ಅರಿವಳಿಕೆ, ಸಾಹಿತ್ಯ, ಇತಿಹಾಸ ಮತ್ತು ನಾನು…

ಹರೀಶ್ ಗಂಗಾಧರ

ಐದಾರು ವರುಷಗಳ ಕೆಳಗೆ ಇದ್ದಕ್ಕಿದ್ದ ಹಾಗೆ ನನಗೆ ಭಯಂಕರ ಕೆಮ್ಮು ಶುರುವಾಯಿತು. ತೆಗೆದುಕೊಂಡ ಯಾವುದೇ ಔಷಧಿ ಪರಿಣಾಮಕಾರಿಯಾಗಿರಲಿಲ್ಲ. ಕೆಮ್ಮು ಮಾತ್ರ ಉಲ್ಭಣವಾಗುತ್ತಲೇ ಇತ್ತು. ಎಲ್ಲಾ ರೀತಿಯ ಟೆಸ್ಟ್ ಆದರೂ ವೈದ್ಯರಿಗೆ ರೋಗ ಏನೆಂದು ಕಂಡು ಹಿಡಿಯಲು ಆಗಲಿಲ್ಲ. ಒಮ್ಮೆ ಶೇವ್ ಮಾಡುವಾಗ ಗಂಟಲ ಬಳಿ ಗಂಟೊಂದಿರುವುದು ಕಂಡಿತು. ತಕ್ಷಣ ವೈದ್ಯರ ಬಳಿ ದೌಡಾಯಿಸಿದೆ. ಆ ಗಂಟಿನಿಂದ ರಕ್ತ ತೆಗೆದು ಪರೀಕ್ಷೆಗೆ ಕಳುಹಿಸಲಾಯಿತು. ಹೂ ಹೂ ಆಗಲು ರೋಗವೇನೆಂದು ವೈದ್ಯರಿಗೆ ತಿಳಿಯಲಿಲ್ಲ. ನಾನಂತೂ ಕೈ ಚೆಲ್ಲಿ ಕೂತಿದ್ದೆ. ಬೆರಳೆಣಿಕೆಯಷ್ಟೇ ದಿನಗಳು ನನ್ನ ಬದುಕಲ್ಲಿ ಉಳಿದಿವೆ ಎನ್ನಿಸತೊಡಗಿತ್ತು. ಅಷ್ಟರಲ್ಲಿಒಂದು ದಿನ ವೈದ್ಯರೊಬ್ಬರು ಆ ಗಂಟನ್ನೇ ಹೊರತೆಗೆದು ಪರೀಕ್ಷೆಗೆ ಒಳಪಡಿಸೋಣ ಅಂತ ಸೂಚಿಸಿದರು. ಗಂಟು ತೆಗೆಯಲು ಒಂದು ಸಣ್ಣ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು.

ಹೀಗೆ ಮೊದಲ ಬಾರಿಗೆ ನಾನು ಆಪರೇಷನ್ ಥೀಯೇಟರ್ನ ಟೇಬಲ್ ಮೇಲೆ ಮಲಗಿದ್ದೆ. ಹಸಿರು ಗೌನ್, ಮಾಸ್ಕ್, ಗ್ಲೋವ್ಸ್ ಧರಿಸಿ ವೈದ್ಯರು ಬಂದು ನನ್ನಸುತ್ತ ನಿಂತರು. ಅಷ್ಟರಲ್ಲಿ ವೈದ್ಯರೊಬ್ಬರು ನನಗೆ ಇಂಜೆಕ್ಷನ್ ನೀಡಿದರು. ಕ್ಷಣ ಮಾತ್ರದಲ್ಲಿ ನನ್ನ ಕಣ್ರೆಪ್ಪೆಗಳು ಬೀಸುವ ಬಿರುಸಾದ ಗಾಳಿಗೆ ಮುಚ್ಚಿಕೊಳ್ಳುವ ಕಿಟಕಿಯ ಬಾಗಿಲುಗಳ ಹಾಗೆ ಮುಚ್ಚಿಕೊಂಡವು. ಅದೊಂದು surreal ಅನುಭವ ನನಗೆ. ನಾನು ಕಣ್ಬಿಟ್ಟದ್ದು, ಮಾತನಾಡಿದ್ದು ಮುಂದಿನ ದಿನದ ಸಾಯಂಕಾಲ. ನಡುವೆ ಎಚ್ಚರಗೊಂಡಿದ್ದೆ ಅಂತ ಅಪ್ಪ ಹೇಳಿದರೂ ಅದು ನನಗೆ ನೆನಪಿಲ್ಲ. ಬಹುಶಃ ನನ್ನ ಜೀವನದ ಅತ್ಯಂತ ಸುಖಕರ ನಿದ್ದೆಯದು. ನಾನು ಜೀವಂತವಾಗಿದ್ದೆ ಆದರೆ ಪ್ರಪಂಚದ ಆಗುಹೋಗುಗಳು did not ಮ್ಯಾಟರ್. ಅಂದಿನಿಂದ ನನಗೆ ನೀಡಿದ್ದ ಅರಿವಳಿಕೆಯ ಕಂಪೋಸಿಷನ್ ತಿಳಿಯುವ ತವಕ ಇದೆ. ಅಂತಹ ಒಂದು ನಿದ್ದೆಗೆ ಮನಸ್ಸು/ದೇಹ ಹಂಬಲಿಸುತ್ತಲೇ ಇರುತ್ತದೆ. ನಿದ್ದೆ ಎಂಬುದು ಎಷ್ಟು ಮುಖ್ಯವಲ್ಲವೇ?

ಮಾಚ್ಬೆಥ್ ನಾಟಕದಲ್ಲಿ ಷೇಕ್ಸ್ಪಿಯರ್ ನಿದ್ದೆಯ ಕುರಿತು ಹೀಗೆ ಹೇಳುತ್ತಾನೆ- ಒತ್ತಡ, ಚಿಂತೆಗಳಿಂದ ಹರಿದು ಹೋದ ಬದುಕೆಂಬ ಬಟ್ಟೆಗೆ ನಾಜೂಕಾಗಿ ಹಾಕಿದ ಹೊಲಿಗೆ ಹಿತಕರ ನಿದ್ದೆ. ಬದುಕಿನ ಆ ದಿನದ ಅಂತ್ಯ. ದಣಿದ ದೇಹಕೆ ಸುಖಕರ ಮಜ್ಜನ, ಘಾಸಿಗೊಂಡ ಮನಗಳಿಗೆ ಮುಲಾಮು, ಪ್ರಕೃತಿಯ ಪ್ರಮುಖ ಆರೈಕೆಯ ವಿಧಾನ ನಿದ್ದೆ. The death of each day’s life, sore labor’s bath, Balm of hurt minds, great nature’s second course, chief nourisher in life’s feast. ನಿದ್ದೆಯ ಮಾತು ಹಾಗಿರಲಿ. ವಿಷ, ನಂಜು, ಅರಿವಳಿಕೆ, ಮದ್ದು ಮತ್ತು ಡ್ರಗ್ಸ್ ಗಳ ಕುರಿತಾಗಿ ಷೇಕ್ಸ್ಪಿಯರ್ಗೆ ಬಾರಿ ಕುತೂಹಲವಿತ್ತೆಂಬುದು ಅವನ ನಾಟಕಗಳಿಂದ ಸಾಬೀತಾಗುತ್ತದೆ.

ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ನಾಟಕದಲ್ಲಿ ಪ್ರೀತಿಯ ಮದ್ದಿನ ಪ್ರಸ್ತಾಪವಿದೆ. ಈ ಮದ್ದು ಲವ್ ಇನ್ idleness ಎಂಬ ಹೂವಿನಿಂದ ತಯಾರಾಗುತ್ತದೆ. ಕಾಮರಾಜ (ಕ್ಯುಪಿಡ್) ಒಮ್ಮೆ ಮೊದಲನೇ ಎಲಿಜಿಬೆತ್ ರಾಣಿಯೆಡೆಗೆ ಬಿಟ್ಟ ಬಾಣ ಗುರಿ ತಪ್ಪಿ ಬಿಳಿ ಹೂವಿಗೆ ತಗಲುತ್ತದೆ. ತಗಲಿದ ಆ ಹೂವಿನ ಭಾಗ ತಕ್ಷಣ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಹ್ಯಾಮ್ಲೆಟ್ ನಾಟಕದಲ್ಲಿ ಕ್ಲಾಡಿಯಸ್ ಹ್ಯಾಮ್ಲೆಟ್ ಕಿವಿಯೊಳಕ್ಕೆ “cursed hebenon” ಎಂಬ ವಿಷ ಸುರಿದು ರಾಜನ ಕೊಲೆ ಮಾಡುತ್ತಾನೆ. ರೋಮಿಯೋ ಜೂಲಿಯೆಟ್ ನಾಟಕದಲ್ಲಿ ಜೂಲಿಯೆಟ್ ಸತ್ತವಳಂತೆ ನಟಿಸಲು sleeping draught ಸೇವಿಸುತ್ತಾಳೆ. ನಂತರ ಜೂಲಿಯೆಟ್ ಸತ್ತಳೆಂದು ಭಾವಿಸಿ Romeo ಕಾರ್ಕೋಟಕ ವಿಷ ಸೇವಿಸಿ ಸಾಯುತ್ತಾನೆ. ಕ್ಲಿಯೋಪಾತ್ರ ಹಾವಿನಿಂದ ಕಚ್ಚಿಸಿಕೊಂಡು ಪ್ರಾಣ ಬಿಡುತ್ತಾಳೆ. ಷೇಕ್ಸ್ಪಿಯರ್ was surely fascinated by murky world of potions, poison, anaesthetics and drugs.

ಇಂತಹ fascination ಸಾಹಿತ್ಯ, ಇತಿಹಾಸ ವಿದ್ಯಾರ್ಥಿಯಾದ ನನಗೂ ಇದೆ. ಅರಿವಳಿಕೆ ತೆಗೆದುಕೊಂಡ ಮೇಲಂತೂ ಕುತೂಹಲ ಇನ್ನೂ ಹೆಚ್ಚಾಗಿದೆ. Socrates ಸೆರೆಮನೆಯಲ್ಲಿ ಸೇವಿಸಿದ Hemlock ಕಂಪೋಸಿಷನ್ ಏನು? ಹಿಟ್ಲರ್ ತನ್ನ ಕ್ಯಾಂಪ್ಗಳಲ್ಲಿ ಬಳಸಿದ ವಿಷ ಅನಿಲದ ಕಂಪೋಸಿಷನ್ ಏನಿರಬಹುದು? ಇರಾಕಿನ ಕುರ್ಡಿಶ್ ಜನ ಸಮೂಹದ ಮೇಲೆ ಸದ್ದಾಂ ಹುಸೇನ್ ಬಳಸಿದ ಕೆಮಿಕಲ್ ಯಾವುದು? ಭೋಪಾಲ್ ನಗರದಲ್ಲಿ ಲೀಕ್ ಆದ ಮಿಥೇಲ್ ಐಸೋ ಸಯನೈಡ್ ಯಾವ ರೀತಿ ಮನುಷ್ಯ ದೇಹದ ಮೇಲೆ ಕೆಲಸ ಮಾಡಿರಬಹುದು? ಇಸ್ರೇಲ್ ಸುರಿಸುವ ವೈಟ್ ಫೋಸ್ಫೋರಸ್ (ಬಿಳಿ ರಂಜಕ) ಹೇಗೆ ಪ್ಯಾಲೆಸ್ತೀನರನ್ನ ಜೀವಂತ ಸುಡಬಹುದು? ಪತ್ರಕರ್ತ ಅಬ್ದುಲ್ ಜಮಾಲ್ ಕಾಸೋಗಿ ಅವರ ದೇಹವನ್ನ ಯಾವ ಆಸಿಡ್ನಿಂದ ಕರಗಿಸಿದರು? ಈ ಕುತೂಹಲಕ್ಕೆ ಕೊನೆಯಿಲ್ಲ. ಆದರೆ ಕಳೆದೆರಡು ದಶಕಗಳಲ್ಲಿ ಅರಿವಳಿಕೆಗೆ ಸಂಬಂಧಪಟ್ಟಂತ ಎರಡು ಘಟನೆಗಳು ಮಾಸದೆ ಮನದಲ್ಲಿ ಉಳಿದುಬಿಟ್ಟಿವೆ. ಮೊದಲನೆಯದು ಮಾಸ್ಕೋ ಥೀಯೇಟರ್ ಮುತ್ತಿಗೆ ಘಟನೆ.

ರಷ್ಯಾ ವಿಘಟನೆಯಾಗಿತ್ತು. ಮಾಸ್ಕೋ ಹಿಡಿತದಿಂದ ಹದಿನೈದು ರಾಜ್ಯಗಳು ಬೇರ್ಪಟ್ಟು ಪ್ರತ್ಯೇಕ ದೇಶಗಳಾದವು. ಎರಡನೇ ಮಹಾಯುದ್ಧದ ನಂತರ ಅಮೇರಿಕಾದ ಸಾಮ್ರಾಜ್ಯಶಾಹಿ ನೀತಿಗಳನ್ನ ಸಮರ್ಥವಾಗಿ ಎದುರಿಸಿ ಅಮೆರಿಕಾಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದ್ದ ರಷ್ಯಾ ಈಗ ಅವನತಿಯ ಅಂಚಿನಲ್ಲಿತ್ತು ಗಾರ್ಬೋಚಾವ್, ಬೋರಿಸ್ ಎಲ್ಸಿನ್ ರಂತಹ ನಾಯಕರು ದೈತ್ಯ ರಷ್ಯಾವನ್ನ ಎಲ್ಲಾ ರೀತಿಯಲ್ಲೂ ಕುಬ್ಜವನ್ನಾಗಿ ಮಾಡಿಬಿಟ್ಟಿದ್ದರು. ಈ ಅವಕಾಶಕ್ಕಾಗಿ ಕಾಯುತ್ತಿದ್ದ ಚೆಚೆನ್ ಮೂಲಭೂತವಾದಿಗಳು ಮಾಸ್ಕೋ ಹಿಡಿತದಿಂದ ತಪ್ಪಿಸಿಕೊಂಡು ಇಸ್ಲಾಮಿಕ್ ರಾಷ್ಟ್ರವೊಂದನ್ನ ಕಟ್ಟುವ ಕನಸು ಕಾಣತೊಡಗಿದರು. ರಷ್ಯಾದಲ್ಲಿನ ಶಾಂತಿ ಕದಡಲು ಈ ಚೆಚೆನ್ ಬಂಡುಕೋರರಿಗೆ ಅಮೇರಿಕ ಹಾಗು ನ್ಯಾಟೋ ರಾಷ್ಟ್ರಗಳು ಸಮ್ಮತಿ ನೀಡಿ ಬೆಂಬಲವಿತ್ತರು. ರಷ್ಯಾದಲ್ಲಿ ಚೆಚೆನ್ ಭಯೋತ್ಪಾದಕರ ಉಪಟಳ ಅತಿಯಾಗಿತ್ತು.

ಆ ದಿನ ಅಕ್ಟೋಬರ್ 23 2002. ಖ್ಯಾತ ಬ್ರಾಡ್ ವೇ ಥೀಯೇಟರ್ ಅನ್ನು ನಾಚಿಸುವಂತೆ ಮಾಸ್ಕೋದ ಹೃದಯ ಭಾಗದಲ್ಲಿರುವ ದುಬ್ರೋವ್ಕ ಥೀಯೇಟರ್ನಲ್ಲಿ ನೃತ್ಯ ನಾಟಕವೊಂದರ ಅದ್ದೂರಿ ಪ್ರದರ್ಶನ ನೆಡೆದಿದೆ. ಸುಮಾರು 900 ಮಂದಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದಾರೆ. ಚೆಚೆನ್ ಭಯೋತ್ಪಾದಕರು ನಾಟಕ ಪ್ರದರ್ಶನದ ನಡುವೆ ವೇದಿಕೆ ಮೇಲೆ ಬಂದು ಗಾಳಿಯಲ್ಲಿ ಗುಂಡು ಹಾರಿಸತೊಡಗುತ್ತಾರೆ. ಪ್ರೇಕ್ಷಕರು ಇದು ಕೂಡ ನಾಟಕದ ಒಂದು ಭಾಗವೆಂದು ಭಾವಿಸಿ ಆತಂಕಗೊಳ್ಳುವುದಿಲ್ಲ. ಭಯೋತ್ಪಾದಕರ ನಾಯಕ ಬಾರಾಯೆವ್ ವೇದಿಕೆ ಮೇಲೆ ಬಂದು “ನೀವೆಲ್ಲಾ ನಮ್ಮ ಒತ್ತೆಯಾಳುಗಳು ಮತ್ತು ರಷ್ಯಾ ಸರ್ಕಾರ ನಮ್ಮನ್ನ ಮಾತುಕತೆ ಕರೆಯಬೇಕು. ನಮ್ಮ ಬೇಡಿಕೆಗಳು ಈಡೇರಲೇ ಬೇಕು” ಎಂದು ಘೋಷಿಸಿದಾಗ ಎಲ್ಲರಲ್ಲಿ ನಡುಕ ಹುಟ್ಟುತ್ತದೆ. ಹದಿನೆಂಟು ಹೆಂಗಸರು ತಮ್ಮ ಮೈಗೆ ಸ್ಪೋಟಕಗಳನ್ನ ಕಟ್ಟಿಕೊಂಡು ಥೀಯೇಟರ್ನ ಎಲ್ಲಾ ಮೂಲೆಯಲ್ಲೂ ನಿಲ್ಲುತ್ತಾರೆ. ಈ ಆತ್ಮಾಹುತಿ ಗುಂಪಿನ ನಾಯಕಿ ಐವತ್ತು ಕೆಜಿ ಸ್ಪೋಟಕ ಮತ್ತು ಡೆಟೊನೆಟೋರ್ನೊಂದಿಗೆ ಚಿತ್ರಮಂದಿರದ ಮಧ್ಯಭಾಗದಲ್ಲಿ ಕುಳಿತುಕೊಳ್ಳುತ್ತಾಳೆ. ರಾಷ್ಟ್ರಪತಿ ಪುಟಿನ್ ಯಾವುದೇ ಮಾತುಕತೆ ಸಾಧ್ಯವಿಲ್ಲವೆಂದು ತನ್ನ ಸೇನಾಧಿಕಾರಿಗಳಿಗೆ ತಿಳಿಸುತ್ತಾನೆ. ಕ್ಯಾಸ್ಪಿಯನ್ ಸಾಗರದಿಂದ ಶುರುವಾಗಿ ಚೆಚೆನ್ ಭೂಮಿಯನ್ನು ಹಾದು ಬರುವ ಗ್ಯಾಸ್ ಪೈಪ್ ಲೈನ್ ಅನ್ನು ರಷ್ಯಾ ಬಿಡಲು ಸಾಧ್ಯವೇ? ಚೆಚೆನ್ ಬಂಡುಕೋರರ ವಿರುದ್ಧ ಎರಡು ಯುದ್ಧಗಳನ್ನ ಮಾಡಿ ಸುಮಾರು ಎರಡು ಲಕ್ಷ ಚೆಚೆನರ ಪ್ರಾಣ ಹಾನಿಯ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡ ರಷ್ಯನ್ ಸೈನಿಕರ ತ್ಯಾಗ ಮರೆತು ಭಯೋತ್ಪಾದಕರೊಡನೆ ಮಾತನಾಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲವೆಂದು ಪುಟಿನ್ ತನ್ನ ಅಧಿಕಾರಿಗಳಿಗೆ ಸ್ಪಷ್ಟ ಪಡಿಸಿದ್ದ.

ಚಿತ್ರಮಂದಿರವನ್ನ ರಷ್ಯನ್ ಸೇನೆ ಸುತ್ತುವರೆಯುತ್ತದೆ. ಮೀಡಿಯಾ 24×7 ನೇರ ಪ್ರಸಾರ ನೀಡಲು ಸಿದ್ಧವಾಗುತ್ತವೆ. ಇಡೀ ವಿಶ್ವದ ಕಣ್ಣು ಮಾಸ್ಕೋದತ್ತ ನೆಟ್ಟಿರುತ್ತದೆ. ಅಧಿಕಾರಿ ವ್ಲಾಡಿಮೀರ್ ಖ್ರೋನಿಚೇವ್ಗೆ ಪೀಕಲಾಟ. ಮಾತುಕತೆ, ಸಂಧಾನಕ್ಕೆ ಅವಕಾಶವಿಲ್ಲ. ಭಯೋತ್ಪಾದಕ ಬಾರಾಯೆವ್ಗೆ ಈ ವಿಷಯ ತಿಳಿಯುವ ಹಾಗಿಲ್ಲ, ಚಿತ್ರಮಂದಿರದೊಳಗೆ ಸೇನೆ ನುಗ್ಗಿಸುವ ಹಾಗಿಲ್ಲ, ಒಂದು ಡೆಟೊನೇಟರ್ ಇಡೀ ಚಿತ್ರಮಂದಿರವನ್ನ ನೆಲಸಮ ಮಾಡಿಬಿಡಬಹುದು.
ಪುಟಿನ್ ಆದೇಶ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾನೆ- ಮಾತುಕತೆ, ಸಂಧಾನ ಸಾಧ್ಯವಿಲ್ಲ, ಮುಗ್ಧ ಪ್ರೇಕ್ಷಕರ ಪ್ರಾಣಿಹಾನಿ ಒಪ್ಪುವುದಿಲ್ಲವೆಂದು. ಕ್ರೋನಿಚೇವ್ ಮಾತ್ರ “ಮಾತುಕತೆ ಇನ್ನೇನು ಆರಂಭವಾಗಲಿದೆ” ಎಂಬ ಸಂದೇಶವನ್ನೇ ಭಯೋತ್ಪಾದಕರಿಗೆ ರವಾನಿಸಿದ್ದಾನೆ. ಹೀಗೆ ಕ್ಯಾಟ್ ಅಂಡ್ ಮೌಸ್ ಆಟದಲ್ಲಿ 56 ಗಂಟೆಗಳು ಕಳೆದುಹೋಗುತ್ತದೆ. ಭಯೋತ್ಪಾದಕರು ಸಹನೆ ಕಳೆದುಕೊಳ್ಳತೊಡಗುತ್ತಾರೆ. ಪ್ರೇಕ್ಷಕರ ಸ್ಥಿತಿ ಕೂಡ ದುಸ್ತರವಾಗತೊಡಗುತ್ತದೆ. ಆಗ ಹಲವು ಸೇನಾಧಿಕಾರಿಗಳೊಡನೆ ಸಮಾಲೋಚನೆ ನೆಡೆಸಿ ಕ್ರೋನಿಚೇವ್ ಒಂದು ನಿರ್ಧಾರಕ್ಕೆ ಬರುತ್ತಾನೆ- ಚಿತ್ರಮಂದಿರದ AC ನಾಳಗಳಿಂದ ಅರಿವಳಿಕೆ ಅನಿಲ ಹರಿಸಿ ಎಲ್ಲರು ಪ್ರಜ್ಞಾಹೀನರನ್ನಾಗಿ ಮಾಡಿ, ಸೇನೆ ಮಿಂಚಿನ ವೇಗದಲ್ಲಿ ಕಾರ್ಯಾಚರಣೆ ನೆಡೆಸಿ ಭಯೋತ್ಪಾದಕರನ್ನ ಕೊಲ್ಲುವುದೆಂದು.

ಅರಿವಳಿಕೆ ನೀಡುವುದು ಚಾತುರ್ಯದಿಂದ ಮಾಡಬೇಕಾದ ಕ್ಲಿಷ್ಟಕರ ಕೆಲಸ. ವ್ಯಕ್ತಿಗೆ ಅರಿವಳಿಕೆ ನೀಡುವ ಮುನ್ನ ಆತನ ಅರೋಗ್ಯ ಸ್ಥಿತಿ, ಮೈ ತೂಕ, ತುತ್ತಾದ ರೋಗಗಳು ಮತ್ತಿತರ ಅಂಶಗಳನ್ನ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಚಿತ್ರಮಂದಿರದಲ್ಲಿರುವ 900 ಮಂದಿಗಳ ಈ ವಿವರ ತಜ್ಞರಿಗೆ ಸಿಗುವುದಾದರೂ ಹೇಗೆ? ವಿವರ ಸಿಕ್ಕರೂ ಪ್ರತಿಯೊಬ್ಬರಿಗೂ ಬೇರೆ ಬೇರೆ ಡೋಸ್ ಕೊಡುವುದಾದರೂ ಹೇಗೆ? This was great gamble to take and they took it. ನಿರಂತರವಾಗಿ ಒಂದು ಗಂಟೆಗಳ ಕಾಲ ಅರಿವಳಿಕೆ ಅನಿಲವನ್ನ AC ಮೂಲಕ ಚಿತ್ರಮಂದಿರದೊಳಕ್ಕೆ ಹರಿಸಲಾಗುತ್ತದೆ. ನಂತರ ಸೇನೆ ಒಳನುಗ್ಗಿ ಎಲ್ಲಾ ಚೆಚೆನ್ ಭಯೋತ್ಪಾದಕರನ್ನ ಕೊಂದು ಹಾಕುತ್ತದೆ. ಭಯೋತ್ಪಾದಕರನ್ನ ಕೊಂದ ನಂತರ ಪ್ರಜ್ಞಾಹೀನ ಪ್ರೇಕ್ಷಕರನ್ನ ಹೊರತಂದು ಬೆನ್ನಮೇಲೆ ಮಲಗಿಸಲಾಗುತ್ತದೆ. ನಾಲಿಗೆ ಗಂಟಲಿಗೆ ಸಿಲುಕಿ ಉಸಿರುಗಟ್ಟಿ ಹಲವಾರು ಪ್ರಾಣ ಬಿಡುತ್ತಾರೆ. ಆಸ್ಪತ್ರೆಯಲ್ಲಿ ಅರಿವಳಿಕೆಗೆ anti dote ಕೊಡಲು ಬಳಸಿದ ಅರಿವಳಿಕೆಯ ಮಾಹಿತಿ ವೈದ್ಯರ ಬಳಿ ಇರುವುದಿಲ್ಲ. ರಷ್ಯನ್ ಆಡಳಿತ ಮತ್ತು ಸೇನೆ ಮಾಹಿತಿ ನೀಡಲು ನಿರಾಕರಿಸುತ್ತಾರೆ. ಅರಿವಳಿಕೆ ಪ್ರಭಾವದಿಂದ ಸುಮಾರು 130 ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಅಂದು ಬಳಸಿದ ಅರಿವಳಿಕೆ ಯಾವುದೆಂಬ ಮಾಹಿತಿ ಇಂದಿಗೂ ಇಲ್ಲ. ಪುಟಿನ್ ಅರಿವಳಿಕೆ ಬಳಸಲು ಅನುಮತಿ ನೀಡಿದ್ದು ಸರಿಯೇ? ಪುಟಿನ್ ತೆಗೆದುಕೊಂಡ ನಿರ್ಧಾರದಿಂದ 900 ಮಂದಿಯ ಪ್ರಾಣ ಹೋಗುವ ಬದಲು ಬರಿ 130 ಮಂದಿ ಪ್ರಾಣ ತೆತ್ತರೆ? ಅರಿವಳಿಕೆಯ ಮಾಹಿತಿ ವೈದ್ಯರಿಗೆ ನೀಡಬಹುದಿತ್ತಲ್ಲವೇ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಿಲ್ಲ. ಪುಟಿನ್ನನ ದಿಟ್ಟ ನಿಲುವು ಅವನ ಜನಪ್ರಿಯತೆ ಯನ್ನ ಹೆಚ್ಚಿಸಿದ್ದಂತೂ ನಿಜ. ಚೆಚೆನ್ ಹೋರಾಟ ಕಣ್ಮರೆಯಾಗಿದೆ , ಪ್ರತ್ಯೇಕ ಇಸ್ಲಾಮಿಕ್ ದೇಶವಾಗುವ ಕೂಗು ಇಂದು ಕೇಳಿಸದು.

ಅರಿವಳಿಕೆ ಎಂದೊಡನೆ ಇತ್ತೀಚಿಗೆ ನೆಡೆದ ಇನ್ನೊಂದು ಶುಭಾಂತ್ಯದ ಮನಃಸ್ಪರ್ಶಿ ಘಟನೆ ನೆನಪಿಗೆ ಬರುತ್ತದೆ. ಸ್ಥಳ ಥೈಲ್ಯಾಂಡ್ ದೇಶದ ಥಮ್ ಲುಅಂಗ್ ಗುಹೆ. ವರುಷ 2018. ಫುಟ್ಬಾಲ್ ತರಬೇತಿ ಮುಗಿಸಿ ಹನ್ನೆರಡು ಹುಡುಗರು ತಮ್ಮ ಕೋಚ್ ಜೊತೆಗೆ ಗುಹೆ ನೋಡಲು ತೆರಳುತ್ತಾರೆ. ಹನ್ನೊಂದರಿಂದ ಹದಿನಾರು ವರ್ಷದ ಪ್ರಾಯದ ಹುರುಪಿನ ಹುಡುಗರು. ಗುಹೆಯ ಒಳಗೆ ನುಸುಳುತ್ತಾರೆ. ಅಂದು ಸುರಿದ ಧಾರಾಕಾರ ಮುಂಗಾರು ಮಳೆಗೆ ಇಡೀ ಗುಹೆಯಲ್ಲಿ ಪ್ರವಾಹ ಉಂಟಾಗಿ ಗುಹೆಯೊಳಗೆ ಸಿಲುಕಿಕೊಳ್ಳುತ್ತಾರೆ. ಥೈಲ್ಯಾಂಡ್ ನೌಕಾ ಪಡೆ ಡೈವರ್ಸ್ ಗುಹೆಯೊಳಗೆ ಮಕ್ಕಳಿಗಾಗಿ ನೆಡಸುವ ಹುಡುಕಾಟ ವಿಫಲವಾಗುತ್ತದೆ. ಸುಮಾರು ಎರಡು ವಾರಗಳ ನಂತರ ಬ್ರಿಟಿಷ್ ಡೈವರ್ಸ್ಗಳ ಸಂಪರ್ಕಕ್ಕೆ ಹುಡುಗರು ಬರುತ್ತಾರೆ. ಈ ಸಂಪರ್ಕ ಸಾಧಿಸಲು ಜಗತ್ತಿನ ಶ್ರೇಷ್ಠ cave diversಗಳಾದ ಜಾನ್ ವೊಲಂಥೇನ್ ಮತ್ತು ರಿಕ್ ಸ್ಟಾನ್ಟನ್ ಗುಹೆಯ ಕಡಿದಾದ ಕಿಂಡಿಗಳಲ್ಲಿ ಎರಡೂವರೆ ಕಿಲೋ ಮೀಟರ್ ರಭಸವಾಗಿ ಹರಿಯುವ ನೀರಿನ ವಿರುದ್ದಈಜಬೇಕಾಗುತ್ತದೆ. ಇದಕ್ಕೆ ಅವರಿಗೆ ತಗಲುವ ಸಮಯ ಸುಮಾರು ಎಂಟು ಗಂಟೆ! ಜಾನ್ ಮತ್ತು ರಿಕ್ ಅವರಿಗೆ ಮಕ್ಕಳು ಮತ್ತು ಕೋಚ್ ಜೀವಂತವಿರುವುದು ಸಂತಸ ವಿಚಾರವೆನಿಸಿದರು ಅವರ ಮುಂದಿರುವ ಸವಾಲು ಅವರ ಮೈನಡುಗಿಸುತ್ತದೆ. (ಒಂದೆರಡು ದಿನಗಳಲ್ಲಿ ಜೇಸನ್ ಮತ್ತು ಕ್ರಿಸ್ ಎಂಬ ಬ್ರಿಟಿಷ್ ಡೈವರ್ಸ್ ಜಾನ್ ಮತ್ತು ರಿಕ್ ತಂಡವನ್ನ ಸೇರಿಕೊಳ್ಳುತ್ತಾರೆ.) ಎಂತಹ ನುರಿತ ಈಜುಗಾರನಾದರೂ cave divingನಷ್ಟು ಭಯಾನಕ ಮತ್ತು ನಮ್ಮೆಲ್ಲಾ ಕ್ಷಮತೆಗೆ ಸವಾಲೊಡ್ಡುವ ಸಾಹಸ ಇನ್ನೊಂದಿರಲಾರದು. ಎಂತಹ ಧೈರ್ಯವಂತನಿಗೂ ಗುಹೆಯ ಆ ಕಡಿದಾದ ಕಗ್ಗತ್ತಲ ಕೋಣೆಗಳಲ್ಲಿ ಈಜಿ ಹೊರಬರುವುದು ಊಹಿಸಲಾಸಾಧ್ಯ ಸವಾಲು.

ಕಂಗಾಲಾಗಿ ಕುಳಿತ ಜಾನ್ ಮತ್ತು ರಿಕ್ ಅವರಿಗೆ ಆ ಕ್ಷಣಕ್ಕೆ ಹೊಳೆಯುವ ಏಕೈಕ ದಾರಿ ಮಕ್ಕಳಿಗೆ ಅರಿವಳಿಕೆ ನೀಡಿ ಒಬ್ಬಬ್ಬರಾಗಿ ಹೊರ ಎಳೆದು ತರುವುದು. ಇದಕ್ಕಾಗಿ ಆಸ್ಟ್ರೇಲಿಯಾದ ಅರಿವಳಿಕೆ ತಜ್ಞರಾದ ಹ್ಯಾರಿಸ್ ಮತ್ತು ಕ್ರೇಗ್ ಚಲ್ಲೆನ್ ಅವರ ಸಹಾಯ ಕೇಳಲಾಗುತ್ತದೆ. ಅವರು ಒಲ್ಲದ ಮನಸ್ಸಿನಿಂದಲೇ ಮಕ್ಕಳಿಕೆ ಕೆಟಮಿನ್ ಮತ್ತು ಝನಕ್ಸ್ ಎಂಬ ಅರಿವಳಿಕೆ ನೀಡಲು ಮುಂದಾಗುತ್ತಾರೆ. ಮಕ್ಕಳ ಕೈ ಕಾಲು ಕಟ್ಟಿ ಮಾಸ್ಕ್ ಹಾಕಿ ತೇಲುವ ಧಿರಿಸು ತೊಡಿಸಿ ಅರಿವಳಿಕೆ ನೀಡಿ ಅವರನ್ನ ಹೊರ ಎಳೆದು ತರುವ ಕಾರ್ಯಾಚರಣೆ ಶುರುವಾಗುತ್ತದೆ. ಜಗತ್ತಿನ ಎಲ್ಲೆಡೆಯಿಂದ ಹರಿದು ಬರುವ ನೆರವುಗಳೆಲ್ಲಾ ಒಂದೆಡೆಯಾದರೆ ಅರಿವಳಿಕೆ ಹೇಗೆ ಕೆಲಸ ಮಾಡಬಹುದೆಂಬ ಚಿಂತೆ ಇನ್ನೊಂದೆಡೆ. ಎಳೆದು ತರುವ ಮಾರ್ಗ ಮಧ್ಯೆ ಮಕ್ಕಳು ಎಚ್ಚರಗೊಂಡರೆ? ಗಾಬರಿಯಲ್ಲಿ ಮಕ್ಕಳ ಜೀವ ಎಳೆದು ತರುವವನ ಜೀವ ಹೋಗಿಬಿಡಬಹುದು ಮಾರ್ಗ ಮಧ್ಯೆ ಅರಿವಳಿಕೆಯ ಮತ್ತೊಂದು ಡೋಸ್ ನೀಡಲು ನಿರ್ಧರಿಸಲಾಗುತ್ತದೆ. Entire rescue operation was fraught with danger. 18 ದಿನಗಳ ನಂತರ ಎಲ್ಲ ಮಕ್ಕಳನ್ನ ತರಬೇತುದಾರನನ್ನ ರಕ್ಷಿಸಲಾಯಿತು. It was achieving the impossible.

ಕಾರ್ಯಾಚರಣೆ ಮುಗಿದ ನಂತರದ ದಿನಗಳಲ್ಲಿ ಸುರಿದ ಧಾರಾಕಾರ ಮಳೆಗೆ ಗುಹೆ ನಾಲ್ಕು ತಿಂಗಳು ನೀರಿನಲ್ಲಿ ಮುಳುಗಿ ಹೋಗಿತ್ತಂತೆ! ಥೈಲ್ಯಾಂಡ್ ರೆಸ್ಕ್ಯೂ ಆಪರೇಷನ್ ನಲ್ಲಿ ನನಗೆ ಅತ್ಯಂತ ಮುದ ನೀಡಿದ ವಿಚಾರವೆಂದರೆ ಇಡೀ ವಿಶ್ವವೇ ಮಕ್ಕಳಿಗಾಗಿ ಪ್ರಾರ್ಥಿಸಿದ್ದು, ವಿಶ್ವವೇ ಒಂದು ಸಮುದಾಯವೆಂಬಂತೆ ಕಾರ್ಯಪ್ರವೃತ್ತರಾಗಿದ್ದು. ಎಲ್ಲಿಯ ಥೈಲ್ಯಾಂಡ್, ಎಲ್ಲಿಯ ಬ್ರಿಟಿಷ್ ಮತ್ತು ಐರಿಷ್ ಡೈವರ್ಸ್, ಎಲ್ಲಿಯ ಆಸ್ಟ್ರೇಲಿಯನ್ ಅರಿವಳಿಕೆ ತಜ್ಞರು?

ಮಾಸ್ಕೊ ಥಿಯೇಟರ್ನಲ್ಲಿ ಅರಿವಳಿಕೆಯನ್ನ ಸೇವಿಸಿ ಬದುಕುಳಿದವರ ಅನುಭವ ಹೇಗಿದ್ದಿರಬಹುದು? ಅರಿವಳಿಕೆಯ ಪ್ರಭಾವ ಇರುವರೆಗೆ ಒಂದು ಜಾನ್ ಡನ್ ತನ್ನ ಪದ್ಯದಲ್ಲಿ ಹೇಳುವ ಹಾಗೆ From rest and sleep, which but thy (ಸಾವು) pictures be, ಮಿನಿ ಸಾವನ್ನ ಸ್ಪರ್ಶಿಸಿರಬಹುದೇ? ಹದಿನೆಂಟು ದಿನ ಗುಹೆಯ ಕಗ್ಗತ್ತಲಲ್ಲಿ ಧ್ಯಾನಿಸುತ್ತ ಕುಳಿತು ನಂತರ ಅರಿವಳಿಕೆ ಡೋಸ್ ಪಡೆದು ಗುಹೆಯ ಭೀಕರ ಚಹರೆ ನೋಡದೆ ಹೊರಗೆ ತೇಲಿಬಂದ ಆ ಹದಿಮೂರು ಜನರ ಜೀವನ ದೃಷ್ಟಿಕೋನವೇನು? ನನಗಂತೂ ತಿಳಿದಿಲ್ಲ. ನಾನಂತೂ ಅರಿವಳಿಕೆ ತೆಗೆದುಕೊಂಡ ನಂತರದ ದಿನಗಳಲ್ಲಿ ಹೊಸ ಮನುಷ್ಯನಾದೆ ಎಂದರೆ ತಪ್ಪಾಗಲಾರದು. ಪ್ರತಿಕ್ಷಣವು ತೀವ್ರವಾಗಿ ಬದುಕುವ ಹಂಬಲ ಹೆಚ್ಚಿಸಿಕೊಂಡೆ. ನಾನು ಮೇಲು ಅವರು ಕೀಳು ಎಂಬ ಭಾವವನ್ನ ಸಂಪೂರ್ಣವಾಗಿ ದಫನ್ ಮಾಡಿದೆ. ಯಾವುದೊ ಮೋಡಿ ಒಳಗಾಗಿ ಸೇರಿಕೊಂಡಿದ್ದ religious cult ತೊರೆದು ಎಲ್ಲರೊಡನೆ ಬೆರೆಯುವುದನ್ನ ಕಲಿತೆ… ಅರಿವಳಿಕೆ ಪ್ರಭಾವ ಇಂತದ್ದು.

‍ಲೇಖಕರು Admin

September 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: