ಜಯಲಕ್ಷ್ಮಿ ಪಾಟೀಲ್ ಅಂಕಣ – ನಾನು ನೋಡಿದ ಮೊದಲ ಸಿನಿಮಾ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

ಅಪ್ಪಾರ ಆಸೆಯಂತೆ ನನಗೆ ಶಾಲಿನಿ ಎಂದು ನಾಮಕರಣ ಮಾಡಲಾಯಿತು. ಬಾಲಿವುಡ್ ನ ಖ್ಯಾತ ನಟ ದಿ. ಶಮ್ಮಿ ಕಪೂರ್ ಹೀರೊ ಆಗಿದ್ದ ಸಿನಿಮಾ ಒಂದರಲ್ಲಿ, ನಾಯಕಿಯ ಹೆಸರು ಶಾಲಿನಿ ಅಂತ ಇದೆಯಂತೆ. ಅದು ಅಪ್ಪಾರಿಗೆ ತುಂಬಾ ಇಷ್ಟವಾಗಿತ್ತಂತೆ. ಹಾಗಾಗಿ ಮಗಳಿಗೆ ಅದೇ ಹೆಸರಿಡಲು ಪತ್ರ ಬರೆದಿದ್ದರು. ಆದರೆ ನಾನು ಶಾಲಿನಿ ಎಂದು ನಾಮಕರಣ ಶಾಸ್ತ್ರವಾದಾಗಿನಿಂದ ಅಳತೊಡಗಿದವಳು ಒಂದು ತಿಂಗಳವರೆಗೂ ಅಳುತ್ತಲೇ ಇದ್ದೆನಂತೆ.

ಕೊನೆಗೆ ಕುಲದೇವತೆಯ ಹೆಸರಿಟ್ಟರೆ ಸುಮ್ಮನಾಗಬಹುದು ಎಂದು ಯಾರೋ ಅಂದಿದ್ದಕ್ಕೆ ಹೊಸೂರು (ನಮ್ಮೂರಿಗೆ ತುಂಬಾ ಹತ್ತಿರದಲ್ಲಿದೆ) ಲಕ್ಷ್ಮಿಯನ್ನು ನೆನೆದು ನನ್ನನ್ನು ಜಯಲಕ್ಷ್ಮಿ ಎಂದು ಕರೆದರಂತೆ. ಅದೇನು ಚಮತ್ಕಾರವೋ ಆಗ ಅಳು ನಿಲ್ಲಿಸಿದೆನಂತೆ ನಾನು! ಹೊಸೂರು ಲಕ್ಷ್ಮಿಯನ್ನು ನಾವೆಲ್ಲ ಹೊಸೂರಕಿ/ಹೊಸೂರಕ್ಕಿ ಎಂದೇ ಕರೆಯುವುದು. ಹೊಸೂರಕ್ಕಿ ಸೌಮ್ಯ ಲಕ್ಷ್ಮಿ ಅಲ್ಲ, ಅವಳು ಉಗ್ರ ಗಂಭೀರವಂತೆ. ನನಗೂ ಸಿಟ್ಟು ಹೆಚ್ಚು ಅನ್ನುತ್ತಾರೆ ಮನೆಯಲ್ಲಿ. ಹೊರಗಿನವರು ಸಹ ನಾನು ತುಂಬಾ ಬಿಗು, ಗಂಭೀರ ಅನ್ನುತ್ತಾರೆ. ಬಹುಶಃ ಹೊಸೂರಕಿಯ ಹೆಸರಿನ ಪರಿಣಾಮವಿರಬೇಕು. ನನಗೆ ನನ್ನ ಬಗ್ಗೆ ಹಾಗೆ ಅಸೋದೇಯಿಲ್ಲ ಆ ಮಾತು ಬೇರೆ.

ನನ್ನನ್ನು ನೋಡಲು ಅಪ್ಪಾರಿಗೆ ಯಾದಗಿರಿಗೆ ಬರಲಾಗಿರಲಿಲ್ಲವಲ್ಲ, ಹೀಗಾಗಿ ನನಗೆ ಎರಡು ತುಂಬಿ ಮೂರನೇ ತಿಂಗಳ ಆರಂಭದಲ್ಲೇ ಅವ್ವನನ್ನು ತುರುವಿಹಾಳಕ್ಕೆ ಕರೆಸಿಕೊಂಡರಂತೆ. ನನ್ನ ತಂದೆ ೧೯೬೬ರಲ್ಲಿ ಸರಕಾರಿ ವೈದ್ಯರಾಗಿ ಕೆಲಸ ಆರಂಭಿಸಿದ್ದು ತುರುವಿಹಾಳದಲ್ಲೆ. ಯಾದಗಿರಿಯ ನೆನಪು ಹೇಗೆ ಎಳ್ಳಷ್ಟೂ ಇಲ್ವೋ ಹಾಗೇ ತುರುವಿಹಾಳದ ನೆನಪೂ ನನಗಿಲ್ಲ. ಆದರೆ, ತುರುವಿಹಾಳದಲ್ಲಿ ನಾನು ಒಂದೂವರೆ ವರ್ಷದವಳಿದ್ದಾಗ ಶ್ರೀಯುತ. ವಸಂತಸಾ ನಾಕೋಡ್ ಅವರ ಕಂಪನಿ, ‘ಶ್ರೀ ವಸಂತ ನಾಟ್ಯಕಲಾ ಸಂಘ’ ತುರುವಿಹಾಳಕ್ಕೆ ಬಂದು ತಿಂಗಳು ಕಾಲ ಕ್ಯಾಂಪ್ ಹಾಕಿತ್ತಂತೆ. ಈಗ ಆ ನಾಕೋಡ್ ಅವರು ಇಲ್ಲ. ಬಹುಶಃ ಅವರ ನಾಟಕ ಕಂಪನಿಯೂ ಇಲ್ಲ ಎಂದುಕೊಳ್ಳುತ್ತೇನೆ.

ಕಂಪನಿ ನಾಟಕಗಳು ಅಂದ್ರೆ ವೃತ್ತಿರಂಗಭೂಮಿಯ ನಾಟಕಗಳೆಲ್ಲ, ಪರವೂರುಗಳಿಂದ ಬರುವ ಪ್ರೇಕ್ಷಕರಿಗೆ ಊರಿಗೆ ಮರಳಲು ಅನುಕೂಲವಾಗಲಿ ಎಂದು ರಾತ್ರಿ ಹತ್ತರಿಂದ ಆರಂಭವಾಗಿ ನಸುಕಿನ ನಾಲ್ಕರವರೆಗೆ ನಡೆಯುತ್ತಿದ್ದವು. ಹಾಗೊಂದು ನಾಕೋಡ್ ಅವರ ಕಂಪನಿಯಿಂದ ನಾಟಕ, ‘ಹೇಮರಡ್ಡಿ ಮಲ್ಲಮ್ಮ’. ನಾಕೋಡ್ ಅವರು ನಮ್ಮನೆಗೆ ನಾಟಕದ ಪಾಸ್ ಕಳಿಸಿದ್ದರಿಂದ, ಅಪ್ಪ ಅವ್ವ ಇಬ್ಬರೂ ನಾಟಕಕ್ಕೆ ಹೋಗಿದ್ದಾರೆ. ಅವ್ವ ಅಪ್ಪನ ತೊಡೆಯ ಮೇಲೆ ಕುಳಿತು ರಾತ್ರಿಯಿಡೀ ಇನಿತೂ ಮಲಗದೆ ‘ಹೇಮರಡ್ಡಿ ಮಲ್ಲಮ್ಮ’ ನಾಟಕವನ್ನು ನೋಡಿದ್ದಲ್ಲದೇ, ಮನೆಗೆ ಬಂದ ಮೇಲೆ ಆ ನಾಟಕದಲ್ಲಿನ ನೃತ್ಯವೊಂದರ ಹಾಡನ್ನು ಗುನುಗುನು ಅನ್ನುತ್ತಾ ಕುಣ್ದಿದ್ದೇ ಕುಣಿದಿದ್ದಂತೆ ನಾನು!

ಮಾರನೇಯ ದಿನ ಆ ನಾಟಕ ಕಂಪನಿಯ ಮಾಲಿಕರಾದ ವಸಂತ(ಸಾ) ರಾವ್ ನಾಕೋಡ್ ಅವರು ನಮ್ಮ ತಂದೆಯವರನ್ನು ಕಾಣಲು ನಮ್ಮನೆಗೆ ಬಂದರಂತೆ. ಅವರು ನಾಟಕ ಕಂಪನಿ ಆರಂಭಿಸುವ ಮೊದಲು ಎರಡನೇ ಮಹಾಯುದ್ಧದಲ್ಲಿ ವಾಯುಸೇನೆಯಲ್ಲಿದ್ದವರು. ಕಿತ್ತೂರು ಚೆನ್ನಮ್ಮ, ಸಿಂಧೂರ ಲಕ್ಷ್ಮಣದಂತಹ ಅನೇಕ ಹಳೆಯ ಸಿನಿಮಾಗಳಲ್ಲಿ ನೋಡಿರುತ್ತೀರಿ ಇವರನ್ನು. ಗಿರೀಶ್ ಕಾರ್ನಾಡರ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ ಸಿನಿಮಾದಲ್ಲಿ ಊರ ಪಾಳೇಗಾರನ ಭೂಮಿಕೆ ವಹಿಸಿದ್ದರು.

೧೯೯೭ರಲ್ಲಿ ಕಾಲವಾದರು. ನಾನು ನಿದ್ದೆ ಮಾಡದೆ ಪೂರ್ತಿ ನಾಟಕವನ್ನು ನೋಡಿದ್ದು ಅವರಿಗೆ ಅಚ್ಚರಿ ತಂದಿತ್ತು. ಅದನ್ನವರು ಅಪ್ಪಾರಿಗೆ ಹೇಳಿದಾಗ, ಅಪ್ಪಾ ನನ್ನ ಕುಣಿತದ ವಿಷಯ ತಿಳಿಸಿದ್ದಾರೆ. ಮತ್ತೆ ಅವರೆದುರು ಡಾನ್ಸ್ ಮಾಡಿ ತೋರಿಸಲು ಹೇಳಿದರಂತೆ. ನಾನು ಮತ್ತೆ ಅವರೆದುರು ಮಾಡಿ ತೋರಿಸಿದ್ದೆನಂತೆ. ಅದನ್ನು ಕಂಡು ವಸಂತಸಾ ನಾಕೋಡ್ ಅವರು ಬೆರಗಾಗಿದ್ದರಂತೆ. ಖುಷಿಯಿಂದ ಅವರ ಕಣ್ತುಂಬಿ ಬಂದು, ನನಗೆ ನೂರು ರೂಪಾಯಿಯನ್ನು ಉಡುಗೊರೆಯಾಗಿ ನೀಡಿ ಆಶೀರ್ವದಿಸಿದ್ದರಂತೆ. ಆಗ ನೂರು ರೂಪಾಯಿ ಅಂದರೆ ಸಣ್ಣ ಮೊತ್ತವಲ್ಲ. ಅದೂ ಒಂದೂವರೆ ವರ್ಷದ ಪುಟ್ಟ ಮಗುವಿಗೆ ಉಡುಗೊರೆಯಾಗಿ ಕೊಡುವುದೆಂದರೆ! ನಾಕೋಡ್ ಅವರು ಅಷ್ಟೊಂದು ಭಾವುಕರು ಎಂದು ಅಪ್ಪ ಅವ್ವ ಆಗಾಗ ನೆನೆದರೆ, ನಾನು ಎಲ್ಲರೆದುರು ‘ನೋಡಿ, ಅವ್ರು ನೂರು ರೂಪಾಯಿ ಕೊಟ್ಟರೆಂದರೆ ನಾನು ಅದೆಷ್ಟು ಚೆನ್ನಾಗಿ ಡಾನ್ಸ್ ಮಾಡಿರಬೇಕು!’ ಎಂದು ಸುಮ್ಮಸುಮ್ಮನೇ ಕಾಲರ್ ಮೇಲೇರಿಸಿಕೊಂಡು ನಗುತ್ತಿದ್ದೆ.

ನಿಜ ಹೇಳಬೇಕೆಂದರೆ, ಮುಂದೆ ನಾವು ಮುಂಬೈಯಲ್ಲಿದ್ದಾಗ, ನನ್ನ ದೊಡ್ಡ ತಂಗಿ ಶಕುಂತಾಲಾಳ ಮಗಳು ನಿಹಾರಿಕ, ಅದೇ ವಯಸ್ಸಿನಲ್ಲಿ ಅಂದರೆ ಒಂದೂವರೆ ವರ್ಷದವಳಿದ್ದಾಗ ರೇಡಿಯೋದಲ್ಲಿ ಪ್ರಸಾರವಾಗುವ ಕನ್ನಡ ಹಾಡುಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವುದನ್ನು ನಾನು ಕಣ್ಣಾರೆ ಕಾಣುವವರೆಗೂ, ನನ್ನ ತಂದೆ ತಾಯಿ ಹೇಳುವ ಈ ಘಟನೆಯನ್ನು ಅಷ್ಟು ಸಿರಿಯಸ್ಸಾಗಿ ನಂಬಿರಲಿಲ್ಲ.

ಒಂದೂವರೆ ವರ್ಷದ ಪುಟ್ಟ ಮಗು ಅದೇನು ಕುಣಿದೀತು ಅಂತಲೇ ಅಂದುಕೊಂಡಿದ್ದೆ. ಆದರೆ ಪುಟ್ಟ ನಿಹಾರಿಕಾ ಅಪ್ಪಾ ಅವ್ವನ ಮಾತನ್ನು ನಂಬುವಂತೆ ಮಾಡಿದಳು. ಹೆಂಗೆಂಗೋ ಕುಣಿದಿದ್ದರೆ ನಾಕೋಡ್ ಅವರು ಅಷ್ಟು ದೊಡ್ದ ಉಡುಗೊರೆ ಕೊಡಲು ಸಾಧ್ಯವಿತ್ತೆ? ಅಬ್ಬಬ್ಬಾ ಎಂದರೆ ಮುದ್ದು ಎನ್ನುತ್ತಾ, ಎತ್ತಿಕೊಂಡು ಕೆನ್ನೆಗೊಂದು ಮುತ್ತಿಟ್ಟು ಇಳಿಸಿರೋರಲ್ಲವೆ! ಈ ತರ್ಕ ಹುಟ್ಟಿದ್ದು ನಿರಹಾರಿಕ ಕುಣಿಯುವುದನ್ನು ನೋಡಿದ ಮೇಲೆಯೇ. ಈಗಾಕೆ ಭರತ ನಾಟ್ಯವನ್ನು ಇನ್ನೇನು ಒಂದೆರಡು ವರ್ಷಗಳಲ್ಲಿ ಮುಗಿಸುತ್ತಾಳೆ.

ಶಾಸ್ತ್ರೀಯ ನೃತ್ಯವನ್ನು ಕಲಿತಿದ್ದರೆ ಇಂದು ನಾನೂ ಒಬ್ಬ ನೃತ್ಯ ಕಲಾವಿದೆ ಅನಿಸಿಕೊಳ್ಳುತ್ತಿದ್ದೆನೋ ಏನೋ. ಆಗೆಲ್ಲ ಮರ್ಯಾದಸ್ತ ಮನೆತನದ ಹೆಣ್ಣುಮಕ್ಕಳಿಗಲ್ಲ ಅವೆಲ್ಲ ಅಲ್ಲ (ಕುಣಿತ, ನಾಟಕ, ಸಿನಿಮಾ) ಎನ್ನುವುದು ಉತ್ತರ ಕರ್ನಾಟಕದಲ್ಲಿ ಜನಜನಿತವಾಗಿತ್ತು. ಈಗಲೂ ಅದು ಸಂಪೂರ್ಣವಾಗಿ ನಶಿಸಿಲ್ಲವಾದರೂ, ಜನರು ನಟನೆ, ನೃತ್ಯ ಕಲೆಗಳನ್ನು ಆರೋಗ್ಯಪೂರ್ಣ ದೃಷ್ಠಿಯಿಂದ, ಗೌರವದಿಂದ ನೋಡಲಾರಂಭಿಸಿದ್ದಾರಾದ್ದರಿಂದ, ಆಗಿನ ಸಂಕುಚಿತ ವಾತಾವರಣ ಈಗ ಅಷ್ಟಿಲ್ಲ. ಹಾಗಾಗಿ ನನ್ನ ಕುಣಿತ ನುಲಿತ ಎಲ್ಲವೂ ಕೇವಲ ಪ್ರಾಥಮಿಕ ಶಾಲೆಯವರೆಗೆ ಮಾತ್ರ ಸಿಮಿತವಾಯ್ತು. ನಂತರ ಮದುವೆಯಾದ ಹೊಸತರಲ್ಲಿ ಪುಣೆಯಲ್ಲಿ ನವರಾತ್ರಿಯ ಒಂಬತ್ತು ದಿನಗಳ ಕಾಲ ಕೋಲಾಟ ಮತ್ತು ಗರ್ಬಾದಲ್ಲಿ ಪಾಲ್ಗೊಂಡಾಗ ಆದ ಸಂತೋಷ ಹೇಳತೀರದು. ಇರಲಿ ಮತ್ತೆ ಮುಂದೆ ಆ ಕುರಿತು ಹೇಳುವೆ.

ಒಮ್ಮೆ ಮನೆಯಲ್ಲಿ ಯಾರೋ ನನ್ನನ್ನು ಗದರಿಸಿದ್ದಾರೆ. ಬಹುಶಃ ಪೆಟ್ಟುಕೊಟ್ಟಿರಲೂ ಸಾಕು. ಜೋರಾಗಿ ಅಳತೊಡಗಿದೆನಂತೆ. ಅಳುತ್ತಾ ಅಳುತ್ತಾ ಕನ್ನಡಿ ಎದುರಿಗೆ ಹೋಗಿ, ಕನ್ನಡಿಯಲ್ಲಿ ನಾನು ಅಳುವುದನ್ನು ನೋಡಿಕೊಳ್ಳುತ್ತಾ ಮತ್ತೂ ಅತ್ತೆನಂತೆ. ನೋಡಿಕೊಂಡಷ್ಟೂ ದುಃಖ ಹೆಚ್ಚಿ ಬಗೆಬಗೆಯ ನಮೂನೆಗಳ ಅಳು. ಅದನ್ನು ನೋಡಿದ ಮನೆಯವರಿಗೆಲ್ಲ ನಗು. ಅದು ದುಃಖವೋ ರಿಹರ್ಸಲ್ಲೋ ಯಾಂವಬಲ್ಲ! ಇದು ಒಂದು ಸಲದ ಮಾತಾದರೆ ಸರಿ. ಪ್ರತೀ ಸಲವೂ ಅದೇ ವರ್ತನೆ! ಮುಂದೆ ಮನೆಯಲ್ಲಿ ಮೂರ್ನಾಲ್ಕು ವರ್ಷದ ಮಕ್ಕಳು ಅತ್ತಾಗಲೆಲ್ಲ ನನ್ನ ನೌಟಂಕಿ ಅಳುವಿನ ಉದಾಹರಣೆ ಕೊಡುವುದು ವಾಡಿಕೆಯಾಗಿ ಹೋಗಿತ್ತು.

ಅಪ್ಪಾರಿಗೆ ತುರುವಿಹಾಳದಿಂದ ಬಳ್ಳಾರಿ ಜಿಲ್ಲೆಯ, ಆಗಿನ ಕೂಡ್ಲಿಗಿ ತಾಲ್ಲೂಕಿನಲ್ಲಿದ್ದ (ಈಗ ಕೊಟ್ಟೂರು ತಾಲ್ಲೂಕು) ಉಜ್ಜಿನಿಗೆ ವರ್ಗಾ ಆಗಿತ್ತು. ಅಲ್ಲಿನ ಮರುಳುಸಿದ್ಧೇಶ್ವರ ದೇವಸ್ಥಾನವನ್ನೊಳಗೊಂಡ ಮಠ ಅಪಾರ ಆಸ್ತಿಯುಳ್ಳ, ಪಂಚಪೀಠಗಳಲ್ಲೊಂದಾದ ಮಠ. ಮಠದಲ್ಲಿ ಕೊಪ್ಪರಿಗೆ ಕೊಪ್ಪರಿಗೆ ಹೊನ್ನ ನಾಣ್ಯಗಳಿವೆ ಎಂಬ ಪ್ರತೀತಿ ಇತ್ತಂತೆ. ಹೀಗಾಗಿ ಬಿಗಿ ಬಂದೋಬಸ್ತಿನಲ್ಲಿಯೂ ಕಳ್ಳಕಾಕರು ದರೋಡೆಗೆ ಪ್ರಯತ್ನಿಸಿ ಸಿಕ್ಕಿಹಾಕಿಕೊಂಡಿದ್ದೂ ಉಂಟಂತೆ. ತುಂಬಾ ಸುಂದರವಾದ ಮಠವೆಂದು ಅಪ್ಪಾ ಅವ್ವ ಹೇಳುತ್ತಿರುತ್ತಾರೆ.

ಹಂಪಿಯನ್ನು ಸುತ್ತಾಡಿ ನೋಡುವುದೆಲ್ಲವನ್ನೂ ಉಜ್ಜಿನಿಯ ಮಠದ ಆವರಣದಲ್ಲಿಯೇ ನೋಡಬಹುದು ಎನ್ನುತ್ತಾರೆ. ಎರಡೂ ಕಡೆಗಳಲ್ಲಿ ಅದೇ ವಾಸ್ತುಶಿಲ್ಪಗಳಿವೆಯಂತೆ. ಅಲ್ಲಿದ್ದಾಗ ಅಪ್ಪ ತಮ್ಮ ರಾಜದೂತ್ ಮೋಟರ್ ಸೈಕಲ್ಲಿನ ಮೇಲೆ ನಮ್ಮನ್ನು ಅಂದರೆ ನನ್ನ ತಾಯಿ, ನಾನು ಹಾಗೂ ನನ್ನ ದೊಡ್ಡ ತಮ್ಮ ಜಗದೀಶನನ್ನು ಕರೆದುಕೊಂಡು ಕೊಟ್ಟೂರಿಗೆ ಹೋಗಿ ಸಿನಿಮಾ ತೋರಿಸಿಕೊಂಡು ಬರುತ್ತಿದ್ದರು. 

ನನಗೆ ನೆನಪಿರುವ, ನಾನು ನೋಡಿದ ಮೊದಲ ಸಿನಿಮಾ ಪುಟ್ಟಣ್ಣ ಕಣಗಾಲ ಅವರ ನಿರ್ದೇಶನದ ‘ಶರಪಂಜರ’. ಅದರಲ್ಲಿನ ‘ಸಂದೇಶ, ಮೇಘ ಸಂದೇಶ’ ಹಾಡಿನಲ್ಲಿ ಕಲ್ಪನಾ ತಮ್ಮ ಇಬ್ಬರೂ ಮಕ್ಕಳನ್ನು ಕರೆದುಕೊಂಡು, ದಿಬ್ಬದಿಂದ ಕೆಳಗೆ ಉರಳುತ್ತಿರುವ  ಕಿತ್ತಳೆಹಣ್ಣಿನ ರಾಶಿಯೊಂದಿಗೆ ತಾವೂ ಜಾರುವ ದೃಶ್ಯ ಮಾತ್ರ ನೆನಪಿತ್ತು ದೊಡ್ಡವಳಾದ ಮೇಲೆ ಮತ್ತೆ ನಾನು ಶರಪಂಜರ ನೋಡುವವರೆಗೆ. ಹೀಗೆ ಆಗಾಗ ಕೊಟ್ಟೂರಿಗೆ ಹೋಗಿ ಸಿನಿಮಾ ನೋಡುತ್ತಿದ್ದೆವಾದ್ದರಿಂದ, ಕೊಟ್ಟೂರಲ್ಲಿ ಮಾತ್ರ ಸಿನಿಮಾ ನೋಡಲು ಸಾಧ್ಯ ಉಜ್ಜಿನಿಯಲಲ್ಲ ಎನ್ನುವುದು ತಿಳಿದಿತ್ತು ನನಗೆ. ಸಿನಿಮಾ ನೋಡುವುದು ಯಾರಿಗಿಷ್ಟವಾಗಲ್ಲ ಹೇಳಿ? ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಸಿನಿಮಾ ಎಂದರೆ ಇಷ್ಟವೆ. ಹಾಗೇ ನನಗೂ ಇಷ್ಟವಾಗತೊಡಗಿತ್ತು.

ಮೂರ್ನಾಲ್ಕು ವರ್ಷದ ಹುಡುಗಿ ನಾನಾಗ. ಒಂದು ದಿನ ಮನೆ ಎದುರಿಗೆ, ಮುಖ್ಯ ರಸ್ತೆ ದಾಟಿ ಸ್ವಲ್ಪ ದೂರದಲ್ಲಿದ್ದ ಬಸ್ ಸ್ಟ್ಯಾಂಡಿಗೆ ಹೋಗಿ ಯಾವುದೋ ಬಸ್ಸು ಹತ್ತಿದೆ ಸಿನಿಮಾ ನೋಡಲು ಕೊಟ್ಟೂರಿಗೆ ಹೋಗಲೆಂದು, ಒಬ್ಬಳೇ!

‍ಲೇಖಕರು Avadhi

June 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ವಿಶ್ವನಾಥ ಎನ್ ನೇರಳಕಟ್ಟೆ

    ನಮಸ್ತೆ ಮೇಡಮ್. ತಮ್ಮ ಇಂದಿನ ಅಂಕಣದ ಓದು ಬಹಳ ಸಂತಸ ನೀಡಿತು. ಬಾಲ್ಯದಲ್ಲಿಯೇ ತಮ್ಮಲ್ಲಿದ್ದ ನಾಟಕ, ನೃತ್ಯಗಳ ಕುರಿತಾದ ಆಸಕ್ತಿಯ ಬಗ್ಗೆ ಬರೆದಿದ್ದೀರಿ. ತಾವು ನೋಡಿದ ಮೊದಲ ಸಿನಿಮಾದ ಬಗ್ಗೆಯೂ ಪ್ರಸ್ತಾಪಿಸಿದ್ದೀರಿ. ಬರೆವಣಿಗೆ ಬಹಳ ಚೆನ್ನಾಗಿದೆ. ಅಭಿನಂದನೆಗಳು……

    ಪ್ರತಿಕ್ರಿಯೆ
  2. Akshata Deshpande

    ಬಹಳ ಇಂಟೆರೆಸ್ಟಿಂಗ್ ಪಾಯಿಂಟ್ ಗೆ ಬಂದು ನಿಲ್ಲಿಸಿದ್ರಿ… ತುಂಬಾ ಚೆನ್ನಾಗಿ ಬರುತ್ತಿದೆ.. ನಿಮ್ಮ ಅಭಿನಯ ಕೌಶಲ್ಯ ಚಿಕ್ಕಂದಿನಲ್ಲೇ ಕಂಡಿತ್ತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: