ಜಯಲಕ್ಷ್ಮಿ ಪಾಟೀಲ್ ಅಂಕಣ – ನಾನ್ಯಾಕೆ ಅಳ್ತೀನಿ ಅಂತಲೇ ಗೊತ್ತಿರ್ಲಿಲ್ಲ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

45

ಅರೇ ನಾನೂ ಬಾಣಂತಿ ಸನ್ನಿ ಅನುಭವಿಸಿದ್ದೇನೆ ಎಂದು ನಿಮಗೆ ಹೇಳುವುದನ್ನೇ ಮರೆತೆ ನೋಡಿ! ಆದರೆ ಆಗದಕ್ಕೆ ಬಾಣಂತಿ ಸನ್ನಿ ಅನ್ನುತ್ತಾರೆ ಅನ್ನುವ ಕಲ್ಪನೆ ಲವಲವೇಶವೂ ಇರಲಿಲ್ಲ ನಮಗ್ಯಾರಿಗೂ. ಅದೇನಾಗುತ್ತಿತ್ತೋ ಕಾಣೆ, ಸಂಜೆ ಆಗುತ್ತಿದ್ದಂತೆಯೇ ಅಳು ಬರುತ್ತಿತ್ತು. ಮೊದಮೊದಲು ಮನೆಯವರೆಲ್ಲ ಗಾಬರಿ. ಯಾಕ? ಏನಾತು? ಏನರ ತ್ರಾಸಾಗಾಕತ್ತತೇನು? ಯಾರರ ಏನರ ಅಂದ್ರೇನು? ಹೀಗೆ ಎಲ್ಲ ರೀತಿಯಲ್ಲೂ ಪ್ರಶ್ನಿಸಿ ಸೋತುಹೋದರು. ನನ್ನನ್ನು ಆ ಹೊತ್ತಲ್ಲಿ ನಗಿಸುವ ಪ್ರಯತ್ನಗಳೂ ಯಶಸ್ವಿಯಾಗುತ್ತಿರಲಿಲ್ಲ. ಕೆಲವೊಮ್ಮೆ ಮನೆಯವರ ಮಾತಿಗೆ ನಗುತ್ತಲೇ ಅಳುತ್ತಿದ್ದೆ. ಆದರೆ ನನಗೋ ನಾನ್ಯಾಕೆ ಅಳ್ತೀನಿ ಅಂತಲೇ ಗೊತ್ತಿರ್ಲಿಲ್ಲ.

ಸಂಜೆ ಆಗುತ್ತಿದ್ದಂತೆಯೇ ದುಃಖ ಒತ್ತರಿಸಿ ಬರುತ್ತಿತ್ತು. ಗಂಟೆ ಎರಡು ಗಂಟೆಗಳ ಕಾಲ ಅಳುತ್ತಿದ್ದೆ. ಕೊನೆಕೊನೆಗೆ ಮಜಾಕಿನ ವಿಷಯ ಆಗಿಹೋಯಿತು. ಮಾವಂದಿರು, ಶಿವು ಕಾಕಾ ಎಲ್ಲಾ ಸಂಜೆ ಹೊತ್ತಿಗೇ ಮನೆಗೆ ಬಂದು, “ಹಾಂ, ಈಗ ಪಪ್ಪಿ ಅಳು ಟೈಮಾತು. ಎಲ್ಲಾರೂ ಸುಮ್ಮಿರ್ರಿ” ಅಂತಲೋ ಇಲ್ಲಾ, “ಹಾಂ ಪಾಪಿ ಎಲ್ಲಿ ಚಾಲು ಮಾಡು ಅಳೂದು ನೋಡೂನು” ಅಂತಲೋ ರೇಗಿಸಲು ಪ್ರಾರಂಭಿಸಿದರು. ಆಗ ನನಗೆ ಸಿಟ್ಟು ಬರುತ್ತಿತ್ತಾದರೂ ಬಹುಶಃ ಅದೇ ಸಿಟ್ಟಿನಲ್ಲಿ ಹುಟ್ಟಿಕೊಂಡ ನೋವಿನ ಪರಿಣಾಮವಾಗಿಯೋ ಏನೋ ಪುಣ್ಯಕ್ಕೆ ನಾನು ಲೋಣಿಗೆ ಬರುವಷ್ಟರಲ್ಲಿ ನಿತ್ಯ ಸಂಜೆ ಅಳುವ ಪ್ರೋಗ್ರಾಂ ನನಗೇ ಗೊತ್ತಿಲ್ಲದಂತೆ ನಿಂತುಹೋಗಿತ್ತು. ಈಗಲೂ ಆಗ ಯಾಕೆ ಹಾಗೆ ಅಳುತ್ತಿದ್ದೆ ಅನ್ನುವುದಕ್ಕೆ ಉತ್ತರ ಸಿಕ್ಕಿಲ್ಲ. ನನಗೀಗ ನಮ್ಮ ಕೆಲ ಅನಿರೀಕ್ಷಿತ ವರ್ತನೆಗೆ ನಮ್ಮ ಬದುಕಿನಲ್ಲಿ ಹಿಂದೆಂದೋ ನಡೆದ ಯಾವುದೋ ಒಂದು ಘಟನೆಯೋ, ಮನದ ಮೂಲೆಯಲ್ಲಿ ಅಡಗಿ ಕೂತ ಯಾವುದೋ ಭಾವವೋ ಕಾರಣವಾಗಿರುತ್ತೆ ಅನ್ನುವುದು ತಿಳಿದಿದೆ.

ಆ ಹಿನ್ನೆಲೆಯಲ್ಲಿ ನನ್ನ ಅಂಥ ವರ್ತನೆಗಳನ್ನು ಒರೆಗೆ ಹಚ್ಚಿಕೊಂಡು ನೋಡಿದ್ದೂ ಇದೆ. ಆದರೆ ನಾನು ಬಾಣಂತಿಯಾಗಿದ್ದಾಗಿನ ಆ ಸಂಜೆಯ ಅಳುವಿಗೆ ಮಾತ್ರ ಇನ್ನೂ ಉತ್ತರ ದೊರೆತಿಲ್ಲ… ಬಹುಶಃ ಹೆರಿಗೆ ಸಮಯದಲ್ಲಿ ಧಾರಾಕಾರ ರಕ್ತ ಹೋಗಿ, ಅದರ ಪರಿಣಾಮವಾಗಿ ರಕ್ತಹೀನತೆಯಿಂದ ಮನಸು ಅಶಕ್ತಗೊಂಡು ಹಾಗಾಗುತ್ತದೆಯೇ…? ಸಾಧ್ಯತೆ ಇದೆ. ನಾವು ಅಶಕ್ತರಾದಾಗ, ನಮಗೆ ಬೇಡವಾದುದು ಕಿವಿಗೆ ಬಿದ್ದೋ, ಮಾಡಲು ಹೇಳಿದರೆ ಅಥವಾ ನಮ್ಮ ಮಾತನ್ನು ಎದುರಿನವರು ಕೇಳದಿದ್ದರೆ ಸಿಡಿಮಿಡಿಗೊಂಡು, ರೇಗುವುದು, ಸಿಟ್ಟುಮಾಡಿಕೊಳ್ಳುವುದು ಸಹಜವಲ್ಲವೇ? ಅದಕ್ಕೆ ಬಾಣತಿಯೇ ಆಗಬೇಕಿಲ್ಲ. ಆದರೆ ಬಾಣಂತಿ ಸನ್ನಿಯಲ್ಲಿ ಒಬ್ಬೊಬ್ಬರು ಒಂದೊಂದು ಥರ ವರ್ತಿಸುತ್ತಾರೆ ಎಂದು ಕೇಳಿರುವೆ.

ಕೆಲ ಮಹಿಳೆಯರು ಸತ್ತೇಹೋಗಿರುವುದನ್ನೂ ಕೇಳಿರುವೆ. ಸನ್ನಿ ಶುರುವಾದಾಗ ಅದನ್ನು ಗುರುತಿಸಿ, ಸಾಂತ್ವನ ಹೇಳುತ್ತಾ ವೈದ್ಯರ ಬಳಿ ಕರೆದುಕೊಂಡು ಹೋಗದೇ, ಅದನ್ನ ದೆವ್ವ ಬಡಕೊಂಡಿದೆ ಎಂದೋ, ಯಾವುದೋ ದೇವರ ಕಾಟವೆಂದೋ ಮಂತ್ರ, ತಂತ್ರ ತಾಯಿತ ಎಂದು ಸಮಯ ಕಳೆಯುತ್ತಾರೆ. ಹಾಗೆ ಮಾಡುವುದರ ಹಿಂದೆಯೂ ಬಹಳಷ್ಟು ಬಾರಿ ಕಾಳಜಿಯೇ ಇರುತ್ತದೆ. ಆದರೆ ದಾರಿ ತಪ್ಪಾದ್ದರಿಂದ ಜೀವಕ್ಕೇ ಕುತ್ತು ಬರುವ ಸಂಭವ. ಮನೆಯ ಸದಸ್ಯರು ಆದಷ್ಟು ಬೇಗ ಅದನ್ನು ಗುರುತಿಸಿ ವೈದ್ಯರ ಬಳಿ ಕರೆದುಕೊಂಡುಹೋದರೆ ಉತ್ತಮ. ಮಾನಸಿಕತಜ್ಞರ ಬಳಿ ಹೋಗುವುದೆಂದರೆ ಈಗಲೂ ಬಹಳಷ್ಟು ಜನ ಹಿಂದೇಟು ಹಾಕುತ್ತಾರೆ. ಹುಚ್ಚಿಗೆ ಮಾತ್ರವಲ್ಲ, ನಮ್ಮ ಮನಸ್ಸಿನ ತುಮುಲಗಳಿಗೂ ಅವರಲ್ಲಿ ಪರಿಹಾರವಿರುತ್ತದೆ ಅನ್ನುವುದು ಹೆಚ್ಚು ಹೆಚ್ಚು ಪ್ರಚಾರವಾಗಬೇಕಾದ ಅಗತ್ಯವಿದೆ.

ಲೋಣಿಯಲ್ಲಿನ ನಮ್ಮ ಫ಼್ಲಾಟಿನ ಒಂದು ಪಕ್ಕದಲ್ಲಿ ಸಿಂಧಿ ವೈದ್ಯ ದಂಪತಿಗಳಿದ್ದರೆ ಇನ್ನೊಂದು ಪಕ್ಕದಲ್ಲಿ ನರ್ಸ್ ಒಬ್ಬರಿದ್ದರು ದುಶ್ಶಿಂಗ್ ಅಂತ. ಅವರ ಪಕ್ಕಾ ಫ಼್ಲಾಟಲ್ಲಿ ನರ್ಸಿಂಗ್ ಕಾಲೇಜಿನಲ್ಲಿ ಪಾಠ ಮಾಡುವ ಅಧ್ಯಾಪಕರಾದ ಶಿಂಗಾರೆ ಅವರ ಕುಟುಂಬ. ನಾವು ಮನೆಗೆ ಕಾಲಿಟ್ಟ ತಕ್ಷಣ ನಮ್ಮನೆ ನಾಸ್ಟಾ ಚಹಾ ಕಳಿಸಿದವರು ಅವರ ಪತ್ನಿ ನಳಿನಿ. ಜೊತೆಗೆ ಮಕ್ಕಳಿಗೆ ಹಾಲಿನ ಅಗತ್ಯವೇನಾದರೂ ಇದೆಯೇ ಎಂದು ವಿಚಾರಿಸಿದ ಅವರ ವಿಶಾಲ ಹೃದಯಕ್ಕೆ ಮಾರುಹೋದೆವು ನಾವೆಲ್ಲಾ. ಅಂದಿನಿಂದ ಆರಂಭವಾದ ನಮ್ಮ ಅವರ ಸ್ನೇಹ ಇಂದಿಗೂ ಅದೇ ಆತ್ಮೀಯತೆಯಿಂದ ಮುಂದುವರೆದಿದೆ. ಮೇಲಿನ ಫ಼್ಲೋರುಗಳಲ್ಲಿ ಆಂಧ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಹೀಗೆ ಬೇರೆ ಬೇರೆ ರಾಜ್ಯಗಳಿಂದ ಬಂದಂಥ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂಧಿ ಇದ್ದು, ಪ್ರವರಾ ಮೆಡಿಕಲ್ ಟ್ರಸ್ಟಿನ ಆ ಕ್ಯಾಂಪಸ್ ಇಡೀ ಭಾರತದ ಪ್ರತಿನಿಧಿತ್ವವನ್ನು ಹೊಂದಿದಂತಿತ್ತು. ನಾವದನ್ನು ‘ನಮ್ಮದು ಮಿನಿ ಭಾರತ’ ಅಂತನ್ನುತ್ತಾ ಹೆಮ್ಮೆ ಪಡುತ್ತಿದ್ದೆವು.

ಎರಡೂ ಕಾಲು ತಿಂಗಳ ಅವಳಿ ಮಕ್ಕಳು ಅಮೋಲ್, ಅದಿತಿ, ಗಂಡ, ಅತ್ತೆ ಮತ್ತು ನಾದಿನಿ ಮಲ್ಲಮ್ಮ ಹೀಗೆ ತುಂಬು ಕುಟುಂಬದೊಂದಿಗೆ ಮತ್ತೆ ಮಹಾರಾಷ್ಟ್ರದಲ್ಲಿ ಅಂದರೆ ಲೋಣಿಯಲ್ಲಿ ನಮ್ಮ ವಾಸ ಶುರುವಾಯಿತು. ಆರಂಭದ ದಿನಗಳಲ್ಲಿ ಮನೆಗೆಲಸಕ್ಕೆ ಸುಮನ್ ಅನ್ನುವ ಹೆಣ್ಣುಮಗಳೊಬ್ಬಳು ಬರುತ್ತಿದ್ದಳಾದ್ದರಿಂದ ಮನೆಹೊಂದಿಸಿಕೊಳ್ಳುವುದಕ್ಕೆ ತುಸು ಅನುಕೂಲವಾಯಿತು. ಆದರೆ ಬಂದ ಹದಿನೈದು ದಿನಕ್ಕೆಲ್ಲಾ ನಮ್ಮತ್ತೆ ಆಕೆಯ ಅಗತ್ಯವಿಲ್ಲವೆಂದು ಕೆಲಸದಿಂದ ಬಿಡಿಸಿದರು.

ಮೂರು ತಿಂಗಳ ಎರಡೆರೆಡು ಮಕ್ಕಳನ್ನು, ಮನೆಯ ಎಲ್ಲಾ ಕೆಲಸಗಳನ್ನು ಸಂಭಾಳಿಸುತ್ತಾ ಒಂದು ವರ್ಷವಿಡೀ ಹೋಮದ ಹವ್ವಿಸ್ಸಾಗಿಹೋದೆ ನಾನು. ನನಗೆ ಎಳೆಯ ಮಕ್ಕಳನ್ನು ಎರೆಯುವುದು ಗೊತ್ತಿರಲಿಲ್ಲವಾದ್ದರಿಂದ ನಮ್ಮತ್ತೆಯವರು ಮಕ್ಕಳಿಬ್ಬರಿಗೂ ಸ್ನಾನ ಮಾಡಿಸುತ್ತಿದ್ದರು. ಮಲ್ಲಮ್ಮ ಅವರಿಗೆ ನೆರವಾಗುತ್ತಿದ್ದಳು ಮತ್ತು ನಾನು ಮನೆಯ ಕೆಲಸಗಳನ್ನು ಮುಗಿಸುವವರೆಗೆ ಮಕ್ಕಳಿಬ್ಬರನ್ನೂ ಮಲ್ಲಮ್ಮನೇ ನೋಡಿಕೊಳ್ಳುತ್ತಿದ್ದಳು.

ಹಠಮಾರಿ ಮಕ್ಕಳಲ್ಲ ನನ್ನವು ಅನ್ನುವುದು ನನ್ನ ಅಂದಿನ ಮತ್ತು ಇಂದಿನ ಸಮಾಧಾನವೂ ಕೂಡ. ತಿಂಡಿ, ಅಡುಗೆ, ಮನೆ ಕೆಲಸಗಳ ನಡುವೆ, ಮಕ್ಕಳಿಬ್ಬರ ಹೊಟ್ಟೆ ತುಂಬಿಸುವ, ಬಟ್ಟೆ ಬದಲಿಸುವ ಕೆಲಸ, ಅತ್ತೆಯವರ ಸ್ನಾನ ಪೂಜೆ, ಮನೆಯವರೆಲ್ಲರ ತಿಂಡಿ ಊಟಗಳ ಉಪಚಾರ ಹೀಗೆ ಹಗಲು ಹೊತ್ತುಹೋಗುವುದೇ ಗೊತ್ತಾಗುತ್ತಿರಲಿಲ್ಲ.

ರಾತ್ರಿಯಿಡೀ ಉಚ್ಚೆ ಹೋಯ್ದೋ, ಹಸಿದೋ ಒಂದು ಮಗು ಎದ್ದರೆ, ಹಿಂದಿಂದೇ ಇನ್ನೊಂದೂ ಎದ್ದು ಕುಸುಕುಸು ಅನ್ನಲು ತೊಡಗುತ್ತಿತ್ತು. ಆಗ ಲಂಗೋಟಿ, ದುಬಟಿ ಬದಲಿಸಿ ಒಂದು ಮಗುವಿಗೆ ಹಾಲೂಡಿಸುತ್ತಿದ್ದರೆ ಇನ್ನೊಂದು ಮಗುವನ್ನು ಇವರು ಸಂಭಾಳಿಸುತ್ತಿದ್ದರು. ಇಬ್ಬರೂ ಮಕ್ಕಳನ್ನು ಮಲಗಿಸಿ, ನಾವು ಮಲಗಿ ಗಂಟೆ ಎರಡು ಗಂಟೆಯೂ ಕಳೆಯುತ್ತಿರಲಿಲ್ಲ ಮತ್ತೆ ಮಕ್ಕಳ ಅಳು ನಮ್ಮನ್ನೆಬ್ಬಿಸಿ ಕೂರಿಸುತ್ತಿತ್ತು. ಪಾಪ ಬೆಳಿಗ್ಗೆ ಎಂಟು ಗಂಟೆಗೆಲ್ಲಾ ಇವರು ತಮ್ಮ ಆಫೀಸಲ್ಲಿರಬೇಕಿತ್ತು. ನನಗೆ ದಿನವಿಡೀ ಮನೆ ಮಕ್ಕಳನ್ನು ಸಂಭಾಳಿಸುವ ಕೆಲಸ.

ರಾತ್ರಿ ನಿದ್ದೆಗೆಡುವುದು ನಮ್ಮಿಬ್ಬರಿಗೂ ಅನಿವಾರ್ಯವಾಗಿತ್ತು. ಬರಬರುತ್ತಾ ರಾತ್ರಿಯ ಹೊತ್ತು ಒಮ್ಮೆ ಒಂದು ಮಗುವಿಗೆ ನನ್ನ ಹಾಲು ಕೊಟ್ಟು ಇನ್ನೊಂದು ಮಗುವಿಗೆ ಬಾಟಲಿ ಹಾಲು ಕೊಡಲು ಆರಂಭಿಸಿದೆ. ಇಬ್ಬರ ಹಾಲಿನ ಬಾಟಲಿಗಳೂ ಪ್ರತ್ಯೇಕವಾಗಿದ್ದವಾದ್ದರಿಂದ ಇನ್ನೊಂದು ಸರತಿಯಲ್ಲಿ ಮೊದಲು ಬಾಟಲಿ ಹಾಲು ಕುಡಿದ ಮಗುವಿಗೆ ನನ್ನ ಹಾಲು ಕೊಡುತ್ತಿದ್ದೆ. ಹಾಗೆ ಮಾಡುವುದರ ಮೂಲಕ ಇವರ ನಿದ್ದೆಗೆ ಅನುಕೂಲ ಮಾಡಿಕೊಡುತ್ತಿದ್ದೆ. ನನಗೋ ಹಗಲೂ ನಿದ್ದೆ ಇಲ್ಲ, ರಾತ್ರಿಯೂ ನಿದ್ದೆ ಇಲ್ಲ ಅಂತಾಗಿ ಅಶಕ್ತತನದಿಂದ ಮುಂದೆ ಮಕ್ಕಳಿಗೆ ಎದೆಹಾಲು, ಬಾಟಲಿ ಎರಡನ್ನೂ ಒಟ್ಟೊಟ್ಟಿಗೆ ಸಂಭಾಳಿಸುವುದು ನನ್ನಿಂದ ಸಾಧ್ಯವಾಗದೆ, ಒಟ್ಟಿಗೇ ಎರಡೂ ಮಕ್ಕಳಿಗೆ ಎದೆ ಹಾಲೂಡಲು ಆರಂಭಿಸಿದೆ, ನಾಯಿ ಬೆಕ್ಕುಗಳು ಮಾಡುತ್ತವಲ್ಲ ಹಾಗೆ. ಎಡಗಡೆಯ ತೋಳಿನ ಮೇಲಿನ ಅಮೋಲ್ ಮಲಗಿರುತ್ತಿದ್ದ, ಬಲದ ತೋಳಿನ ಮೇಲೆ ಅದಿತಿ. ಸತತ ಆರು ವರ್ಷಗಳವರೆಗೆ ಅವರಿಬ್ಬರೂ ಅದದೇ ತೋಳುಗಳ ಮೇಲೆ ಮಲಗುತ್ತಿದ್ದರು. ಅವರಿಬ್ಬರೂ ನಮ್ಮಿಂದ ದೂರ ಮಲಗಲು ಆರಂಭಿಸಿದ ಮೇಲೆ, ಎಷ್ಟೋ ತಿಂಗಳು ಕಾಲ ನನ್ನ ಕೈಗಳು ತುಂಬಾ ನೋಯುತ್ತಿದ್ದವು.

ಮಾವನವರು ಹೋದ ಮೇಲೆ ನಮ್ಮಿಬ್ಬರಿಗೂ ಸದಾ ಬೆನ್ನೆಲುಬಾಗಿ ನಿಂತವರು ನನ್ನಪ್ಪ ಅವ್ವ. ನನ್ನ ದೊಡ್ಡ ನಾದಿನಿಯ ಪತಿ ಶ್ರೀ. ಸಾಹೇಬಗೌಡ ಬಿರಾದಾರ ಅವರನ್ನು ನಾನು ನನ್ನ ಪತಿ ನಮ್ಮನೆಯ ಹಿರಿಯ ಅಣ್ಣನಂತೆ ಭಾವಿಸುತ್ತಿದ್ದೆವಾದ್ದರಿಂದ ಏನೇ ಮಾಡುವುದಿದ್ದರೂ ಹೆಚ್ಚಾಗಿ ಅವರನ್ನೇ ಕೇಳುತ್ತಿದ್ದೆವು. ಅವರು ಹೇಳಿದಂತೆ ನಡೆದುಕೊಳ್ಳುತ್ತಿದ್ದೆವು. ಹತ್ತಾರು ಕಡೆ ವಿಚಾರಿಸಿ ಮಲ್ಲಮ್ಮನಿಗೆ ಗಂಡು ಹುಡುಕುತ್ತಿದ್ದವರು, ಹುಡುಕಿದವರೂ ಅವರೇ. ಹೀಗೆ ಮನೆಯ ಹಿರಿಯ ಅಳಿಯ ನಮ್ಮ ಬೆಂಬಲಕ್ಕೆ ನಿಂತರೆ ಎರಡನೇ ನಾದಿನಿಯ ಪತಿ ಶ್ರೀ. ರಾಮನಗೌಡ ಪಾಟೀಲ ಅವರು ಆರ್ಥಿಕ ಭದ್ರತೆಯ ಕಡೆಗೆ ಅಂದರೆ ಮಾವನವರು ಕಾಲವಾದ ನಂತರ ಬಂದಿದ್ದ ಅವರ ದುಡಿಮೆಯ ಹಣವನ್ನು ತಮ್ಮೂರಲ್ಲಿ ಹೂಡಿಕೆ ಮಾಡಿ ಮುಂದೆ ಮಲ್ಲಮ್ಮನ ಮದುವೆಯ ಹೊತ್ತಲ್ಲಿ ಅದರಿಂದ ನಮಗೆ ಅನುಕೂಲವಾಗುವಂತೆ ನೋಡಿಕೊಂಡರು. ಹೀಗೆ ಮನೆಯ ದೊಡ್ಡ ಅಳಿಯಂದಿರಿಬ್ಬರೂ ನಮ್ಮ ಕಷ್ಟ ಕಾಲದಲ್ಲಿ ಜೊತೆಗೆ ನಿಂತಿದ್ದನ್ನು ನಾವಿಬ್ಬರೂ ಯಾವತ್ತೂ ಮರೆಯುವುದಿಲ್ಲ.

‍ಲೇಖಕರು Admin

September 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: