ಜಯರಾಮಾಚಾರಿ ‘ಸಿಲೋನ್‌ ಡೈರೀಸ್‌’

ಸಿಲೋನ್‌ ಡೈರೀಸ್‌ :

ಆರು ದಿನಗಳ

ಲಂಕಾ ಪ್ರವಾಸ ಪುಟಗಳು

ವಾವ್ ಏನ್ ಗುರು ಹಿಂಗಿದ್ದಾರೆ?!

ಶ್ರೀಲಂಕಾದ ಏರ್ ಪೋರ್ಟಿನ ಎಣ್ಣೆ ಮಾರುವ ಸ್ಟಾಲಿನಲ್ಲಿ ಸೊಂಟ ಪೂರ ತೋರುವ , ತೋರದ ಹಾಗೆ ಕಂದ್ಯಾನ್ ಸ್ಟೈಲಿನಲ್ಲಿ ಸೀರೆ ಉಟ್ಟುಕೊಂಡ ಎಳೆ ಹುಡುಗಿಯರ ಕಮ್ ಎಳೆ ಆಂಟಿಯರ ಕಂಡಾಗ ನಮ್ಮ ಬಾಯಿಂದ ಹೊರಬಿದ್ದ ಉದ್ಘಾರ ಘೋಶ ಇದು. ಬೇಕಾದರೆ ನೀವು ಎಂದಾದರೂ ಶ್ರೀಲಂಕಾಕ್ಕೆ ಭೇಟಿಯಿತ್ತರೆ, ಅಲ್ಲಿನ ಕಂದ್ಯಾನ್ ಕುಮಾರಿಗಳ ನೋಡಿದರೆ, ನಿಮ್ಮಲ್ಲಿ ಸ್ವಲ್ಪ ರಸಿಕತೆ ಉಳಿದಿದ್ದರೆ  ನಿಮ್ಮ ಬಾಯಲ್ಲೂ ಆ ಪದ ಬಾರದಿದ್ದರೆ ಕೇಳಿ. ಸಿಲೋನ್ ನಮ್ಮನ್ನ ಬರಮಾಡಿಕೊಂಡದ್ದೇ ಹಾಗೇ ಕಣ್ಣಲ್ಲೊಂದು ಹೊಳಪು ಎದೆಯಲ್ಲಿ ಹುರುಪು ಹುಟ್ಟಿಸಿ. ಕೊನೆ ದಿನದವರೆಗೂ ಆ ಹುರುಪು ಹೊಳಪು ಬೆರಗು ಹಾಗೆಯೇ ಬದುಕಿದ್ದು, ಇನ್ನೂ ಉಸಿರಾಡುತ್ತಿದೆ.

ಈ ಹುಟ್ಟಿದ ದಿನ ಯಾಕಾದರೂ ಬದುಕಿದ್ದೀನಿ ಅನಿಸಬಾರ್ದು ನೋಡಿ , ಹಾಗಾಗಿ ಬರ್ತ್ ಡೇ ದಿನ ಆದಷ್ಟು ನಗಿಸಿ ಏನಾದರೂ ಸಿಟ್ಟು ಸೆಡುವು ಕೋಪ ಮುನಿಸು ಅಳು ಮುಖವಾದರೆ “ಇವತ್ತು ನೀನು ಹುಟ್ಟಿದ ದಿನ ಪುಟ್ಟ” ಅಂದು ಆದಷ್ಟು ಖುಷಿಯಾಗಿಡುತ್ತಾರೆ. ಮೂರು ವರ್ಷದ ಹಿಂದೆ ನನಗೆ ವಿಚಿತ್ರ ಅನುಭವವಾಗಿತ್ತು ಆಗಷ್ಟೇ ಕೆಲ ತಿಂಗಳ ಹಿಂದೆ ಅಮ್ಮ ಸತ್ತಿದ್ದಳು. ಸ್ನೇಹಿತರು ಕೆಲ ಕಾರಣಕ್ಕೆ ದೂರವಾಗಿದ್ದರು, ಹಳೆ ಗೆಳತಿ ಕೈ ಕೊಟ್ಟಿದ್ದಳು, ಮನೆಯವರು ಇರಲಿಲ್ಲ. ಅವತ್ತು ನನ್ನ ಹುಟ್ಟಿದ ದಿನ. ಈ ಮದ್ವೆ ನಾಮಕರಣ ಸತ್ಯನಾರಾಯಣ ಪೂಜೆ ಗೃಹಪ್ರವೇಶ ಇವೆಲ್ಲ ಕಂಡರೆ ಅಷ್ಟಕ್ಕಷ್ಟೇ ,ಉಸಿರು ಕಟ್ಟುತ್ತೆ, ಇದು ಗೊತ್ತಿರೋ ನನ್ನ ಆಪ್ತ ಮಂದಿ ಹಾಗಾಗೀ ಇಂತ ಸಂಭ್ರಮಕ್ಕೆ ನನ್ನ ದೂರವಿಡುತ್ತಾರೆ. ಹಾಗಾಗಿ ಹುಟ್ಟಿದ ದಿನ ದಿನವಷ್ಟೇ ಹಬ್ಬವಲ್ಲ. ಮೂರು ವರ್ಷದ ಹಿಂದೆ ಸಡನ್ನಾಗಿ ವಿಪರೀತ ಒಂಟಿತನ ಅನಾಥತನ ಶೂನ್ಯ ಭಾವ ಉಕ್ಕಿ ವಿಚಿತ್ರ ಸ್ಥಿತಿ ಅನುಭವಿಸಿದ್ದೆ. ಅವತ್ತೇ ನಿರ್ಧರಿಸಿದ್ದು ಒಂದು ಹುಟ್ಟಿದ ದಿನ ಒಬ್ಬನೇ ಇರಬಾರದು, ಈ ಬೆಂಗಳೂರಲ್ಲಂತೂ ಇರಬಾರದು. ಅವತ್ತಿನಿಂದ ಮೂರು ವರುಷ ಹುಟ್ಟಿದ ದಿನ ಆತ್ಮೀಯರೊಡನೆ ಎಲ್ಲಾದರೂ ಹಾಳಾಗಿ ಹೋಗೋದು ಅಭ್ಯಾಸ , ಶ್ರೀಲಂಕಾದ ಪಯಣಕ್ಕೆ ಇದು ಸಣ್ ಫ್ಲಾಸ್ ಬ್ಯಾಕು.

ಶ್ರೀಲಂಕಾದ ಮುನ್ನ ತಲೆಯಲ್ಲಿದ್ದುದು ಭೂತಾನ್, ಆಮೇಲೆ ಏನೇನೋ ಆಗಿ ಶ್ರೀಲಂಕಾ ಫಿಕ್ಸ್ ಆದದ್ದು. ಮೂರು ತಿಂಗಳ ಪ್ಲಾನು, ಬುಕ್ಕಿಂಗು ( ವಿಶೇಷ ಏನಂದ್ರೆ ನಾವು ನಾಲ್ಕರಲ್ಲೀ ಬಡ್ ಹೈಕ್ಳು ಇಬ್ರುಗೆ ವಿಮಾನ ಪಯಣ ಹೊಸತು, ಅವರ ಸಿರಿ ಸಂಭ್ರಮ ಏನ್ ಕೇಳ್ತೀರಾ. ಎಕ್ಸ್ಟ್ರಾ ದುಡ್ಡು ಕೊಟ್ಟು ವಿಂಡೋ ಸೀಟ್ ಬೇರೇ. ಇಡೀ ಪಯಣದುದ್ದಕ್ಕೂ ಲಾಂಡಿಗು ಟೇಕಾಫು ,ವಿಂಡೋ ,ಮೋಡ ಬೆಂಕಿಪಟ್ಟಣವಾಗುವ ಬಿಲ್ಡಿಂಗ್ಸು ಯಾವುದನ್ನೂ ಬಿಟ್ಟಿಲ್ಲ ಎಲ್ಸವನ್ನೂ ಸೆರೆಹಿಡಿದು ಬಿಟ್ರು) ವೀಸಾ ಎಲ್ಲವೂ ಆಗಿದ್ದು.ನೀವು ಶ್ರೀಲಂಕಾ ನೋಡುವುದಾದಲ್ಲೀ ಒಂದು ಏಳು ದಿನದಿಂದ ಹತ್ತು ದಿನ ಎತ್ತಿಡಿ. ಕನಿಷ್ಟ ತಿಂಗಳ ಮುಂಚೆ ಏರ್ ಬುಕ್ ಮಾಡಿಕೊಳ್ಳಿ. Skyrocket.com ನಲ್ಲೀ ಆಗಾಗ್ಗೆ ಟಿಕೇಟು ರೇಟು ನೋಡಿಕೊಳ್ಳಿ, alert ಇಟ್ಟುಕೊಂಡರೆ ರೇಟು ಬಿದ್ದೊಡನೆ notification ಬರುತ್ತದೆ ಕಮ್ಮಿ ರೇಟಿಗೆ ಬುಕ್ ಮಾಡಿಕೊಳ್ಳಿ. ಹೋಟೇಲು ದುಬಾರಿಯಿಲ್ಲ ಹಾಗಾಗಿ ಹಾಸ್ಟೆಲ್ ಬದಲು ಹೋಟೆಲ್ ಬುಕ್ ಮಾಡಿಕೊಳ್ಳಿ. ದುಡ್ಡು ತೀರ ಕಮ್ಮಿಯಿದ್ದಲ್ಲಿ airbnb ಲೀ ಹಾಸ್ಟೆಲು ರೂಮು ಮಾಡಿಕೊಳ್ಳಿ.ಬಾಂಬ್ ಬ್ಲಾಸ್ಟಿನ ನಂತರ ವೀಸಾ process ಸ್ವಲ್ಪ ಬಿಗಿಯಾಗಿದೆ. Lanka eta website ಲೀ ವೀಸಾ apply ಮಾಡಿಕೊಳ್ಳಿ ಕನಿಷ್ಟ ಡೀಟೇಲ್ಸ್ ಕೇಳುತ್ತದೆ. ಎರಡು ದಿನಕ್ಕೆ ವೀಸಾ ಸಿಗುತ್ತದೆ 1500 ರೂ ಗೆ . On arrival ಆದರೆ ಒಸಿ ಹೆಚ್ಚು ಜೊತೆಗೆ ಟೈಮು ಕೂಡ ಖರ್ಚಾಗುತ್ತೆ. ಇಷ್ಟಾದರೆ ಶ್ರೀಲಂಕಾ ನಿಮ್ಮನ್ನು ಬಾಚಿ ತಬ್ಬಿಕೊಳ್ಳುತ್ತೆ ಥೇಟು ಪ್ರೀತಿ ತುಂಬಿದ ಪ್ರೇಯಸಿಯಂತೆ ನಿಮ್ಮ ತಬ್ಬುಗೆ ಮೇಲೆ ಬಿಟ್ಟಿದ್ದು ನಿಮ್ಮ ಯಾನ.

ನಮ್ ಹತ್ರ ಟೈಮ್ ಇದ್ದದ್ದು ತೀರಾ ಕಮ್ಮಿ . ಆರು ದಿನ ಐದು ಹೋಟೇಲು, ಬರೋಬ್ಬರೀ 900ಕಿಮೀ ದೂರ. ಕಮ್ಮಿ ನಿದ್ದೆ ಜಾಸ್ತಿ ಓಡಾಟ ಇದು ನಮ್ಮ ಪ್ಲಾನಾಗಿತ್ತು. ದೇಶದ ಸಂಸ್ಕೃತಿ. Flavour ಅನ್ತಾರಲ್ಲ ಅದನ್ನ ಅನುಭವಿಸೋದು ನಮ್ಮ ಉದ್ದೇಶವಾಗಿತ್ತು ಸೈಟ್ ಸೀಯಿಂಗಲ್ಲ.

ದಿನ 1

15-07-2019

ಕೊಲೊಂಬೊ-ನಿಗೋಂಬೋ

ಕೊಲೊಂಬೊಗೆ ಇಳಿದಾಗ ರಾತ್ರಿ ಏಳುವರೆಯಾಗಿತ್ತು ನಮ್ಮಲ್ಲೊಬ್ಬ ಹೆವೀ ಶೋಕಿಲಾಲ ಬೆಂಗಳೂರಲ್ಲೀ ಕರೆನ್ಸಿ ಎಕ್ಸ್ ಚೇಂಜ್ ಮಾಡದೇ ಕೊಲಂಬೋದಲ್ಲೇ ಮಾಡಿಸಲು ಓಡಾಡಿದ. ಬಡ್ಡಿಮಗಂದು ಅವನ ಅದೃಷ್ಟಕ್ಕೆ ಒಳ್ಳೇ ರೇಟೇ ಸಿಕ್ಕು ನಾವು ಮಿಕ್ಕ ಮೂವರು ಹೊಟ್ಟೆ ಉರುಕೊಂಡಿದ್ದಾಯ್ತು. ಅಲ್ಲೇ ಲೋಕಲ್ ಸಿಮ್ ಪಡೆದು ಹೋಟೆಲಿನವನಿಗೆ ಕಾಲ್ ಮಾಡಿದರೆ ನಮ್ಮನ್ನು ಪಿಕ್ ಮಾಡಲು ಆಗಾಗಲೇ ಬೋಡಾ ಡ್ರೈವರು ರೆಡಿಯಾಗಿದ್ದ ,ಥೇಟು ಅರವಿಂದ ಡಿಸಿಲ್ವ ತರ ಇದ್ದ. ಪರಿಚಯವಾದೊಡನೆ ನಾವು ಕೇಳಿದ ಪ್ರಶ್ನೆ ಇವಾಗ ಎಲ್ಲ ನಾರ್ಮಲ್ ಆ? ಹೌದು , ಇನ್ನೂ ಬಾಂಬ್ ಬ್ಲಾಸ್ಟು ಆಗಿ ಎರಡು ತಿಂಗಳೂ ಆಗಿಲ್ಲ ಯಾವನಾದ್ರೂ ಬಾಂಬ್ ಹಾಕಿಬಿಟ್ಟರೆ ಏನ್ ಕತೆ. ಒಬ್ಬ ಬಿಟ್ಟು ಮಿಕ್ಕ ಮೂವರು ಬ್ಯಾಚುಲರ್ಸು. ಹಂಗೆ ಸ್ವರ್ಗ ಸೇರ್ಕೊಂಡ್ ಬಿಟ್ರೆ ಮನ್ಮಥದೇವ ಸುಮ್ನೆ ಇರ್ತಾನಾ?!

ನಮ್ ಅರವಿಂದ ಡಿಸಿಲ್ವ ಬಾಳ ಲವಲವಿಕೆ ಮನುಷ್ಯ ಶ್ರೀಲಂಕಾದಲ್ಲೀ ಯಾವ ಕಾರು ಕಾರ್ಖಾನೆ ಇಲ್ಲದೇ ಪ್ರತಿ ಕಾರು ಎಷ್ಟು ದುಬಾರಿ ಎಂದು ಹೇಳಿದ ನಾವು ಪ್ರತಿ ಕಾರು ಬೆಲೆ ಕೇಳಿದಾಗಲೂ ಓ ಅನ್ತಾ ನಮ್ಮಲ್ಲೀ ಎಷ್ಟು ಚೀಪು ಅಂತ ಬೀಗುವಾಗ ಅವನು ಓ ಅಂತಿದ್ದ. ಒಂದು ಆಟೋ ಬೆಲೆ ಬರೋಬ್ಬರೀ ಒಂಭತ್ತು ಲಕ್ಷ ಅಲ್ಲಿ. ಕಾರಣ ಎಲ್ಲ ವೆಹಿಕಲುಗಳು imported. ನಮ್ ಅರವಿಂದ ಡಿಸಿಲ್ವ ನಗ್ತಾ ನಗ್ತಾ ಮಾತಾಡ್ತ “ಈ ಚರ್ಚಲ್ಲೇ ನೋಡಿ ನಿಗೊಂಬೋದಲ್ಲೀ ಬಾಂಬ್ ಬ್ಲಾಸ್ಟ್ ಆಗಿದ್ದು “ ಅಂತ ನಮಗೆ ಬಾಂಬಿಟ್ಟ. ಅವನು ಹಾಗಂದೊಡನೆ ನಾಲ್ಕು ಜನ ಒಬ್ಬರೊನ್ನಬ್ಬರು ನೋಡಿಕೊಂಡು ಮೌನ ಶ್ರಧ್ದಾಂಜಲಿ ಅರ್ಪಿಸಿಕೊಂಡೆವು. ಅರವಿಂದ ಡಿಸಿಲ್ವನಿಗೆ ಒಂದೇ ಬೇಜಾರು ಈ ಸಲ ಇಂಡಿಯಾ ಸೆಮಿಫೈನಲೀ ಲಿ ಸೋತಿದ್ದು. ಪಾಪ ಅತ್ತೇ ಬಿಡ್ತಿದ್ದ ನಮ್ ಅದೃಷ್ಟಕ್ಕೆ ಹೋಟೇಲ್ ಬಂತು. ಆಮೇಲೆಯೇ ಗೊತ್ತಾಗಿದ್ದು ನಮ್ ಡಿಸಿಲ್ವ ಡ್ರೈವರ್ ಅಲ್ಲ ಆ ಹೋಟೇಲಿನ ಮಾಲೀಕರಲ್ಲೊಬ್ಬ. ಅರೇ ಇಸ್ಕೀ! ಇದು ಶ್ರೀಲಂಕಾ !!ಅತಿಥಿಗಳನ್ನ ಆದರಿಸುವ ಪರಿ. ಹಮ್ಮು ಇಲ್ಲದ ಬಿಮ್ಮು ಇಲ್ಲದ ಶ್ರೀಲಂಕ ನಮಗೆ ಆ ಕ್ಷಣವೇ ಇಷ್ಟವಾಗೋಯ್ತು.

ನಮ್ಮ ಗುಂಪಿನಲ್ಲಿ ಮೋಹನ್ ಎಂಬ ಸ್ವಪ್ರೇಮಿಯೊಬ್ಬ ಇದ್ದ. ಸೆಲ್ಫಿ ಪೋಟೋ ಹುಚ್ಚು ಮುಂಡೇದುಕ್ಕೆ. ಬೇಕಾದರೆ ಊಟ ಬಿಟ್ಟಿರುತ್ತಾನೆ ಡಾಟಾ- ಪೋಟ ಬಿಟ್ಟಿರೊಲ್ಲ. ಹೋಟೇಲಿಗೆ  ಹೋದೋಡನೆ ಅವ ಕೇಳಿದ್ದು ವೈಫೈ ಉಂಟಾ? ಹಾಗೇ ಕೇಳಿದ್ದೊಡನೆ ಸಭ್ಯ ನಾವು ಮೂವರು ಅವನ ಬಯ್ಯುವಂತೆ ನೋಡಿ ಹವಾ ಮೆರೆದಿದ್ದಾಯ್ತು. ಆದರೆ ಹೋಟೇಲಿನವ ವೈಫೈ ಪಾಸ್ ವರ್ಡು ಕೊಟ್ಟೊಡನೆ ಎಲ್ಲರೂ ಕುಟ್ಟತೊಡಗಿದೆವು. ನಮ್ ಮೋಹನ “ತೂ ನನ್ಮಕ್ಕಳ “ ಅಂತ ವಿದೇಶದಲ್ಲಿ ನಮ್ಮನ್ನ ಉಗಿದ.

ದಿನ 2 

16-07-2019

ನಿಗೊಂಬೋ-ಅನುರಾಧಪುರ-ಸಿಗಿರಿಯಾ

ನಿಗೋಂಬೋ ಶ್ರೀಲಂಕಾದ ಪಶ್ಚಿಮ ಕಡಲತೀರ, ಡಚ್ಚರ ಆಳ್ವಿಕೆಯಿದ್ದ ಭೂಮಿ. ಆ ಕಾಲಕ್ಕೆ ನಿರ್ಮಿಸಿದ್ದ ಹ್ಯಾಮಿಲ್ಟನ್ ಕ್ಯಾನಲ್ ಕೊಲಂಬೋದ ದಕ್ಷಿಣ ತುದಿ ಸೇರುತ್ತದೆ. ಇತ್ತೀಚೆಗೆ ಪಾಪಿಗಳ ತೆವಲಿಗೆ ತುತ್ತಾದ ಸೆಬಿಸ್ಟಿಯನ್ ಚರ್ಚು ಕೂಡ ಇದೆ. ಪ್ಲೇನ್ ಪಯಣ ಮತ್ತು ಇರ್ರೆಗುಲರ್ ಊಟದಿಂದ ಸಡನ್ನಾಗಿ ಬದಲಾದ ವಾತಾವರಣ ನೀರಿನಿಂದ ನಮ್ಮ ಬಾಡಿ ಊಸ್ಟಾಗಿ ಹಿಂದಿನ ರಾತ್ರಿ ಉಂಡೊಡನೆ ನಿದ್ರಾದೇವಿ ತಬ್ಬಿ ಮುದ್ದಾಡಿ ಹೊರಳಾಡಿಸಿಬಿಟ್ಟಿದ್ದಳು. ಅದಕ್ಕೆ ಬೆಳಗ್ಗೆ ಎದ್ದೊಡನೆ ಭಯಂಕರ ಉತ್ಸಾಹ ಚಿಲುಮೆ.

ಈ ಪ್ರತಿ ಟೂರಿನಲ್ಲೂ ಇಂತ ಒಬ್ಬ ಆಸಾಮಿ ಇರ್ತಾನೆ ರಾತ್ರಿ ಎಷ್ಟ್ ಗಂಟೆಗೆ ಮಲ್ಕೊಂಡ್ರು ಬೆಳಗೆ ಮಾತ್ರ ಆರಕ್ಕೆ ಎದ್ದು ಮಿಕ್ಕವರನೆಲ್ಲ ಗೋಳುಯ್ದು ಎದ್ದೇಳಿಸೋನು. ಸಚಿನ್, ಆತರದ ಆಸಾಮಿ ಬೆಳಗ್ಗೇನೆ ಎದ್ದು ನಮ್ಮ ಸುಮಧುರ ನಿದ್ದೆ ಕೆಡಿಸಿ, ಸಮುದ್ರ ತೀರಕ್ಕೆ ಕರೆದೊಯ್ದು ದೊಡ್ಡದೊಂದು ವಾಕು ಮಾಡಿಸಿದ. ಒಂದಿಪ್ಪತ್ ನಿಮಿಷ ಕಡಲ ದಡದೀ ಕುಳಿತು ಉಕ್ಕಿ ಬರೋ ಅಲೆಗಳನ್ನ, ಅಲ್ಲೆಲ್ಲೊ ತೇಲೋ ಹಡಗನ್ನ, ಅಲೆಯೊಡನೆ ಆಡೋ ಏಡಿಗಳನ್ನ, ಶ್ರೀಲಂಕಾದ ಜಾನಪದ ಹಾಡುತ್ತ ಮೀನು ಬಿಡಿಸುತ್ತಿದ್ದ ಮೀನುಗಾರರನ್ನ, ಟೈಟು ಟ್ರಾಕು ಟೀ ಶರ್ಟು ಹಾಕಿ ಬೆವರು ಬಿಟ್ಟು ಉಸಿರು ಬಿಡುತ್ತಾ ಓಡುತ್ತಿದ್ದ ಮಧ್ಯ ವಯಸ್ಕನನ್ನ ನೋಡುತ್ತ ಕೂತಿದ್ದೆವು ಗ್ಯಾಪಲ್ಲೊಂದು ಅಷ್ಟು ಫೋಟೋ ಸೆಲ್ಫಿಗಳು. ನಮ್ ಅದೃಷ್ಟಕ್ಕೆ ಚೆನ್ನೈ ಬೀಚುಗಳ ತರ ಕುಕ್ಕರುಗಾಲ್ಲೀ ಕೂತು ಅಂಡು ತೋರಿಸುವರಿರಲಿಲ್ಲ. ಆ ಮಟ್ಟಿಗೆ ಬೀಚು ಇನ್ನೂ ಪವಿತ್ರವಾಗಿತ್ತು. ವಾಪಾಸು ಹೋಟೇಲಿಗೆ ಬಂದರೆ ನಾವು ಡ್ರೈವರು ಅಂದುಕೊಂಡಿದ್ದ, ಹೋಟೇಲ್ ಮಾಲೀಕರಲ್ಲೊಬ್ಬರಾದ ನಮ್ ಅರವಿಂದ ಡಿಸಿಲ್ವ ಡೀಸೆಂಟಾಗಿ ಕನ್ನಡಕ ಹಾಕೊಂಡು ಪೇಪರ್ ಹರಡಿಕೊಂಡು ಓದುತ್ತಿದ್ದ.ನಾವು ಬಂದುದು ನೋಡಿ ಚೆಂದದೊಂದು ಸ್ಮೈಲು ಬಿಟ್ಟ. ರೂಮಿಗೆ ಹೋಗೋ ಟೈಮಲ್ಲೀ ಎದುರು ಬಂದ ಡಿಸಿಲ್ವನ ಮಗಳು “ಹಾಯ್” ಅಂದಾಗ ನಮ್ಮ ಜೀವ ಹಾರಿಹೋದದ್ದಂತೂ ಸುಳ್ಳಲ್ಲ. ಬರೀ ಜೀನ್ಸು ಟೀಶರ್ಟು ಎಣ್ಣೆ ಮುಖ ಕರ್ಲೀ ಕೂದಲಿನಲ್ಲೂ ಸಹ ಅಷ್ಟು ಸುಂದರವಾಗಿ ಕಾಣಲು ಹೇಗೆ ಸಾಧ್ಯ. ರೂಮಿಗೆ ಹೋದೊಡನೆ ನಮ್ಮ ಬಾಯಿಂದ ಬಿದ್ದ ಏಕೈಕ ವಾಕ್ಯ “ ಏನ್ ಫಿಗರ್ ಗುರು?”

ಶ್ರೀಲಂಕಾದ ದಿ ಮೋಸ್ಟ್ ಫೇಮಸ್ ವೆಹಿಕಲ್ಲು ಅಲ್ಲಿನ ಟುಕ್ ಟುಕ್, ಟುಕ್ ಟುಕ್ ಎಂದ್ರೆ ಅಲ್ಲಿನ ಆಟೋಗಳು ನಮ್ಮ ಆಟೋಗಿಂತ ಒಸಿ ದೊಡ್ಡದಾದ ಮಜಭೂತು ಆಟೋಗಳು. ಬಹುಶಃ ಅದರಿಂದ ಬರೋ ಟುಕು ಟುಕು ಸದ್ದಿನಿಂದ ಅವನ್ನ ಟುಕ್ ಟುಕ್ ಅನ್ನಕೆ ಶುರು ಮಾಡಿರಬಹುದು.ಹೋಟೆಲಿಗೆ ಕೈ ಮುಗಿದು ಮನಸ್ಸಲ್ಲೇ ಡಿಸಿಲ್ವ ಮಗಳಿಗೆ ಟಾಟಾ ಹೇಳಿ ಆಟೋ ಹತ್ತಿ ಬಸ್ ಸ್ಟಾಪಿಗೆ ಬಿಸಾಕಪ್ಪ ಅಂದ್ವಿ. ಬಸ್ಸು ಸ್ಟಾಪು ಇನ್ನೇನೋ ಬರುವಾಗ ಎಲ್ ಹೋಗ್ತಾ ಇದ್ದೀರಿ ಅಂದ. ಅನುರಾಧಪುರ ಅಂದ್ವಿ. ಸಕತ್ ಟೆನ್ಸನ್ ಇಂದ ಅದೇನೋ ಅಂದ ನಾವು ಕೂಡ ಟೆನ್ಸನ್ ಆದ್ವೀ ಆಮೇಲೆ ಗೊತ್ತಾದುದು ಅನುರಾಧಪುರಕ್ಕೆ ಮೇನ್ ರೋಡಿಂದಲೇ ಬಸ್ಸಿವೆ ಈಗ ಇಲ್ಲಿಂದ ಡೈರೆಕ್ಟು ಸಿಗೊಲ್ಲ  ಅಂತ ಹೇಳಿ ಅವನೇ ಪಾಪ ಬಸ್ ಸ್ಟಾಪಿನ ಒಳಬಂದು ಬರೀ ಪಾರಿನ್ನರೇ ಇದ್ದ ಟೂರಿಸ್ಟ್ ಬಸ್ ಗೆ ಹತ್ತಿಸಿ ಹೋದ. ಟೂರಿಸ್ಟ್ ಬಸ್ಸಲೀ ನನ್ನ ಪಕ್ಕ ಪಾರೀನು ಅಮ್ಮ ಮಗಳು. ಹಿಂದೆ ಮೋಹನನ ಹತ್ತಿರ ಆಗಷ್ಟೇ ಮದುವೆ ಆಗಿಯೋ ಇಲ್ಲ ಲವ್ವಾಗಿಯೋ ಫುಲ್ಲು ರೊಚ್ಚಿಗೆದ್ದ ಭಯವಿಲ್ಲದ ಶ್ರೀಲಂಕಾ ಜೋಡಿ. ಇಡೀ ಜರ್ನಿಯಲ್ಲೀ ಅವರ ರೊಚ್ಚು ನೋಡಿ ನಮ್ ಮೋಹನ ಬೆಚ್ಚಿ ಬಿದ್ದಿದ್ದ. ಪುಣ್ಯಕ್ಕೆ ಮುಂದೆ ಸ್ಟಾಪಿನಲ್ಲೀ ಆಂಟಿಯೊಬ್ಬರು ಹತ್ತಿದಾಗ ಅವರಿಗೆ ಸೀಟು ಬಿಟ್ಟು ಮಾನವೀಯತೆ ಮೆರೆದ. ನಮ್ಮ ನೋಡಿದ ತಕ್ಷಣ “Are you from India” ಅಂದ್ರು ನಾವೆಲ್ಲ ಒಟ್ಟಿಗೆ ya ya ಅಂದುಬಿಟ್ವಿ. ಬುದ್ಧನ ಭೂಮಿಯಾದ್ದರಿಂದ ಭಾರತೀಯರ ಕಂಡರೆ ಶ್ರೀಲಂಕಾದವರಿಗೆ ತುಂಬಾ ಇಷ್ಟ & ಗೌರವ. ಬಹುಶಃ ಪ್ರಪಂಚದಲ್ಲೀ ಭಾರತೀಯರಿಗೂ ಮರ್ಯಾದೆ ಕೊಡುವ ಏಕೈಕ ದೇಶ ಶ್ರೀಲಂಕಾವಿರಬಹುದು. ಸೀಟು ಬಿಟ್ಟ ಖುಷಿಗೆ ಆಂಟಿ ದಾರಿಯುದ್ದಕ್ಕೂ ಅಲ್ಲಿನ ಲೋಕಲ್ ಹಣ್ಣು ಕೊಟ್ಟು ಪ್ರಯಾಣವನ್ನು ಸಿಹಿಗೊಳಿಸಿದರು.

ಜಿಯೋಸಿಲಾ:

ಶ್ರೀಲಂಕಾದ ಯಾವುದೇ ಬಸ್ ಹತ್ತಿದರೂ ನಿಮಗೆ ಸಂಗೀತದ ಹಬ್ಬವೇ. ಪ್ರತಿ ಬಸ್ಸಿನಲ್ಲೂ ಸಿಂಹಳ ಅಥವಾ ತಮಿಳು ಗೀತೆಗಳು ಕೇಳಿಬರುತ್ತವೆ. ನಾವು ಹತ್ತಿದ ಅನುರಾಧಪುರದಲ್ಲೀ ಅಲ್ಲಿನ ಎಫ್ ಎಂ ಒಂದರ ಮ್ಯೂಸಿಕ್ concert ನ ರೆಕಾರ್ಡೆಡ್ ವಿಡಿಯೋ ಹಾಕಿದ್ದರು. ಅದರಲ್ಲೇ ನಮಗೆ ಜಿಯೋಸಿಲಾನ ಪರಿಚಯವಾದುದ್ದು. ನೋಡಲು ಎಷ್ಟು ವಿಚಿತ್ರವೋ ಅಷ್ಟೇ ವಿಚಿತ್ರ ಅವನ ಕಂಠ.ನೀವು ಬೇಕಾದರೆ ಯೂಟೂಬಿನಲ್ಲೀ ಅವನ ಕಾಣಬಹುದು ಆ ಗಡ್ಡ ಆ ಕನ್ನಡಕ ಆ ಪಂಚೆ ಆ ಕಂಠ. ನಮಗೆ ವಿಚಿತ್ರವಾಗಿ ಕಾಣುವ ಜಿಯೋಸೀಲಾ ಅಲ್ಲಿನವರೆಗೆ ಹಾಟ್ ಫೇವರೆಟ್ ಸಿಂಗರ್. ಬಸ್ಸಿನಲ್ಲಿ ಗಾಬರಿಗೊಳಿಸಿದ್ದ ಇನ್ನೊಂದು ಹಾಡೆಂದರೆ ರಣಬೀರ ಕಪೂರ್-ದೀಪಿಕಾ ಪಡುಕೋಣೆಯ “ಹೇ ಕಬೀರಾ” ಹಾಡನ್ನು ಅವರು ಡಬ್ ಮಾಡಿಬಿಟ್ಟಿದ್ದರು.

ಗುರುಪೂರ್ಣಿಮಾ ಮತ್ತು ಐಸ್ ಕ್ಯಾಂಡಿ:

ಶ್ರೀಲಂಕಾದಲ್ಲಿ ಬೌದ್ಧ ಧರ್ಮದವರೇ ಹೆಚ್ಚು. ಬುದ್ಧ ಹಾಗೂ ಅವನ ಮೌಲ್ಯಗಳನ್ನು ಶಿಸ್ತಿನಿಂದ ಪಾಲಿಸುವ ಪ್ರೀತಿಸುವ ದೇಶ. ನೀವೇನಾದರೂ ಶ್ರೀಲಂಕಾವನ್ನು ಬೌದ್ಧ ಧರ್ಮದ ಹಬ್ಬಗಳಲ್ಲೀ ಭೇಟಿ ಇತ್ತರೆ ಡಬಲ್ ಧಮಾಕ. ಅಲ್ಲಿನ ಪ್ರತೀ ದೇವಾಲಯ ರಾತ್ರಿ ಹತ್ತರವರೆಗೂ ತೆರೆದಿರುತ್ತದೆ. ಎಲ್ಲೆಲ್ಲೂ ಬಿಳಿ ವಸ್ತ್ರ ತೊಟ್ಟವರೇ ಸಿಗುತ್ತಾರೆ. ಪ್ರತೀ ರೋಡಿನಲ್ಲೂ ಮೆಡಿಸನ್ ಕಾಫಿ ಹಾಗೂ ಐಸು ಕ್ಯಾಂಡಿ ಹಂಚುವವರಿರುತ್ತಾರೆ ಜೊತೆಗೆ ಸರ್ಕಾರಿ ರಜೆ ಬೇರೆ. ಪ್ರತಿ ಗಾಡಿ ನಿಲ್ಲಿಸಿ ಐಸ್ ಕ್ಯಾಂಡಿಗಳನ್ನ ಹಂಚುತ್ತಿರುತ್ತಾರೆ. ನಮಗೂ ನಾಲ್ಕು ಐಸು ಕ್ಯಾಂಡಿ ಕೊಟ್ಟ ಡ್ರೈವರಪ್ಪ ಚೀಪಿಕೊಂಡು ಕೂತ್ಕೊಳ್ಳಿ ಅಂತ

ಅನುರಾಧಪುರ:

ಒಂದು ಕಾಲಕ್ಕೆ ಸಿಂಹಳೀಯ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಅನುರಾಧಪುರದಲ್ಲೀ ಅಲ್ಲಿನ ವೈಭೋಗದ ಕುರುಹುಗಳನ್ನ ನೋಡಬಹುದು. ಬರೋಬ್ಬರೀ 36 ಕಿಮೀ ಗೆ ಹರಡಿರುವ ಅನುರಾಧಪುರ ಸದ್ಯ World heritage site ಕೂಡ ಹೌದು. ಬೌದ್ಧಧರ್ಮದ ಒಂದು ಪ್ರಕಾರವಾದ ‘ತೇರವಾದ’ದ ಪ್ರಮುಖ ಕೇಂದ್ರವಾಗಿತ್ತು.

ಸಮಯ ಕಮ್ಮಿಯಿದ್ದರಿಂದ ಕೇವಲ ರುವಾನವೇಲಿಸಿಯಾದ ಬೌದ್ಧ ಸ್ಥೂಪವಷ್ಟೇ ನೋಡಲಾಗಿದ್ದು. ಚೋಳ ದೊರೆ  ಎಲ್ಲಾನನ್ನ ಸೋಲಿಸಿದ ಸ್ಮರಣೆಗೆ ರಾಜ ದೂತುಹೇಮನು 140BC ಲೀ ಕಟ್ಟಿದ ಅರ್ಧ ಗೋಳಾಕೃತಿಯ ಬೆಳ್ಳನೆಯ ಸ್ಥೂಪ. ನೀವೇನಾದರೂ ಶ್ರೀಲಂಕಾವನ್ನು ಸೈಟ್ ಸೀಯಿಂಗ್ ಅಲ್ಲದೇ ಅಭ್ಯಸಿಸಬೇಕಾದರೆ ಅನುರಾಧಪುರದಲ್ಲೀ ಒಂದು ವಾರವಿರಬಹುದು ಅಷ್ಟು ದೊಡ್ಡ ಪ್ರದೇಶ. ಹೆಚ್ಚು ಕಮ್ಮಿ ನಮ್ಮ ಹಂಪಿಯನ್ನೇ ಹೋಲುತ್ತದೆ.

ಮಿಹಿಂತಲೇ:

ಪ್ಲಾನ್ ಪ್ರಕಾರ ನಾವು ಪೊಲಾನುವರಕ್ಕೆ ಹೋಗಬೇಕಿತ್ತು. ಆದರೆ ಅನುರಾಧಪುರ ನೋಡುವಷ್ಟರಲ್ಲೀ ಸಮಯವಾಗಿತ್ತು. ಶ್ರೀಲಂಕಾದಲ್ಲೀ ನೀವು ಹರಿಬರೀಯಲ್ಲೀ ಓಡಾಡಲಿಕ್ಕೆ ಸಾಧ್ಯವಾಗೋದಿಲ್ಲ, ಅಲ್ಲಿನ ಸಾರಿಗೆ ವ್ಯವಸ್ಥೆ ಹಾಗಿದೆ. ಬಸ್ಸು ಎಲ್ಲ ಕಡೆ ಸಿಕ್ಕರೂ ಅರ್ಧ ಗಂಟೆ, ಇಪ್ಪತ್ತು ನಿಮಿಷಕ್ಕೊಂದಿವೆ.ರೋಡು ಚೆನ್ನಾಗಿದ್ದರೂ, ಸ್ಪೀಡ್ ಬ್ರೇಕ್ ಇಲ್ಲದಿದ್ದರೂ ಬಸ್ಸು ನಿಧಾನವಾಗಿ ಹೋಗಲು ಏಕೈಕ ಕಾರಣ ಕಡಿದಾದ ಚಿಕ್ಕದಾದ ರೋಡುಗಳು. ಹಾಗಾಗಿ ಬಸ್ಸನ್ನು ಜಾಸ್ತಿ ನೆಚ್ಚಿಕೊಳ್ಳಲಾಗದು. ಬಸ್ಸ್ ಬಿಟ್ಟರೆ ರೈಲು ಸಾರಿಗೆ ಚೆನ್ನಾಗಿದ್ದರೂ ಇಡೀ ದೇಶಪೂರ್ತಿ ಕನೆಕ್ಟಿಂಗ್ ಇಲ್ಲ. ಕೆಲವು ಪ್ರಮುಖ ಸ್ಥಳಗಳಿಗಷ್ಟೇ ರೈಲು ಸಂಪರ್ಕ. ಅಲ್ಲಿ ಯಾವಾಗ ಬೇಕಾದರೂ ಸಿಗುವ ಏಕೈಕ ಸಾರಿಗೆ ಟುಕ್ ಟುಕ್. ಬೇರೆ ದೇಶದವರೆಂದರೆ ನಮ್ಮ ಆಟೋ ಡ್ರೈವರುಗಳಿಗಿಂತ ಹೆಚ್ಚಾಗಿ ಮುಂಡಾಯಿಸುವುದರಲ್ಲೀ ಪರಿಣಿತರು. ಅಗ್ಗ ಜಗ್ಗಾಡಿ ಒಂದು ರೇಟಿಗೆ ಕುದುರಿಸಿ ಆಮೇಲೆ ಹತ್ತೊದು ವಾಸಿ. ಇವು ಮೂರು ಬಿಟ್ಟರೆ ಕ್ಯಾಬ್ ಸಾರಿಗೆ ತುಂಬ ಆರಾಮ ಪ್ರಯಣಕ್ಕೆ ಹೇಳಿಮಾಡಿಸಿದಂತಿದೆ ಆದರೆ ಸಕತ್ ಕಾಸ್ಟ್ಲೀ ನೀವು ನೂರು ರೂಪಾಯಿಗೆ ತಲುಪಬಹುದಾದ ಸ್ಥಳಕ್ಕೆ ಕ್ಯಾಬಿನಲ್ಲಿ ಏನಿಲ್ಲವೆಂದರೂ 1500 ಕೊಡಬೇಕು. ಕಾರಣ imported ಗಾಡಿಗಳ ರೇಟೇ ಜಾಸ್ತಿ.

ಪೊಲಾನುವರಕ್ಕೆ ಹೋಗೋದು ಅಲ್ಲಿಂದ ಸಿಗಿರಿಯಾ ಸೇರೋದು ಓವರ್ ರಿಸ್ಕ್ ಆದ್ದರಿಂದ ಮಿಹಿಂತಲೇ ಗೆ ಟುಕ್ ಟುಕ್ ಲೀ ಹೊರಟೆವು.

ನಿಗ್ರೋಧ ಎಂಬ ಬೌದ್ಧ ಭಿಕ್ಕುವಿನಿಂದ ಬೌದ್ಧ ಧರ್ಮಕ್ಕೆ ಅಶೋಕನ ಮಗ ತೇರಾ ಮಹಿಂದ ಸೇರುತ್ತಾನೆ. ಈ ತೇರಾ ಮಹಿಂದ ಇಲ್ಲಿಂದ ಹೊರಟು ಶ್ರೀಲಂಕಾದ ಅನುರಾಧಪುರದ ಬಳಿಯಿದ್ದ ರಾಜ ದೇವನಾಂಪಿಯ ತಿಸ್ಸನನ್ನ ಅಲ್ಲಿಯ ಒಂದರ ಬೆಟ್ಟದ ಬಳಿ ಭೇಟಿಯಾಗುತ್ತಾನೆ ಆ ಸ್ಥಳವೇ ಇಂದು ಮಿಹಿಂತಲೇ ಆಗಿದೆ. ಸುಮಾರು ಮೂರು ಸಾವಿರ ಮೆಟ್ಟಿಲಿನ ಬೆಟ್ಟ ಬೆಟ್ಟದ ಮೇಲೊಂದು ಸ್ಥೂಪ ಹಾಗೂ ಶಾಂತ ಚಿತ್ತ ಬುದ್ಧನ ಸುಂದರ ಪ್ರತಿಮೆಯಿದೆ. ಸ್ಥೂಪದಿಂದ ಫೋಟೋ ತೆಗೆದರೆ ಬುದ್ಧ ಹಿಂದಿನ ಹಸಿರು ಬೆಟ್ಟ ಗುಡ್ಡಗಳ ಸಾಲು ಕೂಡಿ ಅದ್ಭುತವಾಗಿ ಕಂಡುಬರುತ್ತದೆ.

ಮಿಹಿಂತಲೇ ಲಗ್ಗೇಜು ಸಮೇತ ಹೋದ್ದರಿಂದ ಅದನ್ನ ಬೇತಾಳನಂತೆ ಹೊತ್ತುಕೊಂಡು ಹೋಗುವುದು ಮಿಷನ್ ಇಂಪಾಸಿಬಲ್. ಆ ಸಮಯದಲ್ಲೀ ನಮಗೆ ಸಿಕ್ಕಿದ್ದೇ “ಪಾಟಿ” ತಮಿಳಜ್ಜಿ. ನಮ್ಮ ಟುಕು ಟುಕು ಡ್ರೈವರು ರಿಕ್ವೆಸ್ಟ ಮಾಡಿದ್ದಕ್ಕೆ ಅಜ್ಜಿ ನಗು ನಗುತ್ತಾ ನೀವು ಹೋಗಿ ಬನ್ನಿ ಅಂದರು. ವಾಪಾಸ್ಸು ಬಂದು ಅಜ್ಜಿಯ ಹತ್ತಿರವೇ ನಾಲ್ಕು ನಿಂಬೂ ಜ್ಯೂಸು ಕುಡಿದು ತಣ್ಣಗಾದೆವು.ಮಿಹಿಂತಲೇಯಿಂದ ಸಿಗಿರಿಯಾ 73km ದೂರ. ನಾವು ಮುಹಿಂತಲೇ ಬಿಡುವಷ್ಟರಲ್ಲೀ ಇಳಿ ಸಂಜೆ, ಸರಿ, ಸಿಗಿರಿಯಾಗೆ ಹೇಗೆ ತಲುಪೋದು ಅಂತ ಅಲ್ಲೇ ಒಬ್ಬನ ಕೇಳಿದ್ವಿ, ಬಾಯಿ ಬಿಟ್ಟ ಪುಣ್ಯಾತ್ಮ, ಆಗಲೇ ಡಿಂಗಾಗಿ ಹೋಗಿದ್ದ. ಆತನ ಮೆದುಳಿಗೂ ಬಾಯಿಗೂ delayed communication. ಥೇಟು ಎಸ್ಸೆಮ್ ಕೃಷ್ಣನ ತರ ಎರಡು ನಿಮಿಷಕ್ಕೆ ಒಂದು ಪದ ಹೇಳ್ತಿದ್ದ. ಅವನಿಗೆ ನಮಗೆ ಸಹಾಯ ಮಾಡೋ ಮನಸಿದೆ, ಅವನ ಮೆದುಳು ಕೂಡ ಪ್ರೊಸೆಸಿಂಗ್ ಲೀ ಇದ್ದು ಎಲ್ಲಿ ಯಾವ ಬಸ್ಸು ಹತ್ತಬೇಕು ಅಂತ ತಿಳಿದು ಬಾಯಿಗೆ ಸಿಗ್ನಲ್ ಕಳಿಸ್ತಾ ಇದೆ ಆದರೆ ಬಡ್ಡಿಮಗಂದು ಎಣ್ಣೇಯೇಟಲ್ಲೀ ಸಿಗ್ನಲ್ ಕರೆಕ್ಟ್ ಟೈಮ್ ಗೇ ರೀಚ್ ಆಗ್ತಾ ಇಲ್ಲ. ಕೊನೆಗೂ ಅವನಿಂದ ಮಾಹಿತಿ ತಿಳಿಯೋದರಲ್ಲೀ ಸಹನೆಯ ಕಟ್ಟೆ ಹೊಡೆದು ಹೋಗಿತ್ತು. ಅವನು ಹೇಳಿದ ಹಾಗೆ ಅಲ್ಲಿಂದ ಡಂಬೂಲಾಗೆ ಬಂದು ಡಂಬೂಲಾದಿಂದ ಸಿಗಿರಿಯಾ ತಲುಪೋದರಲ್ಲಿ ರಾತ್ರಿ ಒಂಭತ್ತಾಗಿತ್ತು. ಎರಡೂ ಬಸ್ಸುಗಳಲ್ಲೂ ಸಿಂಹಳ ಮತ್ತು ತಮಿಳು ಗೀತೆಗಳಿದ್ದ ಕಾರಣ ಜರ್ನಿ ಭಾರವಾಗಲಿಲ್ಲ.ಇಡೀ ದಿನದ ದಣಿವು ಆರಿದ್ದು “ಸಿಗಿರಿಯಾ ವಿಲೇಜ್” ಹೋಟೇಲ್ ಕಂಡು. ತೀರಾ ಅತೆಂಟಿಕ್ ಆದ, ರಿಲಾಕ್ಸ್ ಗೆ ಹೇಳಿ ಮಾಡಿಸಿದಂತಿದೆ. ಚಳಿ , ದಣಿವು ಹಾಗೂ ಚೆಂದದ ಆಂಬೀಯನ್ಸ್ ಇನ್ನೇನೂ ಬೇಕು ಗುಂಡು ಹಾಕಲು. ಮಿಡ್ ನೈಟ್ ವರೆಗೂ ಕುಡಿದಿದ್ದು , ಚರ್ಚಿಸಿದ್ದು ಆಯ್ತು, ಬಿಟ್ಟು ಹೋದ ಹಳೆ ಹುಡುಗಿಯರ ನೆನಪಿಸಿಕೊಂಡು ಹಿಡಿ ಶಾಪ ಹಾಕಿದ್ದು ಆಯ್ತು.

ದಿನ 3 

17-07-2019

ಸಿಗಿರಿಯಾ-ಡಂಬೂಲಾ-ಕ್ಯಾಂಡಿ

ನೀವೇನಾದರೂ ಶ್ರೀಲಂಕಾ ಟ್ರಿಪ್ ಪ್ಲಾನ್ ಮಾಡಿದರೆ ಸಿಗಿರಿಯಾ ನಿಮ್ಮ ಲಿಸ್ಟ್ ನಲ್ಲೀ ಖಂಡಿತಾ  ಇರಲೇಬೇಕು.ಸಿಗಿರಿಯಾ ಇದ್ದರೆ ಸಿಗಿರಿಯಾ ವಿಲೇಜ್ ತಂಗಲು ಅತ್ಯಂತ ಪ್ರಶಸ್ಥ ಸ್ಥಳ. ಸಿಗಿರಿಯಾ ವಿಲೇಜ್ ನಿಂದ ಸಿಗಿರಿಯಾ ರಾಕ್ಸ್ ಕೇವಲ ಎರಡು ಕಿಮೀ ದೂರ. ಹೋಟೇಲಿನವರೇ ಟುಕು ಟುಕು ಕಳಿಸಿಕೊಟ್ಟದ್ದರಿಂದ ಹತ್ತೇ ನಿಮಿಷಕ್ಕೆ ಅಲ್ಲಿದ್ದೇವು. ಟುಕ್ ಟುಕ್ ಡ್ರೈವರು ಭಾರತ ಸೆಮಿಫೈನಲ್ ಲೀ ಸೋತಿದ್ದಕ್ಕೆ ಪಾಪ ಬೇಜಾರು ವ್ಯಕ್ತ ಪಡಿಸಿದ, ಅಲ್ಲಿನ ಜನರು ಶ್ರೀಲಂಕಾಕ್ಕಿಂತ ಭಾರತ ತಂಡಕ್ಕೆ ಫುಲ್ ಸಪೋರ್ಟ್, ಕೊಹ್ಲಿಯೆಂದರೇ ಸಕತ್ ಇಷ್ಟ. ನಾವು ಎಲ್ಲೇ ಟುಕ್ ಟುಕ್ ಹತ್ತಿದರೂ ಮಾತು ಕ್ರಿಕೆಟ್ ಬಗ್ಗೆ ಹೊರಳಿ, ಭಾರತ ಸೋತದ್ದಕ್ಕೆ ಮರುಗಿ, ಇಂಗ್ಲೆಡ್ ಗೆ ಇಡೀ ಶಾಪ ಹಾಕಿ, ಕೇನ್ ವಿಲಿಯಮ್ಸನ ಹೊಗಳುವಲ್ಲಿಗೆ ಮುಗಿಯುತಿತ್ತು. ಪಾಸ್ ಪೋರ್ಟ್ ಮರೆತ ಕಾರಣ ಮತ್ತೆ ಹೋಟೇಲಿಗೆ ಬಂದು ಮತ್ತೆ ಸಿಗಿರಿಯಾಕ್ಕೆ ಬಂದದ್ದಾಯ್ತು.

ಸಿಗಿರಿಯಾ, ಕುಲವಂಶದ ಕಶ್ಯಪ ರಾಜನಿದ್ದಾಗ ಬರೋಬ್ಬರೀ 660 ಅಡಿ ಬಂಡೆಯ ಮೇಲೆ ತನ್ನ ಅರಮನೆ ಕಟ್ಟಿಸಿ, ರಾಜಧಾನಿಯನ್ನಾಗಿಸಿಕೊಂಡು ಸಿಂಹಳಗಿರಿಯೆಂದು ಹೆಸರಿಟ್ಟಿದ್ದ. ಸಿಂಹದ ಪಾದದ ದೊಡ್ಡ ಆಕೃತಿ ಪ್ರವೇಶದ ಆರಂಭದಲ್ಲೇ ಸಿಗುತ್ತದೆ. ರಾಜ ಸತ್ತ ಮೇಲೆ ನಂತರದ ರಾಜರು ರಾಜಧಾನಿ ಬೇರೆ ಕಡೆ ಮಾಡಿದ ಮೇಲೆ ಸಿಂಹಳಗಿರಿ ಬೌದ್ಧ ಸನ್ಯಾಸಿಗಳ ವಿಶ್ರಾಂತ ಸ್ಥಳವಾಯ್ತು. ಸದ್ಯ ಯುನೆಸ್ಕೊದ ಹರಿಟೇಜ್ ಸೆಂಟರ್ ಆಗಿದೆ. ಪೌರಾಣಿಕ ಹಿನ್ನೆಲೆ ಪ್ರಕಾರ ರಾವಣನು ತನ್ನ ತಂದೆ ಆದೇಶದಂತೆ ತನ್ನ ಸಾಮ್ರಾಜ್ಯದ ರಾಜಧಾನಿಯನ್ನಾಗಿಸಿ ವೈಭೋಗದ ರಾಜ್ಯಭಾರ ಮಾಡಿದ್ದ, ಆತನ ಮರಣನಂತರ ತಮ್ಮ ವಿಭೀಷಣ ರಾಜ್ಯಭಾರ ಮಾಡಿದ್ದ. ಈಗಲೂ ಅರಮನೆಯ ಅವಶೇಷಗಳು ಉಳಿದಿದ್ದು, ರಾಜ ಕೂರೂತ್ತಿದ್ದ ಸಿಂಹಾಸನದ ಜಾಗ ಕೂಡ ಕಾಣಬಹುದು, ಕಲ್ಯಾಣಿ ಕೂಡ ಇದೆ. ಸರಿಯಾಗಿ ಮಧ್ಯ ನಿಂತರೆ ನಾಲ್ಕು ದಿಕ್ಕಿಗೂ ಪ್ರಕೃತಿಯ ಸೊಬಗು ಅನುಭವಿಸಬಹುದು. ಧ್ಯಾನಕ್ಕೆ ಹೇಳಿ ಮಾಡಿಸಿದ ಜಾಗ. ತಪ್ಪದೇ ಜೀವನದಲ್ಲೀ ಒಮ್ಮೆ ನೋಡಲೇಬೇಕಾದ ಜಾಗ.

ಸಿಗಿರಿಯಾಕ್ಕೆ ಒಂದು ಸಲಾಮ್ ಹೊಡೆದು, ಅಲ್ಲೇ ಗಡದ್ದಾಗಿ ತಿಂದು, ಡಂಬೂಲಾದ ಬಸ್ಸಿನಲ್ಲೀ ನಿದ್ದೆ ಹೊಡೆದು ಎದ್ದಿದ್ದೇ ಡಂಬೂಲಾದಲ್ಲೀ.

ಡಂಬೂಲಾ

ಡಂಬೂಲಾ ಸಿಗಿರಿಯಾದ ಸಮೀಪದ ನಗರ. ನಮ್ಮ ವಿಜಯನಗರ ಬಸವನಗುಡಿ ತರದ ಸಿಟಿ. ಪಕ್ಕಾ ಪ್ಲಾನ್ ಮಾಡಿದರೆ ಡಂಬೂಲಾ ಕೇಂದ್ರದ ಭಾಗ ತರ, ಇತ್ತ ಕೊಲೊಂಬೋಗೂ ಅತ್ತ ಕ್ಯಾಂಡಿಗೂ ಅನುರಾಧಪುರಕ್ಕೂ ಮತಾಲೆಗೂ ಹತ್ತಿರದ ಜಾಗ. ಪ್ರತಿ ಹತ್ತು ನಿಮಿಶಕ್ಕೆ ಎಲ್ಲ ಕಡೆಗೂ ಬಸ್ಸಿನ ಸೌಕರ್ಯ ಇದೆ. ನಾವು ಡಂಬೂಲಾಕ್ಕಿಳಿದಿದ್ದು ಡಂಬೂಲಾದ ಕೇವ್ ಟೆಂಪಲ್ ನೋಡಲು. ಸಿಟಿಯಿಂದ ಮೂರು ಕಿಮೀ ಇರುವ ಟೆಂಪಲ್ ಗೆ ಟುಕ್ ಟುಕ್ ಒಂದೇ ಗತಿ. ಅವರು ಕೇಳಿದಷ್ಟು ಕೊಡಬೇಕು, ಇಲ್ಲವಾದಲ್ಲೀ ಗಂಟೆಗಟ್ಟಲೇ ಕಾಳೆಲೆಯುತ್ತಾ ಕೂರಬೇಕು. ಸಮಯವಿದ್ದರೇ ಅಲ್ಲೇ ಸಿಂಹಳ ಭಾಷೆ ಕಲಿತುಬಿಡಬಹುದು ಅಷ್ಟರ ಮಟ್ಟಿಗೆ ವಾಚಾಳಿಗಳು ಅಲ್ಲಿನ ಟುಕ್ ಟುಕ್ ಡ್ರೈವರುಗಳು. ಕೊನೆಗೂ ಆತ್ತು ನಡಿಯಪ್ಪ ಕೊಡ್ತೀವಿ ಅಂತ ಹತ್ತಿ ಕೂತರೇ ನಮಗೆ ಗಾಬರಿಯಾಗುವಷ್ಟು ಬದಲಾಗುವರು.ಅಲ್ಲಿನ ಸ್ಥಳದ ಬಗ್ಗೆ ಹೆಮ್ಮೆಯಿದೆ, ಆಟೋ ಹತ್ತಿದರೆ ಆಪ್ತ ಸೇವಕರಂತಾಗಿಬಿಡುತ್ತಾರೆ, ಆ ದೃಷ್ಟಿಯಿಂದ ಅವರನ್ನ ಹೊಗಳದೇ ಇರಲಾಗದು.

ಡಂಬೂಲಾದ ಗುಹಾ ದೇವಾಲಯ, 550 ಅಡಿ ಮೇಲಿದೆ, ಗೊತ್ತಿದ್ದರೂ ಶಾಟ್ಸ್ ಧರಿಸಿ ಹೋದ ಕಾರಣ, ಮಂಡಿ ಕಾಣಿಸ್ತಿದೆ ಬಿಡಕ್ಕಿಲ್ಲ ಅಂತ ಅಂದು ಅವರೇ ಲಂಗದ ತರ ತೆಳು ಸೀರೆಯ ಬಟ್ಟೆಯನ್ನು ಲುಂಗಿಯಾಗಿ ಉಡಿಸಿ ಒಳ ಕಳಿಸಿದರು, ಬುದ್ದನ 153 ಪ್ರತಿಮೆಗಳಿರುವ, ಉದ್ದದ ಗುಹೆಯನ್ನ ಐದು ಭಾಗಗಳಾಗಿ ಮಾಡಿದ್ದಾರೆ, ಬುದ್ಧನ ಜೀವನದ ಕುರಿತಾದ, ಮಾರನು ಬುದ್ದನ ಅಲುಗಾಡಿಸಲು ಯತ್ನಿಸಿದ ಕತೆಯನ್ನ ಸಾರುವ ವರ್ಣ ಚಿತ್ರಗಳಿವೆ, ಇತಿಹಾಸದ ವಿದ್ಯಾರ್ಥಿಗಳಿಗೆ ಹಬ್ಬ. ಕ್ರಿಸ್ತ ಪೂರ್ವ ಏಳನೇ ಶತಮಾನದಿಂದಲೂ ಇತಿಹಾಸವಿರುವ ಈ ಸ್ಥಳವನ್ನ ಯುನೆಸ್ಕೊ ಪುನಸ್ಥಾಪಿಸಿ ರಕ್ಷಿಸಲಾಗುತ್ತಿದೆ.

ಅಲ್ಲಿಂದ ಬರುವಾಗ ಟುಕ್ ಟುಕ್ ಡ್ರೈವರು ನಿಮ್ ಇಂಡಿಯಾಲೀ ಮಾರಿಜುವಾನ ಸಿಗುತ್ತಾ ಅಂತ ಕೇಳಿದ, ಮದರ್ ಲವ್ವೊಂದು ಬಿಟ್ಟು ಮಿಕ್ಕಿದೆಲ್ಲ ಸಿಗುತ್ತೆ ಅಂತ ಸೂರಿ ಸರ್ ಡೈಲಾಗ್ ಹೊಡೆಯೋಣ ಅನ್ಕೊಂಡು, ಸುಮ್ಮನಾಗಿ, ಹಾ ಸಿಗುತ್ತೆ ಅನ್ಸುತ್ತೆ ಅಂದೆ. ಬೇಕಂದ್ರೆ ಹೇಳಿ ಇಲ್ಲೇ ಸೀಟ್ ಕೆಳಗೆ ಇದೆ ಅಂದ, ಎಲಾ ಬಡ್ಡೈದನೇ ಅಂದೆ ಅವನಿಗೆ ಅರ್ಥವಾಗದೇ ಪೆಕ್ರು ನಗೆ ನಕ್ಕ ಅವನಿಗೆ ಒಂದು ಕೈಮುಗಿದು ಕ್ಯಾಂಡಿ ಬಸ್ ಹತ್ತಿ ಕೂತೆವು, ಮತ್ತದೇ ಸಿಂಹಳ ರಾಕ್ಸ್ ಸಾಂಗ್ಸ್, ಸಕತ್ ಮ್ಸೂಸಿಕ್ಕು, ಒಳ್ಳೇ ನಿದ್ದೆ.

ಹಾ ಹೇಳೋದ್ ಮರ್ತೆ, ಶ್ರೀಲಂಕಾದ ಆಹಾರದ ರುಚಿ, ಹೆಚ್ಚು ಕಮ್ಮಿ ನಮ್ಮ ಕೇರಳ ತಮಿಳುನಾಡು ಮಾದರಿಯದ್ದು. ಸ್ಪೈಸೀ ಮತ್ತು ಮಸಾಲ. ಬೌದ್ಧ ಧರ್ಮದ ಪ್ರಭಾವದಿಂದ ಸಸ್ಯಹಾರ ಕೂಡ ಜಾಸ್ತಿ ಇದೆ. ನಾನ್ ವೆಜ್ ತಿನ್ನೊರಿಗೆ ಚಿಕನ್ನು ಫಿಶ್ ಧಾರಾಳವಾಗಿ ಸಿಗುತ್ತೆ ಹಾಗೂ ತುಂಬ ರುಚಿಯಾಗಿದ್ದು ನಾಲಗೆಗೆ ಮನಸ್ಸಿಗೆ ಖುಷಿ ಕೊಡೋದಂತೂ ಪಕ್ಕ. ಕೊತ್ತು, ಸಂಬಲ್, ಅಪ್ಪಂ ಅಲ್ಲಿನ ಸ್ಪೆಶಲ್ ತಿಂಡಿಗಳು. ಶ್ರೀಲಂಕಾ ಕರ್ರಿ ರೈಸ್ ಊಟ ಎಲ್ಲ ಕಡೆ ಸಿಗುವುದಲ್ಲದೇ ಅಲ್ಲಿನ ಫೇಮಸ್ ಕೂಡ. ಅನ್ನ ಸಾಂಬಾರು ಜೊತೆ ನಾಲ್ಕೈದು ಕರ್ರಿ ಮತ್ತಿ ಹಪ್ಪಳದ ಊಟವದು. ಒಂದು ಹೊಟ್ಟೆಗೆ ಒಂದು ಹೊತ್ತಿಗೆ ಹೇಳಿ ಮಾಡಿಸಿದ ಊಟ. ಊಟ ಬಿಟ್ಟರೆ ಅಲ್ಲಿನ ಲೋಕಲ್ ಬಿಯರ್ ಟೈಗರ್ ವರ್ಲ್ಡ್ ಫೇಮಸ್ಸು, ಸಾಧ್ಯವಾದರೆ ನಮ್ ಗಡ್ಡಪ್ಪಂಗೆ ಒಂದು ಟೈಗರ್ ಹೊಡೆಸಿ ಅಭಿಪ್ರಾಯ ಕೇಳಬೇಕು, ತಪ್ಪು ತಿಳಕ್ಕೊಂಡು ನಮಗೆ ತಿಥಿ ಮಾಡದೇ ಹೋದರಷ್ಟೇ!

ಕ್ಯಾಂಡಿ:

ಕ್ಯಾಂಡಿ ನಮ್ಮ ಮಡಿಕೇರಿ ತರದ ಸಿಟಿ, ಅಲ್ಲನ ರಸ್ತೆಗಳು, ಬಿಲ್ಡಿಂಗುಗಳು, ಏರಿಳಿತಗಳು, ವಾತಾವರಣ, ಜನ, ಥೇಟು ಮಡಿಕೇರಿಯಂತೆ. ಶ್ರೀಲಂಕಾದ ಸ್ವಿಡ್ಜರ್ಲೆಂಡ್ ಅನ್ನಬಹುದು. ಕೊಲಂಬೋ ನಂತರದ ದೊಡ್ಡ ಸಿಟಿ ಒಂದು ಕಾಲದ ರಾಜಧಾನಿಯೂ ಹೌದು. ಪೋರ್ಚುಗೀಸರ ಇಂಗ್ಲೀಷರ ಕಾಲೋನಿಯಾದ್ದರಿಂದ ವೆಲ್ ಪ್ಲಾನ್ಡ್ ಸಿಟಿ ಕೂಡ ಹೌದು.ಸಿಟಿ ಮಧ್ಯದಲ್ಲೀ ಮಾನವ ನಿರ್ಮಿತ ದೊಡ್ಡ ಕೆರೆಯಿದ್ದು ಬೋಟಿಂಗು ಕೂಡ ವ್ಯವಸ್ಥೆ ಉಂಟು, ನೋಡಲಿಕ್ಕೆ ಓಡಾಡಲಿಕ್ಕೆ ಅತ್ಯಂತ ಸೂಕ್ತ ಜಾಗ ಕ್ಯಾಂಡಿ. ಕೆರೆಯ ಎಡಕ್ಕೆ ಎತ್ತರವಿದ್ದು ಸಿಟಿ ನೋಡಲಿಕ್ಕೆಂದೇ ಜಾಗ ಮಾಡಿದ್ದಾರೆ, ರಾತ್ರಿ ಹೊತ್ತಲೀ ಹೋದರೆ ಜೋಡಿಗಳು ಮೈಮರೆತಿರುತ್ತವೇ ಹಾಗಾಗಿ ಬೆಳಗ್ಗೆ ಹೋದರೆ ಒಳ್ಳೆಯದು.

ನಾವು ಹೋಗುವಷ್ಟರಲ್ಲೀ ಸಂಜೆಯಾದ್ದರಿಂದ ಅದರ ಸೊಬಗೇ ಬೇರೆ ತೆರನಿದ್ದು ಒಂದೇ ಸಲಕ್ಕೆ ಸಕತ್ ಇಷ್ಟವಾಗಿಹೋಗಿ ಮತ್ತೆ ಬರಲೇಬೇಕು ಅಂತ ಡಿಸೈಡ್ ಮಾಡಿಬಿಟ್ವಿ. ಕ್ಯಾಂಡಿಯ ಒಂದು ಭಾಗಕ್ಕೆ ಬೆಟ್ಟದ ಮೇಲೆ ಬುದ್ದನ ಬಿಳಿ ಪ್ರತಿಮೆಯಿದ್ದು ಎಲ್ಲ ದಿಕ್ಕಿನಿಂದಲೂ ಕಾಣುತ್ತದೆ. ಸಿಟಿಯ ಸೌಂದರ್ಯ ಹೆಚ್ಚಿಸಿರೋದರಲ್ಲೀ ಅದರ ಪಾತ್ರ ದೊಡ್ಡದು.ಹಾಗೇ ಕ್ಯಾಂಡಿಯಲ್ಲೀ ಬೌದ್ಧ ಧರ್ಮದ ಪವಿತ್ರ ಜಾಗವೆಂದೇ ಕರೆಯುವ Temple of tooth relic (ಶ್ರೀದಳದ ಮಲಿಗಾವ) ದೇವಾಲಯವಿದೆ.

ನಾವು ಹೋಟೆಲಿಗೆ ಹೋಗಿ ಸಿಟಿ ನೋಡಲಿಕ್ಕೆ ಬೇಗ ಹೊರಬಂದು ಅಲ್ಲಿನ ದೊಡ್ಡ ಮಾಲಿನಲ್ಲೀ ಅಡ್ಡಾಡಿ, ಕೆ ಎಫ್ ಲೀ ಗಡ್ಡದ್ದಾಗಿ ತಿಂದು, ಅಲ್ಲಿನ ಖಾಲಿ ರಸ್ತೆಗಳಲ್ಲೀ ಅಡ್ಡಾಡಿ ಒಂದು ಲಾಂಗ್ ವಾಕು ಮಾಡಿ ರೂಮಿಗೆ ಬಂದು ದಬಾಕೊಳ್ಳುವಲ್ಲಿಗೆ ಆದಿನಕ್ಕೆ ಅಂತ್ಯ ಆಡುದ್ವೀ.

 

ದಿನ 4 

18-07-2019

ಕ್ಯಾಂಡಿ- ಎಲ್ಲಾ

ನಮ್ಮ ಇಡೀ ಜರ್ನಿಯಲ್ಲಿ ಬೇಜಾನ್ ಖುಷಿ ಕೊಟ್ಟ , ಬೇಜಾನ್ ನಕ್ಕ, ಜೋರಾಗಿ ಚೀರಿದ ದಿನವೆಂದರೆ ನಾಲ್ಕನೇ ದಿನ.ಕ್ಯಾಂಡಿಯ ಹೋಟೇಲಿನಿಂದ ಕ್ಯಾಂಡಿಯ ರೈಲ್ವೆ ಸ್ಟೇಷನ್ ಹತ್ತು ನಿಮಿಷದ ಟುಕು ಟುಕು ಪಯಣ. ನಮ್ಮಲ್ಲಿದ್ದ ರೇಚಣ್ಣನಿಗೆ ಇಂಗ್ಲೀಷು ಅಷ್ಟಾಗಿ ಬಾರದು, ಮಾತಾಡ್ತಾ ಮಾತಾಡ್ತಾ ಇದ್ರೆ ಇಂಗ್ಲೀಷು ಬಂದುಬುಡ್ತದೇ ಅಂತ ಯಾರೋ ಹೇಳಿದ್ರಿಂದ ಯಾವಾಗೆಂದರೆ ಯಾವಾಗ , ಎಲ್ಲೆಂದ್ರ ಅಲ್ಲಿ ನಂದು ಒಂದು ಇರ್ಲೀ ಅಂತ ಇಂಗ್ಲೀಷಿಗಿಳಿದು ಬಿಡುತ್ತಿದ್ದ. ಕ್ಯಾಂಡಿ ರೈಲ್ವೆ ಸ್ಟೇಷನ್ ಗೆ ಹೊರಡಲು ಟುಕು ಟುಕು ಸಿಕ್ಕಾಗ ಡ್ರೈವರ್ ಒಸಿ ಜಾಸ್ತೀನೇ ದುಡ್ ಕೇಳಿದ, ಯಾಕೆ ? ಅಂತ ನಮ್ ರೇಚಣ್ಣ ಕೇಳಿದ ಅವನಿಗೇನ್ ಅನ್ಸುತ್ತೊ ಏನೋ ಅವರ ಭಾಷೇಲಿ ಅದೇನೊ ಅಂದ್ಬುಟ್ಟು ಟರ್ ಅನಿಸುತ್ತಾ ಒಂದು ರೌಂಡು ತಿರುಗಿಸಿ ನಿಂತುಬಿಟ್ಟ.ಆಮೇಲೆ ಮುನಿಸಿಕೊಂಡಿರೋ ಅವನ ನೈಸು ಮಾಡಿ ಕರಕೊಂಡು ಹೋಗೋದರಲ್ಲೀ ಸಾಕಾಯ್ತು. ಅವತ್ತೆಲ್ಲ ರೇಚಣ್ಣ ಬಾಯಿ ತೆರೆದರೆ ಭಯವಾಗ್ತಾ ಇತ್ತು ಏನ್ ಹೇಳಿ ಏನ್ ಎಡವಟ್ ಮಾಡ್ಸ್ತಾನೋ ಅಂತ.

ಕ್ಯಾಂಡಿ ರೈಲ್ವೆ ಸ್ಟೇಷನ್ ಕೇವಲ ಎರಡು ಟ್ರ್ಯಾಕ್ ಇರುವ, ಬ್ರಿಟಿಷ್ ಮಾದರಿಯ ಹಳೆಯ ನಿಲ್ದಾಣ. ಎಲಾಗೆ ಟಿಕೇಟು ತಗೊಂಡು ಪ್ಲಾಟ್ ಫಾರ್ಮ್ ಗೆ ಹೋದರೆ ಬರೀ ಫಾರಿನ್ನರ ದಂಡು, ಅದರಲ್ಲೊಂದು ಜೋಡಿ , ಫ್ರೆಂಚ್ ಕಿಸ್ ಬೇರೆ. ಎಲಾಗೆ ಹೊರಡುವ ಟ್ರೈನು ಬರಲು ಇನ್ನೂ ಎರಡು ಗಂಟೆ ಬೇಕಿತ್ತು. ಒಂದ್ ಹದಿನೈದು ನಿಮಿಷದ ನಂತರ ಬೇರೆ ಯಾವುದೋ ಟ್ರೈನು ಬಂದು ನಿಂತಿತು. ಬ್ರಿಟಿಷ್ ಕಾಲದ ಕೆಂಪು ಕಲರಿನ ಟ್ರೈನು, ಹೆಚ್ಚು ಕಮ್ಮಿ ಶ್ರೀಲಂಕಾದ ಟ್ರೈನುಗಳೆಲ್ಲ ಡೀಸೆಲ್ ಚಾಲಿತ ಟ್ರೈನುಗಳು. 1953ರವರೆಗೆ ಉಗಿ (Steam locomotives)ಚಾಲಿತ ಟ್ರೈನುಗಳಾಗಿದ್ದವು. ಆ ಕೆಂಪು ಟ್ರೈನಿನ ಲೋಕೋ ಪೈಲಟ್ ಗೆ ಒಂದು ಹಾಯ್ ಹೇಳಿದ್ದೆ ತಡ. ಫೋಟೋ ತಗೋತೀರಾ ಅಂತ ಆತನೇ ಒಳ ಕರಕೊಂಡು ಹೋದ, ನಾವೂ ಕೂಡ ಮೆಟ್ರೋ ರೈಲ್ವೇಸ್ ಲೀ ಇರೋದು ಎಂದು ಪರಿಚಯಿಸಿಕೊಂಡ ಮೇಲೆ ಪ್ರತಿಯೊಂದನ್ನು ವಿವರಿಸಿದ.ಡ್ರೈವರ್ ಕ್ಯಾಬಿನ್ ಶೋ ಆಫ್ ಕೊಡುವ ಪೋಸು ಕೊಟ್ಟು ಫೋಟೋ ತೆಗಿಸಿಕೊಂಡದ್ದಾಯ್ತು.

ಸೋನೆ ಸುರುವಾಗಿ ಮಳೆ ಜೋರಾದಂತೆ ಅದೇ ಟ್ರೈನಿಗೆ ಬರುವ ಫಾರಿನ್ನರು ಹೆಚ್ಚಾದರು. ಅಲ್ಲಿನವರಿಗೆ ನಾವು ಥೇಟು ಶ್ರೀಲಂಕಾದವರೇ. ಗೋಧಿ ಬಣ್ಣ ಸಾಧಾರಣ ಮೈಕಟ್ಟು. ಮಳೆ ಜೋರಾದ ಕಾರಣ ಟ್ರೈನು ಅರ್ಧಗಂಟೆಯಿಂದ ಲೇಟಾಗಿ ಕೊನೆಗೆ ಮೂರು ಗಂಟೆ ತಡವಾಯ್ತು. ಬಂದುದೇ ತಡ ಹೋಗಿ ಸೀಟು ಹಿಡಿದು ಕೂತಾಯ್ತು.ಟ್ರೈನು ನೋಡಿ ಸಖತ್ ಖುಷಿಯಾಯ್ತು. ಇಬ್ಬರೂ ಸಾವಾಕಾಶ ಕೂರುವ ಲೈನು ಬಲಕ್ಕೆ ಮತ್ತು ಎಡಕ್ಕೆ. ಏರ್ ಬಸ್ ಮಾದರಿಯ ಸೀಟುಗಳು, ಲಗೇಜು ಸ್ಥಳ, ಫ್ಯಾನು, ದೊಡ್ಡಕ್ಕೆ ತೆರೆಯಬಹುದಾದ ಕಿಟಕಿಗಳು, ಇಂಡಿಯನ್ ಹಾಗೂ ವೆಸ್ಟರ್ನ್ ಮಾದರಿಯ ಶೌಚಾಲಯಗಳು. ಶ್ರೀಲಂಕಾದ ಟ್ರೈನಿನಲ್ಲಿ ಮೂರು ಬಗೆಯ ದರ್ಜೆಗಳಿವೆ ಮೊದಲ, ಎರಡನೆಯ, ಮೂರನೆಯ ದರ್ಜೆಯಲ್ಲೀ ಬರೀ ಟೂರಿಸ್ಟರೇ ಜೊತೆಗೆ ಶ್ರೀಮಂತ ಶ್ರೀಲಂಕನ್ನನರಿರುತ್ತಾರೆ. ನಾವು ಕೂತದ್ದು ಕೂಡ ಮೊದಲ ದರ್ಜೆಯಲ್ಲೇ ಕಾರಣ ಟಿಕೇಟು ಕೊಡುವವನೇ ಹೇಳಿದ್ದ ಆರು ತಾಸಿನ ಪ್ರಯಾಣಕ್ಕೆ ಸೀಟು ಸಿಗೋದು ಕೇವಲ ಫರ್ಸ್ಟ್ ಕ್ಲಾಸಲ್ಲೀ ಮಾತ್ರ ಎಂದು. ಅಸಲಿಗೆ ಇಡೀ ಜರ್ನಿಯಲ್ಲೀ ಕೂತದಕ್ಕಿಂತ ನಿಲ್ಲೊದೆ ಹೆಚ್ಚು.

(ಚಿತ್ರ: ಕ್ಯಾಂಡಿ-ಎಲ್ಲ ರೈಲು)

ಬದುಕಿನಲ್ಲೀ ಒಮ್ಮೆಯಾದರೂ ಮಾಡಲೇಬೇಕಾದ ರೈಲು ಪ್ರಯಾಣವೆಂದರೆ ಕ್ಯಾಂಡಿಯಿಂದ ಎಲಾದ ಪ್ರಯಾಣ. ರೈಲು ಪರ್ವತಗಳ ಮಧ್ಯೆ , ಟೀ ಎಸ್ಟೇಟುಗಳ ಮಧ್ಯೆ, ಅಕ್ಕ ಪಕ್ಕ ಆಗಾಗ್ಗೆ ಎದುರಾಗುವ ಜಲಪಾತಗಳು, ಹಳೇ ಸೇತುವೆಗಳು, ಹಳೇ ನಿಲ್ದಾಣಗಳು, ಚಿಕ್ಕ ಚಿಕ್ಕ ಹಳ್ಳಿಗಳು, ಅಲ್ಲೇಲೋ ಕೆಳಗೆ ಹರಿವ ನೀರು, ಅಂಕು ಡೊಂಕಿನ ರಸ್ತೆಯಲ್ಲೀ ಹೋಗುತ್ತಿರುವ ಒಂಟಿ ಕೆಂಪು ಬಸ್ಸುಗಳು, ಸಡನ್ನಾಗಿ ಬರುವ ಟನಲಿನೊಳಗೆ ರೈಲು ಹೋಗಿ ಗಕ್ಕನೆ ಬೆಳಕಿಗೆ ಬರುವ ಅದ್ಭುತ ದೃಶ್ಯಗಳಿಗೆ ಮನ ಸೋಲುವುದರಲ್ಲೀ ಡೌಟೇ ಇಲ್ಲ.ನಾವು ಹೋದ ಟೈಮಲ್ಸೇ ಮಳೆ ಬೇರೆ ಆ ಏಳು ಗಂಟೆ ಥೇಟು ಸ್ವರ್ಗದಲ್ಲಿದ್ದಂತೆ ಆಯ್ತು.

ಹೊರಗೆ ಇದಾದರೆ ಒಳಗೆ ಎಲ್ಲಿ ಬೇಕಾದರೂ ಓಡಾಡಬಹುದು, ಆಗಾಗ್ಗೆ ಎದುರಾಗೋ ಜರ್ಮನ್, ಸ್ಪಾನಿಶ್, ಬ್ರಿಟಿಶ್, ನ್ಯೂಜಿಲೆಂಡ್ ನ ಯುವಕ ಯುವತಿಯರು ನೋಡಿ ನಕ್ಕು ಥೇಟು ಮಕ್ಕಳಂತೆ ಕಿರುಚುತ್ತಾ ಫೋಟೋ ತೆಗೆದುಕೊಳ್ಳುತ್ತಾ ತುಟಿಗೆ ತುಟಿ ತಾಕಿಸಿಕೊಳ್ಳುತ್ತಾ ಕಳೆದು ಹೋಗಿರುತ್ತಾರೆ. ಐದತ್ತು ನಿಮಿಷಕ್ಕೆ ಟೀ ಕಾಫಿ ಸೇಬೆಹಣ್ಣು ಕೊತ್ತು ಹೀಗೆ ತಿಂಡಿ ಹೊತ್ತವರು ಬರುವ ಕಾರಣ ಹೊಟ್ಟೆಗಂತೂ ಮೋಸವಿಲ್ಲ.

ನೀವು ಬದುಕಿನಲ್ಲೀ ಒಮ್ಮೆಯಾದರೂ ಹೋಗಲೇಬೇಕಾದ ಅತ್ಯದ್ಭುತ ರೈಲು ಪ್ರಯಾಣ ಕ್ಯಾಂಡಿಯಿಂದ ಎಲಾದ ಪ್ರಯಾಣ.

ಎಲ್ಲಾ: Ella

ಎಲ್ಲಾ ತೀರ ಚಿಕ್ಕದಾದ ನಗರ. ಸುತ್ತಲೂ ಪರ್ವತ ಟೀ ಎಸ್ಟೇಟು. ಬರೀ ಹೋಟೆಲಿರುವ, ಬರೀ ಫಾರಿನ್ನರೇ ತುಂಬಿರುವ, ಪಬ್ಬು ಬಾರು ಇಂಟರ್ನೆಟ್ ಸೆಂಟರು ಹೋಟೆಲುಗಳೇ ಇರುವ ಚಿಂದಿ ಚಿಂದಿ ಸಿಟಿ. ಎಲ್ಲೀ ನೋಡಿದರು ವಿದೇಶಿಯರೇ! ಅಲ್ಲೀನ ಪ್ರಖ್ಯಾತ ಚಿಲ್ ಪಬ್ಬಿನಲ್ಲಿ ಟೆರೇಸಿನವಲ್ಲೀ ನಾವು ನಾಲ್ವರು ಕೂತಿದ್ದು ಮಿಕ್ಕೆಲ್ಲ ಫಾರಿನ್ನರೇ. ಚಿಲ್ ವೆದರಿನ ಚಿಲ್ ಪಬ್ಬಲ್ಲೀ ಚಿಲ್ ಆಗಿ ಕುಳಿತು ಸಿಗರೇಟು ಸೇದುತ್ತಾ ಎಣ್ಣೆ ಹೊಡೆಯುತ್ತಾ ಜೋರು ಜೋರು ಮಾತನಾಡುತ್ತ ನಗುತ್ತಾ ಹಬ್ಬದಂತಿದ್ದ ವಾತಾವರಣದಲ್ಲೀ ನಾವು ಯಾರಿಗೆ ಕಮ್ಮಿ. ಟಕೀಲಾ, ಕಾಕ್ ಟೇಲ್ ಜೊತೆಗೆ ಫಿಜ್ಜಾ ಕೂಡ.

ನಮ್ ಪಕ್ಕದಲ್ಲೇ ಕೂತ ಕೆಂಪು ಫಾರಿನ್ ಹಕ್ಕಿಗೆ ನಮ್ ಹುಡುಗ ಕಾಳು ಹಾಕಿದ್ದೇ ಹಾಕಿದ್ದು. ಬಡ್ಡೇತವು ಇಬ್ರೇ ಇದ್ವು ಹೆಣ್ಣೈಕಳು ಒಂದೆಡೆ. ಒಂದರ್ಧ ಗಂಟೆ ಮೇಲೆ ನಮ್ಮ ಪಕ್ಕ ಕೂತ ಇನ್ನಿಬ್ಬರು ಬರಗೆಟ್ಟ ಫಾರಿನ್ ಯಂಗ್ ಬೋರೆಗೌಡರು  ಹೋಗಿ ಜೊತೆ ಕೂತುಬಿಟ್ಟರು. ಬಡ್ಡೀಮಗ ನಮ್ ಹೈದ ಆಗ್ಲಾದ್ರೂ ಬಿಟ್ನ ಉಹೂ ಕಾಳು ಹಾಕ್ತಾನೆ ಇದ್ದ ಕೊನೆಗೆ ಹನ್ನೊಂದರ ಸಮಯಕ್ಕೆ ಬಿಲ್ ಕೇಳಲು ಎದ್ದಾಗ ಹಾಯ್ ಎಂದ ಆಕೆ ಹಾಯ್ ಎಂದು ಏನು ಹೆಸರು ಎಲ್ಲಿಂದ ಬಂದಿರೋದು ಏನ್ ಮಾಡ್ತಿರೋದು ಕೇಳಿದಳು. ಇವ್ನು ತಡಬಡಾಯಿಸಿ ಇಂಗ್ಲೀಷಲ್ಲೀ ಏನೋ ಒದರಿದ ಕೊನೆಗೆ where are you from ಅಂದ ಆಕೆ ವಿಚಿತ್ರವಾಗಿ ನಕ್ಕು Nowhere ಅಂದರೆ ಈ ಬಡ್ಡೈದ Norway ಅಂತೆ ಅಂದು ಬಿದ್ದು ಬಿದ್ದು ನಕ್ಕಾಯ್ತು. ಕರೆಕ್ಟಾಗಿ ಹನ್ನೆರಡಕ್ಕೆ ಲೈಟು ಆಫ್ ಆಗಿ ಹ್ಯಾಪಿ ಬಡ್ಡೇ ಟೂ ಯೂ ಟ್ಯೂನು, ಜೊತೆಗೆ ಅಲ್ಲಿನ ವೇಯ್ಟರು ಕೈಯಲ್ಲಿ ಒಂದು ಪೀಸ್ ಕೇಕು ಅದರ ಮೇಲೆ ಕ್ಯಾಂಡಲ್ ಹಿಡಿದು ಬಂದ ಯಾವ ನನ್ಮಗ ಹುಟ್ಟಿದೋನು ಅಂತ ಅನ್ಕೊಬೇಕಾದ್ರೆ ನನ್ ಹತ್ರನೇ ಬರೋದ. ಇವರೆಲ್ಲ ಯಾವ ಗ್ಯಾಪಲ್ಲೀ ಅದೆಲ್ಲ ಮಾಡಿದರೋ ಒಟ್ಟಿನಲ್ಲೀ ಸರ್ ಪ್ರೈಸ್ ಕೊಟ್ಟರು. ಫಾರಿನ ಹುಡುಗೀರ ಮಧ್ಯೆ ಕೇಕು ಕಟ್ಟು ಮಾಡಿದ್ದು ಆಯ್ತು ಗೆಳೆಯರಿಗೆ ತಿನಿಸಿದ್ದು ಆಯ್ತು. ಅದುಮ್ಕೊಂಡು ಈ ವರ್ಷ ಆದ್ರೂ ಮದ್ವೆ ಆಗೋಲೆ ಅಂಗ ಬೈದದ್ದು ಆಯ್ತು.

ದಿನ 5 

19-07-2019

ಎಲ್ಲಾ-ಗಾಲೆ

ಬೆಳಗ್ಗೇನೆ ಇಂಗ್ಲೀಷು ಬ್ರೇಕ್ ಫಾಸ್ಟ್ ಮುಗಿಸಿ ನಾವು ಹೊರಟದ್ದು ವರ್ಲ್ಡ್ ಫೇಮಲ್ ಒಂಭತ್ತು ಕಮಾನಿನ ಸೇತುವೆ (Nine Arch Bridge ) ಕಡೆಗೆ , ಹೋಟೆಲಿನವನೇ ಶಾರ್ಟ್ ತಟ್ ತೋರಿಸ್ತಿನಿ ಅಂತ ಹೇಳಿ ಅಲ್ಲೆಲ್ಲೊ ಸಂಧಿಯಲ್ಲಿ ಬಿಟ್ಟು ಜಂಕ್ಷನ್ ಬರುತ್ತೆ ರೈಟ್ ತಗೊಳ್ಳಿ , ಚೆಕ್ ಔಟ್ ಹನ್ನೆರಡಕ್ಕೆ ಬೇಗ ಬನ್ನಿ ಎಂದು ಹೇಳಿ ವಯಸ್ಸು ಹುಡುಗರಿಗೆ ಅಡ್ಡ ದಾರಿ ತೋರಿಸಿದ. ಆ ಕಾಡಿನಲ್ಲಿ ಯಾವ ಜಂಕ್ಷನ್ ಕಾಣಿಸಲಿಲ್ಲ ಕೊನೆಗೆ ಅಲ್ಯಾವುದೋ ದಾರಿಯೇ ಇರದ ತೋಪಿನಲ್ಲಿ ರಸ್ತೆ ಕಾಣದೇ ಮಿಕಗಳಾಗಿ ನಾಲ್ಕು ದಿಕ್ಕು ನೋಡುತ್ತ ನಿಂತೆವು. ಗೂಗಲ್ ಮ್ಯಾಪು ಅಯ್ಯೊ ಬಡ್ಡೇತವ ಹಿಂದೆನೇ ಹೋಯ್ತು ಕಣ್ರುಲಾ ಅಂತು. ಕೊನೆಗೆ ಯಾವುದೋ ಸಣ್ಣ ಮನೆಗೆ ದಾರಿಯಿಲ್ಲದೇ ಹೆಂಗೆಗೋ ತಲುಪಿ ಅವರ ಭಾಷೇಲಿ ಏನೋ ಕೇಳಿಸಿಕೊಂಡು ಕೆಳಕ್ಕಿಳಿದೆವು ಆಟೋ ಹತ್ತಿ ಕೂತರೇ ಆಟೋ ನಾವು ಉಳಿದುಕೊಂಡ ಹೋಟೆಲು ಮುಂದೆಯೇ ಹೋಯ್ತು, ನಮಗೆ ಅಡ್ಡ ದಾರಿ ಹಿಡಿಸಿದ ಮಹಾನುಭಾವನಿಗೆ ನಾಲ್ಕು ಜನ ಟಾಟಾ ಮಾಡಿದೆವು.

Nine arch bridge :

ಹೆಸರೇ ಹೇಳುವಂತೆ ಒಂಭತ್ತು ಕಮಾನಿನ , 300 ಅಡಿ ಉದ್ದದ 25 ಅಡಿ ಅಗಲದ, 85 ಅಡಿ ಎತ್ತರದ ಈ ಸೇತುವೆ ಎಲಾ ಹಾಗೂ ದಿಮೋದಾರಾ ರೈಲ್ವೆ ಸ್ಟೇಷನ್ನುಗಳ ಮಧ್ಯವಿದ್ದು,ಆಂಗ್ಲರ ಕಾಲದ ಸೇತುವೆಗಳ ರಚನೆಯ ದೈತ್ಯತೆಯನ್ನ ತೋರಿಸುತ್ತೆ. ಒಂದು ಮಾಹಿತಿ ಪ್ರಕಾರ ಆ ಕಾಲದಲ್ಲೀ ಯೂರೋಪಿನಲ್ಲಿ ಮೊದಲ ಯುದ್ಧವಾದ್ದರಿಂದ , ಸ್ಟೀಲಿನ ಅಭಾವವಾಗಿ, ಒಂದು ತುಂಡು ಕೂಡ ಸ್ಟೀಲ್ ಬಳಸದೇ ಇಡೀ ಸೇತುವೆಯನ್ನ ಕೇವಲ ಕಲ್ಲು ಮಣ್ಣು ಸಿಮೆಂಟಿಂದ ಕಟ್ಟಲಾಯ್ತು. ಇಂತ ಒಂದು ದೈತ್ಯ ಸೇತುವೆಯ ಹಿಂದಿರುವ ಮಹಾನುಭಾವ ಅಲ್ಲಿನ ಸ್ಥಳೀಯ ಬಿಲ್ಡರ್ ಪಿ ಕೆ ಅಪ್ಪುಹಾಮಿ ಎಂಬಾತ, ಆಗಿನ ಕಾಲಕ್ಕೇನೆ ಬ್ರಿಟಿಷರ ಎಂದಿನಿಯರುಗಳ ಕೂರಿಸಿಕೊಂಡು ಸೇತುವೆಯ ರೂಪು ರೇಷೆ ಮಾಡಿದ್ದನಂತೆ.

ಈಗಲೂ ಕೂಡ ಅಷ್ಟೇ ಸುಂದರವಾಗಿ ದೈತ್ಯವಾಗಿ ನಿಂತ ಈ ಸೇತುವೆಯ ಎಡಕ್ಕೆ ಬಲಕ್ಕೆ ಟೀ ಎಸ್ಟೇಟಿದ್ದು ಹಿಂದಕ್ಕೆ ಚಿಕ್ಕ ಟನೇಲಿನಿಂದ ಶುರುವಾಗುವ ಈ ಸೇತುವೆ ಮೇಲಿನ ರಸ್ತೆಯಿಂದ ನೋಡಿದರೆ ಅತ್ಯಂತ ಮನೋಹರವಾಗಿ ಕಾಣುತ್ತದೆ. ಆ ಮಾರ್ಗದಲ್ಲೀ ಒಂದೆರಡು ಗೂಡ್ಸು ಹಾಗೂ ಪಾಸೆಂಜರ್ ಟ್ರೈನು ಹಾದು ಹೋಗುವುದರಿಂದ ಆ ಸಮಯಕ್ಕೆ ಕಾದು ಕೂತ ಫಾರಿನ್ನರಿರುತ್ತಾರೆ. ನಮ್ಮ ಸಮಯ ಸ್ವಲ್ಪವ್ ಇದ್ದರಿಂದ ಜೊತೆಗೆ ಹೋಟೇಲಿನವ ಅಡ್ಡ ದಾರಿ ತೋರಿಸಿ ದಾರಿ ತಪ್ಪಿದ ಮಕ್ಕಳಾಗಿ ಸಮಯ ಪೋಲಾದ್ದರಿಂದ ಒಂದು ಗಂಟೆಯಷ್ಟೇ ಕಳೆಯಲಾದದ್ದು. ಅದರ ಸಮೀಪವೇ ರಾವಣ ಫಾಲ್ಸ್ ಕೂಡ ಇದೆ. ಒಂದರಿಂದ ಎರಡು ದಿನ ಕಳೆಯಲು ಹೇಳಿ ಮಾಡಿಸಿದ ಜಾಗ ಎಲ್ಲಾ

ಹೋಟೆಲಿಗೆ ಬರುವಷ್ಟರಲ್ಲೀ ಗಂಟೆ ಹನ್ನೆರಡು ಗಂಟೆ ಚೆಕ್ ಔಟ್ ಟೈಮ್, ಅಲ್ಲಿಂದ ನಾವು ಹೋಗಬೇಕಾದದ್ದು ಗಾಲೆಗೆ. ಬಸ್ಸುಗಳು ಅಪರೂಪ, ಹಾಗಾಗಿ ಕ್ಯಾಬು ಹೋಟೇಲಿನವನೇ ಕರಿಸಿದ. ಬಸ್ಸಿಗೆ ಹೋಲಿಸಿದರೆ ಹನ್ನೆರಡು ಪಟ್ಟು ಹೆಚ್ಚು, ಸಮಯ ಕಮ್ಮಿ ಹಾಗಾಗಿ ಮುಂಡಾಯಿಲಿಕೊಳ್ಳಲು ರೆಡಿಯಾಗಿ ಹರಕೆಯ ಕುರಿಗಳಂತೆ ಟೋಯೋಟಾ ಕಾರಾವಾನ್ ಹತ್ತಿದೆವು, ನಮ್ ಡ್ರೈವರು ಸಾಹೇಬರು ಗುಂಗುರು ಕೂದಲಿನ ಒಳ್ಳೆ accent ಇರೋ ಜಾಲಿ ಜಾಲಿ ಮನುಷ್ಯ, ಇಂಗ್ಲೀಷ್ ಗೀತೆಗಳ ಹಬ್ಬ. ಆದರೆ ಆಸಾಮಿ ಒಳ್ಳೆ ಎತ್ತಿನಗಾಡಿ ತರ ಬಂದ. ನಾವು ಸಿಕ್ಕಿದ್ದೇ ಚಾನ್ಸು ಅಂತ ಕನ್ನಡದ ಸಾಂಗುಗಳನ್ನು ಅವನಿಗೆ ಕೇಳಿಸಿ, ಕನ್ನಡಸೇವೆ ಮಾಡಿ ತಾಯಿ ಭುವನೇಶ್ವರೀ ಕೃಪೆಗೆ ಪಾತ್ರರಾದೆವು.

ಗಾಲೆ ತಲುಪಿದಾಗ ಇಳಿ ಸಂಜೆ, ನಾವು ಗಾಲೆ ಮುಗಿಸಿ ಬೆಂಟೋಟಾಗೆ ಹೋಗಬೇಕಿತ್ತು ಹೋಟೆಲ್ ಅಲ್ಲೇ ಬುಕ್ ಮಾಡಿ ಆಗಿತ್ತು. ನಮ್ ಗುಂಗುರು ಡ್ರೈವರು ನಾನೇ ಬಿಡ್ತೂನಿ ಅಂತ ವ್ಯವಹಾರಕ್ಕಿಳಿದ ನಾವು ಮತ್ತಷ್ಟು ಬೋಳಿಸಿಕೊಳ್ಳಲು ನಿರಾಕರಿಸಿದೆವು, ಭಾರಿ ಲಗೇಜುಗಳ ಎಲ್ಲಾದರೂ ಇಟ್ಟು ಗಾಲೆ ನೋಡಬೇಕೆಂದು ಹೇಳಿದಾಗ ಅವನೇ ಅವನ ಸ್ನೇಹಿತನ ಹೋಟೇಲಿಗೆ ಕರೆದೊಯ್ದು ಬ್ಯಾಗು ಇರಿಸಿಕೊಳ್ಳಲು ಅವಕಾಶ ಕೊಟ್ಟು ಮಾನವೀಯತೆ ಮೆರೆದ.

ಗಾಲೆ:

ಗಾಲೆ ಕೋಟೆ ನಗರ, ಕೇವಲ ಹದಿನಾರು ಕಿಮೀ ವಿಸ್ತೀರ್ಣದ ಈ ಸುಂದರ ನಗರ ಕೋಟೆಗೋಡೆಯಿಂದ ಸುತ್ತುವರೆದಿದೆ. ಶ್ರೀಲಂಕಾದ ನೈಋತ್ಯದ ಈ ಕೋಟೆ ಸಿಟಿ, ಪಶ್ಚಿಮದಲ್ಲೀ ಕೋಟೆಯಾಚೆ ಸಮುದ್ರವಿದೆ. ದಕ್ಷಿಣಕ್ಕೆ ಕೋಟೆ ದ್ವಾರವಿದೆ. ಪೋರ್ಚುಗೀಸರ ಕಾಲೋನಿಯಾಗಿದ್ದ ಗಾಲೆ ಪ್ರಮುಖ ಬಂದರು ಕೇಂದ್ರನಾಗಿತ್ತು. ಪೋರ್ಚುಗೀಸರ ಬಿಲ್ಡಿಂಗುಗಳೂ ಈಗಲೂ ಇದ್ದು. ಕೋಟೆ ಸಮುದ್ರ ಪೋರ್ಚುಗೀಸರ ಕಟ್ಟಡ ಸಿಟಿಯನ್ನು ಸುಂದರವಾಗಿಸಿದೆ. ಪೋರ್ಚುಗೀಸರು ಡಚ್ಚರಿಗೆ ಶರಣಾದ ಮೇಲೆ ಡಚ್ಚರೇ ಕೋಟೆಯನ್ನು ಕಟ್ಟಿಸಿದ್ದು. ಮೂರು ಬದೀಗೆ ಸೂರ್ಯ ಚಂದ್ರ ನಕ್ಷತ್ರದ ಬುರುಜುಗಳಿವೆ.

ನಾವು ಹೋದಾಗ ಮೋಡ ದಟ್ಟವಾಗಿ ಕವಿದು ಗಾಳಿ ಬಿರುಸಾದ್ದರಿಂದ ಸಮುದ್ರ ಶಾಂತವಿರವಿಲ್ಲ, ಅಲೆಗಳ ಅಬ್ಬರ ಕೇಳಬೇಕಾ, ಅಲ್ಲೆಲ್ಲೊ ದೂರದಲ್ಲೀ ಜೋರು ಮಳೆ. ಬಲತುದಿಗೆ ಗಾಲೆಯ ಜನಪ್ರಿಯ ಲೈಟ್ ಹೌಸಿದೆ. ಸಂಜೆಯಾದ್ದರಿಂದ ವಾಕಿಂಗು ರನ್ನಿಂಗು ಮಾಡುವರು ಕೂಡ ಇದ್ದರು. ಹೋದ ಅರ್ಧ ಗಂಟೆಗೆ ಮಳೆ ಜೋರಾದ್ದರಿಂದ ಹೋಗೆ ಹೋಟೆಲು ಸೇರಿಕೊಂಡವು, ಟೆರೇಲಿನಲ್ಲಿ ಕಾಫಿ ಹೀರಿದೆವು, ಪಕ್ಕದಲ್ಲೇ ಇದ್ದನ ಬುದ್ದ ಹಾಗೇ ನಗು ಮುಖದಲ್ಸೇ ಇದ್ದ. ಮಳೆ ಬಂದರೂ ಅಲ್ಲೇ ಹುಲ್ಲುಗಾವಲ್ಲಲೀ ಹುಡುಗರು ಫುಟ್ ಬಾಲ್ ಆಡುತ್ತಿದ್ದರು. ರಾತ್ರಿಯಾಯ್ತು ಲಗೇಜು ಹೆಗಲಿಗೇರಿಸಿ ಕೋಟೆ ದಾಟಿ ಅಲ್ಲೇ ಹತ್ತಿರದ ಗಾಲೆ ಕ್ರಿಕೆಟ್ ಸ್ಟೇಡಿಯಂ ಬಳಸಿ ರೈಲು ನಿಲ್ದಾಣಕ್ಕೆ ಹೋದ್ವಿ , ಬೆಂಟೋಟಾದ ರೈಲು ಜಸ್ಟ್ ಮಿಸ್ ಆಗಿ ಕೊಲೊಂಬೋ ಬಸ್ ಹಿಡಿದು ಕೂತೆವು, ಮತ್ತೆ ಶುರುವಾಯ್ತು ಶ್ರೀಲಂಕಾದ ಹಾಡುಗಳು. ಕೇಳಲಿಕ್ಕೆ ಸಕತ್ ಖುಷಿ. ಅಂತೂ ಹೋಟೇಲ್ ತಲುಪಿದೆವು.

ದಿನ 6

20-07-2019

ಬೆಂಟೋಟಾ- ಕೊಲಂಬೋ

ಗಾಲೆಯಲ್ಲೇ ಇಲ್ಲ ಕೊಲಂಬೋದಲ್ಲೀ ಹೋಟೆಲ್ ಬುಕ್ ಮಾಡಿದ್ದರೆ ಇನ್ನೂ ಆರಾಮಾಗಿ ಗಾಲೆ ಇಲ್ಲವೇ ಕೊಲಂಬೋ ನೋಡಬಹುದಿತ್ತು ಎಡಬಿಡಂಗಿಗಳ ತರ ಮಧ್ಯ ಮಾಡಿ ಇತ್ತ ಕೊಲಂಬೋ ಅತ್ತ ಗಾಲೆ ಎರಡನ್ನು ಪೂರ್ತಿ ನೋಡಲಿಲ್ಲ.

ನಮ್ಮ ಹೋಟೇಲು ಬೀಚಿನ ಬದಿಗೆ ಇದ್ದರಿಂದ ಬೆಳಗ್ಗೆ ಒಂದರ್ಧ ಗಂಟೆ ಬೀಚಿನಲ್ಲೀ ಕಾಲ ಕಳೆದವು. ಸಮುದ್ರ ಯಾವತ್ತೂ ಬೋರಾಗಿಲ್ಲ. ಅಲ್ಲಿಂದ ರೂಂಗೆ ಬಂದರೆ ಆಗಲೇ ಎಂಟು, ಅಲ್ಲಿಂದ ಶುರುವಾಯ್ತು ಓಡು ಮಗಾ ಓಡು ಕಾರ್ಯಕ್ರಮ ತರಾತುರೀಲಿ ಟುಕ್ ಟುಕ್ ಹಿಡಿದು ಬಸ್ ಸ್ಟಾಪು ತಲುಪಿ ಕೊಲಂಬೋ ಬಸ್ ಹಿಡಿದೆವು ಅಲ್ಲಿಂದ ಕೊಲಂಬೋ ಹತ್ತಿರವೇ ಆದರೂ ಟ್ರಾಫಿಕ್ಕಿನ ದೆಸೆಯಿಂದ ಒಂದು ಗಂಟೆ ಕಾಲ ಬೇಕಾಯ್ತು ತಲುಪಲು ಅಲ್ಲಿಂದ ಆತುರಾತುರವಾಗಿ ಗಂಗಾರಾಮ್ ಟೆಂಪಲ್ ನೋಡುವಷ್ಟರಲ್ಲೀ ಸಮಯ ಕಿತ್ಕೊಂಡ್ ಹೋಯ್ತು. ಕ್ಯಾಬು ಬುಕ್ ಏರ್ ಪೋರ್ಟ್ ಹೊರಟೆವು, ನಮ್ ಕ್ಯಾಬ್ ಡ್ರೈವರು ಶ್ರೀಲಂಕಾದ ಆರ್ಮಿಯಲ್ಲಿದ್ದವರು, ಕಾಲಿಗೆ ಏಟಾಗಿ ಸೇನೆಗೆ ಸಲಾಂ ಹೊಡೆದು ಕ್ಯಾಬು ಓಡಿಸುತ್ತಿದ್ದಾರೆ ಒಳ್ಳೆ ಮನುಷ್ಯ. ಇಡೀ ಸಿಟಿ ಹಾಗೇ ಕಾರಿನಲ್ಲೀ ತೋರಿಸಿ,  ಅವಳಿ ಬಿಲ್ಡಿಂಗ್, ಮುಂದಿನ ತಿಂಗಳು ಓಪನ್ ಆಗೋ ಲೋಟಸ್ ಟವರ್ರು, ಬಾಂಬು ಬ್ಲಾಸ್ಟಿಗೆ ತುತ್ತಾದ ಶಾಂಗ್ರೀಲಾ ಹೋಟೇಲು ಕೂಡ ತೋರಿಸಿ ಏರ್ ಪೋರ್ಟ್ ಗೆ ಬಿಟ್ಟರು , ನಾವೆಲ್ಲ ಶೋಕಿಗೆ ಬಿದ್ದವರು ಬೀಚಿನಲ್ಲಿ ಶ್ರೀಲಂಕಾ ಅಂತ ಬರೆದು ಸುತ್ತ ನಿಂತಿಕೊಂಡ ಪೋಟೋ ಹಾಕಿ ಬಾಯ್ ಬಾಯ್ ಶ್ರೀಲಂಕಾ ಬೊಹೋಮಾ ಇಸ್ತುತಿ (good bye) ಅಂತ ವಾಟ್ಸಾಪು ಸ್ಟೇಟಸ್ ಹಾಕುವಲ್ಲಿಗೆ ನಮ್ಮ ಶ್ರೀಲಂಕಾ ಪಯಣ ಮುಗೀತು.

ಶುಭಂ ಹೇಳುವ ಮುನ್ನ ಕೆಲವು ಮಾತುಗಳು:

*ಶ್ರೀಲಂಕಾ ತುಂಬಾ ಕಮ್ಮಿ ಖರ್ಚಿನಲ್ಲೀ ನೋಡಬಹುದಾದ ದೇಶ. ಕಾರಣ ಕರೆನ್ಸಿ ರೇಟು, ಶ್ರೀಲಂಕಾ ನೋಡುವ ಪ್ಲಾನಿದ್ದರೆ ಸೆಪ್ಟೆಂಬರ್ ಟೂ ಡಿಸೆಂಬರ್ ಒಳ್ಳೆ ಸಮಯ. ಮಳೆ ಇಷ್ಟವಿದ್ದಲ್ಲಿ ಜೂನ್ ಟೂ ಆಗಸ್ಟ್ ಒಳ್ಳೆಯದು. ಏಲ್ಲಿನ ಹೋಟೆಲುಗಳು ಕೂಡ ಕಮ್ಮಿಗೆ ಸಿಗುವುದರಿಂದ ಕಮ್ಮಿ ದುಡ್ಡಿಗೆ 5 ಸ್ಟಾರ್ ಹೋಟೆಲಿನಲ್ಲಿರಬಹುದು. ಇನ್ನೇನೂ ಬೇಕು ಪ್ಲೇನ್ ಬುಕ್ ಮಾಡಿ ಹೋಟೇಲ್ ಬುಕ್ ಮಾಡಿ ವೀಸಾ ತಗೊಂಡು ಹೋಗ್ತಾ ಇರಿ. 7-15 ದಿವಸ ಆರಾಮಾಗಿದ್ದು ಬನ್ನಿ.

*ಬುದ್ದನ ಬೇರು ಭಾರತವಾದ್ದರಿಂದ ಭಾರತೀಯರೆಂದರೆ ತುಂಬಾ ಗೌರವ ಕೊಡುತ್ತಾರೆ. ಭಾರತೀಯ ಸಿನಿಮಾ ಕ್ರಿಕೆಟ್ ಅಂದ್ರೆ ಅವರಿಗೆ ಪಂಚಪ್ರಾಣ. ಬೌದ್ಧ ಧರ್ಮದವರೇ ಹೆಚ್ಚಾದ್ದರಿಂದ ಉಗಿಯೋದು, ಗಲೀಜು ಮಾಡೋದು, ಸಿಗರೇಟು ಗುಟ್ಕಾ ರೋಡಿನಲ್ಲೀ ಕಾಣಲಿಗೋದು ಕಮ್ಮಿ. ಬುದ್ದನ ದೇವಾಲಯಕ್ಕೆ ಮಂಡಿ ಕಾಣುವ ಡ್ರೆಸ್ ಧರಿಸುವಂತಿಲ್ಲ, ಬುದ್ಧನ ಟ್ಯಾಟೂ ಇದ್ದರೆ ಪ್ರವೇಶವಿಲ್ಲ, ಹ್ಯಾಟೂ ಕೂಡ ಧರಿಸುವಂತಿಲ್ಲ

*ಕೊನೆಯದಾಗಿ ಶ್ರೀಲಂಕಾದ ಹುಡುಗಿಯರ ಬಗ್ಗೆ ಹೇಳಲೇಬೇಕು ಕಪ್ಪಿದ್ದರೂ ಯಾವ ಮಟ್ಟಿಗೆ ಸುಂದರವಾಗಿದ್ದಾರೆಂದರೆ ನಮ್ ಹುಡುಗ ಒಬ್ಬ ಆದ್ರೆ ಶ್ರೀಲಂಕಾ ಹುಡುಗೀಯನ್ನೆ ಮದ್ವೆ ಆಗಬೇಕು ಅಂತಿದ್ದ. ಕಂದ್ಯಾನ್ ಶೈಲಿಯ ಡ್ರೆಸಿನಲ್ಲೀ ಅವರನ್ನ ನೋಡೋದಿದೆಯಲ್ಲ ಅದು ಈ ಜನ್ಮದ ಪುಣ್ಯವೆಂದೇ ನಮ್ಮ ಭಾವನೆ

ಎಷ್ಟೇ ಬಾಂಬು ಬಿದ್ದರೂ, ಅತಿಥಿಗಳನ್ನ ದೇವರಂತೆ ಕಾಣುವ, ಸುಂದರ ದೇಶವಾದ ಶ್ರೀಲಂಕಾವನ್ನ ತಪ್ಪದೇ ಒಮ್ಮೆ ಭೇಟಿ ನೀಡಿ. ಥ್ಯಾಂಕ್ಸ್ ಎಲ್ಲ ಬೇಡ ಬರ್ತಾ ಏರ್ ಪೋರ್ಟಿಂದ ಒಂದು ಬಾಟಲೀ ಹಿಡಿದುಕೊಂಡು ಬನ್ನಿ ಒಟ್ಟಿಗೆ ಗುಂಡು ಹಾಕುತ್ತ ಶ್ರೀಲಂಕಾ ಬಗ್ಗೆ ಮಾತಾಡುವ

-ಶುಭಂ-

‍ಲೇಖಕರು avadhi

August 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Maruthi p

    Super…thumba chennagide vimarshe…adre Ella ide namanthorge total karchu estagutthe thilisbekitthu….once again love you

    ಪ್ರತಿಕ್ರಿಯೆ
  2. ರಾಘವೇಂದ್ರ ಮುದ್ದಾಬಳ್ಳಿ

    ನಮ್ಮ ಸಹೋದ್ಯೋಗಿ ಒಬ್ಬರ ಪ್ರವಾಸ ಕಥನವನ್ನು ಕನ್ನಡದ ಪ್ರಸಿದ್ಧ ಬ್ಲಾಗ್ (ಅವಧಿ)ಯಲ್ಲಿ ನೋಡಿದ್ದು ಖುಷಿಯ ಜೊತೆಗೆ ಹೆಮ್ಮೆಯೂ ಆಯಿತು.
    ದೇಶ ಸುತ್ತು ಕೋಶ ಓದು ಅನ್ನುವ ಮಾತಂತೆ, ಲಂಕಾ ದೇಶವನ್ನು ತಮ್ಮ ಅಚ್ಚುಕಟ್ಟು ಬರವಣಿಗೆಯ ಕೋಶದಿಂದಲೇ ಕಣ್ಣಿಗೆ ಕಟ್ಟುವಂತೆ ತೋರಿಸಿದ ಯುವಪ್ರತಿಭೆ ಜಯರಾಮ್ ಚಾರಿ ಅವರಿಗೆ ವಂದನೆಗಳು,
    ಸಿಂಹಳ ದೇಶದ ಸಂಸ್ಕ್ರತಿ, ಜೀವನ ಶೈಲಿ, ಲಂಕನ್ನರಾ ಮುಗ್ದತೆಯನ್ನು ಮುದವಾದ ಲೇಖನದಿಂದ ಕಟ್ಟಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಲಂಕಾದ ಇತಿಹಾಸವನ್ನು ಕೂಡ ಸ್ವಾರಸ್ಯಕರವಾಗಿ ಬಿಡಿಸಿಟ್ಟಿದ್ದಾರೆ.
    ನಿಮ್ಮ ಈ ರೀತಿಯ ನವ ಪ್ರಯತ್ನಗಳಿಗೆ ನಮ್ಮೆಲ್ಲರ ಪ್ರೋತ್ಸಾಹ ಇರುತ್ತದೆ ಚಾರಿ ಅವ್ರೇ, ಹೀಗೆ ಮುಂದುವರೆಸಿ..

    ಪ್ರತಿಕ್ರಿಯೆ
  3. vijayendra viju

    very good travelogue. please bring out in book form adding some more details.,

    ಪ್ರತಿಕ್ರಿಯೆ
  4. GURURAJ KATHRIGUPPE

    sogasada baraha,,, deserved to be in the form of good book…. we are eagerly waiting for more such writings…. thank you jayaram….

    ಪ್ರತಿಕ್ರಿಯೆ
  5. Sudhindra Kundapura

    Really nice article n good narration. Swalpa ooru and city hesru English alli kottre, connect madokke easy authe

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: