ಜಯರಾಮಚಾರಿ ಕಥೆ – ತುಂಬಾ ಸಲ ಹೀಗಾಗ್ತಿತ್ತು…

ಜಯರಾಮಚಾರಿ

ಅವಸವಸರದಲ್ಲಿ ಗಾಡಿ ಪಾರ್ಕಿಂಗ್ ಮಾಡಿ ಇನ್ನೇನೋ ಲಿಫ್ಟ್ ಹತ್ತಬೇಕು ಅನ್ನೋ ಅಷ್ಟರಲ್ಲಿ ಲಿಫ್ಟ್ ಬಾಗಿಲು ಮುಚ್ಚಿ ಲಿಫ್ಟ್ ಅದೃಷ್ಟದಂತೆ ಮೇಲಕ್ಕೆ ಹೋಗಿಬಿಡ್ತಾ ಇತ್ತು, ಕೊನೆಯ ಬಸ್ ಒಂದೆರಡು ನಿಮಿಷ ಲೇಟಾಗಿ ತಪ್ಪಿಹೋಗ್ತಿತ್ತು, ನಡೆದುಕೊಂಡೇ ಮನೆಗೆ ಹೋಗ್ತಿದ್ದೆ, ಫಸ್ಟ್ ಡೇ ಫಸ್ಟ್ ಷೋ ಸಿನಿಮಾ ಗೆ ಕೊನೆ ನಿಮಿಷದಲ್ಲಿ ಟಿಕೇಟು ಮಿಸ್ ಆಗಿ ನನ್ನ ಮುಂದೆ ಕ್ಯೂನಲ್ಲಿ ನಿಂತವನಿಗೆ ಸಿಕ್ಕು ಅವನು ಒಳಗೆ ಹೋಗಿಬಿಡ್ತಿದ್ದ, ಇದೊಂತರ ವಿಚಿತ್ರ, ಒಂತರ FRUSTRATION. 

ಮೊದಲೇ ನನ್ನ ಗೆಳೆಯರೆಲ್ಲ ನನ್ನ ಆಬ್ಸೆಂಟ್ ಮೈಂಡೆಡ್ ಅಂತಾರೆ, ಈ ತರ ಕೊನೆ ಗಳಿಗೆಯಲ್ಲಿ ಎಷ್ಟೋ ಸಂಗತಿಗಳು ಮಿಸ್ ಆಗಿ ನಿಜಕ್ಕೂ ನನ್ನದು ಆಬ್ಸೆಂಟ್ ಮೈಂಡ್ ಇರಬಹುದಾ ಅಂತ ನನಗೆ ಅನುಮಾನ ಶುರುವಾಗತೊಡಗಿತು. ಅದು ಗಾಢವಾಗಿ ಅನಿಸಿದ್ದು ನನ್ನ ಮೊದಲ ಹುಡುಗಿಗೆ ಪ್ರಪೋಸ್ ಮಾಡಿದಾಗ ‘ದಡ್ಡ ನೀನು ಎಂಗೇಜ್ಮೆಂಟ್ ನೆನ್ನೆ ತಾನೇ ಆಯ್ತು ಅಲ್ಲಿವರೆಗೂ ಏನು ಮಣ್ಣು ತಿಂತಿದ್ದ ಮನಸಲ್ಲಿ ಆಸೆ ಇಟ್ಕೊಂಡು, ನನಗಿಂತ ಫಿಗರ್ ಬೇಕಾ ‘ ಅಂದಾಗ..

ಅವತ್ತು ಡಿಸೈಡ್ ಮಾಡಿದೆ ನಾನು ಇನ್ಮೇಲೆ ಯಾವುದಕ್ಕೂ ಕಾಯಬಾರದು, ರಾಬಿನ್ ಶರ್ಮಾ, ಮಾರ್ಕ್ ಮ್ಯಾನ್ಸನ್, ಸದ್ಗುರು ವಿಡಿಯೋಗಳು, ಮಹಾತ್ರ್ಯ ವಿಡಿಯೋಗಳು ಹೀಗೆ ಇರೋ ಬರೋ ಎಲ್ಲ ಸೆಲ್ಫ್ ಹೆಲ್ಪ್ ಪುಸ್ತಕಗಳನ್ನ,ಡೌನ್ ಲೋಡ್ ಮಾಡಿಟ್ಟುಕೊಂಡ ವಿಡಿಯೊಗಳನೆಲ್ಲ ಒಂದೆಡೆ ಗುಡ್ಡೆ ಹಾಕೊಂಡು ನೋಡಿದ್ದು ಓದಿದ್ದು ಆಯ್ತು, ಯಾವ ಬೆಸ್ಟ್ ಸೆಲ್ಫ್ ಹೆಲ್ಪ್ ಬುಕ್ಕು ಆಗಲಿ ವಿಡಿಯೋ ಆಗಲಿ ಬಿಟ್ಟಿಲ್ಲ, ಜೊತೆಗೆ ಮೂರು ದಿನದಿಂದ ಹಿಡಿದು ವಾರದವರೆಗೂ ನಡೆಯೋ ಎಲ್ಲ ವರ್ಕ್ ಶಾಪು ಕೂಡ ಅಟೆಂಡ್ ಮಾಡಿ ಬಂದೆ, ಇದ್ದಕ್ಕಿದ್ದಂತೆ ಜೀವನದ ಕೈಯಲ್ಲಿದ್ದ ಕಂಟ್ರೋಲ್ ನನಗೆ ಶಿಫ್ಟ್ ಆಯಿತು, ಎಲ್ಲ ನನಗೆ ಕಂಟ್ರೋಲ್ ಸಿಕ್ತಾ ಹೋಯ್ತು. ಬದುಕಿಗೆ ಡಿಸಿಪ್ಲಿನ್ ಎಷ್ಟು ಮುಖ್ಯ ಅಂತ ಗೊತ್ತಾಯ್ತು ..

ನನ್ನ ಕೆಂಪು ಬಣ್ಣದ ಪೋಲೊ ಕೈ ಕೊಟ್ಟ ಕಾರಣ ಕೆಲವು ದಿನಗಳು ಮೆಟ್ರೋದಲ್ಲಿ ಓಡಾಡಬೇಕಾಯ್ತು, ನಾನಿದ್ದ ಚಂದ್ರ ಲೇಔಟ್ ನ ಫ್ಲಾಟ್ ಗೂ  ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೂ ಹತ್ತು ನಿಮಿಷದ ವಾಕು, ಆದರೂ ಉಬರ್ ಮಾಡಿಯೇ ಹೋಗ್ತಿದ್ದೆ, ಕಾರಿನಲ್ಲಿ ಅಬ್ಬಬ್ಬಾ ಅಂದ್ರೆ ಮೂರು ನಿಮಿಷದ ಡ್ರೈವ್, ಒಮ್ಮೆ ಡ್ರೈವರ್ ಒಬ್ಬ ಕೇಳಿಯೇ ಬಿಟ್ಟ “ಅಲ್ಲ ಸಾರ್ ಅಲ್ಲಿ ಬಿದ್ರೆ ಉರುಳಿಕೊಂಡು ಬಂದ್ರೆ ಇಲ್ಲಿ ಹತ್ತು ನಿಮಿಷಕ್ಕೆ ಎದ್ದು ಬಿಡಬೌದು” ಇನ್ನು ಏನೋ ಸೇರಿಸುತ್ತುತ್ತಿದ್ದ, ದೊಡ್ಡ ಹುಮರಸ್ ಫೆಲ್ಲೋ ಅನ್ಕೊಂಡಿದ್ದ ಅನ್ಸುತ್ತೆ ನಾನು ಸುಮ್ನೆ ಒಂದು ಸಲ ಕೆಮ್ಮಿ ಕೇಳಿಯೂ ಕೇಳಿಸ್ಕೊಳ್ಳದವನ ತರ ಹೊರಗೆ ನೋಡಿದೆ, ಅರ್ಥ ಆಯ್ತು ಅನ್ಸುತ್ತೆ ಅದುಮಿಕೊಂಡು ಗಾಡಿ ಓಡಿಸಿದ..

ಕರೆಕ್ಟಾಗಿ ಪ್ರತಿ ದಿನ ನನ್ನ ಉಬರ್ ಕಾರು ಭಂಟ ಸಂಘದ ಮುಂದೆ ಒಂಭತ್ತು ಮೂರಕ್ಕೆ ನಿಲ್ಲಬೇಕು, ಅವನಿಗೆ ವಾಲೆಟ್ ನಿಂದ ಆಟೋ ಡೆಬಿಟ್ ಆದಮೇಲೆ ಬ್ಯಾಕ್ ಪಾಕ್ ಹಿಂದೆ ಹಾಕಿ, ಸ್ವಲ್ಪ ಲೂಸಾಗಿರೋ ಶೂ ಲೇಸು ಗಟ್ಟಿ ಮಾಡಿ ಕನ್ನಡಕ ಒಮ್ಮೆ ಮುಟ್ಟಿ ಕೂದಲು ಹಿಂದೆ ಸರಿಸುತ್ತ ಇಳಿಬೇಕು, ಗೇಟಿನಲ್ಲಿ ಇರೋ ಕೈ ತೋರಿಸಿ ದೇಹದ ಉಷ್ಣತೆ ಗೊತ್ತಾಗೋ ಹೊಸ ರೀತಿಯ ಉಪಕರಣಕ್ಕೆ ಕೈ ತೋರಿದರೆ ೯೭ ರಿಂದ ೯೮ ಒಳಗೆ ತೋರಿಸಬೇಕು, ಕೆಲವರು ಅಲ್ಲಿ ಕೈ ತೋರಿಸೋದು ಗೊತ್ತಾಗೋದು ಮಂಗನಂತೆ ಆಡ್ತಾ ಇರ್ತಾರೆ, ಆಗ ಆ ಕಡೆ ತಲೆ ಹಾಕದೆ ಎಂಟ್ರಿಯಲ್ಲೇ ಇರೋ ಲೇಡಿ ಸೆಕ್ಯೂರಿಟಿ ಹತ್ರ ನಗುತ್ತ ಹೋದ್ರೆ ಆಕೆಯ ಕೈಯಲ್ಲಿ ಲೇಸರ್ ಥರ್ಮೋ ಮೀಟರ್ ಇರುತ್ತೆ ಆಕೆ ನಗುತ್ತ ಅಲ್ಲಿ ನಿಂತು ಮಂಗನಂತೆ ಇರೋರಿಗೆ ಗದರಿಸಿ ಕರೆಕ್ಟಾಗಿ ಕೈ ತೋರಿಸಿ ಅಂತ ಉಗಿವಳು, ನಾನು ನಗುತ್ತ ಕೈಗೆ ಸ್ಯಾನಿಟೈಸರ್ ಹಾಕಿ,ಒಂದು ಸಲ ಕೈ ಅಗಲ ಮಾಡಿ ಚೆಕ್ ಮಾಡಿಸಿಕೊಂಡು ಎಸ್ಕಲೇಟರ್ ಹತ್ತಿ ಹೋಗ್ತೀನಿ, ಸಾಕಾಗುವಷ್ಟು ದುಡ್ಡು ಮೆಟ್ರೋ ಕಾರ್ಡಲ್ಲಿ ಇರೋದರಿಂದ ಯಾರ ಅಡೆತಡೆಯಿಲ್ಲದೆ ಕಾರ್ಡನ್ನು ಅಲ್ಲೇ ಗೇಟಿಗೆ ತೋರಿಸಿ,ಅಲ್ಲಿಂದ ಲಿಫ್ಟ್ ಹತ್ತಿ ಮೇಲೆ ಬಂದರೆ ಕರೆಕ್ಟಾಗಿ ಒಂಭತ್ತು ಆರಾಗಿರುತ್ತದೆ, ಕರೆಕ್ಟಾಗಿ ಮೂರ್ ನಿಮಿಷ, ನಾನು ಪ್ಲಾಟ್ ಫಾರಂ ಗೆ ಬಂದು ಮೂವತ್ತು ಸೆಕೆಂಡಿಗೆ ಟ್ರೇನು ಬಂದು ನಿಂತು ಬಾಗಿಲು ತೆರಿಬೇಕು ನಾನು ಒಳ ಹೋಗಬೇಕು..ಬರುವಾಗಲೂ ಅಷ್ಟೇ ಅದೇ ಟ್ರೇನು ಅದೇ ಬಾಗಿಲು. ನನ್ನ ಡಿಸಿಪ್ಲಿನ್ ನೋಡಿ ಮೆಟ್ರೊನೆ ನಾಚಬೇಕು.

ನನ್ನ ದುರಾದೃಷ್ಟಕ್ಕೆ ಗಾಡಿ ಸರ್ವಿಸ್ ನವನು ಒಂದು ದಿನ ಅಡ್ಜಸ್ಟ್ ಮಾಡಕೊಳ್ಳಿ ಸರ್ ಎಂದ, ಇನ್ನೊಂದು ದಿನ ಉಬರ್ ಹಿಡಿಬೇಕಾಗಿ ಬಂತು, ಕಾರ್ ಬರೋದು ಫಿಕ್ಸ್ ಎಂದುಕೊಂಡು ಸ್ವಲ್ಪ ಜಿಮ್ಮಿನಲ್ಲಿ ಹತ್ತು ನಿಮಿಷ ಎಕ್ಸ್ಟ್ರಾ ಕಳೆದಿದ್ದೆ, ಈಗ ಆತುರಾತುರದಲ್ಲಿ ರೆಡಿ ಆಗಬೇಕಾಗಿ ಬಂತು, ಹತ್ತು ನಿಮಿಷ ಕೈ ಕೊಟ್ಟ ಕಾರಣ ಬೆಳಗ್ಗೆ ತಿನ್ನಲೇಬೇಕಿದ್ದ ಎರಡು ಪ್ಲೇನ್ ಆಮ್ಲೆಟ್ ಕಿತ್ತಳೆ ಜ್ಯೂಸು ಕೂಡ ಮಿಸ್ ಆಯ್ತು, ಆತುರಾತುರದಲ್ಲೇ ಉಬರ್ ಮಾಡಿದೆ, ಬಡ್ಡಿ ಮಗ ಕೊನೆ ಕ್ಷಣದಲ್ಲಿ ಅವನೇ ಕ್ಯಾನ್ಸಲ್ ಮಾಡಿಬಿಟ್ಟ, ಮತ್ತೆ ಬುಕ್ ಮಾಡ್ತಾ ಕೂತರೆ ಟೈಮು ಆಗುತ್ತೆ ಅನ್ಕೊಂಡು ನಡೆದುಕೊಂಡೇ ಹೋಗಿಬಿಡೋಣ ಅಂತ ಲಿಫ್ಟ್ ಇಂದ ಇಳಿದು ಓಡಿ ಬಂದೆ, ಮುಖದಲ್ಲಿ ಬೆವರು, ಈ ಆತುರದಲ್ಲಿ ಪೆರ್ಫ್ಯೂಮ್ ಹಾಕಿಕೊಳ್ಳೋದು ಮರೆತು ಬಿಟ್ಟಿದ್ದು ಹಾಗೆ ಮರೆತಿದ್ದರೆ ಚೆಂದ ಇರ್ತಿತ್ತು ಅದು ನೆನಪಾಗಿ ಕಿರಿಕಿರಿ ಆಯ್ತು.

ಓಡಿ ಬಂದು ನಿಂತಾಗ ಮೆಟ್ರೋ ಎಂಟ್ರನ್ಸ್ ಲಿ ಇರೋ ಲೇಡಿ ಸೆಕ್ಯೂರಿಟಿ ಎಂದಿನಂತೆ ನಕ್ಕು ಏನ್ ಸಾರ್ ಒಂದ್ ನಿಮಿಷ ಲೇಟು ಅಂದ್ಳು, ಎಲ ಇವಳ ಅನ್ಕೊಂಡು ಒಂದು ಫೇಕು ನಗು ಎಸೆದು ಎಸ್ಕಲೇಟರ್ ಮೇಲೆ ಓಡುತ್ತಲೇ ಬಂದು ಕಾರ್ಡು ತೋರಿಸಿ ಲಿಫ್ಟ್ ಹತ್ತಿ ಲಿಫ್ಟ್ ಬಾಗಿಲು ತೆಗೆಯಬೇಕು ಕರೆಕ್ಟಾಗಿ ಪ್ಲಾಟ್ ಫಾರಂ ಲಿ ನಿಂತ ಟ್ರೇನು ಬಾಗಿಲು ಮುಚ್ಚಿ ಹೊರಟಿತು, ಸುಮಾರು ಐದು ವರುಷಗಳು ಆದಮೇಲೆ ಸಿಗಬೇಕಾಗಿರೋದು ಸಿಗದೇ ದಿಕ್ಕಾಪಾಲಾಗಿದ್ದೆ, ಸರ್ವಿಸ್ ನವನಿಗೆ ಕಾಲ್ ಮಾಡಿ ಮುಖಕ್ಕೆ ಉಗಿದೆ, ಒಂದತ್ತು ಸೆಕೆಂಡು ಡೋರ್ ಓಪನ್ ಮಾಡಿದ್ರೆ ಅವರಪ್ಪನ ಮನೆ ಗಂಟು ಹೋಗ್ತಿತ್ತ ಅಂತ ಮೆಟ್ರೋ ಟ್ರೈನ್ ಆಪರೇಟರುಗು ಮನಸಿನಲ್ಲೇ ಉಗಿದುಕೊಂಡೆ, ಇಂತ ಸಂಧರ್ಭದಲ್ಲಿ ದೀರ್ಘವಾಗಿ ಉಸಿರಾಡಬೇಕು, ಒಂದರಿಂದ ನೂರು ಎಣಿಸಬೇಕು, ನಗಬೇಕು ವರ್ಕ್ ಶಾಪಲ್ಲಿ ಹೇಳಿದ ಪಾಠ ನೆನಪಾಗಿ ದೀರ್ಘವಾಗಿ ಉಸಿರು ಆಡಿ, ಒಂದರಿಂದ ನೂರು ಎಣಿಸುತ್ತ ಮುಖದಲ್ಲಿ ಒಂದು ಕಿರಿಕಿರಿ ನಗು ಇಟ್ಟುಕೊಂಡೆ ಕೂತು ಟ್ರೇನು ಕಾದೆ

ನಾಲ್ಕು ನೂರಾ ಮೂವತ್ತು ಎನಿಸಿದಾಗ ಮತ್ತೊಂದು ಟ್ರೇನು ಬಂದು ಬಾಗಿಲು ಹಾಕಿಕೊಂಡು ನಿಂತುಕೊಳ್ತು, ಕರೆಕ್ಟಾಗಿ ಇಪ್ಪತ್ತು ಮೂರು ಸೆಕೆಂಡಿಗೆ ಬಾಗಿಲು ಮುಚ್ಚಬೇಕು ಅಷ್ಟರಲ್ಲಿ ಲಿಫ್ಟಿನಿಂದ ನೀಲಿ ಸೀರೆ, ಸ್ಲೀವ್ಲೆಸ್ ಬ್ಲೌಸ್ ಹಾಕಿಕೊಂಡ, ತಲೆ ಕೂದಲ ಹಾರಿಬಿಟ್ಟ ಅವಳು ಚಂಗನೆ ಓಡಿ ಬಂದು ಮುಚ್ಚುತ್ತಿದ್ದ ಬಾಗಿಲಿಗೆ ಕೈ ಹಿಡಿದಳು, ಬಾಗಿಲು ಹಾಗೆ ಕ್ಲೋಸ್ ಆಗದೆ ಓಪನ್ ಆಯ್ತು, ಅರೆ ಇದೇನು ಈ ತರವು ಮಾಡಬಹುದಾ ಅಂದುಕೊಂಡೆ, ಬಾಗಿಲು ತೆರೆದು ಒಳಬಂದು ಆರಾಮಾಗಿ ಕೂತಳು, ಬಾಗಿಲುಗಳು ಕ್ಲೋಸ್ ಆದವು.

ಅವಳನ್ನು ಮತ್ತೆ ನೋಡಲು ನನಗೆ ಮನಸು ಇರಲಿಲ್ಲ, ಅವಳು ನನ್ನ, ನನ್ನ ಬಡತನವನ್ನ ಫುಟ್ ಬಾಲ್ ತರ ಹೊಡೆದು ಯಾವುದೋ ಗೂಡಿನ ಪಾರ್ಟಿಯನ್ನ ಬುಟ್ಟಿಗೆ ಹಾಕಿಕೊಂಡು ಮದುವೆಯಾಗಿದ್ದಳು, ಛೆ ಒಂದು ದಿನ ಮುಂಚೆ ಹೇಳಬಾರದಿತ್ತಾ ಅಂತ ಅವಳು ಹೇಳಿದ್ದು ಆ ಸಂಧರ್ಭಕ್ಕೆ ನನ್ನ ಮನಸಿನ ಗಾಯಕ್ಕೆ ಮುಲಾಮು ಅಷ್ಟೇ, ಅವಳು ಮತ್ತೆ ನನ್ನ ನೋಡಿದಾಗ ನಾನು ತುಂಬಾ ಒಳ್ಳೆಯ ಸ್ಥಾನದಲ್ಲಿ ಇರುವೆನೆಂದು ಅವಳಿಗೆ ಹೊಟ್ಟೆ ಉರಿ ಬಂದು ಛೆ ನನ್ನಂತವನ್ನ ಮಿಸ್ ಮಾಡಿಕೊಂಡೆ ಅನಿಸಬೇಕು ಹಾಗೆ ಇರಬೇಕು ಅಂದುಕೊಂಡಿದ್ದೆ, ಆದರೆ ಅವಳು ಈಗ ನನ್ನ ಎದುರು ಇದ್ದಳು, ನಾನು ಬೆವತಿದ್ದೆ, ಅವಳಿಂದ ಅಡಗಿಕೊಳ್ಳಲು ಯತ್ನಿಸುತಿದ್ದೆ, ಅಷ್ಟರಲ್ಲಿ ನನ್ನ ಕಂಡು ಹಿಡಿದು ಕಿಸಕ್ಕನೆ ನಕ್ಕಳು, ನಾನು ನಗಲು ಪ್ರಯತ್ನಿಸಿ ನಕ್ಕೆ, ತುಂಬಾ ಕೆಟ್ಟ ನಗು ಅದಾಗಿತ್ತು.

ಹೇಗಿದ್ದೀಯ ?

ಸಖತ್ತಾಗಿದ್ದೀನಿ ನೀನು ?

ನಾನು ನೋಡು ಸ್ವಲ್ಪ ದಪ್ಪ ಆಗಿದ್ದೀನಿ ಆಂಟಿ ಆಗಿದ್ದೀನಿ, ಸವಿತಾ ಭಾಭಿ ತರ ಇಲ್ವಾ ? (ಕಣ್ಣು ಹೊಡೆದಳು )

(ಟು ಬಿ ಫ್ರಾಂಕ್ ವೇಲಮ್ಮ ಆಗುವ ಎಲ್ಲ ಮುನ್ಸೂಚನೆ ಇತ್ತು, ಅವಳು ಕಾಲೇಜಿನಲ್ಲೇ ಸವಿತಾ ಭಾಭಿ ತರ ಇರಲಿಲ್ಲ, ಮತ್ತೆ ನಕ್ಕೆ)

ಮತ್ತೆ ಡೈಲಿ ಮೆಟ್ರೋದಲ್ಲ ಓಡಾಡೋದು ?

ಇಲ್ಲ, ಕಾರು ಸರ್ವಿಸ್ ಗೆ ಕೊಟ್ಟಿದ್ದೆ, ಇವತ್ತು ಬರ್ಬೇಕಿತ್ತು ಬರ್ಲಿಲ್ಲ

ಈ ಸೆಕೆಂಡ್ ಹ್ಯಾಂಡ್ ಕಾರುಗಳೇ ಇಷ್ಟು (ಅರೆ ಇವಳಾ ! ಅದು ಮೊದಲ ಸರ್ವಿಸ್ ಆಗಿ ಇನ್ನು ಎರಡು ತಿಂಗಳು ಆಗಿಲ್ಲ ಅಂತ ಹೇಳುವಷ್ಟರಲ್ಲಿ )

ಸರಿ ಬರ್ತೀನಿ ಸ್ಟಾಪ್ ಬಂತು

ಎಂದು ಇಳಿದು ಎಡಕ್ಕೆ ತಿರುಗಿ ಹೋದಳು, ಹಿಂದಿನಿಂದ ಸುಂದರಿಯಂತೆ ಕಂಡಳು, ಅವಳ ಬೆನ್ನು ಹಸಿಯಿತ್ತು, ಬಹುಷ ಹಸಿ ಕೂದಲಿನಿಂದ ಇರ್ಬೇಕು

ನಂಗಿಂತ ದೊಡ್ಡ ಫಿಗರ್ ಬೇಕಾ ? ಅಂತ ಇವಳೇ ಹೇಳಿದ್ದ ಎಂದು ಯೋಚಿಸುತ್ತ ಕೂತೆ.

‍ಲೇಖಕರು Admin

February 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: