ನಡೆದಿರುವ ಅಸತ್ಯ ಹರಡುವ ಈ ಕಾರ್ಯವು ನಮ್ಮ ದೇಶದಲ್ಲೂ ನಡೆದಿದೆ. ಹಾಗೂ, ರಾಮಾಯಣವೆಂಬ ಮಾಹಾ ಕಾವ್ಯವು ಈ ಕೆಲಸದಲ್ಲಿ ದುರ್ಬಳಕೆಯಾಗುತ್ತೆ. ಏನಿದು ದುರ್ಬಳಕೆ? ಭಾರತವು ಪ್ರಜಾಪ್ರಭುತ್ವವಾದಿ ದೇಶ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಕೇಂದ್ರ ಬಿಂದುವಾದ ಜಾತ್ಯಾತೀತತೆಯನ್ನೇ ನಾವು ಹಾಗೆ ಕೆಣಕಲಿಕ್ಕೆ ಧರ್ಮದ ದುರ್ಬಳಕೆ ಮಾಡುತ್ತಿದ್ದೇವೆ. ಕೆಣಕತೊಡಗಿದ್ದೇವೆ. ಜಾತ್ಯಾತೀತತೆ ಸಮಾನತೆ ಸಹಬಾಳ್ವೆ ಎಂಬಿತ್ಯಾದಿ ತತ್ವಗಳೆಲ್ಲವೂ ಓಲೈಕೆಯ ರಾಜಕಾರಣ ಮಾತ್ರವಾಗಿದೆ. ಹಾಗಾಗಿ ನಾವೂ ಸಹ, ನಮ್ಮ ನೆರೆಹೊರೆಯವರಂತೆ, ಧರ್ಮರಾಜಕಾರಣದತ್ತಾ ಹೊರಳೋಣ ಹಾಗೂ ಶ್ರೀರಾಮಚಂದ್ರನನ್ನು ಧರ್ಮರಾಜಕಾರಣದ ಲಾಂಛನವಾಗಿಸೋಣ ಎಂದು ಹೊರಟಿದ್ದೇವೆ ನಾವು ಹಾಗಿದ್ದರೆ, ಶ್ರೀರಾಮಚಂದ್ರನು ಧರ್ಮ ಲಾಂಛನನಾಗಲಿಕ್ಕೆ ಅನರ್ಹನೇ ಎಂದು ನೀವು ಕೇಳಬಹುದಾಗಿದೆ. ಕೇಳುತ್ತಿದ್ದೀರಿ, ಕೂಡ. ತಮಾಷೆಯ ಸಂಗತಿಯೆಂದರೆ, ಈ ಪ್ರಶ್ನೆಯೇ ಅಪ್ರಸ್ತುತವಾದದ್ದು.

ಏಕೆಂದರೆ ಈ ದೇಶದ ಜನತೆ ಭಾರತದ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದೇ ರಾಮರಾಜ್ಯದ ಪರಿಕಲ್ಪನೆ ಹೊತ್ತು. ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮವು ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ಅದು, ರಚನಾತ್ಮಕ ಚಳುವಳಿಯನ್ನು ಸಮ ಪ್ರಮಾಣದಲ್ಲಿ ಒಳಗೊಂಡ ಒಂದು ಸಾಮಾಜಿಕ ಸಾಂಸ್ಕೃತಿಕ ಹೋರಾಟ ಕೂಡ ಆಗಿತ್ತು ಸ್ವಾತಂತ್ರ್ಯಕ್ಕಾಗಿ ನಡೆದ ರಾ‌ಷ್ಟ್ರೀಯ ಚಳುವಳಿಯಲ್ಲಿ ಅಸ್ಪೃಷ್ಯತೆಯ ನಿವಾರಣೆಯ ಚಳುವಳಿ ಅಂತರ್ಗತವಾಗಿತ್ತು. ಲೈಂಗಿಕ ಸಮಾನತೆ ಮಾತೃಭಾಷಾ ಶಿಕ್ಷಣ, ಗ್ರಾಮೋದ್ಯೋಗ, ಸರಳತೆ ಸಜ್ಜನಿಕೆ, ಆಶ್ರಮವಾಸ ಇತ್ಯಾದಿ ಎಲ್ಲವೂ ಆ ಹೋರಾಟದಲ್ಲಿ ಅಂತರ್ಗತವಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ, ರಾ‌ಷ್ಟ್ರೀಯತೆಯೆಂದರೆ ಕೇವಲ ಹಿಂದೂಹಿತ ಮುಸಲ್ಮಾನಹಿತ ದಲಿತಹಿತ ದಾಕ್ಷಿಣಾತ್ಯರಹಿತ ಪಂಜಾಬಿಗಳಹಿತ ಅಥವಾ ಪೌರಾತ್ಯರ ಹಿತಗಳನ್ನು ಮಾತ್ರವೇ ಪರಿಗಣಿಸಿದರೆ ಸಾಲದು ಹಾಗೆ ಮಾಡಿದರೆ ದೇಶ ಚೂರು ಚೂರಾಗುತ್ತದೆ ಎಂಬ ತಿಳುವಳಿಕೆಯಿತ್ತು.

ಈಗಾಗಲೇ ನಲುಗಿ ಹೋಗಿರುವ ಬಡಜನತೆ ಹಾಗೆ ಮಾಡಿದರೆ ಮತ್ತಷ್ಟು ನಲುಗಿ ಹೋಗುತ್ತಾರೆ ಎಂಬ ಕರುಣೆ ಚಳುವಳಿಯ ಶಕ್ತಿಯಾಗಿತ್ತು.
ಆದರೆ, ಸ್ವಾತಂತ್ರ್ಯ ನೀಡಬೇಕಿದ್ದ ಬ್ರಿಟೀಷ್ ಆಡಳಿತಕ್ಕೆ ಸಹಜವಾಗಿಯೇ ಇದು ಬೇಕಿರಲಿಲ್ಲ. ಅದು, ತನ್ನ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ, ವಿವಿಧ ಹಿತಗಳ ನಡುವೆ ಘರ್ಷಣೆಗಳನ್ನು ಪ್ರೇರೇಪಿಸಿತು. ನಮ್ಮಲ್ಲಿ ಕೆಲವರು ಚಿತಾವಣೆಗೆ ಬಲಿಯಾದರು ಕೂಡ. ಬೆಂಕಿಗೆ ಬೀಳಲು ಹಾತೊರೆಯುವ ಹುಳುಗಳಂತಾಡಿದೆವು ನಾವು, ದೇಶ ಹೋಳಾಯಿತು. ಗಾಂಧೀಜಿಯವರ ಹತ್ಯೆಯಾಯಿತು. ಮುಸಲ್ಮಾನ ಹಿತವೆಂದು ಮಾತನಾಡಿದ ಜಿನ್ನಾ ಸಾಹೇಬರು ಭಾರತೀಯ ಮುಸಲ್ಮಾನರನ್ನು ಅಬ್ಬೇಪಾರಿಗಳನ್ನಾಗಿಸಿ ತಾವು ಓಡಿ ಹೋದರು. ಇತ್ತ ಹಿಂದುಹಿತದ ಮಾತನಾಡಿದವರು ಗಾಂಧೀಜಿಯವರ ಕೊಲೆಗೆ ಕಾರಣರಾದರು. ನಾವು ಜಗಳಕ್ಕೆ ಬಿದ್ದೆವು, ಪಾಕೀಸ್ಥಾನೀಯರು ಹಾಗೂ ಭಾರತೀಯರು ಈಗಲೂ ಜಗಳಕ್ಕೆ ಬೆಲೆ ತೆರುತ್ತಲೇ ಇದ್ದೇವೆ.

ಇತ್ತ, ಸ್ವಾತಂತ್ರ್ಯ ನಂತರದಲ್ಲಿ, ಆಡಳಿತದಲ್ಲಿ ಭ್ರಷ್ಟಾಚಾರ ಮನೆ ಮಾಡಿತು. ಓಲೈಕೆ ರಾಜಕಾರಣವು ರಾಜಕೀಯ ಅಸ್ತ್ರವಾಯಿತು. ಓಟಿನ ದುರಾಸೆಗಾಗಿ ಒಂದಲ್ಲ ಒಂದು ಧರ್ಮವನ್ನೋ ಪ್ರಾಂತ್ಯವನ್ನೋ ಓಲೈಸುವುದೇ ರಾಜ ಧರ್ಮವಾಯಿತು. ರಾಮನನ್ನು ಬಾಬರನ ಪ್ರತಿಸ್ಪರ್ಧಿಯಾಗಿ ನಿಲ್ಲಿಸಿ. ರಾಮರಾಜ್ಯವನು ಅಡಾನಿಗಳ ಆರ್ಥಿಕ ಕಾರ್ಯಕ್ರಮದ ಪರವಾಗಿ ನಿಲ್ಲಿಸಿದೆವು. ಸರಳತೆ ಸಭ್ಯತೆ ಆಶ್ರಮ ವ್ಯವಸ್ಥೆಗಳು ಮೂಲೆಗುಂಪಾದವು. ಗಂಗೆ ಕಾವೇರಿಯರು ಮಲಿನರಾದರು. ಹಿಮಾಲಯದಿಂದ ಹಿಡಿದು ಮಲೆನಾಡಿನವರೆಗೆ ಕಾಡುಬರಿದಾಯಿತು, ಹಿಮವು ಕರಗಿತು, ಭೂಮಿ ಬರಡಾಯಿತು. ವರುಣನು ಪ್ರಳಯರೂಪಿಯಾಗಿದ್ದಾನೆ ವಾಯುದೇವನು ಉಸಿರುಗಟ್ಟಿ ಸಾಯತೊಡಗಿದ್ದಾನೆ. ಸೂರ್ಯದೇವನು ಕೆರಳಿ ಕೆಂಡಾಮಂಡವಾಗಿದ್ದಾನೆ.

ಹಟ ಹಿಡಿದು ರಾಮರಾಜ್ಯವನ್ನು ಈ ದೇಶದ ಆರ್ಥಿಕ ಸಾಮಾಜಿಕ ಕಾರ್ಯಕ್ರಮವಾಗಿಸಲು ಹೆಣಗಿದ ಗಾಂಧೀಜಿ ಕೊಲೆಯಾದರು. ಅವರ ವಿಚಾರಗಳು ಮೂಲೆಗುಂಪಾದವು. ಅವರ ಹಣೆಗೆ ದೇಶವನ್ನೊಡೆದ ದೇಶದ್ರೋಹಿ, ಎಂಬ ಹಣೆಪಟ್ಟಿಯನ್ನು ಅಚಿಟಿಸಲಾಗಿದೆ. ನಾವು ರಂಗಕರ್ಮಿಗಳು ಸಣ್ಣವರು. ಆದರೇನು, ನಮಗೆ ರಾಮರಾಜ್ಯ ಬೇಕಿದೆ. ಅದರ ಮೂಲ ಅರ್ಥದಲ್ಲಿ ನಮಗದು ಬೇಕಿದೆ. ಹಾಗಾಗಿ ಈ ಪ್ರಯತ್ನ.

ನವೋದಯ ಕುರಿತು:
ನವೋದಯ ಎಂಬ ರಾಷ್ಟ್ರೀಯ ಮಟ್ಟದ ರೆಪರ್ಟರಿ ಸಂಸ್ಥೆ ಕಳೆದೊಂದು ವರ್ಷದಿಂದ, ವೃತ್ತಿಪರ ನಟರೊಂದಿಗೆ ಮೈಸೂರಿನಲ್ಲಿ ಕಾರ್ಯನಿರತವಾಗಿದೆ. ಎರಡು ನಾಟಕಗಳನ್ನು ಯಶಸ್ವಿಯಾಗಿ ಸಿದ್ಧಪಡಿಸಿ, ಈಗ ಅದನ್ನು ನಾಡಿನಾದ್ಯಂತ ಕೊಂಡೊಯ್ಯುವ ಕೆಲಸದಲ್ಲಿ ನಿರತವಾಗಿದೆ. ವಾಲ್ಮೀಕಿ ರಾಮಾಯಣ ಆಧಾರಿತ ಸರಣಿ ಸಂಗೀತ ನಾಟಕಗಳನ್ನು ಪ್ರಸ್ತುತಪಡಿಸುವತ್ತ ಸಿದ್ಧತೆ ನಡೆಸಿದೆ.

ಅರಣ್ಯ ಕಾಂಡ ಕುರಿತು:
ಸೀತಾರಾಮರು ತಮ್ಮ ವನವಾಸದ ಮೊದಲ ಹದಿಮೂರು ವರ್ಷ ಪ್ರೇಮಿಗಳಂತೆ ಕಳೆದರು, ದಂಪತಿಗಳಂತಲ್ಲ ಅರ್ಥಾತ್ ವನವಾಸದಲ್ಲಿ ಮಗು ಮಾಡುವುದು ಸಾಧುತಲ್ಲ ಎಂಬ ಅರಿವಿದ್ದ ಯುವಕರವರು. ಹಾಗಾಗಿ ಅರಣ್ಯಕಾಂಡವು ಒಂದು ಅಸಾಧಾರಣ ಪ್ರೇಮ ಕಥೆಯೂ ಹೌದು. ಎಲ್ಲ ನಾಟಕಗಳಲ್ಲಿ ನಾಟಕೀಯ ವೈರುಧ್ಯ ಅಗತ್ಯ. ಇಲ್ಲಿ ಪ್ರೇಮಕ್ಕೆ ಪ್ರತಿಯಾಗಿ ಮೋಹವನ್ನು ನಿಲ್ಲಿಸಲಾಗಿದೆ, ಸೀತೆಗೆ ಪ್ರತಿಯಾಗಿ ಶೂರ್ಪನಖಿಯನ್ನು ನಿಲ್ಲಿಸಲಾಗಿದೆ. ಶೂರ್ಪನಖಿ ಸುಂದರಿ. ಸೀತೆ ಗೋಧಿಬಣ್ಣದ ಸುಂದರಿಯಾದರೆ ಶೂರ್ಪನಖಿ ರಾಗಿಬಣ್ಣದ ಸುಂದರಿ. ರಾಮನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಅವಳದ್ದು ಮೋಹ. ಸೀತೆಯು ಕೊಡುವುದು ಪ್ರೀತಿಯಾದರೆ ಶೂರ್ಪನಖಿಯದು ಬೇಡುವ ಮೋಹ. ರಾಮ ಮರ್ಯಾದೆ ಕಾಪಿಟ್ಟುಕೊಂಡು ಬರುವ ಒಬ್ಬ ಸರಳ ಸಜ್ಜನ ಯುವಕ. ವಿಚಲಿತನಾಗದ ಧೀರ. ಅವನು ಆರ್ಯನೆನ್ನುವುದು ಅವನ ಹಿರಿಮೆಯಲ್ಲ, ಇವಳು ಅಸುರಳೆಂಬುದು ಇವಳ ಕೀಳರಿಮೆಯಲ್ಲ. ಬನ್ನಿ, ರಾಮಾಯಣವನ್ನು ಹೊಸರೀತಿಯಿಂದ ನೋಡಿ ಆನಂದಿಸೋಣ.

ಡಾ.ಶ್ರೀಪಾದ್ ಭಟ್ ಅವರ ಕುರಿತು:
ಡಾ.ಶ್ರೀಪಾದ ಭಟ್ ಉತ್ತರಕನ್ನಡಜಿಲ್ಲೆಯ ಧಾರೇಶ್ವರದವರು. ಇತ್ತೀಚೆಗೆ ಪ್ರೌಢಶಾಲಾ ಮುಖ್ಯಶಿಕ್ಷಕ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿ ಪೂರ್ಣಾವಧಿ ರಂಗಭೂಮಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ, ಶಿಕ್ಷಣ, ರಂಗಭೂಮಿ,ಜನಪದ ಅಧ್ಯಯನ, ಸಂಗೀತ, ಸಂಘಟನೆ – ಹೀಗೆ ಹಲವು ರಂಗಗಳ ಅರಿವು ಇವರಿಗಿದೆ. ಮಕ್ಕಳ ರಂಗಭೂಮಿಯಲ್ಲಿಯೂ ಅಪರೂಪದ ಪ್ರಯೋಗಮಾಡಿದ್ದಾರೆ. ಪ್ರಖರವಾದ ರಾಜಕೀಯ ಪ್ರಜ್ಞೆಯ ಕಲಾತ್ಮಕ ಬೀದಿನಾಟಕ ನಿರ್ದೇಶಿಸಿದ್ದಾರೆ. ನಾಡಿನ ಹಲವು ಸಾಮೂಹಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡೇ ಇವರು ಸುಮಾರು ೧೫೦ ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಶಿಕ್ಷಣ ಹಾಗೂ ರಂಗಭೂಮಿಯ ಹಲವು ಪ್ರಶಸ್ತಿಗಳಿಂದ ಇವರಿಗೆ ಸಂದಿವೆ. ಇವರ ರಂಗಬರಹಗಳ ಸಂಕಲನ ಬಹುಭೂಮಿಕೆ, ನಟನೆಯ ಕೈಪಿಡಿ, ಉತ್ತರಕನ್ನಡದ ಜನಪದ ರಂಗಭೂಮಿ, ಯಕ್ಷಗಾನ, ಸಾಹಿತ್ಯ ಮತ್ತು ನಾಟಕಪ್ರಜ್ಞೆ ಎಂಬ ಪುಸ್ತಕಗಳು ಪ್ರಕಟಗೊಂಡಿವೆ. ಇವರು ನಿರ್ದೇಶಿಸಿದ ನಾಟಕಗಳು ಕರ್ನಾಟಕದೆಲ್ಲೆಡೆ ಮಾತ್ರವಲ್ಲ ಮುಂಬೈ, ಹೈದರಾಬಾದ್, ದೆಹಲಿಗಳಲ್ಲಿಯೂ ಪ್ರದರ್ಶನ ಕಂಡಿವೆ. ಕರ್ನಾಟಕದ ಬಹುತೇಕ ಕಡೆ ಶಿಕ್ಷಕರಿಗಾಗಿ ವಿದ್ಯಾರ್ಥಿಗಳಿಗಾಗಿ, ಕಾರ್ಮಿಕರಿಗಾಗಿ, ಕೃಷಿಕರಿಗಾಗಿ ನೂರಾರು ರಂಗಕಾರ್ಯಾಗಾರಗಳನ್ನು ನಡೆಸಿದ್ದಾರೆ. ಗಾಂಧಿ ೧೫೦ ರ ಸಂದರ್ಭದಲ್ಲಿ ಇವರು ನಿರ್ದೇಶಿಸಿದ ಪಾವು-ಬಾಪು ನಾಟಕವು ೨೦೦೦ ಪುಯೋಗ ಕಂಡಿದೆ. ಶೇಷಗಿರಿ ಎಂಬ ಹಳ್ಳಿಯಲ್ಲಿ ಕೃಷಿ, ಕೂಲಿಕಾರ್ಮಿಕರ ಜತೆ ಸೇರಿ ಇವರು ನಿರ್ಮಿಸಿದ ರಂಗಸಾಹಸಗಳು ಪರಿಧಿಯನ್ನು ಕೇಂದ್ರವಾಗಿಸಿದ ಹೊಸಯಾನಕ್ಕೆ ಸಾಕ್ಷಿಯಾಗಿದೆ.

ಆನುಷ್ ಕುರಿತು:
ಅನುಷ್ ಓರ್ವ ಸಂಗೀತಗಾರ ಮತ್ತು ಬರಹಗಾರರಾಗಿದ್ದು, ಮೈಸೂರಿನಲ್ಲಿ ನೆಲೆಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ ಪದವಿ ಪಡೆದಿರುವ ಇವರು, ಪತ್ರಿಕೆ ಮತ್ತು ಟಿ.ವಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದಾರೆ. ಬಾಲ್ಯದಿಂದಲೇ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ಅದರೊಡನೆ ತಮ್ಮ ಗಾಯನವನ್ನೂ ಹೊಂದಿಸಬಲ್ಲವರಾಗಿದ್ದಾರೆ. ಈವರೆಗೂ ಸಾವಿರಕ್ಕೂ ಹೆಚ್ಚು ಶಾಸ್ತ್ರೀಯ ಮತ್ತು ಭಾವಗೀತೆ ಕಾರ್ಯಕ್ರಮಗಳಿಗೆ ವಾದ್ಯ ಸಾಂಗತ್ಯ ನೀಡಿರುವ ಇವರು, ತಮ್ಮ ತಮ್ಮ ‘ನಾವು’ ಮತ್ತು ‘ರಿದಂ ಅಡ್ಡ’ ಬ್ಯಾಂಡ್ ಗಳ ಮೂಲಕ ಸಂಗೀತದ ವಿವಿಧ ಸಾಧ್ಯತೆಗಳನ್ನು ಪ್ರಯೋಗಿಸುತ್ತಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ರಂಗ ಸಂಗೀತವನ್ನು ಮಾಡುತ್ತಿರುವ ಅನುಷ್  ‘ಅರಣ್ಯಕಾಂಡ’ ನಾಟಕದ ನಾಟಕದ ಸಂಗೀತ ನಿರ್ದೇಶನ ಮಾಡಿದ್ದಾರೆ.

ಮಧುಸೂದನ್ ನೀನಾಸಮ್:
ಮೈಸೂರಿನವರಾದ ಇವರು ರಂಗಾಯಣ ಭಾರತೀಯ ರಂಗಶಿಕ್ಷಣ ಕೇಂದ್ರದಲ್ಲಿ ಸರ್ಟಿಪಿಕೆಸ್ಕೋ ರ್ಸ್ ಮತ್ತು ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಪದವಿಯನ್ನು ಪಡೆದಿರುವ ಇವರು ೧೦ ವರ್ಷಗಳ ನೀನಾಸಮ್ ತಿರುಗಾಟದದಲ್ಲಿ ವ್ಯಾವಸ್ಥಪಾಕನಾಗಿ ಹಾಗೂ ಬೆಳಕಿನ ವಿನ್ಯಾಸಕನಾಗಿ” ಕಾರ್ಯನಿರ್ವಹಣೆ, ರಂಗಶಂಕರದಲ್ಲಿ ತಾಂತ್ರಿಕ ವರ್ಗದಲ್ಲಿ ಕಾರ್ಯನಿರ್ವಹಣೆ, ಕರ್ನಾಟಕದ ಹಲವು ಕಡೆಗಳಲ್ಲಿ ಸುಮಾರು ೭ ನಾಟಕಗಳ ನಿರ್ದೇಶನ, ೧೫ ಬೇಸಿಗೆ ರಂಗತರಬೇತಿ ಶಿಬಿರಗಳ ನಿರ್ದೇಶನ, ಸುಮಾರು ೧೦೦ ಕ್ಕೂ ಹೆಚ್ಚು ನಾಟಕಗಳಿಗೆ ಬೆಳಕಿನ ವಿನ್ಯಾಸ ಅಲ್ಲದೆ ನೀನಾಸಮ್ ಪ್ರತಿಷ್ಠಾನ ಆಯೋಜಿಸಿದ ಕನ್ನಡ ಕಾವ್ಯ ಕನ್ನಡಿ ಕಿರುಚಿತ್ರ ಯೋಜನೆಯಲ್ಲಿ ಎರಡು ಕಿರುಚಿತ್ರಗಳಿಗೆ “ನಿರ್ಮಾಣ ನಿರ್ವಾಹಕನಾಗಿ ಕಾರ್ಯನಿರ್ವಹಣೆ, ೨೦೧೮ ರಲ್ಲಿ ಮೈಸೂರು ರಂಗಾಯಣದ ರಾಮಾಯಣ ದರ್ಶನಂ ಯೋಜನೆಯ ಸಂಚಾರ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಣೆ, ಮೈಸೂರಿನ ನಾಟ್ಯಾಲೇಖ ರಂಗಸಮೂಹದ ಸ್ಥಾಪಕ ಕಾಲ ಸದಸ್ಯ. ಪ್ರಸ್ತುತ ಪೂರ್ಣಾವಧಿ
ರಂಗಭೂಮಿಯ ಅಭ್ಯಾಸಿಯಾಗಿ, ಮೈಸೂರಿನ ಎಂ. ಎಂ. ಲೈಟ್ಸ್ ಅಂಡ್ ಸೌಂಡ್ ಸಂಸ್ಥೆಯಲ್ಲಿ ಒಬ್ಬರಾಗಿ ರಂಗಮಂದಿರಗಳ ವಿನ್ಯಾಸ ಮತ್ತು ರಂಗಮಂದಿರಗಳಿಗೆ ಧ್ವನಿ ಮತ್ತು ಬೆಳಕಿನ ಉಪಕರಣಗಳನ್ನು ಅಳವಡಿಸುವ ಕಾಯಕದಲ್ಲಿ ಸಕ್ರಿಯರಾಗಿದ್ದಾರೆ.

ರಂಜನ ಕೇರ:
ಮೈಸೂರಿನಲ್ಲಿ ಬೆಳೆದ ಮತ್ತು ಪಾಂಡಿಚೇರಿ ಮೂಲದ ರಂಜನಾ ಕಳೆದ ಆರು ವರ್ಷಗಳಿಂದ ಜವಳಿ ವಿನ್ಯಾಸಕಿಯಾಗಿ ಮತ್ತು ಹದಿನಾಲ್ಕು ವರ್ಷಗಳಿಂದ ರಂಗಭೂಮಿ ಕಲಾವಿದರಾಗಿದ್ದಾರೆ. ಸ್ಕಾಟ್ಲೆಂಡ್ನಿಂದ ನಿಟ್ವೇರ್ ವಿನ್ಯಾಸದಲ್ಲಿ ಎಂಎ ಪದವಿ ಪಡೆದ ನಂತರ, ಅವರು ಕೈಯಿಂದ
ನೂಲುವ, ಕೈಯಿಂದ ಹೆಣಿಗೆ, ನೇಯ್ಗೆ ಮತ್ತು ಕ್ರೋಚಿಟಿಂಗ್ ಮೂಲಕ ಬಟ್ಟೆಗಳನ್ನು ರಚಿಸುವ ಗ್ರಾಮೀಣ ಕುಶಲಕರ್ಮಿಗಳ ಸಮೂಹದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರು ಮಕ್ಕಳ ರಂಗಭೂಮಿಯಲ್ಲಿ ತಮ್ಮ ರಂಗಭೂಮಿಯ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ಮೈಸೂರಿನ ನಟನಾ ರಂಗಶಾಲೆಯೊಂದಿಗೆ ಸಕ್ರಿಯವಾಗಿ ಪ್ರದರ್ಶನ ನೀಡಿದ್ದಾರೆ. ಅವರು ವೇಷಭೂಷಣ ವಿನ್ಯಾಸಕರಾಗಿ ವಿವಿಧ ನಾಟಕ ಗುಂಪುಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಮೂರು ಪೆನ್ನಿ ಒಪೆರಾ, ಭಾಸಾ ಅವರ ಮೃಚ್ಛಕಟಿಕ, ಉಷಾಹರಣ ಮುಂತಾದ ನಾಟಕಗಳಲ್ಲಿ ಕೆಲಸ ಮಾಡಿದ್ದಾರೆ.

ಮಂಜು ಮಂಗಲ:
ಚಾಮರಾಜನಗರ ಜಿಲ್ಲೆಯ ಮಂಗಳ ಎಂಬ ಪುಟ್ಟ ಊರಿನವರಾದ ಮಂಜು ಕಳೆದ ಎಂಟು ವರ್ಷಗಳಿಂದ ರಂಗವಲ್ಲಿ ತಂಡದೊಂದಿಗೆ ಸಕ್ರಿಯವಾಗಿ ಒಡನಾಟ ಹೊಂದಿದ್ದಾರೆ. ಅವರು ಕೇವಲ ನಟನೆಯನ್ನು ಮಾತ್ರವಲ್ಲದೆ ರಂಗವಲ್ಲಿಯ ಹಲವಾರು ನಾಟಕಗಳ ತೆರೆಮರೆಯ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಮಿಥುನ್ ನಂ ೨, ಮಧ್ಯರಾತ್ರಿಯ ತಿಗಣೆಗಳು, ಪಾರ್ಶ್ವ ಸಂಗೀತ, ಬ್ಲೈಂಡ್ ಶಾಟ್ ಮುಂತಾದವುಗಳಲ್ಲಿ ನಟಿಸಿದ್ದಾರೆ. ತಮ್ಮ ಸಂಪನ್ಮೂಲಕ್ಕಾಗಿ ತಂಡದಲ್ಲಿ ಹೆಸರುವಾಸಿಯಾದ ಮಂಜು, ಮತ್ತು ಮೊದಲ ದಿನದಿಂದ ಈ ನಿರ್ಮಾಣದ ಬೆನ್ನೆಲುಬಾಗಿದ್ದಾರೆ.

ನವೋದಯ ಅರ್ಪಿಸುವ
ವಾಲ್ಮೀಕಿ ರಾಮಾಯಣ ಆಧಾರಿತ ಸರಣಿಯ ಎರಡನೇ ಭಾಗ &#೩೯; ಅರಣ್ಯ ಕಾಂಡ &#೩೯;
ದಿನಾಂಕ: ಫೆಬ್ರವರಿ ೧೮ ಮತ್ತು ೧೯ನೇ ಶನಿವಾರ ಮತ್ತು ಭಾನುವಾರ ಸಂಜೆ ೭ ಕ್ಕೆ
ಸ್ಥಳ: ಕಿರುರಂಗಮಂದಿರ, ಕಲಾಮಂದಿರದ ಆವರಣ, ಮೈಸೂರು

ರಂಗದ ಮೇಲೆ
ಸುಪ್ರೀತ್ ಎಸ್ ಭಾರದ್ವಾಜ್
ಅಕ್ಷತ ಕುಮಟಾ
ಯದುಶ್ರೇಷ್ಠ
ಅನುಷ್ ಶೆಟ್ಟಿ
ಮುನ್ನ
ಶಾಲೋಮ್ ಸನ್ನುತ
ಭ್ರಮರ ಕೆ ಉಡುಪ
ನೂರ್ ಅಹಮದ್ ಶೇಖ್
ಹರಿ ಸಿಂಗ್

ರಂಗದ ಹಿಂದೆ
ರಚನೆ
ಪ್ರಸನ್ನ

ವಿನ್ಯಾಸ ಮತ್ತು ನಿರ್ದೇಶನ
ಶ್ರೀಪಾದ್ ಭಟ್

ಸಂಗೀತ
ಅನುಷ್ ಶೆಟ್ಟಿ
ಸಂಗೀತ ಸಹಾಯ
ಮುನ್ನ

ವಸ್ತ್ರ ವಿನ್ಯಾಸ
ರಂಜನಾ ಕೇರ

ಬೆಳಕಿನ ವಿನ್ಯಾಸ
ಮಧುಸೂದನ್ ನೀನಾಸಮ್
ರಂಗ ನಿರ್ವಹಣೆ
ಮಂಜು ರಂಗವಲ್ಲಿ

ರಂಗ ನಿರ್ವಹಣೆ ಸಹಾಯ
ಸಂಜಯ್

‍ಲೇಖಕರು avadhi

February 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: