ಸಿದ್ಧಲಿಂಗಯ್ಯ ಎಂಬ ಸೋಜಿಗ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

‘ಸಾರ್, ನೀವೊಂಥರಾ ಅರವತ್ತು ವರ್ಷದ ಹುಡುಗ ಇದ್ದಂಗೆ’,

ಒಮ್ಮೆ ಡಾ. ಸಿದ್ಧಲಿಂಗಯ್ಯರವರ ಜೊತೆ ಮಾತನಾಡುತ್ತಾ ಹೀಗಂದಿದ್ದೆ. ಅವರು ಹೊಟ್ಟೆ ತುಂಬಾ ನಕ್ಕಿದ್ದರು. 

ನಮ್ಮಿಬ್ಬರದ್ದು ಇತ್ತೀಚೆಗಿನ ಕೆಲ ವರ್ಷಗಳ ಒಡನಾಟ. ಬೆಂಗಳೂರಿನ ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯಕ್ರಮವೊಂದರಲ್ಲಿ ನಾನು ಸಿದ್ಧಲಿಂಗಯ್ಯರವರನ್ನು ಮೊದಲ ಬಾರಿ ಭೇಟಿಯಾಗಿದ್ದೆ. ನನಗದು ಹಲವು ಮೊದಲುಗಳ ಸಂಭ್ರಮ. ಮೊದಲ ಬಾರಿ ಮ್ಯೂಸಿಕ್ ಆಲ್ಬಮ್ ಒಂದಕ್ಕೆ ಹಾಡು ಬರೆದಿದ್ದು, ಮೊದಲ ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದೊಳಗೆ ಕಾಲಿಟ್ಟಿದ್ದು, ಮೊದಲ ಬಾರಿ ಹಿರಿಯರಾದ ಅರವಿಂದ ಮಾಲಗತ್ತಿ, ಸೇತುರಾಮ್, ಸಿದ್ಧಲಿಂಗಯ್ಯರವರೊಡನೆ ವೇದಿಕೆ ಹಂಚಿಕೊಂಡಿದ್ದು. ಹೀಗೆ ವೈಯಕ್ತಿಕ ನೆಲೆಯಲ್ಲಿ ಒಂದಕ್ಕಿಂತ ಒಂದು ವಿಶೇಷ.  

ಹಲವು ವರ್ಷಗಳಿಂದ ಸಾಹಿತ್ಯ ಪರಿಷತ್ತಿನ ಬಗ್ಗೆ ಕೇಳಿಯಷ್ಟೇ ಗೊತ್ತಿದ್ದ ನಾನು, ಪರಿಷತ್ತಿನ ಪರಿಸರದಲ್ಲೆಲ್ಲಾ ಏಕಾಂಗಿಯಾಗಿ ಒಂದಷ್ಟು ಓಡಾಡಿ ಉತ್ಸಾಹ ತಣಿಸಿಕೊಂಡೆ. ಸದ್ಯಕ್ಕಿಷ್ಟು ಸಾಕು ಎನ್ನುವಷ್ಟರಲ್ಲಿ ಪರಿಚಿತ ಮುಖವೊಂದು ಕಣ್ಣಮುಂದೆಯೇ ಹೋಗುತ್ತಿತ್ತು. ಅದು ಚಂಪಾ. ಬಹುಷಃ ಅದೇ ದಿನ, ಪರಿಷತ್ತಿನ ಮತ್ತೊಂದು ಸಭಾಭವನದಲ್ಲಿ ಚಂಪಾರವರ ಕಾರ್ಯಕ್ರಮವಿತ್ತು. ಸ್ಟೈಲಾಗಿ ಸ್ಕಾರ್ಫ್ ಹಾಕಿಕೊಂಡು, ಯಾರೊಂದಿಗೋ ಗಂಭೀರ ಮಾತುಕತೆಯಲ್ಲಿ ಮುಳುಗಿದ್ದ ಚಂಪಾರನ್ನು ಮೊದಲ ಬಾರಿಗೆ ಕಂಡು ಪುಳಕಿತನಾಗಿದ್ದೆ.  

ಮೊದಲ ಬಾರಿ ನಾನು ಸಿದ್ಧಲಿಂಗಯ್ಯರವರ ಭಾಷಣವನ್ನು ಕೇಳಿದ್ದು ಕೂಡ ಅದೇ ದಿನ. ದಶಕಗಳ ಹಿಂದೆ ಕನ್ನಡ ಕವಿಗಳ ಹಾಡುಗಳು ಕ್ಯಾಸೆಟ್ಟುಗಳಲ್ಲಿ ಬಂದಿದ್ದು, ಅವುಗಳು ಭಾರೀ ಜನಪ್ರಿಯತೆಯನ್ನು ಗಳಿಸುವುದರ ಜೊತೆಗೇ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ನಂತರ ಅವರಿಗೆ ‘ಕ್ಯಾಕ’ (ಕ್ಯಾಸೆಟ್ ಕವಿಗಳು) ಅಂತೆಲ್ಲಾ ಅಡ್ಡಹೆಸರು ಬಂದಿದ್ದು… ಹೀಗೆ ಅವರು ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದರು. ಸಿದ್ಧಲಿಂಗಯ್ಯನವರು ಆ ದಿನ ಅದೆಷ್ಟು ಅದ್ಭುತವಾಗಿ ಮಾತನಾಡಿದರೆಂದರೆ ಸೇರಿದ್ದ ಜನಸಮೂಹವು ನಗೆಗಡಲಲ್ಲಿ ತೇಲುತ್ತಿತ್ತು. ಮಧ್ಯಾಹ್ನದ ಊಟವನ್ನೂ ಮರೆತು! ಜಗತ್ತನ್ನೇ ಮರೆತು ಅಜ್ಜನ ಕತೆಯನ್ನು ಆಸಕ್ತಿಯಿಂದ ಕೇಳುತ್ತಿದ್ದ ಪುಟ್ಟ ಮಕ್ಕಳಂತೆ. 

ಆ ದಿನದ ಸಮಾರಂಭದಲ್ಲಿ ಮತ್ತೊಂದು ಸ್ವಾರಸ್ಯವೂ ಅನಿರೀಕ್ಷಿತವಾಗಿ ನಡೆಯಿತು. ನನ್ನ ಆಹ್ವಾನದ ಮೇರೆಗೆ ನಟ, ಲೇಖಕ, ರಂಗಕರ್ಮಿಯಾಗಿರುವ ಸೇತುರಾಮ್ ಕೂಡ ಅಂದು ಕಾರ್ಯಕ್ರಮಕ್ಕೆ ಬಂದಿದ್ದರು. ನಮ್ಮದು ಖಾಸಗಿ ಭೇಟಿಯಾಗಿದ್ದರಿಂದ ಸೇತುರಾಮ್ ರವರು ವೇದಿಕೆಯತ್ತ ಬರದೆ ಹಿಂದಿನ ಸಾಲಿನಲ್ಲಿ, ಸಭಿಕರ ಮಧ್ಯೆ ಕುರ್ಚಿಯೊಂದನ್ನು ಹಿಡಿದು ತಣ್ಣಗೆ ಕೂತುಬಿಟ್ಟರು. ಸ್ವಲ್ಪ ಹೊತ್ತಿನ ನಂತರ ವೇದಿಕೆಯ ಮೇಲಿದ್ದ ಸಿದ್ಧಲಿಂಗಯ್ಯ ಸೇತುರಾಮ್ ರನ್ನು ಕಂಡರು ಅನಿಸುತ್ತೆ. ‘ಅರೇ, ಅಲ್ಲಿ ಕೂತ ಬಿಳಿಕೂದಲಿನವರು ಸೇತುರಾಮ್ ಅಲ್ವಾ? ಅವರ್ಯಾಕೆ ಅಲ್ಲಿ ಕೂತಿದ್ದು? ಸೇತುರಾಮ್ ನಮ್ಮ ನಡುವಿನ ಹಿರಿಯರು, ಪ್ರತಿಭಾವಂತರು. ಅವರನ್ನು ಇಲ್ಲಿಗೆ ಕರ್ಸೀಪ್ಪಾ’, ಅಂದರು ಸಿದ್ಧಲಿಂಗಯ್ಯ. ಇತ್ತ ಇಂಥದ್ದೊಂದು ಸಾಧ್ಯತೆಯನ್ನು ನಿರೀಕ್ಷಿಸದಿದ್ದ ಸೇತುರಾಮ್ ರವರು ಕೊಂಚ ಗಲಿಬಿಲಿಯಾಗಿ, ವೇದಿಕೆಗೆ ಬಂದು ನಮ್ಮನ್ನು ಸೇರಿಕೊಂಡರು. ಹೀಗೆ ಅಂದು ಸಾಧನಕೇರಿಯ ವೇದಿಕೆಯು ಮತ್ತಷ್ಟು ಸ್ಮರಣೀಯವಾಯಿತು. 

‘ಓ, ನೀವು ಡೆಲ್ಲಿಯಲ್ಲಿರೋದಾ? ನಾನು ಡೆಲ್ಲಿಗೆ ಬರ್ತಾ ಇರ್ತೀನಿ. ಒಮ್ಮೆ ಸಿಗೋಣ ಪ್ರಸಾದ್’, ಎಂದು ಸಿದ್ಧಲಿಂಗಯ್ಯರವರು ಮೊದಲ ಭೇಟಿಯಲ್ಲಿ ಹೇಳಿದ್ದರು. ಖಂಡಿತ ಎಂದು ಒಪ್ಪಿಕೊಂಡಿದ್ದೆ. ದಿಲ್ಲಿಯಲ್ಲಿ ಒಮ್ಮೆ ಭೇಟಿಯಾದ ನಂತರ ನಮ್ಮ ಒಡನಾಟ ಮತ್ತಷ್ಟು ಹೆಚ್ಚಿತು. ನಂತರ ಸಿದ್ಧಲಿಂಗಯ್ಯ ಸಾಹಿತ್ಯ ಅಕಾಡೆಮಿಯ ಕಾರ್ಯನಿಮಿತ್ತ ದಿಲ್ಲಿಗೆ ಬರುತ್ತಾರೆ ಎಂದರೆ ನನಗಿಲ್ಲಿ ವಿಶೇಷ ಸಂಭ್ರಮ. ಯಾವಾಗಲೂ ದಿಲ್ಲಿಗೆ ಬರುವ ಮುನ್ನ ನನಗೊಂದು ಕರೆ ಮಾಡಿ, ಮುಂಚಿತವಾಗಿಯೇ ತಿಳಿಸುತ್ತಿದ್ದರಿಂದ ನಮ್ಮ ಭೇಟಿಯೂ ಸುಗಮವಾಗುತ್ತಿತ್ತು. 

ಸಿದ್ಧಲಿಂಗಯ್ಯರವರ ಜೊತೆಗಿನ ಒಡನಾಟವೆಂದರೆ ಹೊಟ್ಟೆ ತುಂಬುವಷ್ಟು ಹರಟೆ, ಕೆನ್ನೆ ನೋಯುವಷ್ಟು ನಗು ಮತ್ತು ಮುಗಿಯದಷ್ಟು ಕತೆಗಳು. ನಾವಂದು ಅಕಾಡೆಮಿಯಲ್ಲಿ ಬುಡಕಟ್ಟು ಲೇಖಕರ ಗೋಷ್ಠಿಗೆಂದು ಸೇರಿದ್ದೆವು. ಕೌಂಟರ್ ಒಂದರಲ್ಲಿ ನಾನು ಮತ್ತು ಸಿದ್ಧಲಿಂಗಯ್ಯ ಕೂತಿದ್ದಾಗ ಅಚಾನಕ್ಕಾಗಿ ಹಲಧರ್ ನಾಗ್ ಸಿಕ್ಕರು. ಹಲಧರ ನಾಗ್ ಒಡಿಸ್ಸಾದ ಪ್ರಸಿದ್ಧ ಲೇಖಕ. ‘ಲೋಕ ಕವಿರತ್ನ’ ಎಂಬ ಹೆಸರಿನಲ್ಲಿ ಖ್ಯಾತರಾಗಿರುವ ನಾಗ್, ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಮೂರನೇ ತರಗತಿಯವರೆಗೆ ಓದಿರುವ ಹಲಧರ ನಾಗ್ ಬಗ್ಗೆ ಇಂದು ಇನ್ನೂರೈವತ್ತಕ್ಕೂ ಹೆಚ್ಚು ಮಂದಿ ಸಂಶೋಧಕರು ಪಿ.ಎಚ್.ಡಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಂಥಾ ಮೇರುಪ್ರತಿಭೆ ಅವರದ್ದು. 

ಹಲಧರ ನಾಗ್ ಅಂದು ಬುಡಕಟ್ಟಿನ ದಿರಿಸಿನಲ್ಲೇ ಇದ್ದರು. ಅದು ಬುಡಕಟ್ಟಿನ ಸಾಹಿತ್ಯ ಸಮಾವೇಶ ಅಂತಲ್ಲ. ಭಾರತದ ಘನತೆವೆತ್ತ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪುರಸ್ಕಾರವನ್ನು ಪಡೆದುಕೊಳ್ಳುವಾಗಲೂ ಹಲಧರ ನಾಗ್ ಅದೇ ದಿರಿಸಿನಲ್ಲಿದ್ದಿದ್ದನ್ನು ನಾನು ಚಿತ್ರವೊಂದರಲ್ಲಿ ಕಂಡಿದ್ದೆ. ಅವರನ್ನು ನಾನು ಥಟ್ಟನೆ ಗುರುತು ಹಿಡಿದಿದ್ದೇ ಅವರ ಶ್ವೇತವರ್ಣದ ದೇಸಿ ದಿರಿಸಿನಿಂದ. 

ಬಹುಷಃ ಅವರೂ ಕೂಡ ಅಂದು ಅಕಾಡೆಮಿಯ ಕಾರ್ಯಕ್ರಮವೊಂದಕ್ಕೆ ವಿಶೇಷ ಅತಿಥಿಯಾಗಿ ಬಂದಿದ್ದರು. ಆದರೆ ದಿಲ್ಲಿಯ ಚಮಕ್-ಧಮಕ್ ಅವರಿಗೆ ಅಷ್ಟಾಗಿ ಹೊಂದಿಕೊಳ್ಳಲಿಲ್ಲವೇನೋ. ಜಾತ್ರೆಯಲ್ಲಿ ಕಳೆದುಹೋದ ಮಗುವಿನಂತೆ ಅಕಾಡೆಮಿ ಅಂಗಳದಲ್ಲಿ ವಿಚಿತ್ರ ಗೊಂದಲದಲ್ಲಿ ತನ್ನಷ್ಟಕ್ಕೆ ಅಡ್ಡಾಡುತ್ತಿದ್ದರು. ಅತ್ತಿತ್ತ ಹೋಗುತ್ತಿದ್ದವರು ಅವರನ್ನು ಕಂಡು, ಗೌರವಪೂರ್ವಕವಾಗಿ ತಲೆಬಾಗಿ ನಮಸ್ಕರಿಸುವುದನ್ನು ನಾನು ಗಮನಿಸುತ್ತಿದ್ದೆ. ಕೊನೆಗೆ ನಾವಿಬ್ಬರೂ ಅವರನ್ನು ಬರಮಾಡಿ, ಕುರ್ಚಿಯೊಂದನ್ನು ಕೊಟ್ಟು ಕುಳ್ಳಿರಿಸಿ, ಅವರ ಕುಶಲೋಪರಿಯನ್ನು ವಿಚಾರಿಸಿದೆವು. ‘ಎಂಥಾ ದೊಡ್ಡ ಮನುಷ್ಯ, ಪ್ರತಿಭೆಗೆ ಸೀಮೆಯಿಲ್ಲ ನೋಡಿ’, ಎಂದು ನಾಗ್ ಬಗ್ಗೆ ನಂತರ ನನ್ನೊಂದಿಗೆ ಹೇಳಿಕೊಂಡರು ಸಿದ್ಧಲಿಂಗಯ್ಯ.

ಸಿದ್ಧಲಿಂಗಯ್ಯರವರ ಮಾತುಗಳಲ್ಲಿ ಅದೆಷ್ಟು ವಿನೋದವಿತ್ತೆಂದರೆ ನಗುವುದೇ ನನಗೊಂದು ಫುಲ್-ಟೈಂ ಕೆಲಸವಾಗಿತ್ತು. ‘ನಿಮ್ಮ ಮಾತುಗಳನ್ನು ನೋಟ್ಸ್ ಮಾಡಿಕೊಂಡರೆ ಒಂದು ಪುಸ್ತಕ ಮಾಡುವಷ್ಟು ಕಂಟೆಂಟ್ ಸಿಗುತ್ತದೆ ಸಾರ್’, ಅಂತೆಲ್ಲಾ ನಾನು ಅವರ ಕಾಲೆಳೆಯುತ್ತಿದ್ದೆ. ಅವರ ಹಾಸ್ಯದಲ್ಲಿ ಎಂದೂ ಗೇಲಿ, ಅಪಹಾಸ್ಯ, ಕೊಂಕುಗಳನ್ನು ನಾನು ಕಂಡಿರಲಿಲ್ಲ. ಬಹಳಷ್ಟು ಬಾರಿ ಅವರ ಹಾಸ್ಯದ ವಸ್ತು ಖುದ್ದು ಅವರೇ ಆಗಿರುತ್ತಿದ್ದರು. ತನ್ನ ಬಗ್ಗೆಯೇ ತಮಾಷೆಯ ಕತೆಗಳನ್ನು ಹೇಳಿಕೊಳ್ಳುತ್ತಾ ನಮ್ಮಲ್ಲಿ ನಗೆಯುಕ್ಕಿಸುತ್ತಿದ್ದರು. 

ನಾವಿಬ್ಬರು ದಿಲ್ಲಿಯಲ್ಲಿ ಹರಟಲು ಕೂತೆವೆಂದರೆ ಅವರದ್ದು ಮಾತು, ನನ್ನದು ಕಿವಿ. ಅಲ್ಲಿಗೆ ಮುಗಿಯಿತು! ಅವರ ಆರಂಭದ ದಿನಗಳು, ದಲಿತ ಚಳುವಳಿ, ಬೂಸಾ ಗಲಾಟೆ, ಹೊಲೆಮಾದಿಗರ ಹಾಡು, ಕವಿತೆಗಳ ಆಕ್ರೋಶ, ರಾಮಕೃಷ್ಣ ಹೆಗಡೆಯವರ ಕಾಲ, ರಾಜಕೀಯ, ಸಂಸತ್ತು, ಹೋರಾಟ, ವಿವಾದ… ಹೀಗೆ ಮಾತುಕತೆ ಶುರುವಾಯಿತೆಂದರೆ ಅರ್ಧರಾತ್ರಿಯಾದರೂ ಮುಗಿಯುತ್ತಿರಲಿಲ್ಲ.

ಅದು ಸಂಜೆ ನಾಲ್ಕರ ಹೊತ್ತು. ದಿಲ್ಲಿಯಲ್ಲಿ ಭಾರೀ ಚಳಿಗಾಲ. ಸಂಜೆ ಏಳಕ್ಕೋ, ಎಂಟಕ್ಕೋ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರದ ಅದ್ದೂರಿ ಸಮಾರಂಭವಿತ್ತು. ‘ನೀವೂ ಕೂಡ ನನ್ನ ಜೊತೆ ಬಂದ್ಬಿಡಿ’, ಎಂದಿದ್ದರು ಸಿದ್ಧಲಿಂಗಯ್ಯ. ನಂತರ ಮತ್ತೇನೋ ಆಯಿತು. ಕಾರ್ಯಕ್ರಮ ಅತ್ಲಾಗಿರ್ಲಿ ಎಂದು ನಾವಿಬ್ಬರೂ ದಿಲ್ಲಿ ಸುತ್ತಲು ಹೊರಟೆವು. ಎಂದಿನಂತೆ ದಿಲ್ಲಿಯ ಸರೋಜಿನಿ ಮಾರ್ಕೆಟ್ಟೆಂದರೆ ಕಾಲಿಡಲೂ ಸಾಧ್ಯವಾಗದಷ್ಟಿನ ಜನಜಂಗುಳಿ. ಅಲ್ಲೇ ಸುಮಾರು ಹೊತ್ತು ಶಾಪಿಂಗ್ ಮಾಡಿದೆವು. ಶಾಲೆ ಮುಗಿಸಿ, ಕಾಲ್ನಡಿಗೆಯಲ್ಲಿ ಮನೆಗೆ ಬರುವ ಮಗುವೊಂದು ಎಲ್ಲೆಲ್ಲೋ ಅಲೆದಾಡುವಂತೆ ಕಾಲು ದಣಿಯುವಷ್ಟು ಅಲೆದಾಡಿದೆವು.

ಕೊನೆಗೆ ರಸ್ತೆಯ ಬದಿಯೊಂದರಲ್ಲಿ ಸುಮ್ಮನೆ ಜನರನ್ನು ನೋಡುತ್ತಾ ಇಬ್ಬರೂ ಕೂತುಬಿಟ್ಟೆವು. ‘ಮೂಲೆಯೊಂದರಲ್ಲಿ ಕೂತು ಜನರನ್ನು ಸುಮ್ಮನೆ ನೋಡುವುದು ಕೂಡ ಒಂದು ಅಧ್ಯಯನದಂತೆ, ಧ್ಯಾನದಂತೆ’, ಎನ್ನುತ್ತಿದ್ದರು ಸಿದ್ಧಲಿಂಗಯ್ಯ. ಕನ್ನಡದ ಐಕಾನಿಕ್ ಕವಿಯಾದ, ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ. ಸಿದ್ಧಲಿಂಗಯ್ಯ ಅಂದು ನನ್ನೊಂದಿಗೆ ಸರೋಜಿನಿ ಮಾರ್ಕೆಟ್ಟಿನ ಬೀದಿಯಲ್ಲಿ ಅನಾಮಿಕನಂತೆ ಕುಳಿತು ಹರಟುತ್ತಿದ್ದಿದ್ದು ನನ್ನ ಮಟ್ಟಿಗಂತೂ ಸೋಜಿಗ.  

ಇಂಥದ್ದೇ ಮತ್ತೊಂದು ಭೇಟಿಯಲ್ಲಿ ‘ನಡೀರಿ, ಇವತ್ತು ಜೈನ್ ಬುಕ್ ಡಿಪೋ ಕಡೆ ಹೋಗೋಣ’ ಅಂದರು ಸಿದ್ಧಲಿಂಗಯ್ಯ. ಅದು ದಿಲ್ಲಿಯ ಹಳೆಯ ಮತ್ತು ಖ್ಯಾತ ಪುಸ್ತಕದಂಗಡಿಯಂತೆ. ಸಿ.ಪಿ ಎಂಬ ಹೆಸರಿನಲ್ಲಿ ಖ್ಯಾತವಾಗಿರುವ ಕನ್ನಾಟ್ ಪ್ಲೇಸ್ ತಾಣಕ್ಕೆ ಸಾಕಷ್ಟು ಬಾರಿ ಹೋಗಿಬಂದಿದ್ದರೂ ನನಗಿದು ಗೊತ್ತಿರಲಿಲ್ಲ. ಸಿದ್ಧಲಿಂಗಯ್ಯ ದಿಲ್ಲಿ ಸಂಸತ್ತಿನ ಬೃಹತ್ ಗ್ರಂಥಾಲಯದ ಗುಣಗಾನ ಮಾಡುತ್ತಾ, ದಲಿತ ಸಾಹಿತ್ಯದ ಬಗ್ಗೆ ನನಗೆ ವಿವರಿಸುವಷ್ಟರಲ್ಲಿ ನಾವು ಜೈನ್ ಬುಕ್ ಡಿಪೋ ತಲುಪಿಯಾಗಿತ್ತು. 

ಅಂದು ಸಿದ್ಧಲಿಂಗಯ್ಯ ಬಹಳ ಹೊತ್ತು ಬುಕ್ ರ್ಯಾಕುಗಳಲ್ಲಿ ಕೈಯಾಡಿಸಿ ಆರಿಸುತ್ತಾ, ಹತ್ತು-ಹದಿನೈದು ಪುಸ್ತಕಗಳನ್ನು ನನಗಾಗಿ ಖರೀದಿಸಿ ಉಡುಗೊರೆಯಾಗಿ ಕೊಟ್ಟರು. ಎಲ್ಲವೂ ಅಂಬೇಡ್ಕರ್ ಮತ್ತು ದಲಿತ ಸಾಹಿತ್ಯಕ್ಕೆ ಸಂಬಂಧಪಟ್ಟ ಅದ್ಭುತ ಕೃತಿಗಳು. ಧನಂಜಯ ಕೀರ್ ಬರೆದಿರುವ ಅಂಬೇಡ್ಕರ್ ಜೀವನಕಥನ ಇವುಗಳಲ್ಲೊಂದು. ಅವರ ಮಾತಿನಂತೆ ಇವೆಲ್ಲಾ ಅದ್ಭುತ, ಸಂಗ್ರಹಯೋಗ್ಯ ಕೃತಿಗಳು ಎಂಬುದನ್ನು ನಂತರ ನಾನು ಓದಿ ತಿಳಿದುಕೊಂಡೆ. ಇಂದಿಗೂ ನನ್ನ ಓದಿಗೆ, ಮರುಓದಿಗೆ ಕೈಗೆಟಕುವಂತೆ ಇಟ್ಟಿರುವ ಮೆಚ್ಚಿನ ಕೃತಿಗಳವು. 

ವಿಶೇಷವೆಂದರೆ ಸಿದ್ಧಲಿಂಗಯ್ಯರವರ ಆತ್ಮಕತೆಯ ಇಂಗ್ಲಿಷ್ ಅನುವಾದದ ಪ್ರತಿಯು ಅಂದು ಜೈನ್ ಪುಸ್ತಕದಂಗಡಿಯಲ್ಲಿತ್ತು. ಕೌಂಟರಿನಲ್ಲಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು ಸುಮ್ಮನೆ ಕರೆದು ಈ ಪುಸ್ತಕದ ಖ್ಯಾತ ಕನ್ನಡ ಕವಿ ಸಿದ್ಧಲಿಂಗಯ್ಯ ಅವರೇ ನೋಡಿ ಅಂದೆ. ಕೂಡಲೇ ಓಡೋಡಿ ಬಂದ ಆತ ಸಿದ್ಧಲಿಂಗಯ್ಯರವರನ್ನು ಗೌರವದಿಂದ ಮಾತನಾಡಿಸಿ, ಏನೇನು ಬೇಕೆಂದು ವಿಚಾರಿಸಿ ಸ್ವತಃ ಎಲ್ಲವನ್ನೂ ನಿಭಾಯಿಸಿದರು. ಕೊನೆಯಲ್ಲೊಂದು ಫೋಟೋದೊಂದಿಗೆ ಆ ಕ್ಷಣವು ಕ್ಯಾಮೆರಾ ಕಣ್ಣಿನಲ್ಲಿ ಶಾಶ್ವತವಾಗಿ ಸೆರೆಯಾಗಿತ್ತು! 

ಸಿದ್ಧಲಿಂಗಯ್ಯರವರ ಬೆಂಗಳೂರು ನಿವಾಸದಲ್ಲಿರುವ ಬೃಹತ್ ಗ್ರಂಥಾಲಯದ ಬಗ್ಗೆ ನಾನು ಸಾಕಷ್ಟು ಕೇಳಿದ್ದೆ. ಪುಸ್ತಕಗಳ ಸಂಖ್ಯೆ ಒಂದು ಲಕ್ಷ ಮಿಕ್ಕಿದೆ ಎಂದು ಸ್ವತಃ ಅವರೇ ನನಗೆ ಹೇಳಿದ್ದರು. ಇತ್ತ ಜೈನ್ ಬುಕ್ ಡಿಪೋದಲ್ಲಿ ಮಂಡಲ್ ಕಮಿಷನ್ ವರದಿ, ಅದು-ಇದು ಅಂತೆಲ್ಲಾ ಒಂದು ದೊಡ್ಡ ರಟ್ಟಿನ ಬಾಕ್ಸು ತುಂಬುವಷ್ಟು ಪುಸ್ತಕಗಳನ್ನು ಅವರು ಖರೀದಿಸಿದರು. ಬಿಲ್ ಮಾಡಿಸಿ, ಬೆಂಗಳೂರು ತಲುಪಿಸುವಂತೆ ಕೌಂಟರಿನಲ್ಲಿ ತಮ್ಮ ವಿಳಾಸವನ್ನೂ ನೀಡಿದರು. ಫೈಝ್ ಅಹ್ಮದ್ ಫೈಝ್ ಅವರ ಮೆಚ್ಚಿನ ಕವಿಯಂತೆ. ಅವರ ಓದಿನ ಹಸಿವು ನಿಜಕ್ಕೂ ಅಗಾಧವಾಗಿತ್ತು. 

ಸಿದ್ಧಲಿಂಗಯ್ಯನವರ ಹೃದಯವಂತಿಕೆಯನ್ನು ಹಲವು ಬಾರಿ ಹತ್ತಿರದಿಂದ ಕಂಡವನು ನಾನು. ಪ್ರತಿಷ್ಠಿತ ಅಮೆರಿಕನ್ ಕೇಂದ್ರವೊಂದರ ಗ್ರಂಥಾಲಯಕ್ಕೆ ತಮ್ಮ ಪುಸ್ತಕಗಳನ್ನು ನೀಡಲು, ಒಮ್ಮೆ ತಮ್ಮ ಹತ್ತಾರು ಪುಸ್ತಕಗಳನ್ನು ಸ್ವತಃ ಬೆಂಗಳೂರಿನಿಂದ ದಿಲ್ಲಿಗೆ ಹೊತ್ತು ತಂದಿದ್ದರು. ಇದಕ್ಕೆ ಸಂಬಂಧಪಟ್ಟಂತೆ ನೋಂದಣಿ ಪ್ರಕ್ರಿಯೆಯ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದರು ಕೂಡ. ಪುಸ್ತಕಗಳನ್ನು ಕರ್ನಾಟಕದಿಂದ ಹೊತ್ತು ತಂದಿದ್ದೇನೋ ಆಯಿತು. ಆದರೆ ನನ್ನ ಪುಸ್ತಕಪ್ರೀತಿಯ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿತ್ತು. ಇದರೊಂದಿಗೆ ಅವರ ನಿರ್ಧಾರವೂ ಹಟಾತ್ತನೆ ಬದಲಾಯಿತು.

ನೀವು ಇಟ್ಕೊಳ್ಳಿ ಅಂದವರೇ ಬೆಂಗಳೂರಿನಿಂದ ತಂದಿದ್ದ ತನ್ನ ಅಷ್ಟೂ ಪುಸ್ತಕಗಳನ್ನು ನನಗೆ ನೀಡಿದರು. ಮತ್ತೆ ಅಮೆರಿಕನ್ ಗ್ರಂಥಾಲಯದ ಕತೆಯೇನು ಎಂದು ಅಚ್ಚರಿಯಿಂದ ಕೇಳಿದ್ದೆ. ಮುಂದೆ ಯಾವತ್ತಾದರೂ ಮಾಡೋಣ ಬಿಡಿ ಎಂದು ಹಾಯಾಗಿ ಹೇಳಿದರು. ನಂತರ ಸಾವಧಾನವಾಗಿ ಕೂತು, ಪ್ರತಿಯೊಂದು ಪುಸ್ತಕದಲ್ಲೂ ಹಸ್ತಾಕ್ಷರವನ್ನು ದಿನಾಂಕ ಸಮೇತ ಬರೆದು ನನಗೆ ಪುಸ್ತಕಗಳನ್ನು ನೀಡಿದರು. ಹೀಗೆ ‘ಊರು ಕೇರಿ’ (ಆತ್ಮಕತೆ ಸರಣಿ), ‘ಗ್ರಾಮದೇವತೆಗಳು’ ಸೇರಿದಂತೆ ಅವರ ಹಲವು ಕವನ ಸಂಕಲನಗಳು ಅವರಿಂದಲೇ ನನಗೆ ಆಟೋಗ್ರಾಫ್ ಸಹಿತವಾಗಿ ಸಿಕ್ಕಿದ್ದವು.

ನನ್ನ ‘ಹಾಯ್ ಅಂಗೋಲಾ’ ಕೃತಿಯನ್ನು ಓದಿದ್ದ ಸಿದ್ಧಲಿಂಗಯ್ಯ ಅದನ್ನು ಮೆಚ್ಚಿಕೊಂಡಿದ್ದರು. ಹಾಯ್ ಅಂಗೋಲಾ ಸಹಿತವಾಗಿ ಬಹುರೂಪಿ ಪ್ರಕಾಶನದ ಕೃತಿಗಳ ಅಚ್ಚುಕಟ್ಟುತನವು ಅವರಿಗೆ ಬಹಳ ಇಷ್ಟವಾಗಿತ್ತು. ಅಂಗೋಲಾ ಕೃತಿಯನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ತಂದರೆ ಚೆನ್ನಾಗಿರುತ್ತಿತ್ತು ಎಂದು ಅಂದಿದ್ದರು ಕೂಡ. ಹೀಗೆ ದಿಲ್ಲಿಗೆ ಬಂದಿದ್ದಾಗ ನನ್ನ ಅಂಗೋಲಾ ಕೃತಿಯನ್ನು ಹಸ್ತಾಕ್ಷರದ ಸಮೇತ ತೆಗೆದುಕೊಂಡ ಮೇಷ್ಟ್ರು, ಹಸ್ತಾಕ್ಷರದ ಒಂದು ಪ್ರತಿಯನ್ನು ಕಂಬಾರರಿಗೂ ಕೈಯಾರೆ ನೀಡುವಂತೆ ಮಾಡಿದ್ದರು. ಅವರ ಛಾಯೆಯಲ್ಲಿ ಚಂದ್ರಶೇಖರ ಕಂಬಾರ, ಬಾಳಾಸಾಹೇಬ ಲೋಕಾಪುರ, ಸರಜೂ ಕಾಟ್ಕರ್, ಇಂದುಮತಿ ಲಮಾಣಿ, ಅಂಜಲಿ ಬೆಳಗಲ್, ನಾಗರೇಖಾ ಗಾಂವಕರ್, ಡಾ. ಕವಿತಾ ಕುಸಗಲ್ಲ ಸೇರಿದಂತೆ ಹಲವು ಭಾಷೆಗಳ ಹತ್ತಾರು ಪ್ರತಿಭಾವಂತರನ್ನು ಭೇಟಿಯಾಗಿದ್ದು ನನ್ನ ಅವಿಸ್ಮರಣೀಯ ನೆನಪುಗಳಲ್ಲೊಂದು. 

ಸಿದ್ಧಲಿಂಗಯ್ಯರವರ ಸೌಮ್ಯ ಮಾತುಗಳಲ್ಲಿ ಯಾವತ್ತೂ, ಯಾರ ಬಗ್ಗೆಯೂ ದೂಷಣೆ-ದೂರುಗಳನ್ನು ನಾನು ಕೇಳಿದವನಲ್ಲ. ‘ಇಕ್ರಲಾ, ವದೀರ್ಲಾ’, ಅಂತೆಲ್ಲಾ ಆಕ್ರೋಶದ ಸಾಲುಗಳನ್ನು ಬರೆದಿದ್ದ ಕವಿ ನಿಜಕ್ಕೂ ಇವರೇನು ಎಂದು ಅಚ್ಚರಿಯಿಂದ ಕೇಳಬೇಕಾದ ವ್ಯಕ್ತಿತ್ವ ಅವರದ್ದು. ತಮಗಿಂತ ಕಿರಿಯರನ್ನು ಪ್ರೀತಿಯಿಂದ, ಗೌರವದಿಂದ ಮಾತಾಡಿಸುತ್ತಿದ್ದರು. ಬಹುವಚನದಲ್ಲಿ ಸಂಬೋಧಿಸುತ್ತಿದ್ದರು. ಅವರು ದಿಲ್ಲಿಗೆ ಬಂದಾಗಲೆಲ್ಲಾ ನಾನು ಸಂಜೆ ಆಫೀಸು ಮುಗಿಸಿ, ಗುರ್ಗಾಂವ್ ನಿಂದ ದಿಲ್ಲಿಯತ್ತ ಧಾವಿಸುತ್ತಿದ್ದೆ. ನಾವಿಬ್ಬರು ಇಂಡಿಯಾ ಇಂಟನ್ರ್ಯಾಷನಲ್ ಸೆಂಟರಿನಲ್ಲಿ ತಡರಾತ್ರಿಯವರೆಗೂ ಕೂತು, ಹರಟುತ್ತಿದ್ದೆವು. ಆಗೆಲ್ಲಾ ನಾನು ಮರಳಿ ಮನೆಗೆ ಬರುತ್ತಿದ್ದಿದ್ದು ಅರ್ಧರಾತ್ರಿಯ ನಂತರವೇ. ಕೆಲಬಾರಿ ಇದು ಹಲವು ದಿನಗಳ ಕಾಲ ನಿರಂತರವಾಗಿ ನಡೆಯುತ್ತಿತ್ತು.  

ಅಮಿತಾ ಶಾ ಬೆಂಗಳೂರಿಗೆ ಬಂದಾಗ ಹುಟ್ಟಿಕೊಂಡ ವಿವಾದ, ಅದನ್ನವರು ನಿಭಾಯಿಸಿದ ರೀತಿ, ಪ್ರಧಾನಿಗಳೊಂದಿಗಿನ ಸಂಭಾಷಣೆ… ಹೀಗೆ ತಮ್ಮ ಬದುಕಿನ ಹಲವು ಕತೆಗಳನ್ನು ಅವರು ಚಂದಮಾಮ ಪುಸ್ತಕದ ಕತೆಗಳಂತೆ ಹಾಯಾಗಿ ಹೇಳುತ್ತಿದ್ದರೇ ಹೊರತು, ಅದರಲ್ಲಿ ‘ನಾನು, ನನ್ನದು, ನನ್ನ ಸಾಧನೆ’ ಇತ್ಯಾದಿ ಹಮ್ಮು, ಅಹಂಭಾವಗಳಿರಲಿಲ್ಲ. ‘ಏನೋಪ್ಪಾ… ಓದಬೇಕು ಅಂದಾಗ ಓದಿದೆ. ಮನಸ್ಸಿಗೆ ತೋಚಿದಷ್ಟು ಬರೆದೆ. ಆಗಲೂ ಅಷ್ಟೇ. ಈಗಲೂ ಅಷ್ಟೇ. ನಾನು ಶಿಸ್ತಿನಿಂದ ಕೂತು ಬರೆದವನೇ ಅಲ್ಲ’, ಅನ್ನುತ್ತಿದ್ದರು ಸಿದ್ಧಲಿಂಗಯ್ಯ. ಆದರೆ ಅವರ ನಿವಾಸದಲ್ಲಿರುವ ಪುಸ್ತಕ ಸಂಗ್ರಹಗಳ ಬಗ್ಗೆ ಕೇಳಿ ಮತ್ತು ಜೈನ್ ಬುಕ್ ಡಿಪೋದಲ್ಲಿ ನಡೆಸಿದ ಪುಸ್ತಕ ಖರೀದಿಯನ್ನು ನೋಡಿದ ನಂತರ ಅವರ ಓದು ಉಡಾಫೆಯದ್ದಲ್ಲ ಎಂಬುದನ್ನು ನಾನು ಅರಿತುಕೊಂಡಿದ್ದೆ. ಅದು ಅವರ ನಿಗರ್ವಿ ವ್ಯಕ್ತಿತ್ವವಾಗಿತ್ತಷ್ಟೇ. 

ಅವರ ದೇಹಾಂತ್ಯದ ಕೆಲ ದಿನಗಳ ಹಿಂದಷ್ಟೇ ಅವರ ನಿಧನದ ಬಗೆಗಿನ ನಕಲಿ ಸುದ್ದಿಗಳು ಅಲ್ಲಲ್ಲಿ ಹರಡಿಕೊಂಡಿದ್ದವು. ಅವರು ಗುಣಮುಖರಾಗಿ ಬಂದ ನಂತರ ಈ ಬಗ್ಗೆಯೂ ಹಾಸ್ಯಚಟಾಕಿಗಳನ್ನು ಸಿಡಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಅವರ ನೂರಾರು ಕತೆಗಳನ್ನು ಕೇಳುತ್ತಾ ಮನಸಾರೆ ನಕ್ಕವನು ನಾನು. ಅಪರೂಪದ ಸಾಧಕರೊಂದಿಗಿನ ನನ್ನ ಅಷ್ಟೂ ‘ಆಫ್ ದ ರೆಕಾರ್ಡ್’ ಮಾತುಕತೆಗಳಲ್ಲಿ, ಡಾ. ಸಿದ್ಧಲಿಂಗಯ್ಯರವರ ಜೊತೆಗಿನ ಮಾತುಕತೆಗಳು ಎಂದೆಂದಿಗೂ ನನ್ನೊಂದಿಗೆ ಶಾಶ್ವತವಾಗಿ ಉಳಿಯಲಿವೆ. ಅಪ್ಪಟ ಜೀವನಪ್ರೀತಿಯ ಪಾಠಗಳಾಗಿ!  

ಡಾ. ಸಿದ್ಧಲಿಂಗಯ್ಯ ಇನ್ನಿಲ್ಲ ಎಂಬ ಅಧಿಕೃತ ಸುದ್ದಿಯು ಜೂನ್ ಹದಿನಾರರ ಸಂಜೆ ಕಾಡ್ಗಿಚ್ಚಿನಂತೆ ಹರಡಿದ ಬೆನ್ನಿಗೆ, ಹರಿದುಬಂದ ಸಂತಾಪಗಳು ನನ್ನನ್ನು ಆದ್ರ್ರಗೊಳಿಸಿದ್ದವು. ಖ್ಯಾತನಾಮರು, ರಾಜಕಾರಣಿಗಳು, ಶಿಷ್ಯರು, ಓದುಗರು, ಅಭಿಮಾನಿಗಳು, ಹಿರಿಯರು, ಕಿರಿಯರೆನ್ನದೆ ಎಲ್ಲರೂ ತಮ್ಮೊಳಗಿನ ದೀಪದ ಬೆಳಕು ಆರಿಹೋಯಿತೆಂಬಂತೆ ಅವರನ್ನು ನೆನಪಿಸಿಕೊಳ್ಳುತ್ತಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿರುವ ಸಾಧಕನೊಬ್ಬ ಈ ಮಟ್ಟಿಗೆ ಎಲ್ಲರೊಳಗೊಂದಾಗುವುದು ತೀರಾ ಅಪರೂಪವೇ ಸರಿ. ಹೀಗೆ ಸಾಮಾನ್ಯ ಕವಿತೆಯೊಂದರ ಸಾಲುಗಳು ಜನಪದವಾಗುವಂತೆ, ಡಾ. ಸಿದ್ಧಲಿಂಗಯ್ಯ ನಮ್ಮೆಲ್ಲರನ್ನು ತಟ್ಟಿದ್ದು ಸದಾ ನೆನಪಿನಲ್ಲುಳಿಯುವ ಅಚ್ಚರಿಗಳಲ್ಲೊಂದು.  

ಹಸಿವಿನಿಂದ ಸತ್ತೋರು,
ಸೈಜುಗಲ್ಲು ಹೊತ್ತೋರು 
ವದೆಸಿಕೊಂಡು ಒರಗಿದೋರು ನನ್ನ ಜನಗಳು… 
ಪರಮಾತ್ಮನ ಹೆಸರು ಹೇಳಿ
ಪರಮಾನ್ನ ಉಂಡ ಜನಕೆ,
ಬೂಟುಮೆಟ್ಟು ಹೊಲೆದೋರು ನನ್ನ ಜನಗಳು…

ಎಂದು ಬರೆದಿದ್ದರು ಡಾ. ಸಿದ್ಧಲಿಂಗಯ್ಯ. ಒಂದು ಕಾಲದಲ್ಲಿ ಅವರ ಕವಿತೆಯ ಸಾಲುಗಳಲ್ಲಿ ಆಕ್ರೋಶವಿದ್ದಿದ್ದು ನಿಜ. ಆದರೆ ಮಾನವಸಹಜ ಭಾವನೆಯಾದ ಆಕ್ರೋಶದಾಚೆಗೂ ಮೀರಿ, ತನ್ನನ್ನು ತಾನು ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ, ತನ್ನ ಸಮಕಾಲೀನರೊಂದಿಗೆ ಹೊಸ ತಲೆಮಾರಿನೊಂದಿಗೂ ಅವರು ಬೆಸೆದುಕೊಂಡ ಪರಿಯು ಅದ್ಭುತ. 

ಅವರ ಅಗಲಿಕೆಯ ನೋವು ಅಷ್ಟು ಸುಲಭವಾಗಿ ವಾಸಿಯಾಗುವಂಥದ್ದಲ್ಲ!

‍ಲೇಖಕರು Avadhi

June 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: