ಮಹೇಶ ಬಿ ಕವಲ್ದಾರ್ ಕಂಡಂತೆ ‘ಬುದ್ಧನ ಕಿವಿ’

ಚುಚ್ಚುತ್ತಾ ಮಿಂಚುವ ‘ಬುದ್ಧನ ಕಿವಿ’ಯೋಲೆಯ ಹರಳು

ಮಹೇಶ ಬಿ ಕವಲ್ದಾರ್

ಹನ್ನೊಂದು ಕತೆಗಳನ್ನು ಕಿವಿಗೆ ಸಿಕ್ಕಿಸಿಕೊಂಡಿದ್ದಾನೆ ಇಲ್ಲಿನ ಬುದ್ಧ. ಈತನ ಜೋಳಿಗೆಯಲ್ಲಿ ಯೋಚನೆಗೆ ಹಚ್ಚುವ ಕಟಿ ರೊಟ್ಟಿಗಳದ್ದೆ ರಾಶಿ. ಪ್ರತಿ ರೊಟ್ಟಿಯ ಹಂಚಿನ ‘ಪುಟಕ್’ ಶಬ್ದ ವಾಸ್ತವದ ಎಲುಬು ಮುರಿದಂತಿವೆ. ಅಲ್ಲಲ್ಲಂತೂ ಕತೆ ಮೊದಲಿಗೆ ಹೇಳಿದ್ದು ‘ಹುಮ್’ ಎನಿಸಿದ್ದರೆ, ಕೊನೆಗೆ ‘ಹೌದಲ್ವೆ’ ಎನ್ನಿಸಿಬಿಡುವಷ್ಟು ಗಟ್ಟಿ. ಶಾಯಿರಿಗಳು ಎದೆಯನ್ನು ಝಲ್ ಅನ್ನಿಸೋದು ಸಾಮಾನ್ಯ. ಆದರೆ, ಕತೆಗಳೂ ‘ಉಫ್’ ಎನ್ನಿಸಿಬಿಡಲ್ಲವು ಎನ್ನುವುದನ್ನು ಊಹಿಸಿರಲಿಲ್ಲ.

ಯಾವ ವಿಷಯವನ್ನೂ ವೈಭವೀಕರಿಸದೆ, ಹೇಳಬೇಕಿರುವ ವಿಷಯವನ್ನು ಅಚ್ಚುಕಟ್ಟಾಗಿ ದಾಟಿಸಿವೆ ಇಲ್ಲಿನ ಕತೆಗಳು. ಸಮಾಜದೊಳಗಿನ ಅನಿಷ್ಟ ಆಚರಣೆಗಳು ತಂದೊಡ್ಡಿರುವ ಅಪಾಯ, ಭೇದದೊಳಗಿನ ಭೇದ, ಮನುಷ್ಯನ ಬದಲಾಗುವ ಅನಿವಾರ್ಯತೆ, ನಾಳೆಯ ಭಾರ, ಚಿಂತೆ ಎಂಬ ಚಿತೆ, ಹೆಸರೇ ಮಾಡುವ ಕೊಲೆ, ಚೂಪು ಕತ್ತಿಯ ನೆಪ, ದೇವರು ಗೀರಿದ ಗಾಯ, ಚಹಾದಂಗಡಿಯ ಹೊಗೆ – ಹೀಗೆ ಪ್ರತಿ ಕತೆಯಲ್ಲೂ ನಾವೇ ಪಾತ್ರವಾಗಿ ‘ಪ್ಚ್’ ಎನ್ನುವ ಸನ್ನಿವೇಶಗಳು ನಮಗೆ ಎದುರಾಗಿಬಿಡುತ್ತವೆ.

ಬುದ್ಧನ ಕಿವಿ ಕತಾ ಸಂಕಲನದ ಮೊದಲ ಕತೆಯನ್ನು ಕೇವಲ ಎರಡೂವರೆ ಪುಟಗಳಲ್ಲಿ ಹೆಣೆಯಲಾಗಿದೆ. ಹೊಗಳಿಕೆ ಹೇಗೆಲ್ಲಾ ಕಲೆಯನ್ನು ಪ್ರಭಾವಿಸುತ್ತದೆ ಎನ್ನುವುದನ್ನ ಮೊದಲ ಕತೆಯಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ. ಹೊಗಳಿಕೆಯ ಮೇಲೆ ಚೂರು ನಿಗಾ ವಹಿಸಬೇಕು ಎನ್ನುವ ಕತೆ ಸದ್ದಿಲ್ಲದೆ ‘ಹೊಗಳಿಸಿ’ಕೊಳ್ಳುವುದಂತೂ ಖಚಿತ! ಪ್ರಭುತ್ವದ ವಿರುದ್ಧದ ದನಿಗಳಷ್ಟೇ ಸನ್ಮಾನ, ಮೃದುಧೋರಣೆ ಮತ್ತು ವಿಶ್ವಾಸದ ಬಣ್ಣಕ್ಕೆ ಬಲಿಯಾಗುತ್ತಿಲ್ಲ. ಜೊತೆಜೊತೆಗೆ ಸಂಬಂಧಗಳು ಇಂತಹದ್ದೇ ಮಸಲತ್ತಿಗೆ ಸಾವಿಗೀಡಾಗಿವೆ, ಆಗುತ್ತಲೇ ಇವೆ ಎನ್ನುವ ಸೂಕ್ಷ್ಮ ಆಲೋಚನೆಗೆ ಈ ಕತೆ ದಾರಿ ಮಾಡಿಕೊಟ್ಟಿದೆ.

‘ತ್ರೀ ಪಾಯಿಂಟ್ ಫೈವ್’ ಕತೆಯಲ್ಲಿ ಆಫೀಸಿನೊಳಗೆ ಹೆಣ್ಣೊಬ್ಬಳು ಹೆಣ್ಣಾಗಿ, ತಾಯಾಗಿ, ಕಪ್ಪು ಚರ್ಮದವಳಾಗಿ, ಮನೆಯೊಳಗೆ ಹೆಂಡತಿಯಾಗಿ, ಕೆಲಸದಾಕೆಯಾಗಿ, ಗಂಡನ ಪೌರುಷ ಸಾಬೀತು ಪಡಿಸುವ ಮೈದಾನವೇ ಆಗಿ, ಕಾಲೇಜೊಂದರಲ್ಲಿ ಗೈಡಿನ ಬೆರಳಿಗೆ ಕಾಮ ತೀಟೆ ತೀರಿಸುವ ಮೃದುಚರ್ಮವಾಗಿ, ರಾತ್ರಿ ವಿರಹಕ್ಕೆ ಸುರಿವ ಸೀಮೆಎಣ್ಣೆಯಾಗಿ ಸುನೀತಾ ಅನುಭವಿಸುವ ಸಂಕಟ ನಾಚಿಕೆ ತರಿಸುತ್ತದೆ. ಇಲ್ಲಿ, ಸುನೀತಾ ಬೇಸತ್ತು ಕಾಟಾಚಾರದ ಇಂಕ್ರಿಮೆಂಟ್ ಲೆಟರ್ ಅನ್ನು ಸಿಇಒ ಕೈಗಿಟ್ಟು ಬರುತ್ತಾಳೆ. ಹೆಣ್ಣಾಗಿ ಹುಟ್ಟಿರುವ ಕಾರಣಕ್ಕೆ ಆಕೆಯಿಂದ ಕಸಿದುಕೊಂಡಿರುವ ಎಲ್ಲವನ್ನೂ ಹೇಳುತ್ತಾಳೆ. ಅಸಲಿಗೆ ಆಗಬೇಕಿರುವುದು ಇದೇ.

ಈಗೆಲ್ಲಿದೇ ಜಾತಿ ಡಿಸ್ಕ್ರಿಮಿನೇಷನ್ ಎನ್ನುವ ಅನೇಕರು ನಮ್ಮ ನಡುವೆ ಇದ್ದಾರೆ. ಬಹಿರಂಗವಾಗಿ ಜಾತಿಯ ಕಾರಣಕ್ಕೆ ಮುಟ್ಟಿಸಿಕೊಳ್ಳದಿರುವುದಷ್ಟೇ ತಾರತಮ್ಯ ಎಂದುಕೊಂಡವರೂ ಅನೇಕರು. ಆದರೆ, ಡಿಸ್ಕ್ರಿಮಿನೇಷನ್‌ ವಿಧಾನಗಳು ಬೇರೆ ಬೇರೆ ತರಹದಲ್ಲಿವೆ. ಅದನ್ನು ‘ವಾಟ್ಸ್‌ ಇನ್ ಎ ನೇಮ್‌’ ಎನ್ನುವ ಕತೆಯೊಳಗೆ ಹಿಡಿದಿಡಲಾಗಿದೆ. ಜಾತಿ ಸೂಚಿಸುವ ಒಂದು ಹೆಸರು ಬರೀ ಹೆಸರಾಗಿರದೆ, ಕತ್ತಿಯಾಗಿ, ಕೆಂಡವಾಗಿ, ಕುಣಿಕೆಯಾಗಿ ತಳ ಸಮುದಾಯವನ ಇಕ್ಕಟ್ಟಿಗೆ ಕಾರಣವಾಗಿದೆ. ರೂಪಾಂತರಗೊಂಡ ತಾರತಮ್ಯವನ್ನ ಕತೆಗಾರ ದಯಾನಂದ ಇಲ್ಲಿ ಸೂಕ್ಷ್ಮವಾಗಿ ತೋರಿಸಿದ್ದಾರೆ. ಈ ಸೂಕ್ಷ್ಮತೆಯ ಕಾರಣಕ್ಕೆ ಕತೆಗಳು ವಾಸ್ತವಾಂಶವನ್ನ ಯಾವುದೇ ಅಳುಕಿಲ್ಲದೆ ಬಿಚ್ಚಿಟ್ಟಿವೆ.

ಪುಸ್ತಕದ ಶೀರ್ಷಿಕೆಯ ಕತೆಯಂತೂ ಫಿಲಾಸಫಿಕಲ್ ಡೈಮೆನ್ಷನ್ ತೋರಿಸುತ್ತಾ ಹೋಗುತ್ತದೆ. ಕತೆ ಆರಂಭದಲ್ಲೇ ಕೊನೆ ಏನಿರುತ್ತದೆ ಎನ್ನುವ ಹಿಂಟ್ ಕೊಟ್ಟಿದ್ದರೂ ಕಡೆಯ ಸಾಲುಗಳು ಮಾತ್ರ ಎಫ್ಫೆಕ್ಟಿವ್. ಆ ಕ್ಷಣದ ಸತ್ಯ, ಅದನ್ನ ಮಾತ್ರ ಖುಷಿಯಿಂದ ತಬ್ಬಿಕೊಂಡು ಬಿಟ್ರೆ ಅದೆಷ್ಟು ಸಲೀಸಾಗಿ ಬದುಕಬಹುದಲ್ಲವೇ. ಆದರೆ, ಮನುಷ್ಯ ಪ್ರಾಣಿ ಯಾವುದನ್ನೂ ಸಾಕು ಎನ್ನುವುದಿಲ್ಲ ಅದಕ್ಕೇ ಇಷ್ಟೊಂದು ರಗಳೆ-ರಾದ್ಧಾಂತಗಳೂ…

ಇಲ್ಲಿನ ಪ್ರೇಮಕತೆಯಂತೂ ಅಗ್ದಿ ಪಾಸಿಟಿವ್. ಎಲ್ಲ ಪ್ರೇಮ ಕತೆಗಳು ದುರಂತ ಕಾವ್ಯಗಳಾಗಬೇಕಿಲ್ಲ. ಪ್ರೇಮ ಎನ್ನುವ ಶಬ್ದ ಕಿವಿ ಮೇಲೆ ಬೀಳುತ್ತಿದ್ದಂತೆ ಮುಂದಿದೆ ಮಾರಿ ಹಬ್ಬ ಎನ್ನುವುದೊಂದು ತಪ್ಪದೆ ಬಂದೋಗುವ ಯೋಚನೆ. ಯಾಕೆಂದರೆ ನಮಗೆ ಇಷ್ಟ ಆಗುವ ಕತೆಗಳು ಅಂತವೇ ಅಲ್ಲವೆ: ಸೈರಾಟ್ ಸಿನಿಮಾದ ತರ ಕೊನೆ ಕ್ಷಣದವೆರೆಗೂ ಇಬ್ಬರು ಅನ್ಯೋನ್ಯವಾಗಿ ಪ್ರೀತಿಸಬೇಕು, ಆಮೇಲೆ ಕೈಕೈ ಹಿಡಿದೆ ರಕ್ತದ ಮಡುವಲ್ಲಿ ಬಿದ್ದಿರಬೇಕು. ನಮಗೆ ‘ಛೇ’ ಅನ್ನಿಸಿ ಸುಮ್ಮನಾಗಿಬಿಡಬೇಕು. ಆದರೆ, ‘ಜಗತ್ತಿನ ಕೊನೇ ದಿನಗಳ ಒಂದು ಬೆಳಗು’ ಎಂಬ ಈ ಕತೆಯಲ್ಲಿ ಪ್ರೇಮಕ್ಕೂ ವರ್ಣಿಸಲಾಗದ ಆಹ್ಹಾಕಾರ ಸವರಿದ್ದಾರೆ ಕತೆಗಾರ. I loved it! ಈ ಕತೆಯ ಪ್ರತಿ ಸಾಲನ್ನೂ ಅನುಭವಿಸಿದೆ, ಅನುಭಾವಿಸಿದೆ!

ಮನುಷ್ಯನ ಮನಸ್ಸಿಗೆ ಆದ ಗಾಯಕ್ಕಿಂತ ಈ ಚಿಂತೆ ಎಂಬ ಗಾಯ ಅದೆಷ್ಟು ಕೀವು ತುಂಬಿ ಸೋರಿ ಆಘಾತ ಮಾಡುತ್ತದೆ ಎನ್ನುವ ವಿಚಾರಗಳು ಸಹ ದಯಾನಂದರ ಕತೆಗಳಲ್ಲಿವೆ.

ಧರ್ಮದ ಹೆಸರಿನಲ್ಲಿ ದಿನ ಬೆಳಗಾದರೆ ಕೊಲೆಗಳು, ಸಂತ್ರಸ್ತರ ಮನೆಗೆ ಪರಿಹಾರದ ಪುಡಿಗಾಸಿನ ಎಡಗೈ ಬಲಗೈ ನಾಟಕ ನೋಡುತ್ತಲೇ ಇರುತ್ತೇವೆ. ಕತ್ತಿ ನೆಪ ಕೇಳುತ್ತದೆ: ಧರ್ಮದ್ದೋ, ದೇವರದ್ದೋ, ಜಾತಿಯದ್ದೋ, ಇಲ್ಲವೆ ಹಸುವಿನದ್ದೋ, ಬಣ್ಣದ್ದೋ. ಬಾಯಿ ತೆರೆದ ಕ್ರೂರ ಮನಸ್ಥಿತಿಗೆ ರಕ್ತ ಬೇಕಷ್ಟೇ. ಅವನಪ್ಪ-ಅವನವ್ವಳೆದೆಯಲ್ಲಿ ಕುದಿಯುವ ಶಬ್ದವೇ ಲಾಲಿ ಹಾಡಾಗಿರಬೇಕು ಅವರಿಗೆಲ್ಲ. ಅಂತಲ್ಲಿ ಪತ್ರಕರ್ತರ ಪಾಡೋ ಬರೀ ಮಶೀನು.

ಎಲ್ಲಾ ಜಾಗಗಳಲ್ಲೂ ಕಾಡುವವರ ಸಂಖ್ಯೆ ಹೆಚ್ಚೇ ಇದೆ. ಒಂದು ಕಾಲಕ್ಕೆ ಶಾಂತಿಯನ್ನೇ ಪಠಿಸಿ ಧರ್ಮವಾದ ಬೌದ್ಧ ದಮ್ಮದ ಹೆಸರಿನಲ್ಲಿಯೇ ರೋಹಿಂಗ್ಯಾಗಳ ಕೊಲೆಗಳಾಗುತ್ತಿವೆ. ಇನ್ನಿಲ್ಲಿ ಜಾತಿ ಕಾರಣಕ್ಕೆ ಇಲ್ಲವೇ ಧರ್ಮದ ಕಾರಣಕ್ಕೆ ದಿನ ಹುಟ್ಟಿ ಸಾಯುವವರ ಸಂಖ್ಯೆಗೆ ಕಡಿಮೆ ಇಲ್ಲ. ದೇವರ ಹೆಸರಿನ ಮೇಲೆ ನಡೆಯುವ ಅನಿಷ್ಟಗಳ ಸಂಖ್ಯೆಯೂ ಲೆಕ್ಕಕ್ಕೆ ಸಿಗದಷ್ಟಿವೆ. ಸಕಲ ವೈಭೋಗ ತೊರೆದೆನೆನ್ನುವ ಕಾವಿಧಾರಿಗಳೇ ಕಾಮಪೀಡಕರಾಗಿ ಸಮಾಜಕ್ಕೆ ಕಂಟಕವಾಗಿವುದು ದುರಂತ. ಇಂಥ ಅನೇಕ ಅಂಶಗಳನ್ನೂ ಕತೆಗಾರರು ಇಲ್ಲಿ ಬಹಳ ಎಚ್ಚರಿಕೆಯಿಂದಲೇ ಓದುಗರ ಮುಂದಿಟ್ಟಿದ್ದಾರೆ. ‘ಬುದ್ಧನ ಕಿವಿ’ಯೋಲೆಗೆ ಮೆತ್ತಿದ ಹರಳುಗಳನ್ನು ನೀವೂ ಮುಟ್ಟಿ, ಅವು ಆಗಾಗ ಚುಚ್ಚುತ್ತವೆ, ಅಲ್ಲಲ್ಲಿ ಮಿಂಚುತ್ತವೆ.

‍ಲೇಖಕರು avadhi

February 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: