ಲಾಸ್ ವೇಗಾಸ್ ನ‌ ಬಟ್ಟೆ ಕಳಚುವ ಹುಡುಗಿಯರೂ ಮತ್ತು ನಾನು…

ಗಿರಿಜಾ ಶಾಸ್ತ್ರೀ

“ಅಮ್ಮಾ ಅದು ಮರ್ಯಾದಸ್ತರು ಹೋಗುವ ಜಾಗ ಅಲ್ಲ , ಬೇಡ” ಗ್ರ್ಯಾಂಡ್ ಕ್ಯಾನನ್ ಮುಗಿಸಿ ಡೆಥ್ ವ್ಯಾಲಿಗೆ ಹೋಗುವ ದಾರಿಯಲ್ಲಿ ನೆವಾಡಾ ರಾಜ್ಯಕ್ಕೆ ಸೇರಿದ ‘ಲಾಸ್ ವೇಗಾಸ್’ ನಗರ-ಖಳರು ಖೂಳರೇ ಸೇರಿ ಕಟ್ಟಿದ ನಗರ. ಜೂಜಿಗೆ ಈ ನಗರದಲ್ಲಿ ಹಾಗೂ ನ್ಯೂಜರ್ಸಿಯ ಯಾವುದೋ ಒಂದು ನಗರದಲ್ಲಿ ಮಾತ್ರ ಕಾನೂನು ಪರವಾನಗಿ ಇದೆಯಂತೆ. ಕಪ್ಪು ಹಣದ ವಹಿವಾಟಿನ ನಗರ.

“ಅದರ ಒಂದು ಬೀದಿ ತೋರಿಸಿ ಬಿಡು ಸಾಕು ಹೇಗೂ ಅದರ ಮೇಲೆಯೇ ಹೋಗುತ್ತಿದ್ದೇವಲ್ಲ? ನಾವೇನು ಅಲ್ಲಿ ಕಸಿನೋ ಗೆ ಹೋಗಬೇಕಾ? ” ಮಗನಿಗೆ ದುಂಬಾಲು ಬಿದ್ದೆ. ಮುಂಬಯಿಯಲ್ಲಿ ಕಾಮಾಠಿಪುರ ನೋಡಬೇಕೆನ್ನುವ ನನ್ನ ಎಂದಿನ ಕುತೂಹಲ ಇನ್ನೂ ತೀರಿಲ್ಲ. ಅಲ್ಲಾದರೆ ಪೋಲಿಸ್ ಪರವಾನಗಿ ಎಂದೆಲ್ಲಾ ನೂರೆಂಟು ನಿಯಮಗಳಿವೆ. ಇಲ್ಲಾದರೆ ಅದು ಯಾವುದೂ ಇಲ್ಲ. ಒಮ್ಮೆಯಾದರೂ ನೋಡಬೇಕು ಎಂದೆ
“ನನ್ನ ಫ್ರೆಂಡ್ಸ್ ಗೆ ಏನಾದರೂ ಗೊತ್ತಾದರೆ ನಿಮ್ಮ ತಂದೆ ತಾಯಿಯನ್ನ ಅಂಥ ಜಾಗಕ್ಕೆ ಕರೆದುಕೊಂಡು ಹೋಗಿದ್ಯಾ? ಅಂತ ನನ್ನ ಉಗೀತಾರೆ ಅಷ್ಟೇ ” ಎಂದು ಹೇಳಿದರೂ, ಮಗ ಗಾಡಿಯನ್ನು ಹೆದ್ದಾರಿಯಿಂದ ಲಾಸ ವೇಗಾಸ್ ಗೆ ಹೋಗುವ ದಾರಿಗೆ ತಿರುಗಿಸಿದ.

ಪಲಾಝೋ ಕಸಿನೋ ರಿಸಾರ್ಟ್ ಎನ್ನವ ಹೊಟೆಲ್ಲಿನ ನೆಲಮಾಳಿಗೆಯಲ್ಲಿ ಕಾರನ್ನು ನಿಲ್ಲಿಸಿದೆವು. ಅದೊಂದು ದೇವಲೋಕದ ಅರಮನೆಯಂತಿತ್ತು.

‘ಲಾಸ್ವೇಗಾಸ್ ಸ್ಟ್ರಿಪ್ ಇನ್ ಪ್ಯಾರಡೈಸ್ ‘ ಎನ್ನುವುದು ಲಾಸ್ವೇಗಾಸ್ ನ ಹೃದಯಭಾಗದಲ್ಲಿರುವ ಒಂದು ರಸ್ತೆ. ಅರಮನೆಯಂತಹ ಹೊಟೇಲುಗಳು. ಅದರೊಳಗೆ ಜೂಜಿನ ಅಡ್ಡಾಗಳ‌ ಬಹು ಮಹಡಿಗಳು. ಜಿಗಿ ಜಿಗಿ ತೂಗು ದೀಪಗಳು. ಬೆಲ್ಲಾಗಿಯೋ ಎನ್ನುವ ವಿಶಿಷ್ಟವಾಗಿ ಕೊರಿಯೋಗ್ರಫಿ ಮಾಡಿದ ಕಾರಂಜಿ, ಫ್ರಾನ್ಸ್ ನ ಐಫಿಲ್ ಟವರ್ ಮತ್ತು ನ್ಯೂಯಾರ್ಕ್‌ ನ ಲಿಬರ್ಟಿ ಸ್ಟ್ಯಾಚುವನ್ನು ಹೋಲುವ ಕಟ್ಟಡಗಳು, ರೋಮನ್ನರ ವಾಸ್ತುವಿನಿಂದ ಕಂಗೊಳಿಸುವ ಕಸಿನೊಗಳು. ಪ್ಯಾರಿಸ್ ನ ಹೊಟೇಲ್ ಗಳು ಮುಂತಾದವು ಕತ್ತೆತ್ತಿ ನೋಡಬೇಕಾದ ಗಗನ ಚುಂಬಿ ಕಟ್ಟಡಗಳು. 6852 ಕೋಣೆಗಳಿರುವ ಎಂ.ಜಿ.ಎಂ.ಗ್ರ್ಯಾಂಡ್ ಎನ್ನುವ ಹೋಟೆಲ್ ಮತ್ತು ಕಸಿನೋ ಪ್ರಪಂಚದಲ್ಲೇ ಏಕಮಾತ್ರ ದೊಡ್ಡ ಹೋಟೆಲ್ ಎಂದು ಹೆಸರಾಗಿದೆಯಂತೆ.

ಒಬ್ಬಳು ಕುಡಿದು ತೂರಾಡುತ್ತಾ ಬರುತ್ತಿದ್ದಳು. ಎದೆಯ ಮೇಲಿದ್ದ ತುಂಡು ಪಟ್ಟಿಯೂ ಜಾರಿ ಬೀಳುತ್ತಿತ್ತು. ಪಕ್ಕದಲ್ಲಿದ್ದವ ಗಂಡನಿರ ಬೇಕು, ಅವಳನ್ನು ಹಿಡಿದುಕೊಂಡು ಬರುತ್ತಿದ್ದ. ಇನ್ನೊಂದೆಡೆ ಭಿಕ್ಷುಕನಂತೆ ಕಾಣುತ್ತಿದ್ದ ಒಬ್ಬ ಯಾರನ್ನೋ ಎತ್ತರದ ಧ್ವನಿಯಲ್ಲಿ ಜೋರಾಗಿ ಬೈಯುತ್ತಿದ್ದ. ದಾರಿಯ ಬದಿಯಲ್ಲಿ ಮತ್ತೊಬ್ಬ ಭಿಕ್ಷುಕ ಕುಳಿತಿದ್ದ. ಅವನ ಲೋಟದೊಳಗೆ ನನ್ನ ಬಳಿ ಇದ್ದ ಐವತ್ತು ಸೆಂಟ್ಸ್ ಹಾಕಿದೆ.

ಈ ರಸ್ತೆಯಲ್ಲಿ ಓಡಾಡುವ ಬಸ್ಸಿಗೆ ‘ಡ್ಯೂಷ್ ‘ ( Deuce) ಎನ್ನುತ್ತಾರೆ. ಡ್ಯೂಷ್ ಪದಕ್ಕೆ ಡಬ್ಬಲ್ ಡೆಕ್ಕರ್ ಎಂದಲ್ಲದೆ ಆಡುಮಾತಿನಲ್ಲಿ ವಾಂತಿ ಎನ್ನುವ ಅರ್ಥವಿದೆಯಂತೆ. ಇಲ್ಲಿ ಜನ ಕಂಠ ಮಟ್ಟ ಕುಡಿದು ವಾಂತಿಮಾಡಿಕೊಳ್ಳುವುದೇ ಹೆಚ್ಚಂತೆ. ಅಲ್ಲದೇ ಈ ಜಾಗ ಸಭ್ಯ ಜನರಿಗೆ ವಾಂತಿ ಬರಿಸುವಂತಹದ್ದೂ ಆಗಬಹುದು.

ದಾರಿಯುದ್ದಕ್ಕೂ “ಬನ್ನಿ ಬನ್ನಿ ಅಷ್ಟು ಗೆಲ್ಲಿ ಇಷ್ಟು ಗೆಲ್ಲಿ” ಕೂಗುತ್ತಲೇ ಇದ್ದರು. ಮೆನೋಪಾಸ್ ಮಹಿಳೆಯರ ರಂಜನೆಗೆಂದೇ ಇರುವ ‘ಸಂಜೆ ಕಾರ್ಯಕ್ರಮ’ ಎಂದು ಇನ್ನೊಂದು ಕಡೆ ಫಲಕವೊಂದು ತೂಗುತ್ತಿತ್ತು. ಬಾರುಗಳು, ಹಾಡು, ಕುಣಿತಗಳ ತರಹಾವರಿ ಝಗಮಗ ಜಿಗಿ ಜಿಗಿ ಹೊಳೆಯುವ ಮಾಯಾಲೋಕ!

ಕೆಂಪು ಬಣ್ಣದ ಪುಕ್ಕಗಳ ಕಿರೀಟ ಮತ್ತು ಅವುಗಳದೇ ತುಂಡು ಉಡುಗೆ ತೊಟ್ಟ ಇಬ್ಬರು ಸುಂದರಿಯರು ಫುಟ್ ಪಾತಿನ ಮೇಲೆ ನಮ್ಮೆದುರಿಗೆ ಹಾದು ಹೋದರು. ನಾನೋ ರೇಶ್ಮೆ ಸೀರೆ ಉಟ್ಟುಕೊಂಡು ಅಲ್ಲಿ ಅಡ್ಡಾಡುತ್ತಿದ್ದೆ. ನನ್ನನ್ನು ನೋಡಿ ‘ಹಾಯ್’ ಎಂದು ಏನೋ ಕೇಳಿದರು. ಅದಕ್ಕೆ ನಾನು ‘ಇಂಡಿಯಾ’ ಎಂದು ಕೈ ಬೀಸಿದೆ.
“ನಿನ್ನದು ಒಂಥರಾ weird ಡ್ರೆಸ್ಸು , ಅವರದ್ದು ಇನ್ನೊಂದು‌ ತರಹದ weird ಡ್ರೆಸ್! ಒಬ್ಬರಿಗೆ ಇನ್ನೊಬ್ಬರದು ಆಶ್ಚರ್ಯ!” ಎಂದು ಮಗ ನಗೆಯಾಡಿದ.

ಆ ಹುಡುಗಿಯರನ್ನು ನೋಡಿದ್ದೇ ಅನಂತಮೂರ್ತಿಯವರ ‘ಕ್ಲಿಪ್ ಜಾಯಿಂಟ್ ‘ ಕಥೆ ನೆನಪಾಯಿತು. ಆ ಹುಡುಗಿಯರು ಸ್ಟ್ರಿಪ್ ಗರ್ಲ್ಸ್ ಎಂದು ಮಗ ಹೇಳಿದ. ಇನ್ನೂ ಸ್ವಲ್ಪ ಮುಂದೆ ಹೋದಾಗ ಬಿಳಿಯ ಪುಕ್ಕದ ಇಬ್ಬರು ಸುಂದರಿಯರು ಎದುರಾದರು. ಹಾಯ್ ಎಂದರು. ನಾನು ಒಂದು ಕ್ಷಣ ನಿಂತೆ ಅವರೂ ನಿಂತರು. ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳಬಹುದೇ? ಕೇಳಿದೆ. “ವಾವ್.. ಯಾ” ಎನ್ನುತ್ತ ಲಗುಬಗೆಯಿಂದ ಫೋಟೋಗೆ ನಿಂತರು. We are spouses ಎಂದು ಹೇಳುತ್ತಾ ನನ್ನನ್ನು ಅವರಿಬ್ಬರ ಮಧ್ಯೆ‌ ನಿಲ್ಲಿಸಿಕೊಂಡರು.

ಕೇವಲ ಬ್ರಾ ತೊಟ್ಟು ಓಡಾಡುವ ಹುಡುಗಿಯರನ್ನು ನಾನು ಇಲ್ಲಿ ನೋಡಿದ್ದೇನೆ. ಆದರೆ ಈ ಸುಂದರಿಯರು ಅದನ್ನೂ ತೊಟ್ಟಿರಲಿಲ್ಲ. ಹತ್ತಿರದಿಂದ ಗಮನಿಸಿದಾಗ ಅವಳ ಮೊಲೆಯ ತೊಟ್ಟಿಗೆ ಒಂದು ಫಳ ಫಳ ಹೊಳೆಯುವ ದೊಡ್ಡ ಪ್ಲ್ಯಾಸ್ಟಿಕ್ ಹೂವನ್ನು ಕ್ಲಿಪ್ಪಿನ ಸಹಾಯದಿಂದ ಸಿಕ್ಕಿಸಿಕೊಂಡಿದ್ದಳು. ಅದನ್ನು ಬಹಳ ಕಲಾತ್ಮಕವಾಗಿ ತೊಟ್ಟಿದ್ದಳು. ಎಂಥವರನ್ನೂ ಅಧೀರಗೊಳಿಸುವ ಸುಂದರಿಯರು. ಅವರ ಮಧ್ಯೆ ದೃಷ್ಟಿಬೊಂಬೆಯಂತೆ ನಾನು ನಿಂತಿದ್ದೆ.

Call your spouse ಎಂದಳು. ಇಲ್ಲ ಅವರು ಬರುವುದಿಲ್ಲ ಕೇವಲ ಫೋಟೋ‌ ತೆಗೆಯುತ್ತಾರೆ ಎಂದೆ. ಓಕ್ಹೇ ಎಂದರು. ಒಂದು ಫೋಟೋ ತೆಗೆದುಕೊಂಡ ಮೇಲೆ “ಒಂದು ಕಾಲನ್ನು ಅರ್ಧ ಮಡಚಿ ಎತ್ತಿ , ಓರೆಯಾಗಿ ನಿಂತುಕೋ ಇನ್ನೊಂದು ಫೋಟೋ ತೆಗೆದುಕೊಳ್ಳೋಣ” ಎಂದು ನನಗೆ ಅದರಲ್ಲೊಬ್ಬಳು ಆದೇಶಿಸಿದಳು. “ಕ್ಷಮಿಸು, ನಾನು ಹಾಗೆಲ್ಲಾ ಮಾಡುವುದಿಲ್ಲ” ಎಂದೆ. ಅದು ಸೆಕ್ಸಿ ಪೋಸ್ ಎಂದು ನನಗೆ ಗೊತ್ತಿತ್ತು. (ಮೊದಲೇ ಮಂಡಿ ನೋವು ಬೇರೆ! ಬಿದ್ದು ಗಿದ್ದು ಮೂಳೆ ಮುರಿದ್ರೆ ದೇವರೇ ಗತಿ. ಈ‌ ಮುದುಕಿಗೇನು ಕೇಡು!)

“ನೀವು ಸ್ಟ್ರಿಪ್ ಹುಡುಗಿಯರಾ?” ಕೇಳಿದೆ. ಹೌದು ನಾವು ದುಡ್ಡಿಗಾಗಿ ಮಾಡುತ್ತೀವಿ. ಬರ್ತೀಯಾ ? ನಿನ್ನ ಗಂಡನನ್ನೂ ಕರೆದುಕೊಂಡು ಬಾ ಎಂದಳು. ನಾವು ಮುದುಕರೆಂದು ಗೊತ್ತಿದ್ದರೂ ಕರೆಯುತ್ತಿದ್ದಳು. ಮೆನೋಪಾಸ್ ಹೆಂಗಸರಿಗೆಂದೇ ಪ್ರತ್ಯೇಕ ಸಂಜೆ ಕಾರ್ಯಕ್ರಮಗಳಿವೆ ಎಂದರೆ. ಇಲ್ಲಿ ಮುದುಕ ತದುಕ ಪದಕ್ಕೆ ಅರ್ಥವಿಲ್ಲವೇನೋ. “ನೀನು ನಿನ್ನ ಚರ್ಮವನ್ನು‌ ಕಳಚಿ ಆತ್ಮವನ್ನು ತೋರಿಸುವುದಾದರೆ ನಾನು ಬರಲು ಸಿದ್ಧಳಿದ್ದೇನೆ” ಎಂದೆ. We are doing it for money ಎಂದು ಏನೇನೋ ಹೇಳಿದಳು. ನನಗೆ ಅದಾವುದೂ ಅರ್ಥವಾಗಲಿಲ್ಲ. ನನ್ನ ಮಾತು ಅವಳಿಗೆ ಅರ್ಥವಾಗಲಿಲ್ಲ. ಅಸಮಧಾನಗೊಂಡು ಅವರಿಬ್ಬರೂ ಹೊರಟು ಹೋದರು.

ಇಲ್ಲಿ ಮನರಂಜನೆಗಾಗಿ ಹೆಣ್ಣುಗಳು ಮಾತ್ರವಲ್ಲ, ಹೆಣ್ಣುಗಳಿಗಾಗಿ ಗಂಡು ಮನರಂಜಕರೂ ಇದ್ದಾರೆ.

ಡ್ಯೂಷ್ ಬಸ್ಸಿನ ಇಕ್ಕೆಲಗಳಲ್ಲಿ ಇಂತಹ ಹೆಣ್ಣುಗಂಡುಗಳ ಜಾಹೀರಾತಿನ ದೊಡ್ಡ ಫಲಕಗಳು ರಾರಾಜಿಸುತ್ತವೆ.

ಮಗ ಅಪಾಯದ ಸುಳಿವರಿತು ಎಲ್ಲೋ ದೂರದಲ್ಲಿ ಕಾಯುತ್ತಿದ್ದ. “ಅವಳು ದುಡ್ಡಿಗೆ ಮಾಡ್ತಾಳೆ. ಪಾಪ, ಅವಳ ಹತ್ರ ಹೋಗಿ ನೀನು ಸ್ಪಿರಿಚುಯಾಲಿಟಿ ಮಾತಾಡಿದ್ದೀಯ? ಅವಳ ವಯಸ್ಸೆಷ್ಟು? ಮಗ ಬೈದ.

“ಏನಮ್ಮಾ ಶಾಸ್ತ್ರಿಗಳ ಮಗಳಾಗಿ…” ಪಕ್ಕದಲ್ಲಿ ಇವನು ತಿವಿದ.
ಹಾಲಿವುಡ್ ಸೇರುವ ಆಸೆಯಿಂದ ತುಂಬಾ ಹುಡುಗಿಯರು ಇಲ್ಲಿಗೆ ಬಂದು ವಿಫಲರಾಗಿ ಸ್ಟ್ರಿಪ್ ಗರ್ಲ್ ದಂಧೆಗೆ, ವೇಶ್ಯಾವಾಟಿಕೆಗೆ ಇಳಿಯುತ್ತಾರಂತೆ. ನಮ್ಮ ಬಾಲಿವುಡ್ ಕಥೆಯೇ ಇಲ್ಲಿಯೂ!

ಒಲ್ಲದ ಗಂಡನನ್ನು ಕಟ್ಟಿಕೊಂಡ ಗರತಿ ಕೇವಲ ಆರ್ಥಿಕ ಸುರಕ್ಷೆಗಾಗಿ ಅವನ ಜೊತೆಗಿರುತ್ತಾಳೆ. ಅದೇ ಆರ್ಥಿಕ ಕಾರಣಗಳಿಗಾಗಿ ಒಬ್ಬ ವಾರಾಂಗನೆ ಪುರುಷನ ಸಹವಾಸ ಮಾಡುತ್ತಾಳೆ. ಇಬ್ಬರ ಸಹವಾಸದಲ್ಲೂ ಐಡಿಯಾಲಜಿಯ ದೃಷ್ಟಿಯಿಂದ ಅಂತಹ ವ್ಯತ್ಯಾಸವೇನಿಲ್ಲ.

ಲಾಸ್ ವೇಗಾಸ್ ನಿಂದ ಮಗ ಕಾರನ್ನು ಡೆಥ್ ವ್ಯಾಲಿಯ ದಾರಿಯ ಕಡೆಗೆ ತಿರುಗಿಸುತ್ತಾ” ಅಮ್ಮಾ ತುಂಬಾ disgusting ಅನ್ನಿಸ್ತಾ ಇದೆಯಾ?” ಕೇಳಿದ.

“ಇಲ್ಲಪ್ಪ ಇದೂ ಒಂದು ಲೋಕ. ಕೆಟ್ಟದ್ದೋ ಒಳ್ಳೆಯದೋ ಗೊತ್ತಿಲ್ಲ. ಅದು ಇದೆ ಅಷ್ಟೇ” ಎಂದೆ.

ಆದರೆ ಇಲ್ಲಿ ಕಳ್ಳತನ, ಜೂಜು, ಬೆತ್ತಲೆ ನೃತ್ಯ, ‌ವೇಶ್ಯಾವಾಟಿಕೆ, ಕಪ್ಪುಹಣ ಸಂಗ್ರಹ ಎಲ್ಲವೂ ರಾಜಾರೋಷವಾಗಿ ನಡೆಯುತ್ತವೆ. ಎಲ್ಲವೂ ಅಧಿಕೃತ (ವೇಶ್ಯಾವಾಟಿಕೆ ಹೊರತಾಗಿ) ಮುಚ್ಚು ಮರೆಯಿಲ್ಲ. ಇದು ಕದ್ದು ಮುಚ್ಚಿ ಮಾಡುವಷ್ಟು ಅಪಾಯಕಾರಿಯಲ್ಲ. ಇಲ್ಲಿ ಬರುವವರಿಗಾಗಲೀ ಇದನ್ನು‌ ನಡೆಸುವವರಿಗಾಗಲೀ ಪಾಪ ಪ್ರಜ್ಞೆ ಕಾಡುವುದಿಲ್ಲ.

ದುರಂತವೆಂದರೆ ಕದ್ದು‌ಮುಚ್ಚಿ ಮಾಡುವ ಮಹಾಮಹಿಮರಿಗೂ ಪಾಪಪ್ರಜ್ಞೆ ಕಾಡುವುದಿಲ್ಲವಲ್ಲ?
ಹೊಟ್ಟೆಪಾಡಿಗೆ ಧಂಧೆಗೆ ಇಳಿದ ಆ ಸುಂದರ ಹೆಣ್ಣುಮಕ್ಕಳಿಗೆ ಅಧ್ಯಾತ್ಮ ಬೋಧನೆ ಮಾಡಿದ್ದು ಪಾಪ ಎಂದು ನನಗೀಗ ಎನಿಸುತ್ತಿದೆ.

ಯಾವ ಬೋಧವೂ ಒಂದು ದರ್ಶನವೇ ಅಲ್ಲವೇ?

‍ಲೇಖಕರು Admin

September 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: